ಮಾಮರವೆಲ್ಲೋ ಕೋಗಿಲೆ ಎಲ್ಲೋ ಒಂದೂ ಅರಿಯೆ ನಾ?

‘ರೂಪಾಂತರ’ ನಾಟಕದ ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ-ಹಲವು ಆತ್ಮೀಯರೊಂದಿಗೆ ಚರ್ಚಿಸಿ ರಂಗ ಪ್ರತಿಗೊಂದು ಹೊಸ ರೂಪ ಕೂಡಲು ಕುಳಿತಾಗ-ಟೇಪ್ ರೆಕಾರ್ಡ‌ರ್ನಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ? ಗೀತೆ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು.

ಆಗಲೆ ಕನ್ನಡ ಗೀತೆಗಳ ಚಿತ್ರ ಗೀತೆಗಳ ಹಲವು ಸಾಲುಗಳು ನೆನಪಾಗಿ ಯಾವುದು ಬಂಗಾರ, ಯಾವುದು ಕಾಗೆ ಬಂಗಾರ ಎಂದು ಚಿಂತಿಸುವಂತಾಯಿತು. ಇಲ್ಲಿ ‘ಯಾರು ದಡ್ಡರು ಜಾಣರು ಎಂದು ಪತ್ತೆ ಹಚ್ಚುವುದೂ ಕಷ್ಟ ಎನಿಸಿತು. ಹಣದ ಝಣಝಣತ್ಕಾರದ ಮುಂದೆ ವಿಚಾರವಂತಿಕೆ, ಆದರ್ಶ-ಮೌಲ್ಯ ತುಕ್ಕು, ಹಿಡಿದು ಮಲಗುವಂತಾಗಿದೆ.

ದಡ್ಡರು ಸಾರ್ ದಡ್ಡರು
ಸಿನಿಮಾ ನೋಡೋರ್ ದಡ್ಡರು
ಅದನ್ನು ನಾವು ಕ್ಯಾಷ್ ಮಾಡದಿದ್ರೆ
ಹೆಡ್ಡರು ಸಾರ್ ನಾವು ಹೆಡ್ಡರು’

ಎಂಬುದಷ್ಟೇ ಬಹು ನಿರ್ಮಾಪಕ ನಿರ್ದೇಶಕರ ಕನಸಾಗಿದೆ ಎಂಬ ಮಾತನ್ನು ಬರಲಿರುವ ಚಿತ್ರಗಳ ಹೆಸರೇ ಸೂಚಿಸುತ್ತಿದೆ.

‘ಓಳು ಸಾರ್ ಬರಿ ಓಳು
ಈಗ ಇಲ್ಲ ಸಂಘಗಳು ಹೋಳು
ಎಚ್ಚರ ಪ್ರಜ್ಞೆ ಇಲ್ಲದಿದ್ದರೆ
ಬಾಳಿನುದ್ದಕು ಗೋಳು’

ಫಿಲಂ ಚೇಂಬರ್ಸ್ ಹೋಳು, ಸ್ಪಂಟ್ ಸಂಘಗಳು ಹೋಳು, ಸಿನಿ ಪತ್ರಕರ್ತರು ಹೋಳು, ರಾಜಕೀಯ ಪಕ್ಷಗಳು ಹೋಳು, ನೆಲ ಹೋಳು-ಜಲ ಹೋಳು ಮನಸುಗಳು ಹೋಳು- ಅದರಿಂದ ಇಡೀ ವಾತಾವರಣ ಬೋಳು.

‘ಕುರಿಗಳು ಸಾರ್ ಕುರಿಗಳು ಗೆದ್ದದ್ದೇ ಸಾಕು ಸಾರ್-ಸಾರ್ ಎಂಬುದೆ ಚಿತ್ರಗಳಾದರೆ ಉಳಿವುದು ನಮಗೆ ತಿಳಿಸಾರು ಸಾರ್ ತಿಳಿಸಾರು’ ಯಾವುದು ಗಟ್ಟಿ-ಯಾವುದು ತಿಳಿ, ಯಾವುದು ಸಾರ ಯಾವುದು ನಿಸ್ಸಾರ ಎಂದು ತಿಳಿಯಲು ಅಧ್ಯಯನ ಬೇಕು-ಜನ ಸಂಪರ್ಕ ಬೇಕು. ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ಮುಖವಾಡ ಕಿತ್ತೊಗೆದು- ಪ್ರಾಮಾಣಿಕವಾಗಿ ಬದುಕುವ ಮನಸ್ಸು ಬೇಕು ಮೊದಲು.

ಕುರಿಗಳಾಯಿತು-ಕೋತಿಗಳಾಯಿತು
ಈಗ ನರಿಗಳು ಸಾರ್ ನರಿಗಳು
ಆದರೂ ಯಾಕೋ ಏನೋ
ನದಿಗಳು ಸಾರ್ ನದಿಗಳು
ಎನ್ನಲೇ ಇಲ್ಲ ಯಾರು?
ಕಾಸೇ ಮುಖ್ಯವಾದಾಗ
ಕಾಂಟ್ರವರ್ಸಿ ಯಾಕೆ?
ಜಾಣ ವಾದ ಮುಂದಿಟ್ಟು
ರೀಮೇಕ್ ಇಲ್ಲಿ ಮಾಡಲೇಬೇಕೆ?

