ಮನೆಯ ಮೆಟ್ಟಿಲು ತುಳಿಯುತ್ತಿದ್ದಂತೆಯೇ `ಅಜ್ಜಿ ಇದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ ಅವರ ಮಗಳು ವಾಸಂತಿ ಎದ್ದ ರಭಸ, ಏಳುವಾಗ ಸೀರೆ ಕಾಲಿಗೆ ತೊಡರಿ ಮುಗ್ಗರಿಸಿದ್ದು, ಅವಳ ಕಣ್ಣಂಚಿನಲಿ ತಟ್ಟನೆ ತುಂಬಿ ನಿಂತ ಹನಿ – ಎಲ್ಲವೂ ಸರಿಯಾಗಿಲ್ಲ ಅಂತ ಅನಿಸಿಬಿಟ್ಟಿತು. ವಾಸಂತಿಯ ಗಂಡ “ಪ್ರಶಾಂತನಲ್ಲವೇ? ನನಗೆ ಅಷ್ಟು ದೂರದಲ್ಲಿರುವಾಗಲೇ ಗುರುತು ಹತ್ತಿತ್ತು…. ಬಾ ಬಾ ಒಳಗೆ….” ಅನ್ನುತ್ತ ಮಡಚಿಟ್ಟ ಕುರ್ಚಿ ಬಿಚ್ಚತೊಡಗಿದ. ನನ್ನ ಜೊತೆ ವೀಣಾ ಇದ್ದಳು. ಆ ಸಣ್ಣ ಕೋಣೆ, ಆ ವಾತಾವರಣದಲ್ಲಿ ಹೇಗೆ ಇಳಗೊಳ್ಳಬೇಕೋ ತಿಳಿಯದೇ, ಚಪ್ಪಲಿ ಹೊರಗೆ ಕಳಚಿಡಲೋ ಬೇಡವೋ ಎಂಬ ಅನುಮಾನದಲ್ಲಿ ತೊಳಲಿ ಕೊನೆಗೆ ಹಾಗೇ ಬಂದು ಕೂತಳು. “ಅಮ್ಮ ಹೋಗಿ ಒಂದೂವರೆ ವರ್ಷವಾಯಿತು…. ಅದಾದ ಆರು ತಿಂಗಳೊಳಗೇ ಅಪ್ಪ ಕೂಡ ತೀರಿಕೊಂಡರು….” ಎಂದು ಹೇಳುವಾಗ ವಾಸಂತಿ ತುಂಬ ನಿರ್ಲಿಪ್ತತೆಯಿಂದ ಮಾತಾಡಿದಳು. ಅಜ್ಜಿಯ ಬಗ್ಗೆ ಉತ್ಸಾಹದಿಂದ ವೀಣಾಗೆ ಹೇಳಿ, ಬಹಳ ಹಿಂದೆ ಮೈಸೂರಿನಲ್ಲಿದ್ದಾಗ ಅಜ್ಜಿಯ ಮನೆಯ ಕೋಣೆಯೊಂದರಲ್ಲಿ ಬಾಡಿಗೆಗಿದ್ದ ದಿನಗಳ ಬಗ್ಗೆ ರಂಗುರಂಗಾಗಿ ವರ್ಣಿಸಿ, ಬಾ ತೋರಿಸುತ್ತೇನೆ ನಾನೊಮ್ಮೆ ಹಾದುಹೋದ ಜಗತ್ತು ಅಂತ ಕರಕೊಂಡು ಬಂದವನಿಗೆ ಈ ಸಾವಿನ ಸುದ್ದಿಯನ್ನು ಹೇಗೆ ಗ್ರಹಿಸಬೇಕೋ ತಿಳಿಯಲಿಲ್ಲ. ಮಾತು ಬಾರದೇ ಕೂತೆ. ಕೋಣೆಯ ಒಂದು ಬದಿಯಲ್ಲಿ ಚಾಪೆಯ ಮೇಲೆ ಮಗುವೊಂದು ಮಲಗಿತ್ತು. ವಾಸಂತಿಯ ಎರಡನೇ ಮಗುವಿರಬಹುದು. ನಾವು ಬಂದಾಗ ಇಡೀ ಸಂಸಾರ – ವಾಸಂತಿ, ಅವಳ ಗಂಡ, ಅವರ ದೊಡ್ಡ ಮಗಳು – ಬೀಡಿಯ ಕಟ್ಟು ಕಟ್ಟುವುದರಲ್ಲಿ ನಿರತವಾಗಿತ್ತು. ನಾವು ಬಂದದ್ದೇ ವಾಸಂತಿಯ ಗಂಡ ಲಗುಬಗೆಯಿಂದ ಕೋಣೆಯನ್ನು ಓರಣವಾಗಿಡುವುದರಲ್ಲಿ ತೊಡಗಿದ್ದ. ಇನ್ನೂ ಪಳಗದ ಪುಟ್ಟ ಬೆರಳುಗಳಿಂದ ಲೇಬಲ್ ಅಂಟಿಸುತ್ತ ಕೂತ ಮಗಳು ನಮ್ಮನ್ನೇ ನೋಡುತ್ತಿದ್ದಳು….
ವಾಸಂತಿ ಏನೋ ಹೇಳಲು ಹೊರಟು “ಅಮ್ಮನಿಗೆ….” ಅಂತ ಸುರುಮಾಡಿದ್ದು, ನಾನು “ಇದು ಹೇಗಾಯಿತು?….” ಎಂದು ಕೇಳಿದ್ದು ಒಟ್ಟಿಗೇ ಆಯಿತು. ಅವಳು ಮಾತಾಡಲಿ ಅಂತ ನಾನು, ನಾನು ಮಾತಾಡಲಿ ಅಂತ ಅವಳು ಕಾದು ಮತ್ತೆ ಒಟ್ಟಿಗೆ ಸುರುಮಾಡಿ ಸುಮ್ಮನಾದೆವು. ನಂತರ ಅವಳೇ ಮುಂದುವರಿಸಿದಳು. “ಮಂಗಳೂರಿಗೆ ಹೋಗಿದ್ದಾಗ ಆದದ್ದು…. ಎದೆ ನೋಯುತ್ತದೆಂದು ಆಸ್ಪತ್ರೆಗೆ ಸೇರಿಸಿದೆವು. ಅವತ್ತೇ ಹೋಗಿಬಿಟ್ಟರು. ಒಂದು ಸಂಕಟವಿಲ್ಲ, ಒಂದು ನರಳಾಟವಿಲ್ಲ. ಸಾಯುವಾಗಲೂ ಯಾರಿಗೂ ಭಾರವಾಗಲಿಲ್ಲ….” ವಾಸಂತಿಯ ದನಿ ಗದ್ಗತವದಂತೆನಿಸಿತು. ಎಲ್ಲರೂ ಕ್ಷಣಕಾಲ ಮೌನದಲ್ಲಿ ಕೂತೆವು – ಅಜ್ಜಿಯ ಆತ್ಮಕ್ಕೆ ಶಾಂತಿ ಕೋರುವಂತೆ. ಕುಡಿಯಲು ನೀರು ಕೇಳಿದೆ “ಹಾಲು ತರುತ್ತೇನೆ” ಅಂತ ಎಷ್ಟು ಬೇಡವೆಂದರೂ ಕೇಳದೆ ವಾಸಂತಿ ಒಳಹೋದಳು.
