ಪ್ರೇಮಿಯ ಮುಂದೆ ಪದ್ಯ ಓದಿದವನು

ನಲ್ಲನೊಬ್ಬ ತನ್ನ ನಲ್ಲೆಯ ಬಳಿ ಬಂದ
ಅವಳನ್ನು ತಬ್ಬುವ ಬದಲು ಜೇಬಿನಿಂದ
ಒಂದಷ್ಟು ಪದ್ಯ ತೆಗೆದು ಓದಲು ಪ್ರಾರಂಭಿಸಿದ
ಅವಳ ಹಾವ ಭಾವ ಲಾವಣ್ಯ ವಿಲಾಸ ಎಲ್ಲ
ಪರಿ ಪರಿಯಾಗಿ ಬಣ್ಣಿಸಿದ
ಅವಳ ಮೇಲೆ ತನ್ನ ಪ್ರೀತಿ ಎಷ್ಟೊಂದು?
ಎಂದೂ ವಿವರವಾಗಿ ವರ್‍ಣಿಸಿದ
ಆಕೆ ಅವನಿಗೆ ಹೇಳಿದಳು
“ನೀನು ಈಗ ನನ್ನೆದುರಿನಲ್ಲೇ ಇದ್ದಿ
ಈ ಪ್ರೇಮ ಕವಿತೆ, ಅಲಂಕಾರ, ರೂಪಕ, ಕಾವ್ಯದ ನಿಟ್ಟುಸಿರು
ಎಲ್ಲ ಕಾಲವ್ಯರ್‍ಥ
ಒಬ್ಬ ನಿಜ ಪ್ರೇಮಿ ಹೀಗೆ ವ್ಯರ್ಥವಾಗಿ ಕಾಲ ಕಳೆಯುವುದಿಲ್ಲ
ನಾನು ನಿನ್ನ ಪ್ರೇಮದ ನಿಜ ವ್ಯಕ್ತಿ ಅಲ್ಲ ಎಂದಷ್ಟೇ ಇದರರ್ಥ
ನೀನು ಪ್ರೇಮಿಸುತ್ತಿರುವುದು ಬರೀ ನಿನ್ನ ಭ್ರಮೆಗಳನ್ನು
ನಾನು ಪ್ರೇಮ ಜಲಕ್ಕಾಗಿ ಹಾತೊರೆಯುತ್ತಿದ್ದೇನೆ
ನೀನು ಅದನ್ನು ನನಗೆ ಕೊಡದೆ ಬಚ್ಚಿಟ್ಟಿದ್ದಿ
ನಾನು ಇಲ್ಲಿ ಬಲ್ಗೇರಿಯಾದಲ್ಲಿದ್ದೇನೆ ಈಗ
ನೀನು ಎಲ್ಲೋ ದೂರ ದೇಶದಲ್ಲಿ
ನೀನು ನಿನ್ನದೇ ಆತ್ಮಕಾಮಿ
ನನ್ನೊಳಗೆ ಮುಳುಗದೆ ನೀನು
ನಿನ್ನದೇ ತೆವಲು, ಭ್ರಮೆಗಳಲ್ಲಿ ಸುತ್ತುತ್ತಿದ್ದಿ”
*****