ನಾನು ಬಾಬುಲಿಯನ್ನು ಕಾಣಲು ಹೋದಾಗಲೆಲ್ಲ ಬಾಬುಲಿ ಇರುತ್ತಿರಲಿಲ್ಲ. ಅವಳ ತಾಯಿ ಇರುತ್ತಿದ್ದರು. ಬಾಬುಲಿ ಎಲ್ಲಿ ಎಂದರೆ “ವಕೀಲರ ಮೆನಗೆ ಹಾಲು ಕೊಟ್ಟು ಬರಲು ಹೋಗಿದ್ದಾಳೆ”, “ಅಂಗಡಿಗೆ ಬತ್ತಿ ಕೊಟ್ಟು ಬರಲು ಹೋಗಿದ್ದಾಳೆ”, “ಡಾಕ್ಟರ ಮನೆಗೆ ಸುಗಂಧಿ ಹೂವಿನ ದಂಡೆ ಕೊಡಲು ಹೋಗಿದ್ದಾಳೆ….” ಹೀಗೇ. ಬಾ ಕುತುಕೋ. ಈಗ ಬರುತ್ತಾಳೆ – ಎಂದು ಕರೆಯುತ್ತಿದ್ದರು. ಅದೇ ಕಲ್ಲಿನ ಸೀಟು. ಎಲ್ಲರೂ ಕೂತು ಎದ್ದು ಸಮೆದು ಸಮೆದು ಕಾವಿಯ ಕೆಂಪು ಹೋಗಿ ಸಿಮೆಂಟಿನ ಬಣ್ಣಕ್ಕೆ, ಹೊಯಿಗೆ ದೊರಗಿಗೆ ತಿರುಗಿದ ಮೇಲೆಯೇ ಬಾಬುಲಿ ತಾಯಿ ಕೊಂಡುಕೊಂಡ ಮೆನ ಅದು. ಖರೀದಿಸಿದ ಮೇಲೆ ಆ ಸೀಟನ್ನು ಸಹ ರಿಪೇರಿ ಮಾಡಲಿಕ್ಕೇ ಆಗದೆ, ಎಲ್ಲ ಹಾಗೇ ಇದೆ – ಅಂತ ಬಾಬುಲಿ ತಾಯಿ ಹೇಳುತ್ತ ಎಷ್ಟು ರಿಪೇರಿಯುಂಟು. ನಿಧಾನ ಒಂದೊಂದೇ ಮಾಡಿಕೊಳ್ಳಬೇಕು ಎನ್ನುವರು, ಅಲ್ಲಿಯೇ ಕುಳಿತು ಕಸೂತಿ ಮಾಡುತ್ತ.
ಬಾಬುಲಿ ಬರುವವರೆಗೂ ಹೇಗೆ ಅವರು ಕಸೂತಿ ಹಾಕುವುದನ್ನು ನೋಡುತ್ತಾ ಮಾತಾಡುವುದನ್ನು ಕೇಳುತ್ತಾ ಕುಳಿತುಕೊಂಡಿರುತ್ತಿದ್ದೆ. ಅವರನ್ನು ಎಲ್ಲರೂ ಜಿಪುಣಿ ಅಂತ ಏಕೆ ಹೇಳುತ್ತಾರೆ ಅಂತಲೂ ಯೋಚನೆ ಬರುತ್ತಿತ್ತು. “ನೀನು ಅವರ ಮನೆಯಿಂದ ಒಂದು ಹಿಡಿಕಡ್ಡಿ ಪುಕ್ಕಟೆ ತಂದರೆ ಶಭಾಸ್ ಕೊಡುತ್ತೇನೆ” ಎನ್ನುತ್ತಿದ್ದಳು ಕ್ಲಾಸಮೇಟ್ ನಿರ್ಮಲಾ. ಆಟದ ಹೊತ್ತಿನಲ್ಲಿ ನಾವು ಏನೇನೆಲ್ಲಾ ಮಾತಾಡುತ್ತಾ ಇರುತ್ತೇವೆ. ಪಾಠದ ಹೊತ್ತಿನಲ್ಲಿಯೂ ಚೌತಿ ಹಬ್ಬದ ದಿವಸ ಬೆಳ್ಳಾಂ ಬೆಳಗಿನಲ್ಲೇ ಆ ಬಾಬುಲಿ ಯಾರ್‍ಯಾರ ಮನೆಯ ಅಂಗಳದಾಚೆ ಹೂವನ್ನೆಲ್ಲಾ ಕದ್ದು ಕೊಯ್ದು ಮಾರುತ್ತಾಳಂತೆ. “ಥೂ ಹೇಸಿಗೆ. ಏನೂ ಇಲ್ಲದವರ ಹಾಗೆ! ಅವರ ಮನೆಯ ಗರಿಕೆ ಹುಲ್ಲಿಗೂ ದುಡ್ಡುಕೊಡಬೇಕು ಗೊತ್ತುಂಟಾ? ನಮ್ಮ ಜಾತಿಯಲ್ಲಿ ಯಾರೂ ಬಾಬುಲಿ ಮನೆಯವರ ಹಾಗೆ ಇಲ್ಲ. ಇವರೊಬ್ಬರು ಹೀಗಪ್ಪ ಸ್ಸೀ.” ಲೀಡರ್ ನಿರ್ಮಲಾ ಕೈಬಾಯಿ ಮಾಡಿ ಹೇಳುವಾಗ ಎಷ್ಟು, ಎಷ್ಟು ನಗೆ ಎಲ್ಲರಿಗೂ. ನಗೆ ಎನ್ನುವದು ಅಳುವಿನಂತಲ್ಲ. ಅದು ಸಾಂಕ್ರಾಮಿಕ, ಸುಲಭ. ಕಾರಣವೋ ವಿಶ್ಲೇಷಣೆಯೋ ಬೇಕೆಂತಲೇ ಇಲ್ಲ. ದೂರದಿಂದ ಬಾಬುಲಿ ಏನು ಏನು ಏನು ಎಂದು ಕೇಳುತ್ತ ಹತ್ತಿರಕ್ಕೆ ಬರುತ್ತಾಳೆ. ನಗೆಗೆ ಕಾರಣ ಏನೆಂದು ಯಾರೂ ಆಕೆಗೆ ಹೇಳದೆಯೂ ತಾನೂ ನಗುತ್ತಾಳೆ. ಅವಳೂ ನಗುವುದು ಕಂಡು ನಾವು ಮತ್ತಷ್ಟು ನಗುತ್ತೇವೆ. ಬಾಬುಲಿ ತಾಯಿ ಮುಟ್ಟಿದ್ದಕ್ಕೆ ಕಿಟ್ಟಿದ್ದಕ್ಕೆ ದುಡ್ಡು ಕೇಳುತ್ತಾರಂತೆ. ಅಂಗಿಗೆ ಸಣ್ಣದೊಂದು ಬದಿ ಮಡಚಿಕೊಟ್ಟಿದ್ದಕ್ಕೂ ದುಡ್ಡು. ಹರಿದದ್ದು ಹೊಲಿದರೂ ದುಡ್ಡು. ಎಲ್ಲದಕ್ಕೂ ದುಡ್ಡು. ದುಡ್ಡು ದುಡ್ಡು ಕೂಡಿಸಿ ಗಂಟು ಹಾಕಿ, ಸಾಯುವಾಗ ಬಹುಶಃ ಹೊತ್ತುಕೊಂಡೇ ಹೋಗುತ್ತದೆ ಆ ಹೆಂಗಸು ಅಂತ ತನ್ನ ತಾಯಿ ಹೇಳಿಕೊಂಡು ನಗುತ್ತಾರೆ ಎನ್ನುತ್ತಿದ್ದಳು ನಿರ್ಮಲಾ. “ನನಗೇ ನಾಚಿಕೆಯಾಗುತ್ತದೆ. ಅವರು ನನ್ನ ಜಾತಿಯವರು ನನ್ನ ದೂರದ ಸಂಬಂಧ ಅಂತೆಲ್ಲ ಹೇಳಲಿಕ್ಕೆ” ಎನ್ನುತ್ತಿದ್ದಳು. ಅವರಿಗೆ ಅಷ್ಟೆಲ್ಲ ದುಡ್ಡು ಕೊಟ್ಟೂ ಎಷ್ಟು ಶಿಸ್ತಾಗಿ ಬರುತ್ತಿದ್ದಳು ನಿರ್ಮಲಾ ಶಾಲೆಗೆ. ಶುಭ್ರ ಕರ್ಚೀಫ್, ಮೆಟ್ಟು. ಚಂದ ಬಾಚಿಕೊಂಡು, ಕ್ಲಿಪ್ಪಿಗೊಂದು ಗುಲಾಬಿ ಸಿಕ್ಕಿಸಿಕೊಂಡು. ಬಾಬುಲಿ ಹಾಗಲ್ಲ. ಎಷ್ಟೊತ್ತಿಗೆ ಕಂಡರೂ ಈಗ ಎಲ್ಲಿಂದಲೋ ಓಡಿ ಬಂದಂತೆ ಏದುಸಿರು ಬಿಡುತ್ತಿರುತ್ತಾಳೆ. ನಿರ್ಮಲಾ ನೀರು ಕುಡಿಯುವುದು ಸಹ ಎಷ್ಟು ನಾಜೂಕು. ಬಾಬುಲಿ ಹಾಗಲ್ಲ. ಬಾಯಿ ದೊಡ್ಡಕೆ ಕಳೆದು ಮೇಲಿಂದ ಗಟಗಟಗಟ ಅಂತ ಒಂದು ತಂಬಿಗೆ ನೀರನ್ನಾದರೂ ಒಮ್ಮೆಗೇ ಕುಡಿದುಬಿಡುತ್ತಾಳೆ. ಅವಳು ಅಷ್ಟು ನೀರನ್ನು ಒಮ್ಮೆಗೇ ಕುಡಿಯುವುದನ್ನು ನೋಡುತ್ತಾ ನಿಲ್ಲುವುದೇ ಒಂದು ಮೋಜು. “ಮನೆಯಲ್ಲಿ ತಿಂಡಿ ಗಿಂಡೆ ತಿನ್ನುವುದಿಲ್ಲ ಬಹುಶಃ” “ಅವರ ಮನ ದೋಸೆ ಎಷ್ಟು ಸಣ್ಣದು ಗೊತ್ತುಂಟ? ‘ಕೆಳಗಿನದರಷ್ಟೇ ಅಗಲ’ ಎಂದು ನಗುತ್ತಿದ್ದಳು ನಮ್ಮ ಕೆಲಸದ ರುಕ್ಕು!” – ಹಾಗೆಂದರೆ? ರುಕ್ಕುವಿನ ಉಪಮೆಯ ಅರ್ಥವನ್ನೂ ನಿರ್ಮಲಾ ಕಿವಿಯಲ್ಲಿ ಹೇಳುವಳು. ಇಸ್ಸೀ ಅಯ್ಯಮ್ಮ ಈ ಬಾಬುಲಿ ಮನೆಯ ದೋಸೆಯೇ. ಕೊಟ್ಟರೆ ತಿನ್ನಲೇ ಬಾರದು…. “ಅವರು ಕೊಡಬೇಕಲ್ಲ ನಿನಗೆ.”
