ಏನಿದೀ ಹನಿಹನಿಯ ತೆನೆತೆನೆ ಸಿವುಡುಗಟ್ಟುತ ಒಗೆವುದು!
ಗುಡ್ಡ ಗುಡ್ಡಕೆ ಗೂಡು ಬಡಿಯುತ ಬೇರೆ ಸುಗ್ಗಿಯ ಬಗೆವುದು.
ಸೆಳಸೆಳಕು ಬೆಳೆ ಕೊಯಿದರೂ ಆ ಮೋಡದೊಕ್ಕಲು ತಂಗದು
ಬಾನ ಮೇಟಿಗೆ ಸೋನೆ ತೂರುತ ರಾಶಿಮಾಡದೆ ಹಿಂಗದು.
ಏನು ಬೆಳ್ಳಗೆ ಎಷ್ಟು ತೆಳ್ಳಗೆ ಮಳೆಯ ಮಸ್ಲಿನ್ ಪರದೆಯು!
ಒಳಗೆ ಸುಮ್ಮನೆ ಕುಳಿತು ನೋಡುವಳಾರು ಹೇಳಾ ಮುಗುದೆಯು?
ಹೂ ಬಿಸಿಲ ಕರವಸ್ತ್ರದಲ್ಲಿ ತರತರದ ಹಣಿಕೆಯ ನಕ್ಷೆಯು
ದೂರ ಹೋದವರಿಂದು ಬರುವರೆ, ಎಂದು ಬರುವ ನಿರೀಕ್ಷೆಯು?
ನೋಡು, ಮೋಡದ ಬಸ್ಸು ಭರ ಭರ ತುಂಬಿಕೊಂಡೇ ಸಾಗಿವೆ
ಯಾವ ಗಿರಿ ಶಿಖರದಲ್ಲಿ ಜಾತ್ರೆಯೊ, ಏಳುಕೊಳ್ಳಕೆ ಬಾಗಿವೆ.
ದೂರ ದೇಶದ ಯಾತ್ರಿಕರು ತಾ ಬೇರೆ ದೇಶಕೆ ಬಂದರು
ಕಂಡ ಗುಡಿ ಗೋಪುರಕೆ ಕೈ ಮುಗಿಯುತ್ತ ಅಲ್ಲಿಯ ನಿಂದರು.
ಏನು ಕಳಕೊಂಡಿರುವೆ ಗಾಳಿಯೆ ಏಕೆ ಈ ಪರಿ ಹುಡುಕುವೆ?
ಕಿಡಕಿ ಬಾಗಿಲು ಮುಚ್ಚಿರಲು ಕಿರು ಬಿರುಕಿನಲಿ ಬಿಸುಸುಯ್ಯುವೆ.
ಆ ಹಿಮಾಲಯದಿಂದ ನಿನ್ನನು ಬೀಸಿ ಒಗೆದರೆ ಇಲ್ಲಿಗೆ?
ಸಪ್ತಸಾಗರ ಸುತ್ತಿ ಬಂದೆಯ, ಮತ್ತೆ ಹೋಗುವದೆಲ್ಲಿಗೆ?
ಮೋಡ ನೂತೇ ನೂಲುವದು ಬಿಳಿ ದಾರ ಧಾರಾಕಾರದಿ
ಗುಡ್ಡ ಮರಡಿಗೆ ಸುತ್ತಿ ಕುಕ್ಕಡಿ ಮಾಡಿ ತುಂಬಿದೆ ಕೊಳ್ಳದಿ,
ಹಳ್ಳ-ಹೊಳೆ ಮಗ್ಗದಲಿ ನೇಯುತ ಹೊರಗೆ ಕಳಿಸಿದೆ ಮಾಲನು
ಗದ್ದೆ ಹೊಲ ತೋಟಕ್ಕೆ ಹೊಚ್ಚಿದೆ ಕೆಂಪು ಖಾದಿಯ ಶಾಲನು.
ಹಗಲು ಇರುಳೂ ಕೆಲಸವೇನಿದೆ ಮಳೆಗೆ?- ಬಂದೇ ಬರುವದು,
ನಡುವೆ ಚಕ್ಕನ ಹಸುರ ಮಧ್ಯಕೆ ಸೂರ್‍ಯ ಸರ್‍ಚ್‌ಲೈಟ್ ಕೆಡವಲು
ಹನುಮನದೆಯೊಳು ರಾಮ ಸೀತೆಯರಂತೆ ಕಣ್ಣಿಗೆ ಹೊಳೆವುದು
ಮರುಚಣವೆ ಆಕಾಶವೆಲ್ಲವು ಹರಿದು ಬಿದ್ದೂಲು ಸುರಿವುದು.
ಕಾರಹುಣ್ಣಿವೆ ಕರಿ ಹರಿದು, ಮಣ್ಣೆತ್ತು ನೀರು ಕುಡಿದವು.
ಬಂತು ಪಂಚಮಿ ಬೋಲಬಗರಿಗೆ, ಹೆಣ್ಣು ತವರಿಗೆ ಮಿಡಿದವು.
‘ಅರಳು-ಮರಳಿ’ನ ಕವಿಯು ಕರೆದನು ‘ಬಾರೊ ಸಾಧನಕೇರಿಗೆ’-
ಬಂತು ಶ್ರಾವಣ ಬಳಗದೊಂದಿಗೆ ‘ಮಳೆಯು ಎಳೆಯುವ ತೇರಿಗೆ’
ಗಣಪತಿಯು ಇಲಿಯೇರಿ ಭರ್‍ಜರಿ ವೇಷದಲ್ಲಿಯೆ ಬಂದನು
ಕರಿಕೆ ಪತ್ರಿಯ ಪೂಜೆ ಸಂದಿತು, ಕಡಬು ಹೋಳಿಗೆ ತಿಂದನು.
