ಅತ್ತ ಬೆಳುವೊಲ, ಇತ್ತ ಮಲೆನಾಡ ಜರಿ ಸೆರಗು.
ಸುತ್ತು ಪರ್‍ವತ ನೀಲಿ. ಗುಡ್ಡ ಕೊಳ್ಳವ ಇಳಿದು-
ಏರಿ ಚಿಗುರಿದ ಹಸಿರು. ಕೆಲದಿ ಕನ್ನಡಿ ಹಿಡಿದು
ನಿಂತ ಕೆಲಗೇರಿ ಕೆರೆ. ಗೆರೆ ಕೊರೆದು ಬರುವ ಜುಗು-
ಜುಗು ರೈಲು. ತಗ್ಗು ದಿನ್ನೆಯನೇರಿ ಯಾವುದೋ
ಹಿಗ್ಗಿನಲಿ ನುಗ್ಗಿ ಬರುತಿವೆ ಬಸ್ಸು. ನಿತ್ಯದು-
ದ್ಯೋಗದಲಿ ಅತ್ತ ಹೊರಳಿದೆ ನಗರ. ನೆತ್ತಿಯಲಿ
ಹತ್ತು ದಿಕ್ಕಿನ ಮೋಡ; ಏರೇರಿ ಬಂದವದೊ!
ಸಂಜೆಸೂರ್‍ಯನ ಹೊನ್ನ ಕಿರಣಗಳ ಸ್ಪಂಜಿನೊಲು
ಹೀರಿ ಹಿಂಜಿದ ಕಣಿವೆ-ಕಂದರದ ಸೌಂದರ್‍ಯ.
ಕೈ ಎತ್ತಿದರೆ ನಿಲುಕುವಾಗಸದ ಔದಾರ್‍ಯ.
ಇರುಳು ದೀಪಾವಳಿಯ ಹೆಜ್ಜೆಯಲಿ ಬಂದವೊಲು
ಸಾಲು ವಿದ್ಯುದ್ದೀಪ. ಗೋಪುರದ ತುತ್ತತುದಿ-
ಗಡಿಯಾರ ನುಡಿಯುತಿದೆ; ‘ಕಾಲೋಽಹಿ ನಿರವಧಿಃ’.
*****
