ಆನಿ ಬಂತವ್ವ ಆಽನಿ
ಇದು ಎಲ್ಲಿತ್ತವ್ವ ಮರಿಯಾನಿ||
ಕಳ್ಳಿ ಸಾಲಾಗ ಮುಳ್ಳ ಬೇಲ್ಯಾಗ
ಓಡಿಯಾಡತಿತ್ತಾಽನಿ,
ಕಾಲ ಮ್ಯಾಲ ಅಂಗಾತ ಮಲಗಿ
ತೂರನ್ನತೈತಿ ಈ ಆಽನಿ!
ಎಂಥ ಚಿಟ್ಟಾನಿ
ನನ್ನ ಕಟ್ಟಾಣಿ
ಇದಕ ಯಾರಿಲ್ಲ ಹವಽಣಿ
ಆನಿ ಬಂತವ್ವ, ಆಽನಿ
ಅಡವಿ ಕಡೆಯಿಂದ ಹಿಂಡಿನೊಳಗಿಂದ
ದುಂಡಗುರುಳಿ ಬಂತಽ
ದಾರಿ ಮಂದೆಲ್ಲ ಮೀರಿ ತುಡುಕಿದರ
ಕೊಸರಿಕೊಂಡು ಬಂತುಽ
ನನ್ನ ಬಂಗಾರ
ಮುದ್ದು ಸಿಂಗಾರ
ಬಾರ ನನ್ನ ಕುವರಾ
ಒರಸತೇನಿ ಬೆವರಾ;
ನಿನ್ನ ನೋಡಿ ಮುದ್ದಾಡಿ ಹಾಡಿ
ಅಪ್ಪಿದರ ದುಃಖ ಹಗುರಾ
ಅಪ್ಪಿದರ ದುಃಖ ಹಗುರಾ;
ಮರದ ಕೊಂಬಿಯನು ಮುರಿದು ಚೆಲ್ಲುವಾ
ಸೊಂಡಿ ಇಲ್ಲ ಇದಕಽ
ತಳಿರ ಕೈಯಿಂದ ಕೊರಳನಪ್ಪಿದರ
ಸುಗ್ಗಿ ಹಾಂಗ ಬದುಕಽ.
ನನ್ನ ಕಂದ
ದಿನಕೊಂದು ಚಂದ
ಭವ ಬಂಧ ಬಿಡಿಸ ಬಂದಽ
ಮನಿ ತುಂಬ ಇದರ ಗಂಧಽ.
ತೊದಲು ತುಟಿಗೆ ತಪ್ಹೆಜ್ಜಿ ಹಾಕಿ
ಬರತೈತಿ ಓಡಿ ಓಟ,
ಬಂದು ಸೆರಗ ಮರೆಯಲ್ಲಿ ಅವಿತು
ಹುಡುಹುಡುಕುವಾಟ ಮಾಟ.
ಆನಿ ಬಂತು ಅರಸಾನಿ ಬಂತು
ದೊರೆಸಾನಿ ಬಳಿಗೆ ಬಂತು;
ನನ್ನ ಅರಸರಾ ಪಟ್ಟದಾನಿ ಇದು
ಬಾಳ ಗುಟ್ಟ ತಂತು.
ನನ್ನೊಡಲ ಜೀವ ಜೀವಾಳದಾಗ
ಚಂದ್ರಾಮನಾಗಿ ನಿಂತು,
ಹುಣ್ಣೀವಿ ದಿನದ ಬೆಳದಿಂಗಳ್ಹಾಲ
ಕುಡಿಲಾಕ ಬಂತ ಬಂತು.
ಆಕಾಶದಾಗ ಚಿಕ್ಕೀಯ ಚಟ್ಟು
ಕಟ್ಟೇತಿ ನಿನಗ ಬಾಳಾ
ಜಗವು ತೊಟ್ಟಿಲಾ, ಚಂದ್ರ ಬಟ್ಟಲಾ
ತುಂಬ ಹಾಲ ಕೊಡುವಾ
ದೇವರಲ್ಲ ಬಡವಾ.
ಜಾಜೀಯ ಬಳ್ಳಿ, ಕುಡಿಗೈಯ ಚಾಚಿ
ನೀಡೇತಿ ನಿನಗ ಹೂವಾ
ನಿನ ಮ್ಯಾಲ ಅದರ ಜೀವಾ.
ಬಡಕೊಂಡ ಜೀವ ಉಳಕೊಂಡು ಹೇಗೊ
ನಿಂತೈತಿ ಕುಡಿದು ವಿರಸಾ
ನೀನೇನ ಪಡೆದು ಬಂದೀಯೊ ಏನೋ
ನೀ ನನ್ನ ಕನಸ ಮಾನಸಾ.
ಯಾರಾರ ದೃಷ್ಟಿ ಬಡಿದೀತು ಬಾರೊ
ಚಂದ್ರಾಮ ಚೆಲುವ ನೀನು.
ಹಾಲುಗಲ್ಲದಾ ಹಸುಳೆ ತಾಯಿ,
ಸುರಿದೀತು ಜೊಲ್ಲು-ಜೇನು.
ಬಾ ಬಾರೋ ಕಂದ
ಏನಂದ ಚೆಂದ!
ಬಾ ಇಂದ್ರ ಪಟ್ಟದಾನಿ
ದುಡು ದುಡೂ ಬಂದು
ಕಾಲಾಗ ನಿಂತು
ತೂರ್‍ಯಾಡು ಅನಿಯಾಡು.
*****
