ಯುದ್ಧ ಬಂದಿತು ಸಿದ್ಧರಾಗಿರಿ
ಇಂದೆ ಸೀಮೋಲ್ಲಂಘನ!
ಪೂರ್‍ವ-ಪಶ್ಚಿಮ, ದಕ್ಷಿಣೋತ್ತರ
ನೀಡಿ ಹಸ್ತಾಂದೋಲನ.
‘ಮಾಡು ಇಲ್ಲವೆ ಮಡಿಯಿರೆ’ನ್ನುತ
ಎಂತು ಬಿಡುಗಡೆ ಪಡೆದೆವು-
ನಾಡ ಕಟ್ಟುತ ಬೆವರು ಹರಿಯಿಸಿ
ದೂರ ಗುರಿಯೆಡೆ ನಡೆದೆವು.
ಬಂತು ಉತ್ತರದಿಂದ ಹತ್ತಿರ
ಹಳದಿ ಮಿಡಿತೆಯ ಹಾವಳಿ.
ಏಳಿ ಎಚ್ಚರಿ, ಬೆಂಕಿ ಹಚ್ಚಿರಿ
ತಿಂದು ದಕ್ಕಿಸಿಕೊಳ್ಳಲಿ.
ದೂರ ದಿಕ್ಕಿನ ಅಂಚಿಗಿದೆ ಹೊಸ
ಹೊಂಚು ಹಾಕಿದ ಜೇಡವು;
ಮಿಂಚುತಿದೆ ಆಗೀಗ, ಇರುಳಿಗೆ
ಏರಿ ಬರಲಿವೆ ಮೋಡವು.
ಇರುವೆ-ಗುದ್ದನು ಮೆಟ್ಟಿ, ಮಾಳಿಗೆ
ಸೋರದಂತೆಯೆ ತಡೆಯಿರಿ.
ಆ ಹಿಮಾಲಯ ಕೋಟೆ ಬಾಗಿಲು
ಅಲ್ಲಿ ಬಾವುಟ ಹಿಡಿಯಿರಿ.
ನಮ್ಮ ನೆಲವಿದು, ನಮ್ಮ ಹೊಲವಿದು
ನಮ್ಮ ನೆತ್ತರು ಬಿಡುಗಡೆ;
ನಮ್ಮ ತಾಯಿಯ ಪಾದಧೂಳಿಯು
ನಮ್ಮ ಪ್ರಾಣದ ನಿಲುಗಡೆ.
ಹಿಡಿದ ಕಾಯಕ ನಿಷ್ಠೆ ನಡತೆಗೆ
ಒಟ್ಟು ನಾಡಿನ ಒಕ್ಕಲು,
ಎಲ್ಲ ಶಕ್ತಿಯ ಝರಿ ತೊರೆಗಳಾ-
ರ್‍ಭಟಿಸಿ ಸಾಗರವುಕ್ಕಲು,
ಆಕ್ರಮಣ! ಮೈಸೊಕ್ಕು ಮುರಿಯಲಿ
ಒಕ್ಕೊರಲು ಒಂದಾಗಿರಿ;
ಕೊನೆಯ ರಕ್ತದ ಹನಿಯವರೆಗೂ
ಹೋರಿ ಗೆಲ್ಲುವೆವೆನ್ನಿರಿ.
ಶಿವನ ತಪಸಿಗೆ ಭಂಗ ಬಂದರು
ನವ ಕುಮಾರನ ಸಂಭವ-
ತಾರಕಾಸುರ ವಧೆಯು ಕಾದಿದೆ
ಭರತಕುಲ ವಿಜಯೀಭವ
*****
