-೧-
ಒಂದೇ ಮನೆಯಲ್ಲಿದ್ದೂ ನೀಲಕಂಠ ತಮ್ಮ ಜೊತೆ ಪತ್ರಮುಖೇನ ಮಾತಾಡಬೇಕಾಗಿ ಬಂದದ್ದರ ಬಗ್ಗೆ ಪಾಟೀಲರಿಗೆ ನೋವಾಯಿತಾದರೂ, ಇದು ಬಾಯಿಬಿಟ್ಟು ಮುಖಾಮುಖಿ ಹೇಳಲಾಗದಂಥ ವಿಷಯ ಎಂದು ಅವನಿಗನಿಸಿತಲ್ಲ ಎಂದು ಸಮಾಧಾನವೂ ಆಯಿತು. ಐದಾರು ಸಾಲುಗಳ ಪತ್ರ ಮನಸ್ಸಲ್ಲಿ ಕೂತಿತ್ತು. “ನಾನು ಹೇಳುತ್ತಿರುವ ವಿಷಯಕ್ಕೆ ಯಾವದೇ ಸಮಜಾಯಿಶಿ ಕೊಡುವುದು ಸಾಧ್ಯವಿಲ್ಲ. ಈ ಮನೆಯನ್ನು ಮಾರಿ ನಾಗರಾಜನ ಜೊತೆ ಬೆಂಗಳೂರಿಗೆ ಹೋಗುವುದು ಅನಿವಾರ್ಯವಾಗಿದೆ. ಇನ್ನು ಮುಂದೆ ನಾವು ಒಟ್ಟಿಗೆ ಇರುವುದು ಸಾಧ್ಯವಿಲ್ಲ ಅನಿಸುತ್ತಿದೆ. ಮನೆ ಮಾರಿ ಬಂದ ಹಣದಲ್ಲಿ ನೀವು ಕೊಟ್ಟ ಇಪ್ಪತ್ತು ಸಾವಿರವನ್ನು ಹಿಂತಿರುಗಿಸುತ್ತೇನೆ. ಈ ಕುರಿತು ಏನನ್ನೂ ಮಾಡಲಿಕ್ಕಾಗದೇ ಇರುವುದರಿಂದ ಹೀಗೆ ಬರೆಯಬೇಕಾಯಿತು. ದಯವಿಟ್ಟು ಕ್ಷಮಿಸಿ. ಇತಿ ನಿಮ್ಮ ನೀಲಕಂಠ.”
ತಾನೀಗ ಏನು ಮಾಡಬೇಕೆಂದು ಪಾಟೀಲರಿಗೆ ಹೊಳೆಯಲಿಲ್ಲ. ನೀಲಕಂಠನಿಗೆ ಪತ್ರ ಬರೆಯಬೇಕೋ, ಅವನ ಜೊತೆ ಮಾತಾಡಬೇಕೋ ತಿಳಿಯಲಿಲ್ಲ. ಏನನ್ನೂ ಹೇಳುವುದು ಬೇಡ, ತನ್ನ ವ್ಯವಸ್ಥೆ ತಾನು ಮಾಡಿಕೊಂಡರೆ ಆಯಿತು ಅಂದುಕೊಂಡರು. ಎರಡು ದಿನಗಳ ನಂತರ ರಾತ್ರಿ ಊಟಕ್ಕೆ ಕೂತಾಗ “ಬರುವ ಶನಿವಾರ ನಾಗರಾಜ ಬರುತ್ತಾನೆ” ಎಂದು ನೀಲಕಂಠ ಮಗ ಬರುವ ಸುದ್ದಿ ಹೇಳಿದ. ಅವನು ಸಹಜವಾಗಿಯೇ ಹೇಳಿದ್ದರೂ, ತನ್ನಿಂದ ಉತ್ತರ ಅಪೇಕ್ಷಿಸುತ್ತಿದ್ದಾನೇನೋ ಎಂದು ಪಾಟೀಲರಿಗೆ ಅನಿಸಿ, “ನನ್ನ ಕಾಳಜಿ ಮಾಡಬೇಡ ನೀಲಕಂಠ; ನಿನಗೆ ಸರಿ ಅನಿಸಿದ ಹಾಗೆ ಮಾಡು…… ನನಗೇನು, ಯಾವಾಗಂದರಾವಾಗ ಚೀಲ ಹಿಡಿದು ಹೊರಟೆ……” ಅಂದರು. ಅಲ್ಲೇ ನಿಂತು, ಮತ್ತೆ ಬಡಿಸಲು ಕಾಯುತ್ತಿದ್ದ ನೀಲಕಂಠನ ಹೆಂಡತಿ ಕಾವೇರಿಗೆ ಒಳಗೊಳಗೇ ನಿರಾಳವಾಯಿತು. ಪಾಟೀಲರು ಎಷ್ಟೇ ನಿರ್ಭಾವದಿಂದ ಹೇಳಿದ್ದರೂ ಎಲ್ಲೋ ತನ್ನನ್ನು ಚುಚ್ಚುತ್ತಿದ್ದಾರೆನಿಸಿ ನೀಲಕಂಠನಿಗೆ ಏನು ಹೇಳಬೇಕೋ ತಿಳಿಯದೇ, “ಮನೆ ಮಾರಿ ಹಣ ಬಂದದ್ದೇ ನಿಮ್ಮಿಂದ ಇಸಕೊಂಡಿದ್ದನ್ನು ತೀರಿಸಿಬಿಡುತ್ತೇನೆ……” ಅಂದ. ಪಾಟೀಲರು “ಯಾಕೆ ವ್ಯವಹಾರದ ಮಾತು? ಅದು ನಿನಗೇ ಇರಲಿ…… ಸರಿಯಾದ ರೀತಿಯಲ್ಲಿ ಉಪಯೋಗಿಸು ಅಷ್ಟೆ……” ಅಂದರು. ಕಾವೇರಿಗೆ ತನ್ನ ಗಂಡ ಎಲ್ಲಿ ಒತ್ತಾಯ ಮಾಡುತ್ತಾನೊ ಅನಿಸಿ ಆತಂಕವಾಗಿ “ಪಲ್ಯ ಬಡಿಸಲೇ” ಎಂದು ಗಂಡನನ್ನು ಬೇರೆ ಮಾತಿಗೆಳೆಯಲು ನೋಡಿದಳು. ಇವರು ಒತ್ತಾಯಮಾಡಿ ಪಾಟೀಲರು ಆ ದುಡ್ಡು ತಗೊಂಡರೆ, ಯಾವುದೋ ಶಾಲೆಗೋ, ಧರ್ಮಶಾಲೆಗೋ ಅದನ್ನು ದಾನ ಮಾಡುವುದು ಖಂಡಿತ…… ಅದರ ಬದಲು ನಮಗಾದರೂ ಇರಲಿ ಎಂದವಳಿಗೆ ಅನಿಸಿತ್ತು. ಮತ್ತೆ ಮಾತಾಡದೇ ಇಬ್ಬರೂ ತಲೆತಗ್ಗಿಸಿ ಊಟ ಮಾಡುತ್ತಿದ್ದರು. ನೀಲಕಂಠನ ತಟ್ಟೆ ಇಟ್ಟಲ್ಲಿ ನೆಲ ಸಪಾಟಿಲ್ಲದೇ ತುತ್ತು ಕಲಸುವಾಗ ತಟ್ಟೆ ಗಡಗಡ ಸದ್ದು ಮಾಡುತ್ತಿತ್ತು. ಅನ್ನ ಕಲಸಿ ತುತ್ತು ಎತ್ತುತ್ತಿದ್ದ ಇಬ್ಬರನ್ನೂ ನಿಂತು ನೋಡುತ್ತಿದ್ದ ಕಾವೇರಿಗೆ, ಇನ್ನೆಷ್ಟು ದಿನ ಹೀಗೆ ಒಟ್ಟಿಗೆ ಕೂತು ಊಟ ಮಾಡುತ್ತಾರೆ ಅನಿಸಿ ವಿಚಿತ್ರ ಕಳವಳವಾಯಿತು. ಆದರೂ ಏನೋ ಸಮಾಧಾನ; ಎಷ್ಟೊಂದು ವರ್ಷಗಳಿಂದ ಆಡೆಬೇಕೆಂದು ಅಂದುಕೊಂಡ ಮಾತುಗಳೆಲ್ಲ ಹೀಗೆ ಸುಲಭದಲ್ಲಿ ಮುಗಿದೇಹೋಗಿದ್ದು ಹಗುರವೆನಿಸಿತ್ತು. ಪಾಟೀಲರನ್ನು ಇಟ್ಟುಕೊಳ್ಳುವ ಭಾರಕ್ಕಿಂತ, ಹೋಗು ಅಂತ ಹೇಗೆ ಹೇಳುವುದು, ನಾವೇ ಹೋಗು ಅಂದರೆ ಅವರ ದುಡ್ಡು ಕೊಡಬೇಕಾಗುತ್ತದಲ್ಲ – ಅಷ್ಟನ್ನು ಎಲ್ಲಿಂದ ತರುವುದು…….. ಈ ಎಲ್ಲ ಭಾರವೇ ಹೆಚ್ಚಾಗಿತ್ತು. ಮಜ್ಜಿಗೆ ಅನ್ನ ಕಲಸುತ್ತ ನೀಲಕಂಠ ಉಪ್ಪಿನಕಾಯಿ ಕೇಳಿದ. ಅಡಿಗೇ ಮನೆಗೆ ಹೊಂದಿಕೊಂಡ ಒಳಕೋಣೆಯಿಂದ ಉಪ್ಪಿನಕಾಯಿ ಭರಣಿ ತರಲು ಹೊರಟ ಕಾವೇರಿಗೆ ಏನೋ ಸಡಗರವುಂಟಾಗಿ, ಕೋಣೆಯೊಳಗೆ ಹೋಗುವಾಗ ಎರಡೂ ಕೈ ಅಗಲಿಸಿ ಬಾಗಿಲ ಚೌಕಟ್ಟಿನ ಎರಡೂ ಬದಿಗೆ ಕೈತಾಗಿಸಿ ಒಳಹೋದಳು.
-೨-
ಇಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋಗಿ, ಮುಂದಿನದನ್ನು ಅಲ್ಲೇ ಯೋಚಿಸಿದರಾಯಿತೆಂದು ಪಾಟೀಲರು ನಿರ್ಧರಿಸಿದರು. ನೀಲಕಂಠ ಮಗನ ಜೊತೆ ಹೋದ ಮೇಲೆ ತಾನು ಇಲ್ಲೇ ಬೇರೆ ಮನೆ ಮಾಡಿ ಇರಬಹುದೆಂಬ ಯೋಚನೆ ಬಂದರೂ ಆ ಸಾಧ್ಯತೆ ಅಷ್ಟು ಹಿತವೆನಿಸಲಿಲ್ಲ. “ನಾವು ಮನೆ ಮಾರಿ ಹೋಗುವುದೆಂದರೆ ಎರಡು ಮೂರು ತಿಗಳಾದರೂ ಆಗುತ್ತದೆ…….. ಅಲ್ಲಿಯವರೆಗೂ ಯೋಚನೆಯಿಲ್ಲ……” ಎಂದು ನೀಲಕಂಠ ಹೇಳಿದ್ದರೂ ಈ ಊರಿಗೆ ತನ್ನನ್ನು ಕಟ್ಟಿಹಾಕಿದ್ದ ಕೊಂಡಿಗಳೆಲ್ಲವೂ ಕಳಚಿದವು ಅನಿಸಿತು. ಇದೇ ಹೊತ್ತಿಗೆ ಜರುಗಿದ ವಿಶ್ವನಾಥನ ಸಾವು ಊರಿಗೆ ಹಿಂತಿರುಗಬೇಕೆನ್ನುವ ಪಾಟೀಲರ ನಿರ್ಧಾರ್ವನ್ನು ಬಲಪಡಿಸಿತು. ವಿಶ್ವನಾಥ ತೀರಿಕೊಂಡ. ನೀಲಕಂಠ ಮಗನ ಜೊತೆ ಹೊರಟ. ಇಷ್ಟು ವರ್ಷ ಯಾವುದೋ ಆದರ್ಶದ ಬೆನ್ನು ಹತ್ತಿ ಈ ಊರಿನಲ್ಲಿ ತಾನು ದುಡಿದದ್ದು ಸಫಲವಾಯಿತೆಂದು ಅನಿಸುವಂಥ ಯಾವುದೂ ಕಣ್ಣೆದುರಿಗಿಲ್ಲ…… ಹೀಗಿರುವಾಗ ಇಲ್ಲಿದ್ದು ತಾನು ಮಾಡುವುದೇನು ಅನಿಸಿತು.
