ನಾನು ಅವಳನ್ನು ಹಾಗೆ ನೊಡಬಾರದಿತ್ತಾ..?
ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ..
***********
ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ ಸಂಬಂಧ ಏನಿರಬಹುದೂಂತ ಕಲ್ಪಿಸಲಾರಂಭಿಸುವುದು.. ಬಹುಶ: ಎಲ್ಲರಂತೆ. ಅವನನ್ನು ನೋಡಿದ್ರ್‍ಏ ಗೊತ್ತಾಗುತ್ತೆ.. ಅವನು ಸಾಫ್ಟ್‍ವೇರ್ ಇಂಜಿನಿಯರ್ ಅಂತ. ಅವನು ತೊಟ್ಟಿರೊ ಜುಬ್ಬ ಬಹುಶ: ದೇಸಿ ಅಂಗಡಿಯಿಂದ ನೆನ್ನೆ ಸಂಜೆ ಕೊಂಡದ್ದಿರಬೇಕು.. ಜೇನಿನ ಬಣ್ಣದ ಸೀರೆಯ ಹುಡುಗಿ ಅದ್ಭುತವಾಗಿದ್ದಾಳೆ.. ಅವನನ್ನ ನೋಡಿದ್ರೆ ಹೊರದೇಶದಲ್ಲಿ ಕೆಲಸ ಮಾಡೋ ಹಾಗೆ ಕಾಣ್ಸುತ್ತೆ. ಇವಳಿಗೆ ಮದುವೆಯಾಗಿಲ್ಲ.. ಕಾಲುಂಗುರ, ತಾಳಿಯಿಲ್ಲವಲ್ಲ..? ಹೆಣ್ಣನ್ನ ನೋಡಿದ್ರೆ ಅಷ್ಟು ಡೀಟೇಲ್ ಆಗಿ ನೋಡಬೇಕು.. ಇಲ್ಲಾಂದ್ರೆ ಸುಮ್ಮನಿದ್ದು ಬಿಡಬೇಕು..
**********
ಹೋಟೆಲ್ ಅಶೋಕ. ಕೆಫೆಯಲ್ಲಿ ಕೂತಿದ್ದೇನೆ. ತುಂಬಾ ಹೊತ್ತಿನಿಂದ ಯಾರಿಗೋ ಕಾಯ್ತಿದ್ದೇನೆ ಈಗ ಬರಬಹುದಾ.. ಆಗ ಬರಬಹುದಾಂತ.. ಸುಳಿವೇ ಇಲ್ಲ. ಬೇರೆ ಯಾರೇ ಆಗಿದ್ರೂ ಹೊರಟು ಬಿಡ್ತಿದ್ದೆ. ನಾನು ಕಾಯ್ತಿರೋದು ನನ್ನ ಹುಡುಗಿಗೆ.. ಆದ್ದರಿಂದಲೇ ಕೂತಿದ್ದೇನೆ. ಹೋಟೆಲ್ ಅಶೋಕಾದ ಊಟದ ಕೋಣೆಯ ಸಂಭ್ರಮವನ್ನು ನೀವೊಮ್ಮೆ ನೋಡಬೇಕು. ಅದನ್ನ ಬಫೆ ಅಂತಾರೆ. ಶ್ರ್‍ಈಮಂತ ವರ್ಗದ ದಂಪತಿಗಳು, ಪ್ರೇಮಿಗಳು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಎತ್ತರದ ಸ್ಥಾನದಲ್ಲಿರುವ ಅಧಿಕಾರಿಗಳು, ವಿದೇಶೀಯರು ತಮ್ಮವರೊಂದಿಗೆ ಮಾತನಾಡುತ್ತಾ ತಮಗೆ ಬೇಕೆನಿಸಿದ್ದನ್ನ ತಾವೇ ಹೊಗಿ ಅಚ್ಚುಕಟ್ಟಾಗಿ ಜೋಡಿಸಿರೋ ಆಹಾರ ಪದಾರ್ಥಗಳನ್ನು ತಾವೇ ಬಡಿಸಿಕೊಂಡು ತಿಂತಾರೆ.. ಬೆರಳುಗಳನ್ನು ಚೀಪುತ್ತಾ..
