ಜಾಮೀನು ಸಾಹೇಬ

-೧-

ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು ಪರೀಕ್ಷೆಯನ್ನು ದಾಟಿ, ಹುಬ್ಬಳ್ಳಿ ಕೊಲ್ಹಾಪುರ ಮುಂಬಯಿ ಅಂತೆಲ್ಲೋ ಹೋಗಿ ನೌಕರಿ ಹಿಡಿದು ರಜೆಯಲ್ಲಿ ಊರಿಗೆ ಬಂದು ಬೇಸಿಕ್, ಡಿ. ಎ. ಪಿ.ಎಲ್, ಸಿಎಲ್, ಊಟಕ್ಕೊಂದು ತೊಂದರೆ – ಬಾಕಿ ಎಲ್ಲ ಅಡ್ಡಿಲ್ಲ ಎಂದು ಮಾತಾಡಿಕೊಳ್ಳುವುದನ್ನು ಕಂಡಾಗ ತಾನೂ ಒಂದು ನೌಕರಿ ಹಿಡಿಯಬೇಕೆನಿಸುತ್ತಿತ್ತು. ಅವರಿವರಲ್ಲಿ ಹೋಗಿ ನೌಕರಿಗೆ ವಶೀಲಿ ಹಚ್ಚಲು ನೋಡಿದ. ಮೊದಲು ನೀನು ಬಿ. ಎ. ಮುಗಿಸು, ಆಮೇಲೆ ಖಂಡಿತ ಏನಾದರೂ ಮಾಡುವಾ ಎಂದು ಅವರೆಲ್ಲ ಮೂಗಿಗೆ ತುಪ್ಪ ಹಚ್ಚಿ ಕಳಿಸಿದರು. ದಯಾನಂದನ ಅಪ್ಪ ಕಮಲಾಕರ ಒಂದು ಕಾಲದಲ್ಲಿ ಕಾರವಾರದಲ್ಲೇ ಪ್ರಸಿದ್ಧಿ ಪಡೆದಿದ್ದ ಜವಳಿ ಅಂಗಡಿಯ ಮಾಲೀಕನಾಗಿದ್ದ. ಬಂದವರಿಗೆ ಹೋಗುವ ರಸ್ತೆಯಲ್ಲಿ, ಬಸ್ ಸ್ಟ್ಯಾಂಡಿನ ಪಕ್ಕ ಅವನ ಅಂಗಡಿ. ಅಸುಪಾಸಿನ ಹಳ್ಳಿಗಳಿಂದಲೂ ಜನ, ಮದುವೆಯ ಜವಳಿ ಖರೀದಿಗೆ ಕಮಲಾಕರನ ಅಂಗಡಿಗೇ ಬರುತ್ತಿದ್ದರು. ಕಮಲಾಕರ ಎರಡು ಮೂರು ಸಲ ಮುಂಬೈಗೆ ಹೋಗಿ ತರಿಸಬೇಕಾದ ಜವಳಿಯನ್ನು ಸ್ವತಃ ನೋಡಿ ಬೆಲೆ ನಿರ್ಧರಿಸಿ ಮುಂಗಡ ಕೊಟ್ಟು ಬರುತ್ತಿದ್ದ. ಮಳೆಗಾಲ ಶುರುವಾಗುವ ಸ್ವಲ್ಪ ಮೊದಲೇ ಬಗೆಬಗೆಯ ಕೊಡೆಗಳು ಅಂಗಡಿಯಲ್ಲಿ ಮಾರಟಕ್ಕಿರುತ್ತಿದ್ದವು. ಕೊಡೆಗಳು ಮಾರಾಟಕ್ಕೆ ಬಂದದ್ದೇ, ಪಕ್ಕದ ಅಂಗಡಿಯ ಸೊನೆಗಾರ ಮೋಹನ, ಬೆಳ್ಳ್ಯ ಬಣ್ಣದಲ್ಲಿ ಕೊಡೆಗಳ ಒಳಗೆ ಹೆಸರು ಬರೆದುಕೊಡುವ ಧಂದೆ ನಡೆಸುತ್ತಿದ್ದ.
ಹೀಗೆ ಭರಭರಾಟೆಯಲ್ಲಿ ನಡೆಯುತ್ತಿದ್ದ ಅಂಗಡಿ ಕಮಲಾಕರನ ಕಣ್ಣೆದುರಿಗೇ ಜೀವ ಕಳಕೊಳ್ಳುತ್ತ ಬಂತು. ಜವಳಿ ತರಿಸಲು ಕಮಲ್ಲಕರ ತನ್ನ ತಮ್ಮಂದಿರನ್ನು ಮುಂಬೈಗೆ ಕಳಿಸತೊಡಗಿದ ಮೇಲೆ, ತಮ್ಮಂದಿರನ್ನು ಗಲ್ಲೆಯಲ್ಲಿ ಕೂರಿಸಿ ಕಮಲಾಕರ ಕಾಮತ ಮಾಸ್ತರರ ಗುಂಪಿನಲ್ಲಿ ಇಸ್ಪೀಟು ಆಟಕ್ಕೆ ಇಳಿದ ಮೇಲೆ, ಯಾವುಯಾವುದೋ ಊರುಗಳಿಂದ ಕಾರವಾರಕ್ಕೆ ಡೈರೆಕ್ಟ್ ಬಸ್ಸುಗಳಾಗಿ, ಬರುವ ಬಸ್ಸುಗಳಿಗೆ ಜಾಗ ಸಾಲದು ಅಂತ ಕಮಲಾಕರನ ಅಂಗಡಿಯ ಪಕ್ಕದಲ್ಲಿದ್ದ ಬಸ್ಟ್ಯಾಂಡನ್ನು ಊರಿನ ಇನ್ನೊಂದು ಭಾಗಕ್ಕೆ ವರ್ಗಾಯಿಸಿದ ಮೇಲೆ…. ಅಂಗಡಿಯ ದೆಸೆ ಬದಲಾಗತೊಡಗಿತು. ಬಸ್‌ಸ್ಟ್ಯಾಂಡಿನ ಜೊತೆಗೇ ಪೇಟೆಯ ಆತ್ಮವೂ ವರ್ಗಾವಣೆಯಾಯಿತೆಂಬಂತೆ ಪೇಟೆ ಹೊಸ ಬಸ್‌ಸ್ಟ್ಯಾಂಡಿನ ದಿಕ್ಕಿನಲ್ಲೇ ಬೆಳೆಯತೊಡಗಿತು. ಅಲ್ಲಿ ಹೊಸದಾಗಿ ಅಂಗಡಿ ಹಾಕಿದವರು ದೀಪಗಳನ್ನು ಹಾಕಿ ಝಗಝಗಿಸುವಂತೆ ಮಾಡಿದರು. ಸದಾ ಜನರಿಂದ ತುಂಬಿರುತ್ತಿದ್ದ ಹಳೆಯ ಪೇಟೆ ಥಟ್ಟನೆ ಖಾಲಿಯಾಗಿಬಿಟ್ಟಿತು. ಬೇರೆ ಅಂಗಡಿಗಳಲ್ಲೂ ಕೊಡೆಗಳು ಸಿಗತೊಡಗಿದವು. ಆ ಮಳೆಗಾಲದಲ್ಲಿ ಕಮಲಾಕರನ ಅಂಗಡಿಯಲ್ಲಿ ಬರೀ ನಲವತ್ತು ಕೊಡೆಗಳು ಮಾತ್ರ ಮಾರಾಟವಾಗಿ ಇನ್ನು ಅರವತ್ತು ಹಾಗೆಯೇ ಉಳಿದವು. ಅದೇ ರೀತಿಯ ಕೊಡೆಗಳು ಬೇರೆ ಅಂಗಡಿಗಳಲ್ಲಿ ಮೂರು ರೂಪಾಯಿ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಹೀಗೆ ಅಂತ ಕಾರಣ ಗೊತ್ತಾಗುವ ಮೊದಲೇ ಕಮಲಾಕರ ದಿವಾಳಿ ಎದ್ದು ಹೋಗಿದ್ದ. ಎಷ್ಟು ಉದ್ರಿ ಇದೆ, ಎಷ್ಟು ವಸೂಲಾಗಿದೆ ಎಂಬ ಲೆಕ್ಕ ಪತ್ರಗಳೇ ಸಿಗಲಿಲ್ಲ. ಮತ್ತೆ ಜವಳಿ ಖರೀದಿಸುವುದಿರಲಿ, ತರಿಸಿದ ಬಟ್ಟೆಗಳ ಬಾಕಿ ತೀರಿಸುವುದಕ್ಕೂ ದುಡ್ಡಿಲ್ಲದೇ ಇದ್ದ ಬಟ್ಟೆಗಳನ್ನೆಲ್ಲ ಹೇಗೋ ಮಾರಿ ಹಣ ತೀರಿಸಬೇಕಾಯಿತು. ಬಣ್ಣ ಬಣ್ಣದ ಬಟ್ಟೆಗಳಿಂದ, ಪೇರಿಸಿಟ್ಟ ಸೀರೆಗಳಿಂದ ತುಂಬಿರುತ್ತಿದ್ದ ಗಾಜಿನ ಕಪಾಟುಗಳೆಲ್ಲ ಖಾಲಿ ಉಳಿದವು. ಬಟ್ಟೆಗಳನ್ನು ಸುತ್ತಿಡಲು ಉಪಯೋಗಿಸಿದ ಆಯತಾಕಾರದ ರಟ್ಟುಗಳು, ಕಟ್ಟಿಗೆಯ ಉರುಟಾದ ಉದ್ದ ಕೋಲುಗಳು ಮಾತ್ರ ಅಂಗಡಿಯ ಮೂಲೆಯಲ್ಲಿ ರಾಶಿಯಾದವು. ಜವಳಿ ವ್ಯಾಪಾರ ನಿಲ್ಲಿಸಿ ಅಂಗಡಿಯ ಒಂದು ಭಾಗದಲ್ಲಿ ತೆಂಗಿನಕಾಯಿಗಳನ್ನು ಇಟ್ಟು ಮಾರುವ ಸ್ಥಿತಿಗೆ ಕಮಲಾಕರ ಬಂದ. ಇದಕ್ಕೆಲ್ಲ ಅಣ್ಣನನ್ನೇ ದೂರುತ್ತ ಇಬ್ಬರೂ ತಮ್ಮಂದಿರು ಆಸ್ತಿಯನ್ನು ಪಾಲು ಮಾಡಬೇಕೆಂದು ಕೂತರು. ಪಾಲು ಮಾಡಿ ಇದ್ದದ್ದನ್ನೂ ಕಳಕೊಳ್ಳಲು ತಯಾರಿಲ್ಲದ ಕಮಲಾಕರ ಒಲ್ಲೆನೆಂದು ಕೂತ. ಇಂಥ ಒಂದು ಜಗಳವನ್ನೇ ನೆಪ ಮಾಡಿಕೊಂಡು ಕಮಲಾಕರನ ತಮ್ಮಂದಿರು ಪೋಲೀಸರ ಜೊತೆ ಶಾಮೀಲಾಗಿ ಸುಳ್ಳು ಸಾಕ್ಷಿ ಕೊಡಿಸಿ ತಮ್ಮ ಮೇಲೆ ಹಲ್ಲೆ ಮಾಡಿದನೆಂದು ದೂರು ದಾಖಲಿಸಿದರು. ಪೋಲೀಸರು ಬಂದು ಕಮಲಾಕರನನ್ನು ಠಾಣೆಗೆ ಕರೆದೊಯ್ದು ರಾತ್ರಿಯಿಡೀ ಅಲ್ಲೇ ಕೂಡಿಹಾಕಿದರು. ಇದೆಲ್ಲ ಈ ವಿಪರೀತಕ್ಕೆ ಹೋಗುತ್ತದೆಂದು ಅಂದುಕೊಂಡಿರದ ದಯಾನಂದ ಮತ್ತು ಅವನ ಅಮ್ಮ ಕಾಮಾಕ್ಷಿ ಕಂಗಾಲಾದರು. ನಿದ್ದೆಯಿಲ್ಲದ, ಕಳವಳ ತುಂಬಿದ ಆ ರಾತ್ರಿ ಕಳೆದು ಬೆಳಗಾದದ್ದೇ ಇಬ್ಬರೂ ನಾಯಕ ವಕೀಲರ ಮನೆಗೆ ಹೋದರು. ಅವರು ದಯಾನಂದನನ್ನು ಕರಕೊಂಡು ಠಾಣೆಗೆ ಹೋಗಿ ದಯಾನಂದನನ್ನು ಜಾಮೀನು ನಿಲ್ಲಿಸಿ ಕಮಲಾಕರನನ್ನು ಬಿಡಿಸಿದರು.
ಅಣ್ಣ ತಮ್ಮಂದಿರ ಜಗಳದಲ್ಲೀಗ ದಯಾನಂದನೂ ಸೇರಿಕೊಂಡುಬಿಟ್ಟಿದ್ದ. ಊರಿನ ಪಂಚರು ಮಧ್ಯಸ್ಥಿಕೆ ವಹಿಸಿ ಕಮಲಾಕರನ ತಮ್ಮಂದಿರಿಗೆ ಬುದ್ಧಿ ಹೇಳಲು ನೋಡಿದರು. “ಸರಿ ತಪ್ಪುಗಳ ಪ್ರಶ್ನೆಗಳೆಲ್ಲ ಕೋರ್ಟಿನಲ್ಲಿ ಕಾನೂನಿನ ಪ್ರಕಾರವೇ ಇತ್ಯರ್ಥವಾಗಲಿ….” ಎಂದು ಇಬ್ಬರೂ ತಮ್ಮಂದಿರು ಪಟ್ಟು ಹಿಡಿದರು. ಅವರ ಕ್ರೌರ್ಯ ಕಂಡು ದಯಾನಂದನ ಮೈ ಉರಿಯಿತು. “ಹೊಡೆದಿದ್ದೇವೆಂದು ದೂರು ಕೊಟ್ಟಿದ್ದೀರಲ್ಲ…. ಅದೂ ಆಗೇ ಬಿಡಲಿ….” ಎಂದು ಬಚ್ಚಲು ಒಲೆಗೆಂದು ಇಟ್ಟಿದ್ದ ಸೌದೆಯನ್ನೆತ್ತಿಕೊಂಡು ಚಿಕ್ಕಪ್ಪನನ್ನು ಹೊಡೆಯಲು ಹೊರಟ. ಎಲ್ಲವೂ ಕೈಮೀರಿ ಹೋಗುತ್ತಿರುವಂತೆ ಅನಿಸಿ, ಪೋಲೀಸರ ಜೊತೆಯೂ ಸಾಕಷ್ಟು ಹೆಣಗಾಡಿ ಹೈರಾಣಾಗಿ ಕಮಲಾಕರ ಪಾಲು ಮಾಡಲು ಒಪ್ಪಿದ. ಆಸ್ತಿಯೆಲ್ಲ ಮೂರು ಪಾಲಾಗಿ ಹೋಯಿತು. ಕಮಲಾಕರ ಕುಲಕರ್ಣಿಯ ಮನೆ ಅಂತ ಇದ್ದ ಅಂಚೆ ವಿಳಾಸ ಕುಲಕರ್ಣಿ ಕಂಪೌಂಡ್ ಎಂದು ಬದಲಾಯಿತು. ಮನೆಯನ್ನು ತನ್ನ ಪಾಲಿಗೆ ಇಟ್ಟುಕೊಂಡಿದ್ದರಿಂದ ಮನೆಯ ಪಕ್ಕದ ದೊಡ್ಡ ಜಾಗವನ್ನು ಕಮಲಾಕರ ತಮ್ಮಂದಿರಿಗೆ ಬಿಟ್ಟುಕೊಡಬೇಕಾಯಿತು. ಅಲ್ಲೇ ಅವರು ಸಣ್ಣ ಸಣ್ಣ ಮನೆಗಳನ್ನು ಕಟ್ಟಿಸಿಕೊಂಡರು. ತನಗೆ ತಿನ್ನಲಿಕ್ಕೇ ದುಡ್ಡಿಲ್ಲದಿರುವಾಗ ಇವರಿಗೆ ಮನೆ ಕಟ್ಟಲು ದುಡ್ಡು ಎಲ್ಲಿಂದ ಬಂತೆಂದು ಕಮಲಾಕರ ಯೋಚಿಸಲು ಹೋಗಲಿಲ್ಲ. ತನ್ನ ಪಾಲಿಗೆ ಬಂದ ಅಂಗಡಿಯ ಭಾಗದಲ್ಲಿ ತೆಂಗಿನಕಾಯಿ ವ್ಯಾಪಾರ ಮುಂದುವರಿಸಿದ. ಅವನಿಗೊಂದು ರೀತಿಯ ವೈರಾಗ್ಯ ಬಂದುಬಿಟ್ಟಿತ್ತು. ಹೀಗಾಗಿ ಒಬ್ಬನೇ ಮಗನಾದ ದಯಾನಂದನ ಮೇಲೆಯೇ ಕುಟುಂಬದ ಭಾರ ಬಿತ್ತು.