ವರ್ಷಗಳ ಹಿಂದೆ, ಪಾಟೀಲರು ನೀಲಕಂಠನ ಮನೆಗೆ ಬಂದಾಗ ಅದನ್ನು ತನ್ನ ಸುದೈವವೆಂದೇ ನೀಲಕಂಠ ಭಾವಿಸಿದ್ದ. ಒಂದು ಕಾಲಕ್ಕೆ ನೀಲಕಂಠನಿಗೆ ಪಾಟೀಲರು ದೊಡ್ಡ ನಾಯಕನ ಹಾಗೆ ಕಂಡಿದ್ದರು. ಇಬ್ಬರೂ ಮೊದಲು ಭೆಟ್ಟಿಯಾಗಿದ್ದು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ – ಗಾಂಧಿ ಕುಮಟೆಗೆ ಬಂದಾಗ. ಪುಣೆಯಲ್ಲಿ ಓದುತ್ತಿದ್ದ ಪಾಟೀಲರು ಓದು ಬಿಟ್ಟು ಚಳುವಳಿಯಲ್ಲಿ ತೊಡಗಿಸಿಕೊಂಡು ಎಲ್ಲೆಲ್ಲೋ ಓಡಾಡುತ್ತ ಕುಮಟೆಗೆ ಬಂದಾಗ ನೀಲಕಂಠನ ಪರಿಚಯವಾಗಿತ್ತು. ಆ ನಂತರ ಇಬ್ಬರೂ ಎರಡು ವರ್ಷಗಳ ಕಾಲ್ ಒಟ್ಟಿಗೇ ಓಡಾಡಿ ಒಟ್ಟಿಗೇ ಜೈಲಿಗೆ ಹೋಗಿದ್ದರು. ತಾರುಣ್ಯದ ಸ್ನೇಹದಲ್ಲಿ ಕನಸುಗಳನ್ನು ಹಂಚಿಕೊಂಡಿದ್ದರು. ತಾವು ನಂಬಿದ್ದರಲ್ಲಿ ಪಾಟೀಲರು ತೋರಿಸುವ ಶ್ರದ್ಧೆ ನೀಲಕಂಠನನ್ನು ಆಳವಾಗಿ ತಟ್ಟಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪಾಟೀಲರು ತಮ್ಮ ಊರಿಗೆ ಹಿಂತಿರುಗಿದರು. ತಮ್ಮ ಮನೆತನದ ಅಪಾರವಾದ ಜಮೀನನ್ನು ಸ್ವತಃ ಕೃಷಿ ಮಾಡಿಸತೊಡಗಿದರು. ಚಳವಳಿ ಸೇರಿ ಮಗ ಕೈತಪ್ಪಿ ಹೋದ, ತನ್ನ ಹೆಂಡತಿ ಬದುಕಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕೊರಗುತ್ತಿದ್ದ ಅವರ ಅಪ್ಪನಿಗೆ ಇದರಿಂದ ಬಹಳ ಸಮಾಧಾನವಾಯಿತು. ಒತ್ತಾಯಿಸಿ ಮಗನಿಗೆ ಮದುವೆ ಮಾಡಿದರು. ಪಾಟೀಲರ ಹೆಂಡತಿ ಚಂದ್ರವ್ವ ಮೊದಲ ಬಸಿರಿನಲ್ಲೇ ಏನೋ ನಂಜೇರಿ, ಮೈಯೆಲ್ಲ ನೀರುತುಂಬಿಕೊಂಡಂತಾಗಿ ಐದನೇ ತಿಂಗಳಿಗೇ ತೀರಿಕೊಂಡುಬಿಟ್ಟಳು. ಇದರಿಂದ ಚೇತರಿಸಿಕೊಳ್ಳುವುದಕ್ಕೆ ಪಾಟೀಲರಿಗೆ ಬಹಳ ಕಾಲ ಬೇಕಾಯಿತು. ಮುಂದೆ ಯಾರು ಎಷ್ಟು ಒತ್ತಾಯಿಸಿದರೂ ಅವರು ಮರುಮದುವೆಗೆ ಒಪ್ಪಲಿಲ್ಲ. ಅವರ ಅಪ್ಪ ಮಾತ್ರ ಹಟ ಬಿಡದ ಹಾಗೆ ಪದೇ ಪದೇ ಅದನ್ನೇ ಹೇಳುತ್ತಿದ್ದರು. ಮುಂದಿನ ಹನ್ನೆರಡು ವರ್ಷಗಳವರೆಗೂ, ತಂದೆ ತೀರಿಕೊಳ್ಳುವವರೆಗೂ, ಅಪ್ಪ – ಮಗನ ಈ ಯುದ್ಧ ಮುಂದುವರೆಯಿತು. “ಯಾರನ್ನಾದರೂ ದತ್ತು ತಗೋ…… ಈ ಆಸ್ತಿಯೆಲ್ಲ ಹಾಳಾಗುವುದು ಬೇಡ…… ಒಂದು ಮಗು ಮನೆಗೆ ಬಂದರೆ ನಂಟುಗಳೆಲ್ಲ ಬೆಳೆಯುತ್ತದೆ……” ಎಂದು ಹೇಳುತ್ತಲೇ ಇದ್ದರು. ಅವರು ಸಾಯುವಾಗ ಇದನ್ನೇ ಹಲುಬಿ ಹಲುಬಿ ಸತ್ತದ್ದು. ಆ ಕರುಣಾಜನಕ ಚಿತ್ರ ಪಾಟೀಲರನ್ನು ಬಹಳ ಬದಲಿಸಿತು. ತಮ್ಮ ದೊಡ್ಡ ಮನೆಯಲ್ಲಿ ಒಬರೇ ಇರತೊಡಗಿದಾಗ, ಇನ್ನು ತನ್ನ ಕುಟುಂಬದ ಕರ್ತವ್ಯಗಳೆಲ್ಲ ತೀರಿದವು ಎಂದು ಒಂದು ದಿನ ಥಟ್ಟನೆ ಅನ್ನಿಸಿ, ಭೂಮಿಯನ್ನೆಲ್ಲ ಮಾರಿ, ಅರ್ಧ ಹಣ ವಿದ್ಯಾಸಂಸ್ಥೆಗೆ ದಾನ ಮಾಡಿ, ಉಳಿದದ್ದನ್ನು ಗ್ರಾಮೋದ್ಯೋಗದ ಅಭಿವೃದ್ಧಿಗೆ ಕೊಟ್ಟರು. ಗ್ರಾಮೋದ್ಯೋಗದ ಕೆಲಸದಲ್ಲಿ ಎಷ್ಟೇ ತೊಡಗಿಸಿಕೊಂಡರೂ ಹಳೆಯ ನೆನಪುಗಳೊಂದಿಗೆ ಅದೇ ಊರಿನಲ್ಲಿ ಒಂಟಿಯಾಗಿ ಬದುಕುವುದು ಯಾಕೋ ಹಿತವೆನ್ನಿಸಲಿಲ್ಲ. ಯೌವನದಲ್ಲಿ ತನಗೊಂದು ದಿಕ್ಕು ಕೊಟ್ಟ ಆದರ್ಶದ ಚಿತ್ರಗಳು ಮುಂದಿನ ಪೀಳಿಗೆಯವರಿಗೆ ಮಸುಕಾಗದಿರಲಿ ಎಂದನ್ನಿಸಿ, ಎಷ್ಟೇ ಸಣ್ಣ ಪ್ರಮಾಣದಲ್ಲಾದರೂ ತನ್ನ ಶಕ್ತಿಗೆ ನಿಲುಕುವಷ್ಟನ್ನು ಮಾಡಬೇಕೆಂದು ನಿರ್ಧರಿಸಿ ಗ್ರಾಮೋದ್ಯೋಗದ ಪ್ರಚಾರಕ್ಕೆ ಊರೂರು ತಿರುಗತೊಡಗಿದರು. ಹೀಗಿರುವಾಗ ಒಮ್ಮೆ, ನೀಲಕಂಠನ ನೆನಪಾಗಿ, ನೋಡಿ ಹೋಗುವಾ ಎಂದು ಬಂದವರು ಅವನು ತನ್ನ ಜೊತೆ ಇರಲು ಒತ್ತಯಿಸಿದ್ದೇ, ಈ ಮನೆ, ಈ ಊರು ಇಷ್ಟವಾಗಿ, ಯಾವ ಋಣಾನುಬಂಧವೋ ಎಂದು ಇದ್ದೇ ಬಿಟ್ಟರು.
ನೀಲಕಂಠನ ಜೊತೆ ಇರಲು ನಿರ್ಧರಿಸಿದಾಗ ಇಷ್ಟು ವರ್ಷ ಇರುತ್ತೇನೆಂದು ಪಾಟೀಲರು ಎಂದೂ ಅಂದುಕೊಂಡಿರಲಿಲ್ಲ. ಆ ಹೊತ್ತಿಗೆ ಮನಸ್ಸಿಗೆ ಸಮಾಧಾನ ಕೊಡುವ ಸಂಗತಿಯಾಗಿ ತೋರಿದ್ದರಿಂದ ಸ್ವಲ್ಪ ದಿನ ಇಲ್ಲಿರುವಾ ಎಂದು ಅಂದುಕೊಂಡವರು ಹಾಗೇ ದಿನ ದಿನ ವರ್ಷ ವರ್ಷ್ ಇಲ್ಲೇ ಕಳೆದರು. ನೀಲಕಂಠ ಶಾಲೆಯಲ್ಲಿ ಮಾಸ್ತರನಾಗಿದ್ದ. ಪಾಟೀಲರು ಅದೇ ಊರಿನಲ್ಲಿ ಗ್ರಾಮೋದ್ಯೋಗದ ಒಂದು ಶಾಖೆ ಆರಂಭಿಸಿದರು. ಅವರಿಗೆ ಬರುತ್ತಿದ್ದ ಸ್ವಾತಂತ್ರ್ಯಯೋಧರ ನಿವೃತ್ತಿವೇತನದ ಅರ್ಧವನ್ನು ಕಾವೇರಿಗೆ ಕೊಟ್ಟುಬಿಡುತ್ತಿದ್ದರು. ಅದು ಆಗಾಗ ಹೆಚ್ಚಾಗುತ್ತ ಬಂದಾಗಲೂ ಬಂದದ್ದರಲ್ಲಿ ಅರ್ಧ ಕೊಡುವುದನ್ನು ನಿಲ್ಲಿಸಲಿಲ್ಲ. ಉಳಿದರ್ಧ ಬ್ಯಾಂಕಿನಲ್ಲಿ ಇಡುತ್ತಿದ್ದರು. ಅವರ ಸ್ವಂತದ ಖರ್ಚುಗಳೂ ತೀರಾ ಕಡಿಮೆ. ಎರಡು ಜೊತೆ ಬಟ್ಟೆ, ಒಂದಿಷ್ಟು ಪುಸ್ತಕ ಬಿಟ್ಟರೆ ಬೇರೇನೂ ಅವರ ಬಳಿ ಇರಲಿಲ್ಲ. ಊರಲ್ಲಿ ಏನೇನೋ ಕೆಲಸಗಳನ್ನು ಹಚ್ಚಿಕೊಂಡು ತೊಡಗಿಸಿಕೊಳ್ಳುತ್ತ, ಅದನ್ನೇ ಇಷ್ಟಪಡತೊಡಗಿದರು. ಶನಿವಾರ ಅರ್ಧದಿನದ ಶಾಲೆ ಮುಗಿದ ನಂತರ ಮಕ್ಕಳಿಗೆ ರಾಮಾಯಣ, ಮಾಹಾಭಾರತ, ಸ್ವಾತಂತ್ರ್ಯಯೋಧರ ಕತೆಗಳನ್ನು ಹೇಳುತ್ತಿದ್ದರು. ಶಾಲೆಯ ಹೆಡ್‌ಮಾಸ್ತರರ ಜೊತೆ ಮಾತಾಡಿ ವಾರಕ್ಕೊಂದು ದಿವಸ ಕ್ರಾಫ್ಟ್ ಪಿರಿಯಡ್‌ನಲ್ಲಿ ಚರಕದಿಂದ, ತಕಲಿಯಿಂದ ನೂಲು ತೆಗೆಯಲು ಕಲಿಸುತ್ತಿದ್ದರು. ಮಕ್ಕಳು ತೆಗೆದ ನೂಲಿನಿಂದ ಹಾರ ಮಾಡಿ ಶಾಲೆಯಲ್ಲಿದ್ದ ಗಾಂಧಿಯ ಫೋಟೋಗೆ ಹಾಕಿಸಿದರು. ಆಗಸ್ಟ್ ಹದಿನೈದು, ಅಕ್ಟೋಬರ್ ಎರಡು, ಜನವರಿ ಇಪ್ಪತ್ತಾರರಂದು ಮಕ್ಕಳಿಂದ ದೇಶಭಕ್ತಿ ಗೀತೆಗಳನ್ನು ಹಾಡಿಸುತ್ತ ಊರಲ್ಲಿ ಫೇರಿ ತೆಗೆಸುತ್ತಿದ್ದರು. ಒಮ್ಮೆಯಂತೂ ಸ್ವಂತ ಖರ್ಚಿನಿಂದ ಶಾಲೆಯ ಎಲ್ಲ ಮಕ್ಕಳಿಗೆ ಪ್ರಭಾತ ಫೇರಿಗೆಂದು ಖಾದಿ ಟೊಪ್ಪಿಗೆ ತೆಗೆಸಿಕೊಟ್ಟಿದ್ದರು. ಫೇರಿ ಮುಗಿದ ಮೇಲೆ ಟೊಪ್ಪಿಗೆಗಳನ್ನು ಮಕ್ಕಳಿಂದ ವಾಪಸು ಪಡೆದು ಶಾಲೆಯಲ್ಲೇ ಅವುಗಳನ್ನಿರಿಸಿಕೊಂಡರೆ ಮುಂದಿನ ಸಲ ಉಪಯೋಗಿಸಬಹುದು ಎಂಬ ಹೆಡ್‌ಮಾಸ್ತರರ ಸಲಹೆಯನ್ನು ಪಾಟೀಲರು “ಫೇರಿ ಚಂದ ಕಾಣಲಿ ಎಂದು ಟೊಪ್ಪಿಗೆ ಕೊಟ್ಟಿದ್ದಲ್ಲ” ಎಂದು ಹೇಳಿ ನಿರಾಕರಿಸಿ ಅವರ ಅಸಮಧಾನಕ್ಕೆ ಕಾರಣರಾಗಿದ್ದರು.
