ಸಂಧ್ಯಾ ರಾಗ – ೧೩

ಹೀಗಾಡುತ್ತಾ ಹಾಗಾಡುತ್ತಾ ಲಕ್ಷ್ಮಣನ ಮದುವೆಯೂ ಬಂದೇ ಬಿಟ್ಟಿತು. ಲಕ್ಷ್ಮಣನ ಇಚ್ಚೆಯಂತೆ ಒಂದೇ ದಿವಸದಲ್ಲಿ ಕಾರ್ಯಕಲಾಪಗಳೆಲ್ಲಾ ಮುಗಿದು ಹೋದವು. ರಾಮುವು ಪುಣೆಗೆ ಹೋಗಿದ್ದವನು ಲಗ್ನಕ್ಕೆ ಬಂದು ಹೋದ. ತಮ್ಮನ ಮೇಲೆ ಇಷ್ಟು ಸೌಜನ್ಯವನ್ನು ತೋರಿದನಲ್ಲಾ ಎಂದು ಎಲ್ಲರೂ ಸಂತೋಷಪಟ್ಟರು.
ತಮ್ಮ ಬಲ ದಿನೇ ದಿನೇ ಕುಂದುತ್ತ ಬಂದಿದ್ದರೂ ಮೀನಾಕ್ಷಮ್ಮನವರು ಅದನ್ನು ತೋರಗೊಡುತ್ತಿರಲಿಲ್ಲ. ಒಂದರ ಮೇಲೊಂದು ಬಂದ ಎರಡು ಮದುವೆಗಳ ಆಯಾಸ ಮೀನಾಕ್ಷಮ್ಮನವರನ್ನು ತೀರಾ ಹಣ್ಣು ಮಾಡಿಬಿಟ್ಟಿತು. ಹಾಸಿಗೆ ಹಿಡಿದು ಮಲಗಿಬಿಟ್ಟರು. ಸಂಜೆಯ ಹೊತ್ತಿಗೆ ಸಣ್ಣ ಜ್ವರ ಬಂದು ನಿಶ್ಯಕ್ತಿಯನ್ನು ಹೆಚ್ಚಿಸುತ್ತಿತ್ತು. ಜ್ವರದ ಜತೆಗೆ ಪ್ರಬಲವಾದ ಕೆಮ್ಮು ಆರಂಭವಾಯಿತು. ಶ್ವಾಸಕೋಶಗಳಿಗೆ ಅಪಾಯವಾಗಿದೆ, ನ್ಯುಮೋನಿಯಾ ಇರಬಹುದು ಎಂದು ಡಾಕ್ಟರು ಬಿಸಿನೀರಿನ ಚೀಲ, ಆಂಟಿ ಪ್ಲಾಜಸ್ಟಿ ಚಿಕಿತ್ಸೆಯನ್ನು. ಕೆಮ್ಮು ಬಂದು ನಿಂತಿತೆಂದರೆ ಪುನರ್ಜನ್ಮ ಬಂದಂತಾಗುತ್ತಿತ್ತು. ಎದೆಯಲ್ಲೆಲ್ಲಾ ಉರಿಯುತ್ತಿತ್ತು.
ಡಾಕ್ಟರ ಚಿಕಿತ್ಸೆಯಿಂದ ಮಧ್ಯೆ ಮಧ್ಯೆ ಸ್ವಲ್ಪ ಗುಣ ಕಂಡು ಬರುತ್ತಿತ್ತು. ಮತ್ತೆ ಯಥಾಪ್ರಕಾರವಾಗುತ್ತಿತ್ತು. ತಡೆದಿದ್ದ ಪ್ರವಾಹ ಕಟ್ಟೆಯನ್ನೊಡೆದುಕೊಂಡು ಹೋಗುವಂತೆ ಹೆಚ್ಚಿನ ವೇಗದಲ್ಲಿ ಕೆಮ್ಮು ಆರಂಭವಾಗಿಬಿಡುತ್ತಿತ್ತು. ತಾಯಿಯ ಸ್ಥಿತಿ ಲಕ್ಷ್ಮಣನ ಚೇತನವನ್ನು ಉಡುಗಿಸಿಬಿಟ್ಟಿತ್ತು. ಅವನಿಗೆ ಯಾವದರಲ್ಲಿಯೂ ಆಸಕ್ತಿಯಿಲ್ಲದಂತಾಯಿತು. ತಾಯಿಯ ಹಾಸಿಗೆಯನ್ನು ಬಿಟ್ಟು ಕದಲುತ್ತಿರಲಿಲ್ಲ. ಆಕೆಯ ಎಲ್ಲಾ ಕೆಲಸಗಳನ್ನೂ ತಾನೇ ನಿರ್ವಹಿಸುತ್ತಿದ್ದನು. ಕಾಯಿಲೆ ವಿಚಾರದಲ್ಲಿ ಲಕ್ಷ್ಮಣನಿಗೆ ಅನುಮಾನ ಬಂದಿತ್ತು. ಒಂದು ದಿನ ಡಾಕ್ಟರು ಭೆಟ್ಟಿ ಕೊಟ್ಟು ಹಿಂದಿರುಗುತ್ತಿದ್ದಾಗ ಅವರನ್ನು ಹಿಂಬಾಲಿಸಿದನು.
