‘ಶ್ರೀ’ಯವರನ್ನು ನೆನೆದು

ಕಂನಾಡ ಬಾನಿನಲಿ ಶ್ರೀಕಾರ ಬರೆದಂತೆ
‘ಶ್ರೀ’ ಬೆಳ್ಳಿ ಚಿಕ್ಕೆ ಲಕಲಕಿಸಿ ಬೆಳ್ಳಂಗೆಡೆಯೆ
ನಾಡ ನಾಡಿಗಳಲ್ಲಿ ಚೈತನ್ಯ ಸೆಲೆಯೊಡೆಯೆ

ಬಾವುಟವನೆತ್ತಿ ದಿಗ್ವಿಜಯಮಂ ಪಡೆದಂತೆ
ದಂಡಯಾತ್ರೆಯ ಗೈದ ವಾಗ್ಮಿಭವದುನ್ನತಿಯು!

ತುಂಬು-ವಿದ್ಯೆಯ ತುಂಬುಗಾಂಭೀರ್‍ಯದಲಿ ಮೆರೆದು
ಕನ್ನಡದ ಸಾರ ಸರ್‍ವಸ್ವ ಕಡಲಂ ಕಡೆದು

ನವನೀತಮಂ ತೆಗೆದ ಹಿರಿಗೌರವದ ಪರಿಯು.
ಥೇಮ್ಸ್ ನದಿ, ಕಾವೇರಿ ಸಂಗಮಿಸಿ ಹರಿಯುವೊಡೆ

ನಿಮ್ಮ ಗೀತಸ್ರೋತ! ಏನಿದಚ್ಚರಿಯೆಂದು
ಕಂದೆರೆದು ನೋಡುತಿರೆ ಆ ಪ್ರವಾಹದಿ ಮಿಂದು

“ಸಿರಿಗನ್ನಡಂ ಗೆಲ್ಗೆ!” ಎಂದು ಮುನ್ನಡೆದ ಪಡೆ!
“ಬೀಳ್ಕೊಡಿಂ” ಎನಲೇಕೆ? ಕರುಣಾಳು ಬಾ ಬೆಳಕೆ!
ಸದ್ಗುರು ಪರಂಪರೆಯ ಪುಣ್ಯ ಶ್ರೀಕಂಠಿಕೆ!
*****