ಕವಿತೆ! ಸುಲಲಿತ ಭಾವಸಂಪ್ರೀತೆ, ನನ್ನೆದೆಯ
ಸುಪ್ತಸುಖದುಃಖ ವೀಣಾಕ್ವಣಿತ ಸಂಗೀತೆ
ಚೈತ್ರಮುಖಿ ಕಣ್ಣನರಳಿಸು ವಿಮಲವಿಖ್ಯಾತೆ!
ಏನಿದ್ದರೇನು ವಿಶ್ವಂಭರಿತೆ ನಿನ್ನುದಯ
ಚಿರನೂತನೋತ್ಸಾಹ ಚೇತನಂ ಪಡೆವನಕ
ಕವಿಮನವು ಬರಿಯುದಾಸೀನ ರಸಹೀನತೆಯ
ದೀನತೆಯ ತವರು; ಅದೂ ವಿಶ್ವಮೋಹಿನಿ ಉಷೆಯ
ಚುಂಬನುತ್ಕರ್ಷತೆಗೆ ಭೂಮಿಗಿಳಿದಿದೆ ನಾಕ!
ಅವುದೋ ಮೂಲೆಯಲಿ ಕುಳಿತು ಭೂರಂಗದಲಿ
ನಡೆವ ಅಕಟೋವಿಕಟ ನಾಟಕದ ಹಿನ್ನೆಲೆಯ
ಬಗಿದು ನೋಡುವ ಬಯಕೆ ಬಗೆಯೊಳಿದೆ; ಮನ್ನಣೆಯ
ಅಳಿಯಾಸೆ ಮಣ್ಣುಗೂಡಲಿ, ಮಹಾಪೂರದಲಿ
ಜಾಲಿಸಲಿ ಬಾಳಕೊಳೆ, ಬದುಕು ಮಡಿಯಾಗಿರಲಿ
ಮೂಡು ಮುದ್ದಿನ ಕವಿತೆ ಋತಶಿವಾನಂದದಲಿ.
