ಪ್ರಾಯ

ಚಿಗುರು ಚಿವುಟಿದರೆ
ಜಿನುಗುವ ಸೊಕ್ಕು ಪ್ರಕೃತಿಗೆ
ಹಸಿರುಕ್ಕುವ ಗೀಳು
ಖುಷಿ ಕನಸು ಋತು ಮನಸು
ಕೆನೆಗಟ್ಟಿ ಮಧುರ
ತುಷಾರದ ಗೊಂಬೆ
ಕೇಕೆ ತಮಾಷೆ

ಕೊನೆಮನೆಯ ಕಾಮಾಕ್ಷಿ
ಕಾಮ ಉಲಿಯುವದಿಲ್ಲ
ಕೆಟ್ಟ ಹುಡುಗಿಯ
ದಿಟ್ಟ ತೊಗಲಿನ ಒಳಗೆ
ಬೇಯುತ್ತಿದೆ ಹಾ ನನ್ನ ವರ್ತಮಾನ

ಸೊನ್ನೆ ನಾ
ಬಾಟನಿ ಲ್ಯಾಬಿನ ಎಲೆ ಹಸಿರು
ಹೂ ಕೊಯ್ಯುವ ಸೂಕ್ಷ್ಮ
ದರ್ಶಕದಲ್ಲಿ
ಪ್ರಾಯದ ಬಣ್ಣ ಹುಡುಕುತ್ತೇನೆ

ಹಹ್ಹಾ
ಬಂಡಾಯದ ಕನಸುಂಡ
ಗಂಡು ನಾ
ಪರಾಗ ಮುಕ್ಕಿ ಕಚ ಕಚ
ಪಕಳೆ ನೆಕ್ಕಿ
ತೊಯ್ದು ಹೋಗುತ್ತೇನೆ

ವಿಲಿವಿಲಿಸಿ
ಸೊಕ್ಕಿದ ಕಾಮಾಕ್ಷಿ
ಕದ್ದು ಕದ ತೆರೆದ ಕಣ್ಣಲ್ಲೆ
ಫಕ್ಕನೆ ಆರಿಹೋಗುತ್ತಾಳೆ
*****