ರಾಯರಿಗೆ ಮೊದಲಿನ ಬೇಸರ ನೀಗುತ್ತ ಬಂದಿತ್ತು. ಅವರಿಗೆ ಇಬ್ಬರು ಗೆಳೆಯರು ದೊರೆತಿದ್ದರು. ಒಬ್ಬರು ಬಹಳ ದಿವಸ ಜಯಪುರದ ಅರಣ್ಯಖಾತೆಯಲ್ಲಿಕೆಲಸ ಮಾಡಿ ನಿವೃತ್ತಿಯಾದಮೇಲೆ ಸ್ವಂತ ಊರಿಗೆ ಬಂದು ನೆಲೆಸಿದ್ದ ಭೀಮರಾಯರು. ಅವರು ಹುಟ್ಟು ಮೆಸೂರಿನವರೇ ಆಗಿದ್ದರೂ ಜಯಪುರದ ಭೀಮರಾಯರು ಎನ್ನುವ ಹೆಸರು ನೆಲೆಸಿತ್ತು. ಕಾಲ, ದೇಶ ನೋಡಿದ್ದರಿಂದ ಭೀಮರಾಯರಿಗೆ ಸ್ವಲ್ಪ ವಿಶಾಲವಾದ ದೃಷ್ಟಿಯೂ ಇತ್ತು. ಸಾಹಿತ್ಯ, ಸಂಗೀತಗಳಲ್ಲಿಯೂ ಅಭಿರುಚಿ ಇತ್ತು. ಬಾಳು ಸಂಧ್ಯೆಯನ್ನು ಸಮೀಪಿಸಿದ್ದರಿಂದ ದೆವ ಭಕ್ತಿಯೂ ಅಖಂಡವಾಗಿತ್ತು. ಬೆಳಿಗ್ಗೆ ಆರು ಘಂಟೆಗೆ ದೇವರ ಪೂಜೆಗೆ ಕುಳಿತರೆಂದರೆ ಯಾರು ಬಂದರೂ ೮ – ೮|| ತನಕ ಮುಗಿಸುತ್ತಿರಲಿಲ್ಲ. ಮಧ್ಯಾಹ್ನ ತಪ್ಪದೆ ಮಧ್ವವಿಜಯ ಅಥವಾ ಮಣಿಮಂಜರಿಯ ಪಾರಾಯಣ. ಒಬ್ಬರು ಪಂಡಿತರು ಬೇರೆ ಬಂದು ರಾಯರಿಗೆ ’ಸುಧಾ’ ಗ್ರಂಥದ ಪಾಠವನ್ನೂ ಹೇಳಿ ಹೋಗುತ್ತಿದ್ದರು. ಭೀಮರಾಯರು ದೊಡ್ಡ ಸಂಸಾರವಂದಿಗರು. ಅಂತಲೇ ಅವರಲ್ಲಿ ಲೋಭ,ಕಾರ್ಪಣ್ಯಾದಿ ಸಣ್ಣ ಗುಣಗಳಿರಲಿಲ್ಲ. ಅವರಿಗೆ ತುಂಬ ಮಾತುಬೇಕು. ರಾಯರ ಸ್ವಭಾವವೂ ಭೀಮರಾಯರ ಸ್ವಭಾವವೂ ಹಾಲೂಸಕ್ಕರೆ ಬೆರೆತಂತೆ ಬೆರೆಯುತ್ತಿದ್ದವು. ಇವರ ಇನ್ನೊಬ್ಬರು ಗೆಳೆಯರೆಂದರೆ ಲಾಯg ಸುಂದರರಾಯರು. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಪ್ರಸಿಧ್ದ ಲಾಯರುಗಳು ಯಾರು ಯಾರು ಎಂದು ಕೇಳಿದ್ದರೆ ಡಿ,ವೆಂಕಟರಾಮಯ್ಯನವರು, ಎ. ಶ್ರೀನಿವಾಸಯ್ಯಂಗಾರ್ಯರು, ಸುಂದರರಾಯರು ಎಂದು ಯಾರಾದರೂ ಧಾರಾಳವಾಗಿ ಹೇಳಿಬಿಡುತ್ತಿದ್ದರು. ವಯಸ್ಸಾಗಲು ಸುಂದರರಾಯರು ತಮ್ಮ ಆಫೀಸನ್ನು ಮಗನಿಗೆ ಒಪ್ಪಿಸಿ ತಾವು ವಿಶ್ರಾಂತಿ ಸುಖವನ್ನು ಅನುಭವಿಸುತ್ತಿದ್ದರು. ಸುಂದರರಾಯರ ಮಾತುಕತೆ ಭೀಮರಾಯರದಷ್ಟು ಸರಳವಲ್ಲ. ಸ್ವಲ್ಪ ವಕ್ರಮಾರ್ಗ, ನಲವತ್ತು ವರ್ಷಕಾಲ ಒಂದೇ ಸಮನೆ ವಕೀಲಿ ಮಾಡಿದುದರ ಪರಿಣಾಮ ಅವರ ಮೇಲೆ ಚೆನ್ನಾಗಿಯೇ ಆಗಿತ್ತು. ಯಾವದನ್ನೂ ಚರ್ಚೆಯಿಲ್ಲದೆ ವಿರೋಧವನ್ನು ಸೂಚಿಸದೆ ಅವರು ಒಪ್ಪಿಕೊಳ್ಳುತ್ತಲೇ ಇರಲಿಲ್ಲ, ಮಾತಿನಲ್ಲಿ ನಗೆ, ಕುಚೇಷ್ಟೆಗಳನ್ನು ಬೆರೆಸದೆ ಅವರು ಯಾವ ಅಭಿಪ್ರಾಯವನ್ನೂ ಸೂಚಿಸುತ್ತಿರಲಿಲ್ಲ. ಆದರೆ ದೃಷ್ಟಿ ಉದಾರವಾಗಿರುತ್ತಿದ್ದಿತು. ಕೀಳು ವಿಚಾರ ನಡತೆಗಳನ್ನು ಕಂಡರೆ ನಾಗಸರ್ಪದಂತೆ ಏಳುತ್ತಿದ್ದರು. ಈ ಮೂವರು ಗೆಳೆಯರು ಸಾಮಾನ್ಯವಾಗಿ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಲಾಬಾಗಿನಲ್ಲಿ ನೋಡಲಿ, ಶಂಕರಯ್ಯ ಹಾಲಿನಲ್ಲಿ ಆಗುವ ಸಂಗೀತ ಕಛೇರಿಯಲ್ಲಿ ನೋಡಲಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪನ್ಯಾಸ ಮಂದಿರದಲ್ಲಿ ನೋಡಲಿ, ಮೂವರು ರಾಯರು ಒಟ್ಟಿಗೇ ಇರುತ್ತಿದ್ದರು. ಕಛೇರಿ ನಡೆಯುತ್ತಿರುವಾಗಲೇ, ಉಪನ್ಯಾಸ ಸಾಗುತ್ತಿರುವಾಗಲೇ ಭೀಮರಾಯರಿಗೂ ಸುಂದರರಾಯರಿಗೂ ಚರ್ಚೆ ಆರಂಭವಾಗಿಬಿಡುತ್ತಿತ್ತು. ಶ್ರಾವಕರು ” ’ ಧ್ವನಿಯು ಅವರನ್ನು ಸುಮ್ಮನಾಗಿಸುತ್ತಿದ್ದಿತು. ಸುಂದರರಾಯರು ಮಾತುಕತೆಯಲ್ಲಿ ವಕ್ರವಷ್ಟೆ. ಆದರೆ ಅವರ ಅಭಿರುಚಿ ಮಾತ್ರ ಮಿಕ್ಕವರದ್ದಕ್ಕಿಂತಲೂ ಬಹಳ ಮುಂದು ಹೋಗಿತ್ತು. ಅವರು ಯಾವಾಗಲೂ ಧರಿಸುತ್ತಿದ್ದುದು ಅರ್ಧ ಅಂಗುಲ ಜರತಾರಿಯ ಬಾಬಾ ಅಂಚಿನ ಧೋತ್ರ, ಅದನ್ನು ಹಿಂದೆ ಮುಂದೆ ಚೆನ್ನಾಗಿ ತೀಡಿ ತೀಡಿ ಬಹಳ ನಾಜೂಕಾಗಿ ಲಕ್ಷಣವಾಗಿ ಉಡುತ್ತಿದ್ದರು. ಅಮಾವಾಸ್ಯೆಯಾಗಲಿ ಶನಿವಾರವಾಗಲಿ ದಿನ ಬಿಟ್ಟು ದಿನ ಮುಖಕ್ಷೌರ ಮಾಡಿಸಿಕೊಳ್ಳದೆ ಇರುತ್ತಿರಲಿಲ್ಲ. ಹೊರಗೆ ಹೊರಟರೆ ಮುಚ್ಚುಕಾಲರಿನ ಸeಕೋಟು, ಕಾಲಿಗೆ ಕರಿಯ ಸ್ಲಿಪ್ಪg, ಕೆಯ್ಯಲ್ಲಿ ದಂತದ ಹಿಡಿಯ ಬೆತ್ತ ಇದ್ದೇ ತೀರಬೇಕು. ಊಟ ತಿಂಡಿಗಳಲ್ಲಿಯೂ ಅಷ್ಟೇ. ಸುಂದರರಾಯರ ಪೊಗದಸ್ತು ಪ್ರಸಿಧ್ಧವಾಗಿತ್ತು. ಮಾಡುವ ತಿಂಡಿ ತುಪ್ಪದ್ದಾಗಿ ಸೊಗಸಾಗಿರಬೇಕಲ್ಲದೆ, ಅದನ್ನು ಕೊಡುವ ರೀತಿಯೂ ಅಷ್ಟೇ ಸೊಗಸಾಗಿರಬೇಕು. ಸುಂದರರಾಯರು ವೀಳೆಯದೆಲೆಯನ್ನು ಕೊಳ್ಳುತ್ತಿದ್ದುದು ಒಂದೇ ಅಂಗಡಿಯಲ್ಲಿ. ನಂಜುಂಡಪ್ಪ ಅವರಿಗೆ ಮೂವತ್ತುಐದು ವರ್ಷಗಳಿಂದ ಮೆಸೂರು ಚಿಗುರೆಲೆಯನ್ನು ಸರಬರಾಯಿ ಮಾಡುತ್ತ ಬಂದಿದ್ದ. ಇಡೀ ಪೆಂಡೆಯನ್ನೇ ಶೋಧಿಸಿ ಚಿನ್ನದ ಬಣ್ಣದ, ಎರಡು ಅಂಗುಲ ಅಳತೆಯ ಚಿಗುರೆಲೆಯನ್ನು ಆರಿಸಿ ಒಂದು ಕಟ್ಟಷ್ಟನ್ನು ರಾಯರಿಗೆ ಕೊಡುತ್ತಿದ್ದನು. ಅಡಿಕೆ ಸುಣ್ಣಗಳಲ್ಲಿಯೂ ಅದೇ ಸಿಸ್ತು, ಅದೇ ಚೆಲುವು. ಬಣ್ಣ ಕಟ್ಟದ ಅಡಿಕೆ, ಕೇಸರಿ ಹಾಕದ ಸುಣ್ಣ ಸುಂದರರಾಯರ ಮುಂದೆ ಸುಳಿಯಕೂಡದು. ಭೀಮರಾಯರೆಷ್ಟು ಮತಾಭಿಮಾನಿಗಳೋ ಸುಂದರರಾಯರಷ್ಟು ಮತ, ಧರ್ಮಗಳ ಹೊರಗಿದ್ದರು. ಈ ವಿಷಯದಲ್ಲಿ ಅವರಿಗೂ ಭೀಮರಾಯರಿಗೂ ದೊಡ್ಡ ಜಗಳವೇ ಹುಟ್ಟಿಬಿಡುತ್ತಿತ್ತು.