ಅಜ್ಜಿ ಅಂದರೆ – ಅವರನ್ನು ನಾವು ಕರೆಯುತ್ತಿದ್ದದ್ದು ಹಾಗೆ. ನಾನು ಮೈಸೂರಿನಲ್ಲಿದ್ದಾಗಿನ ಮೊದಲ ಒಂದು ವರ್ಷ ಅವರ ಮನೆಯ ಹೊರಕೋಣೆಯೊಂದರಲ್ಲಿ ಬಾಡಿಗೆಗಿದ್ದೆ. ಬಾಡಿಗೆ ಮನೆಯದೇ ಒಂದು ಕೋಣೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಅದರ ಸಣ್ಣ ಮನೆಯ ಒಳ್ಳೆಯ ಕೋಣೆಯೆಂದರೆ ನಾನು ಇದ್ದದ್ದೇ. ನನಗಿಂತ ಮುಂಚೆ ಅಲ್ಲಿ ಚಿತ್ರಕಲಾ ಶಾಲೆಯ ಒಬ್ಬನಿದ್ದನಂತೆ. ಗೋಡೆಗಳ ತುಂಬ ದುಂಡಗಿನ ಅಕ್ಷರಗಳಲ್ಲಿ ಬರೆದ ಆಣಿಮುತ್ತುಗಳು: “ಕಾಯಕವೇ ಕೈಲಾಸ” “ಕಷ್ಟಗಳು ಜ್ಞಾನದೀಪಗಳು” ಇತ್ಯಾದಿ ಇತ್ಯಾದಿ. ಬೇರೆ ರೂಮು ಸಿಗುವ ತನಕ ಅಂತ ಇದ್ದದ್ದು ವರ್ಷದ ಮೇಲೇ ಆಯಿತು. ಅಜ್ಜಿಯ ಗಂಡ ಹತ್ತಿರದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಅವರನ್ನು ಕರೆಯುತ್ತಿದ್ದದ್ದು ಮಾಮಾ ಅಂತ. ಅವರ ಹೆಸರು ಗಣೇಶರಾವ್. ಒಮ್ಮೆ ನನ್ನ ರೂಮಿನ ಕೀ ಅವರಲ್ಲಿ ಬಿಟ್ಟುಹೋಗಿದ್ದಾಗ ಅದನ್ನು ಇಸಕೊಳ್ಳಲಿಕ್ಕೆ ಅಂತ ಆ ಹೊಟೆಲಿಗೆ ಹೋಗಿದ್ದೆ. “ಗಣೇಶರಾವ್ ಬೇಕಿತ್ತು” ಎಂಬ ನನ್ನ ಮಾತಿಗೆ ಗಲ್ಲದ ಮೇಲೆ ಕೂರು ಎರಡೂ ಕೈಗಳಿಂದ ದುಡ್ಡೆಣಿಸುತ್ತಿದ್ದ ಚಸ್ಮಾದ ಮುದುಕ ಉತ್ತರಿಸದೇ ಮಾಣಿಯೊಬ್ಬನನ್ನು ಕರೆದು “ದೋಸೆ ಭಟ್ಟರನ್ನು ಕರೆಯೋ….” ಅಂದದ್ದು ಗಣೇಶರಾವ್ ಬಗೆಗೆ ಒಳಗೊಳಗೇ ಅನುಕಂಪ ಹುಟ್ಟುವಂತೆ ಮಾಡಿತು. ಎಪ್ಪತ್ತರ ವಯಸ್ಸಲ್ಲೂ ದಿನವಿಡೀ ಹೊಟೆಲಿನ ಹೊಗೆಯಾಡುವ ಅಡಿಗೆ ಮನೆಯಲ್ಲಿ ದೋಸೆ ಹುಯ್ಯಬೇಕಿತ್ತು. ಬೆಳಿಗ್ಗೆ ಆರು ಗಂಟೆಗೇ ಕೆಲಸ ಸುರು. ನಿದ್ದೆಯೆಂದರೆ ಮಹಾ ಪ್ರೀತಿಯದಾಗಿದ್ದ ಮಾಮಾ ಅದು ಹೇಗೆ ಅಷ್ಟು ಬೆಳಿಗ್ಗೆ ಎದ್ದು ಹೊರಡುತ್ತಿದ್ದರೋ!
ಅಜ್ಜಿಯದಂತೂ ಇಡೀ ದಿನ ಬೀಡಿ ಕಟ್ಟು ಕಟ್ಟುವ ಕೆಲಸ. ಅಂದರೆ ಬೀಡಿಯ ಕಟ್ಟುಗಳಿಗೆ ಪೇಪರ್ ಸುತ್ತಿ ಲೇಬಲ್ ಅಂಟಿಸಿ ದೊಡ್ಡ ಪ್ಯಾಕೆಟ್‌ಗಳಲ್ಲಿ ತುಂಬುವುದು. ದಿನಕ್ಕೆ ಹತ್ತು ಗಂಟೆ ಕೆಲಸ ಮಾಡಿದರೆ ಹನ್ನೆರಡು ರೂಪಾಯಿ ಸಿಗುವುದು. ವರ್ಷ ವರ್ಷವೂ ಬೋನಸ್ ಕೊಡುತ್ತಾರೆ ಅನ್ನುವುದು ಅವರು ಹೆಮ್ಮೆಯಿಂದ ಹೇಳುವ ಸಂಗತಿ. ಅರವತ್ತು ದಾಟಿದ ವಯಸ್ಸು ಅವರಿಗೆ. ಡಯಾಬಿಟಿಸ್ ಇದೆಯಂತ ಸಕ್ಕರೆ ಹಾಕದ ಕಾಪಿ ಕುಡಿಯುವರು. ಎಷ್ಟೋ ವರ್ಷಗಳ ಹಿಂದೆ ಡಾಕ್ಟರು ಬರೆದುಕೊಟ್ಟ ಮುದುಡಿಹೋದ ಅದೇ ಹಳೆ ಕಾಗದವನ್ನೇ ತೋರಿಸಿ ಗುಳಿಗೆ ತಂದು ನುಂಗುವರು. ನಾವು ಸಿಹಿಜನ, ನಮಗೇಕೆ ಸಕ್ಕರೆ ಅನ್ನುವುದು ಅವರ ಎಂದಿನ ಹಾಸ್ಯದ ಮಾತಾಗಿತ್ತು. ಈ ಯಾವುದರ ರಗಳೆಯೂ ಇಲ್ಲದೇ ಹಬ್ಬ ಬಂತೆಂದರೆ ಸಿಹಿಗಳಿಗಾಗಿ ಹೆಂಡತಿಯನ್ನು ಪೀಡಿಸಿ, ಮಾಡಿಸಿ ತಿನ್ನುವ ರವಿವಾರಗಳಂದು ತಪ್ಪದೇ ಕನ್ನಡ ಸಿನಿಮಾಗಳಿಗೆ ಹೊರಡುವ ಮಾಮಾ ಎಂಥ ಸಂದರ್ಭದಲ್ಲೂ ಮುಗುಳುನಗೆ ಉಳಿಸಿಕೊಳ್ಳಬಲ್ಲವರಾಗಿದ್ದರು. ಮಗುವಿನಹಾಗೆ ಯಾವಾಗಂದರಾವಾಗ ಮಲಗಿ ನಿದ್ದೆ ಹೋಗ ಬಲ್ಲವರು. ಮಧ್ಯಾಹ್ನ ಒಂದರಿಂದ ನಾಲ್ಕರವರೆಗಿನ ಬಿಡುವಿನಲ್ಲಿ ಅವರು ತನಗೆ ಬೀಡಿ ಕಟ್ಟಲು ಸಹಾಯ ಮಾಡಬೇಕೆಂಬುದು ಅಜ್ಜಿಯ ಅಂಬೋಣವಾಗಿತ್ತು. ಆ ಸಮಯ ನಿದ್ದೆ ಮಾಡಲು ಇರುವ ಹಕ್ಕಿನ ವೇಳೆ ಎಂದು ಮಾಮಾ ಭಾವಿಸಿದ್ದು ಅವರ ನಡುವೆ ಈ ಕುರಿತು ಮಾತುಗಳ ಹಣಾಹಣಿಯಾಗುವಂತೆ ಮಾಡುತ್ತಿತ್ತು….
