ಚಿನ್ನದ ಕಿರೀಟ ವಿ/ಎಸ್ ವಜ್ರದ ಕಿರೀಟ

ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು.

ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿದಲ್ಲಿ ಹೆಚ್ಚು ಮೈಲೇಜ್ ಸಿಗುತ್ತದೆ ಎಂಬ ಕಾರಣಕ್ಕೆ ಮೈಸೂರು ಫ್ರೆಂಡ್ಸ್ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಏರ್ಪಡಿಸಿದ್ದರು.

ಇದರ ಕೇಂದ್ರಬಿಂದು ಉಪೇಂದ್ರ.

ಉಪೇಂದ್ರರಿಗೆ ಹಿಂದೆ ಇದೇ ಮಿತ್ರರು ‘ಚಿನ್ನದ ಕಿರೀಟ’ ಹಾಕಿದ್ದರು. ಆಗ ಆ ಚಿನ್ನದ ಕಿರೀಟ ತೋರಿಸಲು ಉಪೇಂದ್ರರೇ ಬೆಂಗಳೂರಿನಲ್ಲೊಂದು ಪ್ರೆಸ್‌ಮೀಟ್ ಕರೆದಿದ್ದರು ಅವರ ಮನೆಯಲ್ಲಿ.

ಆಗ ಈ ಗೆಳೆಯರಿಗೆ ಚಿಂತೆಯಾಯಿತು. ಚಿನ್ನದ ಕಿರೀಟವಾದಮೇಲೆ ಬೆಳ್ಳಿ ಕಿರೀಟ ಹಾಕಿದರೆ ‘ಗ್ರೇಡ್’ ಕಡಿಮೆಯಾಗುತ್ತದೆ.

‘ಬೆಳ್ಳಿ ಗದೆ ಕೊಡಬಹುದಿತ್ತಲ್ಲ’ ಎಂದರು ನನ್ನ ಗೆಳೆಯರು.

‘ಮೈಸೂರು ಮಿತ್ರ’ರು ಗದೆಪ್ರಿಯರಲ್ಲ-ಕಿರೀಟಪ್ರಿಯರು ಆದ್ದರಿಂದ ಕಿರೀಟವೇ ಹಾಕಬೇಕೆಂದು ಕೊಂಡಾಗ ವಜ್ರದ ಕಿರೀಟ ನೆನಪಾಗಿದೆ.

ವಜ್ರದ ಕಿರೀಟ ಎಂದರೆ ಅದಕ್ಕಿಂತಾ ಭಾರಿ ಸುದ್ದಿ ಆಗುವುದು ನಿಜ. ಆ ‘ಸಂದರ್ಭದಲ್ಲಿ ಉಪ್ಪಿ ಫ್ಯಾನ್ಸ್ ಅಸೋಸಿಯೇಷನ್ ಮಾಡಿದರೆ ಹೇಗೆ’ ಎಂದು ಚಿಂತಿಸಿ ಈ ಕಾರ್ಯಕ್ರಮದಲ್ಲೇ ಅದೂ ಸೇರಿಸಿದರು.

ಅರೆರೆ! ಇಷ್ಟೇ ಆದರೇ ಸಾಕೆ ಹೊಸ ಕನ್ನಡ ಚಿತ್ರವೇ ಮಾಡಬಹುದಲ್ಲ ಉಪ್ಪಿಯನ್ನು ಹಾಕಿಕೊಂಡು ಎನ್ನಿಸಿರಬೆಕು.

‘ಓಕೆ’ ಎಂದರು ಎಲ್ಲ.

ಚಿನ್ನದ ಕಿರೀಟ – ವಜ್ರದ ಕಿರೀಟವನ್ನೆ ಲಕ್ಷಾಂತರ ಮಂದಿ ಎದುರು ಹಾಕಿದಾಗ ಕಾಲ್‌ಷೀಟ್ ಜುಜಬಿ ವಿಷಯವಾಗುತ್ತದೆ.

