ಪ್ರಣಯ-ಪ್ರೀತಿ

ಹಚ್ಚ ಹಸುರಿನ ಹೊರೆಯ ಹೊಚ್ಚ ಹೊಸ ಪ್ರಾಯ. ನಗೆ
ತುಂಬಿ ತುಟಿಬಿಗಿದ ಚೆಂಗುಲಾಬಿಯ ಮೊಗ್ಗೆ. ನರ
ನರಗಳಲ್ಲಿ ಹುಚ್ಚೆದ್ದು ಪುಟಿವ ಬಿಸಿನೆತ್ತರ
ಬುಗ್ಗೆ. ನೂರು ಮದ್ದಾನೆಗಳು ಇರುಳ ಬಾನಿಗೆ
ನುಗ್ಗಿ ಢಿಕ್ಕಿಯಾಡಿವೆ. ಗಾಢಾಂಧಕಾರದೆದೆ
ಬೆದೆಗೊಂಡ ಬೆಳ್ಳಕ್ಕಿ-ಮಿಂಚು, ಮಳೆಯ ಬರಸೆಳೆದು
ಗಟಗಟ ಕುಡಿದು, ಕೊಳ್ಳದಲಿ ಧುಮ್ಮಿಕ್ಕಿ ಹರಿದು
ಜುಮ್ಮುದಟ್ಟಿಸಿತು ಹೊಳೆ. ಮೂಲೋಕ ಮೂಕವಿದೆ.
ಬಿಸಿಲು ಚಳಚಳ ಕಾದು ನಲಕ ಅರಿಕೆಯಾಗಿ
ಮುಳ್ಳು ಬೇಲಿಯ ಹೂವ ತುಂಬುಗೆಣ್ಣೊಳು ಪ್ರೀತಿ-
ಪಣತಿ. ಎಣ್ಣೆಯಲಿ ಬೇರಿಳಿದ ಬತ್ತಿ, -ಸಮರತಿ.
ಗಾಳಿಗೆದೆಯೊಡ್ಡಿಹುದು ಸೊಡರು-ಕುಡಿ ಹಾಯಾಗಿ.
ಕತ್ತಲೆಯ ಗರ್‍ಭದಲಿ ಬಿದ್ದ ಬೆಳಕಿನ ಬೀಜ
ಬೆಳೆದು ಬ್ರಹ್ಮಾಂಡವನೆ ತಬ್ಬಿಕೊಂಡಿತು ಸಹಜ.
*****