ಘಟಸ್ಥಾಪನೆಯಾಯ್ತು: ಮೋಡದ ಕೊಡವು ಬುಡಮೇಲಾಯಿತು
ಸೀಗೆ ಹುಣ್ಣಿವೆಗಾ ಮಸಾರಿಯು ಹಸುರು ಪುಚ್ಚವ ತೆರೆಯಿತು.
ಗೌರಿ ಹುಣ್ಣಿವೆ ಹಾಲ್ಗುಡಿದು ಬಿಳಿಜೋಳ ಧ್ವಜವನ್ನೆತ್ತಿತು.
ಗೋದಿ ಹೊಡೆಗಚ್ಚಿರಲು ಕಡಲೆಯ ಮಡಿಲು ಹೂಮಿಡಿ ತುಂಬಿತು;
ಕುಸುಬೆ ಹೂಗಳ ಜರದ ಪೀತಾಂಬರವ ಹಬ್ಬಕೆ ಉಟ್ಟಿತು
ಮೊದಲೆ ದೀಪಾವಳಿಗೆ ಒಲುಮೆಯ ದೀಪ ಬೆಳಗಿಸಿಕೊಂಡಿತು.
ಏನು ಈ ಗಿಡ ಬಳ್ಳಿ ಮರಗಳಿಗೆಲ್ಲ ಎಂತಹ ಜಳಕವು!
ಹಸುರು ಹಚ್ಚನೆ ನಿಮಿರಿ ನಿಂತಿಹ ನಲಕೆ ಹರ್‍ಷದ ಪುಳಕವು
ಎಲ್ಲಿಯಾದರು ಕಸರು-ಕಡ್ಡಿಯ ಹುಡುಕಿ ತೆಗೆಯಿರಿ ನೋಡುವ-
ಕೆಸರೊ? ಬೇಕಾದಷ್ಟು-ನಡೆಯಿರಿ ನಗರ ಸಭೆಗೇ ತೂರುವ.
ಕೊಡೆ ಹಿಡಿದು ಕಾಯ್‌ಪಲ್ಲೆ ತಂದರೆ ಪ್ಯಾಂಟು ಕೂಡಲೆ ಪಚಡಿಯು.
ಕಾರು ಹಾಯ್ದರೆ ಬಾಯ್ಗೆ ಸಿಡಿವುದು ಕೆಂಪು ಗೋದಿಯ ಕಿಚಡಿಯು.
ಮಳೆಯ ಪಂಜರದಲ್ಲಿ ಸೆರೆಯಾಗಿಹೆವು ಸರ್‍ಕಸ್ ಹುಲಿಗಳು.
ಅಲ್ಲಿ ಹೊಲ ಗದ್ದೆಯಲ್ಲಿ ಕೊಪ್ಪೆಯ ಹೊತ್ತು ಗೆಯ್ವರೆ ಕಲಿಗಳು.
ಬೂಟು ಚಪ್ಪಲು ಮಾಡದಲ್ಲಿಯೆ ಬುರುಸುಗಟ್ಟವೆ ಥಂಡಿಗೆ-
ಕೋಟು ಸ್ವೆಟರಿನ ಮೇಲೆ ಸ್ಕಾರ್‍ಫನು ಸುತ್ತಿ ಹೊರಟಿರ ದಂಡಿಗೆ?
ಬಿಸಿಲ ಮೋರೆಯ ಕಾಂಬುದಾಯಿತು ಬರಿಯ ಮನಸಿನ ಮಂಡಿಗೆ
ಜೀವ ಬೇಡಿದೆ ಕಾಫಿ ದೋಸೆಯ ಕರಿದ ಹಪ್ಪಳ ಸಂಡಿಗೆ.
ಒಲೆಯ ಬದಿಯಲಿ ತಲೆಯ ಹುದುಗಿಸಿ ಮಲಗಿಕೊಂಡಿಹ ಬೆಕ್ಕಿಗೆ
ಕನಸಿನಲ್ಲಿಯು ಇಲಿಯು ಬಾರದು, ಹಕ್ಕಿ ಗೂಡೊಳು ತೆಪ್ಪಗೆ.
ಮೈಯುಡುಗಿ ನಡುಗುತ್ತ ದನಕರು ಮೇದು ಬರುತಿವೆ ಒಟ್ಟಿಗೆ
ಮನೆಯ ಒಳಗೇ ಕುಳಿತು ಕಾತರಿಸಿಹೆನು ಗೆಳೆಯರ ಭೆಟ್ಟಿಗೆ.
ಬಿಸೇ ಚುರುಮರಿ ಕಡಲೆ ಮಾರುವ ಮುದುಕಿ ಬಂದರೆ ಕರೆಯಿರಿ
ಮಕ್ಕಳೊಂದಿಗೆ ಕುಳಿತು, ಕುರುಕುರು ತಿಂದು ಹೊರಜಗ ಮರೆಯಿರಿ.
ಅಷ್ಟು ಮಿಕ್ಕೀ ಬೇಸರಾದರೆ ರೇಡಿಯೊ ಕಿವಿ ತಿರುವಿರಿ.
ರಾತ್ರಿಯಾಗಲು ಊಟ ತೀರಿಸಿ ಜೊತೆಗೆ ಬೆಚ್ಚಗೆ ಮಲಗಿರಿ.
*****
