೧
ಗಾಳಿ-ಬೆರಳುಗಳಿಂದ ಆ ಮಹಾಕಾಶವಿದೊ
ಸೋಕುತಿದೆ ನೆಲದ ಮೈಯ-
ಪುಟ್ಟ ಎದೆ ಜಗದಗಲ ಬಾಯ್ ಬಿಟ್ಟು ನೋಡುತಿದೆ
ಆಕಾಶಕೊಡ್ಡಿ ಕೈಯ!
ಜಗದ ಪಾತ್ರೆಯು ಮತ್ತೆ ತೆರವಾಗಿ ತುಂಬುತ್ತಿದೆ
ವಿಶ್ವಗಾನದನಂತ ಸೆಲೆಗಳಿಂದ;
ಗಿರಿ, ಕೊಳ್ಳ, ಕಾನುಗಳ ಬಾಯಿ ನುಡಿಸಿದೆ ಕೊಳಲು
ಹೊಳಲುಗೊಟ್ಟಿಹುದದಕೆ ಮೌನದಳಲು;
ಸಂಜೆಗೆಂಪಿನ ಹಿಂದೆ ತುಡಿವ ತಾರೆಗಳಿಣುಕು
ಗಿಡಗಂಟಿ ಮೈಮನಕೆ ಹೊನ್ನೆ ಹುಳಗಳ ಮಿಣುಕು-
ಚಲಿಸುತಿಹ ದೀಪಾವಳಿ.
ಕೊನೆಯಿರದ ನೀಲಿಮಗೆ ತೇಲುತಿವೆ ನೂರೆಂಟು
ಕನಸು-ಮೋಡದ ತುಂಡು ಮುಕ್ತಾವಳಿ.
ಗರಿ ಬಿಚ್ಚಿ ಹಾರಿತಾರಾಧನೆಯ ಪಕ್ಷಿ
ಬಿತ್ತರದ ಕಡಲು ದಾಟಿ,
ಬಿರುಸು ನೆಲ, ತುರುಸು ಜಲ, ವಿರಸ ವಕ್ರತೆಯ ಬಲ ಕರಗಿದಂತಃಕರಣದೆರಕವಾಗಿ,
ಬದುಕು ತೇಲಿತು ಬಾನ ಬೆಳ್ಳಕ್ಕಿ ಮಾಲೆಯಲಿ
ಚಿಕ್ಕೆ ನುಡಿಸುವ ಮಂತ್ರ-ಗೀತವಾಗಿ.
ನಿನ್ನ ಗಾನದ ಬೆಳಕು
ನೆಲ-ಬಾನುಗಳ ತಿಕ್ಕಿ ತೀಡುತ್ತಿದೆ
ಚಿಮ್ಮುತಿದೆ ನರನರದಿ ಜೀವದುಸಿರು-
ಕಲ್ಲು ಬಂಡೆಯ ಕೊರೆದು, ಮರುಭೂಮಿಯಲಿ
ಹರಿದು, ಜಗದಹಂಕಾರಕ್ಕೆ ಜಲಪಾತವಾಗಿ ಸುರಿದು,
ಎಲ್ಲ ಗಿಡಗಳ ಬೀಜದಲ್ಲಿ ಅಡಗಿದ ತೇಜ
ಮೊಗ್ಗೆಯಲಿ ಕೈಮುಗಿದು, ಹೂವಿನಲಿ ಕಣ್ಣು ತೆರೆದು.
ಬೇಸಗೆಯ ನಿಟ್ಟುಸಿರು, ಮಳವನಿಯ ಪೈಜಣಕೆ
ಕುಣಿದು ಕೊನರುವ ಹಸಿರು-
ಮಿಡಿ, ಕಾಯಿ, ಹಣ್ಣುಗಳ ಹಂಪುಗಾಲದ ಸೊಂಪು
ಋತುಋತುಗಳಾಡಿಸಿದ ನೂರು ಚದುರು.
ಎದೆಯ ಮಿಡಿತಕೆ ನುಡಿದು ತುಡಿವ ಲಯ ಸಂಗೀತ
ಸಹಜ ಶ್ವಾಸೋಚ್ಛಾಸ-
ಹೊಂಬಿಸಿಲಿಗರಳಿ, ತುಂಬಿ ಸೂಸಿತು ಆತ್ಮದುಲ್ಲಾಸ
ಹಿಮಗಿರಿಯ ಮಂದಹಾಸ.
