ರಂಗನತಿಟ್ಟಿನಲ್ಲಿ ಮೇ

ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ಹಾರುವ
ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ

ನವಿರು ನೀರಲ್ಲದ್ದಿ ಗಗನಕ್ಕೆ ನೆಗೆಯುವ
ರೆಕ್ಕೆಗಳಿಲ್ಲಾ ಇಸ್ತ್ರಿ ಹಾಕಿದ ಗಾಳಿ ಹರಿಯುವದೇ ಇಲ್ಲಾ
ಪಟ್ಟೆ ಪಟ್ಟೆ ಗರಿ ಕಣ್ಣು ಕೊಕ್ಕುಗಳು
ನಮ್ಮದಲ್ಲದ ಕಾಳು
ಹೆಕ್ಕಲಿಲ್ಲಾ ರಂಗನತಿಟ್ಟಿನಲ್ಲಿ

ಬಿಳಿಬಾತು ತಿಳಿನೋಟ ಮೋಡ ಮುತ್ತುವ ಸೃಷ್ಟಿ
ಉಣ್ಣೆಗೂಡುಗಳಲ್ಲಿ ಅರಳಲಿಲ್ಲಾ ನೋಡಲು ದೃಷ್ಟಿ
ನೇರವೇ ಆದ ಕಣ್ಣುಗಳಿಲ್ಲಾ
ಮುಳ್ಳು ಪೊದೆ ಕೇದಿಗೆ ಝರಿ ಎಲೆ ಜುಳು ಜುಳು ಏಕಾಂತ
ಹಾವು ತೆಕ್ಕೆಗಳು ಬರಿದು ಗೂಡುಗಳು
ಮಣ್ಣ ವಾಸನೆ ಹೊಡೆವ ಮೊಸಳೆ ಸಂತಾನಗಳು ಹೊರತು
ಚೀಂವ್ ಚೀಂವ್ ಜೋಡಿ ಎಲೆ ಹರ್‍ಷ ಆಹಾ ಉತ್ಕರ್‍ಷ
ಸೊಕ್ಕುವ ಯುಗಲಗಳಿಲ್ಲಾ ರಂಗನತಿಟ್ಟಿನಲ್ಲಿ

ದೋಣಿ ತೇಲುವ ಭಾವದಲೆಗುಂಟ ಸವೆದ ಹೆಜ್ಜೆಗಳು
ಸವೆದ ಹೆಜ್ಜೆಗಳೇ ದಾರಿ – ದಿಕ್ಕೆಟ್ಟು ತಳನಿಂತ
ಒಂಟಿ ದಿಬ್ಬಗಳು ದಿಬ್ಬಗಳೇ ಅಡ್ಡಾಗಿ ಸೇತುವೆಗಳು ವಿನಃ
ಹೃದಯ ತೆರೆದಿಟ್ಟು ಹಾಡುವ ಮಧುರ ಯಾತನೆ ಸಾರುವ
ಕ್ಷಣಗಳಿಲ್ಲಾ ರಂಗನತಿಟ್ಟಿನಲ್ಲಿ

ಕಾಲು ಸೋಲುವ ಕಾಲ ಇಲ್ಲಿ ಮುಗ್ಗರಿಸುವದೆ ಈ ತನಕ
ಕಾಲಕ್ಕೆ ಪ್ರಕೃತಿ ಕೊಟ್ಟಾ ಸಾಲ ಮುಂದುವರೆಯುವುದೆ
ಸೂತ್ರ ತಪ್ಪಿ ದಿನ ದಿನವು ದಿಕ್ಕು ಮರೆಯುವ ಹಕ್ಕಿ
ಮರಳಲಾರವೆ ಬೇಗ
ಇಲ್ಲಿ ಕಾವು ಕಾಯುವ ಮೊಟ್ಟೆಗಳಿಗೆ ಬಾಯಿಗಳೇ ಇಲ್ಲ
ಇಲ್ಲದ ಬಾಯಿಯ ಕಲ್ಪನೆ ಶಬ್ದಗಳಿಗಿಲ್ಲ
ಅಯ್ಯೋ ಶಬ್ದಗಳೇ ಇಲ್ಲಾ ರಂಗನತಿಟ್ಟಿನಲ್ಲಿ

ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ಕರೆಯುವ
ಹಕ್ಕೂ ನಮಗಿಲ್ಲಾ ರಂಗನತಿಟ್ಟಿನಲ್ಲಿ.
*****