ವಾಸಂತಿ ಬಿಸಿ ಹಾಲು ತಂದಿಟ್ಟಳು. ಜೊತೆಗೆ ಚಕ್ಕುಲಿ,ಅವಲಕ್ಕಿ ಉಂಡೆ – “ಅಕ್ಕ ಬಂದಿದ್ದಳು ಹಿಂದಿನ ವಾರ…. ನಮ್ಮ ಸಂಗೀತಾಳಿಗೆ ಬಹಳ ಇಷ್ಟ ಅಂತ ಅವಳು ತಂದ ಉಂಡೆ” ಎಂಬ ವಿವರಣೆಯೊಡನೆ. ವೀಣಾ ಪೋಟೋಗಳು ತುಂಬಿದ್ದ ಗೋಡೆ ನೋಡುತ್ತ ಕೂತಿದ್ದಳು. ಬಣ್ಣ ಮಾಸಿ ಅಲ್ಲಲ್ಲಿ ಗಿಲಾಯಿ ಕಳಚಿ ಬಿದ್ದಿತ್ತು. ಅಜ್ಜಿಯ ಮೂವರೂ ಮಗಳಂದಿರ ಮದುವೆಯ ಹೊತ್ತಿಗೆ ತೆಗೆದ ಜೋಡಿಯ ಪೋಟೋಗಳು. ಮಗನ ಮುಂಜಿಗೆ ಮೊಮ್ಮಗಳ ತಲೆ ಚವರಕ್ಕೆ ಹೀಗೆ ವಿವಿಧ ಸಂದರ್ಭಗಳಲ್ಲಿ ತೆಗೆದ ಗ್ರೂಪ್ ಪೋಟೋಗಳು. ಎಂ. ಜೆ. ಆರ್ ಥರದ ಕಪ್ಪು ಕನ್ನಡಕ ಧರಿಸಿ ಹ್ಯಾಟ್‌ತೊಟ್ಟು ನಿಂತ ಅಜ್ಜಿಯ ಮಗನ ದೊಡ್ಡ ಪೋಟೋ. ಹೀಗೆ ಗ್ಲಾಸುಗಳ ಹಿಂದೆ, ಚೌಕಟ್ಟಿನ ಒಳಗೆ ಕಟ್ಟಿಹಾಕಿದ ನೆನಪುಗಳು ಅಲ್ಲಲ್ಲೇ ಮಾಸುತ್ತಿದ್ದವು. ನಡುವೆ ಹಳೆಯ ದೊಡ್ಡ ಗಡಿಯಾರ -ರೋಮನ್ ಅಂಕೆಗಳದ್ದು. ಕಾಲವಮ್ಮು ಅಳೆಯುತ್ತ ನಿರಂತರ ತುಯ್ಯುವ ಅದರ ದೊಡ್ಡ ಪೆಂಡುಲಂ. ಎಲ್ಲಕ್ಕೂ ಎತ್ತರದಲ್ಲಿ ಮೇಲೆ ಅರ್ವತ್ತೈದನೇ ಇಸವಿಯ ಶ್ರೀ ವೆಂಕಟೇಶ್ವರ ದೇವರ ಕ್ಯಾಲೆಂಡರ್. ಅದೇ ಗೋಡೆಗೆ ಈಚೆ ಬದಿಯಲ್ಲಿ ತೂಗು ಹಾಕಿದ ಕನ್ನಡಿಯ ಪುಟ್ಟ ಸ್ಟ್ಯಾಂಡ್. ಅದರ ಮೇಲೊಂದು ಕುಂಕುಮದ ಭರಣಿ.
“ತಗೊಳ್ಳಿ ತಗೊಳ್ಳಿ” ಎಂದು ವಾಸಂತಿ ಉಪಚಾರ ಮಾಡಿದಳು. ವೀಣಾಳನ್ನು ಸ್ನೇಹಿತೆ ಎಂದು ಪರಿಚಯ ಮಾಡಿಕೊಟ್ಟೆ. ಹಾಂ ಅಂತ ಅವಳು ನಮ್ಮಿಬ್ಬರನ್ನು ಒಟ್ಟಿಗೇ ನೋಡುತ್ತ ನಿಂತ ರೀತಿಗೆ ವೀಣಾ ನಾಚಿ ಕೆಂಪಾದಳು. ಮುಜುಗರಪಡುತ್ತ ಚಕ್ಕುಲಿ ಮುರಿದು ತಿಂದಳು. “ಅಜ್ಜಿಯ ಪೋಟೋ ತೋರಿಸುತ್ತೇನೆ” ಅಂತ ಎದ್ದು ಗೋಡೆಯ ಮೇಲಿನ ಒಂದು ಪೋಟೋ ಎತ್ತಿಕೊಂಡೆ. ಮಕ್ಕಳು ಮೊಮ್ಮಕ್ಕಳು ಸ್ಮೇತ ಅಜ್ಜಿ ಮಾಮ ನಿಂತು ತೆಗೆಸಿದ್ದು. ಪ್ರತಿಯೊಬ್ಬರನ್ನು ಬೆರಳು ಮಾಡಿ ತೋರಿಸಿ ಗುರುತು ಹೇಳಿದೆ. ವಾಸಂತಿ ಭಾವುಕಳಾಗಿ ನಿಂತಿದ್ದಳು. “ಕಿರಿ ತಂಗಿಯ ಮದುವೆಯ ಹೊತ್ತಿಗೆ ತೆಗೆಸಿದ್ದು” ಅಂದಳು. ಅಜ್ಜಿಯ ಮಗನೊಬ್ಬ ಆ ಗುಂಪಿನಲ್ಲಿ ಇರಲಿಲ್ಲ.