**********
ಆಗಲೇ ಈ ಜೋಡಿ ನನ್ನ ಕಣ್ಣಿಗೆ ಬಿದ್ದದ್ದು.. ತುಂಬಾ ಒಳ್ಳೆ ಜೋಡಿ ಆಗ್ತಾರೇಂತ ಅನ್ನಿಸ್ತು.. ಈಡು-ಜೋಡು. ಮನಸ್ಸುಗಳ ಹೊಂದಾಣಿಕೆಯ ಬಗ್ಗೆ.. ಗೊತ್ತಿಲ್ಲ.. ಏನೋ ಗಹನವಾಗಿ ಮಾತಾಡ್ತಿದ್ದಾರೆ. ಬಹುಶ: ಯಾವುದೋ ಇಂಟರ್‌ನೆಟ್ ಪೌರೋಹಿತ್ಯದ ಗಂಡು-ಹೆಣ್ಣುಗಳಿರಬೇಕು. ನಾನು ಅವರನ್ನು ಗಮನಿಸ್ತಿರೋದು ಅವರಿಗೆ ಗೊತ್ತಾಗಿ ಹೋಯಿತೇನೋ.. ಅದನ್ನು ಅವನು ಅವಳಿಗೆ ಹೇಳುತ್ತಾನೆ.. ಅವಳು ನನ್ನನ್ನೊಮ್ಮೆ ನೋಡ್ತಾಳೆ. ಸೌಂದರ್ಯದ ಖನಿ ಅವಳು.. ಇಂಥಾ ಚೆಲುವೆಗೆ ಭಾರತದಲ್ಲಿನ ನನ್ನಂಥ ಗಂಡು ಬೇಡವಾ ಅನ್ನಿಸ್ತು.. ನನ್ನ ಹುಡುಗಿಗೆ ಇದನ್ನ ಹೇಳಬೇಕೂ ಅಂದ್ಕೊಂಡೆ. ನಾನು ಮತ್ತೆ ಅವರ ಕಡೆ ನೋಡಬಾರದೂಂತಾನೂ ಅಂದ್ಕೊಂಡೆ. ಹಾಗೆ ಅವರಿಗೆ ಮುಜುಗರವಾಗೋ ಹಾಗೆ ನೋಡೋದು.. ಡೀಸೆನ್ಸಿಯಲ್ಲ. ಎದುರಿಗೆ ಕುಳಿತಿದ್ದ ಸ್ವಲ್ಪ ಮಾಡ್ ಆಗಿದ್ದ ಹುಡುಗಿಯ ಕಡೆ ದೃಷ್ಟಿ ಹೊರಳಿಸಿದೆ. ಅವಳ ದೇಹದ ಆ ಭಾಗವನ್ನು ನೋಡಿದ್ದಕ್ಕೋ ಏನೋ ಅಮ್ಮ ನೆನೆಪಾದಳು. ನನ್ನ ಹುಡುಗಿ ಇನ್ನೂ ಬಂದಿಲ್ಲ. ಫೋನ್ ಮಾಡೋಣವೆಂದು ಕೊಂಡು ಫೋನ್ ಕೈಗೆತ್ತಿಕೊಂಡೆ.. ಆಗ ಬಂತು ನನ್ನ ಹುಡುಗಿಯ ಮೆಸೇಜು..