ಇಷ್ಟು ಮಾಡಿದ ಗೆಳೆಯರಿಗೆ ‘ಉಪ್ಪಿ’ ಕಾಲ್‌ಷೀಟ್ ನೀಡದಿರುತ್ತಾರೆಯೇ ಅದರಿಂದ ಮೇ ೧೨ರಿಂದು ಮುಹೂರ್ತವೂ ಮಾಡಿಬಿಡೋಣ ಎಂದುಕೊಂಡರು.

ಮೈಸೂರಿನಲ್ಲಿ ಅದರ ಕಾರ್ಯಕ್ರಮ ಹಮ್ಮಿಕೊಂಡರು. ಇಂಥ ಸಮಾರಂಭಕ್ಕೆ ರವಿ ಬೆಳಗೆರೆ ಬಂದರೆ ಚೆನ್ನ ಎನಿಸಿರಬೇಕು. ಅವರನ್ನೂ ಕರೆದಿದ್ದೇವೆ ಎಂದು ಆಹ್ವಾನ ಪತ್ರಿಕೆ ಹೇಳಿದೆ.

ಉಪೇಂದ್ರ ಚಿತ್ರದ ಪ್ರಭಾವದಿಂದ ಎಂತೆಂತಹ ಅನಾಹುತವಾಗಿದೆ ಎಂಬುದನ್ನು ‘ಹಾಯ್ ಬೆಂಗಳೂರು’ ಸುದೀರ್ಘವಾಗಿ ಚಿತ್ರಿಸಿತ್ತು.

ಈಗ ರವಿಬೆಳೆಗೆರೆ ಏನು ಮಾತಾಡಿಯಾರು ಎಂಬುದನ್ನು ತಿಳಿಯಲು ಬಹುಜನ ಕಾತರದಿಂದಿದ್ದಾರೆ.

‘ಚಿನ್ನದ ಕಿರೀಟ’ದ ಪ್ರಸಂಗವನ್ನು ಜಗ್ಗೇಶ್ ವ್ಯಖ್ಯಾನಿಸಿ ಎಲ್ಲ ಅವರವರೇ ಮಾಡಿಕೊಂಡ ಮ್ಯೂಚ್ಯುಯಲ್ ಅಡ್ಮಿರೇಷನ್ ಸೊಸೈಟಿ ಎಂದಿದ್ದರು.

ಈಗ ವಜ್ರದ ಕಿರೀಟ ಎಂದರೆ ‘ಜಿತೇಂದ್ರ’ನ ರೀ ಆಕ್ಷನ್ ಸಹ ವಿಚಿತ್ರವಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಈ ಚಿತ್ರದ ನಿರ್ದೇಶಕರು ಮಹೇಶ್ ತಲಕಾಡ್ ಅಂತೆ.

ಬ್ರಾಕೆಟ್‌ನಲ್ಲಿ (ಬಾಲಿವುಡ್) ಎಂದು ಹಾಕಿದ್ದಾರೆ.

ಉಪೇಂದ್ರ ಈಗ ಹಾಲಿವುಡ್ ತೆಗೆಯಲು ಹೋಗುತ್ತಿರುವುದರಿಂದ ಈ ಮಿತ್ರರು ತಮ್ಮ ಚಿತ್ರಕ್ಕೆ ‘ಬಾಲಿವುಡ್’ ಎಂದೂ ಹೆಸರಿಡಬಹುದು ಎಂಬುದು ಬಹುಮಂದಿ ಊಹೆ.

ಬಂತು-ಬಂತು ‘ಎ’ ಬಂತು
ಉಪೇಂದ್ರ ‘ಎ’ ಬಂದ ಕೂಡಲೆ ಪ್ರವೀಣ್ ನಾಯಕರ ‘ಝ್ಹಡ್’ ಆರಂಭವಾಯಿತು.

ನಂತರ ‘ಉಪೇಂದ್ರ’ ಬಂತು – ಬಾಚಿಕೊಳ್ಳಲು ಬಿಡುವಿಲ್ಲದಷ್ಟು ಹಣ ಮಾಡಿತು.

