ಭಾರತದ ನಾಲ್ವತ್ತು ಕೋಟಿಯ ನೆನೆದು ಎತ್ತಿಹೆ ಲೇಖನಿ,
ಸ್ವಚ್ಛ ಬಿಳಿ ಕಾಗದದಿ ಮೂಡಿದೆ ಹಾಡಿದೊಲು ನನ್ನೊಳದನಿ.
ಮೃತ್ಯುಪತ್ರವನೀಗಲೇ ನಾನೇಕೆ ಬರೆದೆನೊ ತಿಳಿಯದು
ವರ್‍ತಮಾನವು ಭೂತವಾಗದೆ ಆ ಭವಿಷ್ಯವು ತೆರೆಯದು.
ಇರುವ ಪ್ರೀತಿಯ ಧಾರೆಯೆರೆದಿರಿ, ಮಮತೆ ಹೂಗಳ ಸುರಿದಿರಿ.
ಹೊರದೆ ಹೊರಲಾರದೆಯೆ ಬಾಗಿದೆ; ನೀವೆ ಶಕ್ತಿಯನಿತ್ತಿರಿ.
ನಿಮ್ಮೆದೆಯ ಅಭಿಮಾನ ಧ್ವಜವನು ಎತ್ತಿ ಬಾನಿಗೆ ಹಿಡಿದಿರಿ.
ನಿಮ್ಮ ನಂಬಿಗೆಗೆರಡು ಬಗೆಯದೆ ತುಂಬುವದೆ ನನ್ನೊಳಗುರಿ.
ಕರಗಿದಂತಃಕರಣದಲ್ಲಿಯೆ ಎರಕಹೊಯ್ದಿರಿ ನನ್ನನೆ
ಹೋದ ಹೋದೆಡೆ ಲಕ್ಷ ಲಕ್ಷದಿ ಲಕ್ಷ್ಮಗೊಟ್ಟಿರಿ ಸುಮ್ಮನೆ.
ನಿಮ್ಮ ಕಂಡರೆ ಉಬ್ಬುವುದು ಮೈ, ಹಬ್ಬಿ ಪ್ರೀತಿಯ ದಾಂಗುಡಿ
ನಿಮ್ಮ ಸುಖ-ದುಃಖದಲಿ ಮೀಯುತ ಪಡೆದ ಚೇತನವಿಮ್ಮಡಿ.
ನನ್ನ ಹೆಗಲಿಗೆ ಹೆಗಲು ಕೊಟ್ಟಿರಿ, ಹಿಂದೆ ಬೆಂಬಲವಾದಿರಿ.
ಮುಗಿಲು ಮುಟ್ಟುವವರೆಗೆ ಜಯಜಯಕಾರಗೈಯುತ ನಡೆದಿರಿ.
ಜಗದ ಜೀವನ ರಥವು ಮುಂದಿರೆ ಹಿಂದೆ ಬೀಳದು ಭಾರತ
ಬಡವ-ಬಲ್ಲಿದ, ರೈತ-ಕಾರ್ಮಿಕ ಎಲ್ಲರಿಗು ಒಂದೇ ವ್ರತ.
ಆ ಹಿಮಾಲಯ ಕರೆವುದೆನ್ನನು ಮೊರೆವುದೇನೋ ಕಿವಿಯಲಿ,
ನಾನು ಕೊಟ್ಟಿಹ ವಚನ ತೀರಿಸದೆಂತು ಉಳಿದುದ ನನೆಯಲಿ?
ನಡೆಯ ತೊಡಗಿಹ ದಾರಿ ಮುಗಿಯದೆ ಎಲ್ಲಿ ಮನಸಿಗೆ ನೆಮ್ಮದಿ?
ನನ್ನ ದಿನಚರಿಯಲ್ಲಿ ಮೂಡಿದೆ ಕವಿಯು ಹಾಡಿದ ಚೌಪದಿ.
ಸಾವು ಬರುವುದು ಎಲ್ಲರಿಗೂ ಸಮನಾಗಿ ಸಂಧ್ಯಾರಾಗದಿ
ಜೀವ ಹೋರಾಡುವುದು ತನ್ನಯ ಗುರಿಯ ಮುಟ್ಟುವ ಜಾವದಿ.
ಸತ್ತನಂತರ ಏಕೆ ಧಾರ್‍ಮಿಕ ಕರ್‍ಮ? ಮರ್‍ಮವನರಿಯನು;
ನನ್ನ ಮಟ್ಟಿಗೆ ಇಂಥ ವಿಧಿ ಮರೆಮೋಸವೆಂದೇ ಬಗೆವೆನು.
