ಸದಾಕಾಲವೂ ತಾವೇ ನಂಬರ್‌ಒನ್ ಎನಿಸಿಕೊಳ್ಳಬೇಕು ಎಂಬ ಆಸೆ ಎಲ್ಲ ರಂಗದವರಿಗೂ ಇರುತ್ತದೆ. ಇದ್ದರೆ ಅದು ತಪ್ಪ ಅಲ್ಲ. ಒಂದರಿಂದ ಹತ್ತರವರೆಗೆ ನಂಬರ್ ಗಳಿಲ್ಲದಿದ್ದರೆ ಎಲ್ಲರೂ ನಂಬರ್ ಒನ್ನೇ ಆಗುತ್ತಿದ್ದರು.
ಈ ಬಗೆಯ ಮಾಸ್ ಸೈಕಾಲಜಿ ಬಿಲ್ಡ್ ಮಾಡುವಲ್ಲಿ ಬುದ್ಧಿ ಜೀವಿಗಳ, ಪತ್ರಕರ್ತರ, ವೀಡಿಯೋ ಮೀಡಿಯಾ ದವರ, ವಿವಿಧ ಛಾನೆಲ್‌ಗಳ ಪಾತ್ರವೂ ಬಹುಮುಖ್ಯ ವಾಗಿರುತ್ತದೆ.
ಕಾಲಾನುಕಾಲದಿಂದ ಜನರ ಮೇಲೆ ಅಭಿಪ್ರಾಯ ಹೇರುವ ಜಾಣರನ್ನ ಮುಂಚಿನಿಂದ ನಾವು ಕಂಡಿದ್ದೇವೆ. ಒಂದು ಕಾಲಕ್ಕೆ ಗಾಂಧೀ ನಂತರ ಯಾರು? ನೆಹ್ರು ನಂತರ ಯಾರು? ಎಂಬ ಪ್ರಶ್ನೆ ಇದ್ದಂತೆ ಈಗ ವಾಜಪೇಯಿ ನಂತರ ಯಾರು? ಎಂಬ ಪ್ರಶ್ನೆಯೂ ಹೆಡೆಯಾಡುತ್ತಿದೆ.
ರಾಜಕಾರಣ: ಈಚೆಗೆ ಎಸ್.ಎಮ್. ಕೃಷ್ಣ ನಂಬರ್ ಒನ್ ಮುಖ್ಯಮಂತ್ರಿ ಎಂದಿತ್ತು ಪತ್ರಕರ್ತರ ಸರ್ವೆ, ಆದರೆ ಇದ್ದಕ್ಕಿದ್ದಂತೆ ಕಾವೇರಿ ಎದುರಾದಳು. ಈ ಸಮಸ್ಯೆಯ ಉಬ್ಬರವಿಳಿತಗಳು ಎಲ್ಲರ ಬಾಯಿಮುಚ್ಚಿಸಿ ಕೋರ್ಟ್ ತೀರ್ಮಾನದತ್ತ ನೋಡುವಂತೆ ಮಾಡಿದೆ. ನಾನು ಮುಖ್ಯಮಂತ್ರಿಯಾದರೆ ನಂಬರ್ ಒನ್ ಎಂದು ಮಿಂಚಬಲ್ಲೆ ಎಂದು ಬಡಬಡಿಸುವ ಬುಡುಬುಡಿಕೆ ಮಂದಿ ಈಗ ಎಲ್ಲಾ ಪಕ್ಷದಲ್ಲಿದ್ದಾರೆ. ಆಶ್ವಾಸನಾ ವೀರರು-ಸಮಯ ಸಾಧಕರು- ಕುರ್ಚಿಯ ಕನಸಿನವರ ಪಾಲಿಗೆ ಕಾವೇರಿ ಹಲವರಿಗೆ ವರವಾಗಿದ್ದಾಳೆ, ಕೆಲವರಿಗೆ ಶಾಪವಾಗಿದ್ದಾಳೆ.
