ಅಶ್ವಿನಿ ತನ್ನ ಕತೆ ಬರೆದರೆ…

(ನಾನೊಂದು),
ಅದ್ವೈತದ ಪರಮಾವಸ್ಥೆಯ
ಬಿಂದೊಂದರ ಮಹಾಸ್ಫೋಟನೆಯೊಂದು
ಬ್ರಹ್ಮಾಂಡವಾಗರಳಿದ
ಈ ಮೊದಲಚ್ಚರಿಯ ಯಾವುದೊಂದೋ
ಬೆಚ್ಚನೆಯ ಮೂಲೆಯಲಿ
ಮುದುಡಿ ಕುಳಿತು
ಒಳಗೊಳಗೆ ಕುಸಿವ
ಅಪಾರ ಜಲಜನಕಾವೃತ
ತಿರುಗುಣಿ.

(ನಾ),
ಕುಗ್ಗಿದಂತೆಲ್ಲ ಮಿಕ್ಕುವುದು
ಒಳಗಿನಣುಗಳ
ಹಿಗ್ಗು,
ಮಿಲನ,
ಕಾಯಕ್ಕೆ ಕಾಯವುಜ್ಜುವ
ಸುಖ,
ಮುಕ್ತಪ್ರಣಯ,
ಪ್ರಾಣವಾಯು,
ಆವೇಗ,
ಕಾವೇರಿದ ವಾತಾವರಣ.
-ಹೀಲಿಯಂನ
ಜನನ.

ಗುರುತ್ವದ ಆಕುಂಚನಕ್ಕೆ
ಒತ್ತಡದ ವಿಕಸನದ
ವಿಲೋಮ ವಾದ,
ಸಮತೋಲನ ಸಾಧಿಸಿದಂದು,
ಈ ತಿರುಗುಣಿ
ಲಜ್ಜೆಯನು ಜೈಸಿದ
ತರುಣಿ-
ಮಿಣಿಗುಟ್ಟುವ ಮಣಿ.

ಅನಂತಾನಂತವಾಗಿ
ಮಹಾತಾರೆಯಾಗುಳಿವ
ಹಿರಿದಾಸೆಯೇನೋ ಸರಿ-
ಅರಿತಿಲ್ಲವೆ ಇದರ
ಕ್ಷಣಿಕತೆ?
ಈ ಬೆಡಗು ಉರಿ
ಅಬ್ಬಬ್ಬಾ ಅಂದರೆ
ಇನ್ನೆರಡು ಕೋಟಿಕೋಟಿ-
ಅಬ್ದಗಳಾನಂತರ
ಸ್ತಬ್ಧವೆಲ್ಲಾ!
ಎಲ್ಲ ಉರುವಲಾರಿ.

ಒತ್ತಡದಾಸರೆಯಿಲ್ಲದೇ
ಗುರುತ್ವದ ಸೆಳೆತವೊಂದೇಯುಳಿದು
ಮತ್ತೇ ಕುಸಿತವೇ
ಗತಿಯಾದಾಗ
ಕಿಕ್ಕಿರಿದು ತುಂಬಿ,
ಉಸಿರ್ಗಟ್ಟಿ ವಿದ್ಯುದಾಣುಗಳು
ಎಡೆಗಾಗಿ ಹೊಡೆದಾಡಿ
ತಡೆಯೊಡ್ಡಿದರೆ,
’ಶ್ವೇತಕುಬ್ಜೆ’ ಎಂಬ
ಮುದ್ದು ಅಭಿಧಾನ.

ಇಲ್ಲವಾದಲ್ಲಿ-
ಶೂನ್ಯದಲಿ ಅಂತ್ಯ.
ಅಪರಿಮಿತ ಸಾಂದ್ರತೆ
ಗುರುತ್ವತೆಯ (ಎನಗೆ)
’ಕಪ್ಪು ರಂಧ್ರ’ಎಂಬಂತೆ
ಕಳಂಕಿತೆ.
ಸಮಯಾಯಾಮಗಳ
ಹತ್ಯೆಗೈದ,
ಏನನ್ನೂ,
ಬೆಳಕನ್ನೂ,
ನುಂಗೇನೆಂಬ ಪುಟ್ಟದೈತ್ಯೆ
ಎಂಬ ಅನನ್ಯತೆ.
*****
೨೩ ಮಾರ್ಚ್ ೧೯೯೮

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.