ನೆಗಡಿ ಕವುಚಿಕೊಂಡಿತ್ತು. ಮೂಗು ಕಿತ್ತು ಒಂದೆಡೆ ಕುಕ್ಕಿ ಇಡಬೇಕೆಂಬಷ್ಟು. ಸಣ್ಣಗೆ ಜ್ವರದ ಬಿಸಿ ಇತ್ತು. ಬಾಗಿಲು ಸದ್ದಾಯಿತು.
ತೆರೆದರೆ ಬಹುಕಾಲದಿಂದ ನಿವೃತ್ತ ಎಂದು ಯಾರಾದರೂ ಕಣ್ಣುಮುಚ್ಚಿ ಹೇಳಬಹುದಾದ ವ್ಯಕ್ತಿ. ಚಪ್ಪತೆ ಮುಖ. ಬಚ್ಚಿ ಬತ್ತಿದ ದೇಹ. ಬಿಳಿಚಿದ ಕೊಡೆಯನ್ನು ಮಡಚಿ ಕಂಕುಳಲ್ಲಿಟ್ಟುಕೊಂಡು ಕಾಲಿನಿಂದ ಭೂಮಿಯನ್ನು ಕಚ್ಚಿಕೊಂಡಂತೆ ನಿಂತಿದ್ದ.
ಅವಳನ್ನು ಕಂಡದ್ದೇ ಅವಶ್ಯಕ್ಕಿಂತ ಜಾಸ್ತಿ ನಗುತ್ತಾ ಸೀದಾ ಒಳಗೆ ಬಂದ. “ಹುಡುಕಿ ಹುಡುಕಿ ಮುಂದೆ ಹೋದೆ. ನೋಡಿದರೆ ಇದೇ ಮನೆ. ಸುಮ್ಮನೆ ಮುಂದೆ ಹೋದೆ….” ಹುಡುಕಿದ ಮತ್ತು ಕೇಳಿ ಹಿಂದೆ ಬಂದ ಅಂತೂ ಮನೆ ಮುಟ್ಟಿದ ಈ ಒಂದೇ ವಿಚಾರವನ್ನು ಎಷ್ಟೆಷ್ಟು ರೀತಿಯಲ್ಲಿ ಹೇಳಬಹುದೋ ಅಷ್ಟಷ್ಟು ರೀತಿಯಲ್ಲಿ ಹೇಳಿ ಅಂತೂ ಮುಗಿಸಿ ಆಶ್ಚರ್ಯದಿಂದ ಯಾರಪ್ಪಾ ಎಂದು ಚಿಂತಿಸುವಂತೆ ನಿಂತೇ ಇದ್ದ ಅವಳ ಬಳಿ “ಇದ್ದಾರಲ್ಲ ಮನೆಯಲ್ಲಿ?” – ಎಂದ.
“….ಇಲ್ಲ….ನೀವು?”‘
“ನಾನು….ನನಗೆ ನಿಮ್ಮವರು ಗುರ್ತ. ನನ್ನ ಮಗನ ಅಂಗಡಿಗೆ ಅವರು ಬರುತ್ತಿರುತ್ತಾರೆ….ಅವನ ಹೆಸರು ಗೋಪಿನಾಥ.”
“ಗೊಪಿನಾಥರ ತಂದೆಯ?” ಗೋಪಿನಾಥ ಎಂಬ ಹೆಸರನ್ನು ಗಂಡನ ಬಾಯಲ್ಲಿ ಎಲ್ಲೋ ಒಂದೆರಡು ಸಲ ಕೇಳಿದಂತಿದೆ ಅಂತಿತ್ತು ಅಷ್ಟೇ. ಅದು ಬಿಟ್ಟು ಅವಳ ದನಿಯಲ್ಲಿ ಏನೊಂಚೂರು ಇಲ್ಲದೆ ಸಪಾಟಾಗಿದ್ದರೂ ಆ ವ್ಯಕ್ತಿ ಅದರಲ್ಲಿ ಗುರುತು ಹಿಡಿದ ಖುಶಿ ತುಂಬಿಕೊಂಡಿದೆಯೋ ಎಂಬಂತೆ –
“ಅದೋ! ಗೊತ್ತಾಗಿ ಬಿತ್ತಿತಲ್ಲ!” – ಎಂದು ಭುಜ ಕುಣಿಸಿ “ಅವರು ಎಷ್ಟೊತ್ತಿಗೆ ಬರುತ್ತಾರೆ? ಇಲ್ಲೆಲ್ಲೋ ಕೆಲಸದ ಮೇಲೆ ಬಂದಿದ್ದೆ. ಹಾಗಾದರೆ ನೋಡಿ ಕೊಂಡು ಹೋಗೋಣ ಅಂತ ಬಂದೆ” – ಎನ್ನುತ್ತಾ ಬೆವರು ಒರೆಸಿಕೊಳ್ಳುತ್ತಾ ಕುಳಿತೇ ಬಿಟ್ಟ.
ಏನು ಮಾಡಲಿ?
ಒಳಗೆ ಹೋಗಿ ಬಿಡಲೇ? ಎಂದು ಅನುಮಾನಿಸುತ್ತ ನಿಂತಿದ್ದವಳು “ಇಲ್ಲ…. ಅವರು ಇಂತಿಷ್ಟು ಹೊತ್ತಿಗೇ ಬರುತ್ತಾರೆ ಅಂತ ಹೇಳುವಂತಿಲ್ಲ. ಬರುವುದುಒಂದು ಗಂಟೆಯೂ ಆಗಬಹುದು. ಒಂದೂವರೆ, ಎರಡೂ. ಏನಾದರೂ ಹೇಳಲಿಕ್ಕಿದೆಯೆ? ಹೇಳಿ. ನಾನು ತಿಳಿಸುತ್ತೇನೆ”
“ಛೆ ಛೆ! ಹೇಳುವುದಂತ ಅಂಥದ್ದೇನೂ ಇಲ್ಲ. ಇಲ್ಲಿಯವರೆಗೆ ಹೇಗೂ ಬಂದಿದ್ದೇನೆ. ಹಾಗಾದರೆ ಕಂಡೇಹೋಗುವ ಅಂದುಕೊಂಡು….” ಪುನಃ ಹಳಿಯ ಮೇಲೆ ಹಳೆಯ ರೈಲು.
