ನಾವು ಐದಾರು ಮಂದಿ ಗೆಳೆಯರು ಮೊನ್ನೆ ಒಂದೆಡೆ ಕಲೆತಾಗ ಮಾನಸಶಾಸ್ತ್ರದಂತಹ ಒಂದು ಗಹನವಾದ ವಿಷಯದ ಮೇಲೇ ಚರ್ಚೆಯಲ್ಲಿ ಸಿಕ್ಕಿಕೊಂಡೆವು. ಫ್ರಾಯ್ಡ್, ಯುಂಗ್(ಜುನ್ಗ್-ಈ ಮಹಾಶಯನ ಹೆಸರಿನ ಉಚ್ಚರಣೆಯ ಬಗೆಗೂ ಕೆಲಹೊತ್ತು ತುರುಸಿನ ವಾದ ನಡೆಯಿತು), ವಿಲ್ಯಮ್ ಜೇಮ್ಸ್, ಏಡ್ಲರ್ ಮೊದಲಾದವರ ಹೆಸರುಗಳನ್ನು ಮೇಲಿಂದ ಮೇಲೆ ಉಚ್ಚರಿಸಿ ಚರ್ಚೆಗೆ ಒಂದು ಬಗೆಯ ಶಾಸ್ತ್ರೀಯ ಮೆರುಗನ್ನೂ ತಂದೆವು. ಫ್ರಾಯ್ಡ್‌ನ ಬಗ್ಗೆ ಮಾತು ಬಂದುದರಿಂದಲೋ ಏನೋ ಒಳ್ಳೇ ಗಾಂಭೀರ್ಯದಿಂದ ಆರಂಭವಾದ ಮಾತುಕತೆ ಒಮ್ಮೆಲೇ ನಮಗೆ ಪ್ರಿಯವಾದ ಒಂದು ವಿಷಯದತ್ತವೇ ಹೊರಳಿತು – ಲೈಂಗಿಕ ವಿಷಯ. ಈ ವಿಷಯದ ಮಾತು ಬಂದಾಗ ಗಾಂಭೀರ್ಯ, ಬಿಗುಮಾನ ನನ್ನ ಗೆಳೆಯರಿಗಂತೂ ಸಾಧ್ಯವಿಲ್ಲ – ಅರ್ಥಾತ್ ನಾವಷ್ಟೇ ಇದ್ದಾಗ. ನನ್ನ ನಮ್ಮೊಳಗೂ ಈ ವಿಷಯದ ಕುರಿತು ಮಾತನಾಡಲು ನಾಚುವುದು, ಹಿಂದೆಗೆಯುವದು ಅಂದರೆ ಹಿಂದುಳಿದುದರ ಲಕ್ಷಣ ಎಂದು ನನ್ನ ಗೆಳೆಯರೆಲ್ಲನೇಕರಗೆಳೆಯರಲ್ಲನೇಕರ ಗ್ರಹಿಕೆ. ಅಂತೂ ಈ ವಿಷಯವಾಗಿ ನಮಗೆ ಗೊತ್ತಿದ್ದನ್ನು ಗೊತ್ತಿಲ್ಲದ್ದನ್ನು ಒಳ್ಳೇ ರುಚಿಯಿಂದ, ಆಸ್ಥೆಯಿಂದ ಬಾಯಚಳಿ ಬಿಟ್ಟು ಮಾತನಾಡಿಕೊಂಡೆವು. ನಡುವೆಯೇ ತುದಿಯಿಲ್ಲ, ಬುಡವಿಲ್ಲ ಎಂಬಂತೆ ನಡೆದ ಈ ಸ್ವಚ್ಛಂದ ಹರಟೆಗೆ ಒಂದು ದಿಕ್ಕು ಕೊಡಲೆಂಬಂತೆ ನಮ್ಮಲ್ಲೊಬ್ಬರು ಒಂದು ತೊಡಕಿನ ಪ್ರಶ್ನೆಯನ್ನೇ ಹಾಕಿದರು: ನಮಗೆ ಲೈಂಗಿಕ ಪ್ರಜ್ಞೆ ಬಂದ ಮೊತ್ತಮೊದಲಿನ ಅನುಭವ ಯಾವುದು? ನೆನಪಿದೆಯೆ? ಸಹಜವಾಗಿ ಹುಟ್ಟಿದ ಈ ಪ್ರಶ್ನೆ ಉತ್ತರಿಸಲು ಎಷ್ಟು ಕಠಿಣವಾದುದು ಎಂಬುದರ ಅರಿವು ಪ್ರಶ್ನೆ ಕೇಳಿದವರಿಗೇ ಇರಲಿಲ್ಲ.