ನಾಟಕರಂಗ: ರಂಗಭೂಮಿಯ ಭೀಷ್ಮರೆನಿಸಕೊಂಡಿದ್ದ ಬಿ.ವಿ. ಕಾರಂತ್ ನಾಟಕ ರಂಗದ ಏವನ್ ನಿರ್ದೇಶಕರೆನಿಸಿಕೊಂಡಿದ್ದರು. ಅವರು ನಮ್ಮನ್ನಗಲಿದ ಮರುಘಳಿಗೆ ಕಾರಂತ್ ನಂತರ ಯಾರು? ಎಂಬ ಪ್ರಶ್ನೆ ಬಹುಮಂದಿಯ ತಲೆ ತಿನ್ನುತ್ತಿದೆ. ಈಗ ಬುದ್ದಿ ಜೀವಿಗಳೆನಿಸಿಕೊಂಡವರು ಲೇಬಲ್ ಹಚ್ಚುವ ಕೆಲಸ ವಾಲಂಟೆರಾಗಿ ತಾವೇ ವಹಿಸಿಕೊಂಡಿದ್ದಾರೆ. ಪ್ರಜಾವಾಣಿ ವಿಶೇಷಾಂಕದಲ್ಲಿ ಕೆ.ವಿ. ಅಕ್ಷರ ಸುತ್ತ ಏನಾಗುತ್ತಿದೆ ಎಂದು ಕಣ್ಣುಬಿಟ್ಟು ನೋಡದೆ- ನೀನಾಸಮ್’ ಕನ್ನಡಕ ತೊಟ್ಟು ಕಾರಂತರ ನಂತರದ ವ್ಯಕ್ತಿ ರಘುನಂದನ್ ಎಂಬರ್ಥ ಬರುವಂತೆ ಮಾತನಾಡತೊಡಗಿದ್ದಾರೆ.
ಪ್ರಭಾವವಿರುವ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಇಂಥವರ ನಂತರ ಇಂಥವರು ಎಂದು ‘ಫತ್ವಾ’ಹೊರಡಿಸುವುದು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಸಾಧನೆಗಳ ಮೂಲಕವೇ ರಂಗಾಸಕ್ತರು ನಂಬರ್ ಒನ್ ಯಾರೆಂದು ಗುರುತಿಸುತ್ತಾರೆ ಮುಂದೆ…
ಹೊಸ ಹೊಸ ಪ್ರಯೋಗಗಳು. ವ್ಯಾಖ್ಯಾನಿಸುವ ರೀತಿ, ನಿರೂಪಣಾ ಶೈಲಿ ಇವುಗಳನ್ನು ತುಂಬ ಎಚ್ಚರದಿಂದ ಗಮನಿಸುತ್ತಾ ಹೋಗಬೇಕಾದ ದಿನಗಳಿವು.
ಪ್ರಸನ್ನ, ಬಸವಲಿಂಗಯ್ಯ, ಆರ್. ನಾಗೇಶ್, ಸಿ.ಜಿ. ಕೃಷ್ಣಸ್ವಾಮಿ, ಬಿ. ಜಯಶ್ರೀ, ಪ್ರೇಮಾಕಾರಂತ್-ಭಾಗೀರಥಿ ಮುಂತಾದವರನೇಕರು ಈ ಓಟದಲ್ಲಿದ್ದಾರೆ. ಹಾಗೆ ನಾಟಕಕಾರರಲ್ಲಿ ‘ಗಿರೀಶ್ ಕಾರ್ನಾಡ್, ಕಂಬಾರ, ಹೆಚ್ ಎಸ್. ಶಿವಪ್ರಕಾಶ್, ಲಿಂಗದೇವರು ಹಳೇಮನೆ ನಂತರ ಯಾರು ನಂಬರ್ ಒನ್ ಆದಾರು ಎಂಬುದರ ಬಗೆಗೂ ಈಗ ಆಂತರ್ಯದ ಚರ್ಚೆಗಳು ನಡೆದಿವೆ.
ಚಿತ್ರಕಲೆ: ಕೆ.ಕೆ. ಹೆಬ್ಬಾರ್ ನಂತರ ಯಾರು? ಕರ್ನಾಟಕದ ಸಂದರ್ಭದಲ್ಲಿ ಈಗ ಎಸ್. ಜಿ. ವಾಸುದೇವ್ ನಂತರ ಯಾರು ನಂಬರ್‌ಒನ್ ಸ್ಥಾನ ಏರಬಲ್ಲವರು ಎಂಬುದಕ್ಕೆ ಸಖತ್ ಲಾಬಿ ನಡೆದು ಆಂಗ್ಲ ಪತ್ರಿಕೆಗಳಲ್ಲಿ ‘ಬ್ರೆನ್ ವಾಷ್’ ಕಾರ್ಯಕ್ರಮ ಆರಂಭವಾಗಿದೆ.