ಹಬ್ಬ ಹರಿದಿನಗಳಲ್ಲಿ ಹೋದರಂತೂ ಅಮ್ಮ ಏನು ತಿಂಡಿ ಮಾಡಿದ್ದರು ಎನ್ನುತ್ತ ತಿಂಡಿ ವಿಷಯಕ್ಕೇ ಬರುವ ಬಾಬುಲಿ ತಾಯಿ. “ನಿಮ್ಮಲ್ಲಿ ಉಪಾಕರ್ಮಕ್ಕೆ ಶಾವಿಗೆ ಮಾಡುತ್ತಾರಲ್ಲವೆ? ಯಾಕೆ ಮಾಡುತ್ತಾರೆ ಗೊತ್ತುಂಟಾ? ಅದು ಜನಿವಾರದ ಹಾಗಿರುತ್ತದೆ ನೋಡು ಅದಕ್ಕೇ” ಎಂದರೆ ನಾನು “ಹ್ಞೂಂ, ಶಾವಿಗೆ ಮಾಡಿದ್ದಾರೆ ಮತ್ತೆ ಕಾಯಿಹಾಲು ಸಹ” ಎನ್ನುತ್ತಿದ್ದೆ. ಬಾಬುಲಿ ತಾಯಿ ತಿಂಡಿ ವಿಚಾರ ಕೇಳಿದಾಗೆಲ್ಲ ನಾನು ಒಂದು ಇದ್ದದ್ದು ನಾಲ್ಕು ಮಾಡಿ ಹೇಳುತ್ತಿದ್ದದ್ದು ಯಾಕೆ – ಆಗ ನನಗೆ ತಿಳಿಯುತ್ತಲೇ ಇರಲಿಲ್ಲ. ಅಷ್ಟೇ ಅಲ್ಲ, ಹೊಟ್ಟೆ ಬಿರಿದು ಬಂದವರ ಹಾಗೆ ಪೋಸೂ ಮಾಡುತ್ತಿದ್ದೆ. ಬಾಬುಲಿ ತಾಯಿಯೋ ಅಂಥ ನನ್ನೊಡನೆಯೇ ಅವತ್ತಿನ ಅವರ ಹಬ್ಬದ ತಿಂಡಿಯ ಸುಖದುಃಖ ಹೇಳುತ್ತಿದ್ದರು. ತಾನು ಪನ್ಪತ್ಲೆ ಮಾಡಿದರೆ ಹೇಗಿರುತ್ತದೆ ಅಂತಿ? ತುಪ್ಪ ಸುರಿದು, ತಿಂದವರು ತಿನ್ನುತ್ತಲೇ ಇರಬೇಕು, ಅಂತಹ ರುಚಿ. ಇವತ್ತೂ ಮಾಡಿದೆ, ಶಾಸ್ತ್ರಕ್ಕೆ ತಕ್ಕ. ನಾಕೇ ನಾಕು. ಖರ್ಚಾಗಿ ಹೋಯಿತು. ಇದ್ದಿದ್ದರೆ ನಿನಗೊಂದು ಕೊಡಬಹುದಿತ್ತು ಅಂತ ಉಪಚಾರ ಹೇಳುತ್ತ ನಿನ್ನ ಹೊಟ್ಟೆಯೂ ತುಂಬಿದೆ ಬಿಡು. ಕೊಟ್ಟರೂ ಬೇಡ ಅಲ್ಲವೆ ಎನ್ನುತ್ತಿದ್ದರು. ಬಾಬುಲಿ ಮುಖ ನೋಡಿದರೆ ಮಾತ್ರ ಅಂತಹ ಒಳ್ಳೆಯ ತಿಂಡಿ ತಿಂದ ಉಮೇದು ಎಲ್ಲಿಯೂ ಕಾಣದೆ ಎಂದಿನಂತೆಯೇ ಇರುತ್ತಿತ್ತು.
ಎಷ್ಟೊತ್ತಿಗೆ ಕಂಡರೂ ಕೆದರಿದ ತಲೆ, ವಿಶ್ರಮಿಸದ ಕಣ್ಣಿನ ಬಾಬುಲಿ ತಾಯಿ. ಕೈಗೆ ಹಿಡಿದದ್ದನ್ನೆಲ್ಲ ಸೀರೆಗೆ ಒರೆಸಿಕೊಂಡರು, ಹೊಸ ಕೆಲಸ ಶುರು ಮಾಡಿದರು. ಒಮ್ಮೆ ಹೋದಾಗ ಎಳೆಯ ತೆಂಗಿನಗರಿಯ ತುದಿ ಚೂಟುತ್ತಿದ್ದರು. ಯಾಕೆ ಎಂದರೆ, ಯಾರಿಗೋ ಬೇಕಂತೆ ಏನೋ ಶಾಸ್ತ್ರಕ್ಕೆ. ಇಪ್ಪತ್ತೈದಕ್ಕೆ ಎರಡು ರೂಪಾಯಿ ಕೊಡುತ್ತಾರೆ. ನನಗೇನು? ಎರಡು ನಿಮಿಷದ ಕೆಲಸ ಅಂತ ಕಣ್ಣು ಕಿರಿದಗಲಗೊಳಿಸಿ ನಕ್ಕರು. ಮುಖ್ಯವಾಗಿ ಅವರ ಕೆಲಸವೆಂದರೆ ಕಸೂತಿ ಹಾಕಿ ಕೊಡುವುದು.
ಅವರು ಕಸೂತಿ ಹಾಕುವುದು ಯಾರದೋ ಮನೆಯ ಟೇಬಲ್ ಕ್ಲಾತಿಗೆ. ದುಡ್ಡಿಗೆ ಕಸೂತಿ ಹಾಕಿಕೊಡದೆ ಸ್ವಸಂತೋಷಕ್ಕೆ ಮಾತ್ರ ಕಸೂತಿ ಹಾಕಿ ಕೊಡುವ ಕಾಲ ಅದಾದರೂ ಬಾಬುಲಿ ತಾಯಿ ದುಡ್ಡು ತೆಗೆದುಕೊಳ್ಳದೆ ಒಂದು ಎಲೆಯನ್ನು ಸಹ ಎಂಬ್ರಾಯ್ಡರಿ ಮಾಡಿಕೊಟ್ಟವರಲ್ಲ. ಹಾಗೆ ಅವರ ಕಸೂತಿ ಕೆಲಸ ಮುಂದುವರಿಯಲು ಊರಿನಲ್ಲಿ ದೊಡ್ಡವರ ಮನೆಗಳು ಬೇಕಾದಷ್ಟಿವೆ. ಲೇಸಿನ ತೋರಣ, ಬಾಡಿ, ಪೆಟ್ಟಿಕೋಟು ಎಲ್ಲವನ್ನೂ ಬಾಬುಲಿ ತಾಯಿಯೇ ಮಾಡಿ ಕೊಡುತ್ತಾರೆ. ಅಷ್ಟೇ ಅಲ್ಲ, ಬೇಕಾದರೆ ಕಲಿಸುತ್ತಾರೆ. ಹಾಗಾಗಿ ಅವರಿಗೆ ಬಿಡುವೇ ಇಲ್ಲ. ಸಂಜೆ ಶಾಲೆಯಿಂದ ಬಂದ ಬಾಬುಲಿ ಮುಗಿಸಿಟ್ಟ ಕಸೂತಿಯನ್ನು ಕೊಟ್ಟು ಬರಲು, ತಾನೇ ರಾತ್ರಿ ಕುಳಿತು ಹೊಸೆದ ಬತ್ತಿ ಕಟ್ಟನ್ನು ಅಂಗಡಿಗೆ ಹಾಕಿ ದುಡ್ಡು ತರಲು, ತಾಯಿ ಕಟ್ಟಿ ನೀರಿನಲ್ಲಿ ತೊಟ್ಟು ಮುಳುಗಿಸಿಟ್ಟ ಹೂವಿನ ದಂಡೆಗಳನ್ನು ಮಾರಿ ಬರಲೊ ಹಾಲು ಕೊಟ್ಟು ಬರಲೊ ಹೋಗುತ್ತಾಳೆ. ಹಾಗೆಯೇ ಇವತ್ತೂ ಹೋಗಿದ್ದಾಳೆ. ತಾಯಿ ಕಸೂತಿ ಮುಂದುವರೆಸುತ್ತಾರೆ.