ಒಂದು ದಿವಸ ಸಂಜೆ ಗೆಳೆಯರು ಮೂವರೂ ಸುಂದರರಾಯರ ಮನೆಯಲ್ಲಿ ಸೇರಿದ್ದರು. ಉಪಹಾರವೂ ಆಯಿತು. ಲಘುವಾಗಿರಲೆಂದು ಸ್ವಲ್ಪ ಉಪ್ಪಿಟ್ಟು, ಎರಡೆರಡು ರಸಬಾಳೆಹಣ್ಣು, ಹೀರೇಕಾಯಿ ಬೋಂಡ, ರವೆವುಂಡೆ, ಕಾಫಿ ಇಷ್ಟೇ ಆಗಿತ್ತು. ಕೊನೆಗೆ ರಾಯರು ತಮ್ಮ ಪರಮಾಯಿಷಿಯೆಂದು ಹೆಸರುಬೇಳೆ ಹುರಕಲನ್ನು ತಂದು ಮುಂದೆ ಇಟ್ಟರು. ಬೇಡಬೇಡವೆನ್ನುತ್ತಲೇ ಬರೀ ತಟ್ಟೆಯನ್ನು ಒಳಕ್ಕೆ ಕಳುಹಿಸಿದ್ದಾಯಿತು. ತಾಂಬೂಲವನ್ನು ಹಾಕಿಕೊಳ್ಳುತ್ತಾ ಮಾತಿಗೆ ಮೊದಲಾಯಿತು. “ಏನು ಸುಂದರೂ ವಯಸ್ಸಾಗ್ತಾ ಆಗ್ತಾ ನಿಂಗೆ ಬಾಯಿ ಚಪ್ಪಲ ಹೆಚ್ಚಾಗ್ತಾ ಇದೇಂತ ಕಾಣತ್ತೆ” ಎಂದು ಭೀಮರಾಯರು ಕೀಟಲೆ ಆರಂಭಿಸಿದರು. “ಏನು ಚಪ್ಪಲ ಹೇಳು. ರಾಯರು ನಮ್ಮ ಮನೇಗೆ ಬರೋದು ಅಪರೂಪ. ಏನೋ ಗೋಪಾಳದ್ದು ಅಷ್ಟು ಬೋಂಡ ಉಪ್ಪಿಟ್ಟು ಮಾಡಿದರು.” “ಇದೇ ಗೋಪಾಳದ್ದು ಆದರೆ ಇನ್ನು ಸರಿಯಾಗಿ ಮಾಡಿಸಿದರೆ ಹೇಗಿರುತ್ತೋ?” ಎಂದರು ರಾಯರು. “ಸದ್ಯ ನಿಮ್ಮ ಧರ್ಮ ಸುಮ್ಮನಿರಿ. ಸುಂದರೂ ಅದಕ್ಕೂ ಸೆ. ನಾಳೆ ಮಗೂಗೆ ಹುಟ್ಟಿದ ಹಬ್ಬ ಎಂದು ಹೆಸರಿಟ್ಟು ನಮ್ಮನ್ನು ಕೊಂದೇ ಬಿಡುತ್ತಾನೆ.” “ನಿಜಕಣಯ್ಯಾ. ನಾಳೆ ನಿಜವಾಗಿಯೂ ಮಗೂಗೆ ಹುಟ್ಟಿದಹಬ್ಬ ನನ್ನ ಮಗೂಗಲ್ಲ-ಮೊಮ್ಮಗೂಗೆ-ರಾಯರೂ ನೀನೂ ಇಲ್ಲೇ ಬಂದುಬಿಡಿ ಊಟಕ್ಕೆ.” “ನಾನು ಪರಿಹಾಸಕ್ಕೆ ಅಂದರೆ ಅದು ನಿಜವೇ ಆಗೋಣೇ. ಆಗಲಪ್ಪಾ ನಿನ್ನ ಸಂತೋಷ. ನೀವು ರಾಯರೇ?” “ನಾನು ತಪ್ಪಿಸಿಕೊಳ್ಳುತ್ತೇನೆಯೇ?” ಗೆಳೆಯರಲ್ಲಿ ತಾವು ಒಂದು ಮನೆಯವರು ಎಂಬ ಭಾವನೆಯಿತ್ತು. ಸುಖದಲ್ಲಿ ದುಃಖದಲ್ಲಿ ಎರಡರಲ್ಲಿಯೂ ಒಂದಾಗಿದ್ದರು. ಯಾರಿಗೆ ಯಾವಕಷ್ಟ ಬರಲಿ,ಮನೆಯಲ್ಲಿ ಏನು ಘಟನೆ ಸಂಭವಿಸಲಿ ಮಿಕ್ಕ ಇಬ್ಬರು ಹೇಳಿಕೊಂಡು ಸಲಹೆ ಕೇಳದಿದ್ದರೆ ಸಮಾಧಾನವಿಲ್ಲ. ಅವರಲ್ಲಿ ಯಾರ ಮನೆಯಲ್ಲಿ ಏನು ಹೆಚ್ಚುಗಟ್ಟಳೆಯಾಗಲಿ, ತಿಂಡಿ ತೀರ್ಥವಾಗಲಿ ಮಿಕ್ಕವರಿಗೆ ಕೊಟ್ಟಹೊರತು ತೃಪ್ತಿಯಿಲ್ಲ. ಸುಂದರರಾಯರಿಗೆ ಏನಾದರೂ ತಿನ್ನಬೇಕೆಂದು ಮನಸ್ಸಾಯಿತು, ಅವರು ನಿರ್ಭಯವಾಗಿ
