ಪ್ರಶ್ನೆ

ಚಂದ್ರಶೇಖರ ಮನೆಬಿಟ್ಟು ಬಂದಿದ್ದ. ಹೆಂಡತಿಯ ಹತ್ತಿರ ಮಾತಿಗೆ ಮಾತು ಬೆಳೆದು ಜಗಳವಾಗಿ ‘ಮನೆಬಿಟ್ಟು ಹೋಗುತ್ತೇನೆ’ ಎಂದು ಹೊರಟಿದ್ದ. ‘ಹೋಗಿ’ ಎಂದಿದ್ದಳು ಹೆಂಡತಿ. ಹೊರಟೇ ಬಿಟ್ಟ. ಆ ಮೇಲೆ ಹೆಂಡತಿ ಕೂಗಿ ಕರೆದಳು. ಮಗಳನ್ನು ಕಳಿಸಿದಳು. ಚಂದ್ರಶೇಖರ ತನ್ನ ತೀರ್ಮಾನವನ್ನು ಬದಲಾಯಿಸಲಿಲ್ಲ. ಎಲ್ಲಿಗೆ ಹೋಗಬೇಕೆನ್ನುವುದು ಗೊತ್ತಿರಲಿಲ್ಲ. ಗೀತಾ ಮನೆಗೆ ಹೋಗಬೇಕು ಅನ್ನಿಸಿತು. ಸವಿತಾ ಮನೆಗೆ? ಸುವರ್ಣ ಮನೆಗೆ? ಹುಡುಗಿಯರ ಬಗ್ಗೆಯೇ ಏಕೆ ಯೋಚಿಸುತ್ತಿದ್ದೇನೆ. ಅವರ ಗಂಡಂದಿರು ವಿಶ್ವನಾಥ, ತಾರಾನಾಥ, ಮತ್ತು ಜಗದೀಶರನ್ನೇಕೆ ನೆನಪು ಮಾಡಿಕೊಳ್ಳಬಾರದು? ಈ ಹೆಂಗಸರಿಲ್ಲದಿದ್ದರೆ ಬದುಕಲಿಕ್ಕೆ ಸಾಧ್ಯವೇ ಇಲ್ಲವೆ? ಥೂ ಇವರ ಮನೆ ಹಾಳಾಗ ಎಂದುಕೊಂಡು ಲಾಲ್‌ಬಾಗ್‌ಗೆ ಹೋಗಿ ಅಲ್ಲೊಂದು ಮರದ ಕೆಳಗೆ ಕಲ್ಲುಬೆಂಚಿನ ಮೇಲೆ ಕೂತುಕೊಂಡ. ಆ ಕಡೆ ಲಾಲ್‌ಬಾಗ್ ಕೆರೆ, ಅದರ ಪಕ್ಕ ಬಿದಿರ ಮೆಳೆ, ಈ ಕಡೆ ಯಾವ್ಯಾವುದೊ ಹೆಸರು ಗೊತ್ತಿಲ್ಲದ ಮರಗಳಿದ್ದವು. ಅಷ್ಟರಲ್ಲೆ ಯಾವನೋ ಒಬ್ಬ ಚಂದ್ರಶೇಖರನ ಗಮನ ಸೆಳೆದ. ‘ನಮಸ್ಕಾರ’. ಚಂದ್ರಶೇಖರ ಕುರುಚಲು ಗಡ್ಡದ, ಕೊಳಕು ಬಟ್ಟೆಯ ಆ ವ್ಯಕ್ತಿಯನ್ನು ನೋಡಿದ. ಎಲ್ಲೋ ನೋಡಿದ ಹಾಗಿದೆ ಅನ್ನಿಸಿತು. ಎಷ್ಟು ವರ್ಷಗಳ ಹಿಂದೆ? ಆತ ಯಾರಿರಬಹುದು? ಅಂತ ಯೋಚಿಸುತ್ತಿದ್ದ ಹಾಗೆ ಆ ವ್ಯಕ್ತಿ ಅಲ್ಲೇ ಕಲ್ಲುಬೆಂಚಿನ ಮೇಲೆ ಕುಳಿತು ‘ನನ್ನ ಹೆಸರು ನಾಗರಾಜ’ ಎಂದ. ಚಂದ್ರಶೇಖರ “ಕ್ಷಮಿಸಿ. ನಾನು ಅನೇಕ ಊರುಗಳಲ್ಲಿ ಸುತ್ತಾಡ್ತಿರ್ತೀನಿ. ಅನೇಕ ನಾಗರಾಜರನ್ನು ಭೇಟಿಯಾಗಿದೀನಿ. ಯಾವ ನಾಗರಾಜ ಅಂತ ಗೊತ್ತಾಗ್ತಿಲ್ಲ” ಎಂದ. “ನೀವು ಗವಿಪುರ ಗುಟ್ಟಹಳ್ಳಿಯಲ್ಲಿ ವಾಸ ಮಾಡ್ತಿದ್ದಾಗ, ನಿಮ್ಮ ಪಕ್ಕದ ಮನೇಲಿದ್ದೆ. ನಾನು ಚಿತ್ರಗಳನ್ನು ಬರೀತಿದ್ದೆ. ನೆನಪಾಯಿತ?” ಎಂದು ನಾಗರಾಜ ಕೇಳಿದ. “ನೆನಪಾಯಿತು? ಏನ್ಮಾಡ್ತಿದೀರಿ” ‘ಆ ಸುವರ್ಣ ಎಲ್ಲಿದ್ದಾಳೆ?’ “ಯಾವ ಸುವರ್ಣ?” “ಅದೇ ನಿಮ್ಮ ಮನೆಗೆ ಹೋಗ್ತಿದ್ಳು. ನಿಮ್ಮ ತಂಗಿ ಫ್ರೆಂಡು” ಅಂದ ನಾಗರಾಜ. ಚಂದ್ರಶೇಖರನಿಗೆ ಆ ಮನುಷ್ಯನ ಅಸ್ತವ್ಯಸ್ತ ಕೂದಲು, ಬಟ್ಟೆ, ಅವನ ಕಣ್ಣುಗಳನ್ನು ನೋಡಿ ಸ್ವಲ್ಪ ಹುಷಾರಾಗಿರಬೇಕು ಅನ್ನಿಸಿತು. “ಯಾಕೆ?” ಅಂತ ಕೇಳಿದ. “ನಿಮಗ್ಗೊತ್ತಿಲ್ಲ ಬಿಡಿ. ನೀವು ಊರಲ್ಲಿರಲಿಲ್ಲ. ನನಗೆಂತ ಮೋಸ ಮಾಡಿದ್ಳು ಗೊತ್ತ? ಆದ್ರೆ ನನಗೆ ತುಂಬ ಉತ್ಸಾಹ ತುಂಬಿದ್ದೇ ಅವ್ಳು. ನಾನು ಇವತ್ತೊಬ್ಬ ಕಲೆಗಾರ ಅನಿಸ್ಕೊಂಡಿದ್ರೆ ಅದಕ್ಕೆ ಕಾರಣ ಅವ್ಳು. ಅವಳು ಮಾಡೆಲ್ಲಾದ ಚಿತ್ರಗಳು ಇವತ್ತು ಪ್ಯಾರಿಸ್‌ನಲ್ಲಿ, ಡೆಲ್ಲೀಲಿ ಇದಾವೆ. ನನ್ನೆದುರಿಗೆ ನಗ್ನಳಾಗಿ ಎಷ್ಟು ಸಾರಿ ನಿಂತಿದ್ಳು ಗೊತ್ತ? ತುಂಬ ಒಳ್ಳೆ ಫಿಗರ್ ಇತ್ತು ಅವಳಿಗೆ. ನನ್ನನ್ನು ಮದುವೆ ಆಗ್ತೀನೀಂತ ಮಾತುಕೊಟ್ಟು, ನಾನು ಒಂದು ವರ್ಷ ಫಾರಿನ್‌ಗೆ ಹೋಗಿದ್ದಾಗ, ಅದ್ಯಾವನನ್ನೋ ಮದುವೆಯಾದಳಂತೆ ಬೇವಾರ್ಸಿ. ಅವ‌ಎಲ್ಲಾದ್ರೂ ಸಿಕ್ಕರೆ ಅವಳನ್ನು ಏನ್ಮಾಡ್ತೀನಿ ಹೇಳ್ಲಿಕ್ಕಾಗೋಲ್ಲ” ಎಂದು ನಾಗರಾಜ ತನ್ನ ಮಾತಿಗೆ ವಿರಾಮ ಕೊಟ್ಟ. “ಅವಳ ಗಂಡನ ಹೆಸರೇನು?” ಅಂದು ಚಂದ್ರಶೇಖರ ಕೇಳಿದ. ನಾಗರಾಜನಿಗೆ ಗೊತ್ತಿರಲಿಲ್ಲ. “ಈಗ ಎಲ್ಲಿರ್ತೀರಿ?” ಎಂದು ಚಂದ್ರಶೇಖರ ಕೇಳಿದ.