“ಬೇಕಲ್ಲ, ಮನೆಯ ಸಾಲ ತೀರಿತೆಂದರೆ ನಾವು ರಾಜರೇ. ಇನ್ನು ಸ್ವಲ್ಪವೇ ಉಂಟು.” ಈ ಸಂದರ್ಭದಲ್ಲಿ ಬಾಬುಲಿ ತಾಯಿ ಬೊಂಬಾಯಿಯಲ್ಲಿರುವ ತನ್ನ ಸಂಬಂಧಿಕರೆಲ್ಲ ದೊಡ್ಡ ದೊಡ್ಡ ಸಂಗತಿಗಳು ಅಂತ ಹೇಳದೆ ಇರುವುದೇ ಇಲ್ಲ. “ನಾವೇನೂ ಕಡೆಮೆಯವರಲ್ಲ. ಈಗ ಏನೋ ಸಾಲ ಇದೆ ಅಷ್ಟೆ” ಎಂಬಂತೆ. ಪ್ರತಿಸಲವೂ ಮನೆಸಾಲದ ವಿಚಾರ ಬಂದಾಗೆಲ್ಲ ಅಲ್ಲಿನವರ ದೊಡ್ಡಸ್ಥಿಕೆ ನೆನಪು ಮಾಡಿಕೊಳ್ಳುತ್ತಾರೆ. ಬೊಂಬಾಯಿಯಲ್ಲಿನ ಒಬ್ಬರಂತೂ ಬಹಳ ದೊಡ್ಡವರು. “ಅವರು ಯಾರೆಂತ ಮಾಡೆದೆ? ನನ್ನ ಅತ್ತಿಗೆಯ ಅತ್ತಿಗೆ. ಅವರ ತಮ್ಮನಿಗೆ ನನ್ನ ತಂಗಿಯ ನಾದಿನಿಯನ್ನು ಕೊಟ್ಟಿದ್ದು.” ಹೀಗೆ ಅವರ ಸಂಬಂಧದ ಸಾಲು ಬೆಳೆಯುತ್ತದೆ. ಮತ್ತು ಅವರ ಮಾತಿನ ರೀತಿಯೂ ಸುಮಾರಿಗೆ ಹೀಗೇ; ಎಷ್ಟು ವಿವರ ಸಾಧ್ಯವೋ ಅಷ್ಟೂ ವಿವರ. ಬೊಂಬಾಯಿಯಲ್ಲಿ ಇನ್ನೊಬ್ಬರಿದ್ದಾರೆ, ಅವರಿಗೆ ಕಾರು ಮನೆಯೊಳಗೇ ಬರುತ್ತದೆ. ಈಗ ಹೀಗುಂಟು ವಿಷಯ ಅಂತ ಹೇಳಿದರೆ ಸಾಕು, ಎಷ್ಟು ಬೇಕು ನಿಮಗೆ ಅಂತ ಅಷ್ಟು ದುಡ್ಡು ಕಳಿಸಿಯೇ ಬಿಡುವವರು. “ಆದರೆ ನಾವೇ ಕೇಳೂವುದಿಲ್ಲ. ಅದೆಲ್ಲ ಚೆಂದ ಅಲ್ಲ ನೋಡು.” ತನ್ನ ಭಾವನ ಹೆಂಡತಿಯ ತಮ್ಮನಿಗಂತೂ ಅಲ್ಲಿ ದೊಡ್ಡ ಕೆಲಸ. ಕಂಪೆನಿಯೇ ಎಲ್ಲ ಕೊಡುತ್ತದೆ. ಹೆಂಡತಿಗೆ ಹೋದ ವರ್ಷ ಆಪರೇಷನ್ ಆಯಿತಲ್ಲ, ಎಂಥಾ ದೊಡ್ಡ ಹಾಸ್ಪಿಟಲ್ನಲ್ಲಿ. (ದೊಡ್ಡ ಆಸ್ಪತ್ರೆಯಲ್ಲಿರುವುದು ಹೆಚ್ಚು ಗ್ರೇಡು ಎಂಬ ಧಾಟಿಯಲ್ಲಿ, ನಾನು ನಂಬುವಂತಯೇ.) ಅಲ್ಲಿ ಆಪರೇಷನ್ ಮಾಡಿದ್ದು ದೊಡ್ಡ ಸರ್ಜನರು. ರಕ್ತ, ಎಂಟು ಬಾಟಲಿ ರಕ್ತ, ಕೊಟ್ಟರು! ಎಂಟು ಬಾಟಲಿ! ….ಅಲ್ಲಿನವರ ದುಡ್ಡು ನೀರು ನೀರಿನಂತೆ ಖರ್ಚಾಗಿದೆ ಎನ್ನಲು ಬಾಬುಲಿ ತಾಯಿಗೆ ವಿಶೇಷ ಉಮೇದು. ತಾನು ತನ್ನ ಮಗಳು ಈಗ ಬರುತ್ತೇನೆ ಅಂತ ಹೇಳಿದರೆ ಸಾಕು ವಿಮಾನದ ಟಿಕೇಟು ಕೊಟ್ಟು ಕರೆಸಿಕೊಳ್ಳುವಷ್ಟು ಶ್ರೀಮಂತರು ಮತ್ತು ಬೇಕಾದವರು ಬೊಂಬಾಯಿಯಲ್ಲಿ ಇದ್ದಾರೆ ಎಂಬುದೇ ತಮ್ಮ ಶ್ರೀಮಂತೆಕೆ ‘ಎಂಬಂತೆ’ ಇದ್ದರು ಬಾಬುಲಿ ತಾಯಿ. ಬೊಂಬಾಯಿಯ ಬೇಕಾದವರೆಲ್ಲ ಹಾಗಿರುವುದು, ಮನೆ ಖರೀದಿಸುವುದು, ಕಾರಿನಲ್ಲಿಯೇ ಓಡಾಡುವುದು ಅವರಿಗೆಲ್ಲ ಎಂಥೆಂಥಾ ಖಾಯಿಲೆಗಳು ಬರುವುದು, ಅವರು ಅದಕ್ಕಾಗಿ ಎಂಥೆಂಥಾ ಚಿಕಿತ್ಸೆಗೆ ಒಳಗಾಗುವುದು ಗುಣವಾಗುವುದು ಸಾಯುವುದು ಎಲ್ಲವನ್ನೂ ತನ್ನ ಪರಿಸ್ಥಿತಿಯನ್ನು ಅಡ್ಡಮರೆಸಲು, ತಾನೇ ಮರೆಸಿಕೊಳ್ಳಲು ಢಾಲಿನಂತೆ ಅವರು ಬಳಸುತ್ತಿದ್ದರಲ್ಲವೆ? ಕಣ್ಣರಳಿಸಿ ಕೇಳಲು ನಾನಿದ್ದೆ. ಬೊಂಬಾಯಿಯ ವರೆಗೂ ಹೋಗಿ ಯಾವ ರೀತಿಯ ಸತ್ಯ ಶೋಧನೆಗೂ ಮುಂದಾಗದ ವಯಸ್ಸಿನವಳು. ಅವರು “ಸುಳ್ಳೋ ಸತ್ಯವೋ” ಸಂಗತಿಗಳನ್ನು ಹೇಳುತ್ತ ಮೈಮೇಲೆ ಬೇಕೆಂದೇ ಅವಾಹಿಸಿಕೊಳ್ಳುವ ತೋರು ಖುಶಿಯ ಗುರುತು ಹಿಡಿಯಲಾರದವಳು, ಅದನ್ನು ಒಂದು ಚೂರೂ ಅಲ್ಲಾಡಿಸಲು ಆಗದ ವಯಸ್ಸಿನವಳು. ನನಗಾದರೂ ಬೊಂಬಾಯಿಯಲ್ಲಿ ಯಾರಾದರೂ ಇದ್ದಿದ್ದರೆ ಎಂದು ಆಸೆಪಡುವವಳು.
ಅವರು ಕುತ್ತಿಗೆ ವಾರೆ ಮಾಡಿಕೊಂಡು ಹೇಳುತ್ತಿದ್ದರೆ ಕಸೂತಿ ಮುಂದುವರೆಯುತ್ತಾ ಇರುತ್ತಿತು. ಹೀಗೆ ಒಂದೊಂದೇ ಹೂವು ಹಾಕೀ ಹಾಕೀ ಬಾಬುಲಿಯ ಮನೆಯ ಸಾಲ ತೀರಬೇಕೆಂದರೆ! ನಿರ್ಮಲಾಗೆ ಹೇಳಬೇಕು…. ಅವರ ಮನೆ ದೋಸೆ ಸಣ್ಣದಿದ್ದರೆ ನಿರ್ಮಲಾಗೆ ಏನೀಗ? ಎದುರೆದುರೇ ಕೇಳಬೇಕು – ಅಂತ ಅನಿಸುವುದು ಅಷ್ಟೆ. ನಿರ್ಮಲಾ ಜೋರಿದ್ದಾಲೆ, ಎದುರೆದುರೇ ಹಾಗೆಲ್ಲ ಕೇಳುವುದು….. ಅಯ್ಯಮ್ಮ!
ಅವರು ಕಸೂತಿ ಹಾಕುತ್ತ ಕುಳಿತುಕೊಳ್ಳುವ ಜಾಗದ ಗೋಡೆಯ ಮೇಲೆಯೇ ಕಪ್ಪು ವಸ್ತ್ರದ ಮೇಲೆ ಹತ್ತಿಯಿಂದ ಮಾಡಿದ ಮೊಲ ಫ್ರೇಮಿನೊಳಗೆ ಕುಳಿತಿದೆ. ಬಿಳೀ ಗುಂಡಿಯಿಂದ ಮಾಡಿದ ಬೆಕ್ಕು, ನಕ್ಕಿಯ ಹೂ, ಹೂದಾನಿ….. ಎಲ್ಲವೂ ಕಟ್ಟು ಹಾಕಿಸಿಕೊಂಡು ಗೋಡೆಯ ಮೇಲಿವೆ. ಒಳಗೆ ಹೋಗುವ ಬಾಗಿಲಿನ ಮೇಲ್ಗೋಡೆ ಮೇಲೆ ಬಾಬುಲಿ ತಂದೆಯ ಚಿತ್ರವಿದೆ. ತಲೆಯ ಮೇಲೊಂದು ಟೊಪ್ಪಿ ಇಟ್ಟುಕೊಂಡು ಕಕ್ಕಾವಿಕ್ಕಿ ನೋಡುತ್ತ ನಿಂತ ಬಾಬುಲಿ ತಂದೆ. ಚಿತ್ರದ ಮೇಲೆ ಬಣ್ಣದ ರೇಶ್ಮೆಯ ಮಾಲೆ ಹಾಕಿದ್ದಾರೆ. ಅವರು ರಾತ್ರಿ ಮಲಗಿದವರು ಬೆಳಿಗ್ಗೆ ಏಳದ ಕಥೆಯನ್ನು ಬಾಬುಲಿ ತಾಯಿ ಎಷ್ಟು ಸಲ ಹೇಳಿದ್ದಾರೋ! ಅಷ್ಟೇ ಅಲ್ಲ, ಅವರು ವೀಳೆಯದೆಲೆ ಕಟ್ಟನ್ನು ಸಂತೆಗೆ ಹೊತ್ತು ಮಾರುತ್ತಿದ್ದ ಕತೆ, ಅಂಗಡಿ ಅಂತ ಮಾಡಿಕೊಂಡು ಅಲ್ಲಿ ಸಂಸ್ಕೃತ ಕ್ಲಾಸು ನಡೆಸಿದ ಕತೆ, ಸಂಸ್ಕೃತ ಕಲಿಸುತ್ತ ಕಲಿಸುತ್ತ ಹಿಂದಿ ಪರೀಕ್ಷೆ ಕಟ್ಟಿ ಹಿಂದೀ ಪಂಡಿತರಾದ ಕತೆ. ವೀಳೆಯದೆಲೆ ಮಾರಿದ ಕತೆ ಹೇಳುವಾಗ ಫೋಟೋದಲ್ಲಿದ್ದ ಬಾಬುಲಿ ತಂದೆ ಸಂತೆ ವ್ಯಾಪಾರಿಯಂತೆಯೇ ಕಾಣುತ್ತಿದ್ದರು. ಅಂಗಡಿ ಇಟ್ಟ ಕತೆ ಹೇಳುವಾಗ ಹೇಗೆ ಆ ಟೊಪ್ಪಿ ಅವರನ್ನು ಅಂಗಡಿ ವ್ಯಾಪಾರಿಯಂತೆಯೇ ಕಾಣಿಸುತ್ತಿತ್ತು! ಮತ್ತು ಸಂಸ್ಕೃತ ಪಾಠ! ಓ! ಅವರು ಸಂಸ್ಕೃತ ಪಂಡಿತರೇ. ಮತ್ತೆ ಹಿಂದಿ ಮಾಸ್ಟರೇ. ಹೀಗೆ ಬಾಬುಲಿ ತಾಯಿ ಗಂಡನ ಚಿತ್ರವನ್ನು ಕಣ್ಣೆದುರು ಕಟ್ಟಿಕೊಡುವ ಮೂಲಕವೇ ಅಲ್ಲಿಯವರೆಗೆ ತಾನು ಜೀವಿಸಿಕೊಂಡು ಬಂದ ಬಗೆಯನ್ನು ಹೇಳುವರು. ಅಷ್ಟೆಲ್ಲ ಮಾಡಿದರು ತನ್ನ ಗಂಡ, ಒಂದು ಮನೆ ಮಾತ್ರ ಮಾಡಲಿಲ್ಲ. ಸ್ವಂತ ಮನೆ ಬೇಕು ಅಂತ ಒಂದು ಆಸೆ ಇತ್ತು ಅವರಿಗೆ ಅಷ್ಟಿಷ್ಟಲ್ಲ. ಅರ್ಧ ಆಯುಷ್ಯದಲ್ಲಿಯೇ ತೀರಿಕೊಂಡುಬಿಟ್ಟರು. ಆಸೆ ಪೂರೈಸಿದ್ದು ತಾನಲ್ಲವೆ?