ಪಾಟೀಲರು ಹಳ್ಳಿಹಳ್ಳಿ ತಿರುಗಿ, ಜೇನು ತೆಗೆಯುವವರನ್ನು ಸಂಪರ್ಕಿಸಿ, ಅದನ್ನು ಬಾಟಲಿಯಲ್ಲಿ ತುಂಬಿ ಗ್ರಾಮೋದ್ಯೋಗದ ಶಾಖೆಯ ಮೂಲಕ ಮಾರುವ ವ್ಯವಸ್ಥೆ ಮಾಡಿದರು. ಬರಬರುತ್ತ ಜೇನಿಗೆ ಬೆಲ್ಲದ ಕಲಬೆರಕೆಯಾಗತೊಡಗಿ, ಜೇನು ಖರೀದಿಸುವುದನ್ನೇ ನಿಲ್ಲಿಸಬೇಕಾಗಿ ಬಂದಾಗ ಬಹಳ ವ್ಯಥೆಪಟ್ಟರು. ಕಲಬೆರಕೆ ಜೇನಿಗೆ ಕಡಿಮೆ ಬೆಲೆ ಕೊಡೋಣ ಎಂಬ ಮಾತನ್ನು ಪಾಟೀಲರು ಒಪ್ಪಲೇ ಇಲ್ಲ. ಗೂಡು ಪೆಟ್ಟಿಗೆಗಳನ್ನು ಕೊಡಿಸಿ, ಜೇನು ಸಾಕಣೆಗೆ ಪ್ರೋತ್ಸಾಹಿಸಿ, ಕಲಬೆರಕೆ ತಡೆಯಲು ಗ್ರಾಮೋದ್ಯೋಗದವರೇ ಸ್ವತಃ ಹೋಗಿ ಜೇನು ಸಂಗ್ರಹಿಸಿ ತರುವ ಯೋಜನೆ ಮಾಡಿದರು. ಮೊದಮೊದಲು ಎಲ್ಲ ಸರಿಹೋಯಿತು. ಆಮೇಲೆ ಪೆಟ್ಟಿಗೆ ಇಟ್ಟುಕೊಂಡವರು ಬೇಗೆ ಜೇನು ಸಂಗ್ರಹವಾಗಲಿ ಎಂದು ಗೂಡಿನ ಪಕ್ಕ ದೊಡ್ಡ ಬೆಲ್ಲದ ಪೆಂಟೆ ಇಟ್ಟು, ವಸ್ತದಿಂದ ಮುಚ್ಚಿ ನೀರು ಚುಮುಕಿಸಿಡತೊಡಗಿದರು. ಮಕರಂದದ ಬದಲು ಬೆಲ್ಲದ ಅಂಶವೇ ಹೆಚ್ಚಾಗತೊಡಗಿದಾಗ ಹತಾಶರಾಗಿ ಪಾಟೀಲರು ಜೇನು ವ್ಯವಹಾರವನ್ನೇ ನಿಲ್ಲಿಸಿಬಿಟ್ಟರು. ಪಾಟೀಲರಿಗೆ ಇಷ್ಟವಿಲ್ಲದೇ ಹೋದರೂ ಗ್ರಾಮೋದ್ಯೋಗ ಬರೀ ಖಾದಿಗೇ ಸೀಮಿತವಾಗತೊಡಗಿತು. ಊರಲ್ಲಿ ಯಾರ ಯಾರ ಮನೆಗಳಲ್ಲಿ ಚರಕ ಇದೆ ಎಂದು ಪತ್ತೆಮಾಡಿ, ಎಲ್ಲೋ ಧೂಳು ತುಂಬಿ ಕೂತಿದ್ದನ್ನು ಹೊರತೆಗೆದು ಉಪಯೋಗಿಸುವಂತೆ ಹುರಿದುಂಬಿಸಿದರು. ಬೇಕಾದರೆ ಧಾರವಾಡದಿಂದ ಹೊಸ ಚರಕಗಳನ್ನು ತರಿಸಿಕೊಡುತ್ತೇನೆ ಅಂದರು. ನೂಲನ್ನು ಗ್ರಾಮೋದ್ಯೋಗದಲ್ಲಿ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿದರು. ಗಂಡಸರು ಕಿವಿಗೊಡದೇ ಹೋದರೆ ಹೆಂಗಸರಿಗೆ ಹೇಳುವರು. ಕೆಲವರು ಭಿಡೆಗೆ ಬಿದ್ದು ಒಂದೆರಡು ಉಂಡೆ ನೂಲು ತೆಗೆದರು. ಆಮೇಲೆ ಪಾಟೀಲರು ನೂಲು ಕೇಳಲು ಹೋದರೆ ಮನೆಗೆಲಸದ ಮಧ್ಯೆ ಬಿಡುವೇ ಆಗುವುದಿಲ್ಲ, ಮಗನಿಗೆ ಹುಷಾರಿರಲಿಲ್ಲ, ಅತ್ತೆಗೆ ಕಾಲುನೋವು ಎಂದೇನೋ ನೆವ ಹೇಳತೊಡಗಿದರು. ಯಾರು ಎಂಥ ನಿರುತ್ಸಾಹ ತೋರಿಸಿದರೂ ಪಾಟೀಲರು ಎದೆಗುಂದದೇ ಇದು ಬರೀ ನೂಲಿನ ಪ್ರಶ್ನೆಯಲ್ಲ ಎಂಬ ಅಚಲ ನಂಬಿಕೆಯಿಂದ ತಮ್ಮ ಪ್ರಯತ್ನ ಮುಂದುವರಿಸಿದ್ದರು.
ಮೊದಮೊದಲು ನೀಲಕಂಠನೂ ಪಾಟೀಲರ ಜೊತೆ ಸೇರಿ ಆದಷ್ಟು ಸಹಾಯ ಮಾಡುತ್ತಿದ್ದ. ಬರಬರುತ್ತ ಅವನಿಗೆ ತನ್ನ ಶಾಲೆಯ ಕೆಲಸ ಇತ್ಯಾದಿಗಳಿಂದ ಬಿಡುವು ಸಿಗುವುದು, ಸಿಕ್ಕರೂ ಅಷ್ಟೇ ಉತ್ಸಾಹದಿಂದ ಈ ಊರ ಉಸಾಬರಿಗಳನ್ನು ಹಚ್ಚಿಕೊಂಡು ಕೆಲಸ ಮಾಡುವುದು ಆಗದಾಯಿತು. ಪಾಟೀಲರ ಸತತ ಭೇಟಿಗಳಿಂದ, ಚರಕ ಖಾದಿ ಗ್ರಾಮೋದ್ಯೋಗ ದೇಶಭಕ್ತಿಗಳಿಂದ ಬೇಸತ್ತ ಕೆಲವರು ನೀಲಕಂಠನನ್ನು ಕರೆದು `ಇದೇನು ಪೀಡೆ ಊರಿಗೆ ತಂದೆಯೋ’ ಎಂದು ಬೈದರು. ನೀಲಕಂಠ ಯಾರ ಪರ ವಹಿಸಬೇಕೋ ತಿಳಿಯದೇ ಇಬ್ಬರನ್ನೂ ಸಮರ್ಥಿಸುವ ಮಾತಾಡಿದ. ಆ ದಿವಸ ಅವನಿಗೆ ಬಹಳ ಬೇಜಾರಾಗಿಬಿಟ್ಟಿತು. ಯಾಕೆ ತನಗೆ ಪಾಟೀಲರ ಪರ ವಹಿಸಿ ಮಾತಾಡುವುದು ಶಕ್ಯವಾಗಲಿಲ್ಲವೆಂದು ತಿಳಿಯದೇ ಹೋಯಿತು. ಮನೆಗೆ ಬಂದರೆ, ಅಲ್ಲಿ ಪಾಟೀಲರು ಹರಡಿ ಸಿಕ್ಕುಗಟ್ಟಿ ಬಿದ್ದಿದ್ದ ನೂಲನ್ನು ಉಂಡೆ ಸುತ್ತುತ್ತ ಕೂತಿದ್ದರು. ಅವರು ತಂದಿಟ್ಟ ನೂಲಿನ ಉಂಡೆಗಳನ್ನು ನಾಗರಾಜ ಆಡಲು ತೆಗೆದು ಕೋಣೆತುಂಬ ಬಿಚ್ಚಿಹಾಕಿಬಿಟ್ಟಿದ್ದ. ಇದ್ದ ಎಲ್ಲವನ್ನೂ ಬಿಟ್ಟು ಬಂದು ಹೀಗೆ ಹುಚ್ಚನ ಥರ ನೂಲಿನ ಉಂಡೆ ಸುತ್ತುತ್ತ ಕೂತವರನ್ನು ಕಂಡು ನೀಲಕಂಠನಿಗೆ ಸಂಕಟವಾಯಿತು.
ದಿನವಿಡೀ ನೂರೆಂಟು ಕೆಲಸಗಳನ್ನು ತಾನಾಗಿ ಹಚ್ಚಿಕೊಂಡು ದುಡಿದು ಸಂಜೆ ಮನೆಗೆ ಬಂದ ಪಾಟೀಲರು ನಾಗರಾಜನಿಗೆ ಪಾಠ ಹೇಳಲು ಕೂರುತ್ತಿದ್ದರು. ಪ್ರತಿ ದಿವಸ ಸಂಜೆ ಅವನು ಮಗ್ಗಿ ಹೇಳಬೇಕು, ಋತು ಸಂವತ್ಸರಗಳ ಹೆಸರು ಹೇಳಬೇಕು, ನಕ್ಷತ್ರಗಳ ಹೆಸರು ಹೇಳಬೇಕು – ಆ ನಂತರ ಒಂದು ಗಂಟೆ ಪಾಠ; ಆಮೇಲೆ ಕತೆಗಳು; ಅವುಗಳಲ್ಲಿ ಅಡಕವಾಗಿರುವ ನೀತಿಯನ್ನು ನಾಗರಾಜನ್ ಬಾಯಿಯಿಂದ ಹೇಳಿಸಲು ಬಹಳ ಪ್ರಯತ್ನಪಡುತ್ತಿದ್ದರು. ನಾಗರಾಜನಿಗೆ ಮಾತ್ರ ಇವೆಲ್ಲ ಅತ್ಯಂತ ಅಸಹನೀಯವಾಗಿತ್ತು. ಇದರಿಂದೆಲ್ಲ ತಪ್ಪಿಸಿಕೊಳ್ಳಲು ಏನೇನೋ ಉಪಾಯಗಳನ್ನು ಯೋಚಿಸುತ್ತಿದ್ದ. ಬೇರೆ ಯಾವ ಮಕ್ಕಳಿಗೂ ಇಲ್ಲದ ಶಿಕ್ಷೆ ತನಗೊಬ್ಬನಿಗೇ ಯಾಕೆ ಅನಿಸುತ್ತಿತ್ತು; ಪಾಟೀಲರನ್ನು ಕಂಡರೆ ಸಾಕು, ಎಲ್ಲಾದರೂ ಓಡಿಹೋಗಿಬಿಡುವ ಅನಿಸುತ್ತಿತ್ತು. ಅವನು ಹೈಸ್ಕೂಲಿಗೆ ಸೇರಿಕೊಂಡ ಮೊದಲ ವರ್ಷದಲ್ಲೇ ಋತು ಸಂವತ್ಸರಗಳಿಂದ ಮಗ್ಗಿಗಳಿಂದ ತಪ್ಪಿಸಿಕೊಂಡುಬಿಟ್ಟ. ಆದರ ಅವ್ರು ಭಾನುವಾರ ಬೆಳಿಗ್ಗೆ ಚರಕ ಹಿಡಿದು ನೂಲು ತೆಗೆಯಲು ಒತ್ತಾಯಿಸಿದಾಗ ಇಲ್ಲ ಅನ್ನಲಿಕ್ಕಾಗದೇ ಪ್ರಾಣಸಂಕಟವಾಗುತ್ತಿತ್ತು. ಅವನ ಜೊತೆಯ ಹುಡುಗರು ಪಾಟೀಲರನ್ನು “ದೇಶಕೆ ನೇತಾ ಖಾದಿ ಮಾಮಾ” ಎಂದೆಲ್ಲ ಚುಡಾಯಿಸುವಂತೆ ಅವರ ಬಗ್ಗೆ ಆಡಿಕೊಂಡರೆ ಅವಮಾನವಾಗುತ್ತಿತ್ತು. “ಅವರು ನಿನಗೆ ಏನಾಗಬೇಕು?” ಎಂದು ಯಾರದರೂ ಹುಡುಗರು ಕೇಳಿದರೆ ಏನು ಹೇಳಬೇಕೋ ತಿಳಿಯುತ್ತಿರಲಿಲ್ಲ. ಅವರು ತನ್ನ ಮನೆಯಲ್ಲಿಯೇ ಇದ್ದರೂ ತನಗೂ ಅವರಿಗೂ ಅಂಥ ಸಂಬಂಧವಿಲ್ಲವೆಂದು ತೋರಿಸಿಕೊಳ್ಳುವವನ ಹಾಗೆ ಅವರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದ. ಪಾಟೀಲರು ಅವನ ಬಗ್ಗೆ, ಅವನ ಓದಿನ ಬಗ್ಗೆ ಶ್ರದ್ಧೆಯಿಂದ ಲಕ್ಷ್ಯವಹಿಸಹೋದರೆ ಅವನಿಗೆ ಅಸಹನೀಯ ಕಿರಿಕಿರಿಯಾಗುತ್ತಿತ್ತು; ಒಳಗಿನ ವಿರೋಧ ಇನ್ನಷ್ಟು ಹೆಚ್ಚಾಗುತ್ತಿತ್ತು.
