ಅಪ್ಪ ಸಾರಿನ ಅನ್ನದ ಮೇಲೆ ತುಪ್ಪ ಹಾಕಿ ಚಪ್ಪರಿಸಿ ತಿನ್ನುವುದನ್ನು ಕಂಡರೆ ಘನಶ್ಯಾಮನಿಗೆ ಅಸಹನೆ. ಕರಿದ ಸಂಡಿಗೆ, ಉದ್ದಿನ ಹಪ್ಪಳ, ಗೊಜ್ಜು, ಇಂಗಿನ ಒಗ್ಗರಣೆಯ ಉಸಳಿ – ಈ ಯಾವುದನ್ನು ಕಂಡರೂ ಅಸಹನೆ. ಬದಲಾವಣೆಯ ಚಕ್ರವನ್ನು ಮುಂದೆ ಹೋಗಗೊಡದಂತೆ ತಡೆಯುವ ಅಡ್ಡಸನ್ನೆಗಳ ಹಾಗೆ ಇವೆಲ್ಲ ಕಾಣಿಸುತ್ತಿದ್ದವು. ಹೀಗೆ ತನಗೆ ಅನಿಸುತ್ತಿದೆಯೆಂದು ಯಾರಿಗೂ ಹೇಳಲಾರ. ಹೇಳಲು ಒಂದೆರಡು ಬಾರಿ ಪ್ರಯತ್ನಿಸಿದರೂ, ಕೇಳುವವರಿಗೆ ಸರಳವೆನಿಸಲೆಂದು ಪರಿಚಿತ ಶಬ್ದಗಳಲ್ಲಿಡಲು ಹೆಣಗಿ ಮಧ್ಯಮವರ್ಗ, ಕ್ರಾಂತಿ, ಸಾಮಾಜಿಕ ಬದಲಾವಣೆ, ಸಮಾನತೆ ಎಂದೆಲ್ಲ ಮಾತಾಡತೊಡಗಿ ಅವು ಧ್ವನಿಸುವ ಪರಿಚಿತ ಅರ್ಥಗಳಿಂದ ಹತಾಶನಾಗುತ್ತಿದ್ದ. ಸಹಕಾರಿ ಬ್ಯಾಂಕಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದ ಅವನ ಅಪ್ಪ ತನ್ನ ಮೇಲಿನ ಅಧಿಕಾರಿಗಳನ್ನು ಹೇಗೆ ಸೂಕ್ಷ್ಮವಾಗಿ ಕಾಟಕೊಟ್ಟೆ ಎಂದು ಆಗಾಗ ವಿಜಯದ ದನಿಯಲ್ಲಿ ಹೇಳುತ್ತಿದ್ದುದನ್ನು ಕೇಳಿದರೆ ಅಪಾರ ಅಸಹನೆ. ಪಾರ್ಟಿಯ ಮೀಟಿಂಗುಗಳಲ್ಲಿ, ಅವನಿಗೆ ಆದರ್ಶಪ್ರಾಯವಾಗಿರುವ ನಾಯಕರು ಯೂನಿಯನ್ ಮುಖಂಡರಿಗೆ ಈ ಬಗೆಯ ತಂತ್ರಗಳನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಹೇಳಿಕೊಡುವುದನ್ನು ಕಂಡಾಗ ಅಪ್ಪನ ನೆನಪಾಗುತ್ತಿತ್ತು. ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮುರಿಯಲು ಇವು ಮಾಡಲೇಬೇಕಾದ ಕೆಲಸಗಳು ಎಂದು ಜೊತೆಯವರು ಕೊಟ್ಟ ಸಮಜಾಯಿಶಿಯನ್ನು ನಂಬಲು ಪ್ರಯತ್ನಿಸುತ್ತಿದ್ದ.
ಘನಶ್ಯಾಮ ಹತ್ತನೇ ತರಗತಿಯನ್ನು ಶೇಕಡಾ ಅರವತ್ತೊಂದು ಅಂಕ ಗಳಿಸಿ ಫಸ್ಟ್‌ಕ್ಲಾಸಿನಲ್ಲಿ ಪಾಸುಮಾಡಿದಾಗ ಅವನ ಅಪ್ಪ ಪೇಡಾ ಹಂಚಿದ್ದರು. ಅದು ಎಲ್ಲರ ನಿರೀಕ್ಷೆಗೂ ಮೀರಿದ ಫಲಿತಾಂಶವಾಗಿತ್ತು. ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಬೇಕೆಂದು ಘನಶ್ಯಾಮ ಕಷ್ಟಪಟ್ಟು ಓದಿದ್ದ. ಮನೆಯವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಇದರಲ್ಲಿ ಒಳಗೊಂಡರು. ಬೆಳಗಿನ ಜಾವ ಎದ್ದು ಓದಲು ಕೂರುವಾಗ ಅಮ್ಮನೂ ಎದ್ದು ಚಾ ಮಾಡಿ ಕೊಡುತ್ತಿದ್ದರು. ತಂಗಿ ಇವನು ಓದುವ ಹೊತ್ತಿನಲ್ಲಿ ಗದ್ದಲ ಮಾಡುತ್ತಿರಲಿಲ್ಲ. ಅಪ್ಪ ಎತ್ತರದ ದನಿಯಲ್ಲಿ ಮಾತಾಡುವುದನ್ನು ಆದಷ್ಟೂ ಕಡಿಮೆ ಮಾಡಿ ತನ್ನ ಪಾಡಿಗೆ ತಾನಿರುವುದನ್ನು, ಎರಡೆರಡು ಸಲ ಪೇಪರು ಓದುವುದನ್ನು, ವಾಕ್ ಹೋಗುವುದನ್ನು ಅಭ್ಯಾಸ ಮಾಡಿಕೊಂಡರು. ರಿಸಲ್ಟು ಬಂದ ದಿನ ಶಾಲೆಯಿಂದ ಅವನು ಹಿಂತಿರುಗುವುದನ್ನೇ ಎದುರು ನೋಡುತ್ತ, ಗೇಟಿನಲ್ಲೇ ಕಾಯುತ್ತಿದ್ದ ಅಪ್ಪ, ಫಸ್ಟಕ್ಲಾಸೆಂದು ಕೇಳಿದ್ದೇ ಏನು ಮಾಡಬೇಕೆಂದು ತೋರದೇ ಅವನನ್ನು ಅಪ್ಪಿಕೊಂಡು ನಂತರ ಮುಜುಗರಪಟ್ಟಿದ್ದರು. ಇಡೀ ಕುಟುಂಬದ ಸಂತೋಷಕ್ಕೆ ಕಾರಣನಾದೆನೆಂದು ಉಂಟಾದ ಹೆಮ್ಮೆ ಮತ್ತು ಸಾರ್ಥಕತೆಯ ಭಾವನೆ ಮತ್ತೆ ಮುಂದೆ ಎಂದೂ ತನಗೆ ದೊರಕಲಿಲ್ಲ ಎಂದವನಿಗೆ ಕೆಲವೊಮ್ಮೆ ಅನಿಸುತ್ತಿತ್ತು. ತನ್ನ ಯಶಸ್ಸಿನ ಸಂತೋಷವನ್ನು ಹಂಚಿಕೊಂಡ ಅವರೆಲ್ಲ ಮುಂದೆ ತನ್ನ ತಳಮಳವನ್ನು ಯಾಕೆ ನೋಡಲು ತಯಾರಾಗಲಿಲ್ಲ, ಈ ಚಿಕ್ಕ ಯಶಸ್ಸಿನಿಂದಾಗಿ ಅವರ ಅಪೇಕ್ಷೆಗಳು ಯಾಕೆ ಬೇರೆಯೇ ಆದವು ಎಂಬುದು ಅವನನ್ನು ಗಲಿಬಿಲಿಗೊಳಿಸುತ್ತಿತ್ತು. ಆಯ್ಕೆಯ ಕವಲುದಾರಿಗಳಲ್ಲಿ ನಿಂತಾಗಲೆಲ್ಲ ತನ್ನ ಜೀವನದ ತಾತ್ವಿಕ ನೆಲಗಟ್ಟನ್ನು ಬುಡಸಹಿತ ಅಲುಗಾಡಿಸುವಲ್ಲಿ ಈ ಅನುಭವದ ಪಾತ್ರ ಖಂಡಿತವಾಗಿಯೂ ಇದೆ ಎಂದು ಅವನಿಗೆ ಯಾವಾಗಲೂ ಸಂಶಯ. ಅದನ್ನು ಪ್ರಯತ್ನಪೂರ್ವಕವಾಗಿ ಆದಷ್ಟೂ ದೂರ ಇಡಲು ನೋಡುವನು.
ಅವನು ಗಳಿಸಿದ ಫಸ್ಟಕ್ಲಾಸ್ ಅಂಥ ವಿಶೇಷವೇನಲ್ಲ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. ಅವನಿಗೆ ಇಷ್ಟವಿಲ್ಲದಿದ್ದರೂ ಅವನು ವಿಜ್ಞಾನವನ್ನೇ ಆರಿಸಬೇಕಾಯಿತು. ಸೀಟೇನೂ ಸುಲಭದಲ್ಲಿ ಸಿಗುವಂಥದ್ದಾಗಿರಲಿಲ್ಲ. ಅದಕ್ಕಾಗಿ ಕಂಡ ಕಂಡ ಕಾಲೇಜುಗಳನ್ನು ಅಲೆದು ಕೊನೆಗೆ ಯಾರದೋ ವಶೀಲಿಯ ಮೇಲೆ ಒಂದು ಕಡೆ ಸಾಯನ್ಸ್ ವಿಭಾಗ ಸೇರಿಕೊಂಡ. ಇನ್ನೂ ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಅವನಿಗೆ ಒಳ್ಳೆಯ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಪ್ರವೇಶ ದೊರಕುತ್ತಿತ್ತು. ಅವನ ಅಪ್ಪನಿಂದ ಶುರುಮಾಡಿ ಎಲ್ಲರ ಒತ್ತಾಯ ಎಷ್ಟಾಯಿತೆಂದರೆ ಇದಲ್ಲದೇ ಬೇರೆ ಯಾವ ದಾರಿಯೂ ಇಲ್ಲವೇನೋ ಎಂಬಂತಾಗಿತ್ತು. ನಮಗೆಲ್ಲ ಶಿಕ್ಷಣವೇ ಆಸ್ತಿ ಎಂಬ ಧಮಕಿಯ ಮಾತುಗಳು ಅವನಲ್ಲಿ ಹುಟ್ಟಿಸಿದ ರೇಜಿಗೆಯನ್ನವನು ಯಾರಿಗೂ ಹೇಳಲಾರ. ಇಷ್ಟು ಕಡಿಮೆ ಅಂಕ ಗಳಿಸಿ ಸಾಯನ್ಸಿಗೆ ಸೀಟು ಕೇಳಲು ಬಂದ ಅವನನ್ನು ಕಾಲೇಜುಗಳಲ್ಲಿ ಗುಮಾಸ್ತರಿಂದ ಹಿಡಿದು ಆಡಳಿತ ಮಂಡಳಿಯವರೆಗೆ ನಡೆಸಿಕೊಂಡ ರೀತಿ ಅವನ ಒಳಗಿನ ಕೋಪಕ್ಕೆ, ಹೇಗೆ ತನ್ನ ಈ ಯಶಸ್ಸಿನ ಭಾರ ಕಳಕೊಳ್ಳಲಿ ಎಂದು ಕಾಯುತ್ತಿದ್ದವನಿಗೆ ಸರಿಯಾದ ನೆವವಾಗಿ ಒದಗಿ ಬಂತು.
ಕಾಲೇಜಿನಲ್ಲಿ ಅರ್ಜಿ ಪಡೆಯಲು ದೊಡ್ಡ ಕ್ಯೂ ನಿಂತು ಕೊನೆಗೂ ಆಫೀಸಿನ ಗುಮಾಸ್ತೆಯನ್ನು ನೋಡಿದಾಗ ಇವನೊಂದು ನಿಕೃಷ್ಟ ಹುಳುವೇನೋ ಎಂಬಂತೆ ಅವನು ವರ್ತಿಸಿದ ರೀತಿ ಘನಶ್ಯಾಮನನ್ನು ಕಂಗೆಡಿಸಿತು. ‘ಹೋಗ್ರೀ ಹೋಗ್ರೀ… ಯಾಕೆ ಎಲ್ಲರ ಸಮಯ ಹಾಳು ಮಾಡ್ತೀರಿ? ಹೊರಗೆ ಬೋರ್ಡು ಓದಿ ಬನ್ನಿ ಎಂದು ಎಷ್ಟು ಸಲ ಬಡಕೊಂಡರೂ ಹಾಗೇ ಬರುತ್ತೀರಲ್ಲ. ಅಲ್ಲಿ ಸ್ಪಷ್ಟವಾಗಿ ಹಾಕಿಲ್ಲೇನು – ಸಾಯನ್ಸಿಗೆ ಇಲ್ಲಿ ತೊಂಬತ್ತೆರಡು ಪರ್ಸೆಂಟ್‌ಗೇ ಕೊನೆಯ ಸೀಟು. ಜಾತಿ ಪರಿಜಾತಿ ಕುಂಟ ಕಿವುಡ ಎಬಡ ಏನೂ ಇಲ್ಲದೇ, ಕೈಕಾಲು ನೆಟ್ಟಗಿದ್ದರೆ ತೊಂಬತ್ತೆರಡಕ್ಕಿಂತ ಹೆಚ್ಚಿಗೆ ಬೇಕೇ ಬೇಕು. ಬರೇ ಅರವತ್ತೊಂದು ಪರ್ಸೆಂಟ್ ತಗೊಂಡು ಬಂದಿದ್ದಾರೆ ಸುಮ್ಮನೇ ಎಲ್ಲರ ಸಮಯ ಹಾಳು ಮಾಡಲು….’ ಎಂದವನು ತನ್ನ ಜೋಕಿಗೇ ತಾನೇ ಹೆಮ್ಮೆ ಪಟ್ಟುಕೊಳ್ಳುತ್ತ ಸಮರ್ಥಕರು ಸಿಗುವರೇನೋ ಎಂದು ಅತ್ತಿತ್ತ ನೋಡತೊಡಗಿದ. ಅವನ ಉದ್ಧಟತನದ ಕೀಳು ಹಾಸ್ಯಕ್ಕೆ ತೊಂಬತ್ತೆಂಟು ಗಳಿಸಿದ ಹುಡುಗಿಯ ಅಪ್ಪನೂ, ತೊಂಬತ್ತೇಳು ಗಳಿಸಿದ ಹುಡುಗನ ಅಪ್ಪನೂ ನಕ್ಕರು. ತಮ್ಮ ಮಕ್ಕಳು ಹೇಗೆ ಸಕಲ ಸುಖಭೋಗಗಳನ್ನು ತಿರಸ್ಕರಿಸಿ ಹಗಲೂ ರಾತ್ರಿ ಓದಿ ಅಂಕಗಳನ್ನು ಪಡೆದರೆಂದು ಸಾರ್ಥಕ್ಯದ ದನಿಯಲ್ಲಿ ಹೇಳತೊಡಗಿದರು. ಅಷ್ಟೇ ಆಯಿತೇನು? ಇದೀಗ ಶುರುವಾಗಿದೆ ಅಷ್ಟೇ. ಈವತ್ತಿನ ಕಾಲದಲ್ಲಿ ಎಷ್ಟೊಂದು ಸ್ಫರ್ಧೆ. ಎಷ್ಟು ತಗೊಂಡರೂ ಸಾಲದು. ನಮಗೇನು ಆಸ್ತಿಯೇ ಪಾಸ್ತಿಯೇ ಜಾತಿಯೇ? ಇರುವುದು ವಿದ್ಯೆಯೊಂದೇ ಎಂದೆಲ್ಲ ಮಾತಾಡಿಕೊಳ್ಳತೊಡಗಿದರು. ಆ ಗುಮಾಸ್ತ ತನ್ನ ಅರ್ಜಿಯನ್ನು ಬೀಸಾಡುತ್ತಾನೇನೋ ಅನಿಸುವಂತೆ ಎದುರು ಟೇಬಲ್ಲಿನ ಮೇಲೆ ಇಟ್ಟ ಪರಿಯನ್ನು ಘನಶ್ಯಾಮನಿಗೆ ಮರೆಯಲಾಗಲಿಲ್ಲ. ಅವನ ಆ ಚಹರೆ, ಅವನು ಕಾಗದವನ್ನು ಇಟ್ಟ ರೀತಿ, ಅವನು ತಲೆಯನ್ನು ತಿರುಗಿಸಿದಾಗ ಅವನ ಕತ್ತಿನ ಕೊಂಕು, ಅವನ ಕೈ ಬೆರಳು ಟೇಬಲ್ಲಿನ ಮೇಲೆ ಬಡಿದ ರೀತಿ, ಅವನ ನಡು ಬೆರಳಿನ ಹರಳಿನ ಉಂಗುರ – ಎಲ್ಲವೂ ಅವನನ್ನು ನಾನಾ ವಿಧವಾಗಿ ಕಾಡಿದವು. ಪರೀಕ್ಷೆಯ ಮೊದಲು ಇದೊಂದನ್ನು ದಾಟಿಬಿಟ್ಟರೆ ಮುಗಿಯಿತು ತಾನು ಜಗತ್ತನ್ನೇ ಗೆದ್ದ ಹಾಗೆ ಎಂದು ಭಾವಿಸಿಕೊಂಡಿದ್ದ. ಆದರೆ ಅದಾಗಿದ್ದೇ ಇನ್ನೊಂದೇನೋ ಎದುರು ಬಂದು ನಿಂತುಕೊಂಡಿತ್ತು. ಮೂವತ್ತೈದು ಪರ್ಸೆಂಟಿಗೆ ಯಾವ ಗೊಂದಲವೂ ಇಲ್ಲದೇ ಆರ್ಟ್ಸಗೆ ಸೇರಬಹುದಿತ್ತು; ಯಶಸ್ಸಿಲ್ಲದಿದ್ದರೆ ಆಯ್ಕೆಯ ಈ ಸಂಕಟಗಳಿರುತ್ತಿರಲಿಲ್ಲ ಅನಿಸಿತು.
