ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; ಒಲಿದ ಮಿದುವೆದೆ,
ರಕ್ತವ ಮಾಂಸದ ಬಿಸಿದು ಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯೆಲ್ಲೋ, ಇಂದು ಏನಿದು ಬೇಸರ? ಮರದೊಳಡಗಿದ
ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ. ಸಪ್ತ
ಸಾಗರದಾಚೆಯಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ವರ್ಮರ ಇಂದು ಇಲ್ಲಿಗು ಹಾಯಿತೇ?
ವಿವಶವಾಯಿತು ಪ್ರಾಣ ; ಹಾ ! ಪರವಶವು ನನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕಣ್ಣನು?
*****
೧೯೪೮ (ಸಂಕಲನ: ಕಟ್ಟುವೆವು ನಾವು)
