ನಿಯಮೋಲ್ಲಂಘನ


‘ಸುಯ್’ ಎಂದು ನಿಡುಸುಯ್ದು ಹುಯ್ಯಲಿಡುತ್ತಿದೆ ಗಾಳಿ
ಜಗದ ಆರ್‍ದ್ರತೆಯನ್ನ ಹೀರಿ ಹೀರಿ!
ಮೂಡಗಾಳಿಗೆ ಬಾನ ಮೊಗ ಒಡೆದು ಬಿಳಿ ಬೂದಿ
ಬಳಿದಂತೆ ತೋರುತ್ತಿದ ಮೇರೆ ಮೀರಿ.


ತರು ಲತಾದಿಗಳಲ್ಲಿ ಚಿಗುರಿಲ್ಲ ಹೊಗರಿಲ್ಲ –
ಅಸ್ಥಿ ಪಂಜರವಾಗಿ ನವೆಯುತಿಹವು;
ಎಲ್ಲೊ ಅಂಗೈಯಗಲ ಹಸಿರು ಕಂಡರೆ ಸಾಕು
ಮನದ ಆಸಗಳಲ್ಲಿ ಸೇರುತಿಹವು.


ಏನು ಬಾನೋ ಎನಿತು ದೂರವಿದ್ದಂತಿಹುದು
ನಮಗು ಅದಕೂ ಮಾತು-ಕತೆಯೆ ಇಲ್ಲ;
ಒಂದು ಮೋಡವೆ? ಮಿಂಚೆ? ಮಳೆಯೆ? ಕಾಮನ ಬಿಲ್ಲೆ?
ಚಳಿಗಾಲಕೋ ಕೊಂಚ ಬುದ್ಧಿಯಿಲ್ಲ.


ಕ್ಷಾಮ ಡಾಮರ ಬಡಿದ ನಿರ್‍ವಾಸಿತರ ತೆರದಿ
ಒಣಗಿದೆಲೆಗಳ ರಾಶಿ ಭಣಗುಟ್ಟಿವೆ;
ಮೈಕೊರೆವ ಚಳಿಗಾಳಿ ನಿಷ್ಕರುಣದಲಿ ದಾಳಿ-
ಗೈಯೆ ತರಗೆಲೆ ಮತ್ತೆ ಮೊರೆಯುತ್ತಿವೆ!


ಹೇಮಂತ‌ಋತುವಿಂಗೆ ಸಾಮಂತ ರಾಜರೊಲು
ಸೂರ್‍ಯ ಚಂದ್ರರು ನಡುಗಿ ಉಡುಗುತಿಹರೊ!
ಧೀಮಂತ ವರ್‍ಷ‌ಋತು ಗುಡುಗು ಹಾಕುವವರೆಗೆ
ಬರಿಯ ನಾಮಾಂಕಿತರೆ ಮರೆಯಲಿಹರು!


ಮೂರು ತಿಂಗಳ ಹಿಂದೆ ಮಳೆರಾಯ ಹಗಲಿರುಳು
ಧಾರಿಣಿಗೆ ತನಿಮುದ್ದುಗರೆಯುತಿದ್ದ;
ಹರುಷದಾವೇಶದಲಿ ಹೊನಲು ಧುಮ್ಮಿಕ್ಕಿರಲು
ಪ್ರೇಮಗೀತಗಳೆನಿತೊ ಹಾಡುತಿದ್ದ!


ಮಳೆಗಾಲವೈತರಲು ನನ್ನ ಕವಿತೆಯ ನವಿಲು
ನೂರು ಕಣ್ಣನು ತೆರೆದು ನರ್ತಿಸುವದು!
ಭಾವ ಚಾತಕ ಹೊಚ್ಚ ಹೊಸ ಮಳೆಯ ತಂಬನಿಯ
ಜೇಂಬನಿಯ ಗುಟುಕರಿಸಿ ವರ್‍ತಿಸುವದು!


ಎಂದು ಬರುವದೊ ಕಾಲ ನನ್ನಿನಿಯ ಮಳೆಗಾಲ
ವಿರಹ ವೈಶಾಖವನು ದಾಟಬೇಕೆ?
ಏನು ಋತುರಿಂಗಣವೊ ವಿಧಿನಿಯಮದಾಳಿಕೆಯೊ
ಒಮ್ಮೆಯಾದರು ತಪ್ಪಿ ನಡೆಯದೇಕೆ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