ಸಂಧ್ಯಾ ರಾಗ – ೪

ಹುಟ್ಟು ಅಕ್ಕ-ತಂಗಿಯರು ಕೂಡ ಮೀನಾಕ್ಷಮ್ಮ ಸಾವಿತ್ರಮ್ಮನ ಹಾಗೆ ಇರಲು ಸಾಧ್ಯವಿರಲಿಲ್ಲ. ಸಾವಿತ್ರಮ್ಮನಂತೂ ಅಕ್ಕನ ಮಾತನ್ನು ವೇದವಾಕ್ಯದಂತೆ ಭಾವಿಸುತ್ತಿದ್ದಳು. ತನ್ನ ಕೆಯಲ್ಲಿ ಎಷ್ಟು ಸ್ವಾತಂತ್ರ್ಯವಿದ್ದರೂ ಅಕ್ಕನನ್ನು ಕೇಳದೆ ಒಂದು ಕೆಲಸಕ್ಕೂ ಹೊಗುತ್ತಿರಲ್ಲಿಲ್ಲ. ತಮ್ಮ ಸೊಸೆಯರಿಬ್ಬರೂ ಹೀಗೆ ಹೊಂದಿಕೊಂಡು ಒಂದೇ ರೆಂಬೆಯ ಎರಡು ಹೂಗಳಂತೆ ಅನ್ಯೋನ್ಯವಾಗಿದ್ದುದನ್ನು ಕಂಡು ಗೌರಮ್ಮನವರಂತೂ ಒಂದೇ ಸಮನೆ ಹಿಗ್ಗುತ್ತಿದ್ದರು.

ರಾಯರಿಗೆ ಮೊದಲು ಹೊಸ ಹೆಂಡತಿಯೊಡನೆ ವರ್ತಿಸುವುದು ಕಷ್ಟವಾಗುತ್ತಿತ್ತು. ಮೀನಾಕ್ಷಮ್ಮ ಅವರ ಜೀವನದೊಂದಿಗೆ ಬೆಳೆದುಬಿಟ್ಟಿದ್ದರು. ಏನು ಬೇಕಾದರೂ ಅವರಲ್ಲಿ ನಿರ್ವಂಚನೆಯಿಂದ ಹೇಳಬಹುದಾಗಿತ್ತು. ಸಾವಿತ್ರಿ ಎಲ್ಲಾ ವಿಷಯದಲ್ಲಿಯೂ ಚಿಕ್ಕವಳು. ಅನುಭವವೂ ಇಲ್ಲದವಳು. ಇವಳೊಂದಿಗೆ ಕೂಡಿದ ತಮ್ಮ ಬಾಳು ನಿಜವಾಗಿಯೂ ಸುಖಕರವಾಗಿರುತ್ತದೆಯೇ ಎಂದು ರಾಯರು ಯೋಚಿಸುವರು. ಮರುಕ್ಷಣವೇ ಸಾವಿತ್ರಿಯ ಮುಗ್ಧಮನೋಹರ ರೂಪವು ಅವರ ಸಂಶಯವನ್ನು ನಿವಾರಿಸುತ್ತಿತ್ತು.