-೩-
ಈ ಊರಿಗೆ ಬಂದ ನಂತರ ಪರಿಚಯವಾದ ವಿಶ್ವನಾಥ, ಪಾಟೀಲರ ಹತ್ತಿರದ ಸ್ನೇಹಿತರಲ್ಲೊಬ್ಬನಾದ. ಅವನನ್ನು ಊರ ಜನ ಕರೆಯುವ ಹಾಗೆ ಇಸ್ನಾತನೆಂದು ಕರೆಯಲು ಪಾಟೀಲರಿಗೆ ಸಾಧ್ಯವೇ ಆಗಲಿಲ್ಲ. ಅವನು ವಯಸ್ಸಿನಲ್ಲಿ ಪಾಟೀಲರಿಗಿಂತ ಸಣ್ಣವನು. ಅನೆತನದ ಆಸ್ತಿ, ತೋಟ ಬೇಕಾದಷ್ಟು ಇತ್ತು. ಊರಿನ ಕೊನೆಯಲ್ಲಿ ಅವನ ಮನೆ. ಅವನ ಅಪ್ಪ ಬಹಳ ದರಬಾರು ನಡೆಸಿದ ವ್ಯಕ್ತಿ. ಅವರ ದರಬಾರಿನ ದಿನಗಳಲ್ಲಿ ಕಟ್ಟಿಸಿದ ದೊಡ್ಡ ಮನೆ, ಅದರ ಸುತ್ತಲಿನ ದೊಡ್ಡ ದೊಡ್ಡ ಮರಗಳಿಂದ, ನಾನಾ ರೀತಿಯ ಹೂಗಿಡಗಳಿಂದ ಕಣ್ಣಿಗೆ ಕಟ್ಟುವ ಹಾಗೆ ಇತ್ತು. ವಿಶ್ವನಾಥ ಒಬ್ಬನೇ ಮಗ. ತೋಟವನ್ನೂ ಹೊಲಗಳನ್ನೂ ಸ್ವಂತ ಸಾಗುವಳಿ ಮಾಡಿಸುತ್ತಿದ್ದ. ಊರಿನ ಯಾವ ವ್ಯವಹಾರದಲ್ಲೂ ತಲೆಹಾಕದೇ ತನ್ನ ತೋಟ, ಹೊಲ, ಸಂಸಾರ ಹೀಗೆ ತನ್ನದೇ ಪ್ರಪಂಚದಲ್ಲಿರುತ್ತಿದ್ದ.
ವಿಶ್ವನಾಥನಿಗೆ ಇಬ್ಬರು ಮಕ್ಕಳು – ಒಬ್ಬ ಮಗ, ಒಬ್ಬ ಮಗಳು. ಮಕ್ಕಳೆಂದರೆ ಅವನಿಗೆ ಅತಿಶಯವೆನ್ನಿಸುವಂಥ ಪ್ರೀತಿ. ಹೆಂಡತಿ ತೀರಿಕೊಂಡ ಬಳಿಕವಂತೂ ಅವನ ಪ್ರಪಂಚ ಅವರ ಸುತ್ತಲೇ ಸುತ್ತುತ್ತಿತ್ತು. ಮಕ್ಕಳಿಬ್ಬರೂ ಪ್ರತಿಭಾಶಾಲಿಗಳು. ತಾನು ಮೆಟ್ರಿಕ್‌ವರೆಗೆ ಮಾತ್ರ ಓದಿದ್ದರೂ ಮಕ್ಕಳಲ್ಲಿ ಓದಿನ ಬಗ್ಗೆ ಎತ್ತರದ ಅಪೇಕ್ಷೆಗಳನ್ನು ಬೆಳೆಸಿದ್ದ. ಈಗ ವಯಸ್ಸಾದಾಗ ಅವನಿಗೆ ಮಕ್ಕಳನ್ನು ಅಷ್ಟೆಲ್ಲ ಓದಿಸಿದ್ದರಿಂದಲೇ ತಾನು ಒಂಟಿಯಾಗಿಬಿಟ್ಟೆ ಎಂದು ಕೆಲವೊಮ್ಮೆ ಅನಿಸುತ್ತಿತ್ತು. ಮಗನನ್ನು ಎಂಜಿನಿಯರ್ ಮಾಡಬೇಕೆಂಬ ಕನಸಿತ್ತು. ಅವನು ಎಂಜಿನಿಯರಿಂಗ್ ಓದಿ, ಮುಂದೆ ಮತ್ತೇನೇನೋ ಓದಿ, ತನ್ನ ಓದಿಗೆ ತಕ್ಕ ಕೆಲಸ ಊರಲ್ಲಿಲ್ಲ ಎಂದು ಭಾವಿಸಿ ಡೆಲ್ಲಿಯಲ್ಲಿ ನೆಲೆಸಿದ್ದ. ಮಗಳು ರಸಾಯನಶಾಸ್ತ ಓದಿ ಸಂಶೋಧನೆಗಳನ್ನು ಮಾಡುತ್ತ, ತನ್ನ ಜೊತೆ ಕೆಲಸ ಮಾಡುತ್ತಿದ್ದವನನ್ನೇ ಮದುವೆಯಾಗಿ ಬೆಂಗಳೂರಲ್ಲಿ ನೆಲೆಸಿದ್ದಳು. ತನ್ನ ಸಂಶೋಧನೆಯ ಮೊದಲ ಪುಸ್ತಕವನ್ನು ಅಪ್ಪನಿಗೇ ಅರ್ಪಿಸಿದ್ದಳು. ಪುಸ್ತಕದ ಮುನ್ನುಡಿಯಲ್ಲಿ ತನ್ನ ಅಪ್ಪ ಹೇಗೆ ತನ್ನ ಬೆಳವಣಿಗೆಗ ಕಾರಣವಾದ, ಅವನಿಗಿರುವ ಕುತೂಹಲ, ತಂತ್ರಜ್ಞಾನದ ಬಗೆಗಿನ ಆಸಕ್ತಿ, ಅವನ ಪ್ರಯೋಗಶೀಲತೆ ಇತ್ಯಾದಿಗಳ ಬಗ್ಗೆ ಒಂದು ಪುಟ ಬರೆದಿದ್ದಳು.
ಅವನಿಗೆ ತಂತ್ರಜ್ಞಾನದ ಬಗೆಗಿದ್ದ ಆಕರ್ಷಣೆ ವಿಚಿತ್ರವಾದದ್ದು. ಊರಿನಲ್ಲಿ ಮೊಟ್ಟಮೊದಲು ವಿದ್ಯುದ್ದೀಪ ಬೆಳಗಿದ್ದು ಅವನ ಮನೆಯಲ್ಲಿ. ಮೊಟ್ಟಮೊದಲು ಬಾವಿಗೆ ಪಂಪು ಹಾಕಿಸಿದವನು ಅವನೇ. ಯಾವ ಯಂತ್ರ ಕೈಗೆ ಸಿಗಲಿ, ಅದೇನು ಅಂತ ಕುಲಂಕುಷ ತಿಳಿದುಕೊಳ್ಳುವ ತನಕ, ಬಿಚ್ಚಿ ಜೋಡಿಸುವ ತನಕ ಪುರಸತ್ತಿಲ್ಲ. ಅವನು ಒಂಟಿಯಾಗಿ ಇರತೊಡಗಿದಾಗ ಮೊದಮೊದಲು ಒಂದು ಕೋಣೆಗೆ ಮಾತ್ರ ಸೀಮಿತವಾಗಿದ್ದ ಅವನ ತಂತ್ರಜ್ಞಾನ ಪ್ರದರ್ಶನ ಮನೆಯಿಡೀ ಆವರಿಸಿಕೊಂಡಿತ್ತು. ಇಡೀ ಊರಿನಲ್ಲಿ ಅವನ ಮನೆಯ ಮುಂಬಾಗಿಲು ಮಾತ್ರ ಸದಾ ಮುಚ್ಚಿರುತ್ತಿತ್ತು. ಮುಂಬಾಗಿಲ ಪಕ್ಕದಲ್ಲಿ “ಕರೆಗಂಟೆ ಒತ್ತಿ” ಎಂಬ ಫಲಕ. ವಿಶ್ವನಾಥನ ಕೋಣೆ ಮನೆಯ ಹಿಂಬಾಗದಲ್ಲಿತ್ತು. ಆರೇಳು ಕೋಣೆಗಳನ್ನು ದಾಟಿ ಅಲ್ಲಿ ಹೋಗಬೇಕು. ಯಾರಾದರೂ ಕರೆಗಂಟೆ ಬಾರಿಸಿದರೆ ಅವನು ಅಲ್ಲಿಂದಲೇ ಒಂದು ತಂತಿ ಎಳೆದು ಮುಂಬಾಗಿಲ ಚಿಲಕ ಜಾರುವಂತೆ ಮಾಡುತ್ತಿದ್ದ. ಸ್ಪ್ರಿಂಗ್ ಜೋಡಿಸಿದ ಬಾಗಿಲು ತಂತಾನೇ ತೆರೆದುಕೊಳ್ಳುತ್ತಿತ್ತು. ಎದುರಿಗೆ “ಸುಸ್ವಾಗತ – ಒಳಗೆ ಬನ್ನಿ” ಎಂಬ ಫಲಕ. ಈ ರೀತಿ ಸ್ವಾಗತಿಸಿಕೊಂಡು ಗೊತ್ತಿಲ್ಲದ ಹೊಸಬರು ಅನುಮಾನಪಡುತ್ತ ಹೊರಗೇ ನಿಂತರೆ, ಅವರು ಒಳಬಂದರೆಂದು ಭಾವಿಸಿ ವಿಶ್ವನಾಥ ಇನ್ನೊಂದು ತಂತಿ ಎಳೆದು ಬಾಗಿಲು ಮುಚ್ಚಿಕೊಳ್ಳುವಂತೆ ಮಾಡುತ್ತಿದ್ದ. ಫಲಕ ಓದಿಯೂ ಹೊರಗೇ ನಿಂತವರನ್ನು ಕಂಡರೆ ಅವನಿಗೆ ಸಿಡಿಮಿಡಿಯಾಗುತ್ತಿತ್ತು. ಮುಂದಿನ ಬಾಗಿಲು ತೆರೆದಾಗ ಒಳಗೆ ಹೋದರೆ ಒಂದರ್ಧ ನಿಮಿಷದಲ್ಲಿ ಬಲಗಡೆ ಒಂದು ದೀಪ ಹತ್ತಿ ಅಲ್ಲಿದ್ದ ಇನ್ನೊಂದು ಫಲಕದ ಮೇಲೆ ಬೆಳಕು ಚೆಲ್ಲುತ್ತಿತ್ತು – “ಬಲಕ್ಕೆ ತಿರುಗಿ ಒಳಗೆ ಬನ್ನಿ”. ಒಳಗೆ ಹೋಗುತ್ತಿದ್ದ ಹಾಗೆ ಒಂದೊಂದೇ ಬಾಗಿಲುಗಳು ತೆರೆದುಕೊಳ್ಳುತ್ತ, ದೀಪಗಳು ಹತ್ತುತ್ತ, ಆರುತ್ತ ಕತ್ತಲು ತುಂಬಿದ ಕೋಣೆಯ ವಸ್ತುಗಳು ಬೆಳಕಿನಲ್ಲಿ ಫಕ್ಕನೆ ಗೋಚರಿಸುತ್ತ ಯಾವುದೋ ಮಾಯಾಲೋಕವನ್ನು ಹೊಕ್ಕಂತಾಗುತ್ತಿತ್ತು. ಅವನ ಮನೆ ತುಂಬಾ ಬರೀ ಇಂಥದ್ದೇ – ದಾರ ಎಳೆದರೆ ಏನೋ ತೆರೆದುಕೊಳ್ಳುತ್ತದೆ, ತಂತಿ ಎಳೆದರೆ ದೀಪಗಳು ಹತ್ತಿಕೊಳ್ಳುತ್ತವೆ, ಗುಂಡಿ ಒತ್ತಿದರೆ ಮತ್ತೇನೋ ಹೊರಬರುತ್ತದೆ…… ಅವನ ಫಲಕಗಳನ್ನು ಸರಿಯಾಗಿ ಓದದೇ ಮನೆಯಲ್ಲಿ ಓಡಾಡಹೋದರೆ ಏನಾದರೂ ಅವಘಡ ಘಟಿಸುತ್ತಿತ್ತು. ಅವನು ಸದಾ ಪ್ರಯೋಗನಿರತನಾದ್ದರಿಂದ ಮನೆಯ ವ್ಯವಸ್ಥೆಯೂ, ಅದಕ್ಕೆ ತಕ್ಕಂತೆ ಫಲಕಗಳೂ ಬದಲಾಗುತ್ತಿದ್ದುದರಿಂದ ಅಭ್ಯಾಸಬಲದಿಂದಲೂ ಅಲ್ಲಿ ಓಡಾಡುವಂತಿರಲಿಲ್ಲ. ಹಾಗಾಗಿ ಓದಲು ಬಾರದವರಿಗಂತೂ ಆ ಮನೆಯಲ್ಲಿ ಪ್ರವೇಶವೇ ಇಲ್ಲದಂತಾಗಿಬಿಟ್ಟಿತ್ತು. ಅವನ ತೋಟದ ಆಳುಗಳು ಸೀದಾ ಮನೆಯ ಹಿಂದೆ ಹೋಗಿ ಅವನ ಕೋಣೆಯ ಕಿಟಕಿಯಿಂದ ಅವನನ್ನು ಕರೆಯುತ್ತಿದ್ದರು. ಅವನು ಮನೆಯಲ್ಲಿದ್ದಷ್ಟು ಹೊತ್ತು ಆ ಕೋಣೆಯಲ್ಲೇ ಇರುತ್ತಿದ್ದ. ಅದನ್ನೂ ಅವನೇ ಸ್ವತಃ ಸ್ವಚ್ಛ ಮಾಡುತ್ತಿದ್ದ. ಕೋಣೆಯ ನಡುವೆ ಅವನ ಮಂಚ. ಅದರ ಅಕ್ಕಪಕ್ಕ ಹತ್ತಾರು ಸ್ವಿಚ್ ಬೋರ್ಡುಗಳು; ಮಂಚದಿಂದಲೇ ಕೈಗೆಟಕುವಂತೆ ಮೇಲಿನಿಂದ ತೂಗುಬಿದ್ದ ಈ ದಾರಗಳು, ತಂತಿಗಳು, ಸರಪಳಿಗಳು, ಹಗಕ್ಕೆ ಜೋತುಬಿದ್ದ ಕೋಲುಗಳು; ನೆಲದ ಮೇಲೆಲ್ಲ ಹರಡಿಬಿದ್ದ ಅವನ ಪ್ರಯೋಗದ ರಾಟೆಗಳು ಚಕ್ರಗಳು ಸ್ಪ್ರಿಂಗುಗಳು, ಮೊಳೆಗಳು, ನಾನಾರೀತಿಯ ಉಪಕರಣಗಳು, ಪಕ್ಕದ ಕಪಾಟಿನಲ್ಲಿ ಎಲ್ಲಿಂದಲೋ ತರಿಸಿಕೊಂಡ ಪುಸ್ತಕಗಳು…… ಅವನೇ ಮಾಡಿಕೊಂಡ ಬೆಳಕಿನ ವಿನ್ಯಾಸದಲ್ಲಿ, ಬೇಕೆಂದಲ್ಲಿ ಬೇಕಾದಷ್ಟೇ ಬೆಳಕು ಬೀಳುವ ವಿಚಿತ್ರ ವಾತಾವರಣದಲ್ಲಿ ಆ ಕೋಣೆಯ ಸಮಗ್ರ ಚಿತ್ರ ಗ್ರಹಿಸುವುದೇ ಅಸಾಧ್ಯವಾಗಿತ್ತು……
