೧
ತಿರುಗುತ್ತಿದೆ, ಎಂದೋ ಸಿಡಿದಾರಿದ
ಅಗ್ನಿಯ ಪಿಂಡ;
ಆರಿದೆಯೆಂದವರಾರೊ, ಇನ್ನೂ ನಿಗಿ ನಿಗಿ ಉರಿಯುತ್ತಿದೆ
ಅದರೆದೆಯಾಳದ ಕುಂಡ!
ಹರಿಯುತ್ತಿವೆ ಬೆಂಕಿಯ ಹೊಳೆ
ತಣ್ಣನೆ ಕಡಲೊಳಗೆ;
ಹೊಗೆಯಾಡುತ್ತಿದೆ ಸುಮ್ಮನೆ ನುಣ್ಣನೆ ಬಾನೊಳಗೆ.
ಬಿದ್ದಿವೆ
ಒಡ ಮುರಿದದ್ದಿವೆ ಗಿರಿ ಗಹ್ವರ-
ಯುಗ ಯುಗಗಳ ನೋವ!
ದರಿಕಂದರದೊಳಗಿನ್ನೂ ಹರಿದಾಡಿದೆ ಸಂಶಯವೆ.
ಕುದಿಯುವ ಆ ಬಸಿರಿನ ಆವುದೊ ರಸ ಹೀರಿ,
ಚಿಮ್ಮಿವೆ
ದಿನದಿನವೂ ಹೊಮ್ಮಿವೆ ಹಸುರಾಗಿ
ಲಕ್ಷಾಂತರ ಆಶೆ!
ದಿಕ್ಕು ದಿಕ್ಕುಗಳ ಗೋಪುರವೇರಿ ದಿಟ್ಟಿಸಿವೆ;
ಕಣ್ಣ ಕ್ಷಿತಿಜದ ಆಚೆ ನೂರು ಗೋಲಗಳಾಡಿ
ಅದನಿದನು ಇದನದನು ಹಿಡಿದು ಎಳೆದಾಡಿ,
ಕೂಡಿ ಕುಣಿದಾಡಿ,
ಕೊನೆಯಿರದ ವರ್‍ತುಲಕೆ ಒಯ್ದು ಮುಟ್ಟಿಸಿವೆ!
ಸಂಜೆ ಮುಂಜಾವಗಳ ಸೂರ್‍ಯಬಿಂಬದ ಸುತ್ತು,-
ಸದ್ದು ಗದ್ದಲವಿಲ್ಲದೆದ್ದು ಬಾನಂಗಳಕೆ ಬರುವ
ಚಂದ್ರನ ಹೆಗಲ ಮೇಲೆ ಹೊತ್ತು,
ಬಾನ ಕಣದಲಿ ಕೋಟಿ ಚಿಕ್ಕೆ ಹಂತಿಯ ಕಟ್ಟಿ
ದಿವದ ಬದುಕನು ಒಕ್ಕಿ ರಾಶಿಮಾಡಿ
ಬೆಳಕು ಚಕ್ರಾಕಾರ ತಿರುಗುತ್ತಿದೆ!
೨
ಮಣ್ಣ ಮನೆಯೊಳು ಮಗುವು ಕಣ್ಣು ತೆರೆದಿತ್ತು!
ಬೆಳಕಿಂಡಿಯಿಂದ ಪಡಸಾಲೆಯಲಿ, ಮೂಲೆಯಲಿ
ಕೋಲಾಡಿಸಿತ್ತೆಳವಿಸಿಲು;
(‘ದೇವರ ಬಂಗಾರದ ಕುದುರೆ’)
ಕಿಟಕಿಯಲಿ ಕೈ ಚಾಚಿ ಕರೆದ ಚಂದ್ರ.
(ಚೆಂದಪ್ಪ ಚೆಂದಪ್ಪ ಚೆಲುವ, ಚುಂಗಬಿಟಗೊಂಡು ಬರುವ)
ಚಿಕ್ಕೆ ನಕ್ಕವು ಬಾನ ಕನ್ನಡಿಯ ತುಣುಕಿನಲಿ
ಬಾನ ಬೀದಿಗೆ ನೂರು ಬೆಳ್ಳಿಯ ರಥ!
ಅಕ್ಕಪಕ್ಕದ ಮರದ ಹೂ ತುರಾಯಿಯ ಮೇಲೆ
ಹಾಡಿನುಯ್ಯಾಲೆ-
“ಅಕ್ಕ ಓ ಚಿಕ್ಕವೂ”
ಸಾಲೆ ಕೋಣೆಯಲಂದು ಮಗ್ಗಿ ಒಪ್ಪಿಸುವಾಗ
ಮೇಜ ಮೇಲೆಯೆ ಇತ್ತು ಪೃಥ್ವಿಗೋಳ.
ಗೂಡಿನಲಿ ಕುಳಿತು ಗುಟುಕರಿಸಿತ್ತು ಪಾರಿವಾಳ.
ಕಿಟಕಿಯಾಚೆಗೆ ದೂರ ಬೆಟ್ಟ ಬಯಲುಗಳಲ್ಲಿ
ಮುಂಗಾರು ಮಳೆ ಬೆಳೆದ ಭಾವ ಮೇಳ!
ಮಣ್ಣಿನೆದೆಯೊಳು ಸ್ನೇಹವಂಕುರಿಸಿ ಬೆಳೆದು
ಬೆಳುದಿಂಗಳಿನ ಹೊನಲೆ ಎಲ್ಲೆಲ್ಲು ಹರಿದು
ಕಣ್ಣೆದುರು ಸಾಗಿತ್ತು ಮಣ್ಣ ಮೆರವಣಿಗೆ
ಇಲ್ಲಿಂದ ಆ ಬಾನ ಗುಡಿಯವರೆಗೆ!