ಅಜ್ಜಿಹೇಗೆ ಅವನ ಹಾದಿ ಕಾಯುತ್ತಿದ್ದಳೆಂಬುದನ್ನು ನಾನು ಕಂಡಿದ್ದೇನೆ. ಹೆತ್ತ ಕರುಳಿನ ಸಂಕಟವೆಂದರೇನೆಂಬುದನ್ನು ನೋಡಿದ್ದು ಆಗ. ಆತ ಉಡಾಳನಾಗಿ ಬೆಳೆದವನು. ಅಕ್ಕಂದಿರು, ತಂಗಿ ಎಲ್ಲರೂ ಚೆನ್ನಾಗಿ ಓದಿ ಒಳ್ಳೆಯ ಅಂಕ ಗಳಿಸುತ್ತಿದ್ದಾಗ ಈತ ಪೇಲಾಗುತ್ತ ಬಿದ್ದಿದ್ದ. ಮೆಟ್ರಿಕ್ ಹೇಗೋ ಮುಗಿಸಿ ನಂತರ ಡ್ರೈವರಾಗಿ ಎರದು ವರ್ಷ ಕೆಲಸ ಮಾಡಿದನಂತೆ. ತರುವಾಯ ಮಿಲಿಟರಿ ಸೇರಿದ. ನಾಲ್ಕು ವರ್ಷ ಸರಿಯಾಗಿಯೇ ಇತ್ತು. ಅಂತೂ ಮಗ ಹಾದಿಗೆ ಹತ್ತಿದ ಅಂತ ಖುಶಿಪಟ್ಟರು. ವರ್ಷ ವರ್ಷವೂ ರಜೆ ಪಡೆದು ಊರಿಗೆ ಬರುತ್ತಿದ್ದ. ತವರಿಗೆ ಬಂದ ಅಕ್ಕಂದಿರನ್ನು ಅವರ ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ. ಅವನ ಆ ಭಾರೀ ಟ್ರಂಕು, ಬೂಟುಗಳು, ಅವನ ಸೈನ್ಯದ ಕತೆಗಳು ಮಕ್ಕಳಿಗೆ ತುಂಬ ಖುಶಿಕೊಡುತ್ತಿದ್ದವು. “ನೀನು ಈ ಬೀಡಿಯ ಕೆಲಸವನ್ನು ಬಿಟ್ಟುಬಿಡು” ಅಂತ ಅಮ್ಮನಿಗೆ ಹೇಳಿದ್ದನಂತೆ. “ಕೈ ಕಾಲು ಗಟ್ಟಿಯಾಗಿರುವವರೆಗೂ ದುಡಿಯುತ್ತೇನೋ… ಆಮೇಲೆ ಕೂತು ಸೇವೆ ಮಾಡಿಸಿಕೊಳ್ಳುವುದು ಇದ್ದೇ ಇದೆಯಲ್ಲ… ಆ ದಿನವೊಂದು ಬಾರದಿರಲಿ ದೇವರೇ… ಎಂಥ ಐಶ್ವರ್ಯ ಕೊಟ್ಟರೂ ಬೇಡ ಅದು…” ಎಂದು ಅಜ್ಜಿ ಹೇಳಿದ್ದರಂತೆ. ಅಮ್ಮ ಅಂದರೆ ಹೆಚ್ಚು ಪ್ರೀತಿಯಂತೆ. ಪ್ರತಿ ಬಾರಿ ಬಂದಾಗಲೂ ಅಮ್ಮ ಅಕ್ಕಂದಿರಿಗೆ, ತಂಗಿಗೆ ಒಳ್ಳೆಯ ಸೀರೆ ಕೊಡಿಸುತ್ತಿದ್ದನಂತೆ. ಆದರೆ ಯಾರ ಕಣ್ಣು ಬಿತ್ತೋ ಎಂದು ಯಾವಾಗಲೂ ಅಜ್ಜಿ ಹೇಳುವ ಹಾಗೆ ಒಮ್ಮೆಲೇ ಏಕಾಏಕಿ ಎಲ್ಲ ನಿಂತು ಬಿಟ್ಟಿತು. ಒಂದು ಪತ್ರವಿಲ್ಲ. ಒಂದು ಸುದ್ದಿಯಿಲ್ಲ. ಅಕ್ಕನ ಮಗನ ಮುಂಜಿಗೆ ಬರುತ್ತೇನೆ ಅಂತ ಬರೆದ ಪತ್ರವೇ ಕೊನೆಯದು. ತಾರುಕೊಟ್ಟರು. ಪತ್ರ ಬರೆದರು. ಉತ್ತರವಿಲ್ಲ. ಈ ನಡುವೆ ಅಜ್ಜಿಯ ದೂರದ ಸಂಭಂದದವರೊಬ್ಬರಿಗೆ ಅವನ ಸ್ನೇಹಿತ ಭೆಟ್ಟಿಯಾದನಂತೆ, ಆತ ಆರಾಮಿದ್ದಾನೆ ಕಾಳಜಿ ಮಾಡಬೇಡಿರಿ ಎಂದು ಹೇಳಿದನಂತೆ ಎಂಬ ಸುದ್ದಿ ಹರಡಿತು. ಏನಾಯಿತೋ ಏನೊ ಎಂದು ಹಗಲು ರಾತ್ರಿ ಕಾಳಜಿ ಮಾಡುತ್ತಿದ್ದವರು ಈ ತುಣುಕು ಸುದ್ದಿಗೆ ಜೋತು ಬಿದ್ದು “ಎಲ್ಲಾದರೂ ಆರಾಮಿದ್ದಾನಲ್ಲ ಅಷ್ಟೇ ಸಾಕು” ಅಂತ ಸಮಾದಾನಪಡಿಸಿಕೊಳ್ಳಲು ನೋಡಿದರು. ವರ್ಷ ಕಖೆಯಿತು. ಬರುತ್ತಾನೆ ಅಂತ ಕಾದರು. ಮತ್ತೆ ಪತ್ರ ಬರೆದರು. ಅಮ್ಮನಿಗೆ ಸೀರಿಯಸ್ ಅಂತ ತಂತಿ ಕಳಿಸಿದರು. ಬರಲಿಲ್ಲ. “ಮಿಲಿಟರಿಯವರು ತೀರಿಕೊಂಡರೆ ಅವರ ಡ್ರೆಸ್ ಮನೆಗೆ ಕಳಿಸುತ್ತಾರಂತೆ. ನಿಮ್ಮ ಮಗನಿಗೇನೂ ಆಗಿಲ್ಲ ಹೆದರಬೇಡಿ ಎಲ್ಲೋ ಸುಖವಾಗಿದ್ದಾನೆ ಚಿಂತಿಸಬೇಡಿ…” ಎಂದು ಅಜ್ಜಿಯ ಪರಿಚಯದ ಹೆಂಗಸೊಬ್ಬಳು ಹೇಳಿದಾಗಿನಿಂದ ಅದನ್ನೇ ಹಿಡಿದು ಕೂತರು. ಮಗನ ನೆನಪಾದಾಗ ಬಿಮ್ಮಗೆ ಕೂತು ಎಷ್ಟೊಂದು ಸಂಜೆಗಳನ್ನು ದುಗುಡದಲ್ಲಿ ಕಳೆದದ್ದಿದೆ. ಈ ಬೀಡಿಯ ಕೆಲಸವೊಂದಿಲ್ಲದಿದ್ದರೆ ಏನಾಗುತ್ತಿತ್ತೋ. ಬೆಳಿಗ್ಗೆ ಹತ್ತಕ್ಕೆ ಸುರುವಾದರೆ ರಾತ್ರಿ ಹತ್ತರವರೆಗೂ ಕೆಲಸ. ದೊಡ್ಡ ಪೆಟ್ಟಿಗೆಯ ತುಂಬ ಬೀಡಿಯ ಕಟ್ಟುಗಳು. ಲೇಬಲ್‌ಗಳು, ಗೋಂದು ಇತ್ಯಾದಿ ವ್ಯಾನಿನಲ್ಲಿ ತುಂಬಿ ತಂದು ಮನೆ ಬಾಗಿಲಲ್ಲಿ ಇಳಿಸಿ ಎಲ್ಲವನ್ನೂ ಎಣಿಸಿಕೊಟ್ಟು ಹಿಂದಿನ ದಿನದ್ದನ್ನು ಮರಳಿ ಪಡೆದು ಹೋಗುವರು. ಒಮ್ಮೆಯೂ ತಮ್ಮಿಂದ ಚೂರೂ ಹೈಗೈ ಆಗಿಲ್ಲ ಎಂದು ಹೆಮ್ಮೆಯಿಂದ ಹೇಳುವರು. ಆ ಬೀಡಿ ಕಂಪನಿಯ ಬಗ್ಗೆ ಭಾವುಕವಾಅಗಿ ಮಾತಾಡುವರು. ಈ ಕೆಲಸದಿಂದಾಗಿಯೇ ಮಕ್ಕಳಿಗೆ ಎರಡಕ್ಶರ ಕಲಿಸಲು ಕೈಯಲ್ಲಿಷ್ಟು ದುಡ್ಡು ಬಂತು, ಜೊತೆಗೆ ತನ್ನನ್ನು ಒಂಟಿತನದಿಂದ ತಪ್ಪಿಸಿತು ಅನ್ನುವರು. ಭಾನುವಾರಗಳಂದು, ರಜಾದಿನಗಳಂದು, ಕೆಲಸ ಕಡಿಮೆ ಇರುವ ದಿನಗಳಲ್ಲಿ ಹೇಗೆ ಕಾಲಹರಣ ಮಾಡಬೇಕೋ ತಿಳಿಯದೇ ಸುಮ್ಮನೆ ಸೂರು ನೋಡುತ್ತ ಮಲಗುವರು. ವರ್ಷಗಳ ನಂತರವೂ ಮಗನ ಬರುವಿಗೆ, ಪತ್ರಕ್ಕೆ ಕಾಯುವರು. ಆತ ಬೇರೆ ಜಾತಿಯವಳನ್ನು ಮದುವೆಯಾದ ಕಾರಣಕ್ಕೇನಾದರು ನಮ್ಮಿಂದ ದೂರ ಹೋದನೇ ಎಂದು ಯೋಚಿಸುವರು. ನಮಗೇನೂ ಅಭ್ಯಂತರವಿರಲಿಲ್ಲ ಅಂತ ಅವನಿಗೆ ಈಗ ತಿಳಿಸುವುದು ಹೇಗೆ? ಅವನನ್ನು ಬಿಟ್ಟು ಇರುವುದಕ್ಕಿಂತ ಅವಳು ಯಾವ ಜಾತಿಯವಳೇ ಆಗಿರಲಿ ಅವಳನ್ನು ಸೊಸೆ ಅಂತ ಸ್ವೀಕರಿಸುವುದು ಕಷ್ಟವಾದದ್ದಲ್ಲವಲ್ಲ ಎಂಬುದನ್ನು ಮಗಳ ಎದುರಿಗೆ ಆಡಿಯೂ ತೋರಿಸಿದರು. ಅವರ ತರ್ಕ ಅವನು ಬದುಕಿರುವನೇ ಎಂಬ ಪ್ರಶ್ನೆಯತ್ತ ಹೊರಳುತ್ತಿರುವಂತೆ ಕಂಗೆಟ್ಟು ಕೂರುವರು. ಅದು ಮತ್ತೆ ಮನಸ್ಸಿನಲ್ಲಿ ಹೊಕ್ಕದ ಹಾಗೆ ಸಮಾಧಾನಕ್ಕೆ ಕಾರಣಗಳನ್ನು ಹುಡುಕುವರು….