**********
ನಾನು ಇಲ್ಲೇ ಇದ್ದೇನೆ.. ತುಂಬಾ ಹಿಂದೆಯೇ ಬಂದೆ.. ನಿನ್ನನ್ನ ಗಮನಿಸ್ತಿದ್ದೇನೆ.. ಅದೇನು ಆ ಇಬ್ಬರನ್ನ ಅಷ್ಟುಹೊತ್ತಿನಿಂದ ಹಾಗೆ ಕೆಕ್ಕರಿಸಿಕೊಂಡು ನೋಡ್ತಿದ್ದೀ.. ನಾನು ಎಲ್ಲಿದ್ದೇನೆ ಹೇಳು.. ಏನಾದರಿರಲಿ.. ತುಂಬಾ ಚೆನ್ನಾಗಿ ಕಾಣ್ತಿದೀ.. ನನ್‍ಮಗನೇ..
**********
ನನಗೆ ನಗು ಬಂತು.. ಇವಳು ಯಾವಾಗ ಬಂದ್ಳು.. ಕಣ್ಣು ಹತ್ತೂ ದಿಕ್ಕುಗಳಲ್ಲಿ ಹುಡುಕಲಾರಂಭಿಸಿತು.. ನನ್ನ ಹುಡುಗಿ ಇಂಥಾ ಆಟಗಳನ್ನು ತುಂಬಾ ಚೆನ್ನಾಗಿ ಆಡ್ತಾಳೆ. ಅದಕ್ಕೆ ಅವಳನ್ನ ಕಂಡ್ರೆ ನಂಗೆ ತುಂಬಾ ಇಷ್ಟ.. ಮತ್ತೊಂದು ಮೆಸೇಜು ನನ್ನ ಹುಡುಗಿಯಿಂದ..
**********
ದೇವರ ಥರಾ ಕೂತುಬಿಟ್ರೆ.. ದೇವತೆ ಸಿಕ್ತಾಳಾ.. ಎದ್ದೇಳು ಮಂಜುನಾಥಾ.. ಒಂದು ಎಕರೆ ಜಾಗಾನೂ ಇಲ್ಲ.. ಇರೋದು ನಲವತ್ತು ಟೇಬಲ್ ಮತ್ತು ಸ್ವಿಮ್ಮಿಂಗ್ ಪೂಲ್ ಸುತ್ತಮುತ್ತಲಿನ ಜಾಗ.. ಹುಡುಕು.. ಹುಡುಕಿದರೆ ವರ್ಲ್ಡ್‍ಕಪ್ ಕೊಡ್ತೀನಿ.. ಓಕೇನಾ..?
**********
ಅವನು ತಂದಿಟ್ಟ ಕಲ್ಲಂಗಡಿ ಜ್ಯೂಸನ್ನು ಕೈಲಿ ಹಿಡಿದುಕೊಂಡು
ಒಂದೊಂದೇ ಟೇಬಲ್‍ಗಳನ್ನು ಹಾದು ನನ್ನ ಹುಡುಗಿಯನ್ನು ಹುಡುಕಲಾರಂಭಿಸಿದೆ. ಅಲ್ಲೊಂದಿಷ್ಟು ಕನ್ನಡಿಗಳಿವೆ. ಬಹುಶ: ನನ್ನ ಹುಡುಗಿ ನನ್ನನ್ನು ಕನ್ನಡಿಯ ಮೂಲಕ ನೋಡುತ್ತಿರಬೇಕು.. ಅವಳು ಹಾಗಾದರೆ ಈ ಕೋಣೆಯಲ್ಲೇ ಇರಬೇಕೂಂತ ಏನೂ ಇಲ್ಲ.. ಇಲ್ಲೇ ಎಲ್ಲೋ ಮರೆಯಾಗಿ ನಿಂತು ನನ್ನನ್ನು ಗಮನಿಸ್ತಿರಬಹುದು.. ನಾನು ಯೋಚಿಸುತ್ತಲೇ ಜುಬ್ಬ-ಜೇನು ಸೀರೆ ಜೋಡಿಯ ಟೇಬಲ್ ಹಾದು ಹೋದೆ. ಅಕಾರಣವಾಗಿ ಅವಳನ್ನೊಮ್ಮೆ ನೋಡಿದೆ.. ಏನು ಚೆಲುವೇನಪ್ಪಾ.. ಅಂತ ಅನ್ನಿಸ್ತು ಮನಸ್ಸಿಗೆ.. ನೀವು ನಂಬ್ತೀರಾ ಅವಳು ಅದನ್ನು ಗಮನಿಸದಳೋ ಎಂಬಂತೆ ನನ್ನನ್ನು ನೋಡಿ ಅದ್ಭುತವಾಗಿ ನಕ್ಕಳು..! ನನ್ನ ಕೆಳ ಹೊಟ್ಟೆಯಲ್ಲೆಲ್ಲಾ.. ಮುಂಗಾರು ಮಳೆ..
