ನಮಿಸು: ಗೋವಿಂದ ಪೈ

ಕಣ್ಮುಟ್ಟ ಕಂಡಿಲ್ಲ; ಆದರು ಮನದೊಳೆಂದೊ
ಮೂರ್‍ತಿಗೊಂಡಿದೆ ಚಿತ್ರ. ಎಲೆ-ಹೂವ ಕಂಡರೂ
ಮೂಲ ಆಧಾರವನು ಕಾಂಬ ಕಣ್ಣಿನ ಹೊಳಪು.

ಎಲ್ಲವನು ಎಣಿಸಿಟ್ಟ ಬೆಳ್ಳಿಯ ತಿಜೋರಿ. ಅಗೊ
ನೆನಹು ಬೀಗದ ಕೈ, ನಮಿಸು: ಗೋವಿಂದ ಪೈ.

ಮಾನವೀಯತೆಗೆ ಹಂದರ ಹಾಕಿ ನಿಂತವೆನೆ
ಹುಬ್ಬು; ಅಂತಃಕರಣದುಬ್ಬು; ತಾಯ ಸೇವೆಗೆ

ಭಾಷೆಕೊಟ್ಟು ಹೊತ್ತರು ಮೀಸೆ, ಮುಡಿಪಿದರು ಮೈ.
ಗಿಳಿವಿಂಡಿಗೇಕೆ ಆದಿಪ್ರಾಸ? ಹಾರ ಬಿಡು.

ತೆಂಕನಾಡಿನ ಕಡಲತಡಿ ತೆರೆಯ ತೇರಿನಲಿ
ಕ್ರಿಸ್ತ ಬುದ್ಧರು ಬಂದರೋಲಾಡು. ಸಿಂಪಿನಲಿ

ಸುನೀತಗಳ ಮುತ್ತು. ಶಂಖದಲಿ ನಾಡ ಹಾಡು.
ದಿಗ್ಗಜದ ಭಾರವನು ಹೊರಲಿಕೆಲ್ಲಿದೆ ಹೆಗಲು?
ಎಲ್ಲಿದೆ, ಅಗ್ಗದರದಂಗಡಿಯೊಳಿಂಥ ಮಾಲು?
*****