ಕವಿತೆ

ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ
ಸಂಕಲ್ಪವೊಂದೇ ಮೋಡ; ಶಾಖ ಮರೆ,
ಬರೆದರೆ ಬರೀ ಅಕ್ಷರಗಳ ಹೊರೆ;
ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ.
ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ
ಒರಗಿದರೆ ಬರೆಯಿಸುವ ಅದೃಢತೆ;
ಹೊರಗಾಗುವುದು ಕವಿತೆ.

ಒಮ್ಮೊಮ್ಮೆ ಏನೆಲ್ಲಾ ಹೊಳೆಯುವುದು
ಬೆಳೆಯುವುದು ನನ್ನ ಬೀಜಗೊಳಿಸಿ ಅಳಿಸಿ
ಬಿಳಲನ್ನೊತ್ತಿ ಪದ್ಯ;
ಆಗ ಋತುಗಳ ನಡುವಿನ ನದಿಯ ವೈವಿಧ್ಯ.
ಕೂತರೆ ಅಲ್ಲಾಡಿಸದ ಬರೀ ಭಾವಗಳ ಅವಶತೆ;
ನೀರೆರೆದುಕೊಂಡು ಸೀರೆಯುಡುವುದು ಕವಿತೆ.

ಬರೆಯುವುದೇ ಬೇಡವೆನ್ನಿಸುವ ಅತೃಪ್ತತೆಯ
ಬೇಸರಿನ ಒಂದೇತನದ ತಂತಿಯ ಮಧ್ಯೆ
ಆಗೀಗ ದೀಪಗಂಬದ ಬೆಳಕ ಏಕಾಗ್ರ ಕ್ಶಣ.
ಮೌನವನೆ ಮುತ್ತಿಕ್ಕಿ ಲಜ್ಜೆಗೆಂಪಾದ ಮಾತು
ಔಚಿತ್ಯ ಸೂಚ್ಯತೆ-
ಹುಣ್ಣಿಮೆಯ ಅಸ್ಪಷ್ಟತೆಯಲ್ಲಿ ತಾನಾಗಿ
ನಗ್ನ ನಿಲುವುದು ಕವಿತೆ.
*****
ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.