“ನನಗೆ ನಿಮ್ಮವರು ಬಹಳ ಗುರ್ತ” – ಎನ್ನುತ್ತ ಕುರ್ಚಿಗೆ ಮತ್ತಷ್ಟು ಅಂಟಿ ಕುಳಿತುಕೊಂಡ. “ಕಾಪಿ ಗೀಪಿ ಮಾಡುವ ಪ್ರಯಾಸಕ್ಕೆ ಹೋಗಬೇಡಿ. ಮಜ್ಜಿಗೆಯಂತೂ ಬೇಡವೇಬೇಡ. ಥಂಡಿಯಾಗುತ್ತದೆ” ಎಂದ. ಸೂಚನೆ ಸಿಕ್ಕಿದಂತಾಗಿ ಆಕೆ ಒಳಗೆ ಬಂದು ಕಾಫಿ ಮಾಡಿ ತಂದುಕೊಟ್ಟಳು. (ಹೋದ ಹೋದಲ್ಲಿ ಅಸಡ್ಡೆಗೊಳಗಾಗಿಯೋ ಏನೋ) ಎದುರಿನವರು ನಗದೆಯೇ ನಗುವ, ಮಾತಾಡದೆಯೇ ಮಾತನ್ನು ಹರಿಬಿಡುವ, ಬಹಳ ಬೇಕಾದವನು ಎಂಬಂತೆ ಪಟ್ಟಾಗಿ ಕುಳಿತೇ ಬಿಡುವ ಅವನ ವಿಚಿತ್ರ ಕಂಡು ಆಕೆ ಒಳಹೋಗಬೇಕು ಎಂದುಕೊಂಡವಳು ಅಲ್ಲಿಯೇ ಎದುರು ಕುರ್ಚಿಯಲ್ಲಿ ಕುಳಿತಳು. ಪುನಃ ಆತ ಏನೋ ಲಘುಲಹರಿಯ ಪ್ರಶ್ನೆ ಕೇಳುತ್ತಿದ್ದೇನೆ ಎಂಬಂತೆ ಖುಲ್ಲ ನಗುತ್ತ “ಎಷ್ಟೊತ್ತಿಗೆ ಬರುತ್ತಾರೆ ಎಂದಿರಿ?” – ಎಂದ.
“ಸುಮಾರು ಒಂದು ಗಂಟೆಗೆ”
ಮುದುಕ ವಾಚು ನೋಡಿಕೊಂಡ. ಸಾಲದು ಎಂಬಂತೆ ಗೋಡೆ ಗಡಿಯಾರವನ್ನು ನೋಡಿದ. “ಓ, ನನ್ನ ವಾಚು ಸ್ವಲ್ಪ ಹಿಂದಿದೆ” – ಎನ್ನುತ್ತ ಸರಿಯಾಗಿಟ್ಟ. ಒಟ್ಟಾರೆ ಮುಂದಿನ ಮಾತನ್ನು ಏಳಿಸುವ ಮುಂಚೆ ತನ್ನನ್ನು ಆದಷ್ಟು ಕ್ರಿಯೆಯಲ್ಲಿ ತೊಡಗಿರುವವನಂತೆ ತೋರಿಸಿಕೊಂಡು “ಅಂದರೆ…. ಈಗ ಹನ್ನೆರಡೂವರೆ. ಹನ್ನೆರಡೂವರೆ, ಹನ್ನೆರ್ಡುವರೆ, ಹನ್ನೆರಡು ಮುಕ್ಕಾಲು, ಹನ್ನೆರ್ಡು ಮುಕ್ಕಾಲು ಒಂದು! ಇನ್ನರ್ಧ ಗಂಟೆಯಲ್ಲಿ ಬರುತ್ತಾರೆ!” – ಅವ ಹೇಳಿದ ಧಾಟಿಯೆಂದರೆ ಅರ್ಧಗಂಟೆಯೆಂಬುದು ಚಿಟಿಕೆ ಹೊಡೆಯುವ ಮುಂಚೆ ಹಾರಿ ಹೋಗುವಂಥದು ಎಂಬಂತೆ.
“ಹ್ಞಾಂ! ಇನ್ನು ಅರ್ಧಗಂಟೆ ಇದೆ!” – ಆಕೆ ಉದ್ದ ಉಸಿರಿನ ನಡುವೆ ನುಡಿದು “ಅಲ್ಲ, ನೀವು ಅಷ್ಟು ಹೊತ್ತು ಯಾಕೆ ಕಾಯಬೇಕು? ಇಷ್ಟಕ್ಕೂ ಅವರು ಬರುವುದು ಇನ್ನಷ್ಟು ತಡ ಆದೀತು. ಏನಾದರೂ….”
ಆಕೆ ಪೂರ್ಣಗೊಳಿಸುವ ಮೊದಲೇ ತಾನು ಅಷ್ಟರವರೆಗೆ ಅಲ್ಲಿ ಇರುವುದರ ಅವಶ್ಯಕತೆ ಏನೂ ಇಲ್ಲ ಎಂದು ಅವಳ ಅರ್ಥವೋ ಎಂಬ ಸಂಶಯದಲ್ಲಿ ಸೆಟೆದು ಸಾವರಿಸಿ “ಇಲ್ಲ ಇಲ್ಲ, ನಾನೇನು ಬಹಳ ಹೊತ್ತು ಕುಳಿತುಕೊಳ್ಳುವುದಿಲ್ಲ. ಅವರನ್ನು ನೋಡಿದೆ, ಮಾತಾಡಿದೆ, ಹೊರಟೆ. ಇಷ್ಟು ದೂರ ಬಂದು ಅವರನ್ನು ನೋಡದೆ….”
ಈ ಮನುಷ್ಯ, ಆಡಿದ್ದನ್ನೇ ಆಡುವ ಕಿಸುಬಾಯಿದಾಸ, ತನ್ನ ಗಂಡನಿಗೆ ಗುರ್ತ ಆದದ್ದು ಹೇಗಪ್ಪಾ ದೇವರೇ!
ಸ್ವಲ್ಪ ಹೊತ್ತು ದಾಕ್ಷಿಣ್ಯಕ್ಕೆ ಕುಳಿತಿದ್ದು ಮತ್ತೆ ಒಳಗೆ ಹೋಗುವುದೆಂಬ ಇರಾದೆಯಲ್ಲಿ ಕುಳಿತಿದ್ದ ಆಕೆ ಈಗ ಏಳದೆ ಆ ಮನುಷ್ಯನ ಮುಜುಗರವನ್ನು, ಆ ಮುಜುಗರವನ್ನು ಆತ ಪದೇಪದೇ ಒರೆಸಿಕೊಳ್ಳಲು ಹವಣಿಸುವುದನ್ನು, ದುರ್ಬಲತೆಯನ್ನು ಮುಚ್ಚುವಂತೆ ತೊಟ್ಟಂತಿದ್ದ ಹಳೆಯ ಧೂಳು ಕುಳಿತು ಮಂಕಾದ ಕೋಟನ್ನೂ, ಒಂದೆಡೆ ನಿಲ್ಲಲು ಒಲ್ಲದ ದೃಷ್ಟಿಯನ್ನು ನಿಲ್ಲಿಸಿಕೊಳ್ಳಲು ನಡೆಸುವ ನಿರಂತರ ಯತ್ನವನ್ನೂ ನೋಡುತ್ತ ಕುಳಿತಳು. ಆತ ಪದೇಪದೇ ಬೆನ್ನು ನೆಟ್ಟಗೆ ಮಾಡಿ ಕತ್ತೆತ್ತಿ ಕುಳಿತಿಕೊಳ್ಳುವ ಮೂಲಕ ತೋರಿಸಿದ ಅವನ ಒಳಕುಗ್ಗುವಿಕೆಯನ್ನು ಗುರುತು ಹಚ್ಚಿದವಳಂತೆ ಕನಿಕರದಿಂದ.