ಮಳೆಗಾಲದ ಅಂಗಳದಲ್ಲಿ ನೆಟ್ಟ ಬೀಜ: ಮೊಳೆತು ಸಸಿಯಾಗುತ್ತದೆ. ಸಸಿ ಬಲಿತು ಬಳ್ಳಿ, ಬಳ್ಳಿ ಹೂತು ಮಿಡಿಯಾಗಿ ಕಾಯಾಗುತ್ತದೆ. ವರುಷ ವರುಷವೂ ನಮ್ಮ ಕಣ್ಣ ಮುಂದೆಯೇ ನಡೆಯುವ ಈ ನೈಸರ್ಗಿಕ ಘಟನೆಯನ್ನು ಅದೆಷ್ಟು ಸುಲಭವಾಗಿ ವರ್ಣಿಸುತ್ತೇವೆ! ಆದರೆ ಬೀಜದಿಂದ ಕಾಯಾಗುವವರೆಗೆ ಅವ್ಯಾಹತವಾಗಿ ಸಾಗುವ ಈ ವ್ಯಾಪಾರವನ್ನು ಅದರ ಘಟಕಗಳಲ್ಲಿ ವಿಂಗಡಿಸಿ ಇಂತಹ ಒಂದು ಕ್ಷಣಕ್ಕೆ ಬೀಜ ಮೊಳಕೆಯೊಡೆಯಿತು, ಬಳ್ಳಿ ಹೂವು ಬಿಟ್ಟಿತು, ಹೂವು ಮಿಡಿ ತಳೆದಿತು ಎಂದು ಬೆರಳು ಮಾಡಿ ಹೇಳಬಹುದೇ? ಅಂತೆಯೇ ನಮ್ಮ ಅನುಭವದ ಮಾತು. ಈ ಬಳ್ಳಿಯಂತೆ ಕ್ಷಣಕ್ಷಣಕ್ಕೂ ಬೆಳೆಯುತ್ತಿರುವ, ಅವ್ಯಾಹತವಾಗಿ, ಇಡಿಯಾದ ನಮ್ಮ ಅನುಭವವನ್ನು ಅದರ ಬಿಡಿ ಘಟಕಗಳಲ್ಲಿ ವಿಭಜಿಸಿ ಇಂತಹ ಒಂದು ದಿನ ಇಂತಹ ಒಂದು ಕ್ಷಣಕ್ಕೆ ನಮಗೆ ಲೈಂಗಿಕ ಪ್ರಜ್ಞೆ ಹುಟ್ಟಿತು ಎಂದು ನಿರ್ಧರಿಸುವ ಬಗೆ ಹೇಗೆ?
ಆದರೆ ಹರಟೆಯೇ ಮುಖ್ಯ ಉದ್ದೇಶವಾದ ನಮಗೆ ಪ್ರಶ್ನೆಯ ತೊಡಕು ದೊಡ್ಡದೆನಿಸಲಿಲ್ಲ. ಕೂಡಲೇ ಪ್ರತಿಯೊಬ್ಬರೂ ಒಂದೊಂದು ಅನುಭವವನ್ನು ಎತ್ತಿ ಅದುವೇ ತಮಗೆ ಲೈಂಗಿಕ ಪ್ರಜ್ಞೆ ಬಂದ ಮೊತ್ತಮೊದಲಿನ ಅನುಭವವೆಂದು ತಮಗೆ ಸರಿಕಂಡಂತೆ, ಅದಕ್ಕೂ ಹೆಚ್ಚಾಗಿ ಉಳಿದವರಿಗೆ ಮೆಚ್ಚಿಕೆಯಾಗುವಂತೆ ಇದ್ದುದರೊಡನೆ ಇಲ್ಲದ್ದನ್ನೂ ಸೇರಿಸಿ ಬಣ್ಣಿಸಿಕೊಂಡೆವು.
ನನ್ನ ಸರತಿ ಬಂದಾಗ ನಾನೂ ನನ್ನ ಒಂದು ಅನುಭವ ಕುರಿತು ಮಾತನಾಡಲು ಒಪ್ಪಿದಾಗ ನನ್ನ ಗೆಳೆಯರಿಗೆ ತುಸು ಅಚ್ಚರಿಯೇ ಆಯಿತು. ಇಂತಹ ವಿಷಯದಲ್ಲಿ ನನ್ನ ಗೆಳೆಯರಲ್ಲಿ ನಾನೇ ತುಸು ‘ಅಪ್ಪಂತ’ ಎಂದು ಪ್ರತೀತಿ. ನಾನು ಹೇಳಲಿರುವ ಅನುಭವ ನಮ್ಮ ಊರಿನ ಒಬ್ಬ ಸೂಳೆಯ ಕುರಿತದ್ದು ಎಂದು ತಿಳಿದಾಗ ಅವರಿಗನಿಸಿದ ಕುತೂಹಲ ಅಷ್ಟಿಷ್ಟಲ್ಲ.