…..ಅಯ್ಯೋ, ಬಾಬುಲಿ ಎಲ್ಲಿಗೆ ಹೋದಳು?…. ಅರ್ಧ ಕಿವಿ ಹೊರಗೆ. ಬಟ್ಟೆಯ ಮೇಲಿನ ಹೂವು ಅರಳುತ್ತ ವಿವಿಧ ಶೇಡ್ಗಳಲ್ಲಿ ಮನೋಹರವಾಗುತ್ತ ನೀಲಿ ನಕ್ಷೆಯ ಮೇಲೆ ಹರಡಿಕೊಳ್ಳುತ್ತ ಇರುತ್ತಿತ್ತು. ಹೂವಿನ ಪಕ್ಕದಲ್ಲಿ ಕುಳಿತ ಕಾರ್ಬನ್ ನೀಲಿಯ ಪುಟ್ಟ ಹಕ್ಕಿಗೆ ಬೇರೆ ಬೇರೆ ಬಣ್ಣ ನಾಳೆ ತುಂಬುವುದಂತೆ. ಬಣ್ಣ ತುಂಬಿದರೂ ಅದು ಹಾರುವುದೇ ಇಲ್ಲ ಪಾಪ. ಇದ್ದಕ್ಕಿದ್ದಂತೆ ಬಣ್ಣದ ದಾರ ಕಗ್ಗಂಟಾಗುತ್ತದೆ. ಬಾಬುಲಿ ತಾಯಿ ಹಲ್ಲಿನಿಂದ ಅದನ್ನು ಬುಡದಲ್ಲಿ ಚಿಟ್ಟ ಕಡಿದು ತಮ್ಮ ಕಥನ ಮುಂದುವರೆಸುತ್ತಾರೆ. – “ನಿನ್ನ ಚಿಕ್ಕಮ್ಮನಿಗೆ ಲೇಸಿನ ಬಾಡಿ ಮಾಡಿಕೊಟ್ಟದ್ದು ಯಾರು ಅಂತ ಮಾಡಿದಿ? ನಾನೇ. ಆಗ ತೆಗೆದುಕೊಂಡದ್ದು ಎರಡೇ ರೂಪಾಯಿ. ಈಗಾದರೆ ಐದು ರೂಪಾಯಿಗೆ ಕಡಿಮೆ ಇಲ್ಲ. ಸುರುಸುವಿಗೆ ಬರೀ ಅಗ್ಗಕ್ಕೆ ಹೊಲಿದು ಕೊಟ್ಟೆ. ಈಗಿನಷ್ಟು ಧೈರ್ಯ ಇದ್ದಿದ್ದರೆ ಆಗಲೇ ಎಷ್ಟೋ ದುಡ್ಡು ಒಟ್ಟಾಗುತ್ತಿತ್ತು….. ನಿನ್ನ ಚಿಕ್ಕಮ್ಮನಿಗೆ ಜೋರು ಫ್ಯಾಶನ್ ಇತ್ತು ಅಲ್ಲ?”
“ಏನು ನನ್ನ ಚಿಕ್ಕಮ್ಮನಿಗೆ ಫ್ಯಾಶನ್ನೆ?!”
“ಮುಂಚೆ ತೆಪ್ಪಳೆ ತೆಪ್ಪಳೆಯಾಗಿ ಚಂದ ಇದ್ದಳು. ಈಗ ಮೈ ಹೇರಿಕೊಂಡು ತೋರ ಗುಳುಗಿಯಾಗಿದ್ದಾಳಂತಲ್ಲ” ಅವರೂ ನಕ್ಕರು. ಕಸೂತಿ ಮುಂದುವರೆಸುತ್ತಾ ಇದ್ದಂತೆ ತಲೆಯೆತ್ತಿ ಕೆಳಗಣ್ಣಲ್ಲಿ ನೋಡಿ ಬೇಸರವಾಯಿತೆ? ಈಗ ಬರುತ್ತಾಳೆ ಬಾಬುಲಿ. ಒಂದೇ ಮನೆಯ ಹಾಲು. ಇರಲಿಕ್ಕೇನೋ ಎರಡು ದನವಿದೆ. ಆದರೆ ಒಂದು ಫೂರ್ತಿ ಬತ್ತಿಕೊಂಡಿದೆ. ಇನ್ನೊಂದನ್ನು ಮಾತ್ರ ಕರೆಯುವುದು. ಅದೂ ಕೊಟ್ಟರೆ ಕೊಟ್ಟಿತು ಇಲ್ಲವಾದರೆ ಇಲ್ಲ ಅಂತಹ ಚಟದ್ದು. ಮೊಲೆಯೂ ಒರಟು. ಎಳೆದು ಕರೆಯಬೇಕು. ಹಾಗಾಗಿ ತನಗೆ ಮಾತ್ರ ಸಾದ್ಯ ಅದು.
“ಬಾಬುಲಿಯೂ ಹಾಲು ಕರೆಯುತ್ತಾಳಾ?”
“ಹೋ. ಆ ಬತ್ತುಗಂದಿ ದನವನ್ನು ಕರೆಯುವುದು – ಅದು ಕೊಡುವುದು ಒಂದು ಸೊಲಿಗೆ ಹಾಲಾದರೂ ಬಿಡಲು ಆಗುತ್ತದೆಯೇ? – ಬಾಬುಲಿಯೇ. ನಮ್ಮನೆಯಲ್ಲಿ ಏನು ಜನವುಂಟ? ನಿಮ್ಮ ಮನೆಯಲ್ಲಿ ಕಮಲ ಹಾಲು ಕರೆದು ಕೊಡುವುದಂತಲ್ಲ? ಸಂಬಳ ಎಷ್ಟೊ? ನಿನಗೇನು ಗೊತ್ತು ಬಿಡು. ಈಗ ಒಂದು ದನ ಕರೆದರೆ ಕಡಿಮೆ ಏನಿಲ್ಲ. ಬದಲು ನಾವೇ ಕರೆದರೆ ಅಷ್ಟು ದುಡ್ಡು ಉಳಿಯುತ್ತದೆ.”
“ನನ್ನಮ್ಮ ಬಿಡುವುದಿಲ್ಲಪ್ಪ. ಕೆಲಸದವರಿರುವಾಗ ನೀನು ಯಾಕೆ ಕರೆಯುವುದು ಎನ್ನುತ್ತಾಳೆ” – ಯಾವಾಗ ನನ್ನಮ್ಮ ಹೇಳಿದ್ದೊ, ನಾನು ಯಾವಾಗ ಕರೆಯಲಿಕ್ಕೆ ಹೋದದ್ದೊ! ಒಟ್ಟು, ಬಾಬುಲಿ ತಾಯಿಯಂಥವರೆದುರಿಗೆ ಸಣ್ಣ ಮಕ್ಕಳಿಗೂ ದೊಡ್ಡಸ್ಥಿಕೆ. ಬೊಂಬಾಯಿ ಸಹಾಯಕ್ಕೆ ಬರುವುದು ಅದಕ್ಕೇ ಬಹುಶಃ. ಆದರೆ ಬಾಬುಲಿ ತಾಯಿಗೆ ಮಾತ್ರ ನಾನು ಸಣ್ಣವಳೆಂಬ ಭಾವನೆಯೇ ಇರಲಿಲ್ಲ. ಇದ್ದಿದ್ದರೆ ಅವರ ಸಾಲಸೋಲ ಸಂಗತಿಗಳನ್ನು ನನ್ನ ಹತ್ತಿರ ಎಲ್ಲಿ ಹೇಳುತ್ತಿದ್ದರು?