೩
ಕತ್ತಲೆಯ ಕೋಣೆಯಲಿ ಹುಣ್ಣಿವೆಯು ಹರಿದಾಡಿ
ಮಣ್ಣ ಗೋಡೆಯ ಮೇಲೆ ಬಣ್ಣ ಬರೆದಿತ್ತು.
ಆಷಾಢ ನಿಬ್ಬಣವು ಸೂಸ್ಯಾಡಿ ಬರುವಾಗ ಎಷ್ಟೊಂದು ಚೆಂದವಿತ್ತು!
ಚಿತ್ತವೆಲ್ಲಾ ಅದರ ಮೇಲೆ ಇತ್ತು.
ಬಂದು ಹೋದವು ಬಂಡು ಹೂಡಿ ಒಂದರ ಮೇಲೆ ಒಂದು ಮಳೆಗಾಲ-
ಗುಡುಗಿ, ಗದ್ದಲಿಸಿ, ಮದ್ದಳೆ ಬಡಿದು ಕುಣಿದಾಡಿ
ಹಿಡಿದು ಹೆಂಡದ ಬುಂಡಿ ಎತ್ತಿ ಕುಡಿದು!
ಹಾಗೂ ಹೀಗೂ ಗೋಡೆ ನಿಂತಿಹವು ಜೋಲಿ ಹೊಡೆದು;
ಕುಸಿಯತೊಡಗಿದೆ ಕೆಳಗೆ ನೆಲಗಟ್ಟು, ಮೇಲೆ ಬಿದ್ದಿದೆ ಭಾರ ನೀಗದಷ್ಟು
ಎಷ್ಟು ಮಣ್ಣನು ಹಾಕಿ ಮೆತ್ತಿದರು ಪ್ರತಿ ವರುಷ ಇದರ ಹಾಡೇ ಇಷ್ಟು;
ಮಾಳಿಗೆಯ ಮೇಲೆ ಇರುವೆಗಳ ಸಾಲುದುರ್‍ಗ,
ಜಂತಿಯಲಿ ಇಲಿಗಳೋಡಾಡಿ ದಿನವೂ ಬುಟ್ಟಿ, ಬುಟ್ಟಿ ಮಣ್ಣುದುರಿ
ಎಲ್ಲಿ ನೋಡಿದರಲ್ಲಿ ಸುರಂಗ ಮಾರ್‍ಗ!
ಇರುಳಿನಲಿ ಕುರುಡು ಬೆಳಕಿನ ಸುತ್ತ ನೆರಳುಗಳ ಕುಣಿತ.
ಇತ್ತೊ ಇಲ್ಲೋ ಎನಿಸಿ ಬಿಡುವ ಕತ್ತಲೆ ಒಳಗೆ;
ಹತ್ತು ಸಲ ಆರಿ ಹತ್ತುವ ದೀಪ ಬೀದಿಯಲಿ!
ಕೂಟು ಕೂಟುಗಳಲ್ಲಿ ಬೂಟು-ಸಪ್ಪಳ ಸೀಟಿ
ದಾಟಿ ಹೊಸತಿಲಿನಾಚೆ ಹೋದರೇನೊ ಎಂತೊ-
ಒಟ್ಟಿನ ಮೇಲೆ,
ಪರಿಸ್ಥಿತಿ ತುಂಬಾ ಶೋಚನೀಯ.
ಮೇಲೆ ಕಣ್ಣಿಟ್ಟ ಕಡೆಗೆಲ್ಲ ಜ್ಯೋತಿರ್‍ಮಾಲೆ
ನೀಲ ಬೆಳಕಿನಪೂರ್‍ವ ನೃತ್ಯಶಾಲೆ.
ಮಣ್ಣ ಮಡಿಲೊಳು ನಿತ್ಯ ಯಾತನೆಯ ನೆಲಗುಮ್ಮ
“ಎಚ್ಚತ್ತು ತಾಯಿ ಎಂವೆ ಬಿಚ್ಚ ಏಳಮ್ಮಾ
ಮಲಗಿರುವ ತಾಯಿ ಪೃಥಿವೀ”.
ಕತ್ತಲೆಯ ಹುತ್ತ ಬೆಳೆದಿದೆ ಎತ್ತ ಸರಿದರೂ
ಆದರೂ ಎಂಥ ಸೋಜಿಗವೆಂದಿ-
ಬೆಳಕಿನಿಂದಲೆ ಅದರ ಉಪಜೀವನ-
ಜನನದಲಿ ಮರಣದಲಿ ತುಂಬಿ ಜಯಗಾನ.
ಚಳಿಗಾಲದಲ್ಲಿ ಮೈ ಸೆಟೆದುಕೊಂಡಿದ್ದ ತರು
ಬಂದು ನಿಂತಿದೆ ಬೀದಿ ಮಧ್ಯದಲಿ ಸಿಂಗಾರಗೊಂಡ ತೇರು!
ಬೇಡವೆಂದವರಾರು?
ಹಲಗೆ ಬಾರಿಸಿ, ಕಹಳೆಯೂದಿ, ಸಾಗಲಿ ಮುಂದೆ
ದುಂದು ಮೆರವಣಿಗೆ-
ಓ ಜೀವನವೆ!
ಶುಭಮಸ್ತು ನಿನಗೆ.
*****