ನನ್ನ ದೇಹದ ಬೂದಿಯೊಳಗೊಂದಿನಿತು ಗಂಗೆಯ ಸೇರಲಿ,
ಅಲ್ಲ ಧಾರ್‍ಮಿಕ ನಂಬಿಕೆಯು; ಅದು ನನ್ನ ಬಾಲ್ಯದ ಬಾನುಲಿ,
ನನ್ನ ನರ ನರದಲ್ಲಿ ನೆತ್ತರು ಗಂಗೆ ಯಮುನೆಯ ಅಲೆಗಳು
ದಂಡೆ-ಮಳಲಿಗೆ ಹೊಳಲುಗೊಟ್ಟಿವೆ ನೂರು ನೆನಪಿನ ಝರಿಗಳು.
ಅದರ ಏರಿಳಿತದಲಿ ಬೆಳೆಯುತ ತೂಗಿದೆನು ಋತು-ಲಹರಿಗೆ
ಯುಗ ಯುಗಾಂತರದಲ್ಲು ಮುಗಿಯದ ಕಾವ್ಯ, ಕಥೆ, ಇತಿಹಾಸಕೆ.
ಈ ಪುರಾತನ ಸೆಲೆಯು ಚಿಮ್ಮಿದೆ ಗಂಗೆಯುಗಮಸ್ಥಾನದಿ
ನೂರು ಕತ್ತಿಯ ರಕ್ತ ತೊಳೆದಿದೆ ಶಾಂತಿಮಂತ್ರದ ಪೂರದಿ.
ಹಿಮಶಿಖರದಿಂದಿಳಿದು ಕಹಳೆಯನೂದಿ ಕೊಳ್ಳಕೆ ಧುಮುಕಿದೆ,
ಬಯಲ ನೆನೆಯಿಸಿ ಹಸುರ ತೊನೆಯಿಸಿ ಜೀವ ದುಂದುಭಿ ಮೊಳಗಿದೆ.
ಭಾರತದ ಗತ ಸಾರ ಸ್ಮಾರಕ ವರ್ತಮಾನಕೆ ಹೊಯ್ಯುತ
ಆ ಭವಿಷ್ಯದಪಾರ ಸಾಗರ ಹೊಕ್ಕು ತೆರೆ ಹೊಡಮರಳುತ.
ಅರ್‍ಥವಿಲ್ಲದ ರೂಢಿ ಮೂಢತೆ ಕೊಡವಿ ಮೇಲಕೆ ನೋಡಿದ:
ವ್ಯರ್‍ಥವಾಗಿದೆ ವ್ಯಕ್ತಿಶಕ್ತಿಯಪಾರ್‍ಥಗೊಂಡಿದೆ ಗಂಡೆದೆ.
ಮೆಟ್ಟಿ ಪಾತಾಳಕ್ಕೆ ದೇಹವ ಆತ್ಮಕೊಡ್ಡಿವೆ ಬಂಧನ
ಸಕಲ ಸಂಕೋಲೆಗಳ ಕಿತ್ತೆಸೆದೇಳು ಭಾರತ ಚೇತನ!
ತೆರೆ ಪರಂಪರೆ ತೊರೆದು ಹರಿಯುವ ಹೊನಲಿಗೆಲ್ಲಿದೆ ಜೀವನ?
ನೊರೆಯ ಸರಿಸುತ ಬದಿಗೆ ತಿಳಿಜಲವೀಂಟೆ ಸ್ಫೂರ್‍ತಿಯ ಕೇತನ.
ನನ್ನ ಭಾವಕೆ ಸಾಕ್ಷಿಯಾಗೀ ಭಸ್ಮ ಗಂಗೆಗೆ ಸಲ್ಲಲಿ
ಇಂಥ ಸಂಸ್ಕೃತಿ ಸಾರ ಸಕಲೋದ್ಧಾರಕೀ ಶ್ರದ್ಧಾಂಜಲಿ.
ಉಳಿದುದೆತ್ತರ ಬಾನ ಸಂಪುಟದಡಿ ವಿಮಾನ ವಿತಾನದಿ
ನನ್ನ ನಾಡಿನ ಬಿತ್ತರದ ಹೊಲಗದ್ದೆಗಿಳಿಯಲಿ ಮೌನದಿ,
ರೈತ ಸುರಿಸಿದ ಬೆವರು ಮಣ್ಣಿಗೆ ನನ್ನ ದೇಹದ ಬೂದಿಯು
ಬೆರೆತು ಸಮರಸವಾಗುವದೆ ನಾ ತಿಳಿದ ಸ್ವರ್‍ಗದ ಹಾದಿಯು.”
*****
ಪಂಡಿತ ನೆಹರು ಅವರ ಮೃತ್ಯುಪತ್ರವನ್ನೋದಿ