“ಹ್ಞಾಂ. ಅಂತೂ ಸಾಲ ತೆಗೆಯಲಿಕ್ಕೆ ಧೈರ್ಯ ಬಂತು. ಅಪ್ಪ ಹಾಕಿದ ಚಿನ್ನ, ಬಾಬುಲಿ ತಂದೆ ಮಾಡಿಸಿದ ಅವಲಕ್ಕಿ ಸರ, ಚೂರುಪಾರು ಎಲ್ಲ ಸೇರಿಸಿ ಆಚೆ ಓಡಿ ಈಚೆ ಓಡಿ ಕೈಕಡ ತೆಗೆದುಕೊಂಡು ಕಂತಿನಲ್ಲಿಯೇ ದುಡ್ಡು ಕೊಟ್ಟು…. ಇಷ್ಟಾಯಿತು! ಹೇಳುತ್ತೇನಲ್ಲ. ಮನುಷ್ಯನಿಗೆ ಸ್ವಂತದ್ದು ಅಂತ ಒಂದು ಮನೆ ಬೇಕು. ನನ್ನ ಮನೆ ನನ್ನ ಅಂಗಳ ಅಂತ. ಇಲ್ಲದಿದ್ದರೆ ಅವ ಈ ಭೂಮಿ ಮೆಲೆ ಇರಬಾರದು…. ಹೌದೋ ಅಲ್ಲವೋ? ಹ್ಞೂಂ ಮನೆಯಾಯಿತು ಎಲ್ಲ ಸಮ. ಅಷ್ಟಾಗುವಾಗ ಮಾತ್ರ ಅವರೇ ಇಲ್ಲ….. ಸ್ಸು…. ನಮಗೂ ಒಂದು ಮನೆ ಮಾಡುವ ನಸೀಬು ಉಂಟೋ ಇಲ್ಲವೋ ಅಂತೆ ಹೇಳಿ ಹೇಳಿ ಇಟ್ಟವರು. ನಸೀಬು ನಮಗೂ ಇತ್ತು ನೋಡು. ಅವರ ಜೊತೆಯಲ್ಲಿಬದುಕುವ ನಸೀಬು ಮಾತ್ರ ಇಲ್ಲ ….ಸ್ಸು…ಮಾತು ಕೇಳುತ್ತ ಕೇಳುತ್ತ ಬಾಯಿ ಒಣಗುತ್ತಿದೆ. “ಅಲ್ಲಿ ಹೂಜಿಯಲ್ಲಿ ನೀರಿದೆ. ಬಗ್ಗಿಸಿ ಕುಡಿ ಚಿಂತಿಲ್ಲ” ಎನ್ನುವರು ತಾಯಿ. “ನಿಮ್ಮನೆಯಲ್ಲಿ ಮಜ್ಜಿಗೆ ಉಳಿದರೆ ಏನು ಮಾಡುತ್ತೀರಿ? )(ಅಲ್ಲಿ ನಿರ್ಮಲಾ ಇದ್ದಿದ್ದರೆ ‘ಯಾಕೇ ನಿಮಗೆ ಬೇಕಿತ್ತಾ?’ ಅಂತ ಅವರದೇ ರಾಗದಲ್ಲಿ ಚಾಳಿಸುವಂತೆ ಕೇಳುತ್ತಿದ್ದಳೇನೋ.) ಕೆಲವರು ಜಾಸ್ತಿಯಾದರೆ ಸೀದಾ ಅಕ್ಕಚ್ಚಿಗೇ ಸುರಿಯುತ್ತಾರಂತೆ. ಛೆ. ಅದೆಲ್ಲ ಆಗದು. ನನಗಂತೂ ಏನನ್ನೂ ದಂಡ ಮಾಡುವುದು ಎಂದರೇ ಆಗದು.” ಎನ್ನುತ್ತಾ ತಾನು ಮಜ್ಜಿಗೆಯನ್ನು ದುಡ್ಡಿಗೆ ಕೊಡುತ್ತೇನೆ. ಹುಲ್ಲು ಏನು ಧರ್ಮಕ್ಕೆ ಬರುತ್ತದಾ? ಅಂತೆಲ್ಲ ಸಣ್ಣಮಟ್ಟಿನ ಇಕನಾಮಿಕ್ಸ್ ವಿವರಿಸುವರು. “ಆದರೆ ಬಾಬುಲಿ ತಾಯಿ, ನೀವು ಜಿಪುಣಿಯೆಂದರೆ ಜಿಪುಣಿಯಂತೆ. ನೀವು ಮಜ್ಜಿಗೆಯನ್ನೂ ಮಾರುವ ಸುದ್ದಿ ನಿರ್ಮಲಾ ನಮಗೆಲ್ಲಾ ಹೇಳಿದ್ದಾಳೆ.” ಅಂತ ಹೇಳಬೇಕೆಂದರೆ ಅವರ ಮುಖ ನೋಡಿದರೆ ಧೈರ್ಯವೇ ಸಾಲುತ್ತಿರಲಿಲ್ಲ. ಆ ಮುಖ ಹೇಗಿತ್ತು ಎನ್ನಲಿ? ಈಗಲೂ ಅದು ನಿನಪಾಗುತ್ತದೆ. ಮನಸ್ಸಿನೆದುರು ಬಂದು ನಿಂತಾಗೆಲ್ಲ ಅದು ಹೊತ್ತ ಚಿಂತೆಗೆರೆ ಪದರಗಳು ಇನ್ನಷ್ಟು ಎದ್ದು ಕಾಣುತ್ತವೆ.
….ಒಟ್ಟು, ಮಾತು ನಿಲ್ಲುವುದು ಬಾಬುಲಿ ಬಂದ ಮೇಲೆಯೇ. ಖಾಲಿ ಚೊಂಬನ್ನು ನಡಿಗೆಗೆ ತಕ್ಕಂತೆ ಬೀಸುತ್ತ ಬಾಬುಲಿ ಬರುತ್ತಾಳೆ. “ಹ, ಬಂದಳು!” ನಾನು ಉಸಿರೆಳೆದುಕೊಂಡು ಉದ್ಗರಿಸಿದ್ದೇ ಆ ಬೀಸಾಟ ಸಟಕ್ಕನೆ ನಿಲ್ಲುತ್ತದೆ. ಬಾಬುಲಿಯ ಮುಖದಲ್ಲಿ ನನ್ನನ್ನು ಕಂಡ ಹರ್ಷ ಹರಡಿಕೊಳ್ಳದೆ ನನ್ನ ನಗೆಯನ್ನೂ ಮಸುಕಾಗಿಸುತ್ತದೆ. ಶಾಲೆಯ ಬಾಬುಲಿ ಬೇರೆಯೇ, ಹಾಲಿನ ಬಾಬುಲಿ ಬೇರೆಯೇ. ಅವಳು ಹಾಲು ಕೊಟ್ಟು ಬರುವಾಗ ನಾನಲ್ಲಿ ಕುಳಿತುಕೊಂಡಿದ್ದರೆ ಅವಳಿಗೆ ಮುಜುಗರವಾದೀತು ಎಂಬುದು ನನಗೆ ಹೊಳೆಯಲೇ ಇಲ್ಲವಲ್ಲ. ಆಕೆ ಅಂತೂ ನಕ್ಕ ಹಾಗೆ ಮಾಡಿ ನೇರ ಕೊಡ ನೋಡದೆ ಕೈಯಲ್ಲಿಯ ಹಾಲು ಚೊಂಬನ್ನು ಮರೆಸುವ ಯತ್ನ ಮಾಡುತ್ತ ಸೀದ ಹಿಂಬಾಗಿಲಿಗೆ ಹೋಗಿ ಅಲ್ಲಿಟ್ಟು, ಕೈಕಾಲು ತೊಳೆದು ಬಂದು ತಾಯಿಯ ಬಳಿ ಅವರ ಭಾಷೆಯಲ್ಲಿ ಏನೋ, ವರದಿ ಬಹುಶಃ, ಹೇಳಿ ನನ್ನನ್ನು ಕರೆಯುವಳು. ಮಾತಾಡುತ್ತಲೇ ಕೊಡಪಾನ ಬಾವಿಗಿಳಿಸುವಳು. ಸರಸರ ಮೇಲೆತ್ತಿ ಝಯ್ಯನೆ ತೆಂಗಿನ ಮರದ ಬುಡಕ್ಕೆ ಸುರಿಯುವಳು. ನಿಧಾನ ಶಾಲೆ ಬಾಬುಲಿಯೇ ಆಗಿ ಮಾತು ನಗೆಗೆ ತೊಡಗುವಳು. ಒಮ್ಮೊಮ್ಮೆ ತಾಯಿಯೂ ಸೇರುವರು. ನೀರು ಮುಗಿಯುವವರೆಗೂ ಬಾವಿಕಟ್ಟಿಯಿಂದ ತೆಂಗಿನಕಟ್ಟೆಗೆ ಓಡುವುದೇ ಆಟ. ನೀರು ಮುಗಿಸಿ ಅವಳು ನಿಜವಾದ ‘ಆಟ’ಕ್ಕೆ ಬರುವ ಹೊತ್ತಿಗೆ ನನಗೆ ಮನೆಗೆ ಮರಳುವ ಹೊತ್ತಾಗುತ್ತಿತ್ತು. ಹಾಗೇ ಮೆಲ್ಲ ಹೊರಡುತ್ತಿದ್ದೆ. “ಎಷ್ಟು ಸಲ ನಾನೇ ಬರುವುದು? ಮುಂದಿನ ಸಲ ನೀನು” ಎನ್ನುತ್ತ. ಒಳಗಿಂದ ತಾಯಿ ಹಾರ್ಮೋನಿಯಂ ತೆರೆಯುವುದು ಕೇಳಿಸುತ್ತಿತ್ತು. ನನ್ನನ್ನು ಕೇಳಿಸಿದವಳೇ ಬಾಬುಲಿ ಒಳಗೆ ಹೋಗಿ ‘ಹಾರ್ಮನಿ’ ನುಡಿಸುವಳು. ತಾಯಿ ಹೇಳಿಕೊಟ್ಟಂತೆ ನುಡಿಸುತ್ತ ಹಾಡುವಳು. ಸಣ್ಣ ಹೊಟ್ಟೆಕಿಚ್ಚಿನಲ್ಲಿ ನಾನು ಮನೆ ಮುಟ್ಟುತ್ತಿದ್ದೆ.
****
ಮನೆ ತಕೊಂಡಿದ್ದೇವೆ ಬಾ. ಬಾ, ಬಂದು ಹೋಗು.” ಎಂದು ದಾರಿಯ ಮೇಲೆ ಸಿಕ್ಕಿ ಎಳಕೊಂಡೇ ಹೋದಳು ವತ್ಸಲಾ.
“ಬಾ ಒಳಗೆ ಬಾ. ಈ ಮನೆಗೆ ಹಿಂದೆ ಬಂದಿದ್ದೀ ನೀನು.” – ಎಂಳು ವತ್ಸಲ.
“ಹ್ಞಂ! ಕಳೆದ ಜನ್ಮದಲ್ಲೆ?”
ಇಲ್ಲಪ್ಪ ಈ ಜನ್ಮದಲ್ಲೇ.”
“ನನಗಂತೂ ಒಂದು ಚೂರು ಗುರುತು ಇರುವ ಹಾಗೆ ಕಾಣುತ್ತಿಲ್ಲಪ್ಪ. ಊರು ಬಿಟ್ಟು ಅಷ್ಟು ವರ್ಷವಾಯಿತೆ ಹಾಗಾದರೆ!”