“ಅವರ ಮಗನು ಫೋಟೋ ಯಾವುದು?” ಅಂದಳು ವೀಣಾ. ಬರುವ ಮುಂಚೆ ಅವನ ಬಗ್ಗೆ ಹೇಳಿದ್ದಕ್ಕೆ ಛೆ ಛೆ ಸುರುಮಾಡಿದ್ದಳು. ಆ ಎಂ.ಜಿ.ಆರ್. ಥರದ ಫೋಟೋ ಬಿಟ್ಟರೆ ಬೇರೆ ಯಾವುದೂ ಇರಲಿಲ್ಲ. ಅದನ್ನೇ ತೋರಿಸಿದೆ. ಅವರ ಬದುಕಿಗೆ ನೋವು ಕೊಡುವ ಒಳತಂತುಗಳನ್ನು ನಮ್ಮ ಕುತೂಹಲಕ್ಕಾಗಿ ಮೀಟುತ್ತಿದ್ದೇವೆಯೇ ಅನಿಸಿತು. ನಾನು ವೀಣಾಳ ಜೊತೆ ಮಾತಾಡುತ್ತ ಫೋಟೋ ತೋರಿಸುತ್ತ ಬೇರೆ ಜಗತ್ತಿಗೆ ಸರಿದುದನ್ನು ಅರಿತವಳಂತೆ ವಾಸಂತಿ, ಅವಳ ಗಂಡ ಮಾತಾಡದೇ ನಿಂತಿದ್ದರು.
ವೀಣಾ ಇದನ್ನೆಲ್ಲ ಹೇಗೆ ತೆಗೆದುಕೊಳ್ಳುತ್ತಾಳೋ ಎಂದು ಆತಂಕವಾಯಿತು -ಅದೂ ನಮ್ಮ ನಡುವಿನ ಸಂಭದದ ಬಗ್ಗೆ ನಿರ್ಧರಿಸುವ ದಿನ ಹತ್ತಿರವಾಗುತ್ತಿದ್ದಂತೆ ಒತ್ತಡದಲ್ಲಿ ಇಬ್ಬರೂ ತೊಳಲುತ್ತಿರುವ ಗಳಿಗೆಗಳಲ್ಲಿ. ಅವಳಿಂಥದ್ದನ್ನು ಕಂಡಿರಲಿಕ್ಕಿಲ್ಲ. ಯೂನಿಫಾರ್ಮ ತೊಟ್ಟು, ಶೂ ಧ್ರಿಸಿ, ಡಿಂಗ್ ಡಾಂಗ್ ಬೆಲ್ ಹಾಡಿ. ಬ್ರೆಡ್ಡುತಿಂದು ಕಾನ್ವೆಂಟ್ ಕಲಿತ ಹುಡುಗಿ. ನನ್ನ ಹಾಗೆ ಚಂಡೆಯ ಸದ್ದಿನ ಮುಂಜಾವಿನ, ಹಸಿರು ಚಿಮ್ಮುವ ಪಾಗಾರಗಳ, ಮಳೆ ನೀರು ಉಕ್ಕುವ ತೋಡುಗಳಲ್ಲಿ ಕಾಗದದ ದೋಣಿ ತೇಲಿತೋ ಮುಳುಗಿತೋ ಎಂಬ ಕಳವಳದಲ್ಲಿ ಪುಟ್ಟ ಸುಳಿಗಳೆದುರು ಉಸಿರು ಬಿಗಿ ಹಿಡಿವ ಘಳಿಗೆಗಳ ಬಾಲ್ಯ ಪಡೆದವಳಲ್ಲ. “ನಮ್ಮ ಮದುವೆಯ ಬಗ್ಗೆ ನಾವು ನಾವೇ ನಿರ್ಧರಿಸುವುದೆಂದರೆ ಎಷ್ಟೊಂದು ಕಠಿಣ…. ಪರಸ್ಪರರನ್ನು ಅರಿತ ನಂತರ ಇನ್ನೂ ಇನ್ನೂ ಕಷ್ಟ…. ಅಪ್ಪ ಅಮ್ಮ ನಿಶ್ಚಯಿಸಿದ ಮದುವೆಗಳಲ್ಲಿ ಈ ದ್ವಂದ್ವವಿಲ್ಲ ಅಲ್ವಾ….?” ಅಂತಲ್ಲ ಅವಳು ಮಾತಾಡಿದ್ದಕ್ಕೆ ನಾನು ಜೀವನ ಜವಾಬ್ದಾರಿ ಆಯ್ಕೆಯ ಸ್ವಾತಂತ್ರ್ಯ ಇತ್ಯಾದಿ ಮಾತಾಡಿದರೂ ಒಳಗೊಳಗೆ ಕಂಪಿಸಿದ್ದೆ. ನಮ್ಮ ಸಂಬಂಧ ಮೊದಲಿನಂತಿಲ್ಲ ಅಂತ ಹೇಳಹೊರಟಾಗ “ಯಾವಾಗಲೂ ಅದೇಥರ ಇರಬೇಕಾ?” ಎಂದು ಪ್ರಶ್ನಿಸಿದ್ದಳು. ಅವಳ ಬಗೆಗಿನ ನನ್ನ ಕಲ್ಪನೆಗಳು ನಿಂತುಹೋದುದನ್ನು, ಮೊದಲಿನ ಅವಳ ಅಲೌಕಿಕ ಸೌಂದರ್ಯ ನನಗೀಗ ತೀರ ಸಾಧಾರಣ ರೂಪವಾಗಿ ಕಾಣುತ್ತಿದೆ ಅನ್ನುವುದನ್ನು, ಅವಳ ನೆನಪು ಉಕ್ಕಿಸುತ್ತಿದ್ದ ರೋಮಾಂಚ ಈಗಿಲ್ಲ ಅನ್ನುವುದನ್ನು ಹೇಳಲಾರದೇ ತೊಳಲಿದೆ. ಇಷ್ಟಾಗಿಯೂ ನೀನು ಇನ್ನೂ ಬೇಕು ಅನ್ನಿಸುವ, ನಿನ್ನ ಜೊತೆ ಬದುಕಬೇಕೆಂದು ಅನ್ನಿಸುವ ಭಾವನೆಗೆ ಕಾರಣ ನೀನಿತ್ತ ವಿಶ್ವಾಸ ಅನ್ನುವುದನ್ನು, ಮತ್ತು ಅದು ನನಗೆ ಬಹಳೆ ಮಹತ್ವದ್ದೆನ್ನುವುದನ್ನು ಬೊಗಳೆ ಅನಿಸದ ಹಾಗೆ ಶಬ್ದಗಳಲ್ಲಿಡಲು ಹೆಣಗಿದೆ. ಈ ನಡುವೆ ಅವಳು ಚಿಕ್ಕದೊಂದು ವಿಷಯದಲ್ಲಿ ಸ್ವಾರ್ಥದರ್ಶನ ಮಾಡಿ ನನ್ನನ್ನು ಕಂಗೆಡಿಸಿದಳು. ಒಬ್ಬರಿಗೊಬ್ಬರು ಒದಗಿಬರುತ್ತ ನಿತ್ಯದ ರಗಳೆಗಳನ್ನು ಮೀರಿ ಘನತೆಯತ್ತ ತುಡಿವುದೆಂಬ ಆದರ್ಶದ ಚಂದ ಶಬ್ದಗಳ ನಾದಕ್ಕೆ ಮನಸೋತು ಮುಂದೆ ಮುಂದೆ ಹೋದವರು “ನನಗಿಷ್ಟು