ಪಾಟೀಲರು ಹೊಸದಾಗಿ ಊರಿಗೆ ಬಂದಾಗ ಎಲ್ಲರ ಮನೆಗೆ ಹೋದಂತೆ ವಿಶ್ವನಾಥನ ಮನೆಗೂ ಹೋಗಿದ್ದರು. ಅವನ ವಿಚಾರಗಳೆಲ್ಲ ಪಾಟೀಲರಿಗಿಂತ ಭಿನ್ನವಾಗಿದ್ದರೂ ಅವನು ಅವರನ್ನು ಸೌಜನ್ಯದಿಂದ ಗೌರವದಿಂದ ಮಾತಾಡಿಸುತ್ತಿದ್ದ. ಅವನ ಮಕ್ಕಳ ಬುದ್ಧಿವಂತಿಕೆಗೆ ಪಾಟೀಲರು ಹಿಗ್ಗುತ್ತಿದ್ದರು. ಅವರು ಮುಂದೆ ಏನೇನು ಓದಬಹುದು, ಎಲ್ಲೆಲ್ಲಿ ಓದಬಹುದು ಎಂಬ ವಿವರಗಳನ್ನೆಲ್ಲ ಪಾಟೀಲರೇ ಯಾರಿಗೋ ಬರೆದು ತರಿಸಿಕೊಟ್ಟಿದ್ದರು. ಅವನಲ್ಲೇನೋ ವಿಚಿತ್ರ ಆಕರ್ಷಣೆಯಿದೆಯೆಂದು ಪಾಟೀಲರಿಗೆ ಅನಿಸುತ್ತಿತ್ತು. ಊರಿನಲ್ಲಿ ಅವನ ಜೊತೆ ಮಾತ್ರ ತಮಗೆ ನಿಜವಾದ ಸಂವಾದ, ವಾಗ್ವಾದ ಸಾಧ್ಯ ಎಂದು ಪಾಟೀಲರಿಗೆ ಅನಿಸುತ್ತಿತ್ತು. “ನಿಮ್ಮ ಚರಕಕ್ಕೊಂದು ಮೋಟರು ಕೂರಿಸಿ ಕೊಡುತ್ತೇನೆ…… ಆಗ ನೋಡಿ ಚಮತ್ಕಾರ…… ಈ ಊರಿನ ಜನ ಉತ್ಪಾದಿಸಿದಷ್ಟೂ ನೂಲನ್ನು ಕೊಂಡುಕೊಳ್ಳುವುದೇ ನಿಮ್ಮ ಗ್ರಾಮೋದ್ಯೋಗಕ್ಕೆ ಸಮಸ್ಯೆಯಾಗಬಹುದು……” ಎಂದು ವಿಶ್ವನಾಥ ಹೇಳಿದ್ದ. ಪಾಟೀಲರು ಗಾಂಧಿಯ ಬಗ್ಗೆ ಮಾತಾಡಿದರೆ “ಗಾಂಧಿಯಿಂದ ಸ್ವಾತಂತ್ರ್ಯ ಬಂತು ನಿಜ…… ಆದರೆ ನೆಹರೂ ಬಂದು ಈ ದೇಶಕ್ಕೆ ಒಳೆಯದಾಯಿತು ಪಾಟೀಲರೇ……” ಅನ್ನುತ್ತಿದ್ದ. ಮುಂದುವರಿದ ಇಬ್ಬರ ವಾದ ವಿಶ್ವನಾಥನ ಮಕ್ಕಳವರೆಗೂ ಬಂದು ತಲುಪಿದಾಗ ಅದನ್ನು ಚರ್ಚಿಸಲು ಇಷ್ಟಪಡದೇ ಖಿನ್ನನಾಗಿ ಕೂರುತ್ತಿದ್ದ. “ನಿನ್ನ ಮಕ್ಕಳು ಈ ಪ್ರಗತಿಯಿಂದ ಮುಂದೆ ಬರುವಂತಾದುದು ನಿಜವಾದರೂ, ಅವರು ನಿನ್ನಿಂದ ದೂರ ಇರಲಿಕ್ಕೂ ಅದೇ ಕಾರಣ” ಎಂದು ಎಷ್ಟೋ ಬಾರಿ ಹೇಳಬೇಕೆಂದುಕೊಂಡರೂ ಅದು ವಿಶ್ವನಾಥನಿಗೆ ನೋವುಂಟು ಮಾಡೀತೆಂದು ಪಾಟೀಲರು ಸುಮ್ಮನಿರುತ್ತಿದ್ದರು. ಮೊದಲು ಎಲ್ಲ ಮನೆಗಳ ಹಾಗೆಯೇ ಇದ್ದ ಅವನ ಮನೆ ಈಗಿನ ಸಂಕೀರ್ಣ ಸ್ಥಿತಿಗೆ ಬರುವುದನ್ನು ಪಾಟೀಲರು ಹಂತಹಂತವಾಗಿ ನೋಡಿದ್ದರು. ತನ್ನ ಮಕ್ಕಳು ತನ್ನ ಬಳಿ ನೆಲೆಸಲಾರರು ಎಂಬ ಸತ್ಯವನ್ನವನು ತಿಳಿಯುತ್ತ ಹ್ದಂತೆ, ಒಳಗೊಳಗೇ ಕುಸಿಯುತ್ತ ಒಂಟಿಯಾಗುತ್ತ ಹೋಗುವುದನ್ನು ಕಂಡಿದ್ದರು……
-೪-
ಬ್ರಹ್ಮಪುತ್ರಾ ನದಿಗೆ ನೆರೆ ಬಂದು ದೇಶದ ತುಂಬ ಸುದ್ದಿಯಾದಾಗ, ಆ ಜನರ ಹೃದಯ ವಿದ್ರಾವಕ ಅವಸ್ಥೆಯ ಬಗ್ಗೆ ಚಿಂತಿಸುತ್ತ ಪಾಟೀಲರಿಗೆ ತಾನೂ ಏನಾದರೂ ಮಾಡಬೇಕು ಅನಿಸಿತು. ಊರಿಗೆ ಹೋಗಿ, ಮನೆ ಮಾರಿ, ಬಂದ ಹಣವನ್ನು ಸರಕಾರದ ಪ್ರವಾಹ ಪರಿಹಾರ ನಿಧಿಗೆ ಕಳಿಸಬೇಕೆಂದು ನಿರ್ಧರಿಸಿದರು. ಆ ದೊಡ್ಡ ಮನೆಯ ಅಗತ್ಯ ಈಗ ತನಗಿಲ್ಲ. ಬೇಕಾದರೆ ಒಂದು ಸಣ್ಣ ಜಾಗ ಇಟ್ಟುಕೊಂಡು, ಉಳಿದದ್ದನ್ನು ಮಾರಿದರೆ ಆ ಹಣದಿಂದ ಯಾರಿಗೋ ಆಸರೆ ಕೊಟ್ಟಂತಾದರೂ ಆಗುತ್ತದೆ ಅನಿಸಿತ್ತು. ತಮ್ಮ ನಿರ್ದಾರವನ್ನು ನೀಲಕಂಠನಿಗೆ ಹೇಳಿದರು. “ಸರಕಾರದಲ್ಲಿ ಬಹಳ ವಿಶ್ವಾಸ ನಿನಗೆ……” ಎಂದು ಏನೋ ಹೇಳತೊಡಗಿದ ನೀಲಕಂಠನ ಧ್ವನಿ ಬೇರೆಯೇ ಆಗಿ ಕೇಳಿಸಿತು. “ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇದ್ದಾಗ……” ಅಂತೇನೋ ಹೇಳಹೊರಟ ಪಾಟೀಲರು ಹತಾಶರಂತೆ ಸುಮ್ಮನಾಗಿಬಿಟ್ಟರು. ಅವರು ಮನೆ ಮಾರುವ ಸುದ್ದಿ ತಿಳಿದದ್ದೇ ಕಾವೇರಿಗೆ ಹೊಟ್ಟೆ ಉರಿದುಹೋಯಿತು. ನೀಲಕಂಠನನ್ನು ಒಂದೇ ಸಮ ಪೀಡಿಸತೊಡಗಿದಳು. “ಇಷ್ಟು ವರ್ಷ ಮನೆಯಲ್ಲಿಟ್ಟುಕೊಂಡು ನೋಡಿಕೊಂಡಿದ್ದೇವಲ್ಲ…… ಅಷ್ಟನ್ನೂ ಕೊಡುವುದು ಬೇಡ…… ಈ ಮನೆ ರಿಪೇರಿಗೆ ಅಂತ ಒದ್ದಾಡುತ್ತಿದ್ದೇವೆ. ಅದಕ್ಕೆ ಸಹಾಯ ಮಾಡಬಹುದಲ್ಲ…… ಎಲ್ಲೋ ದುಡ್ಡು ಕಳಿಸಿ ಯಾರೋ ತಿಂದು ಹಾಕುವ ಬದಲು ನಮಗೆ ಕೊಡಬಹುದು ಅಂತ ಅನಿಸಲಿಲ್ಲವಲ್ಲ……” ಎಂದು ನೀಲಕಂಠನ ಪ್ರಾಣ ಹಿಂಡಿದಳು. ನೀಲಕಂಠನಿಗೂ ಪಾಟೀಲರು ಮಾಡುತ್ತಿರುವುದು ಪೂರ್ತಿ ಸರಿ ಅನ್ನಿಸಿರಲಿಲ್ಲ. ಹಿಂದೆ ಸ್ವಾತಂತ್ರ್ಯ ಚಳುವಳಿಯ ಸಂದರ್ಭವೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎಂದು ಅನಿಸತೊಡಗಿತ್ತು. ಸವಾಲಾಗಿಯಾದರೂ ಸ್ವಲ್ಪ ದುಡ್ಡು ಇಸಕೊಳ್ಳಿ ಎಂದು ಕಾವೇರಿ ಗಂಡನಿಗೆ ಹೇಳಿಕೊಟ್ಟಳು. ನೀಲಕಂಠ ಕೊನೆಗೂ ಇಪ್ಪತ್ತು ಸಾವಿರ ಸಾಲ ಕೇಳಿಯೇಬಿಟ್ಟ. ಪಾಟೀಲರು ಊರಿಗೆ ಹೋಗಿ ರಾಜವಾಡೆಯಂತಹ ತಮ್ಮ ಮನೆ ಮಾರಿ ಬಂದ ಒಂದು ಲಕ್ಷ ಹತ್ತು ಸಾವಿರದಲ್ಲಿ, ಇಪ್ಪತ್ತು ಸಾವಿರ ನೀಲಕಂಠನಿಗೆ ಕೊಟ್ಟು, ಉಳಿದ ಹಣವನ್ನು ಪರಿಹಾರ ನಿಧಿಗೆ ಕಳಿಸಿಬಿಟ್ಟರು. ತನ್ನ ಇಡಿ ಜೀವಮಾನ ನೌಕರಿ ಮಾಡಿ ರಿಟಾಯರ್ ಆಗುವಾಗ ಕೂಡ ತನಗೆ ಅಷ್ಟು ಹಣ ಬರಲಾರದು ಎಂದು ಲೆಕ್ಕ ಹಾಕುತ್ತ ನೀಲಕಂಟನಿಗೆ ಪಾಟೀಲರ ಬಗ್ಗೆ ಒಂದು ಕ್ಷಣ ಹೆಮ್ಮೆಯಾಯಿತು. ಕೇಳುವಾಗ ಸ್ವಲ್ಪ ಹೆಚ್ಚೇ ಕೇಳಬಹುದಿತ್ತು ಎಂಬ ಆಸೆ ಕಾಡಿತು. ಅವರ ಮನೆಗೆ ಎಷ್ಟು ಬೆಲೆ ಬರಬಹುದೆಂಬ ಅಂದಾಜೇ ಇಲ್ಲದೇ ಕೇಳಿಬಿಟ್ಟೆವಲ್ಲ ಎಂದು ಕಾವೇರಿ ಪರಿತಪಿಸಿದಳು. ಬಡಿಸುವಾಗ ಪಾಟೀಲರಿಗೆ ಕಡಿಮೆ ಅನ್ನ ಹಾಕಿ, ಅವರು ಮತ್ತೆ ಮತ್ತೆ ಕೇಳಿ ಬಡಿಸಿಕೊಳ್ಳುವ ಹಾಗೆ ಮಾಡಿ “ಅವರಿಗೆ ಗೊತ್ತಾಗಲಿ” ಅಂದು ಒಳಗೊಳಗೇ ಕುದಿಯತೊಡಗಿದಳು. ಅಂತೂ ಆ ದುಡ್ಡು ಪಡೆದಾಗಿನಿಂದ ಅವಳಲ್ಲಿ ಒಂದು ಬಗೆಯ ವಿಚಿತ್ರ ಅಸಹನೆ ಆರಂಭವಾಯಿತು.