ಕಾದು ಕಾಯ್ದಿರುವೆದೆಗೆ ಬೇಸಗೆಯ ಮೊದಲ ಮಳೆ
ಜೀವ-ನದಿ ಬದಿಯ ಭಾವ ಬನದಲಿ ಕ್ಷೋಭೆ ರೆಕ್ಕೆ ಬಡಿದು
ಬಿರುಗಾಳಿ ಮೈದುಂಬಿ, ಆಗಸದ ಮೂಲೆಮೂಲೆಯಲಿ
ಸಿಡಿಲು ಮಿಂಚಿನ ಬಾರುಕೋಲು ಬೀಸಿ-
ಮಧುರ ಯಾತನೆ ಬಾಳ ಸುತ್ತುವರಿಯಿತು ಮೊರದು,
ಪ್ರಕ್ಷುಬ್ಧ ಸಾಗರದೊಲು;
ಮರುಚಣದ ಹೂಬಿಸಿಲ ಪ್ರೇಮದಾನಂದದಲಿ
ಬನಬನವು ತೊನೆದು ತೂಗಿತು, ಹಕ್ಕಿಯುಕ್ಕಿಸಿತು ಹಾಡು-ಹೊನಲು.
ಜಡದ ಪರ್‍ವತವರಳಿ ಗುಡ್ಡಗುಡ್ಡದ ಪಕಳೆ
ಹೀರುತಿದೆ ಸೂರ್‍ಯ ಬಿಂಬ,
ಯಾವ ಹಾಡನು ಹಾಡಬಂದೆಯೋ ತುಂಬಿಸಿದೆ
ಈ ಜಗದ ಅಮೃತ ಕುಂಭ
ತಾರಗಣ್ಣನು ತರದು ಎಚ್ಚರದಿ ಕಾರಿರುಳು
ತಾಳ್ಮೆಯಲ್ಲಿ ತಲೆ ಬಾಗಲು
ಬಂದ ರವಿ ರಥವೇರಿ, ಆಕಾಶವನು ತೂರಿ
‘ಬಂಗಾರ ನೀರ ಕಡಲು’
ಕನಸಿನಿಂದೆಚ್ಚತ್ತ ಕಾರಂಜಿ
ಬಯಲ ಬಣ್ಣವ ತುಂಬಿ, ನೆಳಲ ಸಿಂಗರಿಸಿ
ನಲದಭೀಪ್ಸೆಯನೆತ್ತಿ ನಿಲ್ಲಿಸಿತು ಉತ್ತುಂಗ
ಶಿಖರ ಸಿಂಹಾಸನಕ ಬೆಳಕು ಹರಿಸಿ-
“Ages pass, and still thou pourest,
and still there is room to fill.”
೨
ನೆಳಲು-ಬೆಳಕಿನ ಹಿಂದೆ ಸುಳಿವು ಹಿಡಿಯುತ ಬಂತು
ಕೊಳಲ ಕಣ್ಣಿಗೆ ತಾಗಿ ಮಿಂಚುವೆರಳು-
ಯಾರು ಹಾಯದ ಹಾದಿಯಲ್ಲಿ ಕಾಯುತ ನಿಂತೆ
ಮುಂಜಾವು ಮಂಜಿನಲಿ, ಸಂಜೆಯರಳು.
ಒಮ್ಮಿದೊಮ್ಮೆಲೆ ಹೊಮ್ಮಿ ಬರುವ, ಸೊಗ ಚಿಮ್ಮಿಸುವ
ಆ ಒಂದು ಗಳಿಗೆ ಜೋಡು.
ನೂರು ಭಾವದ ಲಹರಿ ಸಾವಿರದ ಹಾಡು.
ಒಡೆದು ಹೋಯಿತು ಹತ್ತು ದಿಕ್ಕುಗಳ ಸುತ್ತಿರುವ
ಶಬ್ದಗಳ ಕಟ್ಟುಪಾಡು.
ಹಗಲೆಲ್ಲ ಧಗಧಗಿಸಿ, ಇರುಳು ಮಗಮಗಿಸಿ
ಬೆಳಗು ಬಂದಿತು ದುಃಖ ದುಮ್ಮಾನಗಳ ಕುಡಿದು
ಸುಖದ ಸುಮ್ಮಾನಗಳ ಹೆಜ್ಜೆಯಿರಿಸಿ.
ಅವನ ಪಾದಸ್ಪರ್‍ಶಕೆದೆಯು ಹಿಗ್ಗಿತು ಪಂಚ ಕರಣಗಳ ಪಕಳೆ ಬಿರಿದು.