“ಪ್ಯಾರಿಸ್‌ನಲ್ಲಿರ್ತೀನಿ, ಆದ್ರೆ ಒಂದೊಂದ್ಸಾರಿ ಸುವರ್ಣ ನೆನಪಿಗೆ ಬಂದಕೂಡ್ಲೆ ಬೆಂಗಳೂರಿಗೆ ಬಂದ್ಬಿಡ್ತೀನಿ. ಈಗ ಗವಿಪುರ ಗುಟ್ಟಹಳ್ಳಿಯಲ್ಲಿ ಅವರ ತಂದೆತಾಯೀನು ಇಲ್ಲ; ಅವಳೂ ಸತ್ತುಹೋದಳೋ ಏನೋ. ಸತ್ತುಹೋಗಿದ್ರೆ ಒಳ್ಳೇದು. ಇಲ್ದೇ ಇದ್ರೆ ನಾನೇ ಅವಳನ್ನು ಸಾಯ್ಸಿ ಪ್ಯಾರಿಸ್‌ಗೆ ಹೊರಟುಹೋಗ್ತೀನಿ.” ಅಂದ ನಾಗರಾಜ ಭಾವಾವೇಷದಿಂದ ನಡುಗುತ್ತಿದ್ದ. ಚಂದ್ರಶೇಖರ ಅವನಿಗೆ ಸಮಾಧಾನ ಹೇಳಿದ. ಇಂತಹ ಭಗ್ನಪ್ರಣಯಗಳು ತನಗೆ ಆಗಿವೆ ಎಂದ. ಪ್ರಪಂಚದಲ್ಲಿ ಎಲ್ಲಾ ಕಡೆ ಇಂಥವು ಆಗ್ತಿರ್ತಾವೆ, ನಿಮಗೆ ಪ್ಯಾರಿಸ್‌ನಲ್ಲಿ ಆಗಿರಬಹುದು. ಅಥವಾ ಆಗಬಹುದು. ನಾನಿನ್ನು ಬರ್ಲ?” ಎಂದು ಚಂದ್ರಶೇಖರ ಎದ್ದು ಹೊರಟ.
ಚಂದ್ರಶೇಖರ ಅಲ್ಲಿಂದ ನೆಟ್ಟಗೆ ರಾಜಾಜಿನಗರದು ಮೊದಲನೆ ಬ್ಲಾಕಿಗೆ ಹೋಗಿ ಜಗದೀಶನ ಮನೆ ಬಾಗಿಲು ಬೆಲ್ಲು ಒತ್ತಿದ. ಸುವರ್ಣ ಬಾಗಿಲು ತೆಗೆದಳು. ತಾನೇ ಕಲಾವಿದ ನಾಗರಾಜನ ಹಾಗೆ ಅವಳ ದೇಹದ ಪ್ರಮಾಣಬದ್ಧತೆಯನ್ನೊಮ್ಮೆ ದಿಟ್ಟಿಸಿ ನೋಡಿದ. ತಾನಿಷ್ಟು ವರ್ಷ ಅವಳ ದೇಹವನ್ನು ಗಮನಿಸಿಯೇ ಇರಲಿಲ್ಲ. ಕೇವಲ ಮುಖಕ್ಕೆ ಮಾರು ಹೋಗಿದ್ದೆ ಎಂದವನಿಗೆ ಅನಿಸಿತು.
ಒಳಗೆ ಹೋಗಿ ಸೋಫಾದ ಮೇಲೆ ಕುಳಿತುಕೊಂಡ. “ಸುವ್ವಿ, ಪೇಂಟರ್ ನಾಗರಾಜ ಸಿಕ್ಕಿದ್ದ?” ಎಂದು ಅವಳ ಮುಖ ನೋಡಿದ.
