ರಾಷ್ಟ್ರದ ಕರೆ

ಹಸುರಿನ ಹೂವಿನ ಹೊದರಿನ ಒಳಗೆ
ಬುಸುಗಟ್ಟಿದೆ ಘನ ಘಟಸರ್‍ಪ,
ನುಸುಳುತ ಕಾಲಿನ ಕೆಳಗೇ ಬಂದಿದೆ
ಹಿಮಗಿರಿ ಕೂಡವಿತು ದೀರ್‍ಘತಪ.

‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ’
ಉಸಿರೋ ಮೋಸದ ಬೆಂಕಿ ಬಲೆ!
‘ಹೊಸನಾತೆ’ನ್ನುತ ಹಸುವನು ನುಂಗಿದೆ
ಬೀಸಿರಿ, ಎಲ್ಲಿದೆ ಭೀಮಗದೆ?

ಹಿಮಾಲಯದ ದರಿ ಕಂದರ ಕೂಗಿವೆ
ಉತ್ತರ ಕೊಡು ಓ! ಸಹ್ಯಾದ್ರಿ,
ನೆತ್ತರು ಕೊಡು ಓ! ಸಮಸ್ತ ಭಾರತ
ಸೊತ್ತಿಡು ತಾಯಿಯ ಪದತಲದಿ.

ಬಿಡುಗಡೆಯೆಂದರೆ ಹುಡುಗಾಟವೆ ಮಗು?
ಗಡಿಯಲಿ ಗಿಡುಗವು, ತುಡುಗು ದನ-
ಬೆಳೆಯುವ ತೋಟಕೆ ಭದ್ರವೆ ಬೇಲಿ?
ನಿದ್ದೆಗೆ ಸಾಯ್ವರು ನಮ್ಮ ಜನ.

ಮರವೆಯ ಮಬ್ಬಿನ ಹಳೆಯ ಬಾವಿಯಲಿ
ಗೂಡು ಕಟ್ಟಿ ನೀವ್, ಕೊಳೆಯದಿರಿ.
ಇಂದಿನ ಬೆಳಕಿಗೆ ಕಣ್ಣು ತರೆದು, ಧ್ವಜ-
ವೆತ್ತಿ ಹಿಡಿಯಲಿವೆ ಧವಳಗಿರಿ!

ಎಲ್ಲ ಮರೆತು ಮೇಲೆದ್ದಿದೆ ಭಾರತ
ಬಿಡುಗಡ ಕಾಯ್ದಿವೆ ವೀರಪಡೆ;
ನೆತ್ತರು ಹೊತ್ತಿಸಿ ಎತ್ತಿವೆ ಪಂಜು
ಮಡಿದವರಿಗೆ ತಲೆಬಾಗಿ ನಡೆ.

ಕೋಟಿ ಕೋಟಿ ಕೈ ಬಿಗಿದಿರೆ ಮುಷ್ಟಿ
ದಾಟಿ ಬರುವ ಎದೆ ಯಾರಿಗಿದೆ?
ನಮ್ಮ ತಾಯಿ-ನೆಲ ಬೆಟ್ಟ ಘಟ್ಟ ನದಿ
ಅದರ ಹೆಸರೆ ನಮ್ಮುಸಿರಿಗಿದೆ.

ಸಮತಾವಾದದ ಬುಲ್‌ಡೋಜರಿನಡಿ
ಅಳಿದಿವೆ ಆಶಾಂಕುರ ನೂರು;
ಗಾಳಿ ನೀರು ಬೆಳಕಿನಲಿ ತೂಗಿ
ತಲೆಯೆತ್ತಿ ನಿಂತವರೆ ಮಾನವರು.

ಸಾಗಲಿ ನೇಗಿಲು, ಕೂಗಲಿ ಗಿರಣಿ
ಮುನ್ನಡೆಯಲಿ ಆ ಯೋಧಪಡೆ;
ರಾಷ್ಟ್ರಪುರುಷನಲಿ ಸಮಷ್ಟಿಗೊಂಡಿದೆ
ಶಾಂತಿ, ಮಾನವತೆ ನಮ್ಮ ಕಡೆ.
*****