“ಸಾg!”
“ಏನು ಲಕ್ಷ್ಮಣರಾ?”
“ನಮ್ಮ ತಾಯಿಗೆ ಖಂಡಿತವಾಗಿಯೂ ನ್ಯುಮೋನಿಯಾ ಏನು? ಇದ್ದದ್ದನ್ನು ಸಂಕೋಚವಿಲ್ಲದೆ ತಿಳಿಸಿಬಿಡಿ.”
“ಅಷ್ಟೇಪ್ಪ. ಏನೂ ಹೆದರಬೇಡಿ. ಪ್ರಾಣಕ್ಕೇನೂ ಭಯವಿಲ್ಲ.”
“ನೀವು ನನ್ನನ್ನು ಸಮಾಧಾನಗೊಳಿಸುವುದಕ್ಕೆ ಮರೆಮಾಚಬೇಕಾದದಿಲ್ಲ. ದಯೆಯಿಟ್ಟು ನಿಜವನ್ನು ತಿಳಿಸಿ.”
“ಲಕ್ಷ್ಮuರಾ. ಅದು ನ್ಯುಮೋನಿಯಾ ಅಲ್ಲ – ಕ್ಷಯ.”
“ಪ್ರಾ.. ಣ..”
“ಉಳಿಯಬಹುದು. ಆದರೆ ದೇಹ ಬಹಳ ಕೃಶವಾಗಿ ಹೋಗಿದೆ. ಹೃದಯ ಶ್ವಾಸಕೋಶ ರಕ್ತ ಎಲ್ಲಾ ದುರ್ಬಲವಾಗಿದೆ. ಚೆನ್ನಾಗಿ ಆರೆಕೆಮಾಡಿ ನೋಡಿಕೊಂಡರೆ ಪ್ರಾಣಕ್ಕೇನೂ ಅಪಾಯ ತಟ್ಟಲಾರದು.”
“ಬದುಕಿದೆ!”
ಎಂದು ನಿಟ್ಟುಸಿರು ಬಿಟ್ಟನು.
ಆರೆಕೆ, ಡಾಕ್ಟರರಿಗೆ ಹೇಳುವುದು ಸುಲಭವಾಗಿತ್ತು. ಒಂದು ಪಾವು ಹಾಲು ಕುಡಿಸಬೇಕಾದರೆ ಲಕ್ಷ್ಮಣನಿಗೆ ಸಾಕಾಗಿ ಹೋಗುತ್ತಿತ್ತು. ಮೀನಾಕ್ಷಮ್ಮನವರು ಆರೆಕೆಗೆ ‘ ಬಡಪೆಟ್ಟಿಗೆ ’ ಒಪ್ಪುತ್ತಿರಲಿಲ್ಲ. ಲಕ್ಷ್ಮಣ ಶಾಂತಾ ಮುಷ್ಕರಕ್ಕಾರಂಭಿಸಿದರು. ಮೀನಾಕ್ಷಮ್ಮನವರು ಊಟ ಮಾಡಿದ ಹೊರತೂ ತಾವು ಊಟಮಾಡುತ್ತಿರಲಿಲ್ಲ. ಮಕ್ಕಳು ಸೊರಗುವವಲ್ಲಾ ಎಂದು ಅವರ ಆರೆಕೆಗೆ ಒಪ್ಪುತ್ತಿದ್ದರು.