ಈ ಮೊದಲ ದಿನದ ಅನುಭವ ಬೇರೆ ಬೇರೆ ರೂಪಗಳಲ್ಲಿ ಮರುಕಳಿಸತೊಡಗಿತು. ಫಸ್ಟಕ್ಲಾಸ್ ಬಂದ ಮಗನನ್ನು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಾರೆಂದು ಭಾವಿಸಿದ ಅವನ ಅಪ್ಪನಿಗೆ ಇದೆಲ್ಲ ಗೊತ್ತೇ ಇರಲಿಲ್ಲ. ಅವರ ಕಾಲದಲ್ಲಿ ಫಸ್ಟಕ್ಲಾಸ್ ಅಂದರೆ ಮುಂದಿನ ಜೀವನ ಸುಗಮವಾಯಿತೆಂದೇ ಅರ್ಥ. ಮುಂದಿನ ದಿನಗಳಲ್ಲಿ ಘನಶ್ಯಾಮ ಅಲೆದಲೆದು ದಣಿದ. ದಿನವೂ ಹೊಸತೊಂದು ಕಾಲೇಜು, ಮೊದಮೊದಲು ಹೆಸರುವಾಸಿ ಕಾಲೇಜುಗಳು, ಅನಂತರ ಎಲ್ಲೆಲ್ಲಿ ಸಾಯನ್ಸ ಇದೆಯೋ ಆ ಎಲ್ಲ ಕಾಲೇಜುಗಳು – ಹೀಗೆ ಓಡಾಡಿದ. ಗುಮಾಸ್ತರೇ ಈ ಕಾಲೇಜುಗಳನ್ನು ನಡೆಸುವುದೋ ಹೇಗೆ ಎಂಬ ಅನುಮಾನ ಬರತೊಡಗಿತು. ಕಾಲೇಜಿನ ಆಡಳಿತ ಮಂಡಳಿಯನ್ನು ಯಾರು ಯಾರು ಯಾವ ಯಾವ ಕಾರಣಗಳಿಂದ ಹಿಡಿತದಲ್ಲಿಟ್ಟುಕೊಂಡಿರುತ್ತಾರೆ ಎಂಬುದು ಅವನಿಗೆ ಸ್ವಲ್ಪ ಸ್ವಲ್ಪ ಗೊತ್ತಾಗತೊಡಗುವ ವೇಳೆಗೆ ಈ ಎಲ್ಲ ಸಂಕೀರ್ಣ ಮಂಡಲದಲ್ಲಿ ಕಳೆದು ಹೋಗಿದ್ದ. ದಿನಗಳೆದಂತೆ ಅವನ ಅಪ್ಪನಿಗೂ ಸಹನೆ ತಪ್ಪತೊಡಗಿತು. ಫಸ್ಟಕ್ಲಾಸಿನ ಪೇಡೆಯ ಡಬ್ಷ ಕಪಾಟಿನ ಮೇಲೆ ಇದ್ದುದು ಘನಶ್ಯಾಮನ ಕಣ್ಣು ಕುಕ್ಕುತ್ತಿತ್ತು. ಒಂದು ದಿನ ಅದು ಅಪ್ಪನ ಕಣ್ಣಿಗೆ ಬಿದ್ದಾಗ, ಅವರದನ್ನು ತೆರೆದು ನೋಡಿ ಅದರೊಳಗಿದ್ದ ಕೊನೆಯ ತುಂಡನ್ನು ಬಾಯಲ್ಲಿ ಹಾಕಿಕೊಂಡು, ಪೆಟ್ಟಿಗೆಯನ್ನು ಕಸದ ಬುಟ್ಟಿಗೆ ಬೀಸಾಕಿಬಿಟ್ಟಿದ್ದರು.
ನಿರಾಸೆಯ ಮೋಡಗಳು ಅವರ ದೈನಿಕವನ್ನು ನಿಧಾನಕ್ಕೆ ಆವರಿಸತೊಡಗಿದಂತೆ ಒಂದು ಸಂಜೆ ಅವನ ಅಪ್ಪನ ಜೊತೆ ಅವರ ಸ್ನೇಹಿತರೊಬ್ಷರು ಬಂದರು. ಅದೂ ಇದೂ ಮಾತಾಡಿ ವಿಷಯ ಘನಶ್ಯಾಮನವರೆಗೂ ಬಂತು. ಅವರು ಅಯ್ಯೋ ಅದೇನು ಮಹಾ, ಈ ಕಾಲೇಜಲ್ಲಿ ಆದೀತೋ ಎಂದು ಘನಶ್ಯಾಮ ಮೊದಲ ದಿನ ಹೋದ ಕಾಲೇಜಿನ ಹೆಸರು ಹೇಳಿದರು. ಘನಶ್ಯಾಮನಿಗೆ ಮತ್ತೆ ಆ ದಿನ ನೆನಪಾಯಿತು. ಆ ಗುಮಾಸ್ತೆಯ ಬೆರಳುಗಳು, ಉಂಗುರದ ಹರಳು, ಟೇಬಲ್ಲಿನ ಮೇಲೆ ತಟತಟ ತಟತಟ ಎಂದು ಅವನು ಉಗುರ ತುದಿಯಿಂದ ಬಾರಿಸಿದ ರೀತಿ – ಎಲ್ಲವೂ ಅವನಲ್ಲಿ ಮತ್ತೆ ಮರುಕಳಿಸಿತು. ಆದರೆ ಅವರು ಅಷ್ಟೊಂದು ಆತ್ಮವಿಶ್ವಾಸದಿಂದ ಹೇಳಿದ್ದರಿಂದ ತುಸು ಗಲಿಬಿಲಿಯೂ ಆಯಿತು. ‘ಕೊಡುತ್ತಾರೆ ಕೊಡುತ್ತಾರೆ… ಕೊಡದೇ ಏನು? ನಮ್ಮ ಜೊತೆ ಮುರಕೊಳ್ಳುವಷ್ಟು ಮೂರ್ಖರೇನು?’ ಎಂದವರು ಗರ್ವದಿಂದೆಂಬಂತೆ ಮಾತನಾಡಿದ್ದು ಘನಶ್ಯಾಮನಿಗೆ ತುಸು ವಿಚಿತ್ರವೆನಿಸಿತ್ತು. ಆದರೆ ಅವನು ಮರುದಿನ ಹೋದಾಗ ಆ ಅದೇ ಗುಮಾಸ್ತನೇ ಬೇರೆಯದೇ ದನಿಯಲ್ಲಿ ಮಾತಾಡಿಸಿದ. ಅವನಿಗೆ ಅಲ್ಲಿ ಸೀಟೂ ಸಿಕ್ಕಿತು. ಸಾಯನ್ಸ್ ವಿಭಾಗದಲ್ಲೇ ಸಿಕ್ಕಿತು. ಇದೆಲ್ಲದರಿಂದ ಘನಶ್ಯಾಮ ತಬ್ಷಿಬ್ಷಾದ.
ಅವನ ಜೊತೆಯವರು ಅತಿ ಬುದ್ಧಿವಂತರೇನೂ ಆಗಿರಲಿಲ್ಲ. ಇವನ ಹಾಗೇ ಬಂದ ಅನೇಕರಿದ್ದರು. ಹಾಗಾಗಿ ಬರೀ ಜಾಣ ಸಹಪಾಠಿಗಳ ಜೊತೆ ಇರಬೇಕಾದಂಥ ತೊಂದರೆಯೇನೂ ಆಗಲಿಲ್ಲ. ಸುಮಾರು ಮೂರು ತಿಂಗಳವರೆಗೂ ಅವನು ಸಾಯನ್ಸ್ ಕ್ಲಾಸುಗಳಿಗೆ ಹೋಗಿ ಅಲ್ಲಿ ಹೇಳಿಕೊಡುವ ಯಾವುದೂ ಒಳಹೋಗದೇ, ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ ತಪ್ಪಿಸಿಕೊಳ್ಳಲಾಗದೇ ಕಲಾವಿಭಾಗಕ್ಕೆ ಬದಲಾಯಿಸಿಕೊಳ್ಳಲು ನಿರ್ಧರಿಸಿದ. ಆದರೆ ಆ ನಿರ್ಧಾರದ ಗಹನತೆ ಮತ್ತು ಅದು ಯಾರುಯಾರನ್ನು ಒಳಗೊಂಡಿದ್ದೆಂಬುದು ಅವನಿಗೆ ತಿಳಿದದ್ದು ಆ ಬಗ್ಗೆ ಪ್ರಯತ್ನ ಶುರುಮಾಡಿದಾಗಲೇ. ಬುದ್ಧಿವಂತ ಹುಡುಗರು ಸಾಯನ್ಸ್ ತಗೊಳ್ಳುವವರು, ತಗೊಂಡು ನಂತರ ಬಿಡುವವರು ಜೀವನದಲ್ಲಿ ಯಾವುದನ್ನೂ ಎದುರಿಸುವ ಧೈರ್ಯ ಇಲ್ಲದವರು, ಅರ್ಥವಾಗದಿದ್ದರೆ ಕೇಳಬೇಕು ಅಥವಾ ಟ್ಯೂಶನ್‌ಗೆ ಹೋಗಬೇಕು, ಅದು ಬಿಟ್ಟು ಯಾರಾದರೂ ಇಂಥ ಒಳ್ಳೆಯ ಕಾಲೇಜಿನಲ್ಲಿ ಸಿಕ್ಕಿರುವ ಸಾಯನ್ಸ್ ಸೀಟು ಬಿಟ್ಟುಕೊಡುತ್ತಾರೇನು? ಈ ಕಾಲೇಜಿಗೆ ಸೀಟು ಸಿಗುವುದೇ ಒಂದು ಮಹತ್ಸಾಧನೆ – ಅಂಥದ್ದರಲ್ಲಿ ಈ ರೀತಿ ಮಾಡುವುದು ಹೆಸರಿಗೆ ಮಸಿ ಬಳಿಸಿಕೊಳ್ಳುವುದಕ್ಕೇ ಹೊರತು ಬೇರೇನಲ್ಲ… ಮುಂತಾದ ಹರಿತ ಆಯಧಗಳನ್ನವನು ಎದುರಿಸಬೇಕಾಯಿತು. ಮನೆಯವರ ಕನಸುಗಳನ್ನು ಕೆಡವಬೇಕಾಯಿತು. ಅವನದೇ ಕಾಲೇಜಿನ ಒಂದಿಬ್ಷರು ಹಿರಿಯ ವಿದ್ಯಾರ್ಥಿಗಳನ್ನು ಯಾರದೋ ಬಲವಂತಕ್ಕೆ ಭೇಟಿ ಮಾಡಿದ್ದೂ ಆಯಿತು. ಅರ್ಥವಾಗದಿದ್ದರೆ ಉರು ಹೊಡೆ ಅಂದರವರು – ಸರಳವಾಗಿ. ಅಂತೂ ಬದಲಾವಣೆಗಾಗಿ ಅಪ್ಪನನ್ನು ಒಪ್ಪಿಸಿ, ಕಲಾವಿಭಾಗದಲ್ಲಿ ಕೂಡ ಈಗಿನ ಕಾಲದಲ್ಲಿ ಒಳ್ಳೆಯ ಸ್ಕೋಪ್ ಇದೆಯೆಂಬುದನ್ನು ಹೇಗೋ ಮನಗಾಣಿಸಿದ ಮೇಲೆ ಅವನಿಗೆ ಅನುಮತಿ ಸಿಕ್ಕಿತು. ಅದೇ ಆ ಆಫೀಸು, ಆ ಗುಮಾಸ್ತನ ಚಹರೆಗಳು ಘನಶ್ಯಾಮನಿಗೆ ಮತ್ತೆ ಎದುರಾದವು. ಅವನ ಚಲನೆವಲನೆಗಳಲ್ಲೇ, ಅವನ ದೇಹಭಾಷೆಯಲ್ಲೇ ಏನೋ ಒಂದು ಬಗೆಯ ಕೊಂಕು, ಏನೋ ಒಂದು ರೀತಿಯ ಉಪಹಾಸ ಅಡಗಿರುವುದು ಸ್ಪಷ್ಟವಾಗಿತ್ತು. ಅಂತೂ ವಿಜ್ಞಾನವನ್ನು ಅರಗಿಸಿಕೊಳ್ಳುವುದು ನಿನ್ನಿಂದಾಗದೇ ಬದಲಾಯಿಸಿಕೊಂಡೆಯಲ್ಲ ಎಂಬ ಒಂದು ರೀತಿಯ ಕುಹಕವೂ, ಪಾಪ ಅಜ್ಞಾನಿ ಎಂಬ ಒಂದು ರೀತಿಯ ಕನಿಕರವೂ ಅವನಲ್ಲಿದ್ದ ಹಾಗೆ ತೋರಿತು.