“ಇಲ್ಲ….ಕೂತಿರಿ….ಚಿಂತಿಲ್ಲ. ಅಷ್ಟು ಅವರ ಬಳಿ ಮಾತಾಡಿಯೇ ಹೋಗಬೇಕೆಂದಿದ್ದರೆ” ಎಂದಳಾಕೆ.
ಮಾತು ಬೀಳುತ್ತದೋ, ಮಾಣಿಕ್ಯ ಬೀಳುತ್ತದೋ ಎಂದು ಆರಿಸುವ ಕಾಲದ ಆತನಿಗೆ ಈ ಮಾತಿನಲ್ಲಿ ಉದ್ದಕ್ಕೆ ಹಿಂಜಲು ಸಿಕ್ಕಿಯೇ ಸಿಕ್ಕಿತು.
“ಅಷ್ಟು ಮಾತು ಅಂತ ಹೇಳಬೇಡಿ. ಸುಮ್ಮನೆ ಲೋಕಾಭಿರಾಮ. ಹೀಗೇ ಅದೂ ಇದೂ…. ಹ್ಹಿ ಹ್ಹಿ ಹ್ಹಿ!” – ಈ ಉರಿಬಿಸಿಲು ಮತ್ತು ಲೋಕಾಭಿರಾಮ!
ಅಡುಗೆ ಮುಗಿಸಿ, ಗಂಡ ಊಟಕ್ಕೆ ಬರುವ ಮುಂಚೆ ತನ್ನಷ್ಟಕ್ಕೆ ಓದುತ್ತ ತನ್ನದೇ ಹೊತ್ತಿನ ರಾಣಿಯಂತೆ ಇರುವ ಆಕೆ ಈಗ ಈ ಮನುಷ್ಯನೆದುರು ತನ್ನ ಸಮಯವನ್ನು ಧರ್ಮಕ್ಕೆ ಒತ್ತೆ ಇಟ್ಟು ಕುಳಿತವಳಂತೆ ಇದ್ದಳು. ಐನ್‌ಸ್ಟೈನನ ಸಾಕ್ಷೇಪ ಸಿದ್ಧಾಂತದ ಅರ್ಥ ಕ್ಲಾಸಲ್ಲಿ ಆಗದಿದ್ದರೂ ಈಗ ಅವಳಿಗೆ ಆಗತೊಡಗಿತ್ತು. ಗಡಿಯಾರ ನೋಡಿದರೆ ಮುಳ್ಳುಗಳು ಚಲಿಸುತ್ತಲೇ ಇರಲಿಲ್ಲ!
ಸುತ್ತಮುತ್ತ ನೋಡುತ್ತ ಇದ್ದ ವ್ಯಕ್ತಿ ಸುಮ್ಮನೆ ಮಾತಿನ ಊತವಿಲ್ಲದೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲವೆಂಬಂತೆ ಕೇಳಿದ. “ಈ ಮನೆ…. ಬಾಡಿಗೆಯದಾ?”
“ಹ್ಞೂ”
“ಬಾಡಿಗೆ?” – ಹೇಳಿದಳು. “ಮಕ್ಕಳೆಷ್ಟು?” – ಹೇಳಿದಳು “ಹೆಣ್ಣು ಗಂಡು? – ” ಹೇಳಿದಳು. ಮನೆ ಚೆನ್ನಾಗಿದೆ. ಇಂಥ ಮನೆಗೆ ಈಗಾದರೆ ಇಷ್ಟು ಬಾಡಿಗೆ…. ಎಂಬಿತ್ಯಾದಿ ಮಾತುಗಳನ್ನುಆಡುತ್ತ ಇದ್ದ. ಆಕೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾಳೆ ಎಂಬ ಭಾಸವಾಗುವಂತೆ ಕುಳಿತೇ ಇದ್ದಳು.
“ನನ್ನ ಮನೆಯೂ ಬಾಡಿಗೆಯದೇ. ಅದರಲ್ಲಿರುತ್ತ ಮೂವತ್ತು ಮೂವತ್ತೈದು ವರ್ಷವಾಯಿತು. ಇಷ್ಟು ದೊಡ್ಡದು ಅಂತೀರಿ! ಕೇವಲ ಮೂರು ಕೋಣೆ. ಎರಡು ಸೆಂಟ್‌ಸ್ ಜಾಗದಲ್ಲಿ ಕಟ್ಟೀದ ಮನೆಯಪ್ಪ. ಹಿಂದೊಂಚೂರು ಮುಂದೊಂಚೂರು ಹೆಸರಿಗೆ ಜಾಗ ಬಿಟ್ಟು, ಬಾಡಿಗೆ ಹೆಚ್ಚಲ್ಲ. ಭಾರೀ ಹಳೆಯ ಬಾಡಿಗೆ. ಮೂವತ್ತೈದು. ಜಾಸ್ತಿ ಕೊಟರೆ ಆದೀತು ಅಂತ ಉಂಟು ಮನೆಯ ಧಣಿಗೆ.” – ಮುದುಕ ಮಾತಿನ ಮುಂಡಾಸನ್ನೇ ಸುತ್ತಿಕೊಂಡು ಬಂದಂತಿದ್ದ. “ನಾವು ಕೊಡುವುದಿಲ್ಲ. ಅವರೇನು ಏಳಿಸುವ ಹಾಗುಂಟೇ? ನಾವಾದರೂ ಏಳುತ್ತೇವೆಯೇ? ಮತ್ತೇಕೆ ಜಾಸ್ತಿ ಬಾಡಿಗೆ ಕೊಡೆಬೇಕು?” – ಒಣಗಿದ ನಾರಿನಂತಹ ಮನುಷ್ಯ ಮತ್ತು ಅಂಥದೇ ಸ್ವರ. ಆಕೆ ಕೆಣಕು ದನಿಯಲ್ಲಿ “ಅವರು ಮಾರುವುದಾದರೆ?” ಎಂದಳು.
“ಮಾರುವುದಾದರೆ ನಮಗೇ ಮಾರಲಿ. ನಾವೇ ಕೊಳ್ಳುತ್ತೇವೆ” – ಕುಳಿತದ್ದು ಸಿಂಹಾಸನದ ಮೇಲೆ ಎನ್ನುವಂತೆ ಎರದೂ ಕೈಗಳನ್ನು ಕುರ್ಚಿಯ ಕೈಗಳ ಮೇಲೆ ನಿಡಿದು ನೀಡಿ ಕಾಲನ್ನು ಉದ್ದ ಚಾಚಿ ಮುಖ ಎತ್ತರಿಸಿ ನುಡಿದ. ಯಾವುದರಿಂದ ಹೊರಬಂದರೂ ಮನುಷ್ಯ ತನಗೆ ಕೊಳ್ಳುವ ಶಕ್ತಿ ಇರಬೇಕೆಂಬ ಆಸೆ ಮತ್ತು ಕನಸಿಂದ ಮಾತ್ರ ಹೊರಬರಲಾರ ಎಂದಿಗೂ. ಈ ಮನುಷ್ಯನೋ ತನಗೆ ಏನೇನೂ ಒಪ್ಪದ ಸಾಹುಕಾರಿಕೆಯ ಗತ್ತಿನಲ್ಲಿ ಮತ್ತೆ ನುಡಿದ. “ನಾವೇ ಖರೀದಿಗೆ ಕೊಳ್ಳುತ್ತೇವೆ”…. ಜನ್ಮವಿಡೀ ಗುಲಾಮಗಿರಿಯಲ್ಲೇ ಕಳೆದಂತೆ ಕಾಣುವ ಮನುಷ್ಯ ಕೊನೆಗಾಲದಲ್ಲಿ ಸಾಹುಕಾರಿಕೆಯ ನಟನೆ ಮಾಡಲು ಹೊರಟರೂ, ಒಪ್ಪುವುದಿಲ್ಲ. ನಗೆಪಾಟಲಾಗುತ್ತಾನೆ….
