ನಾನು-ಅವನು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ನಾನು ಧಣಿಗಳ ಬಗ್ಗೆ ಹೇಳಿದೆನೆ? ಆತ ಧಣಿಗಳ ದೊರೆ
ಹೃದಯದಲ್ಲಿ ಹುಡುಕಾಡಿದೆನೆ? ಅಲ್ಲಿ ನಲ್ಲನ ಕರೆ

ಶಾಂತಿಗಾಗಿ ಹಂಬಲಿಸಿದೆನೆ? ಆತ ಶಾಂತಿದೂತ
ಯುದ್ಧಭೂಮಿಗೆ ಬಂದೆನೆ? ಆತನೇ ಖಡ್ಗಾಘಾತ

ಔತಣಕ್ಕೆ ಹೋದೆನೆ? ಆತನೇ ಅಲ್ಲಿಯ ಮಧು
ನಂದನವನಕ್ಕೆ ಧಾವಿಸಿದೆನೆ? ಅವನೇ ಅಲ್ಲಿಯ ಸುಂದರಾಂಗ

ಗಣಿಯಾಳಕ್ಕೆ ಧುಮುಕಿದೆನೆ? ಅವನೇ ಅಲ್ಲಿಯ ಪುಷ್ಯರಾಗ
ಕಡಲೊಳಗೆ ಮುಳುಗಿದೆನೆ? ಅವನೇ ಅಲ್ಲಿಯ ಮುತ್ತುರತ್ನ

ಬಟಾಬಯಲಲ್ಲಿ ನಾನು? ಅವನು ನಂದನದ ಗುಲಾಬಿ
ಆಕಾಶಕ್ಕೆ ಹಾರಿದೆನೆ ನಾನು? ಅವನು ಅಲ್ಲಿಯ ನಕ್ಷತ್ರ

ಗಿರಿಶಿಖರಕ್ಕೆ ಏರಿದೆನೆ? ಅವನೇ ಅಲ್ಲಿಯ ಶೃಂಗ
ಶೋಕದಲ್ಲಿ ಹೊತ್ತಿ ಉರಿದೆನೆ? ಅವನೇ ಲೋಭಾನದ ಧೂಪ

ಕಾಳಗದಲ್ಲಿ ಕಲಿಯಾದೆನೆ ನಾನು? ಅವನೆ ದಳಪತಿಯಾದ
ಕುಡಿದು ಚಿತ್ತಾಗಲು ಬಂದೆನೆ? ಅವನೆ ಪರಿಚಾರಕ, ಮಧುಪಾತ್ರೆ

ಪ್ರೇಮಿಗೊಂದು ಪತ್ರ ಬರೆದೆನೆ? ಅವನ ಲೇಖನಿ, ಮಸಿ, ಕಾಗದ
ನಾನು ಎಚ್ಚತ್ತೇನೆ? ಅವನೆ ನನ್ನ ಎಚ್ಚರ, ಮಹಾಜ್ಞಾನ

ನಾನು ನಿದ್ರಿಸಿದೆನೆ? ಅವನೇ ನನ್ನ ಸ್ವಪ್ನ
ಕಾವ್ಯ ಪ್ರಾಸಕಾಗಿ ಹುಡುಕಿದೆನೆ? ಅವನೇ ನನ್ನ ಛಂದೋಲಯ

ಯಾವುದೊ ಪ್ರತಿಮೆಗೆ ನನ್ನ ಕಲ್ಪನೆ ಹೊಂಚು ಹಾಕಿತೆ?
ಅವನು ಬಂದ, ಸಿದ್ಧ ಕಲಾವಿದ, ಕೈಯಲ್ಲಿ ಕುಂಚ

ಪುರುಷರಲ್ಲಿ ಅವನು ಪುರುಷೋತ್ತಮ
ಬಿಸಾಡು ಪುಸ್ತಕ, ಈ ಶಬ್ದಗಳ ತ್ಯಜಿಸು

ಅವನು ಎಲ್ಲ ಪುಸ್ತಕಗಳಿಗಿಂತ ಶ್ರೇಷ್ಠ
ಮೌನಿಯಾಗು, ಅವನು ಆರು ದಿಕ್ಕುಗಳ ಬೆಳಕು

ನೀನು ಆರು ದಿಗಂತಗಳ ದಾಟು
ಅಗೋ ಅಲ್ಲಿ ಕಂಡ-ಅವನೇ ನ್ಯಾಯಾಧೀಶ
*****