ಇದೇ ಹೊತ್ತಿನಲ್ಲಿ, ಅಂದರೆ ಅದೇ ತಾನೇ ಘನಶ್ಯಾಮ ವಿಜ್ಞಾನದಿಂದ ಕಲಾ ವಿಭಾಗಕ್ಕೆ ಬದಲಾಯಿಸಿಕೊಂಡ ದಿವಸಗಳಲ್ಲಿ ಅವನಿಗೆ ರಾಮದಾಸನ ಪರಿಚಯವಾಯಿತು. ಅರ್ಧತೋಳಿನ ಹತ್ತಿ ಬಟ್ಟೆಯ ಶರಟು ಹಾಕಿಕೊಂಡು, ಕೈಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಅವನು ನಡೆಯುವಾಗ ಯಾರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಅದು ಎದುರು ಬರುವ ನೂರಾರು ವಿದ್ಯಾರ್ಥಿಗಳ ನಮಸ್ಕಾರಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಎಂದು ಘನಶ್ಯಾಮನಿಗೆ ಆಮೇಲೆ ಅರ್ಥವಾಗಿತ್ತು. ನಡೆಯುವಾಗ ಅವನ ಕಣ್ಣು ನೆಲದಲ್ಲೋ ಇಲ್ಲ ದೂರ ಯಾವುದೋ ಅತೀತದಲ್ಲೋ ನೆಟ್ಟ ಹಾಗಿರುತ್ತಿತ್ತು. ಅವನು ಲೈಬ್ರರಿಯಲ್ಲಿ ಕೂತು ಸದಾ ಓದುವನು. ಮತ್ತು ಕೆಲವು ಸಲ ಅವನ ಮೆಚ್ಚಿನ ವಿದ್ಯಾರ್ಥಿಗಳ ಗುಂಪಿನ ಜೊತೆ ಅಥವಾ ಜಗಜೀವನ ರಾಣೆ ಎಂಬ ಇನ್ನೊಬ್ಷ ಅಧ್ಯಾಪಕರ ಜೊತೆ ಲೈಬ್ರರಿಯ ಹೊರಗೆೋ ಅಥವಾ ಕ್ಯಾಂಟೀನಿನಲ್ಲೋ ಅತ್ಯಂತ ಗಹನವಾದ ಚರ್ಚೆಯಲ್ಲಿ ಮುಳುಗಿರುವನು. ಅವರೆಲ್ಲರ ಹಾವಭಾವ, ಅವರ ಮುಖದ ಮೇಲಿನ ಸಂಕಟದ ಗೆರೆಗಳು, ಅವರ ಉದ್ವೇಗ ನೋಡಿದರೆ ಈಗಿಂದೀಗ ಮುಳುಗಿಹೋಗಲಿರುವ ಈ ಜಗತ್ತನ್ನು ಕಾಪಾಡುವಂಥ ಯಾವುದೋ ವಿಷಯವನ್ನು ಅವರು ಅತ್ಯಂತ ತುರ್ತಾಗಿ ಚರ್ಚಿಸುತ್ತಿರುವಂತೆ ಕಾಣುತ್ತಿತ್ತು.
ರಾಮದಾಸನ ಪರಿಚಯವಾದ ದಿನ ಕೂಡ ಹೀಗೆಯೇ ರಾಣೆಯವರ ಜೊತೆ ವಿದರ್ ಅವೇ ಎಂಬ ಶಬ್ದಗಳ ಕುರಿತು ಗಹನವಾದ ಚರ್ಚೆ ನಡೆಯುತ್ತಿತ್ತು. ಆ ಎರಡು ಶಬ್ದಗಳಲ್ಲಿ ಬ್ರಹ್ಮಾಂಡ ಜ್ಞಾನ ಅಡಗಿದೆಯೆಂಬ ರೀತಿಯಲ್ಲಿ ಅವರು ಚರ್ಚಿಸುವುದನ್ನು ಕಂಡು ಘನಶ್ಯಾಮ ತುಸು ತಬ್ಷಿಬ್ಷಾಗಿದ್ದ. ಗೊಂದಲವಾಗಿತ್ತು. ಅವರು ಇವನನ್ನು ತಮ್ಮ ಸಮಾನನೆಂಬಂತೆ ಮಾತಾಡಿಸುತ್ತ ಕ್ಯಾಂಟೀನಿನಲ್ಲಿ ಚಾ ಕುಡಿಸಿ ನಂತರ ಕ್ಲಾಸಿಲ್ಲದ್ದರಿಂದ ಹಾಗೇ ನಡೆಯುತ್ತ ರಾಮದಾಸನ ರೂಮಿನತ್ತ ಹೊರಟರು. ‘ಟೈಮ್ ಇದ್ದರ ಬರ್ರೀ’ ಎಂದು ರಾಣೇ ಇತ್ತ ಆಹ್ವಾನದ ಮೇರೆಗೆ ಘನಶ್ಯಾಮನೂ ಅವರ ಜೊತೆ ಹೊರಟ ಮತ್ತು ವಿದರ್ ಅವೇಯ ಮುಂದಿನ ಮಾತುಗಳನ್ನು ಕೇಳಿಸಿಕೊಂಡ. ಅವನ ಬಾಲ್ಯದಲ್ಲಿ ಒಮ್ಮೆ ಬ್ರಹ್ಮಾವರದ ಯಾರದೋ ಮನೆಗೆ ಹೋದಾಗ ಇದೇ ರೀತಿಯ ಚರ್ಚೆಯೊಂದು ನಡೆದದ್ದು ಜ್ಞಾಪಕಕ್ಕೆ ಬಂತು. ಅವರ ಮನೆಯಲ್ಲಿ ಸೇರಿದ ಇಬ್ಷರು ಊಟದ ನಂತರ ಕೂತು ಗೀತೆಯ ಒಂದು ಮಾತನ್ನೆತ್ತಿಕೊಂಡು ಅದು ಜೀವನ್ಮರಣದ ಪ್ರಶ್ನೆಯೋ ಎಂಬಂತೆ ಚರ್ಚಿಸುತ್ತಿದ್ದರು. ಜಗುಲಿಯಲ್ಲಿ ದಿಂಬಿಗೆ ಆತು ಕೂತ ಅವರ ಹಾವಭಾವಗಳಿಂದ, ತಮ್ಮ ವಾದವನ್ನು ಪ್ರತಿಪಾದಿಸುವ ಗಳಿಗೆಗಳಲ್ಲಿಯ ಅವರ ದೇಹಭಾಷೆಯಿಂದ ಘನಶ್ಯಾಮನ ಮನಸ್ಸಿನಲ್ಲಿ ಅದೆಲ್ಲ ಗಟ್ಟಿಯಾಗಿ ಕೂತುಬಿಟ್ಟಿತ್ತು. ಅವರ ನಂಬಿಕೆಯಾಗಲೀ ಅವರ ಉತ್ಕಟತೆಯಾಗಲೀ ಸುಳ್ಳೆಂದು ಘನಶ್ಯಾಮನಿಗೆ ಅನಿಸಲಿಲ್ಲ. ಅಂತೆಯೇ ಈ ವಿದರ್ ಅವೇ ಕೂಡ ಬಹಳ ಮಹತ್ವದ ವಿಷಯವೆಂಬುದರಲ್ಲಿ ಅವನಿಗೆ ಸಂದೇಹವಿರಲಿಲ್ಲ. ಗೀತೆಯ ಮಾತಿನ ಥರ ಇದೂ ಅವನಿಗೆ ಅರ್ಥವಾಗುತ್ತಿರಲಿಲ್ಲ ಅಷ್ಟೇ.
ರಾಮದಾಸನ ರೂಮಿನಲ್ಲಿ ಅದೇ ಚರ್ಚೆ ಮುಂದುವರಿಯಿತು. ಅದರ ನಡುವೆಯೇ ಅವರು ಊಟಕ್ಕೂ ತಯಾರಿ ಮಾಡತೊಡಗಿದ್ದರು. ಹೀಗೆ ಊಟದ ಹೊತ್ತಿನಲ್ಲಿ ತಾನು ಅಲ್ಲಿ ಕೂತಿರುವುದು ಯಾಕೋ ಅವನಿಗೆ ಸರಿಕಾಣಲಿಲ್ಲ. `ನಾನು ಬರುತ್ತೇನೆ ಸರ್’ ಎಂದವನು ಹೊರಟ. ಆಗ ಅವರು `ಅರರೇ ಯಾಕೆ ಅವಸರ ಇದ್ದು ಹೋಗು’ ಅಂದರು. ಅವರ ಉಪಚಾರಕ್ಕೆ ಕಾರಣ ತಿಳಿಯದೇ ಘನಶ್ಯಾಮ ಚಡಪಡಿಸಿದ. ಒಂದು ತಪ್ಪಲೆಯಲ್ಲಿ ಅಕ್ಕಿ ಇಟ್ಟು ರಾಣೆಯವರ ಜೊತೆ ಮಾತನಾಡುತ್ತ ಆಡುತ್ತ ತರಕಾರಿಯನ್ನು ಹೆಚ್ಚಿ ಅದರಲ್ಲೇ ಹಾಕಿ, ಉಪ್ಪು ಖಾರವನ್ನೂ ಅದಕ್ಕೇ ಸೇರಿಸಿ ಕಿಚಡಿ ಮಾಡಿದರು. ಊಟಕ್ಕಿರು ಅನ್ನುವ ಉಪಚಾರದ ಮಾತೂ ಆಡದೆಯೇ ಅವನು ಇದ್ದೇ ಇರುತ್ತಾನೆ ಎಂಬ ಭರವಸೆಯಲ್ಲಿ ಮೂವರಿಗೆ ತಟ್ಟೆಗಳನ್ನಿಟ್ಟು ನಡುವೆ ತಪ್ಪಲೆಯನ್ನಿಟ್ಟರು. ನೀರಿನ ಚೆಂಬು ಇಟ್ಟರು. ಸುತ್ತ ಕೂತು ಮಾತು ಮುಂದುವರಿಸುತ್ತ ಊಟ ಮಾಡಿದರು. ಯಾವ ಬಡಿವಾರವೂ ಇಲ್ಲದ ಆ ಸರಳ ಊಟ ಘನಶ್ಯಾಮನಿಗೆ ಬಹಳ ಹಿಡಿಸಿತು. ಊಟ ಮುಗಿಸಿ ಅವರವರ ತಟ್ಟೆ ಅವರೇ ತೊಳೆದಿಟ್ಟರು. ಅನ್ನದ ತಪ್ಪಲೆಯೂ ಪೂರ್ತಿ ಖಾಲಿಯಾಯಿತು. ಅದನ್ನೂ ತೊಳೆದಿಡಲಾಯಿತು. ಊಟದ ನಂತರ ರಾಣೇ ಹೊರಟರು. ಅವರು ಹೋದ ನಂತರ ಅಲ್ಲೇ ಚಾಪೆಯ ಮೇಲೆ ಅಡ್ಡಾಗಿ ರಾಮದಾಸ ಘನಶ್ಯಾಮನ ಜೊತೆ ಮಾತಾಡತೊಡಗಿದ. ನಿಧಾನವಾಗಿ ಬಂದ ಕಾರಣ ಕೇಳಿದ. ಯಾವ ಕಾರಣವೂ ಇರಲಿಲ್ಲ. ಆದರೆ ಏನೂ ಕಾರಣವಿಲ್ಲದೇ ಇಷ್ಟು ಹೊತ್ತು ಇವರ ಬೆನ್ನ ಹಿಂದೆ ತಿರುಗಿದ್ದು ಹಾಸ್ಯಾಸ್ಪದವಾಗಿ ತೋರಬಹುದೆಂದು ಭಾವಿಸಿ ತಾನು ವಿಜ್ಞಾನದಿಂದ ಕಲಾವಿಭಾಗಕ್ಕೆ ಬದಲಾಯಿಸಿದ್ದರ ಬಗ್ಗೆ ಅವರ ಸಲಹೆ ಕೇಳಲು ಬಂದೆನೆಂದು ಹೇಳಿದ. ಅದನ್ನು ಕೇಳಿ ಅವರು ಖುಷಿಪಟ್ಟರೇನೋ ಎಂದು ಘನಶ್ಯಾಮನಿಗೆ ಅನಿಸಿತು.