ಇದೇ ಸಮಯ ಹೊಂಚಿದ ವಿಶ್ವನಾಥ್

ಕುಮಾರಸ್ವಾಮಿಯವರಿಗೆ ದಮ್ಮಯ್ಯ ಗುಡ್ಡೇ ಹಾಕಿ ‘ಜಿತೇಂದ್ರ’ ತೆರೆಗೆ ತಂದೇಬಿಟ್ಟರು.

ಈಗ ತಾವು ಮಾಡಿದ ತಪ್ಪಿಗೆ ಕುಮಾರಸ್ವಾಮಿ, ಜಗ್ಗೇಶ್ ಪರಿತಪಿಸುತ್ತಿದ್ದಾರೆ. ಈಗ ಹಾಲಿವುಡ್ ತೆರೆಗೀಯುತ್ತಿದ್ದಾರೆ ರಾಮು.

ಆ ಚಿತ್ರ ತೆರೆಗೆ ಬರುವುದರಲ್ಲೇ ಉಪ್ಪೀನ ಹಾಕಿಕೊಂಡು ‘ಬಾಲಿವುಡ್’ ಮೈಸೂರು ಫ್ರೆಂಡ್ಸ್ ತೆಗೆದೇಬಿಡುವ ಅವಸರದಲ್ಲಿ ಇದ್ದಂತಿದೆ ಅದಕ್ಕೆ ಅಡ್ವಾನ್ಸ್ ‘ವಜ್ರದ ಕಿರೀಟ’

ಧನರಾಜ್ ಚಿತ್ರಕ್ಕೆ ಉಪೇಂದ್ರ ಹೆಚ್‌ ಟು ಓ ಎಂದು ಹೆಸರಿಸಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡನ್ನು ಸಾಂಕೇತಿಸುವ ಪಾತ್ರಗಳು ಇದರಲ್ಲಿವೆ. ಕಾವೇರಿ ನೀರಿನ ಸಮಸ್ಯೆ ಚಿತ್ರದ ಕಥಾವಸ್ತು. ಈ ಸಮಸ್ಯೆಯನ್ನು ಸಾಂಕೇತಿಕವಾಗಿ ‘ಶಾಪ’ ಸಹಾ ಚಿತ್ರಿಸುವ ಯತ್ನ ಮಾಡಿದೆ ಎಂಬುದೀಗ ಎಲ್ಲ ಬಲ್ಲರು.

ಈಗ ಹೆಚ್‌ ಟು ಓ ಗೆ ಪ್ರತಿಸ್ಪರ್ಧಿಯಾಗಿ ಯಾವ ಹೆಸರಿಟ್ಟು ಚಿತ್ರಿಸೋಣ ಎಂಬುದನ್ನು ನಿರ್ಧರಿಸಲು ನೂರಾರು ಮಂದಿ ನಿರ್ಮಾಪಕ ನಿರ್ದೇಶಕರು ಚಿಂತಿಸುತ್ತಿದ್ದಾರಂತೆ.

ಹೆಚ್‌ ಟು ಓ ಅಂದರೆ ನೀರು – ಅದರಿಂದ ಸಿ ಓ ಟು ಎಂದು ಮತ್ತೊಬ್ಬರು ಚಿತ್ರ ತೆಗೆಯ ಹರಡಲಿರುವರಂತೆ.

ಸಿ ಓ ಟು ಎಂದರೆ ಕಾರ್ಬನ್ ಡೈ ಆಕ್ಸೈಡ್ ಅದಿದ್ದರೆ ಉಸಿರಾಡುವುದೇ ಕಷ್ಟ. ಆಗಲೇ ಎಲ್ಲ ಆಕ್ಸಿಜನ್‌ಗೆ ಹಂಬಲಿಸುವುದು. ಚಿತ್ರರಂಗಕ್ಕೂ ಈಗ ಆಕ್ಸಿಜನ್ ಸಿಲಿಂಡರ್‍ ಬೇಕಿದೆ.
*****
(೧೧-೫-೨೦೦೧)