ಭೂಮಿ-ತೂಕ

ಮಾತು-ಬೆಳ್ಳಿ, ಕತ್ತಲೆಯ ತಳ್ಳಿ ಸುತ್ತೆಲ್ಲ ಮಿನುಗುತಿರಲು
ಮೌನ-ಧ್ಯಾನ ಬಂಗಾರ ಕೃತಿಯು ಮೂಡಲಕೆ ಮೂಡಿ ಬರಲು
ಜಗದ ಅಂಗಳವ ದಾಟಿ ಒಳಗೆ ಭಾರತದ ಗರ್‍ಭಗುಡಿಗೆ
ಸೂರ್‍ಯಕಿರಣ ಶಿವಲಿಂಗ ತಾಗೆ ಹೂವಾಗಿ ಎಲ್ಲರೆದಗೆ.

ಹೊರಗೆ ಬರಲಿ ಬಂಗಾರ ಬೆಳ್ಳಿ, ಅದಕಿಹುದು ಭೂಮಿತೂಕ,
ತೆರೆಗೆ ಬರಲಿ ತಾದಾತ್ಮ್ಯ ಹೊಂದಿ ನಟ-ನಾಟ್ಯ ಜೀವಪಾಕ;
ಕುದಿದು ದೇಶ ತಳಮಳಿಸುತಿರಲು ತಳಕಿಳಿಯೆ ಕ್ಷುದ್ರ ಕಸವು,
ತುಪ್ಪವಾಗಿ ಮನಕೊಪ್ಪವಾಗಿ ಗಮಗಮಿಸಬಹುದು ಯಶವು.

ತೂಗಬೇಕು ಮನದೊಳಗೆ ತೂಕವುಳ್ಳವರ ಮಾತು ಹಿಡಿದು,
ಬಾಗಬೇಕು ಬಿಲ್ಲಾಗಿ, ದೂರ ಗುರಿಯೆಡೆಗೆ ಜೀವ ಮಿಡಿದು,
ಕಾಯಬೇಕು ಹುಳಿಯೊಗರು ಮಾಗಿ ರಸತುಂಬಿ ತೂಗುವರೆಗು
ಇಂದೊ ನಾಳೆ ಬಂದೀತು ಗೆಳೆಯ ಆ ಅಮೃತಗಳಿಗೆ ನಮಗು.

ದೂರ ಸಿಡಿದು ಕಿಡಿಯಂತೆ ಬದುಕು-ಬಣಿವೆಯನು ಉರಿಸಬೇಡ.
ಭಾರತವೆ ಇಹುದು ಕಣ್ಮುಂದೆ, ಹಿಂದೆ ಜಡೆಗಟ್ಟಿ ನಿಂತ ಮೋಡ.
ಯಾರು ಹೇರಿಕೊಂಡೊಯ್ವುದಿಲ್ಲ, ಹೋರಾಟವೊಂದೆ ಕೊನೆಗೆ
ತಾಯಿ ನೆಲದ ಈ ಮಣ್ಣು ಗಂಧ-ಕುಂಕುಮವು ನಮ್ಮ ಹಣೆಗೆ.
*****