ಬಂತು!….. ಬಂದನಿತರಲೆ ಹೊರಟು ನಿಂತಿತು ರೈಲು!
‘ಹೋಗಿ ಬರುವಿರ?’ ಎಂಬ ಧ್ವನಿಯು ಎದೆ ಕಲಕಿರಲು
ಹರುಷ ದುಃಖಗಳೆರಡು ಮೌನದಲ್ಲಿ ಮೊಳಗಿರಲು
ರೈಲು ಸಾಗಿತು ಮುಂದೆ ಮೈಲು ಮೃಲು!
ಕಿಟಕಿಯಲಿ ಕರವಸ್ತ್ರ ಒಲುಮೆ ಬಾವುಟದಂತೆ
ಎದೆಯ ತಡಬಡದೊಡನೆ ಮಿಡುಕುತಿತ್ತು;
ಯಂತ್ರವೇಗಕೆ ಮನುಜನೆದೆಯ ರಾಗೋದ್ವೇಗ
ಸಿಳ್ಳು ಹಾಕುತ ಕೂಗಿಕೊಳ್ಳುತಿತ್ತು!
ಬಿಟ್ಟ ಹೊಗ-ಧಗೆ ಮೋಡ ಗಾಳಿಯಲಿ ನೂಲಾಗಿ
ಹೊರಳಾಡುತಿರಲಲ್ಲಿ ಅಲಸಿ ಅಲಸಿ,
ನಿರ್‍ಜನದ ನೀರವದ ಭಣಗುಡುವ ನಿಲ್ದಾಣ
ರಣರಣಕಗೊಂಡಿತ್ತು ನೆನಸಿ ನನಸಿ!
*****