ಅಲ್ಲಿಂದ ಶುರುವಾದ ಮಾತು ಎಲ್ಲೆಲ್ಲೋ ಹರಿಯತೊಡಗಿತು. ಭದ್ರತೆಗೆ ಹಪಾಪಿಸುವ ಮಧ್ಯಮವರ್ಗದ ಮೌಲ್ಯಗಳು, ವರ್ಗೀಕ್ರತ ಶ್ರೇಣಿಯನ್ನು ಹುಟ್ಟುಹಾಕಿದ ಬಂಡವಾಳಶಾಹಿ ಎಂದೆಲ್ಲ ಮಾತಾಡತೊಡಗಿದಾಗ ತನ್ನ ತೊಳಲಾಟವನ್ನೇ ಅವರು ಸರಿಯಾದ ಶಬ್ದಗಳಲ್ಲಿಟ್ಟು ಹೇಳುತ್ತಿದ್ದಾನೆಂದು ಘನಶ್ಯಾಮನಿಗೆ ಅನಿಸಿತು. ತನ್ನ ಸಂಕಟಗಳನ್ನೆಲ್ಲ ಪೂರ್ತಿಯಾಗಿ ಅರ್ಥಮಾಡಿಕೊಳ್ಳಬಲ್ಲ, ಆ ಬಗ್ಗೆ ಆಗಲೇ ಯೋಚಿಸಿರುವಂಥ ವ್ಯಕ್ತಿಯೊಬ್ಷ ಸಿಕ್ಕ ಬಗ್ಗೆ ಅಪಾರವಾದ ಸಂತೋಷವಾಯಿತು. ಕೇವಲ ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ, ವಿಜ್ಞಾನದ ಕಗ್ಗಂಟನ್ನು ಬಿಡಿಸಲಾಗದ ತನ್ನ ದೌರ್ಬಲ್ಯದಿಂದಾಗಿ ತಾನು ಕಲಾವಿಭಾಗಕ್ಕೆ ಬದಲಾಯಿಸಿದ್ದಲ್ಲ, ಇದರ ಹಿಂದೆ ತನ್ನ ಕೈಮೀರಿದ ಬಲವಾದ ತಾತ್ವಿಕ ಕಾರಣಗಳೂ ಇವೆ ಎಂದು ಅವನಿಗೆ ಅನಿಸಿ, ಈ ದಾರಿದೀಪವನ್ನು ಒದಗಿಸಿಕೊಟ್ಟ ರಾಮದಾಸನ ಬಗ್ಗೆ ಕೃತಜ್ಞತೆಯುಂಟಾಯಿತು. ಮುಂದೆಂದೋ ಒಮ್ಮೆ ಈ ಬಗ್ಗೆ ಅರ್ಚನಾಗೆ ಹೇಳಿದಾಗ ಅವಳು `ನೀನು ಏನನ್ನಾದರೂ ಸ್ವೀಕರಿಸಲು ಹಪಾಪಿಸುತ್ತಿದ್ದೆ. ಇದು ಸಿಕ್ಕಿತು; ತಗೊಂಡೆ. ಅವರ ಬದಲಿಗೆ ಒಬ್ಷ ಭಯೋತ್ಪಾದಕ ಸಿಕ್ಕಿದ್ದರೂ ನೀನು ಸ್ವೀಕರಿಸಲು ಸಿದ್ಧನಾಗಿದ್ದೆ’ ಎಂದು ಹೇಳಿ ಘನಶ್ಯಾಮನ ತಲೆ ಕೆಡಿಸಿಬಿಟ್ಟಿದ್ದಳು.
ಅವಳ ವಾದ ಹೀಗೆ: ಈ ವಯಸ್ಸಲ್ಲಿ ಮೈಯಲ್ಲಿ ತಾರುಣ್ಯ ದುಸುಮುಸು ಅನ್ನುತ್ತಿರುತ್ತದೆ. ಎಲ್ಲರ ಮೇಲೂ ಕೋಪ. ಯಾಕೆಂದು ಅರ್ಥವಾಗದ ಕೋಪ. ಸ್ವಾತಂತ್ರ್ಯ ಚಳುವಳಿಗಳಂಥ ಮಹತ್ಕಾರ್ಯಗಳನ್ನು ತಮ್ಮ ಹಿಂದಿನ ತಲೆಮಾರಿನವರೇ ಮಾಡಿ ಮುಗಿಸಿಬಿಟ್ಟಿದ್ದಾರೆಂದು ಅವಕಾಶವಂಚಿತ ಭಾವನೆ. ಏನಾದರೂ ಮಾಡಬೇಕು. ಬಹುದೊಡ್ಡ ಕ್ರಾಂತಿಕಾರೀ ಕೆಲಸ ಮಾಡಬೇಕು. ಎಲ್ಲವನ್ನೂ ದೊಡ್ಡ ಧ್ಯೇಯಕ್ಕಾಗಿ ಮುಡಿಪಿಡಬೇಕು ಎಂಬ ಭಾವನೆ ಉಕ್ಕುತ್ತಿರುತ್ತದೆ. ದೇಶಭಕ್ತಿ, ಸಮಾಜದ ಅಮೂಲಾಗ್ರ ಬದಲಾವಣೆ ಇಂಥ ವಿಷಯಗಳೇ ಅವರ ಭಾವುಕತೆಯನ್ನು ತಣಿಸಬಲ್ಲವು. ಆದರೆ ಸಣ್ಣ ಸಣ್ಣ ಸಂಗತಿಗಳಿಗೂ ಜೀವನದಲ್ಲಿ ಮಹತ್ವದ ಸ್ಥಾನ ಇದೆ ಎಂದು ಮನವರಿಕೆ ಮಾಡಿಕೊಡುವವರಾರು? ಇಂಥ ಎನರ್ಜಿಗೆ ಹರಿಯಲು ಒಂದು ದಾರಿ ಬೇಕು. ಅದು ಪ್ರೀತಿಸುತ್ತದೆ. ಅವಶ್ಯ ಬಿದ್ದಲ್ಲಿ ಇಡಿಯ ಸಮಾಜವನ್ನೇ ಎದುರು ಹಾಕಿಕೊಳ್ಳಲು ಹಿಂಜರಿಯುವುದಿಲ್ಲ. ಆದರೆ ಸರಿಯಾದ ಹಾದಿ ಹತ್ತದೆೇ ಹೋದರೆ ಏನೂ ತೋಚದೇ ವಿನಾಕಾರಣವಾಗಿಯಾದರೂ ಸರಿ, ಎದುರುಹಾಕಿಕೊಳ್ಳುವುದನ್ನೇ ಅಭಿವ್ಯಕ್ತಿಯಾಗಿ ಮಾಡಿಕೊಳ್ಳುತ್ತದೆ…..
ಹೀಗೆಲ್ಲ ಹೇಳಿದ ಅವಳ ಮಾತುಗಳಿಗೆ ಪ್ರತಿಯಾಗಿ ಘನಶ್ಯಾಮ ಕಾಲೇಜು ಸೇರುವ ಹೊತ್ತಿಗೆ ತನಗೆ ಆದ ಅವಮಾನವನ್ನು, ಗುಮಾಸ್ತನ ಕೈಬೆರಳ ಉಂಗುರಗಳನ್ನು, ಅವನು ಅರ್ಜಿಯನ್ನು ಟೇಬಲ್ಲಿನ ಮೇಲೆ ಇಡುವಾಗ ಅವನ ಕೈಯ ಚಲನೆಯ ಧಾಟಿಯಲ್ಲಿ ಇದ್ದ ತಿರಸ್ಕಾರವನ್ನು, ಅವಳಿಗೆ ತಟ್ಟುವ ಹಾಗೆ ಹೇಳಲು ಪ್ರಯತ್ನಿಸಿದ್ದ. ತನ್ನ ಅನುಕಂಪ ಗಳಿಸಲು ಅವನು ಇದನ್ನೆಲ್ಲ ಹೇಳುತ್ತಿದ್ದಾನೆಂದು ಅವಳಿಗೆ ಅನಿಸದೇ ಇರುವ ಹಾಗೆ ಮಾಡುವುದು ಹೇಗೆ ಎಂದು ತೊಳಲಾಡಿದ್ದ.
– ೨ –
ಮುಂದಿನ ಐದು ವರ್ಷಗಳಲ್ಲಿ ರಾಮದಾಸನ ಒಡನಾಟ ಘನಶ್ಯಾಮನಿಗೆ ಪ್ರಿಯವಾದ ಸಂಗತಿಯಾಯಿತು. ಅವನು ಪಾಠ ಮಾಡುವುದು ಇತಿಹಾಸ. ಇತಿಹಾಸವೆಂದರೆ ಬರೀ ಇಸವಿಗಳ ಕಲಸುಮೇಲೋಗರವೆಂಬ ಘನಶ್ಯಾಮನ ತಿಳವಳಿಕೆ ರಾಮದಾಸನಿಂದಾಗಿ ಬದಲಾಯಿತು. ಇತಿಹಾಸವೆಂದರೆ ಎದ್ದ ಸಾಮ್ರಾಜ್ಯಗಳು ಮತ್ತು ಬಿದ್ದ ಕೋಟೆಗಳು ಮಾತ್ರ ಅಲ್ಲ ಎಂದು ಗೊತ್ತಾಗುತ್ತ ಹೋಯಿತು. ರಾಮದಾಸನ ಸ್ನೇಹಿತರ ಗುಂಪಿನಲ್ಲಿ ಘನಶ್ಯಾಮನಿಗೂ ಆಗಾಗ ಜಾಗ ಸಿಗತೊಡಗಿತು. ಇತಿಹಾಸದಿಂದ ಕಲಿತ ಪಾಠಗಳು, ಇತಿಹಾಸದ ಮರುಕಳಿಕೆ, ಇತಿಹಾಸದ ನಿರ್ಲಕ್ಷ್ಯ ಹೀಗೆ ಅದೇನು ಜೀವಂತ ಇರುವ ಏನೋ ಒಂದು ಎಂಬಂತೆ ಅವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ಸುಮ್ಮನೇ ಬಿಡುತ್ತದೇನು ಇತಿಹಾಸ? ಎಲ್ಲವನ್ನೂ ಸರಿಯಾದ ಜಾಗದಲ್ಲಿಡುತ್ತದೆ, ಇತಿಹಾಸವನ್ನು ತಿರುಚುವ ಅರ್ಥಹೀನ ಪ್ರಯತ್ನ – ಹೀಗೆ ಅವರ ನಡುವಿನ ಚರ್ಚೆಗಳಲ್ಲಿ ಇತಿಹಾಸವೂ ಒಂದು ಸಕ್ರಿಯ ಪಾತ್ರವಾಗಿತ್ತು. ರಾಮದಾಸ ಪಾಠ ಮಾಡುವಾಗ ಅವನ ದನಿಯ ಗದ್ಗದತೆಯಲ್ಲಿಯೇ ಕಂಗೆಟ್ಟ ಚಕ್ರವರ್ತಿಯ ತಳಮಳ ಕೇಳಿಬರುತ್ತಿತ್ತು. ಇತಿಹಾಸದ ನಿರ್ದಯತೆ. ಇತಿಹಾಸದ ಕ್ರೌರ್ಯ. ಅಧಿಕಾರವನ್ನೂ ಧರ್ಮವನ್ನೂ ಕಲಸಿ ಗಬ್ಷೆಬ್ಷಿಸಿದ ಲಂಪಟರು. ಇತಿಹಾಸ ನಿಷ್ಪಕ್ಷಪಾತಿ. ಇತಿಹಾಸ ದಂಡಿಸುತ್ತದೆ. ಅದಕ್ಕೆ ಇದು ಕಾಣಲ್ಲ. ಇದು ದಾಖಲಾಗಲ್ಲ. ಇತ್ಯಾದಿ ಇತ್ಯಾದಿ.
ರಾಮದಾಸನು ಮಾತ್ರ ತನಗೆ ಒಂದು ಇತಿಹಾಸವೇ ಇಲ್ಲ ಅನ್ನುವ ರೀತಿಯಲ್ಲಿರುವನು. ಅವನು ಯಾರು, ಎಲ್ಲಿಯವನು ಎಂದು ಯಾರಿಗೂ ಸರಿಯಾಗಿ ಗೊತ್ತಿದ್ದಂತಿರಲಿಲ್ಲ. ಅವನು ಮಾತ್ರ ಪುರಸತ್ತೇ ಇಲ್ಲದವನ ಹಾಗೆ ಸದಾ ಯಾವುಯಾವುದೋ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವನು. ಕೈಯಲ್ಲಿ ಯಾವಾಗಲೂ ಒಂದು ಪುಸ್ತಕದ ಕಂತೆ. ರೊಮ್ಯಾಂಟಿಕ್ ಕಾದಂಬರಿಗಳ ಭಗ್ನ ನಾಯಕನ ಹಾಗೆ ಕಾಣುತ್ತಾನೆ ಅನ್ನುವುದೇ ಅವನನ್ನು ಸರಿಯಾಗಿ ವರ್ಣಿಸುವ ರೀತಿ. ಇಂಥ ಕ್ಲೀಷೆಯನ್ನು ವ್ಯಂಗ್ಯದ ಸೋಂಕಿಲ್ಲದೇ ಹೇಳುವುದು ಬಹಳ ಕಷ್ಟ.
ಒಂದು ದಿನ ಕಾಲೇಜಿನ ದಾರಿಯಲ್ಲಿ ಒಂದು ಸೈಕಲ್ಲಿಗೂ ಕಾರಿಗೂ ಡಿಕ್ಕಿಯಾಗಿ ಸೈಕಲ್ ಸವಾರನಿಗೆ ಸ್ವಲ್ಪ ಪೆಟ್ಟಾಯಿತು. ಅಲ್ಲಿ ಸೇರಿದ ಜನ, ಅವರ ಪ್ರತಿಕ್ರಿಯೆಗಳು ಮತ್ತು ಕಾರಿನವನು ದುಡ್ಡು ಕೊಟ್ಟು ಎಲ್ಲವನ್ನೂ ಬೇಗ ಬೇಗ ಮುಗಿಸಲು ನೋಡುತ್ತಿದ್ದ ವರಸೆ ಈ ಎಲ್ಲವನ್ನೂ ರಾಮದಾಸ ವಿಶ್ಲೇಷಿಸಿದ ರೀತಿ ಘನಶ್ಯಾಮನನ್ನು ದಂಗು ಬಡಿಸಿತು. ಅವನು ಹೇಳುತ್ತಿದ್ದ ವರ್ಗಸಂಘರ್ಷ ಅಸಮಾನತೆ ಇತ್ಯಾದಿಗಳೆಲ್ಲ ಅವನಿಗೆ ತನ್ನದೇ ಅನುಭವವೆಂಬಂತೆ ಅನಿಸತೊಡಗಿತು. ತನ್ನ ಒಳಗಿನ ವಿನಾಕಾರಣ ಸಿಟ್ಟಿಗೆ ಮತ್ತು ಅಸಮಾಧಾನಕ್ಕೆ ಕಾರಣಗಳು ಕಾಣತೊಡಗಿದವು. ತನ್ನ ಸಿಟ್ಟು ಯಾರ ಮೇಲೆ ಎಂದು ಗೊತ್ತಾಗತೊಡಗಿರುವ ಲಕ್ಷಣಗಳು ಕಾಣತೊಡಗಿದವು. ಅವನ ಜೊತೆಯ ಹುಡುಗರು ರಾಮದಾಸನ ಬಗ್ಗೆ ಕೊಮಿ ಕೊಮಿ ಎಂದು ಉಪಹಾಸದ ದನಿಯಲ್ಲಿ ಮಾತಾಡತೊಡಗಿದರೆ ಘನಶ್ಯಾಮನಿಗೆ ಅಸಹನೀಯ ಸಿಟ್ಟು ಬರುತ್ತಿತ್ತು. ಘೇರಾವುಗಳು ಸಂಪು ಮೆರವಣಿಗೆ ಘೋಷಣೆಗಳು ಯೂನಿಯನ್‌ಗಳ ಬಗ್ಗೆ ತಿರಸ್ಕಾರ ತುಂಬಿಕೊಂಡ ಮಧ್ಯಮವರ್ಗದ ಹುಡುಗರಿಗೆ ಆ ಬಗೆಯ ಭಾವನೆ ಬರಲು ಕಾರಣವೇನು ಎಂದೂ ರಾಮದಾಸ ವಿವರಿಸಿದ್ದ. ತಮ್ಮ ವ್ಯವಸ್ಥೆಯನ್ನು ಅಲ್ಲಾಡಿಸುವಂಥ ಯಾವುದನ್ನೂ ಅವರು ಸಹಿಸುವುದಿಲ್ಲ. ಆದರೂ ಪ್ರತೀ ವ್ಯವಸ್ಥೆಯೂ ತನ್ನೊಳಗೆಯೇ ಈ ಬಂಡಾಯದ ಬೀಜಗಳನ್ನು ಇಟ್ಟುಕೊಂಡಿರುತ್ತದೆ. ಉದಾಹರಣೆಗೆ ಘನಶ್ಯಾಮನಂಥವರನ್ನು ರೂಪಿಸುತ್ತದೆ…..
