ಮೋಡಗಳು ನಾವು

ಬಾನು ತನ್ನನವರತ ನೀಲಿಮೆಯ ದಿಟ್ಟಿಸುತ
ಕನಸುಗಳ ಕಾಣುತಿಹುದು;
ಮೋಡಗಳು ನಾವದರ ವಿಪರೀತ ಹುಚ್ಚುಗಳು
ನಮಗಿಲ್ಲ ಮನೆಯಾವುದೂ.

ನಿತ್ಯತೆಯ ಮುಕುಟದಲಿ ನಕ್ಷತ್ರ ಹೊಳೆಯುತಿವೆ
ಸ್ಥಿರ ಲಿಖಿತ ರೂಪವಿಹುದು;
ನಮ್ಮದೋ ಬರಿ ಸೀಸಕಡ್ಡಿ ಬರೆದಂತಿಹುದು-
ಮರು ಚಣದಿ ಆಳಿಸಬಹುದು.

ವಾಯುರಂಗದಿ ಬಂದು ಮದ್ದಲೆಯ ಬಡಿಯುವದು
ನಗೆ ಮಿಂಚನೆಸೆವ ಪಾತ್ರ,
ಅಲ್ಲದೆಯೆ ನಮ್ಮ ನಗೆ ಮಳೆ ಸುರಿಸುವದು ಸತ್ಯ
ಹುಡುಗಾಟವಲ್ಲ ಗುಡುಗು.

ಈಗಲೂ ಪ್ರತಿಫಲಕೆ ಕಾಲಪುರುಷನ ಕೂಡ
ಹಕ್ಕು ಸಾಧಿಸುತಿಲ್ಲ ನಾವು.
ಜೀವ ತುಂಬಿದ ಉಸಿರೆ ಊದಿಬಿಡುವದು ದೂರ
ಹೆಸರೊಂದನೀವ ಮೊದಲು.
*****
ರವೀಂದ್ರರ ‘Lover’s Gift’: 46