ನನಗೆ ನನ್ನವಳೆ ಹೆಂಡತಿಯಿರುವಳು
ಉಳಿದರ ಜೊತೆ ನಾ ಕೂಡಿಲ್ಲ;
ಯಾರೂ ಅನ್ನರು “ಜಾರೆಯ ಗಂಡ”
ಬೇರೆ ಮಿಂಡರದು ಭಯವಿಲ್ಲ.
ಖರ್‍ಚಿಗಿಹುದು ಒಂದಾಣೆ ನನ್ನ ಬಳಿ
ಯಾರುಪಕಾರವು ಬೇಕಿಲ್ಲ;
ಕೈಗಡ ಕೊಡುವದಕೇನೂ ಇಲ್ಲ,
ಮಂದಿಗೆ ಸಾಲವ ಬೇಡಿಲ್ಲ.
ಯಾರ ಮೇಲು ನನ್ನೊಡತನವಿಲ್ಲ,
ಯಾರ ಗುಲಾಮನು ನಾನಲ್ಲ:
ಹದನವಾದಗಲ ಕತ್ತಿ ಕೈಯೊಳಿದೆ
ಯಾರಿಗೆಂದು ನಾ ಬಾಗಿಲ್ಲ.
ಉಲ್ಲಾಸದಿ ನಾ ಸ್ವತಂತ್ರನಿರುವೆ
ಯಾರಿಗು ದುಃಖವ ಪಟ್ಟಿಲ್ಲ.
ಯಾರೂ ನನ್ನಯ ಕಾಳಜಿಮಾಡರು-
ಯಾರ ಲಕ್ಷ್ಯವೂ ನನಗಿಲ್ಲ.”
*****
ರಾಬರ್‍ಟ್ ಬರ್‍ನ್ಸ್ :: ‘I have a wife of my own’.