-೨-

ಬಿ. ಎ. ಪಾಸು ಮಾಡಲಿಕ್ಕಾಗದಿದ್ದರೂ ದಯಾನಂದ ನಿಷ್ಪ್ರಯೋಜಕನಾಗಿರಲಿಲ್ಲ. ಅಂಗಡಿಯ ನಾಲ್ಕು ತೆಂಗಿನಕಾಯಿ ಇಟ್ಟುಕೊಂಡರೆ ಜೀವನ ನಡೆಸುವುದು ಸಾಧ್ಯವಿಲ್ಲ ಎಂದು ಅವನಿಗೆ ಅಪ್ಪನಿಗಿಂತ ಮೊದಲೇ ಗೊತ್ತಾಗಿತ್ತು. ಅಂಗಡಿಯನ್ನು ನಡೆಸಿಕೊಂಡು ಹೋಗುವುದರ ಜೊತೆಗೆ, ನೀರಾ ಮಾರುವುದನ್ನೂ ಶುರುಮಾಡಿದ. ಮುಂಜಾನೆ ಇನ್ನೂ ಬೆಳಕು ಬೀಳುವ ಮುನ್ನವೇ ಎದ್ದು ನೀರಾ ಇಳಿಸುವಲ್ಲಿ, ಒಂದು ದೊಡ್ಡ ಮಡಕೆ ತುಂಬ ನೀರಾ ಕೊಂಡು, ಸೈಕಲ್ ಕ್ಯಾರಿಯರ್‌ಗೆ ಅದನ್ನು ಕಟ್ಟಿ, ಹಾಯ್‌ವೇಗೆ ಹೋಗಿ ಅಲ್ಲಿ ನಿಂತು ಅದನ್ನು ಮಾರುತ್ತಿದ್ದ. ಮನೆತನಕ್ಕೆ ಅಷ್ಟು ಗೌರವ ತರುವ ಧಂದೆ ಅಲ್ಲವಾದ್ದರಿಂದ, ಬೆಳಗಿನ ಜಾವ ಏಳುಗಂಟೆಯ ಮೊದಲೇ ವ್ಯಾಪಾರ ಮುಗಿಸಿ ಮನೆಗೆ ಬರಲು ಸಾಧ್ಯವಾಗುವುದು ಅನುಕೂಲವೇ ಆಗಿತ್ತು. `ಇಲ್ಲಿ ನೀರಾ ಸಿಗುತ್ತದೆ’ ಎಂದು ಬರೆದ ಹಲಗೆಯನ್ನು ರಸ್ತೆಯ ಪಕ್ಕ ಇಟ್ಟು, ಅಲ್ಲೇ ಮರದ ಕೆಳಗಡೆ ಸೈಕಲ್ ನಿಲ್ಲಿಸಿ ಕೂತುಬಿಡುತ್ತಿದ್ದ. ಐದಾರು ಕಾರುಗಳು ನಿಂತರೂ ಸಾಕು ದಿನದ ವ್ಯಾಪರವಾಗಿ ಬಿಡುತ್ತಿತ್ತು. ಗಿರಾಕಿಗಳನ್ನು ನೋಡಿ ಬೆಲೆ ಹೇಳುತ್ತಿದ್ದುದರಿಂದ ಕೆಲವು ಸಲ ಹೆಚ್ಚು ದುಡ್ಡು ಸಿಗುತ್ತಿತ್ತು.
ಇಂಥ ಒಂದು ಮುಂಜಾವಲ್ಲಿ ದಯಾನಂದ ವ್ಯಾಪಾರ ಮುಗಿಸಿ ಮನೆಗೆ ಹೊರಡುವ ಹೊತ್ತಿಗೆ ಕಾರವಾರದ ಕಡೆಯಿಂದ ಬಂದ ಕಾರೊಂದು ಅಪಘಾತಕ್ಕೀಡಾಯಿತು. ಸೈಕಲಿನ ಮೇಲೆ ಸೀಯಾಳ ಹೇರಿಕೊಂಡು ಬರುತ್ತಿದ್ದವನೊಬ್ಬ ಬೀಳುವುದಕ್ಕೂ, ಹಿಂದಿನ ತಿರುವಿನಿಂದ ಕಾರು ಬರುವುದಕ್ಕೂ ಸರಿಹೋಗಿ ಅವನಿಗೆ ಢಿಕ್ಕಿ ಹೊಡೆಯಿತು. ಅವನ ಮೇಲೆ ಕಾರು ಹಾಯದಿದ್ದರೂ ಅವನಿಗೆ ಸ್ವಲ್ಪ ಪೆಟ್ಟಾಗಿಬಿಟ್ಟಿತು. ದಯಾನಂದ ತಕ್ಷಣ ಅವನ ನೆರವಿಗೆ ಧಾವಿಸಿದ. ಕಾರಿನಲ್ಲಿದ್ದವರು ನಾಲ್ಕುಜನ – ವಯಸ್ಸಾದ ದಂಪತಿಗಳು, ಅವರ ಮಗ ಮತ್ತು ಸೊಸೆ. ಕೊಲ್ಹಾಪುರದವರಂತೆ. ಗೋವಾಕ್ಕೆ ಹೋಗಿ ಅಲ್ಲಿಂದ ಮಂಗಳೂರಿಗೆ ಹೊರಟಿದ್ದರು. ದಯಾನಂದನ ಸಹಾಯದಿಂದ ಸೈಕಲ್ಲನ್ನೂ ಸೀಯಾಳಗಳನ್ನೂ ಬದಿಗೆ ಎತ್ತಿಟ್ಟು, ದಯಾನಂದನನ್ನೂ ಜೊತೆಗೆ ಕರಕೊಂಡು ಸೀದಾ ಸರಕಾರಿ ಆಸ್ಪತ್ರಗೆ ಹೋದರು. ಅಪಘಾತವಾದ್ದರಿಂದ ಆಸ್ಪತ್ರೆಯವರು ಪೋಲೀಸರಿಗೆ ತಿಳಿಸಿ ಅವರು ಬಂದು ಕೇಸು ಹಾಕಿದ್ದೂ ಆಯಿತು. ದಯಾನಂದ ಮತ್ತೆ ಮರಳಿ ತಾನು ನೀರಾ ಮಾರುತ್ತಿದ್ದ ಜಾಗಕ್ಕೆ ಬಂದು ಸೈಕಲ್ಲನ್ನೇರಿ ಮನೆಗೆ ಬರುವಷ್ಟರಲ್ಲಿ ಮಧ್ಯಾಹ್ನವಾಗಿ ಬಿಟ್ಟಿತು.
ಆ ದಿವಸ ಸಂಜೆ ದಯಾನಂದ ಏನೋ ಕೆಲಸಕ್ಕೆ ಆಸ್ಪತ್ರೆಯತ್ತ ಹೋದವನು ಕುತೂಹಲದಿಂದ ಸೀಯಾಳದವನನ್ನು ನೋಡಲು ಹೋದ. ಅವನಿಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ. ಆದರೂ ಡಾಕ್ಟರರು ಕಾದು ನೋಡೋಣ ಏನಾಗುತ್ತದೋ ಏನೋ ಎಂದು ಹೆದರಿಸಿದ್ದರು. ದಿನವಿಡೀ ಊಟ ತಿಂಡಿಯಿಲ್ಲದೇ ಪೋಲೀಸರ ಕಾಟದಿಂದ ಬಸವಳಿದು ಸೊಸೆಯ ಜೊತೆ ಇನ್ನೂ ಅಲ್ಲೇ ಕೂತ ಮುದುಕ – ಮುದುಕಿಯರನ್ನು ನೋಡಿ ದಯಾನಂದನಿಗೆ ಪಾಪ ಅನಿಸಿತು. ಕಾರು ನಡೆಸುತ್ತಿದ್ದ ಮಗನನ್ನು ಪೋಲೀಸರು ಕರೆದೊಯ್ದು ಟಾಣೆಯಲ್ಲಿ ಕೂರಿಸಿದ್ದರು. ಅವರಿಗೆ ಮರಾಠಿ ಬಿಟ್ಟರೆ ಬೇರೆ ಯಾವ ಭಾಷೆಯೂ ಸರಿಯಾಗಿ ಬರುತ್ತಿರಲಿಲ್ಲ. ತಮ್ಮ ಮಗನನ್ನು ಹೇಗಾದರೂ ಬಿಡಿಸಿಕೊಟ್ಟರೆ ಅವನ ಜೊತೆ ಕೊಲ್ಹಾಪುರಕ್ಕೆ ಹೋಗಿ ಗಾಯಗೊಂಡವನಿಗೆ ದುಡ್ಡಷ್ಟೇ ಅಲ್ಲ ಬೇರೆ ಯಾವ ಸಹಾಯದ ವ್ಯವಸ್ಥೆಯನ್ನಾದರೂ ಮಾಡುತ್ತೇನೆ ಎಂದು ಗೋಗರೆದರು. ದಯಾನಂದನಿಗೆ ತಾವೇನಾದರೂ ಮಾಡಬೇಕು ಅನ್ನಿಸಿ ಸೀದಾ ನಾಯಕ ವಕೀಲರ ಮನೆಗೆ ಹೋಗಿ ಅವರನ್ನು ಕರೆದುಕೊಂಡು ಪೋಲೀಸ್ ಠಾಣೆಗೆ ಹೋಗಿ, ವಕೀಲರ ಸಲಹೆಯಂತೆ ತಾನೇ ಜಾಮೀನು ನಿಂತು, ಕಾರು ನಡೆಸುತ್ತಿದ್ದವನನ್ನು ಬಿಡಿಸಿಕೊಂಡು ಬಂದ. ಪೋಲೀಸರು ಎತ್ತಿದ ಪ್ರಶ್ನೆಗಳಿಗೆಲ್ಲ ನಾಯಕರು ಕಾನೂನಿನ ಉತ್ತರ ಕೊಟ್ಟರು. ಈ ಪ್ರಕರಣದಲ್ಲಿ ಎಷ್ಟು ದುಡ್ಡು ತಿನ್ನಬಹುದೆಂದು ಲೆಕ್ಕ ಹಾಕುತ್ತಿದ್ದ ಪೋಲೀಸರಿಗೆ ಇದರಿಂದ ಹೊಟ್ಟೆ ಉರಿಯಿತು. ಅವನನ್ನು ಜಾಮೀನಿನ ಮೇಲೆ ಬಿಡುವಾಗ ಪಿ. ಎಸ್. ಐ. ದಯಾನಂದನಿಗೆ “ಜಾಮೀನು ನಿಲ್ಲುವದೆಂದರೆ ಏನಂತ ಗೊತ್ತುಂಟಲ್ಲ…. ಅವನೇನಾದರೂ ಪರಾರಿಯಾಗಲಿ…. ನಿನ್ನನ್ನು ಒದ್ದು ಒಳಹಾಕುತ್ತೇನೆ….” ಅಂದ. ಅದನ್ನು ಕೇಳಿ ದಯಾನಂದನಿಗೆ ಅಪಘಾತದ ಭಾರವನ್ನು ಯಾವುದೋ ಹುಂಬತನದಲ್ಲಿ ತಾನೇ ಹೊತ್ತುಕೊಂಡಂತೆ ಅನಿಸಿತು. ಮಗನನ್ನು ನೋಡಿ ವೃದ್ಧ ದಂಪತಿಗಳು ಕ್ರುತಜ್ಞತೆಯಿಂದ ಕಣ್ಣೀರು ತುಂಬಿಕೊಂಡರು.
ಹೇಳಿದ ಮಾತಿನಂತೆ ಎರಡು ದಿನಗಳಲ್ಲೇ ಅವರಲ್ಲ ಇನ್ನೂ ಮೂರು ಜನರ ಜೊತೆ ಒಬ್ಬ ವಕೀಲರನ್ನೂ ಕರಕೊಂಡು ವಾಪಸು ಬಂದರು. ಸೀಯಾಳದವನು ಸರಿಹೋಗುತ್ತಲಿದ್ದ. ಅವರು ಅವನಿಗೆ ಸಾಕಷ್ಟು ದುಡ್ಡು ಕೊಟ್ಟರು. ಮೇಲೆ ಪೋಲೀಸರಿಗೂ ತಿನ್ನಿಸಿದರೋ ಏನೋ ಅಂತೂ ಎಲ್ಲ ಸುರಳೀತ ಮುಗಿದು ಹಿಂತಿರುಗಿ ಹೋಗುವಾಗ ದಯಾನಂದನ ಅಂಗಡಿಗೆ ಬಂದು ಒಂದು ಲಕೋಟೆ ಕೊಟ್ಟರು. ಅದರಲ್ಲಿ ದುಡ್ಡು ಇಟ್ಟಿರಬಹುದೆಂದು ಊಹಿಸಿದ ದಯಾನಂದ ಬೇಡವೆಂದ. `ದೇವರ ಹಾಗೆ ಬಂದು ನಮ್ಮ ಮಾನ ಉಳಿಸಿದೆ’ ಎಂದು ಒತ್ತಾಯಿಸಿ ಕೊಟ್ಟರು. ದಯಾನಂದ ಮನೆಗೆ ಬಂದು ನೋಡಿದರೆ ಅದರಲ್ಲಿ ಒಂದು ಸಾವಿರ ರೂಪಾಯಿಗಳಿದ್ದವು. ಯಾರಿಗೂ ಆ ಬಗ್ಗೆ ಹೇಳದೇ ದುಡ್ಡು ಇಟ್ಟುಕೊಂಡ. ಸಹಾಯವನ್ನು ದುಡ್ಡಿನಲ್ಲಿ ಅಳೆದಂತೆ ಅನ್ನಿಸಿ ಒಳಗೆಲ್ಲೋ ಕಿರಿಕಿರಿಯಾದರೂ ಗಳಿಕೆಯ ದಾರಿಗಳನ್ನೇ ಹುಡುಕುತ್ತಿದ್ದವನಿಗೆ ಥಟ್ಟನೆ ಕೈಗೆ ಬಂದ ಸಾವಿರ ರೂಪಾಯಿ ಮನಸ್ಸಿನ ಸ್ಥಿಮಿತವನ್ನೇ ಏರುಪೇರು ಮಾಡಿತ್ತು. ಈ ದುಡ್ಡನ್ನೇ ಉಪಯೋಗಿಸಿ ಅಂಗಡಿಯಲ್ಲಿ ತೆಂಗಿನಕಾಯಿಗಳ ಜೊತೆಗೆ ಬಾಳೆಗೊನೆ, ಪೆಪ್ಪರಮೆಂಟು, ಚಾಪುಡಿ, ಸಿಗರೇಟು ಇಟ್ಟ. ಏನೇ ಇಟ್ಟರೂ ಈ ಸಣ್ಣ ಪುಟ್ಟ ವಸ್ತುಗಳಿಂದ ಸಿಗುವ ಲಾಭ ಅಷ್ಟರಲ್ಲೇ ಇದ್ದುದರಿಂದ ಅವನ ಆರ್ಥಿಕ ಸ್ಥಿತಿಯಲ್ಲಿ ಅಂಥ ಬದಲಾವಣೆಯೇನೂ ಆಗಲಿಲ್ಲ. ಮೊದಲಿನಂತೆ ನೀರಾ ಮಾರುವದೇನೂ ತಪ್ಪಲಿಲ್ಲ.
ಇದಾದ ಕೆಲವು ದಿನಗಳ ನಂತರ ದಯಾನಂದನ ಕ್ಲಾಸ್‌ಮೇಟ್ ಆಗಿದ್ದ ಉಮೇಶ ಪೋಲೀಸು ಕೆಲಸಕ್ಕೆ ಸೇರಿಕೊಂಡ. ಇದು ತಿಳಿದಾಗ ದಯಾನಂದನಿಗೆ ತನ್ನಲ್ಲಿ ಹಿಂದೊಮ್ಮೆ ಹುಟ್ಟಿದ ಯೋಚನೆ ಕಾಡತೊಡಗಿತು. ನೀರಾ ಮಾರುವುದರಿಂದ ಒಂದಿಷ್ಟು ಹೆಚ್ಚು ಆದಾಯ ಬರುತ್ತಿತ್ತೇ ಹೊರತು ಅಂಥ ಲಾಭವೇನೂ ಇರಲಿಲ್ಲ. ಬಹಳ ಯೋಚಿಸಿ ದಯಾನಂದ ಉಮೇಶನ ಬಳಿ ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿಕೊಂಡ. ಪೋಲೀಸು ಕೆಲಸದಲ್ಲಿನ್ನೂ ನುರಿತಿರದ ಉಮೇಶನಿಗೆ ಮೊದಲ ಗಿರಾಕಿಯನ್ನು ಹಿಡಿದು ತರಲು ಆರು ತಿಂಗಳೇ ಬೇಕಾಯಿತು. ಯಾವುದೋ ಹೋಟೇಲಿನ ಮೇಲೆ ದಾಳಿ ನಡೆಸಿ ಹುಡುಗಿಯರ ಸಮೇತ ಸಿಕ್ಕಿ ಹಾಕಿಕೊಂಡವರಲ್ಲಿ ಕುಮಟಾದ ಬ್ಯಾಂಕಿನಲ್ಲಿ ಕೆಲಸ ಮಾಡುವವನೊಬ್ಬನಿದ್ದ. ದಯಾನಂದ ಉಮೇಶನ ಜೊತೆ ಠಾಣೆಗೆ ಹೋಗಿ ಇನ್ನೂರು ರೂಪಾಯಿಗೆ ಒಪ್ಪಿಕೊಂಡು ಜಾಮೀನು ನಿಂತು ಅವನನ್ನು ಬಿಡಿಸಿದ. ಇನ್ನೂರರಲ್ಲಿ ಐವತ್ತು ಉಮೇಶನಿಗೆ ಐವತ್ತು ಪಿ. ಎಸ್. ಐ. ಗೆ ಅಂತ ಕೈಬಿಟ್ಟುಹೋಯಿತು.
ಹೀಗೆ ಶುರುವಾಯಿತು ದಯಾನಂದನ ಜಾಮೀನು ನಿಲ್ಲುವ ಧಂದೆ.

-೩-

ಮೊದಮೊದಲು ದಯಾನಂದನಿಗೆ ಯಾರೋ ಗುರುತು ಪರಿಚಯ ಇಲ್ಲದಿರುವವರಿಗೆ ಜಾಮೀನು ನಿಲ್ಲುವುದೆಂದರೆ ದಿಗಿಲಾಗುತ್ತಿತ್ತು. ಆದರೆ ಅವನ ಪರಿಚಯಸ್ಥರಾರಿಗೂ ಜಾಮೀನಿನ ಅವಶ್ಯಕತೆಯಿರುತ್ತಿರಲಿಲ್ಲ. ಆಸುಪಾಸಿಗೆಲ್ಲ ಕಾರವಾರವೇ ದೊಡ್ಡ ಊರಾದ್ದರಿಂದ ಅದಕ್ಕೆ ತಕ್ಕಂಥ ಅಪರಾಧಗಳೂ ಹೆಚ್ಚಾಗಿದ್ದವು. ತನಗೆ ಯಾವ ಅಪಾಯವೂ ಇಲ್ಲ ಎಂದು ಖಾತ್ರಿಯಾದ ಹೊರತು ದಯಾನಂದ ಯಾರಿಗೂ ಜಾಮೀನು ನಿಲ್ಲುತ್ತಿರಲಿಲ್ಲ. ಈ ಕೆಲಸ ಶುರುಮಾಡಿದ ಹೊಸದರಲ್ಲಿ ದಯಾನಂದನಿಗೆ ಅಪರಾಧವನ್ನು ತಾನೇ ಮಾಡಿದ ಹಾಗೆ ಅನಿಸುತ್ತಿತ್ತು. ಕೊಲ್ಹಾಪುರದವರಿಗೆ ಜಾಮೀನು ನಿಲ್ಲುವ ಹೊತ್ತಿಗೆ “ಅವನೇನಾದರೂ ತಪ್ಪಿಸಿಕೊಂಡರೆ ನಿನ್ನನ್ನು ಒದ್ದು ಒಳಹಾಕುತ್ತೇನೆ” ಎಂದು ಪಿ. ಎಸ್. ಐ. ಹೇಳಿದ ಮಾತು ಬಹಳ ಕಾಲ ಮನಸ್ಸಿನಲ್ಲಿ ಕೂತುಬಿಟ್ಟಿತ್ತು. ಆದರೆ ಯಾವ ಕೆಲಸವನ್ನೂ ತಾನು ಕಾನೂನನ್ನು ಉಲ್ಲಂಘಿಸಿ ಮಾಡುತ್ತಿಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತ ಈ ಕಿರಿಕಿರಿಗಳಿಂದ ಬಿಡಿಸಿಕೊಳ್ಳತೊಡಗಿದ. ಹೊಸ ಧಂದೆಯಲ್ಲಿ ಅವಶ್ಯವಾದ ಪೋಲೀಸರ ಸಖ್ಯದಿಂದಾಗಿ ಯಾವುಯಾವುದೋ ರೀತಿಯ ಅಪರಾಧಗಳನ್ನು ನೋಡಿದ. ಯಾರು ಯಾರಿಗೋ ಜಾಮೀನು ನಿಂತ. ತಮ್ಮನನ್ನೇ ಮಚ್ಚು ಹಿಡಿದು ಹೊಡೆದವರು. ಹೆಂಡತಿಯನ್ನು ಬಾವಿಗೆ ನೂಕಿದವರು. ಕೆಲಸದವಳನ್ನು ಬಸಿರು ಮಾಡಿದವರು. ಯಾವುದೋ ಸೂಳೆಮನೆಯ ದಾಳಿಯಲ್ಲಿ ಸಿಕ್ಕಿಹಾಕಿಕೊಂಡವರು. ಕನ್ನ ಹಾಕಿ ಕದ್ದವರು ಹೀಗೆಲ್ಲ ನಾನಾ ರೀತಿಯ ಜನರನ್ನು ನೋಡಿದ. ಮೊದಲನೇ ಸಲ ಅಪರಾಧ ಎಸಗಿದವರಿಗೆ ಈ ಬಂಧನ ಕೋರ್ಟು, ಜಾಮೀನು ಇತ್ಯಾದಿ ಏನೂ ಗೊತ್ತಿರುತ್ತಿರಲಿಲ್ಲ. ಯಾವುದೋ ಆವೇಶದಲ್ಲಿ ಏನೋ ಘಟಿಸಿರುತ್ತಿತ್ತು. ಇಂಥ ಸಂದರ್ಭಗಳಲ್ಲಿ ಹೆಚ್ಚು ಹಣ ಕೀಳುವ ಅವಕಾಶವಿದ್ದರೂ ದಯಾನಂದನಿಗೆ ತಾನೂ ಈ ತಪ್ಪು ಮಾಡಬಹುದಾಗಿತ್ತಲ್ಲ ಅಂತನ್ನಿಸಿ ಖಿನ್ನವಾಗಿ ಹೆಚ್ಚು ಚೌಕಾಶಿ ಮಾಡದೇ ಒಪ್ಪಿಕೊಳ್ಳುತ್ತಿದ್ದ. ಆದರೆ ದಿನಗಳೆದಂತೆ ಇದೆಲ್ಲ ಅಭ್ಯಾಸವಾಗಿ ಮೊದಲಿನಂತೆ ಪ್ರತಿ ಅಪರಾಧಿಯ ವಿವರ ತಿಳಿದುಕೊಳ್ಳುವ ತಾಳ್ಮೆ ಮತ್ತು ವ್ಯವಧಾನ ಇಲ್ಲವಾಗತೊಡಗಿತು.
ಬರೀ ಪೋಲೀಸರಷ್ಟೇ ಅಲ್ಲ ತನಗೆ ಬೇಕಾದವರು ಎಂದು ತಿಳಿಯತೊಡಗಿದಂತೆ ದಯಾನಂದ ನಾಯಕ ವಕೀಲರ ಜೊತೆ ಹೆಚ್ಚು ಹೆಚ್ಚು ಸೇರತೊಡಗಿದ. ಅವನು ಹಗಲಿಡೀ ಕಳೆಯುವುದು ಕೋರ್ಟಿನಲ್ಲಿ ಅಥವಾ ಪೋಲೀಸು ಸ್ಟೇಶನ್ನಿನಲ್ಲಿ. ಸಂಜೆಯ ವೇಳೆ ಮಾತ್ರ ಸ್ವಲ್ಪ ಹೊತ್ತು ಅಂಗಡಿಯಲ್ಲಿ ನೆಪಮಾತ್ರಕ್ಕೆ ಕೂರುತ್ತಿದ್ದ. ಯಾವ ಜಮೀನು ಕೇಸಿನಲ್ಲೂ ತಾನು ಸಿಕ್ಕಿಹಾಕಿಕೊಳ್ಳಬಾರದೆನ್ನುವ ಎಚ್ಚರಿಕೆಯ ಅಗತ್ಯದಿಂದಾಗಿ ಕಾನೂನಿನ ಸೂಕ್ಷ್ಮಗಳನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗತೊಡಗಿತು. ಅವನ ಮತ್ತು ನಾಯಕ ವಕೀಲರ ಜೋಡಿ ಚೆನ್ನಾಗಿ ಕೂಡಿಬಂತು. ಅವನ ಜಾಮೀನು ವ್ಯವಹಾರಗಳು ಬೆಳೆದಂತೆ ಅವರಿಗೂ ಇಂತಿಷ್ಟು ಅಂತ ಕೊಡುವುದು ಆರಂಭವಾಯಿತು. ವಕೀಲರ ಜೊತೆಯ ಸತತ ಸಹವಾಸದಿಂದ, ಕೋರ್ಟಿನಲ್ಲಿ, ಪೋಲೀಸು ಠಾಣೆಯಲ್ಲಿ ದಿನದ ಬಹುಭಾಗ ಕಳೆಯುತ್ತಿದ್ದರಿಂದ, ಅವನ ಕಾನೂನಿನ ಜ್ಞಾನ ಆಗಾಧವಾಗಿ ಬೆಳೆಯಿತು. ತಾನು ಜಾಮೀನು ನಿಂತ ಪ್ರತಿ ಕೇಸನ್ನೂ ಕೊನೆ ಮುಟ್ಟುವವರೆಗೂ ಗಮನಿಸುತ್ತಿದ್ದ. ಅದೆಷ್ಟರವರೆಗೂ ಹೋಯಿತೆಂದರೆ ಅದೊಂದು ಚಟವಾಯಿತು, ಆಟವಾಯಿತು, ಅಂಗೈಯ ನೆಲ್ಲಿಯಾಯಿತು. ಅಪರಾಧದ ವಿವರ ಗೊತ್ತಾದರೆ ಕೋರ್ಟಿನ ತೀರ್ಮಾನ ಏನು ಅನ್ನುವುದನ್ನು ನಿಖರವಾಗಿ ಹೇಳುವಷ್ಟು ಪರಿಣಿತನಾದ. ಕಳ್ಳಸಾಗಣೆ ಮಾಡುವವರಿಗೆ ಮಾತ್ರ ಜಾಮೀನು ನಿಲ್ಲಬಾರದೆಂಬ ನಾಯಕ ವಕೀಲರ ಮಾತನ್ನು ಅಕ್ಷರಶಃ ಪಾಲಿಸಿದ. ಸದಾ ಕಾನೂನಿಗೆ ಸರಿಯಾಗಿ ಇರಬೇಕೆಂಬ ಎಚ್ಚರಿಕೆಯಿಂದಾಗಿ ಅವನ ಮನಸ್ಸು ಪ್ರತಿಯೊಂದನ್ನೂ ಅದು ಕಾನೂನಿನ ಪ್ರಕಾರ ಸರಿಯೇ ತಪ್ಪೇ ಎಂದೇ ಯೋಚಿಸುತ್ತಿತ್ತು. ಯಾವ ರೀತಿ ಕಾನೂನಿನ ಸಂದಿಗೊಂದಿಗಳಲ್ಲಿ ನುಸುಳಲು ಸಾಧ್ಯ ಎಂದೇ ಯೋಚಿಸುತ್ತಿತ್ತು. ಸರಿತಪ್ಪುಗಳ ತಕ್ಕಡಿಯನ್ನು ಕಾನೂನಿಗೆ ದಾಟಿಸಿದ ಮೇಲೆ ಮೊದಮೊದಲು ಕಾಡಿದ ಹಾಗೆ ಅಪರಾಧಗಳ ವಿವರಗಳು ಈಗ ಕಾಡುತ್ತಿರಲಿಲ್ಲ. ಎಲ್ಲರ ತಪ್ಪುಗಳಿಗೆ, ಕ್ರೌರ್ಯಕ್ಕೆ ಕಾನೂನಿನಲ್ಲಿ ದಂಡ ಹುಡುಕಲು ಶುರು ಮಾಡಿದ. ಯಾವುದೇ ಗಿರಾಕಿ ಬಂದರೆ ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳದಂತೆ ಹೇಗೆ ಆ ಅಪರಾಧ ಮಾಡಬಹುದಿತ್ತು ಎಂದೇ ಅವನ ಮನಸ್ಸು ಯೋಚಿಸುತ್ತಿತ್ತು. ಕೆಲವು ಸಲ ಜಾಮೀನು ನಿಲ್ಲುವಾಗ “ಥೂ…. ನನ್ನನ್ನಾದರೂ ಕೇಳಬಾರದಿತ್ತೇ…. ನೀನು ಇದರ ಬದಲು ಹೀಗೆ ಮಾಡಿದ್ದರೆ ಯಾವ ಕಾನೂನು ಮುಟ್ಟದ ಹಾಗೆ ಮಾಡುತ್ತಿದ್ದೆನಲ್ಲ….” ಎಂದನ್ನುತ್ತಿದ್ದ. ವಕೀಲರ ಹಾಗೆಯೇ ಅವನೂ ಕಾನೂನಿನ ಬದಲಾವಣೆಗಳನ್ನು ಗಮನಿಸುತ್ತಿದ್ದ. ಯಾಕೆಂದರೆ ಕಾನೂನು ಬದಲಾದರೆ ಸರಿ ತಪ್ಪುಗಳ ತಕ್ಕಡಿಯೂ ಬದಲಾಗಬೇಕಿತ್ತು. “ನೀನೊಂದು ವಕೀಲಿ ಪರೀಕ್ಷೆ ಪಾಸು ಮಾಡಿಲ್ಲ ಅನ್ನುವುದು ಬಿಟ್ಟರೆ ಯಾವ ವಕೀಲರಿಗೂ ಕಡಿಮೆಯಿಲ್ಲ ನೋಡು” ಎಂದು ನಾಯಕ ವಕೀಲರೇ ಅಗಾಗ ದಯಾನಂದನಿಗೆ ಹೇಳುತ್ತಿದ್ದರು.
ತಿಂಗಳಿಗೆ ಐದಾರು ಜನರಿಗೆ ಜಾಮೀನು ನಿಂತರೂ ಅವನಿಗೆ ಸಾಕಷ್ಟು ಸಂಪಾದನೆಯಾಗುತ್ತಿತ್ತು. ಊರಿನ ಜನರೆಲ್ಲ ತನ್ನನ್ನು ಜಾಮೀನು ಸಾಹೇಬನೆಂದು ಕರೆಯುತ್ತಾರೆನ್ನುವುದು ದಯಾನಂದನಿಗೆ ತಿಳಿದಿತ್ತು. ಯಾವ ರೀತಿಯಲ್ಲೂ ತಾನದನ್ನು ಪ್ರತಿಬಂಧಿಸಲಾರೆ ಅನ್ನುವುದು ತಿಳಿದು ಬೇಸರವೂ ಆಗಿತ್ತು. ಅವನಿಗೆ ಆ ಹೆಸರು ಬಂದದ್ದು ಒಂದು ವಿಚಿತ್ರ ಕತೆ. ದಯಾನಂದ ಜಾಮೀನು ನಿಲ್ಲತೊಡಗಿದ ಹೊಸದರಲ್ಲಿ ರಾಣೆ ಅಂತ ಒಬ್ಬ ಪಿ. ಎಸ್. ಐ. ಇದ್ದ. ಅವನೊಂದು ದಿನ ಠಾಣೆಯಲ್ಲಿ ಕೂತು ಆಗ ತಾನೇ ಕೆಲಸಕ್ಕೆ ಸೇರಿಕೊಂಡ ಪೇದೆಯೊಬ್ಬನ ಮೇಲೆ ದರ್ಪ ಚಲಾಯಿಸುತ್ತ ಬೋಂಡ ಟೀ ಮುಗಿಸಿ ಯಾವುದೋ ಲೋಕದಲ್ಲಿದ್ದವನ ಹಾಗೆ ಆರಾಮವಾಗಿ ಕಾಲು ಚಾಚಿ ಕೂತಿದ್ದ. ಅದೇ ಹೊತ್ತಿಗೆ ಒಂದು ಕೇಸಿನ ವಿಷಯವಾಗಿ ದಯಾನಂದ ಠಾಣೆಗೆ ಹೋದ. ಅವನನ್ನು ಹಿಂದಿನ ದಿನ ನೋಡಿದ್ದರೂ ಪೇದೆಗೆ ಹೆಸರು ಹೊಳೆಯದೇ ಕೇಳಬೇಕೆನ್ನುವಷ್ಟರಲ್ಲಿ, ಯಾರೋ ಬಂದಿರುವ ಸುಳಿವು ಸಿಕ್ಕಿ ಠಾಣೆ “ಯಾರೋ ಅದು” ಅಂದ. ಪೇದೆಗೆ ಏನು ಹೇಳಬೇಕೋ ತಿಳಿಯದೇ “ಅವರು ಅವರು” ಅಂದ. ಸ್ವಲ್ಪ ತಮಾಷೆಯ ಗುಂಗಿನಲ್ಲಿದ್ದ ರಾಣೆ “ಯಾರು ಸಾಹೇಬರೇನೋ…. ಯಾಕೆ ಹಾಗೆ ಬ್ಬೆ ಬ್ಬೆ ಬ್ಬೆ ಅನ್ನುತ್ತೀ…. ಒಳಗೆ ಬರಹೇಳು….”ಅಂದ. ಅವನ ಮಾತು ಕೇಳಿಸಿಕೊಂಡ ದಯಾನಂದ ರೂಮಿನ ಒಳಗೆ ಹೋದ. “ಹೋ ಹೋ ಹೋ…… ಸಾಹೇಬರು…… ಜಾಮೀನು ಸಾಹೇಬರು…… ಬರಬೇಕು…… ಬರಬೇಕು……” ಎಂದು ರಾಣೆ ಗಹಗಹಿಸಿ ನಕ್ಕ. ಅವನನ್ನು ಸ್ವಲ್ಪ ಸಂತೋಷಪಡಿಸಲು ದಯಾನಂದನೂ ನಕ್ಕ. ರಾಣೆಗೆ ಯಾಕೋ ನಗು ಉಕ್ಕಿ ಉಕ್ಕಿ ಬಂತು. ಜಾಮೀನು ಸಾಹೇಬರು…. ಜಾಮೀನು ಸಾಹೇಬರು…. ಅನ್ನುತ್ತ ಅನ್ನುತ್ತ ತನ್ನ ತಮಾಷೆಗೆ ತಾನೇ ನಕ್ಕ. ಅಂದಿನಿಂದ ದಯಾನಂದನನ್ನು ಅದೇ ಹೆಸರಿನಿಂದ ಕರೆಯಲಾರಂಭಿಸಿದ. ಅದು ಹಬ್ಬಲು ಹೆಚ್ಚು ಕಾಲವೇನೂ ಬೇಕಾಗಲಿಲ್ಲ.

