ಕಂಡಲ್ಲಿ ಗುಂಡು

ಒನ್ ಫೋರ್ಟಿಫೋರ್ ಸೆಕ್ಷನ್ ಇದ್ದಾಗ, ಎಮರ್ಜೆನ್ಸಿ ಸಮಯವಾದಾಗ ‘ಕಂಡಲ್ಲಿ ಗುಂಡು’ ಎಂಬ ಮಾತು ಕೇಳಿದರೆ ಗಡಗಡ ನಡುಗುತ್ತಾರೆ. ಮನೆಯಾಚೆ ಹೋದವರು ಮನೆಗೆ ಮರಳುವವರೆಗೆ ಜೀವದಲ್ಲಿ ಜೀವ ಇರುವುದಿಲ್ಲ ಹಿರಿಯರಿಗೆ. ಅದೇ ಗುಂಡಪ್ರಿಯರು ಕಂಡಕಂಡಲ್ಲಿ ಗುಂಡು ಸಿಗುತ್ತದೆ ಎಂದಾಗ ಪರಮ ಸಂತೋಷವಾಗಿ ಕುಣಿದು ಕುಪ್ಪಳಿಸಿದರು. ದಿನಸಿ ಅಂಗಡಿಗಳಲ್ಲೂ ಗುಂಡು ಸಿಗುತ್ತದೆ ಎಂಬ ಸಿಹಿ ಸುದ್ದಿ ಬಂದಾಗ.

ಕಾಲ ಬದಲಾಗಿರುವ ಈ ದಿನಗಳಲ್ಲಿ ಗಂಡಿಗಿಂತ ಹೆಣ್ಣೆನೂ ಕಡಿಮೆ ಇಲ್ಲ ಎಂದು ತೋರಲು ಹಲವು ಮಹಿಳೆಯರೂ ಮದಿರಾಪ್ರಿಯರಾಗಿ ನಾವೂ ನಿಮಗೆ ಸರಿಸಮ ಎಂದು ತೋರುತ್ತಿದ್ದಾರೆ. ಅಧಿಕಾರದ ಅಮಲು, ಕುಡಿತದ ಅಮಲು ಎರಡೂ ಒಂದೇ ಎಂಬುದೀಗ ಬಹುಮಂದಿಗೆ ಅರ್ಥವಾಗಿದೆ.

ಹೈಕ್ಲಾಸ್ ಸೊಸೈಟಿಯ ಘನತೆ ಗಾಂಬೀರ್ಯ ತೋರಲು ಗುಂಡಿನ ಭರ್ಜರಿ ಪಾರ್ಟಿಗಳು ಈಗ ನಿತ್ಯ ಕಾಮನ್‌, ಅದರಿಂದಲೇ ಈಗ ಕಂಡಲ್ಲಿ ಗುಂಡು.

ಕೋಟಿ ಕೋಟಿ ವೆಚ್ಚಿಸುವ ನಿರ್ಮಾಪಕ-ನಿರ್ದೇಶಕರು ಅನೇಕ ವೇಳೆ ಚಿತ್ರಕ್ಕಿಂತ ಹೆಚ್ಚು ಖರ್ಚು ಗುಂಡಿಗೇ ಮೀಸಲಿಡುತ್ತಾರೆ. ಕೂತರೊಂದು ಪಾರ್ಟಿ-ನಿಂತರೊಂದು ಪಾರ್ಟಿ ಏರ್ಪಡಿಸುತ್ತಾ…

ಸ್ಟಾ‌ರ್ ಹೋಟೆಲ್‌ಗಳ ಗುಂಡು ಪಾರ್ಟಿ ಈಗಿನ ಲೇಟೆಸ್ಟ್ ಫ್ಯಾಷನ್. ಲೋಕಾಭಿರಾಮದ ಹರಟೆಗೆ, ಷೋಮನ್‌ಷಿಪ್‌ಗೆ, ಪ್ರಚಾರಕ್ಕೆ, ಭಾರಿ ಭಾರಿ ಕುಳಗಳನ್ನು ಬುಕ್ ಮಾಡಿಕೊಳ್ಳೋಕೆ, ತಮ್ಮ ನೋವು-ನಲಿವು ಹಂಚಿಕೊಳ್ಳಲಿಕ್ಕೆ ಇಂಥ ಗುಂಡು ಪಾರ್ಟಿಗಳು ಹೆಲ್ಪ್‌ಫುಲ್.

