“ನಿನ್ನೆದೆಯೆ ಜೇನ ನೀಡುವ ನಲ್ಮೆಯಿಂದೆನ್ನ
ಒಲಿಸಿ ಮೀಸಲು ನಗೆಯ ಸೂಸಿ ಕರೆದೆ.
ಇಂದೇಕೆ ಮೊಗಬಾಡಿ ವಿಹ್ವಲ ವಿಕಾರದಲಿ
ನಿಂದಿರುವೆ ಚಂದುಳ್ಳ ಮಧುರ ಹೂವೆ?”
“ಬೇರೊಂದು ದುರುದುಂಬಿ ಕೆಟ್ಟಗಾಳಿಯ ಸುಳಿಗೆ
ಬಂದೆನ್ನ ಬಲುಮೆಯಲಿ ಬಲಿಗೊಂಡಿತು;
ಅಯ್ಯೊ ಆ ವಿಷನಿಮಿಷ! ಮೈಯೆಲ್ಲ ಉರಿಯುತಿದೆ
ಅಬಲೆಯೆಂದನೆ- ಸಾವು ಬೇಕಾಯಿತು!”
ತುಂಬಿ ಮೊರೆಯಿತು ಮರೆಯಲಾರೆನೆಂದು
ನೊಂದ ಹೂ ಕಳಚಿತ್ತು ಎದೆಯು ಬೆಂದು;
ಗಾಳಿ ಗೋಳಿಡೆ ಹಾಡೆ ಚರಮಗೀತ
ಮುಗಿಲ ಹೆಗಲೇರಿ ಸಾಗಿತ್ತು ಪ್ರೇತ!
*****