ಬಳೆ ಅಂಗಡಿಯ ಮುಂದೆ ನಿಂತವಳು
ಒಳ ಹೋಗಲಾರಳು.. ಮನಸ್ಸು
ಕಿಣಿಕಿಣಿಸುತ್ತ ಹೊರಬರಲೊಲ್ಲದು;
ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ
ಕಲಾವಿದನ ಚಿತ್ರದಂತೆ
ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ
ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು
ಕಾಡಿಗೆ ಕಣ್ಣ ಹೊಳಪನ್ನು ನೋಡುತ್ತ,
ಸಂಜೆ ಸಿಂಗಾರವಾಗಿ
ಗೇಟಿಗಾತು ನಿಂತ ಹೆಂಗಸರ ಹಗುರ ಪರಿಮಳವ,
ಕೋಲಾಟದ ಹುಡುಗಿಯರ ಗೆಜ್ಜೆ ಹೆಜ್ಜೆಗಳ,
ತುಂಬಿದ ಬಸುರಿಯೊಳಗಿನ ಮಿಸುಗಾಟವ
ಗಮನಿಸುತ್ತ.. ಫಕ್ಕನೆ ನಿಂತು ಬಿಡುತ್ತಾಳೆ;
ಇದೆಂಥ ಎದೆ ಭಾರ
ಯಾವ ಕ್ಷಣದೊಳು ಮನ ಒಳ ಸರಿದು
ಯಾರದು ಬಾಗಿಲು ಮುಚ್ಚಿ ಬೀಗ ಜಡಿದಿದ್ದು?
ಯಾರು ಯಾರದು ಕೀ ಕಳೆದಿದ್ದು?
ಅಥವ ಕೀ ಇಲ್ಲದ ಬೀಗವೆ?
ಒಳಗಿನ ಮೌನ
ಹೊರಗಿನ ಮೌನಕೆ ಕೇಳುತಿದೆ
ಬೀಗ ಮುರಿಯಲಾರೆಯಾ?
*****