ಸೂಳೆಯೆಂದ ಕೂಡಲೇ ನಿಮ್ಮೆಲ್ಲರ ಕಣ್ಣ ಮುಂದೆ ನಿಲ್ಲುವ ಚಿತ್ರ-ಒಬ್ಬ ಒಯ್ಯಾರದ, ಶೃಂಗಾರದ ಬೆಡಗುಬಿನ್ನಾಣದ ತರುಣ ಹೆಣ್ಣಿನ ಚಿತ್ರ. ಅಲ್ಲವೇ? ಆದರೆ ಉತ್ತುಮಿಯಲ್ಲಿ ಈ ವರ್ಣನೆಗೆ ಸರಿಹೊಂದುವ ಯಾವ ಲಕ್ಷಣವೂ ಇರಲಿಲ್ಲ. ಈ ಕತೆ ನಡೆದ ಹೊತ್ತಿಗೆ ಉತ್ತುಮಿ ನಾಲವತ್ತರ ಗಡಿದಾಟಿದ ಮುದುಕಿ. ತಾರುಣ್ಯದಲ್ಲಿಯೂ ಅವಳು ಹೇಳಿಕೊಳ್ಳುವಷ್ಟು ಸುಂದರಳಿದ್ದಿರಲಿಕ್ಕಿಲ್ಲ ಎನ್ನುವಂತಹ ಅತಿ ಸಾಮಾನ್ಯವಾದ ರೂಪ, ಬಣ್ಣ. ತುಂಬ ಬಡವಳೂ(ಪಾಪ!ಸೂಳೆಯರೆಲ್ಲ ಬಡವರೇ ಏನೋ, ಅಲ್ಲವೇ?) ಆದ್ದರಿಂದ ಬಾಹ್ಯ ಆಡಂಬರದಲ್ಲಿಯೂ ಅಂತಹ ಆಕರ್ಷಣೆ ಏನೂ ಇರಲಿಲ್ಲ.
ಉತ್ತುಮಿಯ ಮಗಳಾದ ಕಲ್ಯಾಣಿ ನನ್ನ ವಯಸ್ಸಿನವಳು. ಕನ್ನಡ ಎರಡನೇ ಇಯತ್ತೆಯಲ್ಲಿ ನನ್ನ ಸಹಪಾಠಿ. ನಮಗಾಗ ಏಳೋ ಎಂಟೋ ವರುಷ. ಸುಂದರಳೂ ಮೋಹಕಳೂ ಆದ ಈ ಹುಡುಗೆಗೆ ನಾನೆಂದರೆ ಅಚ್ಚುಮೆಚ್ಚು. ಆದರೆ ತುಂಬ ದಿಟ್ಟಳಾದ ಈ ಹುಡುಗೆಯ ಜೊತೆ ತಾನಾಡುವುದೆಂದರೆಮಾತನಾಡುವುದೆಂದರೆ ನನಗೆ ಎಲ್ಲಿಲ್ಲದ ಲಜ್ಜೆ. ಒಮ್ಮೆ ಮಾತ್ರ ನಮ್ಮ ಮೈತ್ರಿಯು ಚೆನ್ನಾಗಿ ಕೂಡಿತ್ತು. ಅದು ಅವಳಂದು ಆ ಕೆಂಪು ಮಶಿಯ ದೌತಿಯೊಂದನ್ನು ಸಾಲೆಗೆ ತಂದ ದಿನ. ಅವಳದನ್ನು ಹೇಗೆ ಎಲ್ಲಿ ದೊರಕಿಸಿದ್ದಳೋ ನನಗೆ ಗೊತ್ತಿಲ್ಲ. ಆದರೆ ಅದನ್ನು ಸಾಲೆಗೆ ತಂದ ದಿನ ಅಡಗಿಸಿ ನನಗೊಬ್ಬನಿಗೇ ತೋರಿಸಿದಾಗ ನನಗಾದ ಆನಂದ ಅದೆಷ್ಟು! ಆ ಕೆಂಪು ಮಶಿಯಲ್ಲಿ ಅದೇನು ಆಕರ್ಷಣೆಯಿತ್ತೋ: ಆ ದೌತಿಯನ್ನು ಅವಳಿಂದ ಎತ್ತಿ ಹಾಕಲು ಮಾಡಿದ ಸಾಹಸ ಅಷ್ಟಿಷ್ಟಲ್ಲ. ಅದರಲ್ಲಿ ನನಗೆ ಜಯ ಸಿಕ್ಕಿತೋ ಇಲ್ಲವೋ ನೆನಪಿಲ್ಲ. ಆದರೆ ನೆನಪಿದ್ದ ಸಂಗತಿ ಒಂದು: ನಾನು ಕಲ್ಯಾಣಿಯ ಜೊತೆ ಅತಿ ಸಲುಗೆಯಿಂದ ನಡೆದುಕೊಳ್ಳುವ ರೀತಿಯನ್ನು ಸಾಲೆಯಲ್ಲಿಯ ನನಗಿಂತ ಅನೇಕ ವರುಷಗಳಿಂದ ದೊಡ್ಡವರಾದ ಕೆಲವು ಹುಡುಗರು ಚೇಷ್ಟೆಮಾಡಿ ನಕ್ಕದ್ದು: “ಏ ಪೋರಾ, ಆ ‘ಸೂಳೆ ಮಗಳ’ ಜೊತೆ ಅದೆಷ್ಟು ಸರಸವಾಡ್ತೀಯೋ? ಅವಳೊಡನೆ ಲಗ್ನಾ ಆಗ್ತೀಯೋ ನೋಡ್ತೆ; ಅಪ್ಪನಿಗೆ ಹೇಳ್ತೇನೆ ನೋಡು.”
