ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು.
ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ
ಬೀಳದಲ್ಲಿ ಜೋಪಾನ ಬಚ್ಚಿಟ್ಟು
ಬಲಿತು ನಡೆವನಕೆ ಕಾಪಿಟ್ಟು
ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ
ಪವಾಡ ಮಾಡುವಿಯೆಂದು ತಿಳಿದಿತ್ತು.
ಹಳೆಜಿಡ್ಡು ಕಳೆದ ಹೊಸ ಕಾಲಿಗಂಟುವುದಕ್ಕೆ
ನನಗೊಂದಿಷ್ಟು ಸಮಯ ಬೇಕಿತ್ತು. ಅದಕ್ಕೇ
ಹಾರುವ ನಿನ್ನ ತಡೆಯುವುದಕ್ಕೆ
ರೆಕ್ಕೆಗೆ ಗುರಿ ಹಿಡಿದರೆ ತಪ್ಪಿ
ಎದೆಗೇಟು ಬಿತ್ತು. ಅದಕ್ಕೂ ನೀನು
ರಕ್ತವಿದೆಕೋ ಮಾಂಸವಿದೆಕೋ ಅಂತ ಹಲುಬಿದಾಗ
ಹಸುವಿನ ರಕ್ಷಣೆಗೆ ವೈಕುಂಠ ಅವತರಿಸಲಿಲ್ಲ.
ರಾಮನ ಮುಖವಾಡ ನಿನ್ನ ಕಾಪಾಡಲಿಲ್ಲ.
ನೀ ಬಿದ್ದ ಭಂಗಿ ನಡುಗುವ ನನ್ನ ನೋಡಿ
ಕನಿಕರಿಸಿದಂತಿತ್ತು.
ನೆಲದ ಮೇಲೆ ನೆರಳು ನೆತ್ತರಲ್ಲದ್ದಿ
ಒದ್ದೆಯಾಗಿತ್ತು.
ಕಥೆಯ ನಾಯಕನಂತೆ ಹೇಳವರ ಬಾಯಲ್ಲಿ ಸತ್ತದ್ದೇ
ನಿನಗೆ ಸದ್ಗತಿಯಾಯ್ತು.
ನಮಗೇನು ಸುಳವೆ? ನೋಡು ಏನಾಗಿದೆ:
ನಿನ್ನ ನೆತ್ತರು ಬಿರುಗಾಳಿಗಳನ್ನ ಎಚ್ಚರಿಸಿ
ಅವು ಬೀಸಿ, ಕೂತವರ ಕಣ್ಣಿಗೆ ಮಣ್ಣೆರಚಿ
ಮಳಲಿನ ಮರುಭೂಮಿಯಲ್ಲಿ ಹಸಿರು
ಹುರುಪಳಿಸಿದೆ.
ದೇಶದ ನಕಾಶೆಗಂಟಿದ ಹಸಿರಕ್ತದ ಕಲೆಯಿನ್ನೂ
ಹಾಗೇ ಇದೆ.
ತಪ್ಪು ನಾನೇ ಮಾಡಿರಬಹುದು, ಹಾಗಂತ
ಹೆಜ್ಜೆಗಳನ್ನ ಜೊತೆಗೊಯ್ದದ್ದೂ ತಪ್ಪು.
ಈಗಲಾದರೂ ನಂಬು:
ಕೊಲೆಗಲ್ಲ ಮಾರಾಯಾ ನಾನು ಬಂದದ್ದು,
ನೀ ಸರಾಗ ಹಾರುವ ನೀಲಿ ಕೈಲಾಸದ
ಖಜಾನೆಯ ಮಣಿಗಳಿಗಾಗಿ ಬಂದಿದ್ದೆ.
ಅವಕಾಶ ತಪ್ಪಿಸಿಕೊಂಡೆ,
ನೀನು ಕೂಡ.
*****