**********
ನೋಡೇ ನನ್ನ ಹುಡುಗೀ.. ನಿಮ್ಮಪ್ಪ ಬಲವಂತ ಮಾಡಿ ಬಂದ ಗಂಡುಗಳ ಜೊತೆ ಅಶೋಕ ಹೋಟೆಲ್‍ನಲ್ಲಿ ಇಂಟರ್‌ವ್ಯೂ ಫಿಕ್ಸ್ ಮಾಡೋದು.. ನಾನು ಬಂದು ನಿನ್ನ ಹುಡುಕೋ ನಾಟಕ ಆಡೋದು.. ಅವನು ಎದ್ದು ಹೋದ ಮೇಲೆ ಇಬ್ರೂ ಕೂತು ನಿಮ್ಮಪ್ಪನ ಕಾಸಲ್ಲಿ ಊಟ ಮಾಡೋದು ನಂಗೆ ಸಾಕಾಗಿ ಹೋಗಿದೆ.. ಅವನ್ನ ಎಬ್ಬಿಸಿ ಕಳಿಸು.. ನಂಗೆ ನಿನ್ನ ಗಂಡು ಇಷ್ಟ ಆಗ್ಲಿಲ್ಲ.. ಅವನ ಹೆಸರು ಏನಂದೆ.. ಶರತ್ ಅಂತ ಅಲ್ವೇ..? ಹೆಸರಲ್ಲೇ ಶರತ್ ಇದೆ.. ಇನ್ನು ಗಂಡ ಆದ್ಮೇಲೆ ಇನ್ನೇನ್ನೇನು ಶರತ್ ಹಾಕ್ತಾನೋ.. ಏನೋ..? ನನ್ನ ಜಾಗಕ್ಕೆ ಬಂದು ಕೂತು ಮೆಸೇಜ್ ಕಳಿಸಿದೆ.
**********
ಸಾರಿ ಕಣೋ.. ನನ್ನ ಜಾಣ.. ಇನ್ನು ಐದೇ ನಿಮಿಷ.. ಇವನನ್ನ ಹೊರಡಿಸುತ್ತೀನಿ.. ಮೊದಮೊದಲು ಈ ನಾಟಕ ನಂಗೆ ತುಂಬಾ ಚೆನ್ನಾಗಿದೆ ಅನ್ನಿಸ್ತಿತ್ತು.. ಈಗ ಬೋರಾಗಿ ಹೋಗಿದೆ.. ಅದಕ್ಕೆ ನಾನು ಈಗ ಏನು ಮಾಡ್ತೀನಂದ್ರೆ..
**********
’ರೀ.. ಮಿಸ್ಟರ್..ಒಂದ್ನಿಮಿಷ.. ಬನ್ನಿ.. ಇಲ್ಲಿ..’ ಕೂಗೇ ಬಿಟ್ಟಳು ನನ್ನ ಹುಡುಗಿ.. ನನಗಿಷ್ಟಾಂತ ಜೇನು ತುಪ್ಪದ ಸೀರೆ ಉಟ್ಟು ಬಂದವಳು..
