ನುಗ್ಗಿ ಬಂದಿತು ಎಲ್ಲ ಲೋಕದಾನಂದವದು

ನುಗ್ಗಿ ಬಂದಿತು ಎಲ್ಲ ಲೋಕದಾನಂದವದು
ನನ್ನ ದೇಹದ ಗೇಹ ರಚನೆಗೆಂದು,
ಮುದ್ದನಿಟ್ಟವು ಬಾನ ಬೆಳಕು ಬಿಟ್ಟೂ ಬಿಡದೆ
ಅವಳು ಎಚ್ಚರಗೊಂಡು ಏಳುವರೆಗು.

ತ್ವರೆಯಿಂದ ಬಂದ ಬೇಸಗೆ ತಂದ ಹೂವುಗಳು
ಅವಳ ಉಸಿರಾಟದಲಿ ಉಸಿರಿಟ್ಟವು.
ಹರಿವ ನೀರಿನ, ಬೀಸುಗಾಳಿಗಳ ಸೂಸುದನಿ
ಅವಳ ಸಂಚಲನದಲಿ ಸರಗೈದವು.

ಮೋಡಗಳ, ಕಾಡುಗಳ ಬಣ್ಣದೇರಿಳಿತಗಳು
ಅವಳ ಬಾಳಿಗೆ ಹರಿದು ಮೀಯಿಸಿದವು;
ಎಲ್ಲ ಎಲ್ಲದರ ಸ್ವರ ಮಾಧುರ್‍ಯವವಳ ಅಂ-
ಗಾಂಗಗಳ ಲಾಲಿಸುತ ರೂಪಿಸಿದವು.

ಅವಳೆನ್ನ ಕೈಹಿಡಿದ ಕನ್ನೆ- ನನ್ನೀ ಮನೆಗೆ
ತನ್ನ ದೀಪವ ಹಚ್ಚಿ ಬೆಳಗಿಸಿದಳು.
Fruit Gathering, LXXII
*****