ದಯಾನಂದನ ಈ ಕೆಲಸದ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. ಅವನು ಮದುವೆಯಾದಾಗ ಅವನ ಹೆಂಡತಿಯಾಗಿ ಬಂದ ಸುನಂದೆಗೂ ಇದರ ಬಗ್ಗೆ ಮೊದಲೇ ಗೊತ್ತಿತ್ತು. ಅವಳು ಅದನ್ನು ಇಷ್ಟಪಡದಿದ್ದರೂ ಹಾಗಂತ ಹೇಳುವ ಧೈರ್ಯ ಮಾಡಿರಲಿಲ್ಲ. ಪೋಲೀಸರ ಜೊತೆಯ ಸ್ನೇಹದಿಂದಾಗಿ ವಕೀಲರ ಸಹವಾಸದಿಂದಾಗಿ ದಯಾನಂದನಿಗೆ ಊರಿನಲ್ಲಿ ವಿಚಿತ್ರ ವರ್ಚಸ್ಸಿತ್ತು. ಸಾಕಷ್ಟು ದುಡ್ಡೂ ಕೂಡಿಕೊಳ್ಳತೊಡಗಿತ್ತು. ಅವನ ಅಪ್ಪ ಆಗಾಗ ಮನೆತನ ಅಂತ ಏನೋ ಪಿರಿಪಿರಿ ಶುರುಮಾಡಿದರೂ ಯಾರೂ ಅದನ್ನು ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ. ದಯಾನಂದನ ವರ್ಚಸ್ಸಿನಿಂದಾಗಿ ಮೊದಲು ಕಿರಿಕಿರಿಯುಂಟುಮಾಡುತ್ತಿದ್ದ ಅವನ ಚಿಕ್ಕಪ್ಪಂದಿರೂ ಈಗ ಮೆತ್ತಗಾಗಿದ್ದರು. ತನ್ನನ್ನು ಜಾಮೀನು ಸಾಹೇಬನೆಂದು ಕರೆಯುತ್ತಾರೆನ್ನುವುದನ್ನು ನೆನೆಸಿಕೊಂಡಾಗ, ತಾನು ಮಾಡುತ್ತಿರುವ ಧಂದೆಯ ಬಗ್ಗೆ ಮನೆಯವರು ತಲೆ ಎತ್ತಿ ಹೇಳಿಕೊಂಡು ತಿರುಗಾಡಲಾರರು ಎಂದು ಅನಿಸಿದಾಗ ಕಾನೂನಿನ ಜ್ಞಾನ ಮತ್ತು ಪೋಲೀಸರ ಸಖ್ಯದಿಂದ ತನಗೆ ಒದಗಿಬಂದ ಆವ್ಯಕ್ತ ಶಕ್ತಿಯ ಆಯುಧವನ್ನು ಮಸೆದು ಲೋಕಕ್ಕೆ ಅದರ ಪ್ರತಾಪವನ್ನು ತೋರಬೇಕೆನ್ನಿಸುತ್ತಿತ್ತು. ಅವನ ಒಳಗಿನ ಈ ಗುಣ ಕೆಲವೊಮ್ಮೆ ಅವನ ಅಂಕೆಯನ್ನೂ ಮೀರಿ ತನ್ನ ಸ್ನಾಯುಗಳನ್ನು ನುರಿಯುತ್ತ ಶಕ್ತಿ ಪ್ರದರ್ಶನಕ್ಕಾಗಿ ಹಾತೊರೆಯುವಂತೆ ಅನಿಸುತ್ತಿತ್ತು.