ರಾಯರೂ ಅವರ ತಾಯಿಯೂ ಬಯಸುತ್ತಿದ್ದ ಸುದ್ದಿ ಬರಲು ಬಹು ತಡವಾಗಲಿಲ್ಲ. ಮೀನಾಕ್ಷಮ್ಮನವರೇ ಆ ಸುದ್ದಿಯನ್ನು ರಾಯರಿಗೆ ಮುಟ್ಟಿಸಿದರು. ರಾಯರು ಆನಂದದಿಂದ ಆಕಾಶಕ್ಕೆ ಹಾರಿದರು. ಗೌರಮ್ಮನವರಿಗಂತೂ ಹೊಸ ಪ್ರಾಯ ಬಂದಂತಾಯಿತು. ರಾಯರು ಇಷ್ಟು ಬೇಗನೆ ಇನ್ನೊಂದು ಶುಭ ಸಮಾಚಾರಕ್ಕೆ ಸಿದ್ದರಾಗಿರಲಿಲ್ಲ. ಸಾವಿತ್ರಮ್ಮನ ಸುದ್ದಿ ಮುಟ್ಟಿ ಆರು ತಿಂಗಳಾಗಿರಲಿಲ್ಲ ಮೀನಾಕ್ಷಮ್ಮನವರ ಬಯಕೆಯ ಸುದ್ದಿಯೂ ಮುಟ್ಟಿತು. ನಾನು ಎಷ್ಟು ಅವಸರಪಟ್ಟೆ ಮದುವೆಗೆ ಎಂದು ರಾಯರು ಅಂದುಕೊಳ್ಳುವರು. ಮರುಕ್ಷಣವೇ “ಅದರ ಉತ್ತರಾರ್ದವೇ ಇದಲ್ಲವೇ” ಎಂದು ಸಮಾಧಾನ ತಂದುಕೊಂಡರು. ರಾಯರ ಮನೆಗೆ ಹೊಸ ಕಳೆ ಬಂದುಬಿಟ್ಟಿತು. ಸೀಮಂತಗಳ ಮೇಲೆ ಸೀಮಂತ- ನಾಮಕರಣದ ಮೇಲೆ ನಾಮಕರಣ. ಮೊದಲೇ ಜನ ನಿಬಿಡವಾಗಿದ್ದ ಮನೆ ಈಗ ತುಂಬಿ ತುಳುಕಲಾರಂಭಿಸಿತು. ಸಾವಿತ್ರಿಯ ಬಾಣಂತನಕ್ಕೆ ಅವರ ಸೋದರತ್ತೆಯೇ ಬಂದು ನಿಂತರು. ಮೀನಾಕ್ಷಮ್ಮನವರ ಸೇವೆಗೆ ಊರಿನ ಮಹಿಳಾಮಂಡಳಿಯೇ ಬಂದು ನಿಂತಿತು. ರಾಜೋಪಚಾರಕ್ಕೆ ಮೀರಿದ ಸೇವೆ ನಡೆಯಲಾರಂಭವಾಯಿತು. ಕೆಗೊಬ್ಬರು ಕಾಲಿಗೊಬ್ಬರು ಮೀನಾಕ್ಷಮ್ಮನವರ ಸೇವೆಗೆ ಮುಂದುವರಿದರು. ರಾಮಚಂದ್ರ ತನ್ನ ತಮ್ಮ ಲಕ್ಷ್ಮಣನಿಗಿಂತ ಮೂರು ತಿಂಗಳಿಗಿಂತ ದೊಡ್ಡವನಾಗಿದ್ದ. ಈ ನಾಮಕರಣದ ಪ್ರಮೇಯದಲ್ಲಿ ಗೌರಮ್ಮನವರು ಯಾರ ಮಾತನ್ನೂ ನಡೆಯಕೊಡಲಿಲ್ಲ. “ಅಣ್ಣತಮ್ಮಂದಿರು ರಾಮಲಕ್ಷ್ಮಣರ ಹಾಗಿರಬೇಕು. ಅದಕ್ಕೋಸ್ಕರ ಮೀನನ ಮಗೂಗೂ ಸಾತು ಮಗೂಗೂ ರಾಮಲಕ್ಷ್ಮಣ ಎಂತಾಲೆ ಹೆಸರಿಡೋಣ” ಎಂದು ಹಟಹಿಡಿದರು. ರಾಮಲಕ್ಷ್ಮಣರು ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಹೇಗೆ ಅನ್ಯೋನ್ಯವಾಗಿ ಕಷ್ಟಸುಖಗಳಲ್ಲಿ ಒಂದಾಗಿ ಬಾಳಿ ಸೋದರ ಪ್ರೇಮದ ಆದರ್ಶಮೂರ್ತಿಗಳಾದರೋ ಹಾಗೇ ತಮ್ಮ ಸೀನುವಿನ ಮಕ್ಕಳೂ ಆಗಬೇಕಂದು ಗೌರಮ್ಮನವರ ಆಸೆ.