ತಾನು ಮನೆ ಮಾರಿ ದುಡ್ಡು ದಾನ ಮಾಡುತ್ತೇನೆಂದಾಗ ನೀಲಕಂಠನ ಪ್ರತಿಕ್ರಿಯೆ ಅಷ್ಟೇನೂ ಉತ್ತೇಜಕವಾಗಿರಲಿಲ್ಲವೆಂಬುದನ್ನು ನೆನೆಸಿಕೊಂಡಾಗಲೆಲ್ಲ ಪಾಟೀಲರಿಗೆ ಅವನು ಮಾತ್ರವಲ್ಲ, ಬಹುತೇಕ ಜನ ತಮ್ಮ ಒಳಗನ್ನು ಕೊಳೆಯಲು ಬಿಟ್ಟಿದ್ದಾರೆ ಅನಿಸುತ್ತಿತ್ತು. ಅವರು ರೇಶನ್ ಅಂಗಡಿಯ ಕಿಣಿಯ ಜೊತೆ ನಡೆಸಿದ ಜಗಳದಲ್ಲಿ ಸಾಲಕ್ಕೆ ಸಾಮಾನು ಒಯ್ದರೆ ಕಾಲುಭಾಗದಷ್ಟು ಅವನಿಗೆ ಬಿಟ್ಟುಕೊಡಬೇಕು. ಒಂದು ಕಾರ್ಡಿಗೆ ಎರಡು ಕೇಜಿ ಸಕ್ಕರೆ ಒಯ್ಯಬಹುದಾದರೆ, ಅವನ ಅಂಗಡಿಯಲ್ಲಿ ಸಾಲದ ಲೆಕ್ಕ ಇರುವವರು, ಒಂದೂವರೆ ಕೇಜಿ ಮಾತ್ರ ಕೊಂಡು, ಅಷ್ಟಕ್ಕೇ ದುಡ್ಡು ಕೊಟ್ಟರೂ, ಕಾಡಿನಲ್ಲಿ ಮಾತ್ರ ಎರಡು ಕೇಜಿ ನಮೂದಿಸಿಕೊಳ್ಳಬೇಕಾಗುತ್ತಿತ್ತು. ಇದು ಪಾಟೀಲರಿಗೆ ತಿಳಿದು ಬಹಳ ಬೇಜಾರಾಗಿ, ಕಿಣಿಯನ್ನು ಮಾತಾಡಿಸುವಾ ಅಂತ ಹೋದರು. ಸಂಜೆ ಅಂಗಡಿ ಮುಚ್ಚುವ ಹೊತ್ತು. ಪಾಟೀಲರ ಮಾತನ್ನು ಐದು ನಿಮಿಷ ಕೇಲ್ಳಿಸಿಕೊಂಡ ರಾಜಾರಾಮ ಕಿಣಿ ಮುಂದೆ ಮಾತಾಡಲು ಅವಕಾಶ ಕೊಡದೇ “ಚರಕ, ಖಾದಿ ಅಂತ ಓಡಾಡಿಕೊಂಡಿದ್ದೀರಿ ಅಂತ ಸುಮ್ಮನೇ ಇದ್ದರೆ, ನಮಗೇ ಪ್ರಾಮಾಣಿಕತೆಯ ಬಗ್ಗೆ ಹೇಳಿಕೊಡಲು ಬಂದಿರಲ್ಲ…… ದೇಶ ಆಳುವ ನಿಮ್ಮ ದೇಶಭಕ್ತ ಸೂಳೇಮಕ್ಕಳು ಮಾಡುವುದು ನಮಗೆ ಗೊತ್ತಿಲ್ಲವೋ? ಮೊದಲು ಅವರನ್ನು ಸರಿಮಾಡಿ…….. ಆಮೇಲೆ ನಮ್ಮ ವ್ಯವಹಾರದಲ್ಲಿ ಕೈಹಾಕುವಿರಂತೆ……” ಅನ್ನುತ್ತ ಅಂಗಡಿ ಬಾಗಿಲು ಮುಚ್ಚತೊಡಗಿದರು. ಪಾಟೀಲರಿಗೆ ಬಹಳ ಅವಮಾನವಾಗಿಬಿಟ್ಟಿತು. ನೋವಾಯಿತು. ಜನರನ್ನು ಸಂಘಟಿಸಿ ಅವರ ಅಂಗಡಿಯೆದುರು ಧರಣಿ ಕೂರುವ ಯೋಚನೆ ಮಾಡಿದರು. ನೀಲಕಂಠನ ಜೊತೆ ಮಾತಾಡಿದ್ದಕ್ಕೆ ಆತ “ಅವರು ಎಷ್ಟೋ ಮಂದಿಗಿಂತ ವಾಸಿ…… ಆದರೂ ಅವರು ಮಾಡಿದ್ದು ಘೋರ ಅನ್ಯಾಯ ಅನ್ನುವವರು, ಅವರ ವಿರುದ್ಧ ದನಿ ಎತ್ತುವವರು ಈ ಊರಲ್ಲಿ ನಿಮಗೆ ಸಿಕ್ಕಲಾರರು……” ಅಂದ. ಪಾಟೀಲರು ಬಿಟ್ಟುಕೊಡದೇ ಇನ್ನೂ ಕೆಲವರ ಹತ್ತಿರ ಮಾತಾಡಿದರು.
“ಕಾಯಿದೆ ಮಾತು ಬರುವುದೇ ಇಲ್ಲ ಪಾಟೀಲರೇ…….. ಸಾಲ ಕೊಡಬೇಕು ಅಂತ ಕಾಯಿದೆ ಇದೆಯಾ? ಅವರ ಅಂಗಡಿಯಲ್ಲಿ ಮುಕ್ಕಾಲು ಪಾಲು ಜನ ಲೆಕ್ಕ ಬರೆಸುವವರೇ…… ರೋಖ ಹಣ ಕೊಟ್ಟವರಿಗೆ ಮಾತ್ರ ಸಾಮಾನು ಕೊಡುತ್ತೇನೆಂದು ಅವರಂದರೆ ಎಷ್ಟೋ ಜನಕ್ಕೆ ಈಗ ಸಿಗುವಷ್ಟೂ ಸಿಗದೇ ಹೋದೀತು…… ಸ್ವಲ್ಪ ಲಾಭ ಮಾಡಿಕೊಳ್ಳುತ್ತಿದ್ದಾರೆ…… ಮಾಡಲಿ ಬಿಡಿ……” ಎಂದೊಬ್ಬರು ಅಂದರು. ಮತ್ತೊಬ್ಬರಂತೂ “ಕಾಲಕ್ಕೆ ತಕ್ಕ ಹಾಗೆ ಆದರ್ಶಗಳನ್ನು ಬದಲಿಸಿಕೊಳ್ಳಬೇಕು ಪಾಟೀಲರೇ……” ಎಂದು ಉಪದೇಶ ಕೂಡ ಕೊಟ್ಟರು. ಯಾರಿಗಾದರೂ ಏನಾದರೂ ಹೇಳಹೋದರೆ ಸಾಕು “ಖಾದಿ ಹಾಕಿಕೊಂಡ ನಿಮ್ಮ ನಾಯಕರನ್ನು ಮೊದಲು ಸರಿಮಾಡಿ” ಅಂತ ಅನ್ನುವವರೆಗೂ ಹೋದರು. ತನ್ನನ್ನು ಅವರ ಪ್ರತಿನಿಧಿಯೆಂದು ಇವರೆಲ್ಲ ಯಾಕೆ ವಿನಾಕಾರಣ ತಿಳಿದುಕೊಂಡಿದ್ದಾರೆಂದು ಪಾಟೀಲರಿಗೆ ಅರ್ಥವಾಗುತ್ತಿರಲಿಲ್ಲ.