ಆಕೆಗೆ ಅವನನ್ನು ಈಗ ನೋಡುತ್ತಿದ್ದಂತೆ ತಾನು ಒಳಗೆ ಸ್ವಲ್ಪ ಹೊತ್ತು ಕುಳಿತುಎದ್ದು ಹೋಗಬಿಡಬೇಕೆಂದುಕೊಂಡಿದ್ದೇ ಮರೆತು ಹೋಯಿತು. ಆತನ ಇಡೀ ಆಕಾರವೇ ಆತನ ಮಾತುಗಳಿಗೆಲ್ಲ ವಿರುದ್ಧವಾದಂತಿತ್ತು. ಎಲ್ಲಿಯವರೆಗೆ ಮುಂದುವರಿಸುತ್ತಾನೆ ನೋಡೋಣ ಎಂದು ಆಕೆ
“ಆದರೂ…. ಈಗೆಲ್ಲ ವಿಪರೀತ ರೇಟು!” – ಎಂದಳು.
“ಏನಾಯಿತು? ಹಳೆಯ ಬಾಡಿಗೆದಾರ ನಾನು. ನನಗೆ ಕಡಿಮೆ ಬೆಲೆಗೆ ಕೊಡಲೇ ಬೇಕು. ಏನು ಒಂದು ರಿಪೇರಿ ಮಾಡಿದ್ದಾನಾ? ಬಾಡಿಗೆ ಸೀದಾ ಕಿಸೆಗಿಳಿಸಿಕೊಂಡದ್ದೇ ಹೊರತು? ಎರಡು ಕೋಣೆಗೆ ನಾನೇ ಮುಚ್ಚಿಗೆ ಮಾಡಿಸಿಕೊಂಡದ್ದಲ್ಲವಾ?” ಆತ ಎದೆತಟ್ಟಿ `ನಾನೇ’ ಎಂದು ಹೇಳಿದ ಫೋರ್ಸೋ! ಆ ಮುಚ್ಚಿಗೆಯಡಿ ಮುಚ್ಚಟೆಯಾಗಿ ವರ್ಷಗಟ್ಟಲೆ ಮಲಗಲು ಧಣಿಯಂತೂ ಬರಲಿಲ್ಲವಲ್ಲ – ಎಂದು ಕೇಳಬೇಕೆನಿಸಿದರೆ ಆ ವಾಕ್ಯಕ್ಕೆ ತಾನು ಕೇಳುವ ಅರ್ಥಬಿಟ್ಟು ಇನ್ನೊಂದು ಅರ್ಥಕ್ಕೆ ನೆಗೆದುಕೊಳ್ಳುವ ಮಗ್ಗಲು ಇರುವುದರಿಂದ ಅದನ್ನಲ್ಲೇ ನುಂಗಿಕೊಂಡು ಗಡಿಯಾರ ನೋಡಿದಳು. ಅರೆ! ಗೋಡೆಯ ಮೇಲಿನ ಗಂಟೆಯ ಮುಳ್ಳು ಚಲಿಸುತ್ತಲೇ ಇರಲಿಲ್ಲ. ಬೇಕೆಂದಾಗ ಬೇಗ ಬೇಗ ನಡೆಯುವ ಮುಳ್ಳುಗಳಿರುವ ಗಡಿಯಾರಗಳು ಇರಬೇಕಿತ್ತು!
“ಏನು ಯೋಚಿಸುತ್ತೀರ?”
ಅದನ್ನೂ ಈತನಿಗೆ ಹೇಳಬೇಕು! ಎಲ್ಲಿಂದ ತಯಾರಾದ ಈತ! ಸಾಲು ಸಾಲಾಗಿ ಸೀನು ಬಂತು. ಸೀನುಗಳ ಸಾಲಿನ ಎಡೆಎಡೆಯಿಂದಲೂ ಆತ ತನ್ನ ಕೆಲಸ, ತಾನಿದ್ದ ಆಫೀಸು, ಅಧಿಕಾರಿಗಳು ಇತ್ಯಾದಿ ಇತ್ಯಾದಿ ಹೇಳುತ್ತಿದ್ದದ್ದೂ ಕೇಳಿಸುತ್ತಿತ್ತು. ತುಂಡಾಗುತ್ತಿತ್ತು. ಆಕೆ ಯೋಚಿಸಿದಳು – ಕಣ್ಣೆಂಬುದು ಕತ್ತಲೆಯ ಗೂಡಿನಂತೆ ತೆಗೆದ ಜರ್ಜರ ಫೋಟೋದಂತಿದ್ದ ಈತನೊಡನೆಯೂ ಆ ಮುಚ್ಚಿಗೆಯಡಿ ಮಲಗಿದಳಲ್ಲ!
….ಹೆಂಡತಿಯ ವಿಚಾರ ಕೇಳಬೇಕೆನಿಸಿತು. ಆದರೆ ಯಾಕೋ, ಆಕೆ ಇನ್ನೂ ಬದುಕಿದ್ದಾಳು ಅಂತಲೇ ಅನಿಸಲಿಲ್ಲ. ಅಚಾನಕವಾಗಿ ತನಗೇ ತಿಳಿಯದಂತೆ “ನಿಮಗೆ ಹೆಣ್ಣು ಮಕ್ಕಳಿದ್ದಾರಾ?” – ಎಂದು ಕೇಳಿದಳು.