೧೦-೨೦ ವರ್ಷದ ಹಿಂದಿನ ಚಿತ್ರಗಳನ್ನು ರೀಮೇಕ್ ಮಾಡುವ ಜಾಣರೇ ಅತಿಯಾಗಿರುವುದರಿಂದಾಗಿ ‘ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ’ ಎಂದು ರೀಮೇಕ್ ಮುಸುಕು ಹೊದ್ದು ಬರುತ್ತಿದೆ ತನ್ನ ಭರ್ಜರಿಯಾದ ಹೊಸ ಇನ್ನಿಂಗ್ಸ್ ಆರಂಭಿಸಲು. ಎಂದ ಮೇಲೆ

‘ಜಾಣರು ಸಾರ್ ಜಾಣರು
ನಾವು ತುಂಬಾ ಜಾಣರು
ನಾವು ಪೆದ್ದರು ಅನ್ನೊರನ್ನ
ಅಂತೀವ್ ನಾವು ಕೋಣರು’

ಎಂದೇ ಚಿತ್ರ ತೆಗೆಯಲು ಹೊರಟವರೂ ಗಾಂಧೀನಗರದಲ್ಲೀಗ ಗರಿ ಗಟ್ಟಿಕೊಳ್ಳುತ್ತಿದ್ದಾರೆ. ಕುಡಿದು ತೂರಾಡುತ್ತಿರುವವರನ್ನು ಕಂಡು, ಅವರ ದ್ವಂದ್ವಗಳಿಗೆ ಕನ್ನಡಿ ಹಿಡಿಯಲು ‘ಕುಡುಕರು ಸಾರ್ ಕುಡುಕರು’ ಚಿತ್ರ ತಯಾರಿಸುವವರಿಗೂ ‘ಸಾರ್’ ಟೈಟಲ್ ತುಂಬ ಪ್ರಿಯವಾಗಿದೆ.

ಅದಕ್ಕೆ ಮೊನ್ನೆ ಸಿಕ್ಕಾಗ ‘ಮಿಸ್ಟರ್ ಫಾ’ ನ ಕೇಳಿದೆ.

‘ಅಯ್ಯಾ ಫಾ ಕುಡಿತದಲ್ಲಿ ನೀನು ಪೀಪಾಯಿ. ಆದರೆ ಬೆಂಗಳೂರಿನಲ್ಲಿದ್ದಾಗ ಗುಂಡೇ ಅಲರ್ಜಿ ಎನ್ನುವಂತೆ ವರ್ತಿಸುತ್ತಿ ಪ್ರೆಸ್ ಮೀಟ್‌ಗಳಲ್ಲಿ, ದೂರದೂರುಗಳಿಗೆ ಹೋದಾಗ ಫುಟ್‌ಟೈಲಾಗಿ-ಮನಸು ಬಿಚ್ಕೋತಿಯಂತೆ, ಕಣ್ಣೀರು ಹಾಕ್ತಿಯಂತೆ ಯಾಕೆ?

‘ಅಲ್ಲಿ ಹೇಳಿದ್ದನ್ನ ಸಮಯ ಸಂದರ್ಭ ನೋಡಿಕೊಂಡು ನಾನು ಹೇಳೇ ಇಲ್ಲ ಅನ್ನಬಹುದು ಅಲ್ವಾ? ಇಂಥ ಅಂತೆ ಕಂತೆಗಳ ಗಾಸಿಪ್ ಸರದಾರ ನಾನು. ಹೇಳಿ ನೀವೆ ನನಗೆ ಯಾರಾದ್ರೂ ಪಾಠ ಕಲಿಸಕ್ಕೆ ಆಗುತ್ತೇನು?

‘ಅದಕ್ಕೂ ಇಲ್ಲಿ ಕುಡಿದೇ ಇರೋದಕ್ಕೂ ಸಂಬಂಧವೇನು?’

ಕುಡಿದಾಗ ನಿಜ ವಾಂತಿಯಾಗುತ್ತೆ
ಮುಖವಾಡಗಳು ಕಳಚಿ ಬೀಳುತ್ತೆ
ಓಡಾಡೋದು ಕಷ್ಟವಾಗುತ್ತೆ
ಅದಕ್ಕೆ ನಾನು ಹೀಗಿರೋದು
ಅರ್ಥವಾಯಿತಾ ಸಾರ್ ಅರ್ಥವಾಯಿತಾ

ಎಂದ.

ಅರ್ಥವಾದವನಂತೆ ಆ ಗೋಜಲು ಮನುಷ್ಯನ ಮಾತಿಗೆ’ ‘ಹುಂ ಎಂದಾಗ ಅನ್ನಿಸಿತು ಈಗ ಕತ್ತೆ, ನಾಯಿ, ಕೋಣ, ಎಮ್ಮೆಗಳನ್ನು ಅದ್ರ ಪಾಡಿಗೆ ಹಾಯಾಗಿರಲು ಬಿಟ್ಟು

ಮನುಷ್ಯರು ಸಾರ್ ಮನುಷ್ಯರು
ಮಾನವೀಯತೆ ಮೆರೆದ
ಮನುಷ್ಯರು ಸಾರ್ ಮನುಷ್ಯರು

ಎಂಬಂತಹ ಚಿತ್ರ ಯಾರಾದರೂ ತೆಗೆಯಬಾರದೆ ಎಂದುಕೊಂಡೆ. ಆಗಲೂ ಮಾಮರವೆಲ್ಲೋ ಕೋಗಿಲೆ ಎಲ್ಲೋ ಹಾಡು ತೇಲಿಬರುತ್ತಿತ್ತು.
*****
(೨೦-೦೯-೨೦೦೨)