“ಭೀಮಾ, ನಾಳೆ ಒಂದಿಷ್ಟು ತೊಗರಿನುಚ್ಚಿನ ಉಂಡೆ, ಹಸೀಮಜ್ಜಿಗೆ ಪಳಿದ್ಯ ಮಾಡಿಸಿಬಿಡು. ನಾನೂ ರಾಯರೂ ಅಲ್ಲೇ ಒಕ್ಕರಿಸಿಬಿಡುತ್ತೇವೆ”ಎಂದು ಹೇಳುತ್ತಿದ್ದರು. ರಾಯರಿಗೆ ಅಂಬೋಡೆ ತಿನ್ನಬೇಕೆನಿಸಿದರೆ ಭೀಮರಾಯರ ಮನೆಯಿಂದ ಸರಬರಾಯಿ ನಡೆದು ಹೋಗುತ್ತಿತ್ತು. ಮಾತಿಗೆ ಕುಳಿತುಬಿಟ್ಟರಂತೂ ಸರಿಯೇ ಸರಿ. ಮನೆಯವರೆಲ್ಲಾ ಊಟ ಮುಗಿಸಿ, ಕೆಲಸ ಕಾರ್ಯಗಳನ್ನು ತೀರಿಸಿ ಮಲಗಿ ಒಂದು ನಿದ್ರೆಯನ್ನು ಮಾಡಿರುತ್ತಿದ್ದರು. ಎಷ್ಟು ಮಾತನಾಡಿದರೂ ಹೊಸ ವಿಷಯಗಳು ಬರುತ್ತಲೇ ಇರುತ್ತಿದ್ದವು. ಆ ದಿನದ ಮಾತು ಹಾಗೂ ಹೀಗೂ ಹಾರಾಡಿ ಹುಡುಗರ ವಿದ್ಯಾಭ್ಯಾಸದ ಕಡೆ ಹೊರಳಿತು.
“ನಿಮ್ಮ ಲಕ್ಷ್ಮಣಾ ಕೊನೆಗೆ ಏನು ಮಾಡುತ್ತಾನೆ?” ಎಂದು ಸುಂದರರಾಯರು ಕೇಳಿದರು. ಆ ಸಂಗೀತ ಪಾಠಕ್ಕೆ ಹೋಗುತ್ತಿದ್ದಾನೆ. ನೂರು ಕೀರ್ತನೆ ತನಕ ಆಗಿದೆಯಂತೆ. ಹಗಲೂ ರಾತ್ರಿ ಅಭ್ಯಾಸ ಮಾಡಿಕೊಳ್ಳುತ್ತಾನೆ. ತನ್ನ ತಂಗೀಗೂ ಪಾಠ ಹೇಳಿಕೊಡುತ್ತಾನೆ. ನನಗೆ ದೊಡ್ಡ ಯೋಚನೆಯಾಗಿದೆ ನೋಡಿ.” “ಏನು ಸಂಗೀತವೋ? ಅದರಲ್ಲಿ ಏನಾಗುತ್ತೆ ಹೇಳಿ. ಮೆಸೂರಿನ ತುಂಬ ಸಂಗೀತಗಾರರೇ. ಸಮಾಜದ ಕಛೇರಿಗಳನ್ನು ನಾವೇ ನೋಡುತ್ತಾ ಇಲ್ಲವೇ? ಹೊರಗಿನಿಂದ ಯಾವ ‘ಅಯ್ಯರು’ ಬಂದರೂ ಹಣ ಕೊಡುತ್ತಾರೆ ನಮ್ಮ ಜನ. ಹಿತ್ತಲ ಗಿಡ ಮದ್ದಲ್ಲ.” “ನಮ್ಮ ಜನವೂ ಹಾಗೇ ಮಾಡಬೇಕು. ಹೊರಗೆ ಹೋಗಿ ತಿರಚನಾಪಳ್ಳಿ ತಂಜಾವೂರುಗಳಲ್ಲಿ ಕಛೇರಿಮಾಡಿ ಕೊಳ್ಳೆ ಹೊಡೆದುಕೊಂಡು ಬರಬೇಕು” ಎಂದರು ಭೀಮರಾಯರು. “ಅದೆಲ್ಲಿ ಸಾಧ್ಯ ಭೀಮರಾಯರೇ. ನಮ್ಮ ಜನಕ್ಕೆ ಅಭಿಮಾನವಿಲ್ಲ. ಹೊರಗಿನಿಂದ ಯಾರು ಬಂದರೂ ಅವರಿಗೆ ಪಥ್ಯ. ತಂಜಾವೂರು ತಿರುಚುನಾಪಳ್ಳಿಯ ಜನರ ರೀತಿಯೇಬೇರೆ- ಅವರಿಗೆ ತಮ್ಮವರು ಅಂದರೆ ಪ್ರಾಣ. ಹೊರಗಿನವರಿಗೆ ಒಂದು ಪಂಚಪಾತ್ರೆ ಗಂಗಾಮೃತ ಕೂಡ ಕೊಡುವುದಿಲ್ಲ.”