“ಗಂಡ-ಹೆಂಡತಿ,” “ಲಗ್ನ” ಅಂದರೆ ‘ಏನೋ ನಾಚಿಕೊಳ್ಳುವ ವಿಷಯ’(!) ಎನ್ನುವಷ್ಟು ಜ್ಞಾನವಾದರೂ ಆ ವಯಸ್ಸಿಗೆ ಬಂದಿರುತ್ತದೆ ಅಲ್ಲವೆ? ಆದರೆ ‘ಈ ಸೂಳೆಯ ಮಗಳ’ ವಿಷಯ?
ಕಲ್ಯಾಣಿ ಸೂಳೆಯ ಮಗಳು!
ಕಲ್ಯಾಣಿಯ ತಾಯಿ ಉತ್ತುಮಿ ಸೂಳೆ!
ಉತ್ತುಮಿಯ ತಂಗಿ ಚಿನ್ನಮ್ಮ ಸೂಳೆ!
ಸೂಳೆಯೆಂದರೆ ಏನು?
“ಏನೋ….”
ನನ್ನ ಚಿಕ್ಕಪ್ಪನ ಮನೆ ಕಟ್ಟುತ್ತಿದ್ದ ಗಾವಡಿ ವಾಸು ರಾತ್ರೆ ಚಿನ್ನಮ್ಮನ ಮನೆಯಲ್ಲಿ ಹೋಗಿ “ಬೀಳುತ್ತಾ”ನಂತೆ.
ಚಿನ್ನಮ್ಮ-ವಾಸು!
ಅವರ ಸಂಬಂಧವೇನು?
“ಏನೋ….”
ಆದರೆ ನಮ್ಮ ಕೇರಿಯಲ್ಲೇ ವಾಸಿಸುತ್ತಿದ್ದ ಬಸ್ತ್ಯಾಂವ, ಆಂತೋನೀ, ವೆಂಕಟರಮಣ ನನಗಿಂತ ಅನೇಕ ವರುಷಗಳಿಂದ ದೊಡ್ಡವರು-ಅವರೆಲ್ಲರಿಗೆ ಗೊತ್ತಿತ್ತು, ಈ “ಏನೋ”ದ ಅರ್ಥ. ಸಾಲೆ ಬಿಟ್ಟು ಮನೆಗೆ ಹೋಗುವಾಗೆಲ್ಲ ಚಿನ್ನಮ್ಮನ ಕುರಿತು ಏನೆಲ್ಲ ಆಡಿಕೊಳ್ಳುತ್ತಿದ್ದರು:
“ಏನೇನೋ….”
ನಾವು ಸಾಲೆಯಿಂದ ಮನೆಗೆ ಹೋಗುವ ದಾರಿ-ಸರಳವಾಗಿ ರಾಜರಸ್ತೆಯಿಂದ ಹೋಗಿ ‘ದೇವತೀ’ ದೇಗುಲದ ಹತ್ತಿರ ಓಣಿಯಲ್ಲಿ ತಿರುಗಿದರೆ ಇಪ್ಪತ್ತು ಮಿನಿಟುಗಳ ಹಾದಿ. ಆದರೆ ಹಾಗೆ ಹೋಗದೇ ಸಾಲೆಯ ಬಲಕ್ಕಿರುವ ಗದ್ದೆಯೊಳಗಿಳಿದು ಉತ್ತುಮಿಯ ಮನೆಯ ಮುಂದಿನಿಂದ ಹಾದು ಹೋದರೆ ಹದಿನೈದೇ ಮಿನಿಟುಗಳಲ್ಲಿ ಮನೆ ಸೇರಬಹುದು. ಆದರೆ ಗದ್ದೆಯೊಳಗಿನ ದಾರಿ ಸರಿಯಾದುದಲ್ಲವಾದ್ದರಿಂದ ಹಾಗೂ ಹಾಗೆ ಹೋಗುವಾಗ ಪಟೇಲರ ಮನೆಯ ‘ಟ್ಯಾಗರ್’ ನಾಯಿಯ ಬಾಯಲ್ಲಿ ಬೀಳುವ ಭೀತಿಯಿದ್ದುದರಿಂದ ನಾವು ಆ ದಾರಿಯಿಂದ ಹೋಗುವುದು ಅತಿ ವಿರಲ. ಆದರೆ ಅಂದು (ಅಚ್ಚರಿಯೆಂದರೆ ಅಂದೇ ಕಲ್ಯಾಣಿ ಸಾಲೆಗೆ ಬಂದಿರಲಿಲ್ಲ) ಸಾಲೆ ಬಿಟ್ಟ ಬಳಿಕ ಬಸ್ತ್ಯಾಂವ, ಆಂತೋನಿಯರೆಲ್ಲ ಗದ್ದೆಯ ದಾರಿಯಿಂದಲೇ ಹೋಗುವುದನ್ನು ನಿಶ್ಚಯಿಸಿದ್ದರು. ಎಂದಿನಂತೆಯೇ ನಾನೂ ಅವರ ಜೊತೆ ಹೊರಡಲು ಅನುವಾದಾಗ, ಆಂತೋನಿ ಅಡ್ಡ ಬಂದ: “ಬೇಡವೋ ನೀನು ರಸ್ತೆಯಿಂದಲೇ ಹೋಗು. ನಮಗೆ ಏನೋ ಕೆಲಸವಿದೆ. “ಈ ಮೂವರೂ ಮಕ್ಕಳಿಗೆ ನನ್ನ ಮೇಲೆ ಬಹಳ ಮಮತೆ. ನಮ್ಮ ಕೇರಿಯಲ್ಲೇ ವಾಸಿಸುತ್ತಿದ್ದರಿಂದ ಸಾಲೆಗೆ ಹೋಗುವಾಗ ಸಾಲೆಯಿಂದ ಬರುವಾಗ ಎಂದಿಗೂ ಅವರ ಜೊತೆಯಲ್ಲೇ ಇರುತ್ತಿದ್ದೆ. ಈ ಮೊದಲು ಎಂದಿಗೂ ಅವರು ಹೀಗೆ ತಮ್ಮ ಸಂಗಡ ಬರಬೇಡವೆಂದು ಅಂದಿದ್ದಿಲ್ಲ. ನನಗೆ ಕುತೂಹಲವಾಯಿತು. ಏನೋ ಇದೆ, ಅಂತೆಯೇ ನನಗೆ ಬರುವುದು ಬೇಡ ಅನ್ನುತ್ತಾರೆ. ನಾನು ಬರುತ್ತೇನೆ ಎಂದು ಹಟ ಹಿಡಿದೆ. ಕೊನೆಗೆ ತಮ್ಮತಮ್ಮಲ್ಲೇ ಏನೋ ಗುಜುಗುಜು ನಡೆಸಿ ಒಪ್ಪಿಕೊಂಡರು. ನಾನೂ ಅವರ ಜೊತೆ ಹೊರಟೆ. ಹಾದಿಯಲ್ಲಿ ಅಂತೋನಿ ಗುಟ್ಟಾಗಿ ನನಗೆ ನುಡಿದ: ನೋಡು, ನಮ್ಮ ಸಂಗಡ ಬರಲು ಅಡ್ಡಿಯಿಲ್ಲ. ಆದರೆ ನಾವು ಹೇಳುವಂತೆಯೇ ನಡೆಯಬೇಕು. ಉತ್ತುಮಿಯ ಮನೆ ಬಂದಕೂಡಲೇ ನಮ್ಮೊಡನೆಯೇ ಒದರಬೇಕು: “ಚಿನ್ನಮ್ಮ, ಇಂದು ರಾತ್ರೆ ಬರ್ತೇವೆಯೇ.” ಈ ದೊಡ್ಡವರ ಕಾರಭಾರದಲ್ಲಿ ನನ್ನನ್ನು ಸೇರಿಸಿಕೊಂಡದ್ದು ಇದೇ ಮೊದಲು. ನನಗೆ ಆನಂದವಾಯಿತು- “ರಾತ್ರೆಗೆ ಬರ್ತೇವೆ.”
ಏಕೆ?
(ಕೆಂಪು ಮಶಿಯ ದೌತಿ ಎತ್ತಲೇ?)
ಏಕೋ. ಆದರೂ ಒದರಬೇಕು; ಅದರಲ್ಲೇನಂತೆ? ಉತ್ತುಮಿಯ ಮನೆ ಸಮೀಪಿಸುತ್ತಲೇ ಈ ಮೊದಲೇ ನಿಶ್ಚಿತವಾದಂತೆ ನಾಲ್ವರೂ ಒದರಿದೆವು.
“ಚಿನ್ನಮ್ಮ, ಇಂದು ರಾತ್ರೆಗೆ ಬರ್ತೇವೇ.”