ಇದೀಗ ಆರ್ಟ್ ಗ್ಯಾಲರಿಗಳು ಬೆಂಗಳೂರಿನಲ್ಲಿ ಅತಿಯಾಗಿ ಕಲಾಪ್ರದರ್ಶನದಲ್ಲಿ ಸ್ಪರ್ಧೆ. ತೀವ್ರವಾಗಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಅನಿಲ್‌ಕುಮಾರ್, ರವಿಕಾಶಿ ಅವರ ಕಲಾಕೃತಿಗಳ ಬಗ್ಗೆ ತಮ್ಮ ಅನಿಸಿಕೆ ಹೇಳುತ್ತಾ “ಇವರೇ ನಂಬರ್ ಒನ್ ಸ್ಥಾನ ಏರಬಲ್ಲವ” ಎಂಬರ್ಥ ಬರುವಂತೆ ಪ್ರಚಾರ ಪ್ರಾರಂಭಿಸಿದ್ದಾರೆ. ಇಂಥ ಪ್ರಚಾರದ ಗಿಮಿಕ್ಸ್ ನಾಳೆ ಸಾಂಕ್ರಾಮಿಕವೂ ಆದೀತು. ಅದರಿಂದಲೇ ಅನುಭವಿಗಳು ಹೇಳುವುದು “ಕೃತಿಕಾರನ ಅಧಿಕಾರ, ಪ್ರಭಾವ ನೋಡಬೇಡ ಕೃತಿಯನ್ನು ನೋಡಿ ಮಾತಾಡು” ಎಂದು.
ಚಲನಚಿತ್ರರಂಗ: ಮುಂಚೆ ಡಾ. ರಾಜ್ ಕುಮಾರ್ ನಂತರ ‘ಯಾರು ನಂಬರ್ ಒನ್’ ಎಂಬ ಮಾತಿತ್ತು. ಕೆಲಕಾಲಾನಂತರ ವಿಷ್ಣು ಅದರ ಪಕ್ಕ ಬಂದು ನಿಂತರು. ವಿಷ್ಣು ನಂತರ ಯಾರು ಎಂಬ ಕೂಗೂ ಕೇಳಿಬಂತು. ಈಗಂತೂ ದಂಡು ದಂಡು ಹೊಸ ಮುಖಗಳು ತೆರೆಗೆ ಬರುತ್ತಿವೆ. ಯುವ ಪ್ರತಿಭೆಗಳಲ್ಲಿ ಪ್ರತಿಭಾವಂತರನ್ನು ಜನ ಗುರುತಿಸಿ ಗೌರವಿಸಿದ್ದಾರೆ. ಆದರೆ ಇವರಲ್ಲಿ ಬಹುಮಂದಿಗೆ ತಾವು ನಂಬರ್‌ಒನ್ ಎಂಬ ಅಹಮಿಕೆ ಈಗಲೇ ಕಾಡತೊಡಗಿದೆ. ಆದರಿಂದ ಪರಸ್ಪರ ಕಾಲೆಳೆತ ಜನಪ್ರಿಯತೆಯ ಡಾಣ ಡಂಗೂರ ಹೊಡೆಯಲು ಅಭಿಮಾನಿ ಸಂಘಗಳನ್ನು ತಾವೇ ಹುಟ್ಟುಹಾಕಿ ಪೋಷಿಸುತ್ತಿದ್ದಾರೆ. ಕಾಲ್‌ಷೀಟ್‌ಗೆ ಕೈ ಚಾಚಿ ನಿಂತ ನಿರ್ಮಾಪಕರು ಅನೇಕ ವೇಳೆ ಸೋತು ಸಪ್ಪಗಾಗಿದ್ದರೂ. ‘ಲಾಭವಾಗಿದೆ ನನಗೆ ಎಂದು ಒತ್ತಾಯವಾಗಿ ಹೇಳಿಸುವ ಪ್ರೆಸ್ ಮೀಟ್‌ಗಳಾಗುತ್ತಿವೆ. ರವಿಚಂದ್ರನ್, ಅಂಬರೀಷ್ ನಂತರ ದಿಢೀರ್ ಖ್ಯಾತಿಗೆ ಬಂದ ಉಪೇಂದ್ರ ನಾನೇ ನಂಬರ್ ಒನ್ ಎಂದು ಸಾರಲು ‘ಸೂಪರ್‌ಸ್ಟಾರ್’ಗೆ ಅಡ್ವಾನ್ಸಾಗಿ ಮುಹೂರ್ತದಂದೇ ಷೀಲ್ಡ್ ಹಂಚಿದರು. ಅದು ಬೋರಲು ಮಲಗಿದಾಗ ‘ಬುಸ್’ ಎಂದು ಬಿರಬಿರ ಬಂದ ನಾಗರಹಾವು ‘ಠುಸ್’ ಎಂದಿತು. ಈಗ ಉಪ್ಪಿ ನಂಬರ್‌ಒನ್ ಎನ್ನುವುದು ಡೋಲಾಯಮಾನವಾಗಿ ಕುಳಿತಿದೆ. ಹೀಗೆ, ನಿರ್ದೇಶಕ ಕಣಗಾಲರ ನಂತರ ಯಾರು ನಂಬರ್‌ಒನ್? ಎಂದರು. ಕಲ್ಪನಾ, ಮಂಜುಳ, ಮಾಲಾಶ್ರೀ ನಂತರ ಯಾರು ನಂಬರ್‌ಒನ್ ಎಂದರು. ಜನಕ್ಕೆ ಆ ಆ ನಿರ್ಧಾರ ಬಿಟ್ಟಾಗ ಅವರು ಸಮರ್ಪಕವಾಗಿ ಎಲ್ಲರ ಜಾತಕ ಬರೆದು ತೋರಿದ್ದಾರೆ.