“ನಮ್ಮ ಕ್ಲಾಸ್ಮೇಟ್ ಬಾಬುಲಿಯ ಮನೆಯಲ್ಲವನ ಇದು? ನೆನಪು ಹೋಯಿತ? ಅದರ ಇರಸ್ಥಿಕೆಯನ್ನೇ ನಾವು ಪೂರ್ತಿ ಬದಲಾಯಿಸಿದ್ದೇವಲ್ಲ. ಅದಕ್ಕೇ ಗೊತ್ತಾಗಿಲ್ಲ ಬಿಡು…. ಇಲ್ಲಿ ನೋಡು ಇಲ್ಲೇ ಅಲ್ಲವ ಆ ಹೆಂಗಸು, ಬಾಬುಲಿಯ ತಾಯಿ, ಹೊಲಿಯುತ್ತಾ ಕುಳಿತಿರುತ್ತಿದ್ದುದು?”
“ಹುಂ…. ಹುಂ…. ಮತ್ತೆ ಆ ಸೀಟು?”
“ಸೀಟುಗೀಟು ಎಲ್ಲ ಕಿತ್ತು ಹಾಕಿ ಇಡೀ ಮನೆ ರಿಪೇರಿ ಮಾಡಿಸಿಕೊಂಡೆವು.”
ಒಳಗೆ ಬರಬರುತ್ತಲೇ ವತ್ಸಲಾ ಮನೆ ತೆಗೆದುಕೊಂಡ ಕತೆ ಹೇಳತೊಡಗಿದಳು. “ಇಡೀ ಹದಿನೈದು ಸೆಂಟ್ಸ್ ಜಾಗ ಮತ್ತು ಮನೆ. ನೀನೇ ನೋಡಿದ್ದೀಯಲ್ಲ. ಒಂದೂವರೆ ಲಕ್ಷಕ್ಕೆ ಸಿಕ್ಕಿತು ನೋಡು…. ಬಹಳ ಜಿಪುಣಿಯಂತಲ್ಲ ಆ ಹೆಂಗಸು?” ಸಣ್ಣಗೆ ನಕ್ಕಳು. ನಾನು ದಿಗ್ಭ್ರಮೆಯಿಂದ ನೋಡಿದೆ. ಪುನಃ ಹೇಳಿದಳು “ಬಹಳ ಜಪುಣಿಯಂತಲ್ಲ ಆದು. ಇದೊಂದು ವಿಷಯದಲ್ಲಿ ಸಿಕ್ಕಿಬಿತ್ತು ನೋಡು. ನಮ್ಮ ನಸೀಬು, ಅಗ್ಗಕ್ಕೆ ಸಿಕ್ಕಿದ ಹಾಗಾಯಿತು. ಆಮೇಲೆ ಎರಡು ಲಕ್ಷ ಖರ್ಚು ಮಾಡಿದ್ದೇವೆ ಅನ್ನು. ಮನೆ ಸುತ್ತ ನೋಡಿದೆಯ? ಹತ್ತು ತೆಂಗಿನ ಮರ. ಹತ್ತು! ಕಾಯಿಯೆಂದರೆ ಇಂಥಿಂಥಾ ಕಾಯಿ! ತಾಯಿ ಮಗಳು ಸೇರಿಕೊಂಡು ಮರದ ಬುಡ ಒಳ್ಳೇ ನೋಡಿದೊ. ಈಗ ತಲೆಕಾಂಬ ಅದೃಷ್ಟ ಮಾತ್ರ ನಮಗೆ!” …. ಮಾತಾಡುತ್ತ ಒಳಗೆ ಹೊರಗೆ ಸುತ್ತಿಸಿದಳು ವತ್ಸಲಾ. ಒಂದು ಕಾಲದಲ್ಲಿ ಪದೇ ಪದೇ ಹೊಕ್ಕಿಹೊರಟ ಮನೆ. ನೆನಪಿನಲ್ಲಿ ಹುಗಿದು ನಿಂತದ್ದು. ಸಣ್ಣದಿನಲ್ಲಿ ಆಡಿದ ಮನೆಯನ್ನು ದೊಡ್ಡವರಾದ ಮೇಲೆ ಹೊಗ್ಗುವುದೆಂದರೆ ಕಳೆದ ಒಂದು ಜನ್ಮವನ್ನೇ ಹೊಕ್ಕು ಹೊರಟಂತೆ. ಇಂಥದ್ದೆಂದು ಹೇಳಲಾಗದ ಭಾರ ಮನಸ್ಸಿನಿಂದ ನಾನು ಸುಮ್ಮನೆ ಅವಳ ಹಿಂದೆಯೇ ಸುತ್ತಿದೆ.
ನಾನು ಸುಮ್ಮನಿರುವುದನ್ನು ಕಂಡು ಏನು ಅರ್ಥ ಮಾಡಿಕೊಂಡಳೋ ವತ್ಸಲಾ. ತಾನೇ ಮೂರನೆಯವರ ಕಣ್ಣಿಂದ ನೋಡಿ ಅವರು ನುಡಿಯಬಹುದಾದ ಮಾತುಗಳನ್ನು ಹೇಳುವವಳಂತೆ “ಒಂದು ನಾಲ್ಕು ಜನರ ಹತ್ತಿರ ವಿಚಾರಿಸಿ ನೋಡಬಹುದಿತ್ತು. ಹಾಗೆ ಮಾಡಲಿಲ್ಲ. ಅವಸರ ಮಾಡಿ ಈಗ ಯಾಕೆ ಕೊಟ್ಟೆ ಅಂತ ಸಂಕಟಪಡುತ್ತಿದೆ. ದಿನಬಿಟ್ಟು ದಿನ ಹತ್ತು ಸಾವಿರವಾದರೂ ಹೆಚ್ಚಿಗೆ ಕೊಡಿ ಅಂತ ಬಂದು ನಿಲ್ಲುತ್ತದೆ. ಅಲ್ಲ, ನನಗೂ ಸುರುಸುರೂವಿಗೆ ಹೆದರಿಕೆ. ಇಷ್ಟು ಅಗ್ಗಕ್ಕೆ ಕೊಟ್ಟಿತಲ್ಲ. ಕಡೆಗೆ ಭೂತಗೀತ ಇರಬಹುದಾ ಅಂತ….” ನಕ್ಕಳು ವತ್ಸಲಾ. ಈ ನಗೆಯನ್ನು, ಇಂಥದೇ ನಗೆಯನ್ನು ಎಲ್ಲೋ ಕೇಳಿದ್ದೆನಲ್ಲ.
ಅಲ್ಲೇ ಕುಳಿತಿದ್ದ ಅವಳ ಗಂಡ ರಮೇಶ. ಹಿಗ್ಗಿನಿಂದ ಮೇಜು ಬಡಿಯುತ್ತಿದ್ದವ ಕೈ ಮೇಲೆ ಹಾರಿಸಿ ಎಂದ “ಭೂತವ! ಅಡಿಗೆಮನೆ ರಿಪೇರಿಗೆ ಅಂತ ಗುದ್ದಲಿ ಹಾಕಿದ್ದೇ ಸೈ ಇವರೇ, ಭೂತದ ಮೋಳ ಅಂದರೆ! ಏನಂತ ಗೊತ್ತಾಯಿತ? ಹೆಗ್ಗಳ! ಅಯ್ಯೊ ದೇವರೆ! ನೀವು ನೋಡಿದ್ದರೆ ಶಾಕ್ ಆಗುತ್ತಿತ್ತು. ಅಷ್ಟು! ಆ ಅಬ್ಬೆ ಮಗಳು ಅದು ಹೇಗೆ ಅಲ್ಲಿ ಆ ನಮುನೆ ತಿಂಡಿ ಅಡುಗೆ ಮಾಡಿಕೊಂಡು ಇದ್ದವೊ. ನಮುನಮೂನೆ ತಿಂಡಿ ಮಾಡಿ ಸಹ ಮಾರುತ್ತಿತ್ತಂತಲ್ಲ ಆ ಹೆಂಗಸು ಕಡೆಕಡೆಗೆ, ದುಡ್ಡು ಸಾಕಾಗದೆ? ಆ ಜಾತಿಯೇ ಹಾಗೆ. ಗೊತ್ತಿಲ್ಲದ್ದು ಇರುವುದಿಲ್ಲ ಅವಕ್ಕೆ. ಏನು ಮಾರಲಿಕ್ಕೂ ಹಿಂಜರಿಯುವುದಿಲ್ಲ.” – ರಮೇಶ ವತ್ಸಲಾ ಇಬ್ಬರೂ ಗಟ್ಟಿಯಾಗಿ ನಕ್ಕರು. ನಾನು ಮೇಲೆ ನೋಡಿದೆ.
“ಏನು, ಮಾಡು ನೋಡುತ್ತಿ? ಮುಚ್ಚಿಗೆಯೆಲ್ಲ ಹೊಸತಾಗಿ ಹಾಕಿಸಿಕೊಂಡೆವು…. ಈಗ ಹೇಗಿದೆ ನೋಡು!”
ಬಾಬುಲಿಯ ತಾಯಿಯ ಮನಸ್ಸಿನಲ್ಲಿ ಮನೆಯನ್ನು ಹೇಗೆ ಹೇಗೆ ರಿಪೇರಿ ಮಾಡಬೇಕು ಅಂತ ಇತ್ತೊ…. ಕನಸು ಕಟ್ಟಿಕೊಂಡು ಕ್ಷಣವೂ ದಂಡ ಮಾಡದೆ….
ಇಷ್ಟುಕ್ಕೂ ಇದನ್ನು ಮಾರಿದರು ಯಾಕೆ?