ಎಲ್ಲೂ ಫೇಲಾಗದೇ ಘನಶ್ಯಾಮ ಬಿ.ಎ. ಕೊನೆಯ ವರ್ಷ ತಲುಪಿದರೂ, ಅವನು ಬಿಟ್ಟು ಬಂದ ಹಾದಿಯ ಬಗ್ಗೆ ಮನೆಯಲ್ಲಿ ಇನ್ನೂ ಅಸಮಾಧಾನವಿತ್ತು. ಮನೆಯವರ ಜೊತೆಯ ತನ್ನ ಭಿನ್ನಾಭಿಪ್ರಾಯಕ್ಕೆ, ಅವರ ಅಪೇಕ್ಷೆಗಳಿಂದ ತಾನು ದೂರವಾಗುತ್ತಿರುವುದಕ್ಕೆ, ಅದರಿಂದಾಗಿ ಅವರಿಗಾದ ನಿರಾಸೆ ಮತ್ತು ಅವರಲ್ಲಿ ಹುಟ್ಟಿದ ಅಪಾರವಾದ ದುಃಖವನ್ನು ಕಡೆಗಣಿಸುವುದಕ್ಕೆ ಘನಶ್ಯಾಮನಲ್ಲಿ ಈಗ ತಾತ್ವಿಕ ಕಾರಣಗಳಿದ್ದವು. ತನ್ನ ಅಪ್ಪ ಅಮ್ಮ ತಂಗಿ ಯಾವುಯಾವುದನ್ನು ಪ್ರತಿನಿಧಿಸುತ್ತಾರೆ ಎಂಬ ಬಗ್ಗೆ ಅವನಲ್ಲಿ ಕಿಂಚಿತ್ತೂ ಅನುಮಾನ ಉಳಿಯದ ಹಾಗೆ ಅವನ ಶಬ್ದಕೋಶ ಬೆಳೆದಿತ್ತು.
ಕಲಕತ್ತೆಯಲ್ಲಿ ನಡೆದ ಪಾರ್ಟಿಯ ಒಂದು ಸಮಾವೇಶಕ್ಕೆ ರಾಮದಾಸ ಘನಶ್ಯಾಮನನ್ನೂ ಕರೆದುಕೊಂಡು ಹೋದ. ಅವನ ಜೊತೆ ಹಿಂತಿರುಗಿ ಬರದೇ ಪಾರ್ಟಿಯ ಕೆಲಸವಿದೆಯೆಂದು ರಾಮದಾಸ ಅಲ್ಲಿಂದ ಡೆಲ್ಲಿಗೆ ಹೋಗಿದ್ದರಿಂದ, ಘನಶ್ಯಾಮ ಒಬ್ಷನೇ ಎರಡು ದಿನಗಳ ಕಾಲ ಅಲ್ಲಿ ಇರಬೇಕಾಯಿತು. ಯಾವುದರಿಂದ ಯಾವುದಕ್ಕೆ ಹೋಗುತ್ತಿದ್ದೇನೆ ಎಂಬುದೇ ಗೊತ್ತಾಗದ ಹಾಗೆ ಅವನು ಕಲಕತ್ತೆಯ ಬೀದಿಗಳಲ್ಲಿ ಅಲೆದ. ಒಂದು ದಿನ ಮಧ್ಯರಾತ್ರಿ, ಬೀದಿಗಳೆಲ್ಲ ನಿರ್ಜನವಾಗಿರುವ ಹೊತ್ತಿನಲ್ಲಿ, ಊಟ ಹುಡುಕುತ್ತ ಎಲ್ಲಾದರೂ ಸಣ್ಣ ಅಂಗಡಿಯೊಂದು ತೆರೆದಿರುತ್ತದೆಂಬ ನಂಬಿಕೆಯಲ್ಲಿ ನಡೆಯುತ್ತಿರುವಾಗ ಫಕ್ಕನೆ ಒಂದು ದೊಡ್ಡ ಬಾಗಿಲಿನೆದುರು ಬಂದು ನಿಂತ. ರಸ್ತೆಗೇ ಅಂಟಿಕೊಂಡಂತಿದ್ದ ಹಳೆಯ ಮನೆಯೊಂದರ ಭಾರೀ ಮುಂಬಾಗಿಲು. ಅದನ್ನು ಅಲ್ಲಿ, ಹಾಗೆ, ಆ ಸಮಯದಲ್ಲಿ ನೋಡಿ ಚಕಿತನಾಗಿ ನಿಂತ. ಅದೇ ಹೊತ್ತಿಗೆ ಎಲ್ಲಿಂದಲೋ ಬಂದ ಒಬ್ಷ ಹೆಂಗಸು ಆ ಬಾಗಿಲನ್ನು ಮೃದುವಾಗಿ ತಳ್ಳಿದಳು. ಅದು ಅರ್ಧ ತೆರೆದುಕೊಂಡಿತು. ಅವಳು ಒಳಹೋದಳು. ಬಾಗಿಲು ಹಾಕಿಕೊಂಡಳು. ಅಗುಳಿಯ ಶಬ್ದ ಸಣ್ಣದಾಗಿ ಆದರೆ ಸ್ಪಷ್ಟವಾಗಿ ಕೇಳಿಸಿತು. ಘನಶ್ಯಾಮನಿಗೆ ತಾನು ಇದಕ್ಕೆಲ್ಲ ಒಳಗೆಲ್ಲೋ ಸೂಕ್ಷ್ಮವಾಗಿ ಸಂಬಂಧಪಟ್ಟವನ ಹಾಗೆ ಅನಿಸಿತು. ಜೀವನದ ಯಾವುದೋ ಅವ್ಯಕ್ತ, ಆದರೆ ಎಲ್ಲರಲ್ಲೂ ಇರಬಹುದಾದ ಸಾಮಾನ್ಯವಾದುದೇನೋ ಅಲ್ಲಿ ಘಟಿಸಿದ ಹಾಗೆ ಅನಿಸಿತು. ಅವಳು ಯಾರು? ಆ ಹೊತ್ತಿನಲ್ಲಿ ಎಲ್ಲಿಂದ ಬಂದಳು? ತಾನು ಗ್ರಹಿಸಿದ ಅವಳ ರೂಪದಲ್ಲಿ ನಿಜವೆಷ್ಟು; ತನ್ನ ಕಲ್ಪನೆಯೆಷ್ಟು? ಆ ಘಳಿಗೆಯಲ್ಲಿ ಅವನಿಗೆ ಹೊಸ ಲೋಕವೊಂದರ ಬಾಗಿಲು ತೆರೆದ ಹಾಗೆ ಅನಿಸಿತು. ಆದರೆ ಅದರ ಅರ್ಥ ಮಾತ್ರ ಹೊಳೆಯಲೊಲ್ಲದು. ಹಿಂತಿರುಗಿ ಬರುವಾಗ ಇಡೀ ಪ್ರಯಾಣದ ತುಂಬ ಘನಶ್ಯಾಮನ ಮನಸ್ಸಿನಲ್ಲಿ ಇದೇ ತುಂಬಿತ್ತು.
ಆದರೆ ಇದನ್ನೆಲ್ಲ ರಾಮದಾಸನಿಗೆ ಹೇಳಲಿಕ್ಕೆ ಸಾಧ್ಯವಾಗಲಿಲ್ಲ. ಡೆಲ್ಲಿಗೆ ಹೋದ ಅವನು ಯಾವುದೋ ಇಂಗ್ಲಿಷ್ ಪೇಪರೊಂದರಲ್ಲಿ ಕೆಲಸ ಸಿಕ್ಕು ಮರಳಿ ಬರಲೇ ಇಲ್ಲ. ತನ್ನ ಕೋಣೆಯನ್ನು ಖಾಲಿ ಮಾಡಿ ತನ್ನ ಸಾಮಾನುಗಳನ್ನೆಲ್ಲ ಡೆಲ್ಲಿಗೆ ಕಳಿಸುವಂತೆ ತಿಳಿಸಿ ಅಗತ್ಯವಾದ ದುಡ್ಡು ಕಳಿಸಿದ. ಅವನು ಯಾಕೆ ಇಷ್ಟೊಂದು ಅನಿರೀಕ್ಷಿತವಾಗಿ ಹೋದ ಮತ್ತು ಹೋಗುವುದನ್ನು ಯಾಕೆ ಯಾರಿಗೂ ಹೇಳಲಿಲ್ಲ ಎಂದು ಘನಶ್ಯಾಮನಿಗೆ ಸರಿಯಾಗಿ ಅರ್ಥವಾಗಲಿಲ್ಲ. ಇದೆಲ್ಲ ತಾನು ಭಾವಿಸಿದಷ್ಟು ಅನಿರೀಕ್ಷಿತವಾದುದಲ್ಲ ಎಂದು ಅನಿಸಿ ತನ್ನಿಂದ ಇದನ್ನು ರಾಮದಾಸ ಮುಚ್ಚಿಟ್ಟಿದ್ದನೇನೋ ಎಂಬ ಅನುಮಾನ ಬಂದು ಎರಡು ದಿನ ಮಂಕಾಗಿ ಕಳೆದ. ಹಾಗೆ ಯೋಚಿಸುತ್ತ ಹೋದಂತೆ ಅವನ ಬಗ್ಗೆ ತನಗೆ ಎಷ್ಟು ಕಡಿಮೆ ಗೊತ್ತಿದೆ ಅಂದುಕೊಂಡ. ಕಲಕತ್ತೆಗೆ ಹೋಗುವಾಗ ರೈಲಿನಲ್ಲಿ `ಇದು ಪ್ಯೂರಿಟಿಯ ಪ್ರಶ್ನೆ’ ಎಂದು ರಾಮದಾಸ ಶುರುಮಾಡಿದ ವಾದವೊಂದರ ನಡುವೆ ಅವನ ಅಪ್ಪ ಅಮ್ಮ ತಮ್ಮ ತಂಗಿ ಮತ್ತು ಒಂದು ಕಾಲದ ಗೆಳತಿ ಸರಸ್ವತಿ ಬಂದು ಹೋಗಿದ್ದರು. ಮಧ್ಯಮವರ್ಗದ ಆಕಾಂಕ್ಷೆಯ ಕನಸಿನ ದುರ್ಗಮ ದಾರಿಯನ್ನು ಪರಿಣಾಮಕಾರಿಯಾಗಿ ಹೇಳಲು ಮಾತ್ರ ಅವರ ಪ್ರಸ್ತಾಪ ಬಂತೇ ಹೊರತು ಅದರಾಚೆ ಹೋಗಲಿಲ್ಲ.
– ೩ –
ರಾಮದಾಸ ಹೋದ ನಂತರ ಘನಶ್ಯಾಮನಿಗೆ ತಮ್ಮ ವಲಯದ ಕೇಂದ್ರವೇ ಹೋದ ಹಾಗೆ ಅನಿಸಿತು. ಅವನು ಇದನ್ನೆಲ್ಲ ರಾಮದಾಸನಿಗೆ ಬರೆಯುವನು. ಆದರೆ ಅವನಿಂದ ಮಾತ್ರ ಅಂಥ ಉತ್ಸಾಹದಾಯಕ ಪ್ರತಿಕ್ರಿಯೆ ಇಲ್ಲವೆಂದು ಅನಿಸುವುದು. ಪ್ರತಿ ಪತ್ರದಲ್ಲೂ ಹೇಗೆ ತಾನು ಸಮಯವೇ ಸಿಗದಂಥ ಕೆಲಸದಲ್ಲಿದ್ದೇನೆಂದು ಬರೆಯುತ್ತಿದ್ದ. ಆಮೇಲೆ ನಿಧಾನ ಪತ್ರಗಳು ಕಡಿಮೆಯಾಗುತ್ತ ಹೋಗಿ ನಿಂತೇ ಬಿಟ್ಟವು. ಆ ಹೊತ್ತಿಗೆ ಘನಶ್ಯಾಮ ಎಂ ಎ ಮುಗಿಸಿ, ಪ್ರತಿ ತಿಂಗಳೂ ಸ್ಕಾಲರಶಿಪ್ ಸಿಗುತ್ತದೆಂಬ ಕಾರಣಕ್ಕೆ ಪಿಎಚ್‌ಡಿ ಸೇರಿಕೊಂಡಿದ್ದ. ಅರ್ಚನಾ ಮೊದಲ ವರ್ಷದ ಎಂಎ ಸೇರಿಕೊಂಡಿದ್ದಳು. ಅವಳ ಪರಿಚಯ ಗಾಢವಾಗುವುದಕ್ಕೆ ಕಾರಣವಾದ ಘಟನೆಯನ್ನು ಘನಶ್ಯಾಮ ಅನೇಕ ಕಾರಣಗಳಿಗಾಗಿ ಮರೆಯಲಾರ.