“ನಾನು ಎಲ್ಲಿದೀನಿ ಅಂತ ಕೇಳಿದನ?” ಅಂತ ಆತಂಕದಿಂದ ಕೇಳಿದಳು.
“ನಿನ್ನನ್ನು ಮರ್ಡರ್ ಮಾಡ್ತೀನಿ ಅಂತ ಕೂಗಾಡ್ತಿದ್ದ” ಚಂದ್ರಶೇಖರ ಅವಳ ಮುಖ ವಿವರ್ಣವಾಗುವುದನ್ನು ಗಮನಿಸಿದ.
“ಜಗದೀಶನಿಗೆ ಅವನ ವಿಷಯ ಗೊತ್ತ?” ಎಂದು ಕೇಳಿದ. ದೂರದಲ್ಲಿ ಕುಳಿತಿದ್ದ ಸುವರ್ಣ ಅವನ ಹತ್ತಿರ ಬಂದು ಕೂತುಕೊಂಡು “ಗೊತ್ತಿಲ್ಲ” ಎಂದಳು.
“ಪ್ಯಾರಿಸ್‌ನಲ್ಲಿರ್ತಾನಂತೆ” ಎಂದು ಚಂದ್ರಶೇಖರ ಮಾತನ್ನು ಮುಂದುವರಿಸಿದ. “ನಿನ್ನ ನೆನಪಾದ್ಕೂಡ್ಲೆ ಅಲ್ಲಿಂದ ಇಲ್ಲಿಗೆ ಬರ್ತಾನಂತೆ. ನೀನು ಮೋಸಗಾರ್ತಿ ಅಂತ ಕೂಗಾಡ್ತಿದ್ದ. ನಿನ್ನ ಮದುವೆ ಆದ್ಮೇಲೆ ಯಾವಾಗ್ಲಾದ್ರೂ ಸಿಕ್ಕಿದ್ನ?” ಎಂದು ಚಂದ್ರಶೇಖರ ಅವಳ ಮುಖವನ್ನು ದಿಟ್ಟಿಸಿದ. ಅವಳು ಅವನ ಕೈ ಹಿಡಿದುಕೊಂಡು ಅವನ ಕಣ್ಣುಗಳನ್ನೇ ನೋಡುತ್ತ “ನಾನು ಎಲ್ಲಿದೀನಿ ಅಂತ ಕೇಳಿದನ?” ಅಂತ ಮತ್ತೆ ಕೇಳಿದಳು.
“ನಾನು ಹೇಳ್ಲಿಲ್ಲ” ಎಂದ ಚಂದ್ರಶೇಖರ. ಅವನ ಕಣ್ಣುಗಳಲ್ಲಿ ಉನ್ಮಾದಕತೆ ತುಂಬುತ್ತಿತ್ತು. “ಯೂ ಆರ್ ಎ ಡಾರ್ಲಿಂಗ್” ಎಂದು ಸುವರ್ಣ ಅವಳಿಗೆ ಮುತ್ತಿಕ್ಕಿದಳು. ಅವನ ಮೈ ಕಂಪಿಸಿತು. ಅವನು ಅವಳನ್ನು ತಬ್ಬಿಕೊಳ್ಳುತ್ತಿದ್ದ ಹಾಗೆ ಅವಳು ಅವನಿಂದ ಬಿಡಿಸಿಕೊಂಡಳು. ಅವಳಿಗಿನ್ನೂ ಪೇಂಟರ್ ನಾಗರಾಜನ ವಿಷಯ ತಿಳಿದುಕೊಳ್ಳಬೇಕಾಗಿತ್ತು. “ಎಲ್ಲಿ ಸಿಕ್ಕಿದ್ದ?” ಅಂತ ಕೇಳಿದಳು. “ಲಾಲ್‌ಬಾಗ್‌ನಲ್ಲಿ”. “ಇನ್ನೇನು ಕೇಳಿದ?” “ನಿನ್ನನ್ನು ಹುಡುಕ್ತಿದ್ದಾನೆ”. “ನೀನೇನು ಹೇಳಿದಿ” “ನಿನ್ನ ಗಂಡನ ಹೆಸರೂ ಅವನಿಗೆ ಗೊತ್ತಿಲ್ಲ. ನಿಮ್ಮ ಅಣ್ಣ, ಅಕ್ಕ, ಯಾರೂ ಅವನಿಗೆ ಸಿಗಲಿಲ್ಲವಂತೆ.” “ಅವನೀಗೆ ಎಲ್ಲಿರ್ತಾನೆ?” ಎಂದು ಸುವರ್ಣ ಕೇಳಿದಳು.