Next time ಇನ್ನೊಂದು ಕಡೆ… ಮುಂಜಾವಿನಿಂದ ಸಂಜೆಯವರೆಗೆ ದುಡಿವ ಶ್ರಮ ಜೀವಿ. ತನ್ನ ನೋವು, ಸಂಕಟ ಮರೆಯಲು ಸಾಲ ಮಾಡಿಯಾದರೂ ಸಾರಾಯಿ ಕುಡಿಯುತ್ತಾನೆ. ಕಾಸಿಲ್ಲದಾಗ ಸಾಲ ಮಾಡುತ್ತಾನೆ. ಹೆಂಡತಿ ಕೂಲಿ ಮಾಡಿ ತಂದ ಹಣವನ್ನೂ ಹಲವರು ಹೊಡೆದು-ಬಡಿದು ಕಸಿಯುತ್ತಾರೆ.

ಕುಡಿದು ತೂರಾಡುವಾಗ ಬಡವ-ಬಲ್ಲಿದರಿಬ್ಬರೂ ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು’ ಎಂಬ ಒಂದೇ ಹಾಡನ್ನು ಹಾಡುತ್ತಾರೆ.

ನಿಶಾರಾಣಿಗೆ ಅವರಿವರೆಂಬ ಭೇದವೇ ಇಲ್ಲ.

ಸಖತ್ ಕುಡಿದವರಿಬ್ಬರೂ ಅನೇಕ ವೇಳೆ ‘ನಾನು ಕುಡಿದಿಲ್ಲ-ಕುಡಿದಿರುವವನು ನೀನೇ’ ಎಂದೂ ಜಗಳವಾಡುತ್ತಾರೆ. ಆಗಿನ ಅವರ ಸಂಭಾಷಣೆ ವೈಖರಿ ‘ಆಹಾ’ ಎನ್ನುವಂತಿರುತ್ತದೆ. ‘ಕುಡೀಬ್ಯಾಡಿ-ಕುಡೀಬ್ಯಾಡಿ ಅಂತ ನಮ್ಮ ನಾಯಕ ಗಿಣೀಗೆ ಏಳಂಗೇಳದ್ನಲ್ಲ ಕೇಳಿದೆಯೋ, ನಮ್ಮ ಪ್ಯಾಟ್ಯಾಗೂ ಒಬ್ಬವ್ನೆ-ಅವ್ನು ಕುಡಿಬ್ಯಾಡಿ-ಕುಡೀಬ್ಯಾಡಿ ಅಂತ ಏಳಬೇಕಾದ್ರೆ ಎಲ್ಡು ಬಾಟಲು ಇರಬೇಕು ಮಾರಾಯ’

‘ಅವರು ಕುಡಿದು ಏಳಿದ್ರೂ, ನಮ್ಮ ಒಳ್ಳೇದ್ಕೆ ಏಳ್ತಾರೆ ಸಿವಾ’ ಅನ್ನುವುದು ಇನ್ನೊಬ್ಬನ ಹಿತವಚನ.

ಇನ್ನಿಬ್ಬರ ಮಾತು ಕೇಳಿ.

‘ಸಖತ್ ಕುಡಿದೋನು ಕೊನೆಗೇನು ಮಾಡ್ತಾನೆ. ವ್ಯಾಕ್ ಅಂತ ವಾಂತಿ ಮಾಡ್ತಾನೆ ಅಲ್ವ’

`ಅದ್ಸರಿ-ಕುಡೀದೇವೆ ರತ್ನನ ಪದಗಳಂತಾ ಸೊಗಸಾದ ಕುಡುಕರ ಏದಾಂತ ಬರೆದ್ರಲ್ಲ ಜಿ.ಪಿ. ರಾಜಾರತ್ನಂ ಅದು ಎಂಗೆ’