“ನಿಜ, ನಿಜ.”
“ಒಂದು ದಿವಸ ನಿಮ್ಮ ಲಕ್ಷ್ಮಣನನ್ನು ಕೇಳಬೇಕು ರಾಯರೇ” ಎಂದು ಸುಂದರರಾಯರು ತಮ್ಮ ಬಹಳ ದಿವಸಗಳ ಆಸೆಯನ್ನು ವ್ಯಕ್ತಪಡಿಸಿದರು.
“ಅದೇ ಕಷ್ಟ ನೋಡಿ. ನಾನು ಕೂಡ ಸರಿಯಾಗಿ ಕೇಳಿಲ್ಲ ಅವನ ಸಂಗೀತ. ತಾನು ಚೆನ್ನಾಗಿ ಕಲಿತು ಗುರುವಿಗೆ ಮೊದಲು ಅರ್ಪಿಸಿದ ಹೊರತೂ ಯಾರ ಮುಂದೆಯೂ ಹಾಡುವುದಿಲ್ಲವಂತೆ. ಈ ಮಾತನ್ನು ಒಂದು ರೀತಿಯಾಗಿ ನಯವಾಗಿ ಹೇಳುತ್ತಾನೆ ನೋಡಿ- ನಮಗೇ ಏನೋ ಒಂದು ತರಹೆ ಕನಿಕರ ಹುಟ್ಟುತ್ತೆ. ಹುಡುಗ ಜಂಭದಿಂದ ಆ ಮಾತು ಆಡಲ್ಲ. ಅವನ ಅಂತಃಕರಣದಿಂದ ಮಾತು ಬರುತ್ತದೆ.”
“ಅನಂತಾಚಾರ್ಯರು ನನಗೆ ಸಿಕ್ಕಿದ್ದರು. ಪ್ರಸಂಗವಸಾv ಲಕ್ಷ್ಮಣನ ಮಾತೂ ಬಂತು. ‘ಹೇಗಿದ್ದಾನೆ ಶಿಷ್ಯ?’ ಎಂದು ಕೇಳಿದೆ. ‘ಶಿಷ್ಯ ಏನು ಬಂತು ಸ್ವಾಮಿ! ಗುರು- ಗುರುವಾಗಿದ್ದಾನೆ. ಅವನೊಬ್ಬ ಯುಗಪುರುಷ. ಅವನ ಹೆಸರು ಹೇಳಿ ಮಿಕ್ಕವರು ಸಂಗೀತಕ್ಕೆ ಕೆಹಾಕಬೇಕಾಗುತ್ತದೆ ನೋಡಿ’ ಎಂದು ಹೇಳಿದರು. ಅಂದಿನಿಂದ ನನ್ನ ಕುತೂಹಲ ಹೆಚ್ಚುತ್ತಾ ಇದೆ ನೋಡಿ” ಎಂದು ಸುಂದರರಾಯರು ಹೇಳಿದರು.
“ಈ ಸಲ ರಾಮು ಮೆಟ್ರಿP ಪರೀಕ್ಷೆಗೆ ಕೂಡುತ್ತಾನಲ್ಲವೇ?”ಎಂದು ಭೀಮರಾಯರು ಕೇಳಿದರು.
“ಹೌದು.”
“ಒಂದು ವಿಷಯ ಮರೆತಿದ್ದೆ ರಾಯರೇ” ಎಂದು ಸುಂದರರಾಯರು ರಾಗವಾಗಿ ತೆಗೆದರು. ಅವರ ಹೇಳುವ ರೀತಿಯಲ್ಲಿದ್ದ ಸಂಕೋಚವನ್ನು ನೋಡಿ ರಾಯರು ಹೇಳಿ ಸಂಕೋಚವೇಕೆ” ಎಂದು ಧೆರ್ಯಕೊಟ್ಟರು.