ಚಂದ್ರಶೇಖರ ಸುಮ್ಮನೇ ಕುಳಿತುಕೊಂಡ. “ನಾವಿಬ್ಬರೂ ಲಾಲ್‌ಬಾಗಿನಿಂದ ಹೊರಟೆವು……” ಎಂದು ಮಾತನ್ನು ತಡೆದ.
“ಹೂಂ” ಎನ್ನುತ್ತ ಮುಂದೇನು ಎನ್ನುವಂತೆ ಸುವರ್ಣ ಅವನನ್ನು ನೋಡಿದಳು.
“ಗೇಟಿಂದ ಹೊರಗೆ ಬಂದಕೂಡ್ಲೆ……” ಮತ್ತೆ ಮಾತನ್ನು ನಿಲ್ಲಿಸಿದ.
“ಹೂಂ” ಎಂದಳು.
“ಅವನು ಓಡಲಿಕ್ಕೆ ಶುರು ಮಾಡಿದ……” ಮತ್ತೆ ಮಾತನ್ನು ತಡೆದ.
“ಹೂಂ” ಎಂದು ಮತ್ತೆ ಅವನ ಕಣ್ಣುಗಳನ್ನೇ ನೋಡುತ್ತಿದ್ದಳು.
“ಒಂದು ಲಾರಿ ಜೋರಾಗಿ ಬರ್ತಿತ್ತು”
“ಸತ್ತೊದ್ನ?” ಎಂದು ಕೇಳಿದಾಗ ಅವಳ ಮುಖ ಭಯದಿಂದ ತುಂಬಿಹೋಗಿತ್ತು.
“ಆ ರಕ್ತ, ಆ ದೇಹ ಒದ್ದಾಡ್ತ ಇದ್ದದ್ದು ನೋಡ್ಲಿಕ್ಕಾಗಲಿಲ್ಲ”
ಸುವರ್ಣಳ ತುಟಿ ಅದುರಿತು. ಬುಡಕ್ಕನೆ ಎದ್ದು ಚಂದ್ರಶೇಖರನ ಹೆಗಲ ಮೇಲೆ ತಲೆಯಿಟ್ಟು ಆಕೆ ಬಿಕ್ಕಿ ಬಿಕ್ಕಿ ಅತ್ತಳು. ಅವನು ಅವಳ ಕಣ್ಣುಗಳನ್ನು ಒರೆಸಿ, ಕಣ್ಣಿನ ಮೇಲೆ ಮುಖದ ಮೇಲೆ ಮುತ್ತಿಕ್ಕುತ್ತ, ಅವಳನ್ನು ಸಮಾಧಾನ ಮಾಡುವ ಹಾಗೆ ಕೈಯಾಡಿಸುತ್ತಿದ್ದ. ಅವಳನ್ನು ಹಾಸಿಗೆಗೆ ಕರೆದುಕೊಂಡು ಹೋದ.

*
*
*

ಚಂದ್ರಶೇಖರನಿಗೆ ತಾನೇನೊ ದೊಡ್ಡ ತಪ್ಪು ಮಾಡಿದೆ ಅನ್ನಿಸಿತು. ಸುಳ್ಳು ಹೇಳಬಾರದಿತ್ತು. ತನಗೆ ಅವಳಲ್ಲಿ ಆಸೆ ಇದೆ ಅಂತ ಹೇಳಬಹುದಿತ್ತು. ಬಹುಶಃ ಅಷ್ಟಕ್ಕೇ ಅವಳು ಒಪ್ಪುತ್ತಿದ್ದಳೋ ಏನೋ. ಅವಳು ಜಗದೀಶನ ಹತ್ತಿರ ಹೇಳಿಕೊಳ್ಳದೆ ಇರಬಹುದು. ತಾನು ಜಗದೀಶನಿಗೂ ಮೋಸ ಮಾಡಬಾರದಿತ್ತು. ಪ್ರಪಂಚದಲ್ಲಿ ಏನೆಲ್ಲ ನಡೆಯುತ್ತದೆ ನಿಜ. ಆದರೆ ತಾನು ಎಲ್ಲರ ಹಾಗೆ ಬದುಕಬಾರದು ಎಂದು ನಿಶ್ಚಯಿಸಿರಲಿಲ್ಲವೆ? ಈಗ ಸುಳ್ಳು ಹೇಳಿದೆನೆಂದು ಸುವರ್ಣಗೆ ಹೇಳಿದರೆ ತನ್ನನ್ನು ಕ್ಷಮಿಸುತ್ತಾಳೆಯೆ?