ರಾಯರಿಗೆ ಚಿಂತೆ ಚೆನ್ನಾಗಿ ಹಿಡಿದುಬಿಟ್ಟಿತು. ಸಂಸಾರದ ಎಲ್ಲ ಕಾರಭಾರವನ್ನು ಸಾವಿತ್ರಮ್ಮನಿಗೆ ಒಪ್ಪಿಸಿಬಿಟ್ಟರು. ತಾವು ತದೇಕಚಿತ್ತರಾಗಿ ಶ್ರೀಮದ್ರಾಮಾಯಣದ ಪಾರಾಯಣೆಗೆ ಕುಳಿತುಬಿಟ್ಟರು. ಮನೆಯಲ್ಲಿ ಒಂದೇ ಸಮನೆ ನವಗ್ರಹಜಪ, ಸೂರ್ಯನಮಸ್ಕಾರ, ಸತ್ಯನಾರಾಯಣ ಪೂಜೆಗಳು ಆರಂಭವಾದವು. ಯಾರು ಯಾವ ಜಪ, ಪೂಜೆಯನ್ನು ಸೂಚಿಸಿದರೂ ರಾಯರು ಕೂಡಲೆ ಒಪ್ಪುತ್ತಿದ್ದರು. ಭೀಮರಾಯರು ಜತೆಯಲ್ಲಿ ‘ರಾಯರ ವೃಂದಾವನಕ್ಕೂ ಹೋಗಿ ನಮಸ್ಕಾರ ಮಾಡಿಬರುತ್ತಿದ್ದರು. ರಾಯರ ಮುಖದ ಮೇಲೆ ಸುಕ್ಕೂ, ತಲೆಯಲ್ಲಿ ಎಳ್ಳು ಚೆಲ್ಲಿದಂತೆ ಬಿಳಿಯ ಕೂದಲೂ ಕಾಣಿಸಿಕೊಳ್ಳಲಾರಂಭಿಸಿದವು.
ಅಮ್ಮಾವರ ಕಾಹಿಲೆ ವಿಚಾರ ಹೊಸಹಳ್ಳಿಗೆ ಮುಟ್ಟಿತು. ಕಂದಾಯದ ‘ಬೇಬಾಕು’ ಮಾಡುವುದಕ್ಕೆ ಹೋಗಿದ್ದ ಶಾಮಣ್ಣನವರು ಮೀನಾಕ್ಷಮ್ಮನವರ ಕಾಹಿಲೆ ವಿಚಾರ ರಂಗೇಗೌಡನ ಹತ್ತಿರ ಅಂದಿದ್ದರು. ಹತ್ತು ಇಪ್ಪತ್ತು ಎಳನೀರು ಹಾಕಿಕೊಂಡು ರಾಯರ ಮನೆಗೆ ಬಂದು ಇಳಿದೇ ಬಿಟ್ಟ. ಅಮ್ಮಾವರಿಗೆ ಕಾಣಿಸಿಕೊಂಡ. ಮೊದಲು ಗುರುತೇ ಸಿಗಲಿಲ್ಲ. ಅಮ್ಮವರು ಒಣಗಿ ಕಾಷ್ಟವಾಗಿದ್ದುದನ್ನು ಕಂಡು ಬಳಬಳನೆ ಅವನ ಕಣ್ಣುಗಳಲ್ಲಿ ನೀರು ಬಂತು. ನಿಂತಲ್ಲಿಯೇ ಅಡ್ಡಬಿದ್ದು ಒಂದೆಡೆ ಕುಳಿತ.
“ಯಾರು ರಂಗಪ್ಪನೇ?”ಎಂದರು ಮೀನಾಕ್ಷಮ್ಮನವರು. ಆಲೆಸಿದ ಹೊರತು ಧ್ವನಿಯು ಕೇಳ ಬರುತ್ತಿರಲಿಲ್ಲ.
“ಹೌದ್ರಮ್ಮಣ್ಣಿ”
“ಏನು ಬಂದೆ ರಂಗಪ್ಪ?”
“ಇಂಗೇ ಒಸಿ ಕೋಲ್ಟಿನ ಕೆಲಸ ಇತ್ತು. ನೋಡ್ಕೊಂಡು ಓಗಾನಾಂತ ಬಂದೆ. ಈಸು ದಿನವಾದ್ರೂ ನಮ್ಗೆ ತಿಳಿಸೋಕೆ ಬ್ಯಾಡ್ವಾ ಅಮ್ಮಣ್ಣೀ”
“ಏನು ದೊಡ್ಡ ವಿಷಯಾಪ್ಪ. ಮಕ್ಕಳು ಮರಿ ಎಲ್ಲಾ ಚೆಂದಾಕಿದ್ದಾರೆನೋ?”