-೪-

ಒಮ್ಮೆ ದಯಾನಂದ ಸಂಬಧೀಕರ ಮಗಳ ಮದುವೆಗೆ ಅಂತ ಸಾಗರಕ್ಕೆ ಹೋಗಿದ್ದ. ಆಗ ಮೀನಾಕ್ಷಿ ಕೊಟ್ಟ ದೂರಿನ ಮೇರೆಗೆ ಅವಳ ಗಂಡನನ್ನು ಪೋಲೀಸರು ಬಂಧಿಸಿದರು. ಮೀನಾಕ್ಷಿಯ ಅಮ್ಮ ದಯಾನಂದನ ತಾಯಿಗೆ ದೂರದ ಸಂಬಂಧ. ಅದಕ್ಕೂ ಹೆಚ್ಚಾಗಿ ಮೊದಲು ಅವರು ದಯಾನಂದನ ಮನೆಯ ಪಕ್ಕದ ಮನೆಯಲ್ಲೇ ಬಾಡಿಗೆಗಿದ್ದರು. ನಾಲ್ಕು ಹೆಣ್ಣುಮಕ್ಕಳಲ್ಲಿ ಮೀನಾಕ್ಷಿಯೇ ಕೊನೆಯವಳು. ಮೀನಾಕ್ಷಿಯ ಅಪ್ಪ ವಾಸುದೇವ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಮೂವರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ಜರ್ಜರಿತನಾದ ಅವನು ಮೀನಾಕ್ಷಿಯನ್ನು ಮೆಟ್ರಿಕ್‌ವರೆಗೆ ಓದಿಸಿದ್ದೇ ದೊಡ್ಡ ಸಾಹಸವೆನ್ನಿಸಬೇಕು. ಅವಳು ಮದುವೆಗೆ ಬೆಳೆದು ನಿಂತು, ಅವಳಿಗೆ ಶಿನ್ನನ ಹೆಂಡತಿಯಾಗುವ ಯೋಗ ಬಂತು. ಶಿನ್ನನ ಮನೆಯವರದು ಕಟ್ಟಿಗೆ ವ್ಯಾಪಾರ. ಅವನು ತನ್ನ ಮನೆತನದ ಕುಖ್ಯಾತಿಯನ್ನು ಒಂದಿಷ್ಟು ಹೆಚ್ಚೇ ಅನ್ನುವ ಹಾಗೆ ಪಾಲಿಸಿಕೊಂಡು ಬಂದಿದ್ದ. ಯಾವಾಗಲೂ ಕಚ್ಚೆ ಸಡಿಲು. ಬೈಗಳಂತೂ ಮೈಗೆ ಅಂಟಿದ್ದೇ ಇಲ್ಲ. ಛೀ ಥೂ ಅಂದರೆ ಅವನಿಗೆ ಬಾ ಬಾ ಅಂದ ಹಾಗೆ ಕೇಳಿಸುತ್ತಿತ್ತು. ಇಂತ ಶಿನ್ನನ ಹೆಂಡತಿಯಾಗಿ ಹೋಗುವ ಪ್ರಸಂಗ ಬಂದಾಗ ಮೀನಾಕ್ಷಿಗೆ ತಾನು ಸತ್ತು ಹೋಗುವುದಾದರೂ ಒಳ್ಳೆಯದೇನೋ ಅನಿಸಿತ್ತು. ದಿನದಿಂದ ದಿನಕ್ಕೆ ತಾನು ಹೆತ್ತ ಮನೆಗೆ ಭಾರವಾಗುತ್ತಿರುವುದು ಕಣ್ಣಮುಂದೆ ಕಾಣಿಸುತ್ತಿತ್ತು. ವಾಸುದೇವ ಮಗಳ ಜಾತಕವನ್ನು ಕೈಚೀಲದಲ್ಲಿಟ್ಟುಕೊಂಡು ಹೊರಟಾಗ ಈ ಚೀಲದ ಭಾರ ಹೊರಲಾರೆನಪ್ಪ ಅಂದ ಹಾಗೆ ಅನಿಸುತ್ತಿತ್ತು. ಹೀಗಿರುವಾಗ ಶಿನ್ನನ ಕಡೆಯಿಂದಲೇ ಮದುವೆಯ ಪ್ರಸ್ತಾಪ ಬಂದಾಗ ಅದನ್ನು ಬೇಡವೆನ್ನುವ ತಾಕತ್ತು ಅವರಲ್ಲಿರಲಿಲ್ಲ. “ಊರ ಜನ ಆಡಿಕೊಳ್ಳುತ್ತಾರಂತ ನೀನೇನೂ ಎದೆಗೆಡಬೇಡ…. ಜನ ನೂರು ಆಡಿಕೊಳ್ಳಲಿ…. ಸತ್ಯ ಭಗವಂತನಿಗೆ ಗೊತ್ತಿರುತ್ತದೆ….” ಎಂದು ಕಣ್ಣೀರಿನ ನಡುವೆ ಮಗಳಿಗೆ ಧೈರ್ಯ ಹೇಳಿದ್ದರು. `ಶಿನ್ನನಿಗೆ ಹೆಣ್ಣು ಕೊಡುವವರು ಯಾರಪ್ಪಾ?’ ಎಂದು ಮಾತಾಡಿಕೊಳ್ಳುತ್ತಿದ್ದ ಊರ ಜನ ಈಗ ಅವನ ಅದೃಷ್ಟವನ್ನೂ, ಮೀನಾಕ್ಷಿಯ ದುರಾದೃಷ್ಟವನ್ನೂ ಕುರಿತು ಆಡಿಕೊಂಡರು.

