ಯಾಕೆ ಸುಮ್ಮನೆ ನಾವು
ಹಾದಿ ಕಾಯುತ್ತೇವೋ
ಬಂದರೂ ಬಾರದ ಹಾಗೇ
ಇರುವಂಥವರ!
ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ
ಕಣ್ಣ ಕೊನೆಯಿಂದ ಕಿಡಿ ಕಾರಿ
ಚಟ ಪಟ ಸಿಡಿದು
ಹೊರಟು ಹೋದವರ
ಕಾಯುತ್ತೇವೆ
ಯಾಕೆ?
– ಹೊಡೆದುಕೊಳ್ಳುವ ಎದೆಯ
ಅಂಗೈಲಿಟ್ಟುಕೊಂಡು.
ಇಲ್ಲವೆ ನಿಮ್ಮಲ್ಲಿ? ಇರಲಿ ಬಿಡಿ,
ಬಂದಾರು; ಸರಿ . . . ಬಂದರೆ ತಿಳಿಸುವೆ
ಬಂದರೆಂದು.
(ಆಚೆ ದನಿಗೇನು ಗೊತ್ತು ಬಾರದೆಯೂ ಇರಬಹುದೆಂದು)
ಯಾವುದೋ ಲಾರಿಯಡಿ! . . ಟ್ರಕ್ಕಿನಡಿ! . .
ಶಿವ ಶಿವಾ! ಒಲ್ಲೆ ಒಲ್ಲೆಂದು
ಹೇಳುವುದಕ್ಕಾಗೇ
ನೋವ ಕಾಯುತ್ತೇವೋ?
ಸಾವ ಕಾಯುತ್ತೇವೋ?
ಕಣ್ಣ ತುಂಬ ತುಂಬಿದ ಭಯ
ಆಚೀಚೆಗೂ ಚೆಲ್ಲಿ ಹನಿ ಹನಿಯಾಗಿ
ಹೆಪ್ಯ್ಪಗಟ್ಟುತದೆ ಕತ್ತಲಿನಲ್ಲಿ.
ಈಗ ಮುಗಿಯುತ್ತದೆ ಕಾದು ಕೂರುವ ಹೊತ್ತು
ಆಗ ಮುಗಿಯುತ್ತದೆ ಕಾದು ಕೂರುವ ಹೊತ್ತು
ಇನ್ನೇನು ಮುಗಿಯುತ್ತದೆ ಕಾದು ಕೂರುವ ಹೊತ್ತು . .
ಯಾರಾದರೂ ಬಂದು,
ಬಾಗಿಲ ಬಡಿದು
ತಿಳಿಸಿಬಿಡಲಿ!
ಏನ ಕಾಯುತ್ತೇವೆ
ಏಕೆ ಕಾಯುತ್ತೇವೆ
ಬರುವುದನ್ನೋ . . .
ಬಾರದಿರುವುದನ್ನೋ ?
ತೆರೆದ ಬಾಗಿಲಿನಿಂದ
ಕತ್ತಲು ನುಗ್ಗಿದ ಹಾಗೆ
ಕಡೆಗೂ
ಬಂದರು
ಬಾರದ ಹಾಗೆ!
ಕಾಯುವ ಮಾತಿನ್ನು
ಮತ್ತೊಂದು ದಿನಕ್ಕೆ
ಮತ್ತೊಂದು ರಾತ್ರಿಗೆ.
*****