“ಅವ್ವೇ ಅಮ್ಮಣ್ಣಿ.”
“ನಿನ್ನ ಮಗಳು ಚೆನ್ನಿ ಹೆತ್ತಳೆನೋ?”
“ಎತ್ತಳು ತಾಯಿ-ಗಂಡು ಮಗ.”
“ಹೆಸರೇನಿಟ್ಟೆ?”
“ಕರಿಯಾಂತ.”
“ಕೃಷ್ಣದೇವರ ಹೆಸರಾಯಿತು. ನಿನ್ನ ಮಗ ಏನು ಮಾಡಿಕೊಂಡಿದ್ದಾನೆಯೋ?”
“ಜತೇಲೇ ಗೆಯ್ಕೊಂಡವ್ನೆ.”
“ಲಚ್ಮಕ್ಕ ಚೆಂದಾಕವಳೆನೊ?”
“ಅವ್ಳೇ ಅಮ್ಮಣ್ಣಿ. ಈಗ ಸಂಸಾರ ಸೇರಾಯ್ತು. ಅವನೂ ಚೆಂದಾಕಿ ಮಡಿಕ್ಕೊಂಡವ್ನೆ. ಗಂಡ ಎಂಡ್ರು ಮುಚ್ಚಟೆಯಾಗವ್ರೆ. ಎಲ್ಲಾ ನಿನ್ನ ಅರಕೆ ನಮ್ಮವ್ವ, ಒಡೆದೋಗಿದ್ದ ಸಂಸಾರ ಒಂದು ಮಾಡ್ದೆ.”
“ಎಲ್ಲಾರ್‍ನೂ ಇನ್ನೊಂದು ಸಲ ನೋಡಬೇಕು ರಂಗಪ್ಪ. ನಿನ್ನ ಹಸ ನನ್ನ ಜ್ಞಾಪಿಸಿಕೊಳ್ಳುತ್ತೇನೋ?”
“ಅದರ ದುಕ್ಕ ಬ್ಯಾಡ್ರವ್ವಾ. ನಿಮ್ಮ ಅಟ್ಟಿ ಕಾಲಕ್ಕೆ ದಿನಕ್ಕೆ ನೂರ್‍ಸಲ ಓಡೋಯ್ತದೆ, ಅರಚಿ ಅರಚಿ ಗಂಟಲು ಕಿತ್ಕೊಳ್ತದೆ.”
“ಮೂಕ ಜೀವ. ಅದುಕೂಡ ನನ್ನ ಮರೆತಿಲ್ಲ.”
“ಅಯ್ಯೋ ನಮ್ಮವ್ವ. ನಿಮ್ಮನ್ನ ಯಾರು ಮರೀತಾರೆ ನನ್ನ ತಾಯಿ. ಅಳ್ಳಿ ನೀವು ಬುಟ್ಟಬುಟ್ಟಿರಿ – ಆಳು ಆಳು ಸುರೀತೆತೆ. ಊರ ಲಕ್ಸ್ಮಿ ಬಿಟ್ಟು ಒಂಟೋದಂಗೆ ಆಗೋಯ್ತು – ಯಾವಾಗ ಬತ್ತೀರವ್ವಾ?”

“ಬರ್‍ತೀನಪ್ಪ. ಸ್ವಲ್ಪ ಗುಣವಾಗುತ್ತಲೂ ನಮ್ಮ ರಾಮಪ್ಪ. ಲಚ್ಚಪ್ಪ ಇಬ್ಬರ ಹೆಂಡತಿಯರನ್ನೂ ಕರೆದುಕೊಂಡು ಬರುತ್ತೇನೆ. ಏಳು – ಊಟಮಾಡು.”