“ಕುಡಿಯೋದು-ಕುಡಿದೇ ಇರೋದು ಅವರವರ ವೈಯಕ್ತಿಕ ಇಸ್ಯಕ್ಕೆ ಬಿಟ್ಟು ಅಂಸ. ಕುಡಿದು ವಂಸವೇ ನಾಸ ಮಾಡ್ಕೊಂಡು ಮಸಣಕ್ಕೆ ಓದೋರೂ ಅವ್ರೆ. ಗುಂಡಿನ ಫ್ಯಾಕ್ಟರಿಯೇ ಮಡಗಿ ಲಕ್ಸಮಿ ಪುತ್ರರೂ ಅನ್ನಿಸ್ಕೊಂಡ ಖೋಡೆ ಸಾಹೆಬ್ರೂ ಅವ್ರೆ. ಶಿಶುನಾಳ ಷರೀಫ್, ಮೈಸೂರು ಮಲ್ಲಿಗೆ ಅಂಥ ಚಿತ್ರ ತೆಗೆಯೋ ಮನ್ಸು ಅವರಿಗದೆ ಟಿ.ಪಿ. ಕೈಲಾಸಂ ಅಂತಹ ಒಳ್ಳೆ ನಾಟಕಕಾರ ಗುಂಡು-ಸಿಗರೇಟು ಇಲ್ಲದೆ ಇದ್ದಿದ್ದರೆ ನಾಟಕಗಳು ಬರೀತಾ ಇದ್ರೋ ಇಲ್ವೋ’ ಅದಕ್ಕೆ ರಾಜರಾತ್ನಂ ಹೇಳಿದ್ದು

‘ರವಿ ಕಾಣದ್ ಕವಿ ಕಂಡ’
ಅನ್ನೋದ್ ಕವಿಗೋಳ್ ತತ್ವ
ಕವಿ ಕಾಣದ್ ಕುಡುಕ ಕಂಡ
ಅನ್ನೋದ್ ಕುಡುಕರ್ ಮಾತ್ವ! ಅಂತ
‘ಹಾಗಾದರೆ ನೀ ಹೇಳೋದೇನು?’
ಚಿಕ್ಕೋರ್ ಸಿಕ್ಕೌರಣ್ಣ ಎಲ್ಲಾರ್ ನೆಗಾಕೆ!
ದೊಡ್ಡರು ಎಂಗಾಡಿದ್ರೂ ಎಲ್ಲಾನ ಸೈ।
ಲೋಕಾನೆ ಇಂಗೈತೆ-ನಾನು ಯಾಕ್ ದುಕ್ಪಡಲಿ
ಮನಿಯಂಗೂ ಎಂಡಕ್ಕೂ ಬೋಲೋರೆ ಜೈ| ಅಂತೀನಷ್ಟೆ

ಈ ಗುಂಡಿನ ಭರಾಟೆ ಎಲೆಕ್ಷನ್ ಸಮಯದಲ್ಲಿ ಬಹು ಬಿರುಸು. ವೋಟು ಕಸಿಯಲು ಗುಂಡೊಂದು ಮಹಾ ಅಸ್ತ್ರ. ಅದರಿಂದಲೇ ಎಲ್ಲ ಪಾರ್ಟಿಯವರಿಗೂ ಗುಂಡು ತುಂಬ ಸೇಕ್ರೆಡ್. ಅದರಿಂದಲೇ ಚುನಾವಣೆ ಹಿಂದಿನ ರಾತ್ರೆ ಕಂಡಕಂಡಲ್ಲಿ ಗುಂಡಿನ ಹೊಳೆ ಹರಿಯುವುದು.