ಮೊದಲು ಮನೆಯನ್ನೇ ಸೇರದಿದ್ದ ರಾಯರು ಈಗ ಮನೆ ಬಿಡುವುದೇ ಕಷ್ಟವಾಗುತ್ತಿತ್ತು. ಅಮಲ್ದಾರರು ಜಮಾಬಂದಿಗೆ ಬಂದರೂ ಸರಿ, ಸಡಿವಿಜ ಸಾಹೇಬರು ಬಂದರೂ ಸರಿ, ರಾಯರಂತೂ ಮನೆಬಿಟ್ಟು ಕದಲುವ ಹಾಗಿರಲಿಲ್ಲ. ಅಮಲ್ದಾರರನ್ನ, ಸಡಿವಿಜ ಸಾಹೇಬರನ್ನ ಮನೆಗೇ ಕರೆಸಿಕೊಂಡು ಭರ್ಜರಿ ಔತಣ ಊಟ ಹಾಕಿ ಇಸ್ಪೆಕ್ಷ ಜಮಾಬಂದಿನೆಲ್ಲಾ ತಮ್ಮ ಜಗುಲಿಯ ಮೇಲೆ ಜರುಗಿಸಿಬಿಡುತ್ತಿದ್ದರು. ರಾಯರಿಗೆ ಪದೇ ಪದೇ ಇಸ್ಪೀಟಿಗೆ ಕೂಡುವ ಚಟವಿತ್ತು. ಎರಡು ದಿವಸಕ್ಕೊಮ್ಮೆಯಾದರೂ ನೆಲಾ ಗುಲಾಮನ್ನ ಕೆಯಾಡದಿದ್ದರೆ ಅವರಿಗೆ ತಿಂದ ಅನ್ನ ಮೆಗೆ ಹತ್ತುತ್ತಿರಲಿಲ್ಲ. ಅದನ್ನೇ ವಿನೋದವಾಗಿ ‘ಗೀತಾ ಪಾರಾಯಣ’ ಎಂದು ಕರೆಯುತ್ತಿದ್ದರು. ರಾಮಲಕ್ಷ್ಮಣರ ಲಾಲನೆ ಪಾಲನೆಯಲ್ಲಿ ರಾಯರು ‘ಗೀತಾಪಾರಾಯಣ’ವನ್ನು ಮರೆಯುತ್ತಲೆ ಬಂದರು. ಒಂದು ದಿನ ಶಾಮಣ್ಣ ಪರಿಹಾಸ್ಯಕ್ಕೆ:
“ರಾಯರು ಗೀತಾಪಾರಾಯಣಾನ ಅಲಕ್ಷ್ಯವೇ ಮಾಡಿಬಿಟ್ಟರಲ್ಲಾ!” ಎಂದು ಕೇಳಿದಾಗ ರಾಯರು ನಗುನಗುತ್ತಲೇ “ರಾಮಾಯಣ ಆರಂಭವಾಯಿತು, ಇನ್ನು ಗೀತೆ ಏಕಪ್ಪಾ” ಎಂದು ಮಾರುತ್ತರ ಹೇಳಿಬಿಡುತ್ತಿದ್ದರು. ನೆಲಾ ಗುಲಾಮರ ಗೀತೆಯನ್ನು ಮರೆತರೂ ಕುಮಾರವ್ಯಾಸನ ಗೀತೆಯನ್ನು ಮರೆಯಲಿಲ್ಲ. ರಾಯರಿಗೆ ಭಾರತ ಪಾರಾಯಣದ ಕಡೆಗೆ ಒಲವು ಹೆಚ್ಚುತ್ತ ಬಂದಿತು. ಆಡುವ ಮಕ್ಕಳನ್ನು ಎದುರಿಗೆ ಮಲಗಿಸಿಕೊಂಡು ಆನಂದವಾಗಿ ತಮ್ಮ ಕರ್ಣವೃತ್ತಾಂತ, ಅಕ್ಷಯಪಾತ್ರೆ, ದ್ರೌಪತಿ ವಸ್ತಾಪಹರಣ,ರಾಜಸೂಯಯಾಗ ಸಂಧಿಗಳನ್ನು ಓದಿಸಿ ಕೇಳಿ ಆನಂದಪಡುತ್ತಿದ್ದರು. ತಮ್ಮ ಮಕ್ಕಳು ಈ ವಾತಾವರಣದಲ್ಲಿಯೇ ಬೆಳೆದು ಕರ್ಣ ಕೃಷ್ಣ ಅರ್ಜುನ ಅಭಿಮನ್ಯುಗಳಂತೆ ಮಹಾವ್ಯಕ್ತಿಗಳಾಗಬೇಕೆಂದು ರಾಯರ ಹಂಬಲ. ಈ ಸಂದರ್ಭಗಳಲ್ಲಿ ತಮ್ಮ ಬಾಲ್ಯವನ್ನು ಜ್ಞಾಪಿಸಿಕೊಳ್ಳುವರು. ತಮ್ಮ ತೀರ್ಥರೂಪರು ಮುಸುಕಿನ ಒಳಗೆ ಕೂಡಿಸಿಕೊಂಡು ಅಮರವನ್ನೂ, ಸುಭಾಷಿತ ಶತಕಗಳನ್ನೂ, ಭಾರತ ಭಾಗವತ ರಾಮಾಯಣಗಳಿಂದ ಸ್ವಾರಸ್ಯವಾದ ಪದ್ಯಗಳನ್ನೂ ಕಂಠಪಾಠ ಮಾಡಿಸುತ್ತಿದ್ದ ರೀತಿಯನ್ನು ವರ್ಣಿಸುತ್ತಿದ್ದರು.
ಒಂದು ದಿನ ರಾಯರು ಮಕ್ಕಳನ್ನಾಡಿಸುತ್ತಾ ಕುಳಿತಿದ್ದಾಗ ವಿನೋದಕ್ಕೆಂದು “ಸಾತೂ, ನಿನ್ನ ಮಗ ಬೆಳೆದು ದೊಡ್ಡವನಾದ ಮೇಲೆ ಏನಾದರೆ ನಿನಗೆ ಸಂತೋಷವೇ? ” ಎಂದು ಕೇಳಿದರು. ಸಾವಿತ್ರಮ್ಮ ಮೊದಲು ನಾಚಿದಳು. ಅಕ್ಕನ ಕಡೆ ನೋಡಿದಳು. ಅವರು ಕಣ್ಸನ್ನೆಯಲ್ಲೇ ಧೆರ್ಯವನ್ನು ಕೊಡಲು, ಸಣ್ಣ ಧ್ವನಿಯಲ್ಲಿ “ದೊಡ್ಡ ಆಫೀಸರಾಗಬೇಕಂದು ನನ್ನ ಆಸೆ ” ಎಂದು ಹೇಳಿದರು. ರಾಯರು ” ಶಹಭಾ’ ಎಂದಂದು ಮೀನಾಕ್ಷಮ್ಮನವರ ಕಡೆ ತಿರುಗಿ ” ನಿನಗೇ ಮೀನಾ? ”
ಮೀನಾಕ್ಷಮ್ಮ ತುಸು ಯೋಚಿಸಿದರು. ಅವರ ಮುಖದ ಭಾವ ಗಾಂಭೀರ್ಯವನ್ನು ತಾಳಿತು.
“ನನ್ನಮಗ ಏನಾದರೂ ಸರಿ , ಬಡವರಾಧಾರಿಯಾದರೆ ನನಗೆ ಸಂತೋಷ ” ಎಂದರು.
ರಾಯರ ಬಾಯಲ್ಲಿ ಮಾತೇ ಹೊರಡಲಿಲ್ಲ. ಗೌರಮ್ಮನವರು ಮಾತ್ರ ” ಚಿನ್ನದಂಥಾ ಮಾತು ಆಡಿದೆ ಕಣೇ ತಾಯಿ”.
*****
ಮುಂದುವರೆಯುವುದು