ಇಂಥದ್ದೇನೋ ಮಾಡ್ತಾಳೇಂತ ನನಗೆ ಅನ್ನಿಸಿತ್ತು.. ಅವಳ ಟೇಬಲ್ ಕಡೆ ನಡೆದೆ.. ಜೇನು ಸುಂದರಿ ಎದ್ದು ನಿಂತು ಇವರು ಶರತ್ ಅಂತ.. ನನ್ನನ್ನು ಮದುವೆಯಾಗಲಿಕ್ಕೆ ಬಂದಿದ್ದಾರೆ.. ನಾನು ಅವರಿಗೆ ಇವತ್ತು ಮಾತಾಡಿದ ಅರ್ಧ ಗಂಟೆಯಲ್ಲೇ ತುಂಬಾ ಹಿಡಿಸಿದ್ದೀನಂತೆ.. ಅವರನ್ನು ಮದುವೆಯಾಗಲಾ.. ನೀವು ಹೇಳಿ.. ನೀವು ’ಎಸ್’ ಅಂದ್ರೆ.. ಇವರನ್ನ ಮದುವೆ ಆಗಿ ಬಿಡ್ತೀನಿ..’
ಮದುವೆ ಗಂಡು ನನಗಿಂತ ತಬ್ಬಿಬ್ಬು..
**********
’ಅಲ್ಲಾ.. ನೀನು ಹಾಗೆ ಮಾಡಬಾರದಿತ್ತೇನೋ.. ಪಾಪ.. ಆತ ನೊಂದಿರ್‍ತಾನೆ..’
’ಸುಮ್ನಿರೀ ಸಾಕು.. ಅವನ ಮುಂದೆ ಇಷ್ಟೆಲ್ಲಾ ಡ್ರಾಮಾ ನಡೀತಿದ್ರೂ ಗಮನಿಸಲಾರದ ಅವನು ಪ್ರೇಮದ ಆನಂದವನ್ನು ಹೇಗೆ ಅನುಭವಿಸಬಲ್ಲ.. ಮದುವೆಯಾದ ಎರಡು ವರ್ಷದಲ್ಲೇ ಅವನಿಗೆ ನನ್ನ ಮೇಲೆ ಆಸಕ್ತಿ ಹೊಗಿಬಿಡುತ್ತೆ.. ಪ್ರತಿ ದಿನವೂ ಒಂದು ಹೊಸ ಡ್ರಾಮಾದಲ್ಲಿ ತೊಡಗಿ ಕೊಳ್ಳದ ಪ್ರೇಮಿಗಳು ಪ್ರೇಮಿಗಳೇ ಅಲ್ಲ.. ಆ ತುಂಟತನ ಸತ್ತ ದಿನ ಅವರು ಏಕತಾನತೆಯಲ್ಲಿ ಬಾಳಲಾರಂಭಿಸುತ್ತಾರೆ.. ಜೀವನ ಬೋರಾಗಿ ಬಿಡುತ್ತದೆ.. ಬಹಳಷ್ಟು ಗಂಡಹೆಂಡತಿಯರಲ್ಲಿ ಆಗ್ತಿರೋದೇ ಅದು.. ಕಣ್ಣಾಮುಚ್ಚಾಲೆಯ ಕೊರತೆ.. ತಮ್ಮ ತಮ್ಮಲ್ಲೇ.. ಅದಕ್ಕೆ ಬೇರೆಯವರ ಜೊತೆ ಆಡ್ಕೋತಾರೆ..’
**********
ಅವಳನ್ನೇ ದಿಟ್ಟಿಸಿ ನೋಡ್ತಿದ್ದೆ ನಾನು.. ಗೆಲುವಿನ ಸಂಭ್ರಮದಲ್ಲಿ.. ಅವಳು ಕೇಳಿದ್ದಂತೇ ನಾನು ನನ್ನ ಹುಡುಗಿಯನ್ನು ಹುಡುಕಿದ್ದೆ.. ಅಷ್ಟೂ ಜನರ ಮಧ್ಯದಲ್ಲಿ.. ಅವಳು ವರ್ಲ್ಡ್‍ಕಪ್ ಯಾವ ರೂಯ್ಪದಲ್ಲಿ ಕೊಡ್ತಾಳೋ ನೋಡಬೇಕು..
**********