ಮಗುವಿಗೆ

ನಮ್ಮ ಬಾಳಬಳ್ಳಿಗೊಗೆದ ಹೊಚ್ಚಹೊಸತು ಮಲ್ಲಿಗೆ!
ನೆಲಮುಗಿಲಿನ ಒಲವು ಗೆಲವು ಪಡೆದು ಬಂದಿತಿಲ್ಲಿಗೆ!
ಪರಿಮಳಿಸಿತು ತುಂಬಿ-ತೋಟ ನಿನ್ನ ಒಂದೆ ಸೊಲ್ಲಿಗೆ
(ಪುಟ್ಟ ಎಸಳುಗೈಗಳನ್ನು ಮುಟ್ಟಲೇನು ಮೆಲ್ಲಗೆ?)

ನಿದ್ದೆಯಲ್ಲು ನಗುವೆ ನೀನು ನಮ್ಮ ಬುದ್ಧಿಯಾಚೆಗೆ
ತೇಲುತಿರುವ ಮುದ್ದು ಹಂಸ ಕೊಳದ ಸ್ವಪ್ನವೀಚಿಗೆ.
ತಾವರೆಯಲೆ ಹೊಚ್ಚಿದಂತೆ ಅಮ್ಮ ಹೊಲಿದ ಕುಂಚಿಗೆ
ನಮ್ಮ ಬಾಲ್ಯ-ಚಿತ್ರ-ಲೀಲೆಗಳ ವಿಶೇಷ ಸಂಚಿಕೆ!

ಗಾಳಿಗಡಲಿನಲ್ಲಿ ಹುಟ್ಟು ಕಡೆಯುತಿರುವ ಕೈಗಳು!
ಮಲಗಿದಲ್ಲೆ ಬೈಸಿಕಲ್ಲು ತುಳಿವ ಪುಟ್ಟ ಕಾಲ್ಗಳು!
ಇಷ್ಟು ಅಗಲ ಬಾಯಿ ತೆಗೆದು ಆಕಳಿಸುವ ಏಗಳು
ಒಂದೆ ಸಮನೆ ನೋಡುತಿರುವೆ ನೋಯವೇನು ಕಂಗಳು?

ನೀನು ಆಳುವ ದನಿಯೆ ಮಧುರ ರಾಗವಾಗಿ ಸೆಳೆವುದು!
ಗೂಡಿನಲ್ಲಿ ಗುಬ್ಬಿಮರಿಯು ಚಿಂವ್‌ಗುಡುವೊಲು ಸುಳಿವುದು;
ಇನ್ನು ಈಟು ಇರುವಾಗಲೆ ಹಟವ ತೆಗೆದು ನಮ್ಮನು
ಹೆದರಿಸುವೆಯ? ನೋಡು ಮತ್ತೆ ಬಂದು ಬಿಡುವ ಗುಮ್ಮನು!

ತಾಯ ಒಲುಮೆ ತೂಗುತಿರಲು ನಿನ್ನ ಮುದದ ತೊಟ್ಟಿಲು
ಜೀಕವಾಡಿ ಏರುತಿರುವೆ ದಿನದಿನಗಳ ಮೆಟ್ಟಿಲು!
ಶುಭದ ಹರಕೆ ನವೋದಯಕೆ ನೂರು ದೀಪ ಹಚ್ಚಲು
ನಮ್ಮೆದೆಯಾನಂದಕೆಲ್ಲ ಕಂದ ನೀನೆ ಚೊಚ್ಚಿಲು.
*****