ಆಮೇಲೆ ಶಿನ್ನ ಅವಳಿಗೆ ಕೊಟ್ಟ ಕಾಟದ್ದೇ ಒಂದು ಕತೆ. ನಾಲ್ಕು ದಿನ ಹೆಂಡತಿಯ ಹಿಂದೆ ಮುಂದೆ ಓಡಿಯಾದ. ಆಮೇಲೆ ಕೂತರೆ ತಪ್ಪು ಅಂದೆ. ಸಾರಿಗೆ ಖಾರ ಸಾಲದೆಂದು ಅವಳ ತಲೆಯ ಮೇಲೆ ಅದನ್ನು ಸುರಿಯಲು ಹಿತ್ತಲ ತುಂಬ ಅವಳನ್ನು ಅಟ್ಟಿಸಿಕೊಂಡು ಹೋದ. ಬರೆ ಬರುವಂತೆ ಹೊಡೆದ. ಈ ನಡುವೆ ಇಬ್ಬರು ಮಕ್ಕಳೂ ಆದರು. ರಾತ್ರಿ ಬಂದರೆ ಬಂದ. ಇಲ್ಲದಿದ್ದರೆ ಇಲ್ಲ. ಬಂದಾಗ ಅವಾಚ್ಯ ಶಬ್ದಗಳಲ್ಲಿ ಬೈಯುತ್ತಿದ್ದ. ಒಂದು ದಿನ ಕೊಂದೇ ಬಿಡುತ್ತೇನೆಂಡು ಬಂದವನಿಂದ ತಪ್ಪಿಸಿಕೊಳ್ಳಲು ಕೋಣೆಯೊಳಗೆ ಹೊಕ್ಕು ಕೂತಳು. ಹೊರಗೆ ಬರದಿದ್ದರೆ ಮಕ್ಕಳ ಕುತ್ತಿಗೆ ಹಿಸುಕುತ್ತೇನೆಂದು ಕೂಗಿದ. ಕುಡಿದು ಬಂದ ಅವನು ಏನಾದರೂ ಮಾಡಿಯಾನೆಂದು ಹೆದರಿ ಬಾಗಿಲು ತೆಗೆದು ಈಚೆ ಬಂದವಳನ್ನು ಸೌದೆ ಹಿಡಿದು ಚಚ್ಚಿದ. ಮುಖ ಮೈಯಿಂದ ರಕ್ತ ಸೋರುತ್ತಿದ್ದಂತೆಯೇ ಅವಳು ಮಕ್ಕಳನ್ನು ಕರಕೊಂಡು ಮನೆಬಿಟ್ಟಳು. ಸೀದಾ ಪೋಲೀಸ್ ಠಾಣೆಗೆ ಹೋಗಿ ಗಂಡನ ಮೇಲೆ ದೂರು ಕೊಟ್ಟಳು. ಅವಳನ್ನು ಆ ರಾತ್ರಿಯ ಹೊತ್ತಿಗೆ ಆ ಅವಸ್ಥೆಯಲ್ಲಿ ಮಕ್ಕಳ ಜೊತೆ ನೋಡಿ ಪಿ. ಎಸ್. ಐ. ಗೆ ಕರುಣೆ ಬಂತು. ಪೇದೆ ರಾಮಾನಾಯಕನನ್ನು ಕರೆದು ಶಿನ್ನನ ಬಗ್ಗೆ ವಿಚಾರಿಸಿದ. ರಾಮಾನಾಯಕ ಶಿನ್ನನ ಒಂದೊಂದೇ ಗುಣಗಳನ್ನು ವರ್ಣಿಸುತ್ತಿದ್ದ ಹಾಗೆ ಪಿ. ಎಸ್. ಐ. ದೂರು ದಾಖಲಿಸಿಕೊಂಡು ಆಗಲೇ ಶಿನ್ನನ ಮನೆಗೆ ಹೋಗಿ ಗೊರಕೆ ಹೊಡೆಯುತ್ತಿದ್ದವನ ಅಮಲು ಇಳಿಯುವಂತೆ ಬಾರಿಸಿ ಠಾಣೆಗೆ ಎಳಕೊಂಡು ಬಂದ. ಇಲ್ಲಿ ಇನ್ನಷ್ಟು ಒದೆ ಬಿದ್ದದ್ದೇ ಶಿನ್ನನ ಪಿತ್ತ ಇಳಿಯಿತು. ಎಳೆದು ಒಳಹಾಕಿದರು. ಎಲ್ಲಿ ಹೋಗಬೇಕೋ ತಿಳಿಯದೇ ಮೀನಾಕ್ಷಿ ತವರಿಗೆ ಬಂದಳು. ಇಲ್ಲಿ ಇರಿಸಿಕೊಳ್ಳದಿದ್ದರೆ ಮಕ್ಕಳನ್ನು ಬಾವಿಗೆ ನೂಕಿ ತಾನೂ ಹಾರುತ್ತೇನೆ ಅಂದಳು. ಅವಳ ಅವತಾರ ನೋಡಿ ಇನ್ನು ಇವಳನ್ನು ಕಳಿಸಿದರೆ ಕೊಂದಂತೆಯೇ ಎಂದೆನಿಸಿ ವಾಸುದೇವ ಮಗಳನ್ನು ಮನೆಯಲ್ಲಿರಿಸಿಕೊಂಡ.
ಶಿನ್ನನನ್ನು ಒಳಹಾಕಿದ ಸುದ್ದಿ ಮಾರನೇ ದಿನ ಹಬ್ಬಿದರೂ ಯಾರೂ ಬಿಡಿಸಿಕೊಂಡು ಹೋಗಲು ಬರಲಿಲ್ಲ. ಜಾಮೀನಿನ ಮೇಲೆ ಬಿಡಿಸುವ ಜಾಮೀನು ಸಾಹೇಬನೂ ಊರಲ್ಲಿರಲಿಲ್ಲ. ಮರುದಿನ ಮಧ್ಯಾಹ್ನದವರೆಗೂ ಊಟ ತಿಂಡಿಯಿಲ್ಲದೇ ಹೇಗೋ ಹಸಿವು ತಡಕೊಂಡಿದ್ದ ಶಿನ್ನ, ಪಿ. ಎಸ್. ಐ. ಗೆ ಊಟ ಕೊಡುವಂತೆ ಕೇಳಿದ. ಶಿನ್ನನೂ ಜನ್ಮದಲ್ಲಿ ಕೇಳಿರದಂಥ ಬೈಗಳ ಜೊತೆಗೆ ಧಡ್ ಧಡ್ ಎಂದು ಪಿ. ಎಸ್. ಐ. ಇನ್ನೆರಡು ಬಿಟ್ಟ, ಶಿನ್ನನಿಗೆ ನರಕ ಅಂದರೆ ಇದೇ ಅನಿಸಿಬಿಟ್ಟಿತು. ಬಾಯಿಮುಚ್ಚಿ ಬಿದ್ದುಕೊಂಡ. ಪಿ. ಎಸ್. ಐ. ಆಚೆ ಹೋದದ್ದೇ ಪೇದೆಯೊಬ್ಬನನ್ನು ಕರೆದು ಎಷ್ಟು ದುಡ್ಡಾದರೂ ಆಗಲಿ ಜಾಮೀನು ಸಾಹೇಬನಿಗೆ ಹೇಳಿಕಳಿಸು ಎಂದು ಶಿನ್ನ ಗೋಗರೆದ. ನೂರಾರು ರೂಪಾಯಿಗಳ ಆಸೆ ತೋರಿಸಿದ. ದುಡ್ಡಿನ ಆಸೆಗೆ ದಯಾನಂದನನ್ನು ಹುಡುಕಿ ಹೊರಟ ಪೇದೆಗೆ, ಸಾಗರದಿಂದ ಆಗ ತಾನೇ ಬಂದು ಮನೆಯತ್ತ ಹೊರಟಿದ್ದ ದಯಾನಂದ ದಾರಿಯಲ್ಲೇ ಸಿಕ್ಕ. ಶಿನ್ನನ ಅವಸ್ಥೆಯನ್ನು ವಿವರಿಸುತ್ತ ಯಾಕೋ ಪಿ. ಎಸ್. ಐ. ಈ ಕೇಸಿನಲ್ಲಿ ಆಸಕ್ತಿ ವಹಿಸಿರುವಂತಿದೆ ಎಂದು ಪೇದೆ ಹೇಳಿದ. ಮೀನಾಕ್ಷಿಗೆ ಶಿನ್ನ ಹೊಡೆದಿದ್ದನ್ನು ಹೇಳಹೇಳುತ್ತ ಪೇದೆಗೂ ಕರುಣೆ ಉಕ್ಕಿ ಬಂದು ಶಿನ್ನನ ಕ್ರೌರ್ಯವನ್ನು ಸ್ವಲ್ಪ ಹೆಚ್ಚೇ ಬಣ್ಣಿಸಿದ. ಮೀನಾಕ್ಷಿಯನ್ನು ಪಿ. ಎಸ್. ಐ. ಸರಕಾರಿ ಆಸ್ಪತ್ರೆಗೆ ಕಳಿಸಿ ವೈದ್ಯರಿಂದ ಸರ್ಟಿಫಿಕೇಟ್ ತರಿಸಿದ್ದಾರೆ ಎಂದು ಪೇದೆ ಹೇಳಿದಾಗ ಇದು ಸ್ವಲ್ಪ ಕಗ್ಗಂಟಾಗುತ್ತಿದೆ ಎಂದು ದಯಾನಂದ ಯೋಚಿಸುತ್ತ ಠಾಣೆಗೆ ಹೋಗಿ ತನ್ನ ಶಕ್ತಿಯ ಸರ್ವಸ್ವವನ್ನೂ ಪ್ರಯೋಗಿಸಿ ಶಿನ್ನನನ್ನು ಬಿಡಿಸಿದ. ಶಿನ್ನನ ಜೊತೆ ಮೂರು ಸಾವಿರಕ್ಕೆ ಮಾತಾಗಿತ್ತು.