ವತ್ಸಲಾ ಸ್ವಂತಕ್ಕೆ ಮನೆ ತೆಗೆದುಕೊಂಡ ಮುಗಿದಷ್ಟೂ ಮುಗಿಯದ ಹುರುಪಿನಲ್ಲಿದ್ದಳು. “ಅಲ್ಲ, ಈ ಮನೆಯ ಲಕ್ಷಣವೇ ಹೀಗೋ ಏನೊ. ಆ ಬಾಬುಲಿ ತಾಯಿಗೂ ಮುಂಚೆ ಮಸ್ತು ಮಾತಂತಲ್ಲ? ಇಲ್ಲಿಗೆ ಬಂದ ಮೇಲೆ ನಾನೂ ಹಾಗೇ ಆದೆ ಮಾರಾಯಿತಿ…. ಮೆನ ಯಾಕೆ ಮಾರಿದ್ದು ಕೇಳಿದೆಯಾ? ಮಾರದೆ ನಿರ್ವಾಹವಿರಲಿಲ್ಲ. ಅಸಲುಗುಟ್ಟು ಅಂದರೆ ಇದರ ಆಚೆಯ ಜಾಗ ನನ್ನ ಅಕ್ಕಂದು. ಈಚೆಗೆ ನನ್ನ ಚಿಕ್ಕಪ್ಪಂದು. ಮಧ್ಯೆ ಇದರದು! ನೀನೀಗ ದಾಟಿಕೊಂಡು ಬಂದದ್ದು ನನ್ನ ಅಕ್ಕನ ಅಂಗಳವನ್ನೇ. ಅವರು ದಾರಿ ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲ, ಅರ್ಥವಾಯಿತೆ? ಹಾಗೆ ಸುಲಭದಲ್ಲಿ ದಾರಿ ಬಿಟ್ಟುಕೊಡುತ್ತಾರಾ ಅವರು? ಹಾಗಾಗಿ ಬೇರೆ ಯಾವ ಗಿರಾಕಿ ಬರುವುದೂ ಸಾಧ್ಯವಿರಲಿಲ್ಲ. ಸಿಕ್ಕಿಬಿತ್ತಲ್ಲ ಹೆಂಗಸು. ಕೊಡದೆ ಎಲ್ಲಿ ಹೋಗುತ್ತದೆ? ನಾವೂ ತೆಗೆದುಕೊಳ್ಳುವುದಿಲ್ಲ ಎಂದರೆ ಇದು ಮಾರಾಟವಾಗುವ ಲಕ್ಷಣವೇ ಇಲ್ಲ. ಹೆದರಿದೊ ತಾಯಿ ಮಗಳು, ನಮಗೇ ಕೊಟ್ಟೊ….”
ಪಡಾವು ಹೊಡೆದಂತೆ ರಮೇಶ ತೊಡೆ ಕುಣಿಸುತ್ತ ಕುರ್ಚಿಯಲ್ಲಿ ಕುಳಿತಿದ್ದವ “ಆಯಿತ. ಇಷ್ಟಕ್ಕೂ ಅದಕ್ಕೆ ಧಾತು ಬರುತ್ತಿರಲಿಲ್ಲ. ಆದರೆ ಇಲ್ಲೆ ಎದುರು ಮನೆ ಮಾರಾಟವಾಯಿತಲ್ಲ ಕಂಡಾಪಟ್ಟೆ ರೇಟಿಗೆ? ಅಷ್ಟೊತ್ತಿಗೆ ಅಯ್ಯೊ ತಾನು ಹೆಡ್ಡುಬಿದ್ದೆ ಅಂತ ಗೊತ್ತಾಯಿತು. ನಾವು ಏನು ಮಾಡಲಿಕ್ಕಾಗುತ್ತದೆ? ರಿಜಿಸ್ಟ್ರೇಶನ್ ಗಿಜಿಸ್ಟ್ರೇಶನ್ ಎಲ್ಲ ಕ್ರಮ ಪ್ರಕಾರ ಮಾಡದ ಮೇಲೆ? ಈಗ ದಿನಬೆಳಗಾದರೆ ಬಂದು ಜಕಣಿ ಕುಳಿತ ಹಾಗೆ ಬಾಗಿಲಲ್ಲಿ ಕುಳಿತುಕೊಳ್ಳುತ್ತದೆ. ಕೋರ್ಟಿಗೆ ಹಾಕುತ್ತೇನೆ ಅಂತ ರಾಪು ಹಾಕಿತು. ಕೋರ್ಟಿನಲ್ಲಿ ಈ ಕೇಸು ನಿಲ್ಲುವುದಿಲ್ಲ…. ಹೆ.”
ಮಾತಿನಲ್ಲಿ ತಪ್ಪು ಹುಡುಕುವಂತೆಯೇ ಇಲ್ಲ. ಹೌದಪ್ಪ, ಹೇಳಿಕೇಳಿ ವ್ಯವಹಾರ. ಅವತ್ತು ನನಗೆ ಕಾಣುತ್ತಿದ್ದ ಆ ಬಾಬುಲಿ ಮನೆಯ ಸುತ್ತ ಇಷ್ಟೆಲ್ಲ ಇತ್ತೆ? ಆವತ್ತಿನ ಗಮನಕ್ಕೇ ನಿಲುಕದ್ದು? “ಇಷ್ಟಕ್ಕೂ ತಾವೇ ಇರುವುದು ಬಿಟ್ಟು ಮಾರಿದ್ದು ಯಾಕೆ ಅಂತ ಕೇಳಿದ್ದು ನಾನು” ಎಂದೆ ಬಿಡದೆ.
“ಅದಾ?…. ಹಾಗಾದರೆ ನಿನಗೆ ಬಾಬುಲಿ ಕತೆ ಗೊತ್ತಿಲ್ಲ?”
“ಏನು?”
“ನನ್ನಾಣೆ?”
“ನಿನ್ನಾಣೆ”
“ಅಂಥಾದ್ದೇನಿಲ್ಲ. ಪ್ರಪಂಚದಲ್ಲಿ ಇಲ್ಲದ್ದೂ ಅಲ್ಲ. ಕೈಯಲ್ಲಿ ಇದ್ದದ್ದನ್ನೆಲ್ಲಾ ಖರ್ಚು ಮಡಿ ಪಾಪ ಮಗಳಿಗೆ ಮದುವೆ ಮಾಡಿದರೆ…. ಏನೋ ಆಯಿತಂತಪ್ಪ. ತಲೆಗೊಂದು ಕತೆ. ಹೇಳಿದೆನಲ್ಲ ಪ್ರಪಂಚದಲ್ಲಿ ಇದ್ದದ್ದೇ ಅಂತ. ಬಾಬುಲಿಗೆ ಹೀಗಾಯಿತು ಎಂಬುದೇ ಅಬ್ಬೆಗೆ ಶೋಕ. ಖರ್ಚಿಗೆ ಮತ್ತೆ ಏನಿತ್ತು? ಮುಂಚಿನ ಹಾಗೆ ಕಸೂತಿ ಗಿಸೂತಿ ಮಾಡಲಿಕ್ಕೆ ಕಣ್ಣು ಕಾಣಿಸತ್ತ? ಬಾಬುಲಿಯೇನು ಈಗ ಅದಕ್ಕೆಲ್ಲ ರೆಡಿ ಇಲ್ಲ. ಮನೆ ಮಾರಿ ಫಿಕ್ಸೆಡ್ಡಿಗೆ ಹಾಕಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಇದ್ದೊ ಈಗ.”
ಬಾಬುಲಿಯ ಕತೆ ಆ ಗಂಡಹೆಂಡಿರ ನಡುವೆ ಆಡುವ ಚೆಂಡನಂತೆ ಅತ್ತ ಇತ್ತ ಪುಟಿಯಿತು. ‘ತಲೆಗೊಂದು ಕತೆ’ಗಳ ಚರ್ಚೆಯಾಯಿತು. ವತ್ಸಲಾ ನನ್ನ ಕಡೆ ತಿರುಗಿ, “ಅವಳು ಒಂದು ಟೈಪ್ ಅಲ್ಲವ ಮಾರಾಯಿತಿ? ಅವಳಿಗೊಂದು ಮದುವೆಯಾದದ್ದೇ ಆಶ್ಚರ್ಯ ನನ್ನ ಕೇಳಿದರೆ” ಎಂದು ನಕ್ಕಳು.
ವತ್ಸಲ… ಈ ಪಿಡ್ಡಿ ವತ್ಸಲ. ಕಾಪಿಚಿಟ್ ವತ್ಸಲ. ಮೊನ್ನೆ ಮೊನ್ನೆಯ ವರೆಗೂ ನಮ್ಮೊಡನಿದ್ದೂ ರೂಹೇ ಇಲ್ಲದೆ ಗುಂಪಿನಲ್ಲಿ ಗುಮ್ಮಕ್ಕಿಯಾಗಿ ಹೆಸರೂ ಸಹ ಇಲ್ಲದಂತಿದ್ದವಳು. ‘ರಮೇಶನ ಹೆಂಡತಿ’ ಅಂತ ಆದದ್ದೇ ಹೀಗೆ, ಈ ರೂಪ!
“ಸ್ವಲ್ಪ ದಿವಸ ಬಾಬುಲಿಯದು ಹಾರ್ಮನಿ ಕ್ಲಾಸು ಅಂತ ಆಯಿತು. ಇಲ್ಲೇ ಶಾಲೆ ವಠಾರದಲ್ಲಿ. ಸಾ…. ಅಂತ ಬಾಯಿ ಕಳೆದದ್ದೇ ಕಳೆದದ್ದು. ಅದು ‘ಗಾಯಿಯೆ ಗಣಪತಿ’ ಗಿಂತ ಮುಂದೆ ಹೋದರೆ ಹೇಳು. ಅಲ್ಲಿ ನುಸಿ ಹೊಡೆದು ಹೊಡೆದು ಸಾಕಾಗಿ ಕ್ಲಾಸು ಮುಚ್ಚಿತು. ಹೀಗೆ ಅದು ಮುಗಿಸಿ ಇದು ಮುಗಿಸಿ ಇದು ಮುಚ್ಚಿ ಅದು ತೆರೆದು ಈಗ ಇಲೆಕ್ಷನ್ ಹುಚ್ಚು! ಎರಡು ಸಲ ನಿಂತು ಗುಳುಗುಳಿಯಾಗಿ ಈ ಸಲ ಮತ್ತೆ ನಿಂತಿದ್ದಾಳೆ – ಮುನ್ಸಿಪಾಲಿಟಿ ಇಲೆಕ್ಷನ್ನಿಗೆ. ಧೈರ್ಯ ನೋಡು! ನನಗೆ ಇವರು ಏನು ಮಾಡಿದರೂ ಮಾಡು ಎನ್ನುತ್ತಾರೆ. ನನಗೆ ಧೈರ್ಯ ಇಲ್ಲ. ಅಂಥಲ್ಲಿ!” ಗಂಡನತ್ತ ತಿರುಗಿ ಛೇಡಿಕೆಯೆಂಬಂತೆ “ಹೋಯ್ ಈ ಸಲವಾದರೂ ನಾವು ಅವಳಿಗೇ ವೋಟು ಕೊಡುವ. ಗೆಲ್ಲಿಸುವ. ನಮ್ಮ ವಾರ್ಡಿಗೆ ಏನಾದರೂ ಮಾಡುವಳಾ ನೋಡುವ” ಎಂಉದ ನಗೆಯಾಡಿದಳು.