“ಇವತ್ತು ಬೆಳಿಗ್ಗೆ ನಮ್ಮ ಗುಮಾಸ್ತರು ನಂಜುಂಡಯ್ಯನವರು ತಮ್ಮ ತಂಗಿಯ ಮಗನನ್ನು ಕರೆದುಕೊಂಡು ಬಂದಿದ್ದರು. ಬಹಳ ಬಡವರಂತೆ. ಹುಡುಗ ಮೆಟ್ರಿP ಕ್ಲಾಸಿನಲ್ಲಿ ಓದುತ್ತಾ ಇದ್ದಾನೆ. ಯಾರಾದರೂ ನಿಮ್ಮಂತಹವರು ಹುಡುಗನನ್ನು ಮನೆಯಲ್ಲಿಟ್ಟುಕೊಂಡು ಅನ್ನ ಬಟ್ಟೆ ಕೊಟ್ಟು ವಿದ್ಯಾದಾನ ಮಾಡಬೇಕೆಂದು ಕೇಳಿಕೊಂಡರು. ಅವರು ಹೇಗೋ ನಿಮ್ಮ ಜನ-ನಿಮ್ಮನ್ನು ಒಂದು ಮಾತು ಕೇಳಿ ನೋಡುತ್ತೇನೆ. ಎಂದು ಹೇಳಿಕಳುಹಿಸಿದೆ.”
“ಹೇಗೂ ನಿಮ್ಮ ಮಗನೂ ಪರೀಕ್ಷೆಗೆ ಕಟ್ಟುತ್ತಾನೆ. ಜತೆಗೆ ಓದೋದಕ್ಕೆ ಇವನೂ ಆಗುತ್ತಾನೆ” ಎಂದು ಭೀಮರಾಯರು ಸೂಚಿಸಿದರು.
“ಎಷ್ಟು ವಯಸ್ಸು?”
“ಅವನಿಗೆ ೧೬-೧೮ ಇರಬೇಕು.”
“ಕಳುಹಿಸಿ ಪಟ್ಟಣವಾಸ-ಯಾರಿಗಾದರೂ ಕಷ್ಟ. ನಾಲ್ಕು ಜನ ಇರೋ ಮನೆಯಲ್ಲಿ ಇನ್ನೊಂದು ತುತ್ತು ಅನ್ನ ಇಲ್ಲವೇ?” ಎಂದು ರಾಯರು ಒಪ್ಪಿಗೆಯನ್ನಿತ್ತರು.
ಸುಂದರರಾಯರಿಗೆ ಆನಂದವಾಯಿತು.
“ಮಹಾರಾಯರಪ್ಪಾ ನೀವು ಆ ಶ್ರೀನಿವಾಸ ಅನ್ನೋ ಹೆಸರಿರೋರು ಹೀಗೇಂತ ಕಾಣತ್ತೆ. ಕರ್ಪೂರ ಶ್ರೀನಿವಾಸರಾಯರಿದ್ದರು ನೋಡಿ. ಅವರೂ ಹಾಗೇನೇ ಮಹಾನುಭಾವರು ಎಷ್ಟು ಜನ ಬಡ ಹುಡುಗರಿಗೆ ಅನ್ನ ಹಾಕಿ ವಿದ್ಯಾದಾನ ಮಾಡಿದರೂಂತೀರಿ.”
“ಈ ಕಾಲದಲ್ಲಿ ಹುಡುಗರಿಗೆ ಬಹಳ ಕಷ್ಟ ನೋಡಿ. ಬೆಂಗಳೂರು ಮೆಸೂರಿಗೆ ಬಂದ ಹೊರತು ಮುಂದೆ ವಿದ್ಯೆ ಸಾಗುವ ಹಾಗಿಲ್ಲ. ಇಲ್ಲಿ ಬಂದರೋ ಒಪ್ಪತ್ತು ಅನ್ನ ಕಾಣೋದು ಕಷ್ಟ. ವಾರಗಳು ಸಿಕ್ಕುವುದಿಲ್ಲ. ಭಿಕ್ಷಾನ್ನದ ಹುಡುಗರ ಪಾಡಂತೂ ದೇವರಿಗೇ ಪ್ರೀತಿ. ನಮ್ಮ ಮನೆಗೆ ಒಬ್ಬ ಒಳಗಿನಿಂದ ಅನ್ನ ತರುವುದು ತಡವಾಯಿತು ಎಂದು ಕಾಣತ್ತೆ. ಹಾಗೇ ಕುಸಿದು ಬಿದ್ದ. ನೀರೂಗೀರೂ ತಟ್ಟಿ ಎಬ್ಬಿಸಿದೆವು. ‘ಯಾಕೋ ಮಗೂ ಬಿದ್ದುಬಿಟ್ಟೆ’ ಎಂದು ಕೇಳಿದ್ದಕ್ಕೆ ‘ಅನ್ನ ಕಂಡು ಮೂರು ದಿವಸವಾಯಿತು ಸಾg, ನಿನ್ನೆ ಯಾರೋ ತಂಗಳು ಹಾಕಿದರು. ತಿಂದು ವಾಂತಿಮಾಡಿಕೊಂಡೆ’ ಎಂದು ಹೇಳಿದ. ಊಟಕ್ಕೆ ಅನುಕೂಲವಾಗದಿದ್ದ ದಿವಸವೆಲ್ಲಾ ಇಲ್ಲೇ ಬಂದು ಬಿಡಪ್ಪ’ ಎಂದು ಹೇಳಿದೆ. ಇಂತಹ ಹುಡುಗರು ಈ ಬೆಂಗಳೂರು ಪೇಟೇಲಿ ಎಷ್ಟು ಜನವೋ?”