ಇದಾದರ ಬಹಳ ಹೇಳಲಿಕ್ಕಿರುವ ಪ್ರಶ್ನೆ ಎಂಬ ಹುರುಪಿನಲ್ಲಿ “ಹ್ಞಾಂ…. ನನಗೆ ಒಟ್ಟು ಐದು ಜನ ಮಕ್ಕಳು. ಎರಡು ಗಂಡು, ಮೂರು ಹೆಣ್ಣು. ಗಂಡು ಮಕ್ಕಳು ಏನೋ ಬಿಸಿನೆಸ್ ಮಾಡಿಕೊಂಡಿವೆ. ಇತ್ತೀಚೆಗೆ ದುಡ್ಡಿರುವ ಪಾರ್ಟ್‌ನರ್‌ನನ್ನು ಹಾಕಿಕೊಂಡು ತಾವು ಮ್ಯಾನೇಜ್‌ಮೆಂಜ್ ನೋಡಿಕೊಳ್ಳುತ್ತಿವೆ….” – ಆ ಬಿಸಿನೆಸ್‌ಗೆ ಮ್ಯಾನೇಜ್‌ಮೆಂಜ್ ಎಂಬ ಶಬ್ದಭಾರ ಜಾಸ್ತಿಯಾಯಿತೋ ಎಂಬಂತೆ ತಲೆ ಕೊಡವಿ “ಮ್ಯಾನೇಜ್‌ಮೆಂಟ್ ಏನು ಕರ್ಮ….” ಎಂದ. “ಏನಿದ್ದರೇನು? ಮನೆಗೇ ಬರುವುದಿಲ್ಲ ಹೆಣ್ಣು ಮಕ್ಕಳಿಗೆ ಹೆದರಿ…. ಕೇಳಿದ್ದೀರಾ ಎಲ್ಲಾದರೂ?”
“ಯಾಕೆ? ಹೆಣ್ಣು ಮಕ್ಕಳು….”
“ಹ್ಞಾಂ – ಒಬ್ಬಳಿಗೆ ಮದುವೆ ಮಾಡಿದೆ. ನಾನು ಸರ್ವಿಸ್‌ನಲ್ಲಿ ಇದ್ದಾಗಲೇ.” – ಹೊರಗೆ ಶಬ್ದವಾಯಿತು. ಬಗ್ಗಿ ನೋಡಿದ. `ಯಾರಪ್ಪಾ?’ – ಎಂದು ಕಿರುಗುಡುತ್ತಾ. ತಾನೇ ಮನೆಯವನಾಗಿ ಬಾಗಿಲಲ್ಲಿ ಆಗುವ ಪ್ರತಿ ಶಬ್ದಕ್ಕೂ ಸೂಕ್ಷ್ಮಗೊಳ್ಳುವವನಂತೆ. ಮತ್ತು ಆಕೆಯೇ ಆಗಂತುಕಳೋ ಎಂಬಂತೆ ಇಲ್ಲ. ಬಂದದ್ದು ಆಕೆಯ ಗಂಡನಲ್ಲಿ. ಯಾರೋ. ವಠಾರ ಎಂದ ಮೇಲೆ ಒಂದಲ್ಲಾ ಒಂದು ಮನೆಗೆ ಯಾರದರೂ ಬರುತ್ತಲೇ ಇರುತ್ತಾರೆ – ಶಬ್ದಗಳೂ ಆಗುತ್ತಲೇ ಇರುತ್ತವೆ. ಮುದುಕ ಸಡಿಲಾದ ಮುಂಡಾಸನ್ನು ಮತ್ತೆ ಬಿಗಿದು ಸುತ್ತಿಕೊಂಡಂತೆ “…. ಏನಂದೆ ನಾನು? ಮದುವೆ ಮಾಡಿದೆ. ಸರಕಾರಿ ಕೆಲಸ ಇದ್ದವನಿಗೆ. ಆಗ ಅವ ಗುಮಾಸ್ತ. ಐದು ಸಾವಿರ ವರದಕ್ಷಿಣೆ ಕೊಟ್ಟಿದ್ದೆ. ಈಗ ಆಫೀಸರ್. ಶಿವಮೊಗ್ಗದಲ್ಲಿ” – ಎಂದು ತನ್ನ ಕಾಲರು ಸರಿಮಾಡಿಕೊಂಡ. “ಈಗಾದರೆ ಇದೇ ಸಂಬಂಧಕ್ಕೆ ಇಪ್ಪತ್ತು ಇಪ್ಪತ್ತೈದು ಸಾವಿರ ಕೊಡಬೇಕು” – ಎಂದ. ಯಾವತ್ತೋ ಮಾಡಿಸಿದ ಮರದ ಮಂಚದ ಬೆಲೆ ಈಗಾದರೆ ಇಷ್ಟು ಎಂದು ಹೇಳುತ್ತ ಲಾಭದ ರೋಮಾಂಚ ಹೊಂದಿದವನಂತೆ.
“ಇನ್ನಿಬ್ಬರೂ ಇದ್ದಾರೆ. ದೊಡ್ಡವಳಿಗೆ ಇಪ್ಪತ್ನಾಲ್ಕು ತುಂಬುವಾಗ ಒಂದು ಸಂಬಂಧ ಬಂತು. ಎಲ್ಲ ನಿಶ್ಚಯ ಆಗಿ ತಪ್ಪಿಹೋಯಿತು. ಒಮ್ಮೆ ತಪ್ಪಿಹೋದರೆ ಮತ್ತೆ ಆಗಲು ಸುಮಾರು ಸಮಯವೇ ಬೇಕು. ಹಾಗೆ ವರ್ಷ ಆಯಿತು. ಇನ್ನೊಬ್ಬಳಿಗೆ ಮಾಡುವ ಅಂದರೆ ಹಿರಿಯವಳು ತಾನು ಜೀವ ತೆಗೆದುಕೊಳ್ಳುತ್ತೇನೆ ಎಂದಳು. ಯಾವುದಕ್ಕೂ ಸರಿಯಾದ ಪಾರ್ಟಿ ಬರದೆ ಕಿರಿಯವಳಿಗಾದರೂ ಮಾಡುವುದು ಹೇಗೆ?…. ಅಂಥಿಂಥವರಿಗೆ ಕೊಡಲು ಮನಸ್ಸು ಬರುವುದಿಲ್ಲ.”
ಅಂಥಿಂಥವರಿಗೆ ಕೊಡಲು ಮನಸ್ಸು ಬರುವುದಿಲ್ಲ ಎಂಬಂತಹ ಹಳತು ಬಿದ್ದ ಮಾತುಗಳನ್ನೇ ಹೆಕ್ಕಿಕೊಂಡು ಆತ ಮಕ್ಕಳ ಮದುವೆ ಆಗದುದಕ್ಕೆ ಗುರಾಣಿಯಂತೆ ಉಪಯೋಗಿಸಿಕೊಳ್ಳುತ್ತಿದ್ದಾನೆ ಮತ್ತು ಅದರಲ್ಲಿ ಪಳಗಿ ಹೋಗಿದ್ದಾನೆ ಅಂತನಿಸುತ್ತಿತ್ತು. ಹೀಗೆಲ್ಲ ಹೇಳಿಕೊಂಡು ತಿರುಗುವುದನ್ನೇ ಇಷ್ಟಪಡುವವನಂತೆ.