ರಮೇಶ ವ್ಯಂಗ್ಯವಾಗಿ “ಗೆಲ್ಲಿಸುವ ಗೆಲ್ಲಿಸುವ. ಈಗ ಯಾರ್‍ಯಾರಿಗೆಲ್ಲ ಏನೇನೆಲ್ಲ ಕೆಲಸ ಮಾಡಿಕೊಡುತ್ತದಂತಪ್ಪ ಅದು. ತಾಲೂಕಾಪೀಸು ಗಿಲೂಕಾಪೀಸು ಎಲ್ಲ ತಿರುಗಿ. ಈ ಸಲ ಇಲೆಕ್ಷನ್ನಿನಲ್ಲಂತೂ ಬರೀ ಹೆಂಗಸರೇ ತುಂಬಿದೊ. ಒಟ್ಟು ಸ್ತ್ರೀ ಮಲೆಯಾಳ. ಗೆದ್ದು ಬಂದು ಏನು ಕಡಿಯುತ್ತವೆ ನೋಡಬೆಕು.”
“ಗೆಲ್ಲಬೇಕಾಯಿತ್ಲ ಮೊದಲು…. ಅಲ್ಲನ, ಮರ್ಯಾದಸ್ಥರಿಗೆ ಬೇಕಾ ಹೇಳು ತಾಲೂಕಾಪೀಸು ತಿರುಗುವ ಕೆಲಸ?”
“ಆದರೆ ಬಾಬುಲಿ ಮುಂಚಿನಿಂದಲೂ ಹುಶಾರು.” ಎಂದೆ ಮೆಚ್ಚುಗೆಯಿಂದ.
“ಎಂಥ ‘ಹುಶಾರು’. ಅದೊಂದು ಹುಶಾರು ಅನ್ನುತ್ತೀಯ? ಅದಕ್ಕೇ ತಲೆಕೆಳಗೆ ಕಾಲು ಮೇಲೆ ಆದ್ದು.”
… ಸ್ವಂತ ಮೆನಯ ಸ್ವೀಟು ಖಾರ ಬಂತು. “ನನಗೆ ಹೊಟ್ಟೆ ತೊಳೆಸುತ್ತಿದೆ. ಬೇಡ”.
“ಗೋಡೆಗೆ ಬಳಿದ ಹೊಸ ಬಣ್ಣದ ವಾಸನೆ ನೋಡೂ….?” ಎಂದು ಅದಕ್ಕೂ ಕಾರಣ ಪುರಾಣ ಬಿಚ್ಚಿದಳು. ಬೇಗ ಇಲ್ಲಿಂದ ಹೊರಡಬೇಕು. ಒಂದು ಬಗೆಯ ದಿಗ್ಭ್ರಾಂತ ಸ್ಥಿತಿಯಲ್ಲಿದ್ದೆ. ಒಳಗೆ ಬಾಬುಲಿಯ ತಂದೆ ಹಾರ್ಟ್‌ಫೇಲಾದ ಕೋಣೆ ಕಾಣೀಸುತ್ತಿತ್ತು. ಮುಂಚಿನಕ್ಕಿಂತ ಶುಭ್ರವಾಗಿ. ಹಾಲಿನ ಮನೆಗೆ ಹಾಲು ಕೊಟ್ಟು ಹೂವಿನ ಮನೆಗೆ ಹೂವು ಕೊಟ್ಟು ಕಸೂತಿ ಕೊಡುವಲ್ಲಿ ಕೊಟ್ಟು ರುವಿರುವಿ ಗಂಟು ಹಾಕಿ ನಾಳೆಗೆ ಎಂದು ಹೆಜ್ಜೆಯಿಡುತ್ತಿದ್ದ ಬಾಬುಲಿ ಮತ್ತು ತಾಯಿ. ಹೇಗಿದ್ದಾಳೊ ಬಾಬುಲಿ ಈಗ….
“ಹೇಗಿದ್ದಾಳೊ ಬಾಬುಲಿ ಈಗ…..?”
“ಹೇಗೆ ಏನು? ಒಣಕಟೆ ಪೇದ್ರುವಿನ ಹಾಗೆ ಆಗಿದ್ದಾಳೆ. ನೋಡಿದರೆ ನಾಯಿ ಸತ ತೆಳಿ ಕುಡಿಯ.” ಯಾವಾಗಲೂ ಅಷ್ಟೆ. ನಾಲಗೆಯೆಂಬುದು ಕೇವಲ ವ್ಯವಹಾರ ಎಂಬಷ್ಟಕ್ಕೇ ನಿಲ್ಲುವುದಿಲ್ಲ. ಅದನ್ನು ದಾಟಿ ಎಲ್ಲೆಲ್ಲೋ ಉಗುಳುತ್ತದೆ. ವತ್ಸಲನ ಕೆನ್ನೆಗೆ ತಟ್ಟಿದರೆ ಹೇಗೆ ಈಗ?
“ಹೋಗುತ್ತೇನೆ ನಾನು.” – ಎದ್ದೆ.
“ಇರು ಇರು. ಇವತ್ತು ಯಾವುದು, ಶನಿವಾರವಲ್ಲವೆ? ಒಂದು ನಾಟಕ ನೋಡಬಹುದು. ಈ…ಗ ಬರುತ್ತದೆ ಬಾಬುಲಿ ತಾಯಿ. ಖಂಡಿತಾ. ‘ಇನ್ನು ಒಂದು ಹತ್ತು ಸಾವಿರವಾದರೂ ಕೊಡಿ. ತಿಂಗಳಿಗೆ ನಾಲ್ಕು ಕಾಯಿಯನ್ನಾದರೂ ಕೊಡಿ.’ ಅಂತೆಲ್ಲ. ಈಗೀಗ ಸ್ವಲ್ಪ ಸ್ವಯವೂ ಕಡಿಮೆಯಾಗಿದೆ ಅದಕ್ಕೆ. ಬಂದದ್ದು ಹೋಗುವುದೇ ಇಲ್ಲ ಸುಮಾರು ಹೊತ್ತು. ಇವರು ಅದರೊಡನೆ ಮಾತಾಡಿ ಕಳಿಸುವ ಗಮ್ಮತ್ತು ನೋಡಲೇಬೇಕು ನೀನು.”
ಅಗತ್ಯವಿಲ್ಲವೆಂಬಂತೆ ನಾನು ಹೊರಟೆ. ಯಾರೂ ಏನೂ ಮಾಡಲಾರದ ಇಕ್ಕಟ್ಟಿನಲ್ಲಿ ಸಿಕ್ಕಿ ಕಂಗಾಲಾಗಿರುವ ಬಾಬುಲಿ ತಾಯಿಯನ್ನು ಇಲ್ಲಿ ಈ ‘ವತ್ಸಲನ ಮನೆ’ ಎಂಬಲ್ಲಂತೂ ಸುತರಾಂ ನೋಡಲಾರೆ.
“ಬಾಬುಲಿಯನ್ನು ನೋಡಿ ಹೋಗುತ್ತೀಯ ಈ ಸಲ?”
“ಇಲ್ಲ….”
“ಬಿಡು. ನೋಡುವುದೆಂತದು ಅವಳನ್ನ….”
“ಹಾಗಲ್ಲ….. ಹಾಗಲ್ಲ….”
ಅವತ್ತು ಹಾಲಿನ ಚೊಂಬು ಅಡಗಿಸಿದೊಂಡು ಹಿಂಬಾಗಿಲಿಗೆ ಹೋದ ಬಾಬುಲಿ ಅವಳು. ಹಾಗೆ ಯಾಕೆಂದು ಆಗ ನನಗೆ ತಿಳಿಯಲಿಲ್ಲವೆಂದರೆ ಈಗಲೂ? ಅವಳನ್ನು ನೋಡುವ ಕಾಲ ಈ ಕ್ಷಣವಂತೂ ಅಲ್ಲ.
ವತ್ಸಲನಿಗೆ ಇದೆಲ್ಲ ವಿವರಿಸಿ ಪ್ರಯೋಜನವಿಲ್ಲ. ಮನೆ ರಿಪೇರಿಯಾದರೂ ಸುಲಭ….
ಹರಟು ಮುಂದೆ ಬಂದೆ. ಮತ್ತೆ ಏನೋ ಅನಿಸಿ ನಿಂತು ಹಿಂತಿರುಗಿ ನೋಡಿ “ಇಲೆಕ್ಷನ್ನಿನಲ್ಲಿ ಈ ಸಲ ಅವಳನ್ನ ಗೆಲ್ಲಿಸಿ, ತಮಾಷೆಯಲ್ಲ.” ಎಂದೆ ಕೂಗಿ.
“ಹ್ಹೋ. ಕೆನ್ವಾಸ್ ಮಾಡಲು ಬಿಟ್ಟಿದ್ದಾಳಾ ನಿನ್ನ? ಎಷ್ಟು ಕೊಡುತ್ತಾಳೆ ದಿವಸಕ್ಕೆ?” ತಾನೆಂದದ್ದು ತಮಾಷೆಯೆಂಬಂತೆ ನಕ್ಕಳು ವತ್ಸಲ. ಈ ನಗೆ, ಇದು ಪರಿಚಿತ ನಗೆ. ನಾನೇ ಯಾವತ್ತೋ ಜೊತೆಗೂಡಿದ ನಗೆ….!
“ಅವಳಿಗೆ ವೋಟು ಕೊಟ್ಟರೆ ಮುಗಿಯಿತು. ಊರು ಕವುಚಿ ಹಾಕಿ….”
ಈಗ ಮಾತ್ರ ನಾನು ತಡೆಯದಾದೆ. ಅವಳು ಮಾತು ಮುಂದುವರೆಸುತ್ತಿದ್ದಂತೆ ಸರಸರ ಹಿಂದ ಬಂದು “ಹೇ…. ನಸೀಬು! ನಸೀಬು ಎಂದೆ! ನಸೀಬಿದ್ದರೆ ಅವಳು ಗೆಲ್ಲದೆ ಎಲ್ಲಿ ಹೋಗುತ್ತಾಳೆ?” ಬೀಸಿ ನುಡಿದು ಅಲ್ಲಿಂದ ದಾಟುತ್ತಿದ್ದಂತೆ ಮತ್ತೆ ಹಿಂತಿರುಗಿ ನೋಡಿದೆ. ನೋಡಿದರೆ…. ಅರೆ….
ಅಲ್ಲಿ ನಗುತ್ತ ನಿಂತಿರುವುದು ಯಾರದು?
ವತ್ಸಲನೆ?…… ನಿರ್ಮಲನೆ?
*****