ಎಂದು ಉಪಚರಿಸಿದರು. ರಂಗೇಗೌಡ ಊರು ತಲುಪಿದವನೇ ಕೂಲಂಕಷವಾಗಿ ಅಮ್ಮಾವರ ಸುದ್ದಿ ಎಲ್ಲರಿಗೂ ತಿಳಿಸಿದನು. ಅಮ್ಮಾವರಿಗೆ ಗುಣವಾದರೆ ಊರ ಮುಂದಿನ ಮಾರಮ್ಮನಿಗೆ ಒಂದು ಕೋಣ ಕೊಡತಕ್ಕದ್ದೆಂದು ನಿರ್ಧರಿಸಿದರು. ಭಟ್ಟರಿಗೆ ಹೇಳಿ ನಂಜುಂಡೇಶ್ವರನಿಗೆ ಎಳ್ಳೆಣ್ಣೆ ದೀಪದ ಏರ್ಪಾಟು ಮಾಡಿದರು. ಮೂರು ಮೂರು ದಿವಸಕ್ಕೆ ಒಬ್ಬೊಬ್ಬರು ಬೆಂಗಳೂರಿಗೆ ಹೋಗಿ ಅಮ್ಮನವರನ್ನು ನೋಡಿ ಬಂದು ಅವರ ಆರೋಗ್ಯದ ವಿಚಾರ ಇತರರಿಗೆ ತಿಳಿಸುತ್ತಿದ್ದರು.
ರಾಮು ಪುಣೆಯಲ್ಲಿದ್ದುದು ಅನುಕೂಲವೇ ಆಯಿತು. ಅಲ್ಲಿಂದ ಉತ್ತಮ ಹಣ್ಣುಗಳನ್ನು ಅವನು ವಾರವಾರವೂ ಕಳುಹಿಸುತ್ತಿದ್ದನು. ಪುಣೆಯ ಅಂಜೂರ ಮೀನಾಕ್ಷಮ್ಮನವರ ಪ್ರಕೃತಿಗೆ ತುಂಬ ಹಿತವನ್ನುಂಟು ಮಾಡುತ್ತ ಬಂತು. ಒಂದೆರಡು ತಿಂಗಳಲ್ಲಿ ಎದ್ದು ಮೆಲ್ಲನೆ ಮನೆಯಲ್ಲಿಯೇ ನಡೆಯುವ ಮಟ್ಟಿಗಾದರು. ರಾಯರು ಸ್ವಲ್ಪ ನಿದ್ರಿಸುವುದಕ್ಕೆ ಮೊದಲು ಮಾಡಿದರು.
ಪರೀಕ್ಷೆ ಮುಗಿಸಿಕೊಂಡು ರಾಮು ಊರಿಗೆ ಬಂದ. ಮೀನಾಕ್ಷಮ್ಮನವರು ಗುಣವಾದದ್ದು ಅವನಿಗೂ ಸಂತೋಷವನ್ನುಂಟುಮಾಡಿತ್ತು.
“ನೋಡಿದಿರೋ ಹೇಗಿದೆ ನಾನು ಕಳುಹಿಸಿದ ಹಣ್ಣುಗಳ ಪ್ರಭಾವ” ಎಂದು ಶಾಮಣ್ಣನವರ ಹತ್ತಿರ ಜಂಭ ಹೊಡೆದುಕೊಂಡನು.
ಶಾಮಣ್ಣನವರು ರಾಮುವಿನ ಮಾತನ್ನು ಸಹಿಸಲಾರದೆ
“ಹಣ್ಣು ತಾವೇನೂ ಸೃಷ್ಟಿಸಲಿಲ್ಲವಲ್ಲಾ. ಕೊಂಡುತಾನೇ ಕಳುಹಿಸಿದಿರಿ?”
ಎಂದು ಚುರುಕಾಗಿ ಮುಟ್ಟಿಸಿದ್ದರು.
ರಾಮುವಿನ ಪರೀಕ್ಷೆಯ ಫಲಿತಾಂಶ ಹೊರಬಿತ್ತು. ಎ.ಎ.ಬಿ. ಡುಂ ಎಂದು ಹೋಗಿತ್ತು. ಆದರೆ ಎಂ.ಎ., ಎರಡನೆಯ ತರಗತಿಯಲ್ಲಿ ತೇರ್ಗಡೆಯಾಗಿತ್ತು. ರಾಮುವಿಗೆ ಸಖೇದಾಶ್ಚರ್ಯವಾಯಿತು. ಎ.ಎ.ಬಿ. ಹೇಗೆ ಹೋಯಿತು? ವಿಶ್ವವಿದ್ಯಾನಿಲಯಕ್ಕೆ ಕಣ್ಣಿಲ್ಲ ಎಂದು ಮರುಗಿ ಅಧಿಕಾರಿಗಳನ್ನು ಶಪಿಸಿದನು.
*****
ಮುಂದುವರೆಯುವುದು