ಯೂನಿವರ್ಸಿಟಿಗೆ ಹೋಗುವ ದಾರಿಯಲ್ಲಿದ್ದ ಒಂದು ಸ್ಲಮ್ಮನ್ನು ಒಂದು ಮುಂಜಾನೆ ಬಂದ ಬುಲ್‌ಡೋಜರ್ ನೆಲಸಮ ಮಾಡತೊಡಗಿತು. ಅದನ್ನು ಸುತ್ತುವರೆದ ನೂರಾರು ಪೋಲೀಸರು. ಸರಕಾರ ಸ್ಲಂಗಳ ಮೇಲೆ ನಡೆಸಲು ನಿರ್ಧರಿಸಿದ ಸತತ ದಾಳಿಗಳ ಮೊದಲ ಕಂತು ಅದಾಗಿತ್ತು. ಘನಶ್ಯಾಮನನ್ನು ಅಲ್ಲಿ ಕರಕೊಂಡು ಹೋದವನು ದೇವಯ್ಯ. ಆಗ ಮಧ್ಯಾಹ್ನವಾಗಿತ್ತು. ಧ್ವಂಸಗೊಂಡ ಸ್ಲಂ ಯುದ್ಧಾನಂತರದ ರಣರಂಗದಂತೆ ಕಾಣುತ್ತಿತ್ತು. ಮಣ್ಣು ಗೋಡೆ, ತಡಿಕೆ, ತಗಡಿನ ಚಾವಣಿಯ ಕೆಳಗಿನ ನಸುಗತ್ತಲಲ್ಲಿ ಇದ್ದ ವಸ್ತುಗಳೆಲ್ಲ ಬಿಸಿಲಿಗೆ ಬಾಡಿ ಬಿದ್ದಂತಿದ್ದವು. ಅಲ್ಲಿ ದೇವಯ್ಯ ಘನಶ್ಯಾಮನ ಮನಕರಗುವಂಥ ಕತೆಗಳನ್ನು ಶುರುಮಾಡಿದ. ನನಗೆ ಇದೆಲ್ಲದರ ಅಗತ್ಯವಿಲ್ಲವೋ ಎಂದು ಅವನಿಗೆ ಹೇಳಲು ನೋಡಿದರೂ ಹೇಳುವುದು ಮಾತ್ರ ಘನಶ್ಯಾಮನಿಗೆ ಸಾಧ್ಯವಾಗಲೇ ಇಲ್ಲ. ಇಬ್ಷರೂ ಸೇರಿ ಈ ಜನರನ್ನು ಹೇಗೆ ಬೆಂಬಲಿಸುವುದೆಂದು ಯೋಚಿಸಿದರು. ಈವತ್ತೇ ಈಗಲೇ ಕ್ರಿಯೆ ಆರಂಭವಾಗಬೇಕು ಎಂದು ದೇವಯ್ಯ ತಾನು ಪಾರ್ಟಿ ಆಫೀಸಿನಲ್ಲಿ ಕಲಿತ ತುರ್ತು ಪದಗಳನ್ನು ಬಳಸತೊಡಗಿದ. ನಮ್ಮ ಜೊತೆಯ ವಿದ್ಯಾರ್ಥಿಗಳನ್ನೂ ಯಾಕೆ ಇದರಲ್ಲಿ ಸೇರಿಸಲು ಪ್ರಯತ್ನಿಸಬಾರದು ಎಂಬ ಘನಶ್ಯಾಮನ ಸಲಹೆಗೆ ದೇವಯ್ಯ ಅಂಥ ಉತ್ಸಾಹ ತೋರಿಸಲಿಲ್ಲ. ಆದರೆ ಪ್ರಯತ್ನಿಸಲು ಒಪ್ಪಿದ. ಹಾಗೆ ಅವರಿಗೆ ಜೊತೆ ಕೊಟ್ಟ ನ್ಕಾೈದು ಹುಡುಗ ಹುಡುಗಿಯರಲ್ಲಿ ಅರ್ಚನಾ ಕೂಡ ಒಬ್ಷಳು.
ಮುಂದೆ ಅವರು ಹತ್ತಿರವಾದ ನಂತರ ಅವನ ಕಿವಿಯ ಕೆಳಗಿನ ಗಾಯದ ಗುರುತನ್ನು ಸವರುತ್ತ ಅವಳು ಈ ಎಲ್ಲವನ್ನೂ ನೆನೆಸಿಕೊಳ್ಳುವಳು. ಅವನ ಕ್ರಾಂತಿಯ ಏಕೈಕ ಕುರುಹಿದು ಎಂದು ತಮಾಷೆ ಮಾಡುವಳು. ಸ್ಲಮ್ಮೊಂದರಲ್ಲಿ ಧರಣಿ ಕೂತ ಇವರನ್ನು ಚೆದುರಿಸಲು ಲಾಠಿ ಚಾರ್ಜು ಮಾಡಿದಾಗ, ಅವರಿಂದ ತಪ್ಪಿಸಿಕೊಂಡು ಓಡುವ ಹೊತ್ತಿಗೆ ಘನಶ್ಯಾಮ ಗಳುವಿನ ತುದಿಯೊಂದನ್ನು ತಗುಲಿಸಿಕೊಂಡು ಗಾಯ ಮಾಡಿಕೊಂಡಿದ್ದ. ಅರ್ಚನಾಳನ್ನು ಬಿಟ್ಟರೆ ಮೊದಲ ದಿನ ಬಂದ ವಿದ್ಯಾರ್ಥಿಗಳಾರೂ ಆ ನಂತರ ಮತ್ತೆ ಇವರ ಹತ್ತಿರ ಸುಳಿದಿರಲಿಲ್ಲ. ಇದ್ದ ಅಷ್ಟೇ ಜನರಲ್ಲಿ ದೇವಯ್ಯ ತಾನು ಮುಂದಾಳಿನ ಪಾತ್ರ ವಹಿಸಿಕೊಂಡವನ ಹಾಗೆ ಆಡತೊಡಗಿದ್ದ. ಸ್ಲಂ ಜನರ ಆತಂಕಗಳನ್ನೂ, ಅವರ ತಲ್ಲಣ ತುಂಬಿದ ರಾತ್ರಿಗಳನ್ನು, ಮುಂಜಾವು ಬಾರದೇ ಇರಲಿ ಎಂದು ಅವರು ಪ್ರಾರ್ಥಿಸುವುದನ್ನು ಇವರಿಗೆ ಪದೇ ಪದೇ ಹೇಳತೊಡಗಿದ. ಮನಸ್ಸು ಸಾಕಷ್ಟು ಕರಗದೇ ಇದ್ದರೆ ಇವರು ಮತ್ತೆ ನಾಳೆ ಬರುವರೋ ಇಲ್ಲವೋ ಅನ್ನುವುದು ಅವನ ಅನುಮಾನವಾಗಿತ್ತು. ಹೀಗೆ ದೇವಯ್ಯ ಮತ್ತೊಮ್ಮೆ ಅದೇ ಮಾತುಗಳನ್ನು ಶುರುಮಾಡಿದಾಗ ಅರ್ಚನಾ ಮತ್ತು ಘನಶ್ಯಾಮ ಪರಸ್ಪರ ನೋಡಿ ನಸುನಕ್ಕರು. ದೇವಯ್ಯನ ಕುರಿತು ಹಗುರಾಗಿ ತಮಾಷೆ ಮಾಡದೇ ಅವಳು ಮಾತಾಡಿದ್ದರಿಂದ ಮತ್ತು ತಮ್ಮ ಉದ್ದೇಶಗಳನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಘನಶ್ಯಾಮನಿಗೆ ಅವಳ ಬಗ್ಗೆ ಗೌರವ ಬಂತು. ಗಳುವಿನಿಂದ ಗಾಯಗೊಂಡ ಘನಶ್ಯಾಮನನ್ನು ಅವಳೇ ತನ್ನ ಮನೆಗೆ ಕರಕೊಂಡು ಹೋದಳು. ಮುಂಬೈಯಲ್ಲಿರುವ ಅವಳ ಶ್ರೀಮಂತ ಅಪ್ಪ ಅವಳು ಎಂಎ ಮುಗಿಸುವವರೆಗೂ ಅವಳಿಗೊಂದು ಮನೆ ಇರಲಿ ಎಂದು ಒಂದು ಫ್ಲ್ಯಾಟ್ ಕೊಂಡಿದ್ದರು. ಅವಳ ಹತ್ತಿರ ಕಾರಿತ್ತು. ಇದೆಲ್ಲವನ್ನೂ ತಾನು ಗಮನಿಸಿಯೇ ಇರಲಿಲ್ಲವಲ್ಲ ಎಂದು ಘನಶ್ಯಾಮನಿಗೆ ಆಶ್ಚರ್ಯವಾಯಿತು. ದೇವಯ್ಯನಿಗೆ ಮಾತ್ರ ಎಲ್ಲ ವಿವರಗಳೂ ಗೊತ್ತಿದ್ದಂತಿತ್ತು. ಅವಳ ಮನೆಯಲ್ಲಿ ಗಾಯವನ್ನು ತೊಳೆದು ಒೌಷಧಿ ಹಚ್ಚಿಕೊಂಡ. ಇಬ್ಷರೂ ಕೂತು ಕಾಫಿ ಕುಡಿದರು.
ಪೇಪರಿನವರು ಸ್ಲಂ ಸ್ವಚ್ಛಗೊಳಿಸಲು ನಿರ್ಧರಿಸಿದ ಮುಖ್ಯಮಂತ್ರಿಗಳ ಧೈರ್ಯವನ್ನು ಹೊಗಳಿ ಬರೆದವು. ಇಲ್ಲೇ ಇದ್ದರೆ ತಾನು ಒತ್ತಡಕ್ಕೆ ಒಳಗೊಳ್ಳಬೇಕಾಗಿ ಬರುವುದನ್ನು ತಪ್ಪಿಸಲು ಅವರು, ತಾವು ಊರಲ್ಲಿರದ ಹೊತ್ತನ್ನು ಆರಿಸಿಕೊಂಡ ಬಗ್ಗೆ ಬರೆದು ಈ ಉಪಾಯವನ್ನು ಹೊಗಳಿದರು. ಎರಡು ದಿನಗಳ ನಂತರ ದೇವಯ್ಯ ಮುಖ್ಯಮಂತ್ರಿಗಳು ಹಿಂತಿರುಗುವ ದಾರಿಯಲ್ಲಿ ಧರಣಿ ಕೂರಲು ತೀರ್ಮಾನಿಸಿದ. ಅದರ ಬಗ್ಗೆ ಮಾತಾಡಲು ಪಾರ್ಟಿಯ ಮುಖಂಡರೊಬ್ಷರ ಮನೆಗೆ ಘನಶ್ಯಾಮನನ್ನೂ ಕರಕೊಂಡು ಹೋದ. ಅವರ ಮನೆಗೆ ಹೋದಾಗ ಸಂಜೆ ಏಳು ಗಂಟೆಯಾಗಿತ್ತು. ದೇವಯ್ಯನ ಪರಿಚಯ ಅವರಿಗೆ ಚೆನ್ನಾಗಿಯೇ ಇದ್ದಂತಿತ್ತು. ಅವರ ಜೊತೆ ಕೂತಿದ್ದ ಜನ ಕೆಲಸ ಮುಗಿಸಿ ಹೊರಡುತ್ತಿದ್ದ ಹಾಗೇ ದೇವಯ್ಯನನ್ನು ಕರೆದರು. ಅವನು ಮಾಡಿದ ಕೆಲಸಗಳ ವಿವರಗಳನ್ನೆಲ್ಲ ಕೇಳಿ `ಸರಿ ಸರಿ… ರಾಸ್ತಾ ರೋಕೋ ಮಾಡು’ ಅಂದರು. ಮುಖ್ಯಮಂತ್ರಿಗಳನ್ನು ಬೈದರು. ಅವರ ಸಿಟ್ಟಿಗೆ ಎಣ್ಣೆ ಹುಯ್ಯಲೆಂಬಂತೆ ದೇವಯ್ಯ ತನ್ನ ಕರುಣಾಜನಕ ವಿವರಗಳನ್ನು ಆರಂಭಿಸಿದ. ಆದರೆ ಇಂಥವನ್ನೆಲ್ಲ ತುಂಡರಿಸುವುದರಲ್ಲಿ ಪಳಗಿದ ಅವರು ದೇವಯ್ಯನ ಮಾತನ್ನು ನಡುವೆಯೇ ನಿಲ್ಲಿಸಿದರು. ಅವರ ಕಳಕಳಿ ಮತ್ತು ಉದ್ವೇಗ ಘನಶ್ಯಾಮನನ್ನು ತಟ್ಟಿದವು. ಮುಖ್ಯಮಂತ್ರಿಗಳು ಯಾವಾಗ ಬರುತ್ತಾರೋ ಯಾವ ದಾರಿಯಲ್ಲಿ ಬರುತ್ತಾರೋ ಗೊತ್ತಿಲ್ಲ ಎಂದು ದೇವಯ್ಯ ಅನಿಶ್ಚಯದ ದನಿಯಲ್ಲಿ ಹೇಳಿದ. ಈಗಲೇ ತಿಳಕೊಳ್ಳೋಣ ಎಂದು ಅವರು ಸಿಎಂ ಮನೆಗೆ ಫೋನ್ ಮಾಡಿದರು. ಇಷ್ಟು ಹೊತ್ತು ಅವರು ಸಿಎಂ ಬಗ್ಗೆ ಮಾತಾಡಿದ್ದು ಕೇಳಿದವರಿಗೆ ಇಬ್ಷರೂ ಬದ್ಧ ಶತ್ರುಗಳೇನೋ ಅನಿಸುವಂತಿತ್ತು. ಆದರೆ ಅವರು ಫೋನ್ ಎತ್ತಿಕೊಂಡು ಸಿಎಂ ಹೆಂಡತಿಯ ಜೊತೆ `ಏನಮ್ಮ, ಹೇಗಿದ್ದೀ’ ಎಂದು ಮಾತು ಶುರುಮಾಡಿ ಹತ್ತು ನಿಮಿಷ ಏನೇನೋ ಮಾತಾಡಿದರು. ಅದರಲ್ಲಿ ರಾಜಕೀಯ ವೈಯಕ್ತಿಕ ಎಲ್ಲ ಸೇರಿತ್ತು. ಅವರಿಗೆ ತಾವು ಫೋನ್ ಮಾಡಿದ ಉದ್ದೇಶ ಮರೆತೇಹೋಗಿದೆ ಎಂದು ದೇವಯ್ಯನಿಗೂ ಘನಶ್ಯಾಮನಿಗೂ ಅನಿಸಿತು. ಕೊನೆಗೆ ಫೋನ್ ಇಡುವ ಮುಂಚೆ ಅಂತೂ ಅವರು ಸಿಎಂ ಪ್ರಯಾಣದ ವಿವರಗಳನ್ನು ಪಡೆದುಕೊಂಡು ಇವರಿಗೆ ಕೊಟ್ಟರು. `ಹುಷಾರು.. ಗುಟ್ಟಾಗಿ ಮಾಡಿ… ಮೊದಲೇ ಗೊತ್ತಾದರೆ ಅವರು ದಾರಿ ಬದಲಿಸಬಹುದು’ ಎಂದರು. ತಮ್ಮ ಧರಣಿಯಿಂದಾಗಿ ಸಿಎಂ ತಾವು ಬರುವ ದಾರಿಯನ್ನೇ ಬದಲಾಯಿಸಬಹುದು ಎಂಬ ಕಲ್ಪನೆ ದೇವಯ್ಯನನ್ನು ಅಟ್ಟಕ್ಕೇರಿಸಿತು. ಸ್ವಲ್ಪ ಮಟ್ಟಿಗೆ ಘನಶ್ಯಾಮನನ್ನೂ.
