‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ
ನನ್ನ ಅಂತಃಕರಣದ ಮುಗ್ಧ
ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ
ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’?
ಮ ‘ಮ’ಕಾರಕ್ಕೆ ಈಡಾಗಿ
ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ
ಕಣ್ಣುಪಟ್ಟಿಯ ಕಟ್ಟಿ ಓಡಿಸಿದ ರಥ-ಪಥದ
ಚಕ್ರಕ್ಕೆ ಸಿಕ್ಕು ಚೀತ್ಕರಿಸಿ
ನೋಡ ನೋಡುತ್ತ ಹಾಡೇ ಹಗಲು
ಕವಿದ ಕತ್ತಲು;
ಬೇತಾಳಗಳ ಪದಾಘಾತಕ್ಕೆ
ರಾಮಾರಗತವಾಗಿ ಹೋದಿರಾ?
ಇಲ್ಲ-
ಓಂಕಾರದ ಶಂಖದಿಂದ ನಾಭಿಮೂಲಕ್ಕಿರಿದು
ಕರಳು ಹೊರದೆಗೆದು, ಜೈಕಾರಗೈದ
ಸಾಧು ಸತ್ಪುರುಷರ ಕಂಡು
ಮರಾ ಮರಾ ಮರಾ ಮರುಗಿದಿರಾ?
ಸೇಡಿನ ಹೋಮ ಹವನಕ್ಕೆ ಪ್ರೀತಿ, ಮೈತ್ರಿಯ ಎಲ್ಲಾ ಆಹುತಿಯಾಗಿ ಹೋದ-
ವಲ್ಲಾ!
ತಿಳಿವಿನ ತುಪ್ಪ ಸುಟ್ಟ ಕಮಟು ವಾಸನೆಯಲ್ಲಿ
ಶ್ವಾಸೋಚ್ಛ್ವಾಸಕ್ಕೆ ಕೂಡ ದಾರಿಯಿಲ್ಲ.
ಗೂಢ ಗುಮ್ಮಟದೊಳಗೆ
ಗು ಗುಟುಕಿಟ್ಟು, ಪಟಪಟ ರೆಕ್ಕೆ ಬಡಿವಾಗ
ಬಿಳಿ ಪಾರಿವಾಳ,
ಸುತ್ತಿಗೆ ಹಿಡಿದು ಬಡಿದು ಕತ್ತರಿಸಿ
ತಾಯ ಮೊಲೆತೊಟ್ಟು
(ಮಕ್ಕಳಿವರೇನಮ್ಮ…ಮಕ್ಕಳಿವರೇನಮ್ಮ)
ಚರಿತ್ರೆಯ ಪುಟಪುಟದಲ್ಲಿ ಮತ್ತೆ
ರಕ್ತ ತಟಗುಟ್ಟಿ
ಸರಯೂ ನದಿಯು ಮುಂದೆ ಹರಿಯಲಿಲ್ಲ.
ಚೂರಿ ಇರಿತಕ್ಕೆ ಕುಸಿದ ನಿಶ್ಯಬ್ದ ಶಬ್ದಗಳೆ
ಮೆಲ್ಲಗೆ ಎತ್ತಿ, ಗಲ್ಲಕೆ ಒತ್ತಿಕೊಳ್ಳುತ್ತೇನೆ.
ಅಕ್ಷರಕ್ಷರದಲ್ಲಿ ಬೆಸೆದು, ಭಾಷೆ
ಕೊಟ್ಟಿದ್ದೀರಿ ಭಾವಕ್ಕೆ
ಹೃದಯ ಸಂವಾದಕ್ಕೆ, ಅನುಭಾವ ಗೀತಕ್ಕೆ
ಈಗ ಏತಕ್ಕೆ ಮೂಕವಾಗಿದ್ದೀರಿ?
ಬೆಂಕಿಯಾರಿಸಿ, ಕಣ್ಣಿರನೊರೆಸಿ,ಅಕಲಂಕವಾಗಿ
ಬನ್ನಿ, ಬನ್ನಿ ಕನಸುಗಳೇ ಮರಳಿ ತಲೆಯ ಗುಮ್ಮಟಿಕೆ
ಕಾದಿರುವ ಹೃದಯ ಕಮ್ಮಟಿಕೆ:
ಸೌಹಾರ್ದದ ಮುದ್ರೆ ಪಡೆದು ಚಲಾವಣೆಯಾಗಿ
ದೇಶದುದ್ದಗಲಕ್ಕು ಸಂಚರಿಸಿ
ಸಮ-ರಸ-ಧ್ವನಿಯಾಗಿ.
*****