ಆಕೆ ಸುಮ್ಮನೆ ಕುಳಿತೇ ಇದ್ದಳು. “ಈಗೊಂದು ಸಂಬಂಧ ಬಂದಿದೆ. ಮೂವತ್ತು ಸಾವಿರ ವರದಕ್ಷಿಣೆ ಕೇಳುತ್ತಿದ್ದಾರೆ. ಅದೇನೂ ದೊಡ್ಡದಲ್ಲ. ಹುಡುಗ ಹುಡುಗಿ ನೋಡಿ ಒಪ್ಪಿದರೆ”_ ಎಂದ! ಯಾರಿಗೆ? ಅಕ್ಕನಿಗೋ ತಂಗಿಗೋ ಎಂದು ಪ್ರಶ್ನೆ ಕೇಳಿಸುವ ಶಕ್ತಿಯೂ ಅವನ ಮಾತಿಗಾಗಲೀ ಮುಖದ ಗೆರೆಗಳಿಗಾಗಲೀ ಸ್ವರದ ಎಳೆತಕ್ಕಾಗಲೀ ಇರಲಿಲ್ಲ. ಅದು ಹೇಗೆ ಅವು ಅವನ ಒಳಗಿಂದ ದೂರ ಸಿಡಿದು ಬೇರೆ ತೋರುತ್ತಿವೆ! ಆಕೆ ಅಚ್ಚರಿಗೊಂಡಳು.
“…..ಅಲ್ಲ. ನನ್ನ ಮಕ್ಕಳು ಅಂತ ಹೇಳುವುದಲ್ಲ. ತಂದದ್ದನ್ನು ಅಟ್ಟು ತಿನ್ನುವುದು ಬಿಟ್ಟರೆ, ಒಮ್ಮೊಮ್ಮೆ ಅದೂ ಇಲ್ಲ ಎನ್ನಿ – ಬೇರೆ ಎಲ್ಲದಕ್ಕೂ ನಾಲಾಯಕ್ಕು. ಆದರೆ ಮದುವೆ ಎನ್ನಿ ಕಿವಿ ನೆಟ್ಟಗೆ ಆಗುತ್ತದೆ. ಅದಕ್ಕೇ ಮದುವೆಯೇ ಅಗಲಿಲ್ಲ……” ಅದೇ ನಾರಟೆ ನಗೆ. ಮುಖದ ಮೇಲೊಂದು ನೊಣ ಕುಳಿತಿತು. ಅದನ್ನು ಆತ ಓಡಿಸಿಕೊಳ್ಳಲೂ ಇಲ್ಲ. ಹೆಣದ ಮೇಲೆ ನೊಣ ಕುಳಿತರೆ ಹೀಗೇ…… ಅದೇ ಸ್ವಲ್ಪ ಹೊತ್ತು ಅತ್ತ ಇತ್ತ ಹರಿದು ಸರಿದು ಹಾರಿಹೋಯಿತು. ಈಗ ಆ ನೊಣದ ಬಗ್ಗೆ ಅರಿವು ಬಂತೇನೋ- ಹೇಳಿದ. “ಕಲಿಯಿರೋ ಎಂದೆ. ಕಲಿಯಲಿಲ್ಲ. ಒಟ್ಟಾರೆ ಈಗ ಮನೆಯಲ್ಲಿ ನೊಣ ಓಡಿಸುತ್ತಿವೆ. ಅಣ್ಣಂದಿರತೂ ಮನೆಕಡೆ ಮುಖ ಹಾಕುವುದಿಲ್ಲ ಎಂದೆನಲ್ಲ. ಎಲ್ಲ ನನ್ನ ಕುತ್ತಿಗೆಗೆ……” (ಛೆ ಛೆ ಎನ್ನುವುದಿಲ್ಲವೇ? ) ಅಕೆಯನ್ನೇ ನೋಡಿದ. ಬಳಿ ಹೂವಿನ ಹಣ್ಣು….
“ನಾನು ಸಲಿಗೆ ಕೊಡುವುದಿಲ್ಲ. ಕೊಟ್ಟರೆ ಇವತ್ತು, ನಾಳೆಯಲ್ಲ ಇವತ್ತೇ, ಯಾರನ್ನಾದರೂ ಕಟ್ಟಿಕೊಂಡು ಹಾರಿಯಾವು, ಅಂಥ ಮಕ್ಕಳು. ಅಲ್ಲಲ್ಲೇ ಮೆಟ್ಟಿಕೊಂಡಿರುವುದಕ್ಕೆ ಬಚಾವು. ಈಗ ನೋಡಿ ಮನೆಗೆ ಬೀಗ ಹಾಕಿ ಬಂದಿದ್ದೇನೆ. ಇಲ್ಲವಾದರೆ ನಾನು ಹೋಗುವುದರೊಳಗೆ ಅವರು ಪದ್ರಾಡ್. ಮತ್ತೆ ಹುಡುಕುವ ಕೆಲಸ ನನ್ನಿದ ಆದೀತಾ? ಅಯ್ಯಯ್ಯೋ….! ಪ್ರಾಯ ಬಂದದ್ದು ಇವಕ್ಕೆ ಮಾತ್ರವೆ ಹಾಗಾದರೆ?”
ಆಕೆಗೆ ಜ್ವರೆ ಏರಿದಂತಾಯಿತು. ಗಂಟೆ ನೋಡಿದರೆ ಮುಳ್ಳು ಚಲಿಸುವುದಂತೂ ತಿಳಿಯುವುದಿಲ್ಲ.
ಮಾತಾಡುತ್ತ ಆಡುತ್ತ ಕುರ್ಚಿಯ ಮುಂತುದಿಗೆ ಬಂದು ಎರಡೂ ಅಂಗೈ ಹೊಲಿದು ಮೊಣಕಾಲಿನ ನಡುವೆ ಸಿಕ್ಕಿಸಿ ಮುಡುಗಿ ಕುಳಿತಿದ್ದವ ಛಕ್ಕ ಎಚ್ಚರಾದಂತೆ ಕೈ ತೆಗೆದು ಕುರ್ಚಿಯ ಕೈಯ ಮೇಲಿರಿಸಿ ಹಿಂದಕ್ಕೆ ಮತ್ತೆ ನಿಡಿದಾಗಿ ಒರಗಿ ಕಾಲ ಮೇಲೆ ಕಾಲು ಹಾಕಿ ಕುಳಿತ.
….ಇನ್ನು! ಇನ್ನು ಯಾವ ವಿಷಯ ಬಾಕಿ ಇದೆಯಪ್ಪಾ ಎಂದು ಚಿಂತುಸುವವನಂತೆ. ಗಡಿತಾರದ ಟಿಕ್ ಟಿಕ್ ಸದ್ದನ್ನೇ ಹೀರಿದಂತಿದ್ದ ಛಟಛಟ ಮದ್ಯಾಹ್ನ.
“ಇನ್ನೂ ಬರಲಿಲ್ಲವಲ್ಲ…. ನೀವು ಊಟ ಮಾಡುವುದಾದರೆ ಮಾಡಿ. ನಾನು ಅವರಿಗೆ ಕಾಯುತ್ತೇನೆ.” – ಎಂದ ಆತ.
“ಇಲ್ಲ ಅವರು ಬಂದ ಮೇಲೆಯೇ….” – ಆಕೆ ಕುಳಿತಲ್ಲಿಂದ ಕದಲಲಿಲ್ಲ. ಹಿಂದಿನಂತೆ ನೀವು ಹೋಗಿ ಎಂತಲೂ ಹೇಳಲಿಲ್ಲ. ಬದಲು “ಇವತ್ತು ಎಲ್ಲಿಗೋ ಹೋಗಲಿಕ್ಕಿದೆ ಎಂದಿದ್ದರು…. ಬಹಳ ತಡವೇ ಆಗಬಹುದು ಬರಲು….” – ಎಂದಳು.