ಕುಡುಕನಿಗೂ ಒಂದಲ್ಲ ಒಂದು ದಿನ ಜ್ಞಾನೋದಯವಾಗಿ ‘ಗುಂಡು ಪಾರ್ಟಿ’ ತ್ಯಜಿಸಿ ಆತ ‘ಸಾಫ್ಟ್ ಡ್ರಿಂಕ್ಸ್’ ಪಾರ್ಟಿಗೆ ಪಕ್ಷಾಂತರಿಯಾಗಬಹುದು. ಬುದ್ದನಿಗೆ ಬೋಧಿ ವೃಕ್ಷದ ಕೆಳಗಾದ ಜ್ಞಾನೋದಯ ಒಂದಲ್ಲ ಒಂದು ದಿನ ಪತ್ರಕರ್ತನೊಬ್ಬನಿಗೆ-ಅಂಥ ಸತ್ಯದ ಸಾಕ್ಷಾತ್ಕಾರ ಪ್ರೆಸ್ ಕ್ಲಬ್‌ನಲ್ಲೇ ಆಗಬಹುದು. ಅಂಥ ವೇಳೆಯಲ್ಲೇ ಆ ಸಿನಿ ಪತ್ರಕರ್ತ ಇನ್ನು ಮುಂದೆ ಸಿನಿಮಾದವರು ಗುಂಡಿನ ಪಾರ್ಟಿಗಳನ್ನು ಏರ್ಪಡಿಸಬಾರದು ಎಂದು ಫರ್ಮಾನು ಹೊರಡಿಸಿದ್ದು ಕಳೆದ ವಾರ.

ಅದಾದ ಕೆಲವೇ ಘಂಟೆಗಳ ಅಂತರದ ಕಾರ್ಯಕ್ರಮದಲ್ಲಿ ನವ ನಟರೊಬ್ಬರು ರಾಜಾರೋಷವಾಗಿ ಹೇಳಿದರು ‘ನಾನು ಹೋಗುವುದು ಗುಂಡಿನ ಪಾರ್ಟಿಗಳಿರುವ ಕಾರ್ಯಕ್ರಮಕ್ಕೆ ಮಾತ್ರ’ ಎಂದು.

ಈ ಜಗತ್ತಿನಲ್ಲಿ ತರಹೆವಾರಿ ಜನರಿದ್ದಾರೆ. ಹಾಟ್ ಡ್ರಿಂಕ್ಸ್ ಬಯಸುವವರು, ಸಾಫ್ಟ್‌ ಡ್ರಿಂಕ್ಸ್ ಸಾಕು ಎನ್ನುವವರ, ಬಿಸಿಲೇರಿ ವಾಟರ್ ಬಿಟ್ಟು ಬೇರೇನೂ ಬೇಡ ಎನ್ನುವವರು. ವೆಜ್ ಎಂದಾಗ ಚಕ್ಕಂಬಕ್ಕಳ ಹಾಕಿ ಕೂರುವವರು, ನಾನ್‌ವೆಜ್ ಎಂದಾಗ ಗಾವುದ ದೂರ ಸಿಡಿಯುವವರು, ಯಾವದೇ ಸಿನಿಮಾ ಪಾರ್ಟಿಗೆ ಬಂದರೂ ‘ವೈನೇ ಫೈನು’ ಎಂದು ಹಾಡುವವರು ಎಲ್ಲೆಡೆ ಇದ್ದಾರೆ. ಗಾಂಧೀನಗರವೆಂಬ ಚಕ್ರವ್ಯೂಹದಲ್ಲೇ ಸಿಲುಕಿ ಒದ್ದಾಡುವ ಎಷ್ಟೋ ಮಂದಿ ಕೋಟ್ಯಾಧಿಪತಿಗಳೂ ಆಗಿದ್ದಾರೆ-ಭಿಕ್ಷಾಧಿಪತಿಗಳೂ ಆಗಿದ್ದಾರೆ.

ಆದ್ದರಿಂದಲೇ ನಾನು ಹೇಳಿದಂತೆ ಎಲ್ಲಾ ಆಗಬೇಕು ಎಂಬುದನ್ನು ಬಿಟ್ಟು, ಎಲ್ಲ ಕಾಲಕ್ಕೂ ಅಡ್ಜಸ್ಟ್ ಆಗಿ-ಎಲ್ಲರೊಡನೊಂದಾಗಿ ಹಾಯ್ ಹಾಯ್ ಎಂದು ಹಾಯಾಗಿ ಬಾಳುವುದು ಕಲಿಯುವುದು ಲೇಸಲ್ಲವೇ?
*****
(೧೫-೦೩-೨೦೦೨)