ಊರಿಗೆ ಬಂದದ್ದೇ ತನ್ನನ್ನು ಅಟ್ಟಿಸಿಕೊಂಡು ಬಂದ ಈ ಭಾಗ್ಯದಿಂದ ಉಬ್ಬುತ್ತ ಮನೆಗೆ ಬಂದ ದಯಾನಂದನಿಗೆ ಅವನ ಅಮ್ಮ ಮೊಟ್ಟಿ ಮೊದಲು ಹೇಳಿದ ಸುದ್ದಿಯೆಂದರೆ ಮೀನಾಕ್ಷಿಯದು. “ಆ ಬೇತಾಳನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಲು ಹೋದೀಯಾ….’ ಎಂದು ಅವನ ಅಮ್ಮ ಹೇಳಿದ್ದೇ ದ್ಯಾನಂದ ಫಕ್ಕನೇ ಕೈತಟ್ಟಿ ನಕ್ಕು “ಅವನನ್ನು ಬಿಡಿಸಿ ಯಾವ ಕಾಲವಾಯಿತು…. ದಯಾನಂದನನ್ನು ಬಿಟ್ಟರೆ ಅವನನ್ನು ಬಿಡಿಸಲಿಕ್ಕೆ ಈ ಊರಿನಲ್ಲಿ ಯಾರಿಗೂ ತ್ರಾಣ ಇರಲಿಲ್ಲ….” ಅಂದ ವಿಜಯದ ದನಿಯಲ್ಲಿ. ಅದನ್ನು ಕೇಳಿದ್ದೇ ಅವನ ಅಮ್ಮನಿಗೆ ಅದೆಲ್ಲಿ ಇತ್ತೋ ಅಷ್ಟು ಸಿಟ್ಟು. ಒಮ್ಮೆಲೇ ಅವನ ಮೇಲೆ ಮುಗಿಬಿದ್ದಳು. “ಊರಿಗೆ ಕಾಲಿಡುತ್ತಿದ್ದ ಹಾಗೇ ಹೋಗಿ ಈ ಮನೆಮುರುಕ ಕೆಲಸ ಮಾಡಿ ಬಂದೆಯಲ್ಲ…. ಊರಿನ ಜನಕ್ಕೆ ದುಡ್ಡಿನ ಆಸೆಗೆ ಬೀಳದೇ ಇರುವ ತ್ರಾನವಿತ್ತು…. ಅದಕ್ಕೇ ಬಿಡಿಸಿಕೊಂಡು ಬರಲಿಲ್ಲ…. ನಿನ್ನ ಪ್ರತಾಪವನ್ನು ಈ ಸೆಗಣಿ ತಿನ್ನುವ ಕೆಲಸ ಮಾಡಿ ತೋರಿಸಬೇಕಾಗಿರಲಿಲ್ಲ…. ಕೋರ್ಟು ಕೇಸಾಗಿ ಅವನಿಗೆ ಶಿಕ್ಷೆಯಾಗಲಿ…. ಅಲ್ಲವೋ ನಿನಗೆ ಮೀನಾಕ್ಷಿಯ ಬಗ್ಗೆಯೂ ಎನೂ ಅನ್ನಿಸಲಿಲ್ಲವೇ….”
“ಸುಮ್ಮನೇ ಮಾತಾಡಬೇಡಮ್ಮ…. ನಾನೇನೂ ತಪ್ಪು ಮಾಡಿಲ್ಲ…. ಎಲ್ಲ ಕಾನೂನಿನ ಪ್ರಕಾರವೇ ಮಾಡಿದ್ದೇನೆ….” ಎಂದು ದಯಾನಂದನೂ ತುಸು ದನಿ ಎತ್ತರಿಸಿದ. ಅವನು ಹಾಗೆ ಹೇಳಿದ್ದೇ ಅವಳಿಗೆ ಇನ್ನಷ್ಟು ರೋಷ ಬಂತು. “ದರಿದ್ರದವನೇ…. ಮಾಡಿದ್ದು ಸರಿ ಅನ್ನುತ್ತೀಯಲ್ಲೋ…. ಕಾನೂನಿನ ಪ್ರಕಾರ ಸರಿಯಾದರೆ ಯಾರನ್ನಾದರೂ ಕೊಲ್ಲಲಿಕ್ಕೂ ಹೇಸುವುದಿಲ್ಲವೇನೋ…. ಈ ದರಿದ್ರ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ಬಿಕ್ಕೆ ಬೇಡುವುದು ಒಳ್ಳೆಯದು….”. ತನ್ನ ಅಮ್ಮನ ಈ ರೌದ್ರಾವತಾರವನ್ನು ಜನ್ಮತಃ ಕಂಡಿರದ ದಯಾನಂದನಿಗೆ ತಬ್ಬಿಬ್ಬಾಯಿತು. ಇನ್ನು ತಾನು ಅಲ್ಲಿದ್ದರೆ ಅವಳು ತನ್ನನ್ನು ಚಚ್ಚುತ್ತಾಳೆನಿಸಿ ದಯಾನಂದ ಮನೆಯಿಂದ ಹೊರಟ. ಹೆಂಡತಿ ಒಂದು ಮಾತೂ ಆಡಲಿಲ್ಲ. ಅವನ ಅಪ್ಪ ಜಗುಲಿಯಲ್ಲಿ ಸುಮ್ಮನೇ ಕೂತಿದ್ದ. ಅವನು ಹೊರಡುತ್ತಿದ್ದ ಹಾಗೇ ಅಮ್ಮ ಒಳಗಿನಿಂದ “ಎಲ್ಲಿ ಹೊರಟೆ…. ಆ ಪೋಲೀಸರ ಕುಂಡೆ ಮೂಸಲಿಕ್ಕೋ…. ಅಲ್ಲಿ ಶಿನ್ನ ಹೋಗಿರುತ್ತಾನೆ ಅವಳ ಪ್ರಾಣ ತೆಗೆಯಲಿಕ್ಕೆ….” ಎಂದು ಬೈಯುತ್ತಿದ್ದದ್ದು ಕಿವಿಗೆ ಬಿತ್ತು. ಜಗುಲಿಯ ಮೆಟ್ಟಲಿಳಿಯುತ್ತಿದ್ದ ಹಾಗೆ, ಮನೆಯವರೆಲ್ಲ ಸೇರಿ ತನ್ನನ್ನು ಹೊರದಬ್ಬಿದಂತೆ ಅನಿಸಿಬಿಟ್ಟಿತು.

-೫-

ನಿಜವಾಗಿಯೂ ದಯಾನಂದ ಮೀನಾಕ್ಷಿಯ ಬಗ್ಗೆ ಏನೂ ಯೋಚಿಸಿರಲಿಲ್ಲ. ಅವನ ಮನಸ್ಸು, ಅವನ ಬುದ್ದಿಯೆಲ್ಲ ಶಿನ್ನನನ್ನು ಹೇಗೆ ನಿರಪರಾಧಿಯ ನೋಡುವುದು ಅನ್ನುವುದರಲ್ಲೇ ನೆಟ್ಟಿತ್ತು. ಇಂಥ ಸೂಕ್ಷ್ಮ ಹೆಣಿಗೆಗಳಲ್ಲಿ ನುಸುಳಿ ಹೋಗುವಾಗ ಏನನ್ನು ಹಚ್ಚಿಕೊಂಡರೂ ಅದು ತಡೆಯೊಡ್ಡುವುದರಿಂದ, ಎಲ್ಲವನ್ನೂ ಬಿಟ್ಟು ಸೂಕ್ಷ್ಮ ರೂಪಿಯಾಗಿ ಏಕಾಗ್ರತೆಯಿಂದ ಪಾರುಮಾಡಬೇಕಾಗಿತ್ತು. ಹೀಗೆ ನುಸುಳುತ್ತ ನುಸುಳುತ್ತ, ಯಶಸ್ಸಿನ ಇಕ್ಕಟ್ಟಾದ ಮೆಟ್ಟಿಲೇರುವಾಗ, ಏರುತ್ತ ಆಡಿದ ಆಟದ ನಡುವೆ, ಬಿಟ್ಟು ಬಂದದ್ದನ್ನು ನೆನೆಸುತ್ತ ಕೂತರೆ ಅಸಾಧ್ಯ ದಣಿವಾಗುತ್ತಿತ್ತು. ಶಿನ್ನನ ಬದಲಿಗೆ ದಯಾನಂದ ಮೀನಾಕ್ಷಿಗೇ ಜಾಮೀನು ನಿಲ್ಲಬೇಕಾದ ಪ್ರಸಂಗ ಬಂದಿದ್ದರೂ ಅವಳ ಜೊತೆಯ ಬಾಲ್ಯದ ಒಡನಾಟ ಅವನ ಮನಸ್ಸನ್ನು ಹೊಕ್ಕಿ ಕಲಕುತ್ತಿದ್ದವೋ ಇಲ್ಲವೋ.

