ಬಸವನಾಳರಿಗೆ ಬಾಷ್ಪಾಂಜಲಿ

ಸಂಜೆಯಾಯಿತು; ಬಾನಬಾಳಿಗೆ ಮಂಜು ಕವಿಯಿತು ಒಮ್ಮೆಲೆ!
ಕಣ್ಣುಮುಚ್ಚುತ ತಣ್ಣಗಾದನು ರವಿಯು; ಬಳಸಿತು ಕತ್ತಲೆ.
ಚಿಲ್ಲನೆಯ ಚಳಿಗಾಳಿ ಕೊರೆಯಿತು ನಂಜಿನಂತಹ ವಾರ್‍ತೆಯ;
ಕನ್ನಡದ ಜೇಂಗೊಡವ ಕದ್ದರು ಸುರರು, – ನಾಡಿನ ಬುತ್ತಿಯ.

“ಇಲ್ಲವಾದರೆ ಇನ್ನು?” ಎಂಬ ಸುದ್ದಿ ಹದ್ದಿನ ತೆರದಲಿ
ಎರಗಿ ಬಡಿಯಿತು ನಾಡಸಂತಸ ಕಬಳಿಸಿತು ಆತುರದಲಿ
ಕೇಳಬಹುದೇ ನಮ್ಮ ಕಿವಿಗಳು? ತಾಳಬಹುದೇ ನಮ್ಮೆದೆ?
ತುಂಬಿರುವ ಕೊಡ ತುಳುಕಿತೆಂಬರೆ ಸಲ್ಲುವಡೆ ತಾ ಸಂದಿದೆ.

ಏನು ಬಂದಿರಿ ಹದುಳವಿದ್ದಿರಿ ನಾಲ್ಕು ದಿನ ಇರಲಾಗದೆ?
ಏನಿದವಸರ ಕಟ್ಟಿಕೊಂಡಿರಿ ಹೊರಟು ನಿಂತಿರಿ ಆಗಲೆ?
ಬಳಗದಾತಿಥ್ಯವನು ಬಯಸದೆ ಹೊಸತಿಲಾಚೆಗೆ ನಿಂತಿರಾ!
ನೆನಸಿದರೆ ಕನಸಿನಲಿ ಬರುವೊಲು ಮತ್ತೆ ಇಲ್ಲಿಗೆ ಬರುವಿರಾ?

ಅತಿಥಿಯಾಗಿಯೆ ಬಂದವರು ಎಲ್ಲರಿಗು ಮನೆಯವರಾದಿರೇ
‘ಇವನು ಆರವನಾರು?’ ಎನಿಸದೆ ‘ಇವನು ಎಮ್ಮವ’ನೆನಿಸಿರೆ;
ಸಾಗರದ ಗಾಂಭೀರ್‍ಯ ತಂಗೊಳದಮೃತಶಾಂತಿಯು ನಕ್ಕರೆ
ಹಾಲು ಜೇನೂ ಬೆರಸಿದೊಲು ಸೌಜನ್ಯ, ಹಿರಿಮೆಯೊಳಕ್ಕರೆ.

ನಡೆದು ಬಂದರೆ ಬೆಳ್ಳಿ ಬೆಟ್ಟವೆ ನಡೆಯ ಕಲಿತುದೊ ಎನುವೊಲು
ನುಡಿದು ಹೋದರೆ ತುಂಬುಹೂಳೆ ಸಮನೆಲದಿ ಹರಿಯುವ ತೆರದೊಳು
ನಡೆನುಡಿಯ ಕೊಂಡಾಡಿ ಲಿಂಗವೆ ಮೆಚ್ಚಿ ಅಹುದಹುದೆಂದಿತು
‘ಇಲ್ಲಿ ಸಲ್ಲುವರಲ್ಲಿ ಸಲ್ಲುವ’ರೆಂಬ ಸೊಲ್ಲೇ ಸಂದಿತು.

ಕನ್ನಡದ ಹೊಂದೇರನೆಳೆದಿರಿ ಸಂಸ್ಕೃತಿಯ ಚೈತನ್ಯದಿ
ನಾಲ್ಕು ಗಾಲಿಯು ಭದ್ರವಾಗಿವೆ ಸಾಗಿರೆಂದಿರಿ ಮೌನದಿ.
‘ಮೂಲೆಯಲ್ಲಿಯೆ ಕುಳಿತು ಮುದುಡುವ ಮೂಳನಿಗೆ ಜಗವಿಲ್ಲವು
ಮುಂದೆ ಬನ್ನಿರಿ’ ಎಂದು ಕರೆದಿರಿ ನೂರು ಕೈ ತೇರೆಳೆದವು.

ಹೊಂಗಳಸ ಕಂಗೊಳಿಸೆ ಹೂವಿನ ಗೊಂಚಗೊಂಚಲು ತೂಗಿರೆ
ದಾರಿ ದಾರಿಗೆ ಮುಗ್ಧ ಕೈಗಳು ಬೆಳಕಿನಾರತಿ ಎತ್ತಿರೆ
ಹಣ್ಣನೊಗೆದರು ಕಾಯಿಯೊಡೆದರು ಕಪ್ಪುರವು ಪರಿಮಳಿಸಿತು
ಇಂತು ಕನ್ನಡ ಚೆನ್ನಪೊಂಗರ ಚೆಲುವರೆದೆ ಹಿರಿಹಿಗ್ಗಿತು!