ಅಂದುಕೊಂಡ ದಿನಕ್ಕಿಂತ ಒಂದು ದಿನ ಮುಂಚೆಯೇ ಸಿಎಂ ವಾಪಸು ಬಂದರು. ಅಷ್ಟರಲ್ಲಿ ಸ್ಲಂಗಳನ್ನು ನಾಶಪಡಿಸುವ ಕಾರ್ಯಕ್ರಮವನ್ನು ಯಾವುದೋ ಕಾರಣ ಹೇಳಿ ಸದ್ಯದ ಮಟ್ಟಿಗೆ ಮುಂದೆ ಹಾಕಲಾಗಿತ್ತು. ಇದೆಲ್ಲದರಿಂದ ಘನಶ್ಯಾಮ ವಿಚಲಿತನಾದ. ದೇವಯ್ಯ ಕರಕೊಂಡು ಹೋದ ಮುಖಂಡರ ಮನೆಯಲ್ಲಿ ತನಗಾದ ಅನುಭವವನ್ನು ಅರ್ಚನಾಗೆ ಹೇಳಿ ತಾನು ಅದರಿಂದ ಎಷ್ಟು ಕಳವಳಪಟ್ಟೆನೆಂದು ಹೇಳಿದ. ತನ್ನ ಮನಸ್ಸಿನಲ್ಲಿ ಹುಟ್ಟಿದ ನೂರಾರು ಸಂಶಯಗಳಿಗೆ ಅವಳಲ್ಲಿ ಉತ್ತರ ಇದ್ದ ಹಾಗೆ ಅವನಿಗೆ ಅನಿಸಿತು. ಮುಖ್ಯವಾಗಿ ಅವಳಿಗೆ ಅವನ ಹಸಿತನ ಗೊತ್ತಾಗುತ್ತಿತ್ತು. ಅವನು ಕ್ರಾಂತಿಯ ಸಿದ್ಧ ಮಾತುಗಳನ್ನು ಉರುಳಿಸುತ್ತಿದ್ದರೆ ಅವಳು ಸಣ್ಣಗೆ ನಕ್ಕು ಚಹಾ ಮಾಡಲು ಮುಂದಾಗುತ್ತಿದ್ದಳು. ಆವತ್ತು ಇಡೀ ಅರ್ಧ ದಿವಸ ಅವಳು ರಾಜಕೀಯದ ರ್ಹೆಟರಿಕ್ಕಿನ ಬಗ್ಗೆ ಮಾತಾಡಿದಳು. ಕುರ್ಚಿಯ ಮೇಲೆ ಒಂದು ಕಾಲು ಮಡಚಿ ಕೂತು ಮಾತಾಡುವಾಗ ಅವಳು, ಬಹಳ ಮೋಹಕವಾಗಿ ಕಾಣುತ್ತಾಳೆಂದು ಘನಶ್ಯಾಮನಿಗೆ ಮತ್ತೆ ಮತ್ತೆ ಅನಿಸಿತು.
ಅವಳು ಯಾವುದನ್ನು ಪ್ರತಿನಿಧಿಸುತ್ತಾಳೆ ಎಂದವನು ಅವಳನ್ನು ಅಚ್ಚಿಗೆ ಕೂರಿಸಲು ಪ್ರಯತ್ನಿಸಿದಷ್ಟೂ ದಕ್ಕದೇ ನುಸುಳಿ ಹೋಗುವಳು. ಅವಳ ಸಂಕೀರ್ಣ ಗ್ರಹಿಕೆಯ ಎದುರು ತನ್ನ ಭೋಳೇತನ ಕಣ್ಣಿಗೆ ಹೊಡೆಯುತ್ತಿತ್ತು. ಅವಳು ಹೋದ ನಂತರವೂ ಅವಳನ್ನೊಂದು ಸಿದ್ಧ ಅಚ್ಚಿಗೆ ಕೂರಿಸಿ ಅರ್ಥ ಮಾಡಿಕೊಳ್ಳುವುದು ಘನಶ್ಯಾಮನಿಗೆ ಸಾಧ್ಯವಾಗಲಿಲ್ಲ. ಶ್ರೀಮಂತ ತಂದೆಯ ಮಗಳು ಇನ್ನು ಹೇಗಿರುತ್ತಾಳೆ, ತನ್ನನ್ನು ಉಪಯೋಗಿಸಿಕೊಂಡು ಹೊರಟು ಹೋದಳು; ಅವಳಿಗೆ ತಾನೊಂದು ವಸ್ತುವಾದೆ ಅಷ್ಟೇ ಎಂದೆಲ್ಲ ಅವನು ಭಾವುಕ ನೆವಗಳನ್ನು ಹುಡುಕಿ, ಅವಳನ್ನು ದೂರಲು ಕಾರಣಗಳನ್ನು ಹುಡುಕಿದರೂ, ಅವಳು ಎದುರಿಗಿದ್ದಿದ್ದರೆ ಏನು ಹೇಳಬಹುದಾಗಿತ್ತೆಂಬುದನ್ನು ನೆನೆದಂತೆ ಕುಗ್ಗುತ್ತಿದ್ದ. ಅವಳು ಎದುರಿಗೆ ಇಲ್ಲದಿರುವಾಗಲೂ ಅವಳಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಅವಳ ಭಾವನೆಗಳ ನಿಜವನ್ನು ಸಂಶಯದಿಂದ ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.
ತಾನು ಕ್ಯಾಪಿಟಲಿಸ್ಟ ಎಂದು ಅವಳು ಒಪ್ಪಿಕೊಳ್ಳಲಿ ಎಂದು ಘನಶ್ಯಾಮನಿಗೆ ಒಳಗೊಳಗೇ ಆಸೆ. ಆಗ ಮಾತಿಗೆ ಒಂದು ರೀತಿಯ ಹದ ಬರುತ್ತದೆ – ಒಳ್ಳೆಯ ಆಟಗಾರರ ಎರಡು ಪಂಗಡಗಳು ಸ್ಪರ್ಧೆಗೆ ಇಳಿದ ಹಾಗೆ. ಆದರೆ ಅವಳು ಅದನ್ನೇ ಹೇಗೋ ಗುರುತಿಸಿ ಹಾಸ್ಯ ಮಾಡುವಳು. `ನಿನ್ನ ಕ್ಯಾಪಿಟಲಿಸ್ಟ್ ವ್ಯಾಖ್ಯೆಯನ್ನು ಮೊದಲು ಹೇಳು’ ಎಂದು ನಗುವಳು. ಯಾವ ಸೋಂಕಿಲ್ಲದ, ಯಾವ ಎಗ್ಗಿಲ್ಲದ ಅವಳ ನಿರಂಬಳ ಸ್ವಾತಂತ್ರ್ಯ ಅವನನ್ನು ದಂಗು ಬಡಿಸುವುದು. ತನ್ನ ಮನೆಯಲ್ಲೇ, ತನ್ನಂಥ ತಾನಿದ್ದೂ ತನ್ನ ತಂಗಿಗೆ ಸಿಗದ ಯಾವುದೋ ಒಂದು ಅವಳಿಗೆ ದೊರೆತು ಅದರಿಂದ ಅವಳು ಅರಳುವುದು ಸಾಧ್ಯವಾಗಿದೆ ಎಂಬುದು ಗೊತ್ತಾಗುತ್ತಿತ್ತು. ಆದರೆ ಇದೇ ಎಂದು ಬೆರಳಿಟ್ಟು ತೋರಿಸಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ.
ಅರ್ಚನಾ ಹೋಗುವ ದಿನ ಅತ್ತ ರೀತಿಯಿಂದ ಘನಶ್ಯಾಮನಿಗೆ ಒಳಗೊಳಗೇ ಅಳುಕಾಯಿತು. ಅವಳ ದುಃ ಎಲ್ಲೆ ಮೀರಿ ಹೋಗುತ್ತದೆನಿಸಿ ಸಮಾಧಾನಪಡಿಸಲು ಏನೇನೋ ಮಾತಾಡಿದ. ಆವರೆಗೂ ವ್ಯಾಖೈಸದೇ ಇದ್ದ ಸಂಬಂಧವನ್ನು ಸ್ಪಷ್ಟಪಡಿಸುವವನಂತೆ ಮಾತಾಡಿದ. `ನನ್ನ ಜೀವನದಲ್ಲಿಯ ಹೆಣ್ಣು ನೀನೊಬ್ಷಳೇ. ಮದುವೆಯಾಗುವುದಾದರೆ ನಾನು ಸಿದ್ಧ’ ಅಂತೆಲ್ಲ ಅಂದಾಗ ಆ ದುಃದ ನಡುವೆಯೂ ಅವಳು ನಕ್ಕಳು. `ನನ್ನ ದುಃ ನಿನಗೆ ಅರ್ಥವೇ ಆಗುವುದಿಲ್ಲ. ನನ್ನ ಸ್ವಾತಂತ್ರ್ಯ ಯಾವ ರೀತಿಯದು ಅನ್ನುವುದು ಕೂಡ. ನನ್ನ ದುಃಕ್ಕೂ ಅದೇ ಕಾರಣ. ನಾನದನ್ನು ಬಿಡಲಾರೆ. ನಿನ್ನ ಆಧುನಿಕತೆ ಮಾತಲ್ಲಿ ಮಾತ್ರ. ಸ್ವಭಾವದಲ್ಲಿಲ್ಲ. ಅದಕ್ಕೇ ನೀನು ಸಂಬಂಧಕ್ಕೊಂದು ಚಿತ ರೂಪ ಕೊಡಬಯಸುತ್ತಿದ್ದೀ….ನಾನು ಬೇರೇನೋ ಹುಡುಕಿ ಹೊರಟಿದ್ದೇನೆ. ಇನ್ನು ಹೊಸ ಜೀವನ…’ ಎಂದು ಅವಳು ಹೇಳಿದಾಗಲೂ ಘನಶ್ಯಾಮ ಮತ್ತೆ ಎಂದೋ ಅವಳನ್ನು ನೋಡುತ್ತೇನೆ, ಯಾವಾಗಲೋ ಒಮ್ಮೆ ಮತ್ತೆ ಕೂಡುತ್ತೇವೆ ಎಂದೇ ಅಂದುಕೊಂಡಿದ್ದ. ಅದು ನಿಜವಾಗಲಿಲ್ಲ.
– ೪ –
ಅವನ ಜೊತೆಯವರ ಮಾತು ಬಂದರೆ `ನೋಡು ಅವನು ನಮ್ಮ ಘನಶ್ಯಾಮನ ಕ್ಲಾಸಮೇಟ್ ಆಗಿದ್ದ. ಈಗ ದೊಡ್ಡ ಕೆಲಸದಲ್ಲಿದ್ದಾನೆ. ಅವರವರ ಹಣೆಯಲ್ಲಿ ಬರೆದ ಹಾಗೆ…’ ಎಂದು ಆಡಿಕೊಂಡದ್ದನ್ನು ಕೇಳಿದರೆ ಘನಶ್ಯಾಮನ ಮೈಯೆಲ್ಲ ಉರಿಯುತ್ತದೆ. ಅಥವಾ ಅವನ ಹಳೆಯ ಸ್ನೇಹಿತರು ಸಿಕ್ಕು ತಮ್ಮ ಇತರ ಗೆಳೆಯರ ಬಗ್ಗೆ `ಅವನಿಗೆ ಒಳ್ಳೆಯ ಕೆಲಸ ಸಿಗುವ ದಿನದವರೆಗೂ ಪಾರ್ಟಿ ಅಂತ ಓಡಾಡಿದ. ಈಗ ನೋಡು ಹ್ಯಾಗಿದ್ದಾನೆ’ ಅಂದರೆ ಅಸಹನೆ. ಇವೆಲ್ಲ ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳೆಂದು ವಿವರಿಸಲು ಹೋದರೆ ಯಾರಿಗೂ ಕೇಳುವ ತಾಳ್ಮೆಯಿಲ್ಲ. ಘನಶ್ಯಾಮನೂ ಪಿಎಚ್‌ಡಿಯ ನಂತರ ಒಂದು ಕೆಲಸ ಹಿಡಿದಿದ್ದಾನೆ. ತಂದೆತಾಯಿಯರ ಜೊತೆಯೇ ಇದ್ದಾನೆ. ಅವನ ಹೆಂಡತಿ ಶಶಿಕಲಾ ಸ್ಕೂಲೊಂದರಲ್ಲಿ ಕೆಲಸ ಮಾಡುತ್ತಾಳೆ. ಏನೋ ಆಗಬಹುದಾಗಿದ್ದ ತನ್ನ ಗಂಡ ಯಾವುದರದೋ ಬೆನ್ನು ಹತ್ತಿ ಸಾಧ್ಯತೆಗಳನ್ನು ಬಿಟ್ಟುಕೊಟ್ಟ ಬಗ್ಗೆ ಅವಳಿಗೂ ಕೋಪವಿದೆ. ಈಗಲೂ ಅವಳು ಸೂಕ್ಷ್ಮವಾಗಿ ಈ ಬಗ್ಗೆ ಗಂಡನನ್ನು ಹಿಂಸಿಸುತ್ತಾಳೆ. ಹೀಗೆ ಎಷ್ಟೋ ವರ್ಷಗಳಲ್ಲಿ ನಡೆದ ವಿದ್ಯಮಾನಗಳನ್ನು ವಿವರಗಳಲ್ಲಿ ಗಮನಿಸದೇ, ಒಟ್ಟಾರೆಯಾಗಿ ನೋಡಿದಾಗ ಎಲ್ಲವೂ ಭೋಳೆಯಾಗಿ ಕಾಣಿಸುತ್ತದೆ. ಬದಲಾವಣೆ, ಆದರ್ಶದ ಹುಮ್ಮಸ್ಸು, ಜಗತ್ತಿನಾದ್ಯಂತ ಜರುಗಿದ ಪಲ್ಲಟಗಳು, ಮುಕ್ತಮಾರುಕಟ್ಟೆಗಳು, ಬಿದ್ದ ಗೋಡೆಗಳು, ಒಡೆದು ಚೆಲ್ಲಿಹೋದ ಸಂಕೀರ್ಣ ಒಕ್ಕೂಟಗಳು, ಸತ್ಯಾನ್ವೇಷಣೆಯ ಹಂಬಲಗಳು, ಕುಟುಂಬದ ಒಳಬಿರುಕುಗಳು, ಹರಿದ ಮುಗ್ಧತೆ, ಭಂಗವಾದ ಕೌಮಾರ್ಯ … ಯಾವುದು ಯಾವುದರಿಂದ ಯಾಕೆ ಪ್ರಭಾವಿತವಾಗಿದೆ ಎಂದೇ ತಿಳಿಯದಂತಿರುವ ಜಟಿಲ ಸಂಬಂಧಗಳು. ಇವುಗಳ ಸೂಕ್ಷ್ಮಗಳನ್ನೆಲ್ಲ ಬಿಟ್ಟು ಒಟ್ಟಾರೆಯಾಗಿ ನೋಡಿದರೆ ಭೋಳೆ ಅನಿಸುವುದು ಸಹಜ.