ಪತ್ರಿಕಾ ರಂಗ: ವಿಜಯ ಕರ್ನಾಟಕ ನಮ್ಮದು ನಂಬರ್ ಒನ್ ಪತ್ರಿಕೆ ಎಂದು ಪ್ರಚಾರ ಮಾಡಿತು. ಆದರೆ ಅಲ್ಲಿ ದುಡಿವ ಸಿನಿ ಪತ್ರಕರ್ತರು ತಾವೇ ನಂಬರ್ ಒನ್ ಎಂದು ಬೀಗುತ್ತ ಇರುವೆಯನ್ನ ಆನೆಯೆಂದು ವಿಜೃಂಭಿಸಿ ಬರೆಯತೊಡಗಿದರು. ಆಗಲೇ ಬರಹದ ಕ್ವಾಲಿಟಿಯೂ ತುಂಬ ಮುಖ್ಯ ಎಂಬ ಮಾತು ಎದ್ದು “ಕ್ವಾಲಿಟಿ ದೃಷ್ಟಿಯಿಂದ ಈ ಪತ್ರಿಕೆ ನಂಬರ್ ವನ್” ಎಂದು ಹೇಳುವ ಪರಿಪಾಠ ಬೆಳೆಯಿತು. ಹಲವು ಪತ್ರಿಕೆಗಳು ಲೇಔಟ್ ದೃಷ್ಟಿಯಿಂದ ನಂಬರ್ ಒನ್ ಎನಿಸಿಕೊಂಡವು. ಹಲವು ಪತ್ರಿಕೆಗಳು ಲವಲವಿಕೆಯ ಬರವಣೆಗೆಯಿಂದ, ನಿಷ್ಠುರ ವರದಿಗಳಿಂದ ಸಾಹಿತ್ಯದ ಸೊಗಸಿನಿಂದ ನಂಬರ್ ಒನ್ ಎನಿಸಿ ಕೊಂಡವು. ‘ಯಾವುದು ಗೋಲ್ಡು ಎಂಬುದನ್ನು ನಿರ್ಧರಿಸುವ ಹೊಣೆ ಓದುಗರಿಗೆ ಬಿಟ್ಟಿದ್ದಾರೆ ಈಗ.
ಟಿ.ವಿ. ಧಾರಾವಾಹಿಗಳು: ಎಲ್ಲ ಧಾರಾವಾಹಿಗಳವರು “ಟಿ.ಆರ್.ಪಿ.ಯಲ್ಲಿ ನಮ್ಮದು ಏಒನ್” ಎಂದು ಪ್ರೆಸ್‌ಮೀಟ್‌ಗಳಲ್ಲಿ ಹೇಳುತ್ತ ಬಂದಿದ್ದಾರೆ. ಒಂದೂ ಧಾರಾವಾಹಿಯನ್ನು ನೋಡದ ಪತ್ರಕರ್ತರು ಅದನ್ನು ನಿಜವೆಂದು ನಂಬಿ ಬರೆದು ನೋಡುಗರ ಅವಕೃಪೆಗೂ ಪಾತ್ರರಾಗಿದ್ದಾರೆ. ಈಗ ‘ಟಿ ಆರ್ ಪಿ. ಏ ಮಹಾಮೋಸ ಎಂಬ ಕೂಗು ಎಲ್ಲೆಡೆ ಎದ್ದಿವೆ. ಹೀಗೆ ನೃತ್ಯ ರಂಗ, ಸಾಹಿತ್ಯ ವಲಯಗಳವರೂ ಈಗ ‘ದ್ವೀಪ’ಗಳಾಗಿ ನಾವೇ ನಂಬರ್‌ವನ್ ಎಂದು ಬೊಬ್ಬೆ ಇಡತೊಡಗಿದ್ದಾರೆ.
ಯಾರು ಏನೇ ಹೇಳಲಿ ‘ಎಲ್ಲರಂಗದಲ್ಲೂ’ ನಂಬರ್ ಒನ್ ಯಾರು ಎಂಬುದನ್ನು ನಿರ್ಧರಿಸುವ ಹೊಣೆ ತಮ್ಮದು.
*****
(೨೦೦೨)