“ಈಗ ಗಂಟೆಯೆಷ್ಟು?…. ಎರಡಕ್ಕೆ ಹತ್ತಿರವಾಯಿತು…. ನೀವಂತೂ ಊಟಕ್ಕೇಳುತ್ತಿಲ್ಲ….! ಹಾಗಾದರೆ ನಾನಿನ್ನು ಹೊರಡುತ್ತೇನೆ” – ಏಳದೇನೇ ಹೇಳಿದ.
ಹೇಗೂ ಇಷ್ಟು ಹೊತ್ತಾಯಿತು, ಕೂತಿರಿ, ಬರುತ್ತಾರೆ, ಊಟ ಮಾಡಿ ಹೋಗಿ ಎನ್ನಲು ತನ್ನಿಂದ ಸಾಧ್ಯವೇ ಆಗುತಿಲ್ಲ. ಅದು ಅಸಾಧ್ಯವಾಗಲು ಏನು ಕಾರಣವೆಂತಲೂ ಸ್ಪಷ್ಟ ತಿಳಿಯುತ್ತಿಲ್ಲ. ಕೆಲವರನ್ನು ಕಂಡರೆ ಹೀಗೆ ಏಕೆ ಆಗಬೇಕು? ಆಕೆ ತನ್ನ ಗೊಂದಲದ ಸುತ್ತವೇ ತಿರುಗುತ್ತ ಅಚ್ಚರಿಗೊಳ್ಳುತ್ತ ಕುಳಿತಿದ್ದಳು. ಈತ ಮುದುಕ, ಹಸಿದ ಹೊಟ್ಟೆ, ಹರಕು ಕೋಟು, ಊಟದ ಹೊತ್ತು. ಆದರೂ….!…. ಜ್ವರ ಕುದಿಯುತ್ತಿದೆ ಅನಿಸಿತು.
“ಎಲ್ಲಿ, ಸ್ವಲ್ಪ ನೀರು ಕೊಡಿ.ಕುಡಿದು ಹೊರಡುತ್ತೇನೆ”
ಆತ ನೀರು ಕುಶಿಯುತ್ತಿದ್ದಂತೆ ಬಿಸಿಲು ಮತ್ತು ಆತ ಹೋಗಬೇಕಾದ ದೂರದ ಬಗ್ಗೆ ಕುತೂಹಲದಿಂದ “ನಿಮ್ಮ ಮನೆ ಎಲ್ಲಿ?” – ಎಂದು ಕೇಳಿದಳು.
“ಸುಮಾರು ದೂರ ಆಗುತ್ತದೆ…. ಶಾಂಭವಿ ಟಾಕೀಸು ಉಂಟಲ್ಲ. ಅದನ್ನು ದಾಟಿ, ಹ್ಞಾಂ. ಸುಲಭದಲ್ಲಿ ಹೇಳಬೇಕೆಂದರೆ ಇಬ್ಬರು ಅರೇ ಮರುಳು ಹೆಣ್ಣು ಮಕ್ಕಳು ಇದ್ದಾರಲ್ಲ. ಆ ಮನೆಯ ಸರೀ ಎದುರು….” – ಎಷ್ಟು ಸಲೀಸಾಗಿ ಹೇಳುತ್ತಾನೆ! ಮರುಳು, ಅರೆ ಮರುಳರೆಲ್ಲ ಎಲ್ಲಾ ಊರಲ್ಲಿಯೂ ಇರುವುದು ಸರ್ವೇ ಸಾಮಾನ್ಯವೆಂಬ ಹಾಗೆ. ಆಕೆಗೆ ಝುಮ್ಮ ನಡುಕ ಬಂತು. ಏರುತ್ತಿದ್ದ ಜ್ವರದೊಂದಿಗೇ.
“ಅರೆ ಮರುಳು ಹೆಣ್ಣು ಮಕ್ಕಳೇ?”
“ಯಾಕೆ ನಿಮಗೆ ಗೊತ್ತಿಲ್ಲವೆ?…. ಅವರು ಭಾರೀ ಫೇಮಸ್. ಗೊತ್ತಿಲ್ಲದವರೇ ಇಲ್ಲ. ಸಾಯಂಕಾಲವಾಯಿತೇ ಗೇಟು ಬಿಟ್ಟು ಆಚೆ ಈಚೆ ಅಲ್ಲಾಡುವುದಿಲ್ಲ. ನೀವು ಆ ಕಡೆ ಎಲ್ಲಿ ಬಂದಿದ್ದೀರಿ – ಪಾಪ.”
ಆಕೆ ಈಗ ಸಂಪೂರ್ಣ ಧ್ಯಾನದಿಂದ ಅವನ ಮಾತುಗಳನ್ನು ಕೇಳುವಂತೆ ಕಂಡು ಆತ ಒಮ್ಮೆ ಕುಳಿತಲ್ಲೇ ಅಲ್ಲಾಡಿ ಗಂಟಲು ಗುರುಗುರು ಸರಿಮಾಡುಕೊಂಡು “ಹ್ಯೆತ್. ಏನು ಹೇಳುತ್ತೀರಿ! ಗಂಡಸರಾದವರು ಸಾಯಂಕಾಲ ಆ ರಸ್ತೆಯಲ್ಲಿ ಹೋಗಲಿಕ್ಕಿಲ್ಲ. ಕರೆಯುತ್ತವೆ. ಕರೆಯುತ್ತಲೇ ಇರುತ್ತವೆ. ಅವರನ್ನು ಇವರನ್ನು ಅಂತ ಇಲ್ಲ. ಶರ್ಟಿನ ತುದಿ ಕಂಡರೆ ಸಾಕು….” ಮುದುಕ ಕುಡಿಯುವುದು ಶರಬತ್ತೋ ಎಂಬಂತೆ ಲೊಟ್ಟೆ ಹೊಡೆದ. ಆಕೆಗೆ ಹೇಸಿಗೆಯಾಗತೊಡಗಿತು.
“ಏನು ಹೇಳಲೀ! ನೀವು ನಂಬುಕ್ಕಿಲ್ಲ. ಅಷ್ಟು ಕರೆಯುತ್ತವೆಂದರೆ ಅಷ್ಟು ಕರೆಯುತ್ತವೆ. ಆದರೆ ಬರುವವರು ಯಾರು? ಭೂತ” – ನಕ್ಕ. ಅಬ್ಬಾ! ಪಿಶಾಚಿಗೆ ಮಾತ್ರ ಈ ತರಹದ ನಗೆ ಸಾಧ್ಯವೇನೋ…. ಹಾಡು ಹಗಲಲ್ಲಿ, ಉರಿಬಿಸಿಲಿನಲ್ಲಿ, ಬಿಳೀ ಕಣ್ಣಿನಲ್ಲಿ….