ನಾಗರಾಜನನ್ನು ಇನ್ನೊಮ್ಮೆ ಬೇಟಿಯಾಗಬೇಕು. ಅವನು ಅವಳನ್ನು ಮರೆತುಬಿಡುವುದಕ್ಕೆ ಏನಾದರೂ ಪ್ರಯತ್ನಿಸಬೇಕು. ಹುಚ್ಚು ನಾಗರಾಜ ಏನಾದರೂ ಅನಾಹುತ ಮಾಡಿ ಬಿಡಬಹುದು. ಯಾರದೋ ಮೂಲಕ ಅವನಿಗೆ ಜಗದೀಶನ ವಿಳಾಸ ಸಿಕ್ಕಿಬಿಡಬಹುದು. ನಾಗರಾಜ ಅವಳ ಬಗ್ಗೆ ಇದ್ದದ್ದು ಇಲ್ಲದ್ದು ಏನೇನೋ ಹೇಳಿಬಿಡಬಹುದು, ಅಥವಾ ಅವನನ್ನೇ ಕೊಲ್ಲಬಹುದು. ನಾನು ನಾಗರಾಜನಿಂದ ಏನೂ ತೊಂದರೆಯಾಗದಹಾಗೆ ನೋಡಿಕೊಳ್ಳುತ್ತೇನೆ ಎಂದು ಯೋಚಿಸುತ್ತ ಚಂದ್ರಶೇಖರ “ಸುವ್ವೀ” ಎಂದ.
“ಏನು?”
“ನೀನು ನನ್ನನ್ನು ಕ್ಷಮಿಸುತ್ತೀಯ?”
“ಯಾಕೆ?”
“ನಾಗರಾಜ ಸಿಕ್ಕಿದ್ದು ನಿಜ. ಅವನಿಗೆ ಆಕ್ಸಿಡೆಂಟಾದದ್ದು ಒಂದು ಬಿಟ್ಟು ಮಿಕ್ಕಿದ್ದೆಲ್ಲಾ ನಿಜ” ಎಂದು ಅಂದ್ರಶೇಖರ ಪಶ್ಚಾತ್ತಾಪದಿಂದ ಅವಳ ಮುಖ ನೋಡಿದ. ಮತ್ತೆ ಸುವರ್ಣಳ ಮುಖದಲ್ಲಿ ಭಯ ಕಾಣಿಸಿಕೊಂಡಿತು. ಅವಳ ಮೈ ಕಂಪಿಸುತ್ತಿತ್ತು. “ಥೂ ಹಲ್ಕಾ. ಹೊರಟ್‌ಹೋಗ್ ಇಲ್ಲಿಂದ” ಎಂದು ಆಕೆ ಕಿರುಚಿದಳು. ಚಂದ್ರಶೇಖರ ಎದ್ದು ನಿಂತ. ಬಾಗಿಲ ಹತ್ತಿರ ಹೋಗಿ ನಿಂತುಕೊಂಡು “ಸುವ್ವಿ, ನಾಗರಾಜನ್ನ ಹುಡ್ಕಿಕೊಂಡು ಹೋಗ್ತೀನಿ. ನಿಂಗೇನೂ ತೊಂದರೆಯಾಗದ ಹಾಗೆ ನೋಡ್ಕೋತೀನಿ. ಒಂದು ವೇಳೆ ನಿನ್ನ ಜೀವಕ್ಕೆ ಅಪಾಯ ಇದೆ ಅನ್ನಿಸಿದ್ರೆ ಪೋಲೀಸ್ನೋರಿಗೆ ಹೇಳ್ತೀನಿ” ಎಂದು ಹೇಳಿದ.