ಆದರೆ ನನ್ನ ಬಾಯಲ್ಲಿ ಈ ವಾಕ್ಯ ಪೂರ್ಣಗೊಳ್ಳುವ ಮೊದಲೇ ಬಸ್ತ್ಯಾಂವ, ಆಂತೋನಿಯರೆಲ್ಲ ಬದುಕಿ ಇದ್ದರೆ ಬೇಡಿ ತಿಂದೇವು ಎನ್ನುವಂತೆ ಓಡಹತ್ತಿದರು-ಕುಂಡೆಗೆ ಕಾಲುತಾಗಿಸಿ. ಅವರೇಕೆ ಹಾಗೆ ಓಡಿಹೋದರು? ಹೀಗೆ ಒದರುವುದರಲ್ಲಿ ಏನಾದರೂ ಅಪರಾಧವಿದೆಯೇ? ಹೀಗೆ ಓಡುವುದೂ ಅವರ ಸಂಚಿನ ಅಂಗವಾಗಿತ್ತೇ? ಏನೂ ಅರಿಯದ ನಾನು ಒಬ್ಬಂಟಿಗನಾಗಿ ಹಿಂದುಳಿದುದರಿಂದ ಹೆದರಿ ಓಡಿಹೋಗಬೇಕು ಎನ್ನುವಷ್ಟರಲ್ಲಿ ದಣಪೆಯಲ್ಲಿ ಚಂಡಿಯ ಅವತಾರ:
ಉತ್ತುಮಿ!-
“ಈ… ಮಕ್ಕಳ ಮನೆ ಹಾಳಾಗಲಿಕ್ಕೆ” ಎಂದೇನೋ ಕೆಟ್ಟ ಬಯ್ಯುತ್ತ ನನ್ನ ಮುಂದೆ ನಿಂತಳು. ನಾವು ಒದರುವಾಗ ಅವಳು ಅಲ್ಲೇ ಹಿತ್ತಲಲ್ಲಿ ಗುಡಿಸುತ್ತಿರಬೇಕು. ಕೈಯಲ್ಲಿದ್ದ ಕಸಬರಿಗೆಯನ್ನು ಎತ್ತಿಕೊಂಡೇ ಬಂದಿದ್ದಳು.
ಅಬ್ಬಬ್ಬ! ಏನು ಆ ವೇಷ!!
ಉತ್ತುಮಿಯನ್ನು ಆ ವೇಷದಲ್ಲಿ ಈ ಮೊದಲು ಎಂದೂ ನೋಡಿರಲಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ಅಣ್ಣಂದಿರ ಮುದ್ದಿನ ಮೇಲೆ ದೊಡ್ಡವನಾದ ನನಗೆ ಉತ್ತುಮಿಯ ಈ ಅವತಾರ ನೋಡಿ ಎದೆ ‘ಕಲ್’ ಎಂದಿತು. “ಅಯ್ಯೋ ಅವ್ವಾ” ಎಂದು ಚಿಟ್ಟನೆ ಚೀರಿದೆ. ಆಗ ಮೊದಲೊಮ್ಮೆ ಉತ್ತುಮಿಗೆ ನನ್ನ ಗುರುತು ಹತ್ತಿತೋ ಎನ್ನುವಂತೆ ಒಮ್ಮೆಲೇ ಕೈಯೊಳಗಿನ ಕಸಬರಿಗೆಯನ್ನು ಬದಿಗೊಗೆದು, ನನ್ನ ಬಳಿ ಬಂದು ನನ್ನನ್ನು ಎದೆಗವಚಿ “ಅಯ್ಯೋ ನನಕಂದ, ನೀನೇ?” ಎಂದು ಮೈದಡವಿ ಸಂತೈಸಹತ್ತಿದಳು. “ನೋಡು, ನಾನು ನಿನ್ನನ್ನು ಬೈದುದಲ್ಲ. ನಿನ್ನನ್ನೆಂದಾದರೂ ಬೈದೇನೇ? ನಾನು ಬೈದುದು ಆ ಬಸ್ತ್ಯಾಂವ, ಆಂತೋನಿಯರಿಲ್ಲವೆ, ಅವರನ್ನು. ಏನು ಕೆಟ್ಟ ಹುಡುಗರು ಅವರು. “ಅವಳು ಸಿಟ್ಟಿಗೆದ್ದುದು ನಿಜವಾಗಿಯೂ ನನ್ನ ಬಗ್ಗೆ ಅಲ್ಲ ಎಂಬ ವಿಶ್ವಾಸ ಹುಟ್ಟಿ ನಾನು ಅಳುವುದನ್ನು ನಿಲ್ಲಿಸಿದ ಬಳಿಕ ತನ್ನ ಸೀರೆಯ ಸೆರಗಿನಿಂದ ನನ್ನ ಕಣ್ಣುಗಳನ್ನೊರೆಸುತ್ತ, ಗಲ್ಲ ಹಿಚುಕಿ, ಅಕ್ಕರೆಯಿಂದ ಕೇಳಿದಳು”
“ಏನೋ ಗುಲಾಮ, ಇಲ್ಲಿಗೇಕೆ ಬಂದೆಯೋ?”