“ಕೆಲವು ಸಲ ನಾನು, ಅಲ್ಲ ನಾನು! ಈ ಮುದುಕ! ಆಚೆಈಚೆ ಹೋಗುವಂತಿಲ್ಲ. ನನ್ನನ್ನೂ ಕರೆಯುವುದೇ ಶ್ಶೆ! ಒಳ್ಳೇ ಗಮ್ಮತ್ತಿನ ಹುಡುಗಿಯರು. ಒಳಗೆ ಕೂಡಿ ಹಾಕಬೇಕು ಎನ್ನುತ್ತೀರೇನೋ. ಆದರೆ ಎಷ್ಟು ದಿನ ಅಂತ? ಎಷ್ಟು ಹೊತ್ತು ಅಂತ? ವಿಚಿತ್ರ ಗೊತ್ತುಂಟಾ? ಗಂಡಸರನ್ನು ಕರೆದೂ ಕರೆದೂ ಯಾರೂ ಬರದೆ ಅವರಷ್ಟಕ್ಕೆ ಮುಂದೆ ಹೋಗುತ್ತಾರಲ್ಲ. ಕಡೆಗೆ ಸೋತು ಹೆಣು ಮಕ್ಕಳನ್ನೂ ಕರೆಯುವುದೇ!…. ಎಲ್ಲಾದರೂ ಕೇಳಿದ್ದುಂಟಾ ನೀವು, ಎಲ್ಲಾದರೂ….” ಆಕೆ ಚಿತ್ಕಾರ ಮರಗಟ್ಟಿ ಕುಳಿತೇ ಇದ್ದಂತೆ ಆತ ನೀರಿನ ಲೋಟ ಕೆಳಗಿಟ್ಟ. “ಅಲ್ಲ, ಎಲ್ಲಾ ಬಿಟ್ಟು ನನ್ನನ್ನು ಕರೆಯುತ್ತವೆಂದರೆ…. ಹ್ಞಾಂ!” ಅದದ್ದನ್ನೇ ಮತ್ತೆ ಮತ್ತೆ ಸುತ್ತಿ ಕತ್ತರಿಸಿ ಹೆಣೇಯುತ್ತಾ ಎದ್ದು ನಿಂತ. “ನಾನಿನ್ನು ಹೊರಡುತ್ತೇನೆ. ನೀವು ಊಟ ಮಾಡಿ,…. ಅವರು ಬಂದ ಕೂಡಲೇ ಹೇಳಿ…. ಅವರ ಗುರ್ತು ನನಗಿದೆ. ಅಂದರೆ ಅವರಿಗೆ ನನ್ನ ಗುರ್ತು ಇರಲಿಕ್ಕಿಲ್ಲ. ಅವರಿಗೂ ನನ್ನ ಗುರ್ತು ಇರಲಿ ಅಂತ ಬಂದೆ….!” ಆಕೆ ಮಾತೇ ಆಡಲಿಲ್ಲ.
ಹೊರಟ ಮುದುಕ. ಮೆಟ್ಟಿಲ ಮೇಲೆ ಚಪ್ಪಲಿ ಸಿಕ್ಕಿಸಿಕೊಳ್ಳುತ್ತಿದ್ದಂತೆ ತನಗೇ ಎಂಬಂತೆ, ಗಟ್ಟಿಯಾಗಿಯೇ ಗೊಣಗುಟ್ಟಿದ. “ಹೋಗಬೇಕಲ್ಲ ಇನ್ನು. ಆ ದೂರ! ಊಟವಾದರೂ ಉಂಟೋ ಇಲ್ಲವೋ…. ಅಥವಾ ಪೌಡರು ಹೊಡೆದು ಕೊಳ್ಳೂತ್ತಾ ಕಿಟಕಿ ಬದಿಯಲ್ಲಿ ರಸ್ತೆ ನೋಡುತ್ತ ನಿಂತಿದ್ದಾವೋ…. ಹಡಬೆಟ್ಟೀಗಳು” ಆದರೂ ಒಳಗಿಂದ ಊಟ ಮಾಡಿ ಹೋಗಿ ಎಂದು ಕೇಳಿ ಬರಲಿಲ್ಲ!
ಸೀಳು ನಾಲಿಗೆ ಚಾಚಿ ಕಬಳಿಸುವಂತಹ ಬಿಳಿ ಬಿಸಿಲು, ಕಪ್ಪಿನ ಒಳಹು ಕೂಡ ಇಲ್ಲದಂತಹ ಬಿಳುಪೇರಿದ ಕೊಡೆಯಡಿ ಆತ ಬಿಳುಪು ಕಣ್ಣುಗಳನ್ನು ಆದಷ್ಟೂ ಬಿಡಿಸಿ ಬಿಡಿಸಿ ದಾರಿ ನೋಡುತ್ತಾ ಮೆಲ್ಲಗೆ ಒಂದೊಂದೇ ಹೆಜ್ಜೆ ಎತ್ತಿ ಇಡುತ್ತಾ ಹೊರಟುಹೋದ.
ಕುರ್ಚಿಯಲ್ಲಿ ಕುಳಿತೇ ಇದ್ದಳು ಅವಳು. ಜ್ವರ ತಲೆಗ ಏರಿದಂತಿತ್ತು. ಕಣ್ಣು ಕತ್ತಲೆ ಕಟ್ಟಿದಂತಾಗುತ್ತಿತ್ತು. ….ಮುಳುಗುತ್ತಿದ್ದ ಹುಡುಗಿಯರು, ಕರೆದು ಕರೆದು ಹೂತುಹೋಗುವ ಬೆರಳಿನ ತುದಿ ಮಾತ್ರ ಕಾಣುವ ಕೈ…. ತೆರೆದುಕೊಂಡರೂ ಕೂಗಲಾರದ ಬಾಯಿಗಳು…. ಕಿಟಕಿ ಸರಳಿನ ಹಿಂದೆ ನಂದುತ್ತಿರುವ ಕಣ್ಣುಗಳು….
ಆಕೆ ಮೆಲ್ಲನೆದ್ದಳು. ಆತ ಕುಳಿತಿದ್ದ ಕುರ್ಚಿಯ ದಿಂಬುಕವರು, ಬೆನ್ನೂರಗನ್ನು ಕಳಚಿ ಎರಡು ಬೆರಳ ತುದಿಯಲ್ಲಿ ಹಿಡಿದು ತೇಲುತ್ತ ಬಚ್ಚಲಿಗೆ ನಡೆದಳು. ಒಂದು ಬಾಲ್ದಿ ನೀರಿನೊಳಗೆ ಅವನ್ನು ಬಿಸುಟು ನಡುಗುವ ಕಾಲಿನಿಂದಲೇ ದಢಾರನೇ ಬಾಲ್ದಿಯನ್ನು ಮೂಲೆಗೆ ತಳ್ಳಿ ಬಾಗಿಲು ಹಿಡಿದು ನಿರ್ವಿಣ್ಣ ನಿಂತಳು.
ಗಡಿಯಾರ ದೊಡ್ಡದಾಗಿ ಗಂಟೆ ಎರಡಾಯಿತೆಂದು ಹೊಡೆದು ಹೇಳಿದರೂ ಕೇಳದವಳಂತೆ.
*****