ಬೇಗ ಮಗು ಬೇಡ…. ನಿಮ್ಮ ಅಪ್ಪ ಅಮ್ಮ ನಮ್ಮ ಜೊತೆಯೇ ಇರುತ್ತಾರೆಯೇ…. ಮದುವೆಯಾದ ಮೇಲೆ ಕೆಲಸ ಬಿಡುತ್ತೀಯಾ….?” ಇತ್ಯಾದಿಗಳನ್ನು ದಾಟಲಾರದೇ ಕಾಲು ಸೋತು ಕೂತೆವು. ನಮ್ಮ ನಡುವೆ ನಿರಾಸಕ್ತಿಯ ತಣ್ಣಗಿನ ಪರದೆಯೊಂದು ಹರಡಿಕೊಳ್ಳುತ್ತಿರುವ ನಿಜ ಪರಸ್ಪರರಿಗೆ ತಿಳಿಯಗೊಡದಂತಿರಲು ಪ್ರಯತ್ನಿಸಿದೆವು. ದೈನಿಕದ ಕೆಸರೊಳಗೆ ಕನಸು ಕಟ್ಟುವುದು, ಕಟ್ಟಿ ಕಾಯ್ದಿಡುವುದೆಷ್ಟು ಮಹತ್ವದ್ದೆಂದು ಅರಿತೆವು. ನಿಮ್ಮ ಜನರನ್ನು ನೋಡಿಲ್ಲ, ನಿಮ್ಮ ಸಂಬಂಧಿಕರನ್ನು ನೋಡಿಲ್ಲ. ನಿಮ್ಮ ಮನೆ ಹೇಗೋ ಎನೋ ಎಂದು ಆತಂಕ ಅನ್ನುವಳು. ಈವತ್ತು ಈ ಕಡೆ ಬಂದಿದ್ದಾಗ ಹಿಂದೆ ನನ್ನ ರೂಮಿದ್ದುದು ಇಲ್ಲೇ ಎಂದು ಹೇಳಿದ್ದೇ ಹೋಗುವಾ ಅಂತಂದಳು. ಅಜ್ಜಿಯ ಬಗ್ಗೆ, ಈ ರೂಮಿನಲ್ಲಿ ಕಳೆದ ದಿನಗಳ ಬಗ್ಗೆ ಹೇಳಿದ್ದಕ್ಕೆ ನಿನ್ನ ಕುರಿತು ಎಷ್ಟೊಂದು ವಿವರಗಳು ಗೊತ್ತೇ ಇಲ್ಲ ನನಗೆ ಅಂದಿದ್ದಳು. ಈಗ ಈ ಸಾವಿನ ಸುದ್ದಿ, ಈ ಮನೆಯ ವಾತಾವರಣ ಅವಳಿಗೇನನ್ನಿಸಿತೋ ಎಂದು ತೊಳಲಿದೆ. ನನ್ನ ಶಬ್ದಗಳಲ್ಲಿ ಎಷ್ಟೊಂದು ರಂಗಾಗಿ ಮೂಡಿದ್ದರೂ ಈ ನಿಜದ ಕಠೋರತೆಯೇ ಬೇರೆ….
“ನಿನ್ನ ಮನೆಗೆ ಹೋಗಬೇಕೆಂದು ಬಹಳ ಹೇಳುತ್ತಿದ್ದರು. ವಿಳಾಸ ಕೊಟ್ಟು ಹೋಗಿದ್ದೆಯಲ್ಲ…. ಚೌತಿಯಾದ ಮೇಲೆ ಊರಿನಿಂದ ಬಂದ ನಂತರ ಹೋಗಬೇಕು ಅಂದುಕೊಂಡಿದ್ದರು…. ಚೌತಿಯ ಮರುದಿನವೇ ಹೋದರು….” ವಾಸಂತಿ ಅಪ್ಪ – ಅಮ್ಮನ ಕೊನೆಯ ದಿನಗಳ ಬಗ್ಗೆ ಹೇಳತೊಡಗಿದಳು. ಅಜ್ಜಿ ಚೌತಿಯ ಹೊತ್ತಿಗೆ ಅದೇನು ಸಡಗರ ಪಡುತ್ತಿದ್ದರು. ಹೊಸ ಬಟ್ಟೆ ಕೊಳ್ಳುವುದೇನು, ಸ್ವತಃ ಸಿಹಿ ತಿನ್ನದಿದ್ದರೂ ಡಬ್ಬಗಳಲ್ಲಿ ತರತರದ ತಿಂಡಿ ತುಂಬಿಡುವುದೇನು – ಅವರ ಉತ್ಸಾಹ ನನ್ನ ಬಾಲ್ಯವನ್ನು ನೆನಪಿಸುತ್ತಿತ್ತು. ಬಿಡುವಿಲ್ಲದ ಬೀಡಿಯ ದುಡಿತದ ನಡುವೆಯೂ, ಪ್ರತಿ ರೂಪಾಯಿಯ ಅಮೂಲ್ಯತೆಯ ನಡುವೆಯೂ ಅವರ ಉಮೇದಿಗೆ ಎಲ್ಲೆ ಇರಲಿಲ್ಲ. “ಅಮ್ಮ ಸತ್ತ ನಂತರ ಅಪ್ಪ ಒಂಥರಾ ಆಗಿಬಿಟ್ಟರು. ಬಹಳ ಅಶಕ್ತಿ…. ಎರಡು ತಿಂಗಳೊಳಗೇ ಹಾಸಿಗೆ ಹಿಡಿದರು…. ದೇಶಪಾಂಡೆ ಡಾಕ್ಟರರು ಸ್ವತಃ ಇಲ್ಲಿ ಬಂದು ನೋಡಿ ಹೋದರು…. ಕೊನೆಗಂತೂ ಎಂಟು ದಿನ ಮೊದಲು ಬೇಕಾದ್ದು ಕೊಡಿ ಅಂದಾಗಲೇ ನಮಗೆಲ್ಲ ತಿಳಿದಿತ್ತು…. ಅಪ್ಪ ತುಂಬಾ ನರಳಿದರು…. ಎಲ್ಲ ಹಾಸಿಗೆಯಲ್ಲೇ ಆಗಬೇಕಿತ್ತು…. ಆದರೆ ಅಮ್ಮನ ಹಾಗೆ ಅಪ್ಪ ಕೊನೆ ಗಳಿಗೆಯವರೆಗೂ ಮಗ ಮಗ ಅಂತ ಕೊರಗಲಿಲ್ಲ…. ಈ ಮನೆಯನ್ನು ಬಿಡುವುದೇನು, ನಲವತ್ತು ವರ್ಷಗಳಿಂದ ಇದ್ದ ಮನೆಯಲ್ವ ಅಂತ ನಾವೇ ಅಂದೆವು. ಇವರನ್ನು ಇಲ್ಲಿಯ ಬ್ರ್ಯಾಂಚಿಗೆ ವರ್ಗ ಮಾಡುವಂತೆ ಕೇಳಿದ್ದಕ್ಕೆ ಅದೂ ಸುರಳೀತ ಆಯಿತು…. ಬೀಡಿಯ ಕೆಲಸವೂ ನಡೆದುಕೊಂಡು ಹೋಗುತ್ತಿದೆ…. ಮಕ್ಕಳ ಶಿಕ್ಷಣಕ್ಕೆ ಈಗಿನ ದಿನಗಳಲ್ಲಿ ಎಷ್ಟಿದ್ದರೂ ಕಡಿಮೆ ನೋಡು….”