ನಾನು ಬಿಕ್ಕುತ್ತ ನುಡಿದೆ: “ನನಗೆ ಕಲ್ಯಾಣಿ ಕೆಂಪು ಮಶಿಯ ದೌತಿ ಏಕೆ ಕೊಡಲಿಲ್ಲ?”
“ಅದಕ್ಕೇ ರಾತ್ರೆಗೆ ಬರ್ತೆ ಅಂದೆಯೋ ಕಳ್ಳ?” ಎಂದು ನನ್ನನ್ನು ನಗಿಸಲು ಯತ್ನಿಸಿ ಕೊನೆಗೆ ತುಸು ಗಂಭೀರವಾಗಿ, ಸೌಮ್ಯವಾದ ಬೆದರಿಕೆಯ ದನಿಯಲ್ಲಿ ಇಂತು ನುಡಿದಳು:
“ನೋಡು, ನೀನು ಎಂತಹ ಚಂದ ಹುಡುಗ, ಎಂತಹ ಜಾಣ. ನೀನು ಎಂತಹ ಒಳ್ಳೆಯವರ ಮಗ ಎಂದು ಗೊತ್ತಿದೆಯೇ? ನಿಮ್ಮ ಅಪ್ಪ, ಅಜ್ಜ ಎಲ್ಲರೂ ದೇವರಂತಹ ಮಂದಿ. ನೀನು ಅವರಂತೆಯೇ ಆಗಬೇಕು. ನಾವು ಕೀಳು ಜನ. ಕೆಟ್ಟ ಜನ. ನಮ್ಮಂತಹವರ ಮನೆಯ ಬಾಗಿಲಲ್ಲಿ ನೀನು ಕಾಲಿಡಕೂಡದು. ತಿಳಿಯಿತೇ? ಆ ಬಸ್ತ್ಯಾಂವ, ಆಂತೋನಿ ಇವರು ಕೆಟ್ಟ ಹುಡುಗರು. ಅವರ ಜೊತೆಗೆ ಬಿದ್ದು ಹಾಳಾಗಬೇಡ. ಇನ್ನೆಂದಿಗೂ ನಮ್ಮ ದಣಪೆಯ ಮುಂದೆ ಹಾಯಬೇಡ, ತಿಳಿಯಿತೇ?”
(ನನಗೆ ತಿಳಿದಿತ್ತೇ? ಏನು?)
ಇದನ್ನು ಆಲಿಸುವಾಗ ನನ್ನ ಮೋರೆಯ ಮೇಲೆ ಯಾವ ಭಾವ ಮೂಡಿತ್ತೋ ಉತ್ತುಮಿಯ ದನಿಯಲ್ಲಿ ಒಮ್ಮೆಲೇ ಕಾಠಿಣ್ಯ ಸೇರಿತು. “ಎಂದಾದರೂ ಹಾದೀಯೇ. ಅಪ್ಪನಿಗೆ ಹೇಳುವೆ!”
ತಿರುಗಿ ಮೊದಲಿನ ಭೀತಿ ಮರುಕಳಿಸಿತ್ತು. ಆಗ ಅಲ್ಲಿ ನಿಲ್ಲಲು ಧೈರ್ಯವಾಗ್ಲಿಲ್ಲ. ಉತ್ತುಮಿಯ ಕೈಯೊಳಗಿಂದ ಬಿಡಿಸಿಕೊಂಡು ಮನೆಯತ್ತ ಓಡಿದ್ದೆ: ಇಲ್ಲ ಇಲ್ಲ. ಇನ್ನೆಂದಿಗೂ ಇಲ್ಲ.
“ಅಪ್ಪನಿಗೆ ಹೇಳುವೆ!”
ಅಯ್ಯೋ ದೇವರೇ, ಅಪ್ಪನಿಗೆ ಹೇಳದಿರಲಿ, ಅಪ್ಪನೊಬ್ಬನಿಗೆ ಹೇಳದಿರಲೀ-
ಹೇಳಿದರೇನಂತೆ?
ಬಸ್ತ್ಯಾಂವ ಆಂತೋನಿಯರ ಪಲಾಯನ, ಉತ್ತುಮಿಯ ಚಂಡಿಯ ಅವತಾರ, ನನ್ನ ಓಟ!-
ಅಬ್ಬಬ್ಬ: ಅದೆಂತಹ ಭೀತಿ!