“ಕಂಡವರ ದುಡ್ಡು ಮೇದು ಬೊಜ್ಜು ಬೆಳೆಸುತ್ತಾರಲ್ಲ. ನಿಮ್ಮ ಮಠಾಧಿಪತಿಗಳು ಅವರೇಕೆ ಹಾಸ್ಟಲುಗಳನ್ನು ತೆಗೆದು ಹುಡುಗರಿಗೆ ಅನ್ನಾ ಹಾಕಬಾರದು. ಆ ಚಿತ್ರದುರ್ಗದ ಸ್ವಾಮಿಗಳನ್ನು ನೋಡು. ಮಹಾನುಭಾವ ಎಲ್ಲಿ ಹೋಗಲಿ ಒಂದು ಹಾಸ್ಟ. ಆ ಬುಧ್ದಿ ನಿಮ್ಮ ಹಾರುವ ಮಠಗಳಿಗಿಲ್ಲಪ್ಪಾ. ನಾಚಿಕೆಗೇಡು. ಉಡುಪಿ ಮಠಗಳೇ ಸಾಲದೆ ದುರ್ವ್ಯಯಕ್ಕೆ ನಿದರ್ಶನ” ಎಂದು ಸುಂದರರಾಯರು ತಮ್ಮ ಬತ್ತಳಿಕೆಯನ್ನು ಬಿಚ್ಚಿದರು.
“ನೀನು ಮಠಗಳನ್ನು ಬಯ್ಯೋದು ಬಿಟ್ಟುಬಿಡು ಸುಂದರೂ. ಊರಿನಲ್ಲಿ ಇಷ್ಟು ಜನ ಶ್ರೀಮಂತರಿದ್ದಾರಲ್ಲಾ ಅವರೇನು ಮಾಡುತ್ತಿರುತ್ತಾರೆ. ಸಿಕ್ಕುಸಿಕ್ಕದ್ದಕ್ಕೆ ಖರ್ಚುಮಾಡುವ ಹಣವನ್ನು ಇದಕ್ಕೇಕೆ ವಿನಯೋಗ ಮಾಡಬಾರದು?”
“ಅವರಿಗೆ ಮೂರು ಮೂರು ದಿವಸಕ್ಕೆ ಹೊಸ ಹೊಸ ಮೋಟಾರು. ಕಾರಿಗಳಿಗೆ, ತಾಫೆ ಜಾನಕೀಯರಿಗೆ ಕೊಡೋದಿಕ್ಕೇ ಹಣ ಸಾಲದು. ಇನ್ನು ಇವುಗಳಿಗೆಲ್ಲಾ ದುಡ್ಡು ಎಲ್ಲಿಂದ ತರುತ್ತಾರಯ್ಯಾ?”
“ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂದು ಗಾದೆ ಹೇಳಿದ ಹಾಗೆ ಬಡಹುಡುಗರನ್ನು ಕೇಳುವವರು ದಿಕ್ಕಿಲ್ಲ” ಎಂದು ಶ್ರೀನಿವಾಸರಾಯರು ಮುಕ್ತಾಯವನ್ನು ಸೂಚಿಸಿದರು. ಎಲ್ಲರೂ ಎದ್ದು ಲಾಲಬಾಗಿನ ಕಡೆ ಸಂಜೆ ವಿಹಾರಕ್ಕೆ ಹೊರಟರು.
*****
ಮುಂದುವರೆಯುವುದು