ಕಾಲೇಜು ಸೇರಿದಮೇಲೆ ನಾಗರಾಜನೂ ಪಾಟೀಲರ ಉಪದೇಶಗಳನ್ನು ಬಹಿರಂಗವಾಗಿಯೇ ವಿರೋಧಿಸಲು ಶುರುಮಾಡಿದ. ಪಾಟೀಲರು ಅವನಿಗೆ ಹೇಳುವುದನ್ನು ನಿಲ್ಲಿಸಿದರು. ಅವನಿಗೆ ಓದಿನ ಕಡೆ ಲಕ್ಷ್ಯವಿಲ್ಲ, ಸೈಕಲ್ ತಗೊಂಡು ಬರೀ ಸುತ್ತುತ್ತಾನೆ, ಅವನ ಸ್ನೇಹಿತರೂ ಸರಿಯಿಲ್ಲ ಎಂದು ಪಾಟೀಲರು ಆಗಾಗ ನೀಲಕಂಠನಿಗೆ ಹೇಳುತ್ತಿದ್ದರು. ನೀಲಕಂಠನಿಗೆ ಏನು ಮಾಡಬೇಕೋ ತೋಚುತ್ತಿರಲಿಲ್ಲ. ಇನ್ನೂ ಹುಡುಗ, ಮುಂದೆ ಸರಿಹೋಗುತ್ತಾನೆ, ಪಾಟೀಲರು ತಮ್ಮ ಆದರ್ಶದ ಚೌಕಟ್ಟಲ್ಲೇ ಅವನನ್ನು ನಿಷ್ಠುರವಾಗಿ ನೋಡುತ್ತಿದ್ದಾರೆ, ಈಗಿನ ಮಕ್ಕಳು ನಮಗಿಂತ ಬೇರೆ ಕಾಲದಲ್ಲಿ ಬೆಳೆದವರು…….. ಅಂತೆಲ್ಲ ನೀಲಕಂಠನಿಗೆ ಅನಿಸುತ್ತಿತ್ತು. ನಾಗರಾಜನಂತೂ ಯಾರ ಮಾತನ್ನೂ ಕೇಳುವ ಹಂತ ದಾಟಿಹೋಗಿದ್ದ. ಫೇಲಾಗದೇ ಅಂತೂ ಡಿಗ್ರಿ ಮುಗಿಸಿದ. ಅವನು ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಾನೇನೋ ಎಂದು ಅನುಮಾನವಾಗಿ ಒಮ್ಮೆ ಪಾಟೀಲರು ಅವನು ಪರೀಕ್ಷೆಗೆ ಹೋಗುವ ದಿವಸ ಚೀಟಿಗೀಟಿ ಇಟ್ಟುಕೊಳ್ಳೂತ್ತಾನೇನೋ ನೋಡಲು ಅವನನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಅವನು ಎಂದಿನಂತೆ ಹತ್ತು ನಿಮಿಷ ಕನ್ನಡಿಯೆದುರು ನಿಂತು ತಲೆಬಾಚಿಕೊಂಡು, ಸಣ್ಣಗೆ ಹಾಡು ಗುನುಗುತ್ತ ಸೈಕಲ್ಲೇರಿ ಹೋದಾಗ ನಾಚಿಕೆಯಾದಂತಾಗಿ ಛೆ ಎಂದು ತಲೆಕೊಡವಿಕೊಂಡಿದ್ದರು. ಡಿಗ್ರಿ ಮುಗಿಸಿದ ಮೇಲೆ ನಾಗರಾಜ ಕೆಲಸಕ್ಕೆ ಎಲ್ಲ ಕಡೆ ಅರ್ಜಿ ಕಳಿಸುವುದರಲ್ಲಿ ಆರು ತಿಂಗಳು ಕಳೆದ. ಆಮೇಲೆ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನ ಅಣ್ಣನೊಬ್ಬ ಸರಕಾರಿ ನೌಕರಿ ಕೊಡಿಸುವುದಾಗಿ ಹೇಳಿದ್ದಾನೆಂದು, ಎಷ್ಟು ಬೇಡವೆಂದರೂ ಕೇಳದೇ ಹಟಮಾಡಿ ಬೆಂಗಳೂರಿಗೆ ಹೋದ. ಅಲ್ಲಿ ಹೋದ ಮೂರು ತಿಂಗಳಿಗೇ ಕೆಲಸವೂ ಸಿಕ್ಕಿತು. ಕೆಲಸಕ್ಕಾಗಿ ಅವನು ಯಾರಿಗೋ ಲಂಚ ಕೊಟ್ಟನೇನೋ ಎಂಬ ಅನುಮಾನ ಪಾಟೀಲರನ್ನು ಕಾಡಿತು. ಹೇಳಲಾರದೇ ತೊಳಲಿದರು. ತಾವು ತಮ್ಮ ಶಕ್ತಿ ಮೀರಿ ಇವನನ್ನು ಒಳ್ಳೆಯ ಹಾದಿಗೆ ಹಚ್ಚಲು ಪ್ರಯತ್ನಿಸಿದ್ದು ಎಲ್ಲಿ ತಪ್ಪಾಯಿತೋ ತಿಳಿಯಲಿಲ್ಲ. ಈ ಮನೆಯಲ್ಲೇ ಏನೂ ಮಾಡಲಿಕ್ಕಾಗದ ತಾನು ಹೆರವರ ಮಕ್ಕಳಿಗೆ ಏನು ಮಾಡಬಲ್ಲೆ ಎಂದು ವ್ಯಥೆಪಟ್ಟುರು. ಮೊದಲಿನ ಹಾಗೆ ಈಗ ಅವರನ್ನು ಕ್ರಾಫ್ಟ್ ಪಿರಿಯಡ್‌ನಲ್ಲಿ ಶಾಲೆಯೊಳಗಡೆ ಬಿಡುತ್ತಿರಲಿಲ್ಲ. ಹೊಸ ಹೆಡ್‌ಮಾಸ್ತರು ಬಂದು “ಹಾಗೆಲ್ಲ ಮಾಸ್ತರರಲ್ಲದಿರುವವರನ್ನು ಶಾಲೆಯಲ್ಲಿ ಬಿಡಲಿಕ್ಕಾಗುವುದಿಲ್ಲ…… ಇನ್ಸ್‌ಪೆಕ್ಟರು ಬಂದರೆ ನನ್ನ ಕೆಲಸ ಹೋಗುತ್ತದೆ…… ಈಗ ಮೊದಲಿನ ಹಾಗಿಲ್ಲ…… ತುಂಬಾ ಸ್ಟ್ರಿಕ್ಟು……” ಎಂದು ನೆವ ಹೇಳಿ ನಿಲ್ಲಿಸಿ ಬಿಟ್ಟಿದ್ದ. ಚರಕ ತಕಲಿ ನೂಲು ಎಲ್ಲರಿಗೆ ಹಾಸ್ಯಾಸ್ಪದವಾಗಿ ಕಾಣಿಸುತ್ತಿದ್ದವು. “ಖಾದಿ ಬಡತನಕ್ಕೆ ಹಾದಿ” ಎಂದು ಹಗುರವಾಗಿ ಆಡಿಕೊಳ್ಳುತ್ತಿದ್ದರು. ಹುಡುಗಿಯರು, ಹೆಂಗಸರು – ನೂಲು ತೆಗೆಯಲು ಪುರುಸೊತ್ತಿಲ್ಲದವರು – ಖಾಲಿ ಇಂಜೆಕ್ಷನ್ ಬಾಟಲಿಗಳ ಮಂಟಪ, ಬಟನ್ನಿನ ಮೊಲ, ನಯೆಪೈಸೆಯ ವೆಲ್‌ಕಂ ಮಾಡುತ್ತಿದ್ದರು. ಅದು ತಪ್ಪು ಎಂದು ಪಾಟೀಲರಿಗೆ ಅನಿಸುತ್ತಿರಲಿಲ್ಲ. ಆದರೆ ಯಾಕೋ ನೂಲಿನ ಪಾವಿತ್ರ್ಯ ಅದರಲ್ಲಿಲ್ಲ ಅನಿಸುತ್ತಿತ್ತು.
-೫-
ನಾಗರಾಜ ಕೆಲಸಕ್ಕೆ ಸೆರಿಕೊಂಡ ಮೇಲೆ ಮನೆಗೊಂದಿಷ್ಟು ದುಡ್ಡು ಕಳಿಸುತ್ತಿದ್ದುದರಿಂದ ನೀಲಕಂಠನ ನಿವೃತ್ತಿಯ ನಂತರವೂ ಮನೆಯಲ್ಲಿ ದುಡ್ಡಿನ ತಾಪತ್ರಯವಾಗಲಿಲ್ಲ. ಮನೆಯಲ್ಲಿ ನಾಗರಾಜನ ಮಾತೇ ನಡೆಯುವಂತಾಯಿತು. ಭೂದಾಖಲೆಗಳ ಇಲಾಖೆಯಲ್ಲಿ ತನ್ನ ಕೆಲಸವೆಂದು ನಾಗರಾಜ ಹೇಳಿದ್ದ. ಮಗನಿಗೆ ನೌಕರಿ ಸಿಕ್ಕಿ ಅನುಕೂಲವಾದ ಮೇಲೆ ಕಾವೇರಿಗೆ ಪಾಟೀಲರು ಮನೆಯಲ್ಲಿರುವುದು ಕಿರಿಕಿರಿಯಾಗತೊಡಗಿತು. ನಾಗರಾಜನಿಗೆ ಪಾಟೀಲರ ಬಗ್ಗೆ ಇರುವ ಅಸಹನೆ ಸರಿಯಾದುದೇ ಎಂದು ಅನಿಸತೊಡಗಿತು. ನಿವೃತ್ತಿಗೆ ಮುಂಚೆ ನೀಲಕಂಠ “ಇನ್ನು ಕೆಲಸದ ಜವಾಬ್ದಾರಿ ಇಲ್ಲವಾದ ಮೇಲೆ ನಿಮಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದ್ದ. ನಿವೃತ್ತಿಯ ನಂತರ ಮನೆಪಾಠ ಎಂದು ತಗುಲಿಸಿಕೊಂಡು ಅವನ ಸಹಾಯ ಮಾತಿನಲ್ಲಷ್ಟೇ ಉಳಿಯಿತು. ಪಾಟೀಲರು ಯಾವುದನ್ನೂ ಹೆಚ್ಚು ಹಚ್ಚಿಕೊಳ್ಳದೇ ಇರಲು ಪ್ರಯತ್ನಿಸಿದರೂ ಆಗುತ್ತಿರಲಿಲ್ಲ. ಹಿಂದಿ ಪ್ರಚಾರ ಸಭಾದವರ ಜೊತೆ ಸೇರಿಕೊಂಡು ಆಸಕ್ತರಿಗೆ ಹಿಂದಿ ಕಲಿಸಲು ಕ್ಲಾಸು ತೆಗೆಯಲೆಂದು ಓಡಾಡಿದರು. ನಾಗರಾಜನ ಮದುವೆಯಾಗಿ ಮಗುವಾದ ಮೇಲಂತೂ ನೀಲಕಂಠನೂ ಕಾವೇರಿಯೂ ಆಗಾಗ ಬೆಂಗಳೂರಿಗೆ ಹೋಗಿ ಇದ್ದು ಬರತೊಡಗಿದರು. ಅವನು ಬೆಂಗಳೂರಿನಲ್ಲಿ ಜಾಗ ಕೊಂಡಿದ್ದಾನೆಂದು ನೀಲಕಂಠ ಹೇಳಿದ್ದ. ನಾಗರಾಜನ ದರಬಾರು ನೋಡಿದಾಗ ಪಾಟೀಲರಿಗೆ ಇವನದೇನೋ ಬೇರೆ ವ್ಯವಹಾರವಿದೆ ಅನಿಸುತ್ತಿತ್ತು. ಅದನ್ನು ನಂಬಲು ಇಷ್ಟಪಡದೇ ಇದ್ದರೂ, ಏನೋ ಅನುಮಾನವಾಗಿ ಒಳಗೊಳಗೇ ಕೊರಗುತ್ತಿದ್ದರು. ಇವರನ್ನು ಹಿಡಿದು ಎಷ್ಟು ಉಂಡೆ ನೂಲು ತೆಗೆಸಿದರೂ ಅಷ್ಟೇ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು. ಇನ್ನೇನು ಆಗುತ್ತಿದ್ದನೋ, ತಮ್ಮ ಪ್ರಯತ್ನದಿಂದ ಇಷ್ಟಾದರೂ ಆದನಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದರು.
ಇತ್ತೀಚೆ, ಒಂದು ದಿವಸ ಬೆಳಿಗ್ಗೆ ಹಠಾತ್ತಾಗಿ ಬಂದಿಳಿದ ನಾಗರಾಜ ತಾನು ಕೆಲಸಬಿಟ್ಟ ಸುದ್ದಿ ಹೇಳಿದ. “ಈ ಮನೆ ಮಾರಿ ಬೆಂಗಳೂರಿಗೆ ಬನ್ನಿ…….. ಅಲ್ಲಿ ಸ್ವಂತ ಬಿಸಿನೆಸ್ಸ್ ಶುರುಮಾಡುತ್ತಿದ್ದೇನೆ….. ಈ ಕಾಲದಲ್ಲಿ ನೌಕರಿಯಲ್ಲೇನುಂಟು…… ಅದರಲ್ಲೂ ಸರಕಾರಿ ನೌಕರಿ….. ಬಿಸ್‌ನೆಸ್ಸ್‌ನಲ್ಲಿರುವ ಕಮಾಯಿ ಯಾವುದರಲ್ಲೂ ಇಲ್ಲ…… ” ಅಂದ. ಇದನ್ನೇ ಹೇಳಲಿಕ್ಕೆ ಬಂದವನ ಹಾಗೆ ಒಂದೇ ದಿನ ಇದ್ದು ಹೊರಟುಹೋದ. ಆಮೇಲೆ ಯಾರೋ ಪಾಟೀಲರಿಗೆ ಹೇಳಿದರು: “ಅವನು ತಾನಾಗಿ ಕೆಲಸ ಬಿಟ್ಟಿದ್ದಲ್ಲ…… ತುಂಬ ಲಂಚ ತಿನ್ನುತ್ತಿದ್ದನಂತೆ…… ಸಾಕಷ್ಟು ದುಡ್ಡು ಮಾಡಿದ್ದಾನೆ…… ಈಗ ಸಿಕ್ಕಿಬಿದ್ದದ್ದೇ ಕೆಲಸ ಹೋಯಿತಂತೆ……” ನೀಲಕಂಠನ ಕಿವಿಗೂ ಈ ಸುದ್ದಿ ಬಿದ್ದದ್ದು ಪಾಟೀಲರಿಗೆ ತಿಳಿಯಿತು “ಹೊಟ್ಟೆಕಿಚ್ಚಿನ ಜನ” ಎಂದು ನೀಲಕಂಠ ಹೇಳಿದ. ಅವನು ಈ ಸುದ್ದಿಯನ್ನು ನೇರವಾಗಿ ಪ್ರಸ್ತಾಪಿಸಿದ್ದರೂ ಅವನು ಏನನ್ನು ಕುರಿತು ಹೇಳುತ್ತಿದ್ದಾನೆಂದು ಪಾಟೀಲರಿಗೆ ಅರ್ಥವಾಯಿತು. ಅವನ ವರ್ತನೆ ನೋಡಿ, ಈತ ತನ್ನ ಮಗ ಮಾಡಿದ್ದು ತಪ್ಪು ಅನ್ನುವ ಬದಲು, ಅವನನ್ನು ಒಪ್ಪಿಕೊಂಡುಬಿಟ್ಟಿದ್ದಾನೆ ಅನಿಸಿತು. ಈ ದಿನಗಳಲ್ಲಿ ನೀಲಕಂಠ ತನ್ನ ಜೊತೆ ನೇರವಾಗಿ ಮಾತಾಡುವುದನ್ನು ತಪ್ಪಿಸಿಕೊಳ್ಳುತ್ತಿರುವ ಹಾಗೆ ಪಾಟೀಲರಿಗೆ ಭಾಸವಾಗುತ್ತಿತ್ತು. ಇದೇ ಸಮಯಕ್ಕೆ ನೀಲಕಂಠ ಪಾಟೀಲರಿಗೆ ಪತ್ರ ಬರೆದದ್ದು; ಒಂದೇ ಮನೆಯಲ್ಲಿದ್ದೂ ಪತ್ರದ ಮೂಲಕ ಮಾತಾಡಬೇಕಾಗಿ ಬಂದದ್ದು; ಪಾಟೀಲರು ಊರು ಬಿಟ್ಟು ಹೋಗಲು ನಿರ್ಧರಿಸಿದ್ದು; ಮತ್ತು ವಿಶ್ವನಾಥ ತೀರಿಕೊಂಡದ್ದು.