ಮೀನಾಕ್ಷಿ ದಯಾನಂದನ ಮನೆಯ ಪಕ್ಕದಲ್ಲೇ ಇದ್ದಾಗ ಇಬ್ಬರೂ ಏಳನೇಯತ್ತೆಯವರೆಗೂ ಒಂದೇ ಶಾಲೆಯಲ್ಲಿ ಓದಿದರು. ಆಮೇಲೆ ಅವಳು ಹೆಣ್ಣುಮಕ್ಕಳ ಶಾಲೆ ಸೇರಿದಳು. ಒಂದೇ ಶಾಲೆಗೆ ಹೋಗುವಾಗ ಒಟ್ಟಿಗೇ ಹೋಗಿ ಬರುತ್ತಿದ್ದರು. ದಯಾನಂದ ಯಾವಾಗಲೂ ಸಮಯಕ್ಕೆ ಸರಿಯಾಗಿ ತಯಾರಾಗಿರುತ್ತಿರಲಿಲ್ಲ. ಅವಳು ಉದ್ದನೆಯ ಲಂಗ ತೊಟ್ಟು, ಬೆನ್ನಿಗೆ ಪಾಟಿಚೀಲ ಸಿಕ್ಕಿಸಿಕೊಂಡು, ಎಣ್ಣೆ ಹಾಕಿ ಗಟ್ಟಿಯಾಗಿ ಎಳೆದು ಬಾಚಿದ ಜಡೆಗಳ ತುದಿಗೆ ಕಟ್ಟಿದ ರಿಬ್ಬನ್ನಿನ ಗೊಂಡೆಯನ್ನು ಸರಿಪಡಿಸಿಕೊಳ್ಳುತ್ತ ಅವನ ಮನೆಯ ಜಗುಲಿಯಲ್ಲಿ ಅವನಿಗಾಗಿ ಕಾಯುತ್ತ ನಿಂತಾಗಲೇ ಅವನು ಪುಸ್ತಕಗಳನ್ನೂ ಪಾಟಿಚೀಲವನ್ನೂ ಲಗುಬಗೆಯಿಂದ ಜೋಡಿಸಿಕೊಳ್ಳುತ್ತಿದ್ದ. ಪಾಟಿ ಒರೆಸಲು ಅವಳು ಚಿಕ್ಕ ಡಬ್ಬಿಯಲ್ಲಿ, ನೀರಲ್ಲಿ ಅದ್ದಿದ್ದ ಸ್ಪಂಜಿನ ತುಂಡನ್ನು ಇಟ್ಟುಕೊಂಡಿದ್ದಳು. ದಯಾನಂದನಿಗೆ ಅದರ ಮೇಲೆ ಆಸೆಯಾದರೂ ಕೇಲಲು ಅಭಿಮಾನ ಅಡ್ಡ ಬಂದು ಸುಮ್ಮನಾಗಿದ್ದ. ಅವಳು ಅದನ್ನು ಅವನಿಗೆ ಉಪಯೋಗಿಸಲು ಕೊಡುತ್ತಿದ್ದರೂ ವಾಪಸು ಇಸಕೊಂಡು ಡಬ್ಬಿಯಲ್ಲಿ ಇಟ್ಟುಕೊಂಡುಬಿಡುತ್ತಿದ್ದಳು. ಅದನ್ನು ಕದಿಯಬೇಕೆಂದು ಅವನಿಗೆ ಅನ್ನಿಸಿದ್ದರೂ ಆ ನಂತರ ಅದನ್ನು ಶಾಲೆಯಲ್ಲಿ ಉಪಯೋಗಿಸುವುದು ಸಾಧ್ಯವಾಗದೇ ಹೋಗಬಹುದೆಂದು ಸುಮ್ಮನಾಗಿದ್ದ….
….ಹೆಚ್ಚಿಗೆ ಅಡಿಗೆ ಇದ್ದರೆ ದಯಾನಂದನ ಅಮ್ಮ ಅದನ್ನು ಅವನ ಮೂಲಕವೇ ಮೀನಾಕ್ಷಿಯ ಮನೆಗೆ ಕಳಿಸುತ್ತಿದ್ದರು. ಹಾಗೆ ಅವರ ಮನೆಗೆ ಹೋದಾಗ ಸ್ಪಂಜನ್ನು ಕೇಳಿಬಿಡಲೇ ಎಂದು ಎಷ್ಟೋ ಬಾರಿ ಯೋಚಿಸಿದ್ದ.

ಸಂಜೆಯ ಹೊತ್ತು ಮನೆಯ ಹತ್ತಿರದ ಅರಳೀಕಟ್ಟೆಯ ಮೇಲೆ ಅಕ್ಕಪಕ್ಕದ ಮನೆಯ ಹೆಂಗಸರು ಸೇರುತ್ತಿದ್ದರು. ಮಕ್ಕಳು ಅರಳೀಕಟ್ಟೆಯ ಮೇಲೆ, ಅದರ ಸುತ್ತಮುತ್ತ ಆಡುತ್ತಿದ್ದರು. ಹಳೆಯ ಕಟ್ಟೆಯ ಕಲ್ಲುಗಳು ಸಡಿಲಾಗಿ ಬಿದ್ದುಹೋದಲ್ಲಿ, ಒಣಗಿ ಉದುರಿದ ಪುರುಳೆಗಳನ್ನು, ಜೋಡಿಸಿ ಗೂಡು ಕಟ್ಟುವ ಆಟವಾಡುತ್ತಿದ್ದರು. ದಯಾನಂದನೂ ಮೀನಾಕ್ಷಿಯೂ ಪ್ರತಿದಿನ ಅಲ್ಲೇ ಆಡುತ್ತಿದ್ದರು. ದಯಾನಂದ ಸ್ವಲ್ಪ ಬೆಳೆದ ಹಾಗೆ ಗೋಲಿ ಆಡಲು ಶುರುಮಾಡಿದ. ಅವನು ಆಟ ಆಡಲು ಆರಂಭಿಸಿದ ಹೊಸದರಲ್ಲಿ ಅವನಿಗಿಂತ ಚೆನ್ನಾಗಿ ಆಡುತ್ತಿದ್ದ ಹುಡುಗರು ಅವನನ್ನು ಸೇರಿಸಿಕೊಳ್ಳಲು ಗೊಣಗುತ್ತಿದ್ದರು. ನುರಿತ ಹುಡುಗರು ನಡುಬೆರಳಲ್ಲಿ ಗೋಲಿ ಹಿಡಿದು, ಬೆರಳನ್ನು ಬಿಲ್ಲಿನಂತೆ ಬಾಗಿಸಿ ದೂರದಲ್ಲಿಟ್ಟ ಗೋಲಿಗೆ ಹೊಡೆದರೆ, ಹೊಡೆದ ಗೋಲಿ ಅಲ್ಲಿ ಕೂತು, ಅಲ್ಲಿಟ್ಟದ್ದು ಟಪ್ಪನೆ ಸಿಡಿದು ಹೋಗುವುದನ್ನು ಕೌತುಕದಲ್ಲಿ ಗಮನಿಸುತ್ತಿದ್ದ. ಅದೇ ಧ್ಯಾನವಾಗಿ ಸದಾ ಗೋಲಿಗಳನ್ನು ಹೊಡೆಯುತ್ತ ದಯಾನಂದನೂ ಆಟ ಕಲಿತ. ಗೋಲಿಯ ಉತ್ಸಾಹ ಮುಗಿದು ಚಿನ್ನಿದಾಂಡು ಆಟದ ಹುಚ್ಚು ಹಿಡಿಯಿತು. ಹಾಗೇ ಲಗೋರಿ. ನಂತರ ಕಬಡ್ಡಿ. ಹೊಸ ಆಟಗಳನ್ನು ಆಡುತ್ತ ಹೋದ ಹಾಗೆ ಹಳೆಯ ಸ್ನೇಹಿತರಲ್ಲಿ ಕೆಲವರು ಮಾತ್ರ ಉಳಿಯುತ್ತಿದ್ದರು. ಹೊಸ ಆಟದ ಹೊಸ ಸ್ನೇಹಿತರು ಸಿಗುತ್ತಿದ್ದರು. ಗೋಲಿಯಾಡಲು ಶುರುಮಾಡಿದಾಗಲೇ ಅರಳೀಕಟ್ಟೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದ. ಮೀನಾಕ್ಷಿ ಅಲ್ಲೇ ಆಡಲು ಹೋಗುತ್ತಿದ್ದಳು. ಒಮ್ಮೆ ಜೊತೆಗೆ ಆಡಲು ಯಾರೂ ಸಿಗದೇ ಮೀನಾಕ್ಷಿ ಅವನನ್ನು ಕರೆಯಲು ಬಂದಾಗ ಗೋಲಿಯಾಟದ ಅಭ್ಯಾಸ ನಡೆಸುತ್ತಿದ್ದ ದಯಾನಂದ ಒಲ್ಲೆನೆಂದ. ಅವಳ ಮುಖ ಬಾಡಿತು. ಅವಳು ಹಿಂತಿರುಗಿ ಹೊರಟ ರೀತಿಗೆ ದಯಾನಂದನಿಗೆ ಬೇಜಾರಾಗಿ ಆಟಕ್ಕೆ ಬರುತ್ತೇನೆಂದ. ಅವಳು ಬೇಡ ಅಂದಳು. ಪುಸಲಾಯಿಸಿ ಕರಕೊಂಡು ಹೋದ. ಇಬ್ಬರೂ ಬಿಗುವಾಗಿಯೇ ಇದ್ದು, ಹೆಚ್ಚು ಮಾತಾಡದೇ ಆಡಿದರು. ಪುರುಳೆಗಳನ್ನು ಜೋಡಿಸುವ ಆಟ ದಯಾನಂದನಲ್ಲಿ ಯಾವ ಆಸಕ್ತಿಯನ್ನೂ ಹುಟ್ಟಿಸದೇ ಎರಡೇ ಕ್ಷಣಗಳಲ್ಲಿ ಬೇಜಾರಾಗತೊಡಗಿತ್ತು. ಮನುಷ್ಯ ರಕ್ತದ ರುಚಿ ಹತ್ತಿದ ಹುಲಿಯಂತೆ ಕಸಿವಿಸಿಗೊಳ್ಳುತ್ತ ಗೋಲಿಯಾಟದ ಗುರಿಯನ್ನೇ ನೆನಪಿಸಿಕೊಳ್ಳತೊಡಗಿದ್ದ. *****
ಜೂನ್ ೧೯೯೮

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