ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃದೇವತೆಗೆ ಒಂದು ಹಾಡು

  • ಡೆನಿಸ್ ಲೆವೆರಟಾವ್

ಚಂದ್ರ ಹಂದಿ,
ಅವಳು ಗುಟುರುವುದು ನನ್ನ ಗಂಟಲಿನಿಂದ
ನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆ
ಅಂತರಾಳದ ನನ್ನ ಕೆಸರು ಸಂಭ್ರಮಿಸಿ
ಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ

ನಾನು ಗಂಡು ಹಂದಿ
ಮತ್ತು ಕವಿ
ಅವಳು ತನ್ನ ಧವಳ ತುಟಿಗಳ ತೆರೆದು
ನನ್ನನ್ನು ನುಂಗಲೆಂದು ಅಗಲಿಸಿದಾಗ
ನಾನು ಅವನ್ನು ಕಚ್ಚಿಬಿಡುತ್ತೇನೆ
ಆಗ ಚಂದ್ರಲೋಕದಲ್ಲಿ ಹರ್ಷೋದ್ಘಾರ.

ಬಯಕೆಯ ನಿಶೆಯಲ್ಲಿ ನಾವಾಗ ತುಯ್ದಾಡುವುದು
ಗುಟುರುವುದು
ಗುಟುರುತ್ತಾ ಹೊಳೆಯುವುದು.

(Denis Levertov(೧೯೨೩-೧೯೯೭) ಅಮೆರಿಕಾದ ಈ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ನಾನು ೮೦ರ ದಶಕದಲ್ಲಿ ಬಾಸ್ಟನ್ ಟಿಪ್ಟ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ ಈಕೆ ತಮ್ಮ ಮನೆಯಲ್ಲಿ ಯುವಕ ಯುವತಿಯರಿಗೆ ಸತ್ಯಾಗ್ರಹ ಮಾಡುವುದು ಹೇಗೆ, ಹಿಂಸೆಗೆ ಪ್ರತಿಹಿಂಸೆ ಮಾಡದಂತೆ, ಜೀವನ ಪ್ರೀತಿ ಉತ್ಸಾಹ ಕಳೆಯದಂತೆ ಬದುಕುವುದು ಹೇಗೆ, ಪೊಲೀಸರ ಬಲಾತ್ಕಾರಕ್ಕೆ ಜಗ್ಗದಂತೆ ಕೂತಲ್ಲೇ ಕೂತಿರುವುದು ಹೇಗೆ ಇತ್ಯಾದಿಗಳನ್ನು ಕಲಿಸುವ ಶಾಲೆಯನ್ನು ನಡೆಸುತ್ತಿದ್ದರು. ಯೋಗ, ಹಾಡು, ಕವಿತೆ, ಕಥನ-ಇವೇ ಸತ್ಯಾಗ್ರಹ ಶಾಲೆಯ ಪಠ್ಯಗಳು, ಅಪ್ಪಟ ಗಾಂಧಿವಾದಿಯಾದ ಇವರು ಮಾರ್ಟಿನ್ ಲ್ಯೂಥರ್ ಕಿಂಗ್‌ನ ಚಳುವಳಿಯಲ್ಲೂ ವಿಯಟ್ನಾಂ ಮೇಲಿನ ಯುದ್ಧದ ವಿರೋಧಿಯಾಗಿಯೂ ತನ್ನ ಗಂಡನ ಜೊತೆ ಸಕ್ರಿಯರಾಗಿದ್ದವರು. ಇವರು ಯಾವ ಶಾಲೆಗೂ ಹೋಗದೆ, ಯಾವ ಡಿಗ್ರಿಯನ್ನು ಪಡೆಯದೆ ಸ್ವಾಧ್ಯಾಯನಿರತರಾಗಿ ಬೆಳೆದವರು. ತನ್ನ ಅನುಭಾವಿ ಅಪ್ಪನ ಮಾರ್ಗದರ್ಶನದಲ್ಲಿ ಬೆಳೆದ ಇವರು ರಾಜಕೀಯವಾಗಿ ಕ್ರಿಯಾಶೀಲರಾದರೂ, ಅವರ ಕಾವ್ಯ ಅನುಭಾವದ ನೆಲೆಯದು- ಘೋಷಣೆಯದಲ್ಲ. ನನ್ನ ಮೇಲೆ ವೈಯಕ್ತಿಕವಾಗಿ ತುಂಬ ಪ್ರಭಾವ ಬೀರಿದವರಲ್ಲಿ ಅಪ್ಪಟವಾದ ಸಂವೇದನಾಶೀಲರಾದ ನಿರ್ಭಯರೂ ನಿರಹಂಕಾರಿಯೂ ಆದ ಇವರೊಬ್ಬರು.)