ಬಿಸಿಲೇರಿತು, ಬಾಯಾರಿತು
ಹುರುಪಳಿಸಿತು ನೆಲವು,
ಗುಟುಕರಿಸಿತು ಜಲವು;
ಬಾನುದ್ದಕು ಧೂಳೆದ್ದಿತು
ತತ್ತರಿಸಿತು ಬಲವು.
ಮುಚ್ಚಂಜೆಯು ಮೈಚಾಚಿತು,
ಗರಿಬಿಚ್ಚಿತು ಮೋಡ,
ಹೊರಬಿದ್ದಿತು ಗೂಢ;
ಮುಂಗಾರಿನ ಮುಂಗೋಪಕೆ
ಬಾನೇ ದಿಙ್ಮೂಢ.
ಮಳೆವನಿಗಳ ಖುರಪುಟದಲಿ
ಮುಗಿಲಂಚನು ಸೀಳಿ
ಅಗೊ ಮಿಂಚಿನ ದಾಳಿ
ಕಣ್ಮುಚ್ಚಿತು ಕಣ್ ತೆರೆಯಿತು
ಬಿಗಿದಪ್ಪಿತು ಗಾಳಿ.
ನೆಲ-ಬಾನಿಗೆ ಜಲವೀಣೆಗೆ
ಪಕ್ಕದೊಳೇ ನಿದ್ದೆ
ಬೆಳಗಾಯಿತು ಎದ್ದೆ –
ಜಗವೆಲ್ಲವು ಮಿದುಬೆಲ್ಲವು
ಅಗೊ ಮಲ್ಲಿಗೆ ಮೊಗ್ಗೆ.
ಹಸುರೆಲ್ಲವು ಕುಸುರಾಯಿತು
ಹೂ ಮುಡಿಯಿತು ಬೇಲಿ
ತಂಗಾಳಿಗೆ ತೇಲಿ;
ಸೌಂದರ್‍ಯವ ಮೊಗವೆತ್ತಿತು
ಮುತ್ತಿಟ್ಟಿತು ನೀಲಿ.
ಒಂದಿರುಳಿನ ಒಡನಾಟದಿ
ನೆಲದಾಳಕೆ ನೀರು
ಚಿಗಿಯಿತು ತಾಯ್ ಬೇರು
ಇಡಿ ವರುಷದ ಹೊಸಹರುಷಕೆ
ಹೂಗನಸಿನ ತೇರು.
*****