ಆವಳ ಮಗಳ ಬಗ್ಗೆ ವಿಚಾರಿಸಿದೆ. ಮುನಿಸಿಕೊಂಡು ಮಲಗಿದ್ದಾಳೆ ಎಂದು ಎರಡನೇ ಮಗಳ ಬಗ್ಗೆ ಹೇಳಿದಳು. ಹಿರಿಯವಳು ಓದಿನಲ್ಲಿ ಮುಂದಂತೆ. ಏಳನೇ ಕ್ಲಾಸಿನಲ್ಲಿದ್ದಾಳೆ. ಈ ಬಾರಿ ಮೂರು ನಂಬರಿನೊಳಗೆ ಬಂದರೆ ಬಳೆ ಮಾಡಿಸುವುದಾಗಿ ಅಪ್ಪ ಹೇಳಿದ್ದಾರಂತೆ…. ಅಂತೆಲ್ಲ ಹೇಳಿದಳು. ನಾನು ಕೆಲಸದಲ್ಲಿರುವ ಕಂಪನಿಯ ಹೆಸರು ಕೇಳಿ ಓ ನಮಂ ಸಂಬಂಧಿಕನೊಬ್ಬ ಚಿತ್ರದುರ್ಗದಲ್ಲಿ ಇದೇ ಕಂಪನಿಯಲ್ಲಿರುವುದು – ರಮೇಶ್ ಅಂತ ನಿನಾಗೆ ಗೊತ್ತೇ? ಎಂದು ವಾಸಂತಿಯ ಗಂಡ ಕೇಳಿದ. ಇರಬಹುದು ಎಂದು ಸುಮ್ಮನಿದ್ದುದ್ದು ಕಂಡು ಹಾಂ ಹೇಗೆ ಗೊತ್ತಾದೀತು ನೀನು ಇರುವುದು ಈ ಕಡೆಗಲ್ವೇ ಎಂದು ತೇಪೆ ಹಚ್ಚಲು ನೋಡಿದ….
ಹೊರಡುತ್ತೇನೆಂದು ಹೇಳುವಾ ಅಂದುಕೊಳ್ಳುತ್ತಿರುವಾಗಲೇ ವಾಸಂತಿ, ವೀಣಾಳ ಕುರಿತು “ನಮ್ಮ ಪೈಕಿಯವರೋ?” ಎಂದಳು ಮೆಲ್ಲಗಿನ ದನಿಯಲ್ಲಿ. ಅಲ್ಲವೆಂದು ನಕ್ಕೆ. ಆ ಪ್ರಶ್ನೆಯಿಂದ ನನಗೆ ಮುಜುಗರವಾಯಿತೆಂದು ಭಾವಿಸಿ ವಾಸಂತಿಯ ಗಂಡ ಮಾತು ಮರೆಸಲು ನೀರು ಕೊಡುವಂತೆ ಅವಳನ್ನು ಕೇಳಿದ. ಅವನು ದುರುಗುಟ್ಟಿ ನೋಡಿದ್ದನ್ನು ಅರ್ಥಮಾದಿಕೊಂಡರೂ ಹಟದಿಂದೆಂಬಂತೆ “ಏನಾಯಿತಂತೆ ಕೇಳಿದರೆ?” ಅಂದಳು. ಅವಳು ಆ ಮಾತಾಡದೇ ಇದ್ದರೆ ಒಳ್ಳೆಯದಿತ್ತು ಅನಿಸಿತು. “ಕೇಳು ಕೇಳು…. ನಿನ್ನ ಸಣ್ಣ ಮನಸ್ಸು ಜಗತ್ತಿಗೆಲ್ಲ ಗೊತ್ತಾಗಲಿ…. ಬಂದವರೆದುರು ಹೇಗೆ ಮಾತಾಡಬೇಕೆಂಬುದನ್ನು ಹೇಳಿಕೊಡಬೇಕಲ್ವೆ….?” ಎಂದು ನಖಶಿಖಂತ ಉರಿಯುತ್ತ ಅವಳ ಗಂಡ ಸಿಡಿಸಿಡಿ ಸಿಡಿದ. “ಏನು ಮಹಾ ತಪ್ಪು ಮಾಡಿದೆ ಅಂತ ನೀವು ಸಿಡುಕುವುದು…. ನನ್ನನ್ನು ಬಯ್ಯಲಿಕ್ಕೊಂದು ಕಾರಣ ಬೇಕಿತ್ತು…. ಸಿಕ್ಕಿತಲ್ಲ ಈಗ…. ನೋಡೋ ಪ್ರಶಾಂತ, ಅಮ್ಮ ಹೋದಾಗಿನಿಂದ ಹೀಗಾಗಿದೆ…. ಈ ಮನೆಯಲ್ಲಿ ಉಳಿಯಲು ಬಂದ ಗಳಿಗೆ ಚೆನ್ನಾಗಿಲ್ಲ ಅಂತ ಕಾಣುತ್ತದೆ…. ಅಪ್ಪ ಶೀಕು ಬಿದ್ದಾಗ ಆ ಎರಡು ತಿಂಗಳು ಹೇಗೆ ಕಳೆದೆನೋ ದೇವರೇ ಅನ್ನಿಸುತ್ತಿದೆ ಈಗ…. ಔಷಧಿಗೆ ಖರ್ಚು ಮಾಡುವಾಗ ರೂಪಾಯಿ ರೂಪಯಿಗೂ ಅನ್ನಿಸಿಕೊಂಡೆ…. ಅವರ ಚಾಕರಿಯ ಕಷ್ಟ ಬೇರೆ…. ಎಷ್ಟಾದರೂ ಅವರು ನನ್ನ ಅಪ್ಪ ಅಂತ ಅನಿಸದೇ ಹೋಯಿತು ಇವರಿಗೆ…. ಅಮ್ಮನೇ ಪುಣ್ಯ ಮಾಡಿದವಳು – ಹಾಸಿಗೆಯಲ್ಲಿ ನರಳಿ ಸಾಯಲಿಲ್ಲ. ಮಗ ಅಂತ ಇದ್ದೂ ಯಾತಕ್ಕೆ? ಸಾಯುವವರೆಗೂ ಅವನನ್ನೇ ನೆನೆಸಿ ಸತ್ತಳು. ಯಾವ ಕ್ಷಣಕ್ಕಾದರೂ ಬಂದಾನು ಅಂತ ವರ್ಷಗಟ್ಟಲೇ ಕಣ್ಣು ಕೀಲಿಸಿ ಕೂತಳು. ಅವರು ಹೋದರಲ್ಲ ಅಂತ ಕೆಲವು ಸಲ ಭಾಳ ಬೇಜಾರಾಗುತ್ತದೆ. ಆದರೆ ಇದ್ದು ಏನು ಮಾಡುವುದಿತ್ತು? ನಾವಾದರೂ ಇದ್ದು ಏನು ಮಹಾ ರಾಜಭೋಗ ಪಡೆಯುತ್ತಿದ್ದೇವೆಯೇ….?