“ಸಧ್ಯ, ಅದೊಂದು ಉಪಕಾರ ಮಾಡ್ಬೇಡ” ಎಂದು ಸುವರ್ಣ ಹೇಳಿದಳು. “ಪೋಲೀಸ್ನೋರು ಹಳೇದನ್ನೆಲ್ಲ ಕೆದಕಿ ಹಾಕ್ತಾರೆ. ಆಮೇಲೆ ಪೇಪರ್ನಲ್ಲಿ ನನ್ನ ಹೆಸರು ಮೆರೆಯುತ್ತೆ. ನೀನು ತೆಪ್ಪಗೆ ಬಾಯ್ಮುಚ್ಕೊಂಡಿರು. ಏನಾಗುತ್ತೊ ಆಗಲಿ. ಅಂಥ ಸಮಯ ಬಂದ್ರೆ ಜಗದೀಶನಿಗೆ ಎಲ್ಲಾನೂ ಹೇಳಿಬಿಡ್ತೀನಿ” ಎಂದಳು.
ಚಂದ್ರಶೇಖರನಿಗೆ ತಬ್ಬಿಬ್ಬಾಯಿತು. ಜಗದೀಶನಿಗೆ ತನ್ನ ದುರ್ವರ್ತನೆ ಗೊತ್ತಾದರೆ ಏನು ಗತಿ ಅನ್ನಿಸಿತು. ಸಣ್ಣದಾಗಿ ಶುರುವಾದದ್ದು ಹನುಮನ ಬಾಲದ ಹಾಗೆ ಬೆಳೆಯುತ್ತದೆ. ಆ ಬಾಲ ತನ್ನ ಕತ್ತಿನ ಸುತ್ತ ಸುತ್ತಿಕೊಳ್ಳುತ್ತದೆ. ಅವನಿಗೆ ಉಸಿರು ಸಿಕ್ಕ ಹಾಗಾಯಿತು. ಅವನ ಅಂತರಂಗದ ತುಮುಲದಲ್ಲಿ ಏನೊ ಹೊಳೆದಂತಾಯಿತು. “ಸುವ್ವಿ, ಯೋಚನೆ ಮಾಡ್ಬೇಡ. ಆ ನಾಗರಾಜ ದ್ವೇಷದಿಂದ ಹೊರಟುಹೋಗೋ ಹಾಗೆ ಪ್ರಯತ್ನ ಮಾಡ್ತೀನಿ. ಒಂದು ವೇಳೆ ನಿನ್ನ ಜೀವಕ್ಕೆ ಅಪಾಯ ಇದೆ ಅನ್ಸಿದ್ರೆ, ನಾನೇ ಅವನನ್ನು ಕೊಂದು ಹಾಕ್ತೀನಿ” ಎಂದು ಹೊರಟುಹೋದ.
ರಸ್ತೆಗೆ ಬಂದ ಮೇಲೆ ಚಂದ್ರಶೇಖರನಿಗೆ ತಾನೇ ಒಂದು ಸಮಸ್ಯೆ ಅನ್ನಿಸಿತು. ತಾನು ಸತ್ಯವಂತನೋ, ಮೋಸಗಾರನೋ. ನಾನು ನಿಜವಾಗಿಯೂ ನಾಗರಾಜನನ್ನು ಕೊಲ್ಲುವುದು ಸಾಧ್ಯವೆ? ತಾನು ಸುವರ್ಣಾಳನ್ನು ಪ್ರೀತಿಸುವುದು ನಿಜವೆ? ನಿಜವೇ ಆಗಿದ್ದರೆ ನಾಟಕವನ್ನೇಕೆ ಆಡಬೇಕಿತ್ತು? ಇನ್ನು ಮನೆಗೆ ಹೋಗಬೇಕು. ಮನೆಯಲ್ಲೊಂದು ರಾಮಾಯಣ. ಅಲ್ಲಿ ತಾನು ಗಂಡನ, ಅಪ್ಪನ ಪಾತ್ರವನ್ನು ವಹಿಸಬೇಕು. ತನ್ನ ನಿಜವಾದ ಪಾತ್ರ ಯಾವುದು? ಆ ಪ್ರಶ್ನೆ ಅವನಿಗೆ ಬಗೆಹರಿಯಲಿಲ್ಲ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