ಇಷ್ಟು ಕಾಲ ಕಳೆದ ನಂತರವೂ ಘನಶ್ಯಾಮನ ಅಪ್ಪ ಅಮ್ಮ ಅವನು ಆರಿಸಿದ ದಾರಿಯನ್ನು ಪೂರ್ತಿಯಾಗಿ ಒಪ್ಪಲಿಲ್ಲ ಅನ್ನುವುದು ಏನನ್ನು ತೋರಿಸುತ್ತದೆ ಎಂದು ಅವನಿಗೇ ಹಲವು ಬಾರಿ ಅರ್ಥವಾಗದ ಸಂಗತಿಯಾಗಿದೆ. ಅವನು ಬಿಟ್ಟ ಸಾಧ್ಯತೆಗಳ ಬಗ್ಗೆ ಅವರಿಗೆ ಅಷ್ಟೊಂದು ನಂಬಿಕೆಯೇ ಅಥವಾ ಬಿಟ್ಟು ಬಂದದ್ದರಿಂದ ಅದು ಆಕರ್ಷಕವಾಗಿ ಕಾಣಿಸುತ್ತಿದೆಯೇ ತಿಳಿಯಲೊಲ್ಲದು. ಅದೆಷ್ಟೋ ವರ್ಷಗಳ ನಂತರ ರಾಮದಾಸನನ್ನು ಭೇಟಿಯಾದಾಗ ಈ ಬಗ್ಗೆ ಮಾತನಾಡಲು ಪ್ರಯತ್ನಿಸಿದ್ದ. ಆದರೆ ಸಾಧ್ಯವಾಗಲಿಲ್ಲ.
ರಾಮದಾಸ ದೆಹಲಿಯಿಂದ ಗೌಹಾತಿಗೆ ಹೋಗಿ ನೆಲೆಸಿದ್ದ. ಅವನ ಮನೆಗೆ ಘನಶ್ಯಾಮ ಹೋದಾಗ ಸಂಜೆ ಏಳು ಗಂಟೆಯಾಗಿತ್ತು. ಮೂರು ಕೋಣೆಯ ಸುಸಜ್ಜಿತ ಮನೆ. ಅಚ್ಚುಕಟ್ಟಾಗಿತ್ತು. ರಾಮದಾಸ ಒಳ್ಳೆಯ ವಿಸ್ಕಿ ಕೊಟ್ಟ. ಅವನು ಧರಿಸಿದ ಬಟ್ಟೆಗಳು ಎಷ್ಟು ಚೆನ್ನಾಗಿದ್ದವು ಅಂದರೆ ಎಲ್ಲಿ ಕೊಂಡಿದ್ದೆಂದು ಆಗಲೇ ಕೇಳಬೇಕೆನಿಸಿತು ಘನಶ್ಯಾಮನಿಗೆ. ಮೊದಲ ಹತ್ತು ನಿಮಿಷಗಳಲ್ಲಿ ಮನೆಯವರು ಮದುವೆ ಹೆಂಡತಿ ಇತ್ಯಾದಿ ಮಾತಾಡಿ ಮುಗಿದ ನಂತರ ಮುಂದೆ ಏನು ಹೇಳಬೇಕೆಂದು ಘನಶ್ಯಾಮನಿಗೆ ತೋಚಲಿಲ್ಲ. ಅವನು ಊರಲ್ಲಿದ್ದಾಗಿನ ಹಳೆಯ ವಿಷಯಗಳನ್ನು ಎತ್ತಬೇಕೋ ಬೇಡವೋ ಎಂದು ಯೋಚಿಸುತ್ತಿದ್ದವನಿಗೆ ಆ ಸಂದರ್ಭ ಬರಲಿಲ್ಲ. ರಾಮದಾಸ ದೇಶದ ರಾಜಕೀಯವನ್ನೂ, ಜಗತ್ತಿನ ವಿದ್ಯಮಾನಗಳನ್ನೂ ಚರ್ಚಿಸತೊಡಗಿದ. ಇದರಿಂದ ಘನಶ್ಯಾಮನಿಗೆ ನಿರಾಳವಾಯಿತು. ರಾಮದಾಸ ಮದುವೆಯಾಗಿರಲಿಲ್ಲ. ಘನಶ್ಯಾಮ ಕೇಳುವ ಮೊದಲೇ `ಮನುಷ್ಯ ಒಂಟಿ; ಕೊನೆಗೂ ನಿನಗೆ ನೀನೇ’ ಅಂದ. `ಎಲ್ಲರೂ ಸ್ವಾರ್ಥಿಗಳು. ಅದು ಸಹಜ ಕೂಡ’ ಅಂದ. ಹಾಗೆಯೇ ಮಾತು ಮುಂದುವರೆಯುತ್ತ ರಷ್ಯಾದತ್ತ ಹೊರಳಿತು. ರಾಮದಾಸ ತಾನು ಪ್ರಧಾನಮಂತ್ರಿಗಳ ಪಂಗಡದ ಜೊತೆ ಮಾಸ್ಕೋಗೆ ಹೋಗಿದ್ದನ್ನು ಹೇಳತೊಡಗಿದ.
ಮಾತಾಡುತ್ತ ಮಾತಾಡುತ್ತ ಹಳೆಯ ಪೇಪರ್ ಕಟಿಂಗ್‌ಗಳನ್ನು ತೆಗೆದು ಅದರಲ್ಲಿ `ಆರ್.ಕೆ. ರಾಮದಾಸ್ ರಿಪೋರ್ಟಿಂಗ್ ಫ್ರಂ ಮಾಸ್ಕೋ’ ಎಂದು ಬರೆದಿದ್ದನ್ನು ಬಹಳ ಅಭಿಮಾನದಿಂದ ತೋರಿಸಿದ. `ನಾನು ರಿಪೋರ್ಟ ಮಾಡಿದೆ. ಯಾರೂ ಇದುವರೆಗೆ ಹೇಳದೇ ಇರುವುದನ್ನೂ ಕೂಡ. ಆದರೆ ಯಾರಿಗೂ ಅದರಲ್ಲಿ ವಿಶೇಷ ಕಾಣಲಿಲ್ಲ. ಯಾರಿಗೂ ಈ ರೂಪಕವನ್ನು ಯಾವ ರೀತಿಯಿಂದಲೂ ಮಸುಕುಗೊಳಿಸುವ ಧೈರ್ಯವಾಗಲೀ ಉದ್ದೇಶವಾಗಲೀ ಇರಲಿಲ್ಲ….’ ಎಂದೆಲ್ಲ ಕತೆ ಹೇಳತೊಡಗಿದ.
`ಅಲ್ಲಿ ಎಂಟು ದಿನ ಇದ್ದೆವು. ಅಲ್ಲಿ ನಮ್ಮ ಊರಿನ ಹಳೆಯ ಕಾಮ್ರೇಡ್ ಸದಾಶಿವರಾಯರು ಇದ್ದರು. ಅವರ ಬಗ್ಗೆ ನಮಗೆ ಬಹಳ ಅಭಿಮಾನ. ಅಲ್ಲಿ ಹೋಗುವುದಕ್ಕಿಂತ ಮುಂಚೆಯೇ ಅವರನ್ನು ಸಂಪರ್ಕಿಸಿ ಅವರನ್ನು ಭೆಟ್ಟಿಯಾಗುವ ವ್ಯವಸ್ಥೆ ಮಾಡಿಕೊಂಡಿದ್ದೆ. ಅವರು ಇಲ್ಲಿ ಬಂದಾಗ ನಮ್ಮನ್ನು ನೋಡಲು ತೋರುವ ಉತ್ಸಾಹವನ್ನು ಅಲ್ಲಿ ನಾನು ಬರುತ್ತೇನೆಂದಾಗ ಯಾಕೋ ತೋರಿಸಲಿಲ್ಲ. ಅವರ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಹಳೆಯ ಫ್ಲ್ಯಾಟು. ಗೋಡೆಯ ಗಿಲಾಯಿಯೆಲ್ಲ ಅನೇಕ ಕಡೆ ಉದುರಿ ಬಿದ್ದು ಹೋಗಿತ್ತು. ನಮ್ಮೂರಲ್ಲಿ, ನಮ್ಮ ಮನೆಯ ಎದುರಿಗೆ ಒಂದು ಕಾಲದಲ್ಲಿ ಅಪಾರ ಶ್ರೀಮಂತರಾಗಿದ್ದವರ ಮನೆಯೊಂದು, ಅವರಿಗೆ ಕೆಟ್ಟ ಕಾಲ ಬಂದು ನಿಧಾನವಾಗಿ ಕಾಲಾಂತರದಲ್ಲಿ ಹಳತಾಗುತ್ತ ಕುಸಿಯುತ್ತ ಹೋಗಿದ್ದು ಯಾಕೋ ನೆನಪಾಯಿತು. ಅನ್ನ ಸಾರಿನ ಊಟ ಹಾಕಿದರು. ಕೆಟ್ಟ ಅಕ್ಕಿಯ ಅನ್ನ. ಉದುರಿಉದುರಿಯಾಗಿ ಕಾಳುಕಾಳಾಗಿದ್ದ ಅನ್ನ. ನನಗೆ ಅವರ ಮಾತುಗಳಲ್ಲಿ ಯಾಕೋ ಮೊದಲಿನ ಉತ್ಕಟತೆ ಕಾಣಲಿಲ್ಲ. ಶಬ್ದಗಳಲ್ಲಿ ವ್ಯಕ್ತಪಡಿಸಲಾಗದಂಥ ಒಂದು ರೀತಿಯ ಅನ್ಯಮನಸ್ಕತೆ ನನ್ನನ್ನು ಬಾಧಿಸಿತು. ರಷ್ಯಾದಲ್ಲಿ ವೋಡ್ಕಾ ಎಂದು ನನ್ನಲ್ಲಿ ಉತ್ಸಾಹ ಹುಟ್ಟಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆವತ್ತು ವೋಡ್ಕಾ ರುಚಿಸಲಿಲ್ಲ. ಊಟ ಮುಗಿಸಿ ಅವರ ಮನೆಯಿಂದ ಹೊರಟಾಗ ರಾತ್ರಿ ಹತ್ತು ಗಂಟೆ. ಆಚೆ ಬಂದು ನೋಡುತ್ತೇನೆ ಮೇಲೆ ಅರ್ಧ ವಾಲಿದ ಚಂದ್ರ. ಬಲಕ್ಕೆ ವಾಲಿದ ಚಂದ್ರ. ಆಹಾ ಚಂದ್ರನೂ ಬಲಕ್ಕೆ ವಾಲಿದನಲ್ಲ, ಬೂರ್ಜ್ವಾ ಅಂದುಕೊಂಡೆ. `ಚಂದ್ರನೂ ಬೂರ್ಜ್ವಾ, ಭೂಮಿಯೂ ಬೂರ್ಜ್ವಾ’ ಎಂಬ ಕವಿತೆ ನೆನಪಾಯಿತು. ಮಾರನೆಯ ದಿನ ನಾನು ಕಳಿಸಲಿರುವ ಲೇಖನಕ್ಕೆ ಒಳ್ಳೆಯ ತಲೆಬರಹ ಅನಿಸಿತು. ಲೇಖನ ಪ್ರಕಟವಾಗಲಿಲ್ಲ. ಅದು ಈಗಲೂ ನನ್ನ ಹತ್ತಿರ ಇದೆ.’
ಲೇನಕ್ಕಾಗಿ ರಾಮದಾಸ ಪುಸ್ತಕದ ಕಪಾಟು, ಟೇಬಲ್ಲಿನ ಡ್ರಾ ಹುಡುಕಿದ. ಅನೇಕ ಪೇಪರ್ ಕಟಿಂಗ್‌ಗಳು, ಬರೆದ ಹಾಳೆಗಳು ಚೆಲ್ಲಾಪಿಲ್ಲಿಯಾಗಿ ಹರಡಿದವು. `ಹುಡುಕಿ ನಿನಗೆ ಕಳಿಸುತ್ತೇನೆ’ ಅಂದ.
ವಿಸ್ಕಿಯ ಅನೇಕ ಪೆಗ್ಗುಗಳು ಖಾಲಿಯಾದವು. `ನಿನ್ನನ್ನು ನಿಜವಾದ ಆಸ್ಸಾಮಿ ರೆಸ್ಟೋರೆಂಟಿಗೆ ಕರೆದೊಯ್ಯುತ್ತೇನೆ’ ಎಂದು ರಾಮದಾಸ ಊಟಕ್ಕೆ ಹೊರಡುವಾಗ ಹೇಳಿದ. ಅವನ ಹೆಜ್ಜೆಗಳು ತುಸು ತೂರಾಡಿದವೇನೋ ಎಂಬ ಅನುಮಾನ ಬಂದರೂ ಅವನು ಕಾರು ತೆಗೆಯುವುದು ಮಾತಾಡುವುದು ಎಲ್ಲ ಸರಿಯಾಗೇ ಇದ್ದಂತಿತ್ತು. ಘನಶ್ಯಾಮ ನಿರಾಳವಾಗಿರಲು ಪ್ರಯತ್ನಿಸಿದ. ಸುಮಾರು ಹತ್ತು ನಿಮಿಷದ ಹಾದಿಯ ನಂತರ ಒಂದು ರೆಸ್ಟೋರೆಂಟ್ ತಲುಪಿದರು. ಊಟ ಚೆನ್ನಾಗಿತ್ತು. ಊಟ ಮುಗಿದ ನಂತರ ಕೈಗಳನ್ನು ಬಿಸಿ ನೀರಿನ ತಟ್ಟೆಯಲ್ಲಿ ಮುಳುಗಿಸಿ ಒರೆಸಿಕೊಳ್ಳುತ್ತ ರಾಮದಾಸ ಹೇಳಿದ: `ಈ ರಷ್ಯಾ ಒಡೆದುಹೋಯಿತು ನೋಡು… ನನಗೆ ಸಹಿಸಲಾಗದಷ್ಟು ದುಃಖವಾಯಿತು. ಅದನ್ನು ಮೀರಲು ಯಾವ ಯಾವ ಬಗೆಯಲ್ಲಿ ಪ್ರಯತ್ನಿಸಿದ್ದೇನೆಂಬುದು ನನಗೆ ಮಾತ್ರ ಗೊತ್ತು…’ ಹಾಗೆ ಹೇಳುತ್ತಿದ್ದ ಅವನ ಕಣ್ಣಾಲಿಗಳು ತುಂಬಿ ಬಂದದ್ದು ಘನಶ್ಯಾಮನಿಗೆ ಸ್ಪಷ್ಟವಾಗಿ ಗೊತ್ತಾಯಿತು. ತುಸು ಕತ್ತಲೆ ತುಂಬಿದ ಆ ಆವರಣದಲ್ಲಿ, ಅರೆಬರೆ ನರೆತ ಅವನ ಗಡ್ಡ, ಮುಂದೆ ಬೋಳಾದ ತಲೆ ಮತ್ತು ಅವನು ಕತ್ತು ವಾಲಿಸಿ ಇತ್ತ ನೋಡಿದಾಗ ನೀರು ತುಂಬಿದ ಅವನ ಕಣ್ಣುಗಳು ಫಳ್ಳನೆ ಹೊಳೆದ ಚಿತ್ರ – ಘನಶ್ಯಾಮನ ಮನಸ್ಸಿನಲ್ಲಿ ಸೆರೆಯಾಯಿತು.
*****
೮ ಅಕ್ಟೋಬರ್ ೧೯೯೯