ನೀರಡಿಸಿ ಬಂದನವನಾಜಗದ ದಾರಿಕಾರ,
ಹಗಲುಗನಸನು ಕೊಡವಿ ಅವನ ಕ್ಕೆ ಬೊಗಸೆಯಲಿ
ಸುರಿದೆ ನೀನೀ ಜಗದ ಅಮೃತವೂರ.
ತುಂಬಿ ತುಳುಕಿತು ಬೆಳಕು
ಕಣ್ಣು ಚುಂಬಿಸಿ ಎದೆಯನಿನಿದಾಗಿಸಿತು ಹೊಸತು-
ಹರುಷದ ಜೀವ ಕೇಂದ್ರ ಬಿಂದು.
ಬಾನು ಬಗೆ ತೆರೆದು ಭರವಸೆಯ ನರುಗಂಪಿನಲಿ
ನಗೆ ಸಾಗಿ ಹೋಯಿತೀ ಬುವಿಗೆ ಬಂದು.
ಬೆಳಕು ಕಡಲಲಿ ಹಾಯಿದೋಣಿಗಳ ಹರಹಿದವು
ಚಿಟ್ಟೆ, ಬಣ್ಣದ ತಟ್ಟೆ; ಅಂಚಿನಲಿ ತೇಲಿದವು.
ಅಂಚೆ, ಮಿರಿ ಮಿರಿ ಮಿಂಚಿ ನೈದಿಲೆಯು ಜಾಜಿ ಹೂವು.
ಮೋಡ ಮೋಡಗಳಲ್ಲಿ ಬೆಳಕು ಬಂಗಾರ ಹುಡಿ
ನೋಡನೋಡುತ ಸರಿಯಿತೆಲ್ಲ ಕಡೆಗು.
೩
ಅತ್ತಿತ್ತ ಜಗ್ಗಿದಾನಂದದೆಳೆಗಳ ಹಿಡಿದು
ಒಂದೆಡೆಗೆ ಸುತ್ತಿರುವ ಕೊನೆಯ ಹಾಡು;
ಹುಲ್ಲುಗರಿ ಬಿಚ್ಚಿದಾನಂದದಲಿ ಮೈಮರೆತು
ಬುಗುರಿಯಾಡಿರುವ ಭೂಮಿ.
ಜೀವ ಸಾವಿನ ಅವಳಿ ಜವಳಿ ಗಿರಿಗಿರಿ ಗಿಂಡಿ-
ಬಾಳ ಬೇರನು ಹಿಡಿದು ಅಲ್ಲಾಡಿಸಿತು ಎಚ್ಚರಿಸಿ
ಬೀಸಿರುವ ಗಾಳಿ ಸ್ವಾತಂತ್ರ್ಯ ಧಮನಿ.
ನೋವು-ಕೆಂದಾವರೆಯ ದಳದಳದಿ ಸಂತೋಷ ಸವಿಗಂಬನಿ.
ಪ್ರೀತಿ ಮುಡಿಯಿತು ಹೂವು
ಪ್ರಕೃತಿ ರಿಂಗಣಗುಣಿದು ಮುಂದೆ ಚಾಚಿತು ಬಾಹು
ಬಾಳ ಬಟ್ಟಲು ತುಂಬಿ ಸೂಸಿರಲು ‘ಬಾ’ ಎಂದು ಕರೆದೆ ಸಾವು.
ಹಗಲಿರುಳು ತಿರುಗಿದವು ಜಗದ ಛಂದೋಗತಿಗೆ
ಅವನ ಬೆಳಕಿನ ಕುಡಿಗೆ ಹೊತ್ತಿಸಿದ ದೀಪಗಳು
ಹಳ್ಳ-ಹೊಳೆ, ಹೂವು-ತೊಳೆ, ಹಕ್ಕಿ ಕೊರಳು.
ಗಾಳಿಯಲಿ ಹೆಜ್ಜೆದನಿ-
“Have you not heard his silent steps
He comes, comes, ever comes”
ಬಾನ ಗಾಜಿಗೆ ಕೊರೆದ ನಕ್ಷತ್ರ ಚಿತ್ರಗಳು
ನೆಳಲು ಹಿಡಿದಿಟ್ಟ ಬೆಳಕಿನ ನೆನವು ಬೆಳುಂದಿಗಳು.
“Every moment and every age
every day and every night
he comes, ever comes.”
*****
ರವೀಂದ್ರನಾಥ ಠಾಕೂರರ ಶತಾಬ್ದ ಸ್ಮರಣೆ.