ಮುಂದೆ ಅನೇಕ ದಿನಗಳವರೆಗೆ ನನ್ನನ್ನು ಬೆದರಿಸಿ, ಗಾಸಿಗೊಳಿಸಿದ ಈ ಕರಾಳ ಭೀತಿಯ ಹಿಂದೆ ನಿಂತ ನನ್ನ ಅಪರಾಧವೇನು?- ಆ ಎಳೆಯ ಬಾಲಕನಿಗೆ ಕೊನೆಗೂ ಅರ್ಥವಾಗಲಿಲ್ಲ. ಆದರೆ ಇದೆಲ್ಲವನ್ನೂ ಆವರಿಸಿ ನಿಂತ ಆ “ಏನೋ-ಏನೋ” ಎಂಬ ‘ಗಂಡು-ಹೆಣ್ಣಿನ ಸಂಬಂಧದ’ ಅಸ್ಪಷ್ಟ, ಅಂಧುಕ, ಅರ್ಧ ಜಾಗೃತ ಪ್ರಜ್ಞೆಯಲ್ಲಿ ನನ್ನ ಗೆಳೆಯರು ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರವಿತ್ತೇ? ಇದೆ ಎಂದು ನನ್ನ ನಂಬಿಕೆ ಎಂದು ನಾನು ಅಂದು ಕತೆ ಮುಗಿಸಿದಾಗ ನನ್ನ ಮಾತು ಮುಗಿಯುವುದನ್ನೇ ಕಾಯುತ್ತ ಕುಳಿತ ನನ್ನ ಗೆಳೆಯರೊಬ್ಬರು ಅತಿ ಹುರುಪಿನಿಂದಲೇ ಮುಂದೆ ಬಂದು ನುಡಿದರು. ಇಂತಹ ವಿಷಯದ ನನ್ನ ಇಂದಿನ “ಸಂಭಾವಿತತನ”, ಅಪ್ಪಟ “ಮಡಿವಂತಿಕೆ” (ಢಾಂಭಿಕತೆ ಎನ್ನಲಿಲ್ಲ ನನ್ನ ಪುಣ್ಯ) ಇವೆಲ್ಲ ಅಂದು ಚಿಕ್ಕಂದಿನಲ್ಲಿ ನನ್ನ ಬಾಲಮನಸ್ಸು ಪಡೆದ ಆ ಭೀತಿಯ ಧಕ್ಕೆಯ ಪರಿಣಾಮಗಳಂತೆ. ಮಾನಸಶಾಸ್ತ್ರದಲ್ಲಿ ಇದಕ್ಕೆ ಅನೇಕ ಉದಾಹರಣೆಗಳಿವೆಯಂತೆ.
(ನನಗೆ ಇಂದು ಕೆಂಪು ಬಣ್ಣದ ಬಗ್ಗೆ ಇರುವ ಹೇಸಿಕೆಗೂ ಅಂದಿನ ಕೆಂಪು ಮಶಿಯ ದೌತಿಯ ಪ್ರಕರಣಕ್ಕೂ ಸಂಬಂಧವಿಲ್ಲ ತಾನೆ!)
ಅಹುದೇನೋ: ನಾನು ಮಾನಸಶಾಸ್ತ್ರವನ್ನು ಹೆಚ್ಚು ಅಭ್ಯಸಿಸಿಲ್ಲ. ಎಂದೋ ಒಮ್ಮೆ, ಅತಿ ಸಣ್ಣಂದಿನಲ್ಲಿ ನನ್ನ ಎಳೆ ಮನಸ್ಸನ್ನು ಹಿಡಿದು ನಡುಗಿಸಿದ ಈ ಭೀತಿ ನನ್ನ ಫ್ರೌಢ ಜೀವನದ ಮೇಲೆ ಅದಾವ ರೀತಿಯ, ಅದೆಷ್ಟು ಪ್ರಭಾವ ಬೀರಿದೆಯೋ ನಾನರಿಯೆ. ಆದರೆ ಇಷ್ಟೊಂದು ನಿಜ: ಅಂದು ಏನೂ ಅರಿಯದ ಒಬ್ಬ ಚಿಕ್ಕ ಬಾಲಕನ ಮುಂದೆ, ಬರಿಯೇ ಅವನ ಒಳಿತನ್ನೇ ಬಯಸಿ, ತಾನು ಕೀಳು ಜನ, ತಾನು ಕೆಟ್ಟವಳು, ತನ್ನ ದಣಪೆಯಲ್ಲೂ ಅವನು ಕಾಲು ಇಡಕೂಡದು ಎಂದು ತನ್ನನ್ನು ತಾನೇ ಹಳಿದುಕೊಂಡ ಆ ಬಡ ವೇಶ್ಯೆಯಲ್ಲೂ ಒಬ್ಬ ತಾಯ ಹೃದಯವನ್ನು ಕಂಡು ಅವಳ ವಿಷಯವಾಗಿ ಪ್ರಕಟವಾಗಿ ಅದರ ವ್ಯಕ್ತಗೊಳಿಸುವ ಧೈರ್ಯ ಹುಟ್ಟಿದ್ದು ಮಾತ್ರ ಮೊನ್ನೆ ಮೊನ್ನೆಯೇ.
*****
೧೯೫೬
ಕೀಲಿಕರಣ: ಸೀತಾಶೇಖರ
ಕೀಲಿಕರಣ ತಪ್ಪು ತಿದ್ದುಪಡಿ : ಶ್ರೀಕಾಂತ ಮಿಶ್ರಿಕೋಟಿ