ತೇರು ಪಾಜೆಯಗಟ್ಟೆ ಮುಟ್ಟುವ ಮೊದಲೆ ಎದೆ ನೋವಾಯಿತೆ?
‘ಸೇವೆ ಸಂದಿತು ಓಂ ಶಿವಾರ್‍ಪಣ’ ಮೆಂದು ಮೈ ಕೈ ಮುಗಿಯಿತೆ?
ಶಾಂತಿಯೋಂಕಾರದಲಿ ಹಾಗೆಯೆ ಮುಚ್ಚಿಬಿಟ್ಟರ ಕಂಗಳ?
ಆದಿ ಮಂಗಳ ಮಧ್ಯೆ ಮಂಗಳ ಅಂತ್ಯ ಮಂಗಳ ಮಂಗಳ!

ತರೆಯಲಿಲ್ಲವೆ ಕಣ್ಣು? ತುಟಿಗಳು ಒರೆಯಲಿಲ್ಲವೆ ಏನನೂ?
ಒರಗಿದರು ಮತ್ತೇಳಲಿಲ್ಲವೆ? ಚಾಚಲಿಲ್ಲವೆ ಕೈಯನು?
ಮೂಡಲಿಲ್ಲವೆ ಮುಗುಳುನಗೆ? ಓ! ಮಿಡಿಯಲಿಲ್ಲವೆ ನಾಡಿಯು?
ಆರು ಬಗೆದರು ಇದುವೆ ಕೊನೆಯಂದಾರು ತಿಳಿಯದ ಮೋಡಿಯು!

ಎಂಥ ನಿದ್ದೆಯೊ, ಯೋಗಮುದ್ರೆಯ ಧರಿಸಿ ನಿಂತಿರುವಂತಿದೆ!
ಬಾಳು ಪರಿಣತಗೊಂಡ ಆ ತನಿವಣ್ಣಿನರ್‍ಪಣದಂತಿದೆ.
‘ಕರುಣೆ ಬಾರದೆ ಶಿವನೆ?’ – ಭಕ್ತರ ಭಜನೆಯಂತಿದು ಸಾಗಿದೆ
ಇಂಥ ಹೂವಿನ ಸಾವ ಮೊದಲೇ ಪಡೆದು ಬಂದಿರುವಂತಿದೆ.

ನಂಬಿ ನಡೆದರು, ನಂಬಿ ಕರೆದರು ತುಂಬು ಬಸವನ ಬಿಂಬವ
ಸಮರತಿಯ ಸಮಕಳೆಯ ಸಮಸುಖ ಸ್ವಾನುಭಾವದ ಸೂತ್ರವ
ಮಾಡುವಾತನು ನೀಡುವಾತನು ಬೇಡುವಾತನು ಬೇರೆಯೆ!
ಸಕಲ ನಿಷ್ಕಲ ಕೂಡಿಕೊಂಡಿರೆ ಎಲ್ಲವೂ ಅದರಲ್ಲಿಯೆ.

ಕನ್ನಡದ ಸುರಧೇನು ಕರೆದಿದೆ ತುಂಬು ಬಿಂದಿಗೆ ಹಾಲನು
ಕುಡಿದು ಬಲಗೊಳಿ ಬಂಧುಗಳೆ, ಮಾರ್‍ನುಡಿಯಬೇಡಿರಿ ನೋವನು.
ಕಾದ ಹಾಲಿಗೆ ಹೆಪ್ಪನೆರೆವುದು ತುಪ್ಪವಾಗಲಿಕೆಂದೆಯೆ
ಕೆಟ್ಟಿತೆನ್ನುವ ಭ್ರಾಂತಿಯಳಿಯಲಿ ಭಾವಶುದ್ಧಿಯು ಇಲ್ಲಿಯೆ!

ನಮ್ಮ ಕೊರತೆಯ ನೆನೆದು ದುಃಖಿಸುವಂಥ ಸಣ್ಣೆದೆ ನಮ್ಮದು
ಕಾಯಕದಿ ಕಾಯವನು ಸವೆಸಿದ ತುಂಬುಜೀವನವವರದು.
‘ಮಾಡಿದೆನು’ ಎಂಬತಿಶಯದ ಅಳಿಗಾಳಿ ಸೋಕದ ಆತ್ಮನೆ!
‘ತನಗೆ ಬೇಕೆಂದೆತ್ತಿಕೊಂಡನು’ ಇಂದು ಆ ಪರಮಾತ್ಮನೆ!

ನಿಚ್ಚವೂ ಶಿವರಾತ್ರಿ; ಪೂಜೆಗೆ ಅಚ್ಚಮಲ್ಲಿಗೆ ಒದಗಿತು.
ಹಚ್ಚ ಹಸುರಿನ ಬನದಿ ಕೊಗಿಲೆ ‘ಶಿವ ಶಿವಾ’ ಎಂದುಲಿಯಿತು.
ಪೂರ್‍ಣಮಲ್ಲಿಯು ಪೂರ್‍ಣಮಿಲ್ಲಿಯು ಪುಣ್ಯ ಪೂರ್‍ಣದೊಳುದಿಸಿತು
ಪೂರ್‍ಣದಲ್ಲಿಯೆ ಪೂರ್‍ಣಮಾಗುತ ಪೂರ್‍ಣತೆಯೊಳೊಂದಾಯಿತು.
*****