ವಿಶ್ವನಾಥ ತೀರಿಕೊಂಡದ್ದು ಜನರಿಗೆ ಗೊತ್ತಾಗಿದ್ದೇ ಮರುದಿವಸ – ಅವನ ಆಳುಗಳು ಅವನ ಕೋಣೆಯ ಕಿಟಿಕಿಯಿಂದ ಎಷ್ಟು ಕರೆದರೂ ಉತ್ತರ ಬಾರದೇ ಇದ್ದಾಗ. ಸುದ್ದಿ ತಿಳಿದದ್ದೇ ಪಾಟೀಲರು ತಕ್ಷಣ ಧಾವಿಸಿದರು. ಜನ ಮುಚ್ಚಿದ ಮುಂಬಾಗಿಲನ್ನು ಒಡೆಯುತ್ತಿದ್ದರು. ದಾರ ಎಳೆದು ಚಿಲಕ ಸರಿಸಲು ವಿಶ್ವನಾಥ ಇರಲಿಲ್ಲ. ಕೆಲವರು ಕರೆಗಂಟೆಯೊತ್ತಿ ಬಾಗಿಲು ತೆರೆಯುತ್ತದೋ ನೋಡುತ್ತಿದ್ದರು. ಮುಂಬಾಗಿಲು ಒಡೆದು ಒಳಗೆ ಹೋದರೆ ಮತ್ತೊಂದು ಮುಚ್ಚಿದ ಬಾಗಿಲು. ಅವನ ಮನೆಯ ದೀಪದ ಗುಂಡಿಗಳು ಎಲ್ಲಿ ಹುಡುಕಿದರೂ ಸಿಗದೇ ಲಾಟೀನು ತರಬೇಕಾಯಿತು. ನಾಲ್ಕು ಬಾಗಿಲು ಒಡೆದು ಅವನ ಕೋಣೆ ತಲುಪಿದರು. ಮಂಚದ ಮೇಲೆ ಮಲಗಿದ್ದಲ್ಲೇ ತೀರಿಕೊಂಡಿದ್ದ. ಬಹುಶಃ ಸಾಯುವಾಗ ಒದ್ದಾಡಿರಬೇಕು – ಅವನ ಕೈಗೆ, ಕಾಲಿಗೆ ದಾರಗಳು, ತಂತಿಗಳು ಸುತ್ತಿಕೊಂಡಿದ್ದವು. ಕೆಲವು ತುಂಡಾಗಿ ಬಿದ್ದಿದ್ದವು. ಜಂತಿಯ ಯಾವುದೋ ರಾಟೆಯಿಂದ, ಯಾವುದೋ ಸಂದಿಯಿಂದ ಇಳಿಬಿದ್ದ ಕೆಲವು ಕೈಕಾಲಿಗೆ ಸುತ್ತಿಕೊಂಡು ಅವನ ದೇಹ ಕಟಪುತಳಿಯ ಹಾಗೆ ತೋರುವಂತೆ ಮಾಡಿದ್ದವು. ವಿಶ್ವನಾಥನಿಗೆ ಬಂದ ಒಂಟಿ ಸಾವು ನೋಡಿ ಪಾಟೀಲರಿಗೆ ಕಣ್ಣು ತುಂಬಿ ಬಂತು. ಸಾಯುವಾಗ ಅದೆಷ್ಟು ಒದ್ದಡಿದನೋ, ಈ ತಂತಿಗಳನ್ನು ಸರಪಳಿಗಳನ್ನು ಸುತ್ತಿಕೊಂಡು ಒದ್ದಾಡುವಾಗ ಯಾವ ಯಾವ ದೀಪಗಳು ಹತ್ತಿ ಆರಿಹೋದವೋ, ಮನೆಯಲ್ಲಿ ಏನೇನು ಹೊರಬಂತೋ, ಯಾವ ಚಿಲಕಗಳನ್ನು ಬಿಗಿ ಮಾಡಿದನೋ, ಹೊರ ಬರಬೇಕೆಂದುಕೊಂಡರೂ ಆಗದೇ ಒಳಗೇ ಉಳಿದನೋ ಏನೋ…… ಹೀಗೆಲ್ಲ ನೂರೆಂಟು ಯೋಚನೆಗಳು ಪಾಟೀಲರ ಮನಸ್ಸಲ್ಲಿ ಹಾದು ಹೋದವು. ತನ್ನ ಸಾವಿನಲ್ಲವನು, ತಾನು ಹಿಡಿದ ಹಾದಿಯ ದುರಂತದ ಪ್ರತಿಮೆಯನ್ನು ಹಿಂದೆ ಬಿಟ್ಟು ಹೋದ ಹಾಗೆ ಅನಿಸುತ್ತಿತ್ತು. ಡೆಲ್ಲಿಯಿಂದ ಮಗನನ್ನು ಕರೆಸಿದರು. ಅವನು ಬಂದು ಬೆಂಕಿಯಿಕ್ಕುವ ಹೊತ್ತಿಗೆ ಹೆಣದ ವಾಸನೆ ಹಬ್ಬತೊಡಗಿತ್ತು. ಪಾಟೀಲರು ನೀಲಕಂಠನ ಮನೆಬಿಟ್ಟು, ತಮ್ಮ ಊರಿಗೆ ಹೋಗಿ ಮುಂದಿನದನ್ನು ಅಲ್ಲೇ ನೋಡಿಕೊಳ್ಳುವಾ ಎಂದು ನಿರ್ಧರಿಸಿ ಹೊರಡುವ ದಿವಸ ನಾಗರಾಜನೂ ಊರಲ್ಲಿದ್ದ. ಮುಂದೇನು ಮಾಡುತ್ತೀರೆಂದು ಯಾರೂ ಪಾಟೀಲರನ್ನು ಕೇಳಲಿಲ್ಲ. ಎಷ್ಟೇ ನಿರ್ಲಿಪ್ತನಾಗಿರಬೇಕೆಂದುಕೊಂಡರೂ ಪಾಟೀಲರಿಗೆ ಯಾವುದೋ ತಂತುಗಳನ್ನು ಕಡಿದುಕೊಂಡು ಹೋಗುತ್ತಿದ್ದೇನೆ ಅನಿಸತೊಡಗಿತ್ತು. ವಿಶ್ವನಾಥನ ದೇಹದ ದೃಶ್ಯ ಪದೇ ಪದೇ ಮನಸ್ಸನ್ನು ಕಲಕುತ್ತಿತ್ತು. ಹೋಗುವ ಹೊತ್ತಿಗೆ ನೀಲಕಂಠ ಕಣ್ಣೀರು ತುಂಬಿಕೊಂಡ. ನಾಗರಾಜ ಬಸ್‌ಸ್ಟ್ಯಾಂಡಿನವರಗೂ ಬಂದು ಬೀಳ್ಕೊಟ್ಟ. ಗ್ರಾಮೋದ್ಯೋಗದ ನೌಕರರು ಬಂದಿದ್ದರು. ಬೇರೆ ಯಾರಿಗೂ ತಾವು ಹೋಗುತ್ತಿರುವುದನ್ನು ಪಾಟೀಲರು ಹೇಳಿರಲಿಲ್ಲ. ಬಸ್ಸು ಊರು ಬಿಟ್ಟು ಹೊರಡುತ್ತಿದ್ದಂತೆ ತಾವೀಗ ಯಾವ ಊರಿಗೆ ಹೋದರೂ ವ್ಯತ್ಯಾಸವಾಗಲಾರದು ಅನಿಸಿತು.
ಬಸ್ಸು ನಡುವೆ ಒಂದು ಊರಲ್ಲಿ ನಿಂತು, ಮತ್ತೆ ಹೊರಟಾಗ ಒಂದು ದೊಡ್ಡ ಮೆರವಣಿಗೆ ಎದುರಾಯಿತು. ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದರು. ಯಾವುದೊ ಅಣೆಕಟ್ಟು ವಿರೋಧಿ ಮೆರವಣಿಗೆ. “ಇಂಥ ಪ್ರಗತಿ ವಿಶ್ವಕ್ಕೆ ದುರ್ಗತಿ” ಎಂದು ಸಾರುವ ಪತಾಕೆಗಳು. ಪ್ರಕೃತಿಯನ್ನು ಉಳಿಸಲು ಕಳಕಳಿಯ ಕರೆ. ಪಾಟೀಲರು ಈ ರೀತಿಯ ಮೆರವಣಿಗೆ ನೋಡದೇ ಅದೆಷ್ಟೋ ವರ್ಷಗಳಗಿದ್ದವು. ಮೆರವಣಿಗೆಯಲ್ಲಿದ್ದವರೆಲ್ಲ ಯುವಕರು. ನಮ್ಮ ಚೇತನವಿನ್ನೂ ಬತ್ತಿಹೋಗಿಲ್ಲ ಅನಿಸಿತು ಪಾಟೀಲರಿಗೆ. ತಾನೂ ಹೋಗಿ ಅದರಲ್ಲಿ ಸೇರುವಾ ಅನಿಸುವಷ್ಟು ಖುಷಿಯಾಯಿತು. ಏಳಲೇ, ಎದ್ದು ಹೋಗಿಬಿಡಲೇ ಅನಿಸಿತು. ಅದೇ ಸಮಯಕ್ಕೆ ಅಲ್ಲೇ ಎಲ್ಲೋ ಪಕ್ಕದಲ್ಲಿದ್ದ ಒಂದು ಮದುವೆ ಚಪ್ಪರದಿಂದ ಮೈಕಿನಲ್ಲಿ ದೊಡ್ಡದಾಗಿ ಹಾಡು ಶುರುವಾಯಿತು. ಈ ಜನಪ್ರಿಯ ಚಿತ್ರಗೀತೆ ಕೇಳಿಸಿಕೊಂಡ, ಮೆರವಣಿಗೆಯ ಮುಂಭಾಗದಲ್ಲಿದ್ದ ಒಂದಿಬ್ಬರು ಹುಡುಗರು ತಾಳಹಾಕುತ್ತ ಕುಣಿಯತೊಡಗಿದರು. ಇನ್ನಿಬರು, ಮತ್ತಿಬ್ಬರು, ನಾಲ್ಕಾರು ಜನ ಸೇರಿಕೊಂಡರು. ಜೊತೆಗಾರರು ಸೇರಿಕೊಳ್ಳುತ್ತ ಹೋದಂತೆ ಹಾಡಿನ ತಾಳಕ್ಕೆ ತಕ್ಕಂತೆ ವಿಚಿತ್ರ ಮತ್ತಿನಲ್ಲಿ ಮೈಬಳುಕಿಸಿ ಕುಣಿಯತೊಡಗಿದರು. ಅವರು ಹಿಡಿದ ಘೋಷಣೆಗಳ ಪತಾಕೆಗಳಿಗೂ ಅವರು ನಡೆಸುತ್ತಿದ್ದ ನೃತ್ಯಕ್ಕೂ ತಾಳಮೇಳವೇ ಇರಲಿಲ್ಲ. ಈ ಭೂತ ನೃತ್ಯದ ಅಸಂಗತತೆಯನ್ನು ಗ್ರಹಿಸಲಾರದೇ ಪಾಟೀಲರು ತಬ್ಬಿಬ್ಬಾದರು. ಏಳಲೆಂದು ಮುಂದಿನ ಸೀಟಿನ ಸಳಿಯನ್ನು ಹಿಡಿದಲ್ಲೇ ಮುಷ್ಟಿ ಬಿಗಿಮಾಡಿದ್ದರಿಂದ ಪಾಟೀಲರ ಕೈನರಗಳು ಉಬ್ಬಿನಿಂತಿದ್ದವು.
*****
ಆಗಸ್ಟ್ ೧೯೯೩