“ಹೌದು…. ನನ್ನೊಬ್ಬನ ಮೇಲೆ ಹಾಕಿಬಿಡುವುದು ಸಂಸಾರದ ಸಂಗತಿ. ನಾನು ಮಾಡಿದ ಎಂಟು ಸಾವಿರದ ಸಾಲ ತೀರಿಸಲಿಕ್ಕೆ ನಾಲ್ಕು ವರ್ಷ ಬೇಕು…. ಬ್ಯಾಂಕಿನಲ್ಲಿದ್ದೇನೆ ಅಂತ ಜಂಭದಿಂದ ಮೆರೆಯುತ್ತಾನಲ್ಲ ಆ ಉಜಿರೆಯ ಹಿರಿಯಳಿಯ, ಆತ ಒಂದು ಬಾಟಲಿ ಔಷಧಿ ತಂದುಕೊಡಲಿಲ್ಲ. ಅವನಿಗೂ ಮಾವನವರಲ್ಲವೇ? ನಾನೊಂದು ಮಾತು ಹೇಳಿದೆನೆ? ಈಗ ಮನೆ ಕಟ್ಟಿಸುತ್ತಿದ್ದೇನೆ ಬಹಳ ಅಡಚಣೆ ಅಂತ ಹೇಳಿ ಪಾರಾದ….”
ಥಟ್ಟನೆ ಅನಾವೃತಗೊಂಡ ಅವರ ಬದುಕಿನ ಕಠೋರ ಒಳಮುಖಗಳಿಗೆ ವೀಣಾ ಕಕ್ಕಾಬಿಕ್ಕಿಯಾದಳು. ಅವರ ಮಾತಿನ ಹಣಾಹಣಿಯಲ್ಲಿ ನಿತ್ಯದ ಜಂಜಡಗಳೆಲ್ಲ ಬಿಚ್ಚಿ ನಿಂತವು. ಅವರ ಮಾತುಗಳಲ್ಲಿ ಸಂಸಾರ ಬರೀ ಒಂದು ದೊಡ್ಡ ರಗಲೆಯಾಗಿ ಮೂಡಿನಿಂತಿತು. ನಾನು ಎದ್ದು ಸಮಾಧಾನದ ಮಾತಾಡುತ್ತಿದ್ದೆ. ವಾಸಂತಿ ಬಿಕ್ಕುವದೊಂದು ಬಾಕಿಯಿತ್ತು. ಅವಳ ಗಂಡನೂ ಈಗ ನನ್ನ ಪ್ರವೇಶದಿಂದ ರಂಗಕ್ಕೆ ಬೇರೆ ಕಳೆ ಬರತೊಡಗಿರುವುದು ಕಂಡು, ಅಪರೂಪಕ್ಕೆ ಬಂದವನಿಗೆ ಇಲ್ಲದ ಕರಕರೆ ಹಚ್ಚಬೇಡ ಅನ್ನುತ್ತ ದೇವರ ಇಚ್ಛೆ ಮನುಷ್ಯನದೇನುಂಟು ಮುಂತಾದ ಮಾತುಗಳನ್ನು ಸುರು ಮಾಡಿದ. ವಾಸಂತಿ ಸ್ಥಿಮಿತಕ್ಕೆ ಬಂದಳು. ನನ್ನಿಂದ ಸಹಾಯ ಕೇಳಲು ಮುಜುಗರ ಬೇಡವೆಂದು ಹೇಳಿ ಹೊರಡುವ ಸೂಚನೆ ಕೊಟ್ಟೆ.
ಇತ್ತ, ಕೋಣೆಯ ಮೂಲೆಯಲ್ಲಿ ಸಿಟ್ಟಿನಿಂದ ಹೊದ್ದು ಮಲಗಿದ ವಾಸಂತಿಯ ಎರಡನೇ ಮಗಳು ಹೊದಿಕೆ ಮೆಲ್ಲನೆ ಸರಿಸಿ ವೀಣಾಳನ್ನು ನೋಡುತ್ತಿದ್ದಳು. ವೀಣಾ ಬಾ ಅಂತ ಸಂಜ್ಞೆ ಮಾಡಿದ್ದಕ್ಕೆ ಊಂ ಹೂಂ ಅಂತ ತಲೆಯಾಡಿಸಿದಳು. ಅಕ್ಕನಿಗಿಂತ ಚೆಲುವೆ. ಮೂರು ವರ್ಷವಿರಬಹುದು – ದೇವತೆಯ ಹಾಗಿದ್ದಳು. ನಾವು ಹೊರಡುತ್ತೇವೆಂದು ಎದ್ದೆವು. ವೀಣಾ ಆ ಹುಡಿಗಿಯ ಹೆಸರು ಕೇಳಿದಳು. “ಶೈಲಾ” ಅಂದಳು ವಾಸಂತಿ. ನಾವು ಹೊರಡುವುದು ಕಂಡು ಹೊದಿಕೆ ಸರಿಸಿ ಎದ್ದು ಕೂತಳು. ವೀಣಾ ಟಾಟಾ ಮಾಡಿದ್ದಕ್ಕೆ ಪ್ರತಿಯಾಗಿ ಕೈಬೀಸಿದಳು. ನಕ್ಕ ಅವಳ ಕೆನ್ನೆಗಳಲ್ಲಿ ಗುಳಿ. ಅದೆಷ್ಟು ಚಂದ ಕಣ್ಣುಗಳು ಅವಳಿಗೆ.
ನಾವು ಹೊರಬಂದಾಗ ವಿಚಿತ್ರವಾದ ಖಿನ್ನತೆ ನನ್ನನ್ನು ಆವರಿಸಿತ್ತು. ನನ್ನ ಅನ್ಯಮನಸ್ಕತೆ ಕಂಡು ವೀಣಾ ಮೃದುವಾಗಿ ಕೈ ಒತ್ತಿದಳು. “ನೀನು ಸಲ್ಲುವ ಇನ್ನೊಂದು ಲೋಕವನ್ನು ನಾನು ಕಂಡೇ ಇಲ್ಲ ಪ್ರಶಾಂತ…. ಬಹಳಷ್ಟು ಅರ್ಥಮಾಡಿಕೊಳ್ಳಬೇಕು ನಾನು….” ಎಂದಳು. ಈ ನನ್ನ ದುಗುಡವೂ, ಈ ನನ್ನ ನೋವೂ ನಮ್ಮ ನಡುವಿನ ಯಾವುದೋ ತಂತು ನೇಯಲು ಬಳಸಲ್ಪಟ್ಟಿತೇ ಅಂತ ಯೋಚಿಸಿದೆ. ಯಾವ ಮುನ್ಸೂಚನೆ ಹುಡುಕುವ ಇರಾದೆ ಇಲ್ಲದಾಗ್ಯೂ, ವಾಸಂತಿ ಇತ್ತ ಬಿಸಿ ಹಾಲು ಕುಡಿಯುವಾಗ ನನ್ನ ಕೈಗಳು ಸೂಕ್ಷ್ಮವಾಗಿ ಕಂಪಿಸಿದವೆಂಬ ವಿವರ ಪದೇ ಪದೇ ಮನಸ್ಸಲ್ಲಿ ನುಸುಳಿ ಬರುತ್ತಲಿತ್ತು.
*****
ಫೆಬ್ರವರಿ, ೧೯೮೭
